ಅಂಕಣಗಳು

Subscribe


 

ಕಳಚಿಕೊಂಡ ಮೂಗೂರು ನೃತ್ಯಪರಂಪರೆಯ ಕೊನೆಯ ಕೊಂಡಿ : ಕೊಡವೂರು ಭಾಗವತ ಮಾಧವ ರಾವ್

Posted On: Saturday, April 15th, 2017
1 Star2 Stars3 Stars4 Stars5 Stars (No Ratings Yet)
Loading...

Author: -    ಡಾ.ಮನೋರಮಾ ಬಿ.ಎನ್

Photo by Vishnuprasad

ಕೊಡವೂರು ಮಾಧವ ರಾವ್

(ಜನನ : ೧೪.೫.೧೯೨೪ ನಿಧನ : ೨೪-೧೨-೨೦೧೬)

ಕರ್ನಾಟಕದಲ್ಲೇ ಮೊದಲಬಾರಿಗೆ ನಾಡಿನ ನಟುವಾಂಗ ಪರಂಪರೆಯ ಕುರಿತು ಸಂಶೋಧನೆಯೊಂದನ್ನು ಕೈಗೊಳ್ಳಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಫೆಲೋಶಿಪ್ ಪ್ರದಾನ ಮಾಡಿದ್ದ ಸಮಯವದು. ಸಹಜವಾಗಿ ಕರ್ನಾಟಕದ ನೃತ್ಯಪರಂಪರೆಗಳನ್ನು ಬಾಳಿ ಬದುಕಿಸಿದ ಹಿರಿಯರ ಸಂಸರ್ಗ ಮಾಡಿದ ಕೊನೆಯ ಕೊಂಡಿಗಳನ್ನು ದರ್ಶಿಸುವ, ಸಂದರ್ಶಿಸುವ ಭಾಗ್ಯ ದೊರೆತಿತ್ತು. ಉಡುಪಿಯ ಕಲಾಸಕ್ತ ಬರೆಹಗಾರ, ಪತ್ರಿಕೆಯ ಸದಸ್ಯರೂ- ಪ್ರೋತ್ಸಾಹಕರೂ ಆದ ನನ್ನಣ್ಣ ಎನ್. ರಾಮ ಭಟ್ ಅವರನ್ನು ಸಂಪರ್ಕಿಸಿದ್ದೆ. ಅವರು ಕರ್ನಾಟಕ ಕಲಾತಿಲಕ, ನೃತ್ಯಶಿರೋಮಣಿ, ನಾಟ್ಯಶಾಂತಲಾ, ಮೈಸೂರು ರಾಜಮನೆತನದ ಮನ್ನಣೆ, ಉಡುಪಿ ವಿಶ್ವೇಶತೀರ್ಥ ಶ್ರೀಪಾದರ ಅನುಗ್ರಹ ಪ್ರಶಸ್ತಿ, ಅಚಲ ಪ್ರಶಸ್ತಿ ಸಮ್ಮಾನಿತರಾದ ಕೊಡವೂರು ಭಾಗವತ ಮಾಧವರಾವ್ ಅವರ ಬಳಿ ನನ್ನನು ಕೊಂಡೊಯ್ದು ನಟುವಾಂಗ ಪರಂಪರೆಯ ಆಳ ಅಗಲಗಳನ್ನು ಅರಿಯುವ ಹಂತಕ್ಕೆ ಒದಗಿ ಬಂದರು. ಜೊತೆಯಲ್ಲೊಂದು ವಿಡಿಯೋ ಕ್ಯಾಮೆರಾ ನೇತುಹಾಕಿಕೊಂಡು ಸಂಜೆಯೇರುವ ಮೊದಲೇ ಕೊಡವೂರಿಗೆ ಬಂದೆವು.

ಗೇಟು ತೆರೆದು ಒಳಹೊಗುವಾಗಲೇ ಎದುರಿಗೆ ಭವ್ಯವಾದ ಆರ್‌ಸಿಸಿ ಮನೆ, ಅದರ ಪಕ್ಕದಲ್ಲಿ ಪುಟ್ಟದಾದ ಹಳೆಯ ಹೆಂಚಿನ ಮನೆ. ಕಲೆಗೆಂದೇ ದುಡಿದ ಒಬ್ಬ ನೃತ್ಯಗುರುಗಳು ನೆಮ್ಮದಿಯಾಗಿದ್ದಾರಲ್ಲಾ ಎಂದಂದುಕೊಳ್ಳುತ್ತಿರುವಾಗಲೇ ಏಕಮಾತ್ರ ಕೋಣೆಯ ಹೆಂಚಿನ ಹರುಕಲು ಮುರುಕಲು ಮನೆಯಿಂದ ಆಕೃತಿಯೊಂದು ಹೊರಬಂದು ಇದಿರುಗೊಂಡಿತು. ಬೇರಾರು ಅಲ್ಲ, ಕೊಡವೂರು ಮಾಧವ ರಾಯರೇ! ಬಿಳಿಯ ಪೈಜಾಮ, ಪಂಚೆ. ನರೆತು ಹಣ್ಣಾಗಿ ಉದುರಿದ ಕೂದಲಿನ ಹಣೆ, ಕಪ್ಪು ಫ್ರೇಮಿನ ದಪ್ಪ ಕನ್ನಡಕದೊಳಗಿನಿಂದ ಇಣುಕುತ್ತಿದ್ದ ಕಾಂತಿಯ ಕಣ್ಣುಗಳು ಸ್ವಾಗತ ಹೇಳಿದವು. ಆಗ ಅವರಿಗೆ ೮೮ರ ಇಳಿವಯಸ್ಸು.

ಬಾಯಲ್ಲಿ ಸ್ವಾಗತವಾದರೂ ಮನಸ್ಸಿನಲ್ಲಿ ದುಗುಡ ಇತ್ತೆಂಬುದು ಸ್ಪಷ್ಟವಾಗಿ ತೋರುತ್ತಿತ್ತು. ವಯೋಸಹಜ ಆಯಾಸವೂ ಇತ್ತೆನ್ನಿ. ಅದಕ್ಕೂ ಮಿಗಿಲಾಗಿ ಬಂದವರು ತನ್ನ ಬಳಿಯಿಂದ ಏನನ್ನು ಕೊಂಡೊಯ್ಯಲು ಬಂದಿದ್ದಾರೋ ಎಂಬ ಆತಂಕ. ಮೊದಮೊದಲು ವಿಡಿಯೋ ದಾಖಲೀಕರಣಕ್ಕೂ ಅನುಮತಿಸಲಿಲ್ಲ. ಕ್ರಮೇಣ ವಿಷಯ ಸ್ಪಷ್ಟವಾಗಿ, ಪರಿಚಯ ಬೆಳೆದು, ಮಾತುಕತೆಗಳಿಂದ ಮನಸ್ಸು ತಿಳಿಯಾಗಿ ವಿಶ್ವಾಸ ಮೂಡಿದ ಮೇಲೆ ಒಂದೊಂದಾಗಿ ತಮ್ಮ ಅನುಭವದ ಸುರುಳಿಗಳನ್ನು ಬಿಚ್ಚಿಟ್ಟರು, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು, ತಮ್ಮ ಬಿರುದು ಪ್ರಶಸ್ತಿಗಳನ್ನು ತೋರಿಸುತ್ತಾ ಮೈಸೂರಿನ ದಿನಗಳನ್ನು ನೆನಪಿಸಿಕೊಂಡರು. ನಟುವಾಂಗ ಪರಂಪರೆಯ ಬಗ್ಗೆ ತಮಗೆ ತಿಳಿದಷ್ಟನ್ನು ಹಂಚಿಕೊಂಡರು. ಜೊತೆಗೊಂದಷ್ಟು ಅವಕಾಶವಾದಿ ಜನರ ಹೀನಬುದ್ಧಿಗಳನ್ನು ನೆನೆದು ಕ್ರುದ್ಧರಾದರು, ಬೇಸರಿಸಿದರು. ಆದರೂ ಅವರ ಬಳಿಯಿದ್ದ ಮೂಗೂರು ಜೇಜಮ್ಮನವರ ಹಸ್ತಪ್ರತಿಗಳನ್ನಾಗಲೀ, ತಮ್ಮ ಬಳಿಯಲ್ಲಿನ ನೃತ್ಯಲಕ್ಷಣಗ್ರಂಥಗಳನ್ನಾಗಲೀ ಮುಟ್ಟಲೂ ಬಿಡಲಿಲ್ಲ. ಆ ವಯಸ್ಸಿಗೆ ಅಷ್ಟೊಂದು ಅಭದ್ರತೆ ಹಿರಿಯ ಕಲಾವಿದನಾದವನಿಗೆ ಕಾಣಬೇಕಾದರೆ ಸಮಾಜ, ಕಲೆ, ಕಲಾವಿದರು ಅವರನ್ನು ನಡೆಸಿಕೊಂಡ ನಡೆ ಅಷ್ಟೊಂದು ಕೇವಲವಾಗಿತ್ತೇ ಅಥವಾ ಕಾಲಕ್ಕನುಗುಣವಾಗಿ ಜನರಿಗೆ ತಕ್ಕಂತೆ ಹೊಂದಿಕೊಳ್ಳದೇ ಹೋದ ತೊಂದರೆಗುಂಟಾದ ಸಂಶಯವೇ ಅಥವಾ ವಿದ್ಯೆಯನ್ನು ಹಂಚುವುದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಹಿಂದಿನ ದಶಕಗಳಲ್ಲಿನ ಕಳಿತ ಮನಸ್ಸುಗಳಲ್ಲಿದ್ದ ಭಯ ಇವರನ್ನೂ ಆವರಿಸಿತ್ತೇ- ಒಟ್ಟಿನಲ್ಲಿ ಎಲ್ಲವೂ ಹೌದೆಂಬಂತೆ ಗೋಜಲಾಗಿಯೇ ತೋರಿತು. ಅದಾದ ಬಳಿಕ ಕೆಲವೊಮ್ಮೆ ಅವರೊಂದಿಗೆ ಫೋನಿನಲ್ಲಿ ಸಮಯ ಸಿಕ್ಕಾಗ ಸಂಭಾಷಣೆ, ಲೇಖನಗಳನ್ನು ಓದಿದಾಗ ಮೆಚ್ಚುಗೆಯ ಮಾತು. ಒಂದಷ್ಟು ದಿನ ಅವರ ಜೀವನಕ್ಕೆ ಏನಾದರೂ ಅನುಕೂಲ ಕಲ್ಪಿಸಿಕೊಡಲು ಸಾಧ್ಯವೇ ಎಂಬ ನೆಲೆಯಲ್ಲಿ ನನ್ನ ಸಂಪರ್ಕದಾಸರೆಯಲ್ಲಿ ಓಡಾಟ, ಮಾತುಕತೆಗಳೂ ನಡೆದು ಅವೂ ಕೊನೆಗೆ ಫಲಗಾಣಲಿಲ್ಲ.

ಅದಾಗಿ ೬-೭ ವರ್ಷಗಳೇ ಕಳೆಯಿತು. ಇತ್ತೀಚೆಗೆ ಅದೇ ಮನೆಯಲ್ಲಿ ಮೂಗೂರು ಸಂಪ್ರದಾಯದ ಕೊನೆಯ ಕೊಂಡಿ ಕಳಚಿತು. ಸಹೋದರನ ಮಕ್ಕಳು ಪಕ್ಕದಲ್ಲಿದ್ದರೂ ತಮ್ಮ ಸ್ವಾಂತನೆಮ್ಮದಿಗೆ ಮುರುಕಲು ಮನೆಯಲ್ಲಿ ದಿನಗಳನ್ನು ಕಳೆದ ಅವಿವಾಹಿತ ಮಾಧವರಾಯರು ಹುಟ್ಟಿದೂರಲ್ಲಿಯೇ ತಮ್ಮ ಕೊನೆಯುಸಿರನ್ನೂ ತೊರೆದರು. ಕೆ. ಬಿ. ಮಾಧವ ರಾವ್ ಅವರು ತಮ್ಮ ಇಹಲೋಕಯಾತ್ರೆ ಮುಗಿಸುವಾಗ ೯೨ ವರುಷದ ಹೊಸಿಲೇರಿದ್ದರು.

ಅವರ ಸಂದರ್ಶನ ಸಮಯದ ಅತ್ಯಮೂಲ್ಯ ದಾಖಲೀಕರಣದ ವಿಡಿಯೋಗಳು ಕಲಾವಿದನ ಕೊನೆಯ ವರುಷಗಳ ದಾಖಲೆಗಳಲ್ಲೊಂದಾಗಿ ನೂಪುರ ಭ್ರಮರಿಯ ಗ್ರಂಥಾಲಯದ ಅಧ್ಯಯನ ಸಂಗ್ರಹವಾಗಿ ಉಳಿದಿವೆ. ಅದರಲ್ಲಿ ಕೆಲವನ್ನು ಆಯ್ದು ಕೆಲವು ಅಪೂರ್ವವಾದ ತುಣುಕುಗಳನ್ನು ನಿಮ್ಮೆದುರಿಗಿರಿಸುತ್ತಾ ಅವರಿಗೆ ನಮ್ಮದೇ ಅದ ನೆಲೆಯಲ್ಲಿ ಅಂಜಲಿಬದ್ಧ ನಮನಗಳನ್ನು ಸಲ್ಲಿಸುತ್ತಿದ್ದೇವೆ.

Photo by Vishnuprasad

 • ನಿಮ್ಮ ಗುರುಗಳು, ನೀವು ಕಲಿತ ಬಗೆ, ಅಭ್ಯಾಸ, ವೃತ್ತಿಜೀವನದ ಬಗ್ಗೆ ತಿಳಿಸುವಿರಾ?

ನಾನು ಕಲಿತಿರೋದು ಕಡಿಮೆ. ಆದರೆ ಗುರುಗಳ ಮೂಲಕವೇ ನಾನು ಲೋಕಕ್ಕೆ ತಿಳಿದಿದ್ದೇನೆ. ಗುರುವಿನ ಆಶೀರ್ವಾದ, ನನ್ನ ಭಾಗವತ ಕುಟುಂಬದ ಪರಂಪರೆಯ ಬಲ ನನ್ನ ಬೆಳವಣಿಗೆಗೆ ಸಹಕಾರಿಯಾಗಿವೆ.

ಮೂಲತಃ ನಾನು ಯಕ್ಷಗಾನದ ಗೆಜ್ಜೆ ಕಟ್ಟಿದವನು. ಶ್ರೀ ಶಂಕರನಾರಾಯಣಯಕ್ಷಗಾನ ಮಂಡಳಿ-ಕೊಡವೂರು ಮೇಳದ ಸ್ಥಾಪಕ ಸದಸ್ಯರಲ್ಲೊಬ್ಬ. ನಂತರ ನೃತ್ಯ ಕಲಿಯಬೇಕೆಂದೇ ಊರು ಬಿಟ್ಟು ಬಂದು ೧೯೫೧ರಲ್ಲಿ ಮೈಸೂರಿಗೆ ಹೋದವನು. ರಾಜಗೋಪಾಲ್ ಎಂಬುವರಲ್ಲಿ ಕಲಿತರೂ ನಂತರ ಹೆಚ್ಚಿನ ಕಲಿಕೆಯ ಕಾರಣಕ್ಕೆ ನೇರ ತೆರಳಿದ್ದು ಮೂಗೂರು ಪರಂಪರೆಯ ಜೇಜಮ್ಮನವರ ಬಳಿ. ಆದರೆ ಅವರಲ್ಲಿ ಕಲಿಕೆಗೆ ಸೇರುವುದು ಸುಲಭದ್ದೇನೂ ಆಗಿರಲಿಲ್ಲ. ಮೊದಲು ಹೋಗಿ ಕೇಳಿಕೊಂಡಾಗ ಒಪ್ಪಿರಲಿಲ್ಲ. ‘ನೃತ್ಯ ದುಡ್ಡಿದ್ದವರ ವಿದ್ಯೆ. ಕಲಿವಾಗಲೂ, ಕಲಿತ ಮೇಲೂ ಖರ್ಚು. ಬಡವರ ವಿದ್ಯೆಯಲ್ಲ. ಹಣಕ್ಕೆ ಅಂತಲೇ ಕಲಿಸುವವರ ಬಳಿ ಹೋಗು’ ಅಂತ ತಿಳಿಸಿದ್ದರು. ಅವರು ಒಪ್ಪದಿದ್ದರೂ ಆಗಾಗ ಹೋಗಿ ಬರುತ್ತಿದೆ. ದಾಸಪ್ರಕಾಶ್ ಹೋಟೆಲ್ ನಲ್ಲಿ ೨ರೂ ಸಂಬಳಕ್ಕೆ ಕೆಲಸ. ನನ್ನ ಖರ್ಚು ಮಿಕ್ಕಿ ಉಳಿದದ್ದನ್ನು ಅವರಿಗೆ ಕೊಡುತ್ತಿದ್ದೆ. ಹೋದಾಗಲೆಲ್ಲಾ ರಾಗಿಮುದ್ದೆ ಮಾಡಿ ಕೊಡುತ್ತಿದ್ದರು. ಬಹಳ ದಿನಗಳ ಬಳಿಕ ನನ್ನ ಚರ್ಯೆ ಗಮನಿಸಿ ನಂತರ ಒಪ್ಪಿದರು. ೫ ಸೇರು ಭತ್ತ, ೫ ಅಚ್ಚು ಬೆಲ್ಲ, ೫ತೆಂಗಿನಕಾಯಿ, ೫ ಕವಳಿಗೆ ವೀಳ್ಯೆದೆಲೆ. ೫೦೦ ರೂ, ೫೦ ಜನರಿಗೆ ಊಟ ಹಾಕಿಸಬೇಕೆಂದು ಹೇಳಿದ್ದರು. ಆದರೆ ನನ್ನ ಬಳಿ ಮೂರು ಕಾಸಿಲ್ಲ ಎಂದು ನಮಸ್ಕರಿಸಿದೆ. ಕಡೆಗೊಂದು ದಿನ ಬೆಳಗ್ಗೆ ಸ್ನಾನ ಮಾಡಿ ಬರಲು ಹೇಳಿದರು. ನಾನು ಕೊಟ್ಟದ್ದು ೫ರ ಬದಲಿಗೆ ಎಲ್ಲ ೧ನ್ನು. ಅಂದರೆ ೧ ಸೇರು ಭತ್ತ, ೧ ಅಚ್ಚು ಬೆಲ್ಲ, ೧ ತೆಂಗಿನಕಾಯಿ, ೧ ಕವಳಿಗೆ ವೀಳ್ಯೆದೆಲೆ. ೧೦ ನಾಯಿಕಸಾನಿಯವರಿಗೆ ಹಾಲು ಪಾಯಸ ಮಾಡಿಸಿ ಬಡಿಸಿದೆ. ಯಕ್ಷಗಾನದಲ್ಲಿ ಕಲಿತು ಹೆಜ್ಜೆಗಾರಿಕೆ ಗೊತ್ತಿದ್ದವನಿಗೆ ನೃತ್ಯ ಕಷ್ಟವಾಗಲಿಲ್ಲ.

೧೯೫೬ರಲ್ಲಿ ಶ್ರೀನಿಕೇತನ ಎಂಬ ಹೆಸರಿನಲ್ಲಿ ಮೈಸೂರಿನ ಶಿವರಾಂಪೇಟೆಯಲ್ಲಿ ನೃತ್ಯ ತರಗತಿ ಬೋರ್ಡ್ ಹಾಕಿದೆ. ಎದುರಿಗೆ ದೇವೇಂದ್ರಪ್ಪ ಅವರ ಮನೆ, ಹಿಂದೆ ಸುಂದ್ರಮ್ಮನವರ ಮನೆ. ರಾಮಕೃಷ್ಣ ವಿದ್ಯಾಶಾಲೆಯಲ್ಲಿ ೧೨ ವರ್ಷ ನೃತ್ಯಶಿಕ್ಷಕನಾಗಿಯೂ ದುಡಿದೆ. ‘ಕರ್ನಾಟಕ ಕಲಾತಿಲಕ’ ಪ್ರಶಸ್ತಿ ಬಂದ ಮೇಲೆಯೇ ಭರ್ತಿ ಮೂರು ದಶಕಗಳ ಮೈಸೂರುವಾಸ ಕೊನೆಗಾಣಿಸಿ, ವಾಪಾಸ್ಸು ಊರಿಗೆ ಹೋಗುವ ಅಂತ ಕೊಡವೂರಿಗೆ ೧೯೮೭ರಲಿ ಬಂದೆ. ಮಣಿಪಾಲ ಅಕಾಡೆಮಿಯವರ ಸಂಗೀತ ಶಾಲೆಯಲ್ಲಿ ೧೦ ವರ್ಷ ನೃತ್ಯಶಿಕ್ಷಕನಾಗಿ ಕರ್ತವ್ಯ ಮಾಡಿ ಈಗ ವಿಶ್ರಾಂತನಾಗಿದ್ದೇನೆ.

 • ಮೂಗೂರು ಜೇಜಮ್ಮ ಅವರ ಕೊನೆಯ ದಿನಗಳು ಕಷ್ಟದಿಂದ ಕೂಡಿತ್ತೆಂದು ಹೇಳುತ್ತಾರೆ. ಹೌದೇ? ನಿಮ್ಮ ಅನುಭವ?

ಮೂಗೂರು ಜೇಜಮ್ಮ ಅವರು ಅರಮನೆ ಚಾಕರಿ ಬಿಟ್ಟ ಮೇಲೆ ಅವರಿಗೆ ಹೆಚ್ಚು ಅನುಕೂಲಗಳಿರಲಿಲ್ಲ. ಅವರ ಮಗಳು ಮೊದಲೇ ಪಾರ್ಶ್ವವಾಯುವಿನಿಂದ ತೀರಿಕೊಂಡಿದ್ದರು. ಇನ್ನೊಂದು ದೊಡ್ಡ ಕಷ್ಟವೆಂದರೆ ಜೇಜಮ್ಮ ಅವರಿಗೆ ಕಣ್ಣು ಕಾಣ್ತಿರ್ಲಿಲ್ಲ. ಕಿವಿ ಕೇಳ್ತಿತ್ತು ಅನ್ನೋದೊಂದೇ ಪುಣ್ಯ. ಆದ್ರೂ ನನಗೆ ಪಾಠ ಮಾಡ್ತಿದ್ರು. ಒಂದು ದಿನ ಪಾಠ ಮುಗಿಸೋವಾಗ ಹೇಳಿದ್ರು- ‘ಇನ್ನು ಹೆಚ್ಚು ಪಾಠ ಮಾಡೋ ತಾಕತ್ತಿಲ್ಲ. ಹಾಗಾಗಿ ಇನ್ನು ಪಾಠ ಮಾಡೋದಿಲ್ಲ. ಇಂದೇ ನನ್ನೆದುರಿಗೆ ಕುಣಿ. ಮುದ್ದೆ ಮಾಡಿಸ್ತೇನೆ. ಊಟ ಮಾಡಿ ಹೋಗು. ನಾಳೆ ಮಾತ್ರ ತಪ್ಪದೇ ಬಾ’ ಅಂದರು. ನಾನು ಕೈಯಲ್ಲಿ ತಾಳ ಹಾಕಲು ಶುರು ಮಾಡಿದಾಗ ‘ಕಣ್ಣು ಕಾಣದಿದ್ರೂ ಕಿವಿ ಕೇಳುತ್ತಲ್ಲ, ಹೆಜ್ಜೆ ಹಾಕಿ ಕುಣಿ- ಅಂದರು. ನಾಲ್ಕು ಹೆಜ್ಜೆ ಕುಣಿದು ಆಮೇಲೆ ಮುದ್ದೆ ಊಟ ಮಾಡಿ ಮನೆಗೆ ಹೋದೆ.

ನಾನು ಮಾರನೇ ದಿನ ಊರು ತಿರುಗಿ ಮನೆ ಬಾಗಿಲಿಗೆ ಹೋಗುವಾಗ ತಡವಾಗಿತ್ತು. ಮನೆಯ ಬಾಗಿಲ ಕೊಂಡಿಯಲ್ಲಿ ಒಂದು ಕಾಗದ- ‘ಜೇಜಮ್ಮ ಶಿವಾಧೀನರಾಗಿದ್ದಾರೆ’ ಅಂತ. ಜೇಜಮ್ಮ ಅವರು ಒಬ್ಬ ಹುಡುಗನನ್ನ ಸಾಕಿಕೊಂಡಿದ್ರು. ಅವನ ಹೆಂಡತಿ ಹೇಳಿದ್ದಳಂತೆ- ‘ಮಾಧವರಾಯರು ಬರದೇ ಹೆಣ ಎತ್ತಬಾರದು’ ಅಂತ. ಗುರುವಿಗೆ ನಾನೇ ಮಗ, ನಾನೇ ಶಿಷ್ಯ ಅನ್ನುವ ಕಾರಣಕ್ಕೇ ಇರಬೇಕು. ಜೇಜಮ್ಮ ಅವರ ಕೊನೆಯ ಆಸೆಯಾಗಿತ್ತೇನೋ?

ಲಿಂಗಾಯತರಲ್ಲಿ ಹೆಣವನ್ನು ಇಟ್ಟು ಊಟ ಮಾಡುವ ಪದ್ಧತಿಯಿದೆ. ಶವ ಇರುವಾಗ ಊಟ ಮಾಡುವ ಪದ್ಧತಿ ನಮ್ಮದಲ್ಲ ಎಂದು ಊಟ ಮಾಡಲಿಲ್ಲ ಅಷ್ಟೇ.

Photo by Vishnuprasad

 • ಆಗ ಇದ್ದ ಬೇರೆ ನೃತ್ಯಗುರುಗಳ ಸಂಸರ್ಗ ಹೇಗಿತ್ತು?

ನಾನು ‘ಶ್ರೀನಿಕೇತನ’ ಆರಂಭ ಮಾಡಿದಾಗ ಎದುರಿಗೆ ದೇವೇಂದ್ರಪ್ಪ ಅವರ ಮನೆ, ಹಿಂದೆ ಸುಂದ್ರಮ್ಮನವರ ಮನೆ. ವೆಂಕಟಲಕ್ಷ್ಮಮ್ಮ, ಪುಟ್ಟಕ್ಕಯ್ಯ, ಸುಂದ್ರಮ್ಮ, ಚಿನ್ನಮ್ಮ ಎಲ್ಲರನ್ನೂ ನನಗೆ ಚೆನ್ನಾಗಿ ಗೊತ್ತಿತ್ತು. ಹೊಳೆನರಸೀಪುರದ ಜಯಮ್ಮ ಅವರ ಮೊಮ್ಮಗಳಿಗೆ ಪಾಠಕ್ಕೆ ಒಮ್ಮೆ ಹೋಗಿದ್ದೆ. ಅವರೆಲ್ಲಾ ನೃತ್ಯಕ್ಕೆ ‘ನಾಂಟ್ಯ’ ಅಂತ ಗ್ರಾಮ್ಯ ಭಾಷೆಯಲ್ಲಿ ಹೇಳೋವ್ರು. ಅವರೂ ಕೂಡಾ ಮೇಳ ಮಾಡಿದವರೇ.

ಒಮ್ಮೆ ಕುಮಾರಿ ಕಮಲಾ, ಚಂದ್ರಕಲಾ ಅವರೊಂದಿಗೆ ನೃತ್ಯಸ್ಪರ್ಧೆಯಲ್ಲಿ ಪಾಲ್ಗೊಂಡು ಗೆದ್ದಿದ್ದೆ. ಮೈಸೂರು ರಾಣಿವಾಸದಿಂದ ಮನ್ನಣೆಯನ್ನೂ ಪಡೆದೆ. ಒಮ್ಮೆ ಸೆಮಿನಾರಿಗೆ ಡೆಲ್ಲಿಗೆ ಹೋಗೋವಾಗ ಬೆಂಗಳೂರಿನಲ್ಲಿ ಉಳ್ಕೊಂಡಿದ್ವಿ. ಡಾ. ಕೆ.ವೆಂಕಟಲಕ್ಷಮ್ಮ, ಡಾ. ರಾ. ಸತ್ಯನಾರಾಯಣ ಮತ್ತು ಅವರ ಮಗ ನಂದಕುಮಾರ್, ಸೊಸೆ ರಾಧಿಕಾ. ವೆಂಕಟಲಕ್ಷ್ಮಮ್ಮ ಆಗ ಕೇಳಿದರು- ‘ನನ್ನ ಹತ್ರ ಯಾಕೆ ಕಲಿಯೋಕೆ ಬರೀಲಿಲ್ಲ’ ಅಂತ. ‘ಒಂದು ಗುರುವಿನ ಹತ್ರ ಕಲಿತೇ ಮುಗಿಲಿಲ್ಲ. ಹೀಗಿರುವಾಗ ಮತ್ತೊಬ್ಬ ಗುರುವಿನತ್ರ ಹೊಗೋದಾದ್ರೂ ಹ್ಯಾಗೆ? ಇರಲಿ. ಇರುವ ೩ ದಿವಸದಲ್ಲಿ ಏನಾದ್ರೂ ಹೇಳಿಕೊಡಿ’ ಅಂದಿದ್ದೆ. ಒಂದಕ್ಷರ ಕಲಿಸಿದವನೂ ಗುರು ಅಲ್ಲವೇ? – ಹಾಗಾಗಿ ವೆಂಕಟಲಕ್ಷಮ್ಮ ಅವರು ಒಂದು ಶ್ಲೋಕ ಹೇಳಿಕೊಟ್ಟು ಗುರುವಾಗಿದ್ದರು.

 • ನಿಮ್ಮ ಕಾಲದಲ್ಲಿದ್ದ ನೃತ್ಯದ ಮೇಳಪದ್ಧತಿಯ ವೈಶಿಷ್ಟ್ಯತೆಯನ್ನು ಹಂಚಿಕೊಳ್ಳುತ್ತೀರಾ?

ನರ್ತಕಿ, ತಾಳಧಾರಿ, ನಟ, ಮರ್ದಲ, ಗಾಯಕ, ಶ್ರುತಿಕಾರ, ಹೀಗೆ ಆರು ಅಂಗಗಳು ಮೇಳದಲ್ಲಿ. ಪುಂಗಿ, ಮದ್ದಳೆ, ತಾಳಗಳಂತೂ ಮೂಲಭೂತ. ಇನ್ನು ಖರ್ಚುವೆಚ್ಚ ನೋಡಿಕೊಂಡು ಹೆಚ್ಚಿನ ಹಿಮ್ಮೇಳ ಕಟ್ಟಿಕೊಂಡು ಹೋಗುವುದೂ ಇತ್ತು. ಮೈಸೂರು ರಾಜರ ಆಶ್ರಯದಲ್ಲಿ ಆಗ ೨೫ ಮೇಳಗಳು ಇದ್ದವು. ಜಟ್ಟಿ ತಾಯಮ್ಮ, ಮೂಗೂರು ಜೇಜಮ್ಮ ಮದುವೆ ಮನೆಗೆ ಮೇಳ ಮಾಡ್ತಿದ್ರು. ಆದರೆ ಹಿರಿತನದ ದೃಷ್ಟಿಯಿಂದ ತಾಯಮ್ಮನವರು ವೀಳ್ಯ ಮೊದಲು ಮೂಗೂರು ಜೇಜಮ್ಮ ಅವರಿಗೆ ಕೊಡಿಸ್ತಿದ್ರು.

ವಿಜಯನಗರದ ಪತನದ ನಂತರ ನರ್ತಕರು ಬಂದು ಬಸ್ರೂರು, ಬಾರ್ಕೂರು, ಹಿರಿಯಡ್ಕಕ್ಕೆ ಬಂದು ಸೇರಿದ್ರು. ಅವರೂ ಮೇಳ ಮಾಡೋವ್ರು. ನನ್ನ ಚಿಕ್ಕಪ್ಪನ ಲಗ್ನಕ್ಕೆ ಬಸ್ರೂರಿನಿಂದ ಸೂಳೆಯರ ಮೇಳ ಬಂದಿತ್ತು. ಒಮ್ಮೆ ಒಬ್ಬ ಬಹಳ ವಯಸ್ಸಾಗಿ ಎದ್ದು ಕೂರಲೂ ಶಕ್ತಿಯಿಲ್ಲದಿದ್ದ ದೇವದಾಸಿ ನರ್ತಕಿಯನು ಮಾತನಾಡಿಸಿದ್ದೆ. ನನ್ನ ಗುರುಗಳ ಬಗೆಗೆಲ್ಲಾ ಒಂದಷ್ಟು ವಿಚಾರಿಸಿ ತನಗೆ ಗೊತ್ತ್ತಿದ್ದದ್ದನ್ನು ಹೇಳಿದ್ದಾರೆ.

 • ನಿಮ್ಮ ಕಲಿಕೆಯ ಕಾಲಕ್ಕೆ ನೃತ್ಯಲಕ್ಷಣಗ್ರಂಥಗಳ ಅಭ್ಯಾಸಗಳೆಲ್ಲಾ ಹೇಗಿದ್ದವು?

ನಾನು ಕಲಿಯುವ ಕಾಲಕ್ಕೆಲ್ಲಾ ಗ್ರಂಥಾಧಾರಗಳು ಹೆಚ್ಚಿಗೆ ಹೇಳಿಲ್ಲ. ಲಕ್ಷಣಗ್ರಂಥಗಳಿಂದ ಕಲಿತದ್ದು ಅಂತ ಇಲ್ಲ. ನನ್ನ ಗುರುಗಳೂ ಅಷ್ಟೊಂದು ವಿದ್ಯಾವಂತರೂ ಅಲ್ಲ.

ಒಂದು ಜನ್ಮ ಸಾಲದು ಲಕ್ಷಣಗ್ರಂಥಗಳನ್ನು ಓದುವುದಕ್ಕೇ. ಇನ್ನು ಅದನ್ನು ಪ್ರಯೋಗಕ್ಕೆ ತರಬೇಕೆಂದರೆ ಹೇಗೆ ಸಾಧ್ಯ? ೧೮ ಬಗೆಯ ರಾಗಚೇಷ್ಟೆಗಳಿದ್ದಾವೆ. ಅವನ್ನೆಲ್ಲಾ ಮಾಡಲು ಕ್ರಮಗಳಿವೆ. ಆದರೆ ಮಾಡುವವರು ಯಾರಿದ್ದಾರೆ? ‘ಅಕ್ಕರವು ಲೆಕ್ಕಕ್ಕೆ; ಶಾಸ್ತ್ರವು ತರ್ಕಕ್ಕೆ’- ಎಂಬಂತೆ ಲಕ್ಷಣಗ್ರಂಥಗಳಲ್ಲಿರುವುದನ್ನೆಲ್ಲಾ ಅಳವಡಿಸಿಕೊಳ್ಳುವುದು ಸುಲಭಸಾಧ್ಯವಲ್ಲ; ಕೆಲವೊಮ್ಮೆ ಅದನ್ನು ಅನುಸರಿಸುವಷ್ಟು ಅನುಕೂಲ ಇರುವುದಿಲ್ಲ. ಇನ್ನೊಂದಷ್ಟು ಪ್ರಸ್ತುತ ನೆಲೆಗೆ ಒಪ್ಪುವಂತೆಯೂ ಇರುವುದಿಲ್ಲ.

 • ನಿಮ್ಮ ಕಾಲದ ನೃತ್ಯಬಂಧಗಳ ಪರಂಪರೆ, ನೆಲೆ, ನಿಮ್ಮ ಕಲಿಕೆ ಹೇಗಿತ್ತು?

ಮೂಗೂರು ಸಂಪ್ರದಾಯದಲ್ಲಿ ನೃತ್ತ ಜಾಸ್ತಿ, ಅಭಿನಯ ಕಡಿಮೆ. ನಮಗೆ ಅಭಿನಯ ಪದ ಎಲ್ಲಾ ಹೆಚ್ಚು ಹೇಳಿಕೊಟ್ಟ್ಟಿಲ್ಲ. ಈಗ ಹೇಳುವಂತೆ ತೋಡಯ, ಕೌತ್ವ ಎಲ್ಲ ಇರ್ತಿರ್ಲಿಲ್ಲ. ಪದವರ್ಣ, ಸ್ವರಜತಿ, ಶಬ್ದ, ಅಭಿನಯಪದಗಳ ಬಳಕೆ ಜಾಸ್ತಿ. ನನ್ನ ಗುರುಗಳು ‘ಮಾತನಾಡಬಾರದೇನೋ’ಜಾವಳಿ ಹೇಳಿಕೊಟ್ಟಿದ್ದಾರೆ. ವಿರೀಬೋಣಿ ಅಟ್ಟತಾಳ ವರ್ಣ ಹೇಳಿಕೊಟ್ಟಿದ್ದಾರೆ. ಅದುವೋ ತುಂಬಾ ಕಷ್ಟ. ನಾನು ಅರ್ಧದಲ್ಲೇ ಅದನ್ನು ಬಿಟ್ಟಿದ್ದೇನೆ.

ಈಗ ಏನೇನೋ ನೃತ್ಯಬಂಧಗಳು ಬಂದಿವೆ. ಪರಂಪರೆಯಲ್ಲಿದ್ದದ್ದು ಯಥಾವತ್ತು ಉಳಿದಿಲ್ಲ. ಆಗಿನ ಅರುದಿಯ ಕ್ರಮವೂ ಕೂಡಾ ಈಗಿಲ್ಲ. ಮೆಲು, ಸಣ್ಣ ನಡಿಗೆಯೆಲ್ಲಾ ಕಡಿಮೆಯಾಗಿ ಹಾರುವುದೇ ಹೆಚ್ಚಾಗಿದೆ. ಮೊದಲು ಹುಲ್ಲಿನ ಮನೆ, ನಂತರ ಹೆಂಚು, ಅಮೇಲೆ ಆರ್‌ಸಿಸಿ ಮನೆ. ಹಾಗೆಯೇ ಈಗ ನೃತ್ಯವೂ ಸಹ. ಥಳುಕು ಜಾಸ್ತಿ.

 • ಮೂಗೂರು ಪರಂಪರೆಯ ಹಿರಿಯ ನೃತ್ಯಗುರುಗಳಾದ ಅಮೃತಪ್ಪನವರ ಬಗ್ಗೆ ಹಲವು ದಂತಕತೆಗಳಿವೆಯೆಂಬುದನ್ನು ಕೇಳಿಬಲ್ಲೆ. ಕೆಲವೊಂದನ್ನು ಹಂಚಿಕೊಳ್ಳುವಿರಾ?

ಮೂಗೂರು ಜೇಜಮ್ಮ (೧೯ನೇ ಶತಮಾನದ ಉತ್ತರಾರ್ಧದಿಂದ ೨೦ನೇಶತಮಾನದ ಪೂರ್ವ ಭಾಗ) ನವರ ಕಾಲಕ್ಕೆ ಅವರು ಬಳಸುತ್ತಿದ್ದ ತಾಳ ಕಂಚಿನದ್ದಾಗಿರದೆ ಸಂಪೂರ್ಣ ಕಬ್ಬಿಣದ್ದಾಗಿತ್ತು. ಮೂಗೂರು ಅಮೃತಪ್ಪ (೧೯ನೇ ಶತಮಾನ)ನವರು ಉಪಯೋಗಿಸುತ್ತಿದ್ದರೆನ್ನಲಾದ ತಾಳಗಳು ಮೂಗೂರು ಜೇಜಮ್ಮನವರಿಗೆ ಹಸ್ತಾಂತರಗೊಂಡಿತಂತೆ. ಅವೀಗ ನನ್ನಲ್ಲಿವೆ. ಆ ಕಬ್ಬಿಣತಾಳಗಳಲ್ಲೇ ಅವರು ನಟುವಾಂಗ ಮಾಡಿ ನಾದ ಹೊರಡಿಸುತ್ತಿದ್ದರೆಂದರೆ ಅವರ ವಿದ್ವತ್ತು ಎಷ್ಟಿರಬೇಡ?

ಮೂಗೂರು ಅಮೃತಪ್ಪನವರು ಆಸ್ಥಾನಕ್ಕೆ ಯಾವ ಕಲಾವಿದನೇ ಬರಲಿ, ನಟುವಾಂಗ ಮಾಡುತಿದ್ದರು. ಒಮ್ಮೆ ದೇವದಾಸಿಯರಿಗಲ್ಲದೆ ಬೇರೆಯವರಿಗೆ ಪಾಠ ಮಾಡಿದ್ದರಂತೆ. ಕುಪಿತರಾದ ನಾಯಿಕಸಾನಿ ವರ್ಗ ಅಮೃತಪ್ಪನವರಿಗೆ ಬಹಿಷ್ಕಾರ ಹಾಕಿತು. ಹೀಗಾಗಿ ರಾಜಸಭೆಗೆ ಅಮೃತಪ್ಪನವರು ಬಾರದೆ ನಾಯಿಕಸಾನಿಯವರು ನರ್ತಿಸದೆ ನಿಲ್ಲಬೇಕಾಗಿ ಬಂದಿತು. ರಾಜರಿಗೆ ವಿಷಯ ತಿಳಿದು ಅಮೃತಪ್ಪನವರನ್ನು ಕರೆಸಿದರು. ನಾಯಿಕಸಾನಿಯವರಿಗೆ ಬುದ್ಧಿವಾದ ಹೇಳಿ ಅಮೃತಪ್ಪನವರನ್ನು ಪುನಾ ನಟುವಾಂಗ ಮಾಡುವಂತೆ ರಾಜಾಜ್ಞೆ ಮಾಡಿದರು. ನಾಯಿಕಸಾನಿಯವರ ಅಹಂಕಾರ ಮುರಿಯಲೋಸುಗ ಕೊನೆಗೆ ಅಮೃತಪ್ಪನವರು ತಿಳಿಸಿದಂತೆ ನಾಯಿಕಸಾನಿಯವರು ತಮ್ಮ ಬಹಿಷ್ಕಾರಕ್ಕೆ ೨ ರೂ ತಪ್ಪುಕಾಣಿಕೆ ಅಮೃತಪ್ಪನವರಿಗೆ ಕೊಟ್ಟ ನಂತರವೇ ಅವರು ನಟುವಾಂಗ ಮಾಡಿದ್ದು !’

ಮೂಗೂರಿನಲ್ಲಿ ಸಂತೆಪೇಟೆಯಲ್ಲಿ ಚಂದ್ರಮೌಳೀಶ್ವರ ದೇವಸ್ಥಾನ ಮತ್ತು ಕುದೇರುಮಠದಲ್ಲಿ ಸ್ಪರ್ಧೆ, ಸಮ್ಮೇಳನ ನಡೀತಿತ್ತು. ಅಮೃತಪ್ಪನವರಿರುವಾಗ – ಕಣಿವೆ ಕೆಳಗಿನವರು ಅಂದರೆ ಬಹುಷಃ ತಮಿಳ್ನಾಡಿನವರಿರಬೇಕು ಅನ್ನಿಸುತ್ತೆ. ಒಬ್ಬ ತೋಡ, ಕಂಕಣ ಕಟ್ಟಿಕೊಂಡು ಬಂದವನು ಅರಮನೆಯಲ್ಲಿ ಸವಾಲು ಹಾಕಿದ. ‘ಒಂದು ವಾರ ಕಳಿಲೀ ಆ ನಂತ್ರ ಬರ್ತೇನೆ’ ಅಂತಂದ್ರು ಅಮೃತಪ್ಪ. ಒಂದು ವಾರ ಕಳೆದು ಇಬ್ಬರು ಶಿಷ್ಯಂದಿರನ್ನು ಕರೆದುಕೊಂಡು ಬಂದು ಎರಡು ಲೋಡು ಮರಳು ಅರಮನೆ ಎದುರು ಹಾಕಿಸಿ, ಅದರ ಮೇಲೆ ಬಿಳಿಬಟ್ಟೆ ಹಾಸಿ ನರ್ತಿಸಲು ನಿರ್ದೇಶಿಸಿದರು. ಬಟ್ಟೆ ತೆಗೆದು ನೋಡಿದರೆ- ಪೂರ್ತಿ ಗೀತೋಪದೇಶದ ಚಿತ್ರ, ಕೃಷ್ಣ, ಕುದುರೆ, ಅರ್ಜುನ ಹೀಗೆಲ್ಲಾ ಕಂಡಿತು. ಸವಾಲು ಹಾಕಿದವ ತೋಡ, ಕಂಕಣ ಎಲ್ಲ ಕಳಚಿ ಕಾಲಿಗೆರಗಿದನಂತೆ.

ಮತ್ತೊಂದು ಸಂದರ್ಭ. ಚಂದ್ರವತಿಯೋ, ಚಂದ್ರಮ್ಮನೋ ನೆನಪಿಲ್ಲ. ಒಮ್ಮೆ ಮಹಾರಾಜರು ಆಕೆಯ ನೃತ್ಯ ನೋಡಿ ಇಷ್ಟಪಟ್ಟು ಗಂಟೆ ತೋಡ ತೊಡಸಿದ್ರು. ಇದನ್ನು ಕೇಳಿ ತಿಳಿದ ಅಮೃತಪ್ಪ ಕ್ರುದ್ಧರಾದರಂತೆ- ‘ನಾನು ಅರಮನೆ ವಿದ್ವಾಂಸನಾಗಿರುವಾಗ ನನ್ನ ಸಮ್ಮುಖದಲ್ಲಿ ಅಲ್ಲದೆ ಹೇಗೆ ತೊಡಿಸಿದರು’ ಅಂತ. ಹಾಗಾಗಿ ಅವಳನ್ನು ಬರಹೇಳಿ- ಮಹಾರಾಜರು ಗಂಟೆ ತೋಡ ತೊಡಿಸಿದರೆ ಅರಮನೆ ಒಳಗಾಯಿತು, ಹೊರಗಡೆ ಹಾಕುವಂತಿಲ್ಲ. ಹೊರಗಡೆ ಹಾಕಿ ತಿರುಗಬೇಕಿದ್ದರೆ ಕುದೇರುಮಠದಲ್ಲಿ ಸಭೆ ಕರೆದಿದ್ದೇನೆ. ಬಂದು ತನ್ನ ವಿದ್ವತ್ತು ಪ್ರದರ್ಶಿಸಬೇಕು ’ ಎಂದರು. ಅವಳೋ ತನಗೆ ಮಹಾರಾಜರು ತೊಡಿಸಿದದನ್ನು ತೆಗೆದು ಸೆರಗಿನಲ್ಲಿ ಕಟ್ಟಿಕೊಂಡು ಸಭೆಗೆ ಬಂದು ನಿಂತಳು. ಅಮೃತಪ್ಪ ಕೇಳಿದರು- ‘ಏನು ಮಾಡಿದ್ದೀ ಅಂತ ತೊಡಿಸಿದ್ರು, ಅದೇ ಮಾಡಿದೆಯೋ, ಆ ನೃತ್ಯದ ವಿದ್ವತ್ತನ್ನು ಈಗ ಮಾಡಿ ತೋರಿಸು’ಅಂತ. ಆದರೆ ಅವಳೋ ಬುದ್ದಿವಂತೆ- ‘ವಿದ್ಯೆಯಲ್ಲಿ ಯಾರು ಮೇಲು ಯಾರು ಕೀಳು? ನನಗಿಂತಲೂ ಎಷ್ಟೋ ವಿದ್ವಾಂಸರಿದ್ದಾರೆ. ಅಷ್ಟಕ್ಕೂ ಮಹಾರಾಜರು ನನಗೆ ಸಮ್ಮಾನಿಸಿದ್ದು ವಿದ್ಯೆಯಿಂದಲ್ಲ, ಪ್ರೀತಿಯಿಂದ ಕೊಟದ್ದು ಅಂತ ಹೇಳಿ ಕಾಲಬುಡದಲ್ಲಿ ಇಟಳಂತೆ. ಆಗ ಅಮೃತಪ್ಪನವರು ಪ್ರಸನ್ನರಾಗಿ ‘ವಿದ್ಯಾದದಾತಿ ವಿನಯಂ. ಈಗ ತೊಟ್ಟುಕೋ’ ಅಂತ ಹೇಳಿ ಮನ್ನಿಸಿದರು.

ಅಂತಹ ಅಪರೂಪದ ಕಲಾವಿದರು ಅಮೃತಪ್ಪನವರು. ಅವರು ಬಳಸುತ್ತಿದ್ದ ನಾಲ್ಕು ಸೀಳಿನ ಕಂಚಿನ ಗೆಜ್ಜೆಗಳು ನನ್ನ ಗುರುಗಳ ತರುವಾಯ ನನ್ನ ಬಳಿಗೆ ಬಂದ ಅಮೂಲ್ಯ ಆಸ್ತಿಯಾಗಿವೆ.

 • ಮೂಗೂರು ಸಂಪ್ರದಾಯದಲ್ಲಿ ಅಡವು, ಅರೆಮಂಡಿ ನಿಲುವು, ಅಭ್ಯಾಸವೆಲ್ಲಾ ಭಿನ್ನ ಎಂದು ಕೇಳಪಟ್ಟಿದ್ದೇನೆ. ಮತ್ತಷ್ಟು ವಿವರಿಸುವಿರಾ?

ನಮ್ಮಲ್ಲಿ ಅರೆಮಂಡಿಯ ಬಗ್ಗೆ ಸಾಕಷ್ಟು ಭ್ರಮೆಗಳಿವೆ. ಎಲ್ಲಾ ಅಡವುಗಳನ್ನು ಮಾಡಬೇಕಾದರೆ ಅರೆಮಂಡಿಯನ್ನೇ ಉಪಯೋಗಿಸುತ್ತೀರೇನು? ಕಾಲಿನ ಚಲನೆ ನಿರಂತರ ಇರಬೇಕಾದರೆ ಅರೆಮಂಡಿಯನ್ನೇ ಕಾಯ್ದುಕೊಂಡರೆ ನೃತ್ಯ ಮಾಡಲಾದೀತೇ? ಹಾಗಾದರೆ ಅರೆಮಂಡಿಯನ್ನು ಕಾಯ್ದುಕೊಳ್ಳುವುದು ಎಂಬುದರಲ್ಲೇನು ಅರ್ಥ? ಅರೆಮಂಡಿ ಏನಿದ್ದರೂ ಸ್ಥಾನಕವಷ್ಟೇ. ಅದನ್ನು ಬಿಟ್ಟು ಪ್ರತಿಯೊಂದನ್ನು ಅರೆಮಂಡಿಯಲ್ಲೇ ಮಾಡುತ್ತೇನೆ ಎಂದರೆ ಮೂರ್ಖತನವಾಗುತ್ತದೆ. ಇವೆಲ್ಲಾ ತಮಿಳುನಾಡಿನವರ ನೃತ್ಯದ ಅನುಕರಣೆ, ಮೋಹದಿಂದ ಬಂದಿದ್ದು.

ಇನ್ನು ಅಡವುಗಳ ಮೂಲ ನೆಲೆ ಎಲ್ಲಿ, ಹೇಗೆ ಎನ್ನುವುದು ಇಂದಿಗೂ ಸ್ಪಷ್ಟವಾಗಿಲ್ಲ. ಗ್ರಾಮ್ಯ ಭಾಷೆ, ಸಂಸ್ಕೃತ ಎರಡೂ ಇದ್ದ ಕಾಲಗಳ ಭಾಷೆ ಶಬ್ದಗಳು ಇಂದಿಗೆ ಬಳಸಲ್ಪಡುತ್ತಿಲ್ಲ. ಎಷ್ಟೋ ವಿಷಯಗಳು ಕಳೆದುಹೋಗಿವೆ. ಹಾಗೆಯೇ ಅಡವುಗಳ ವಿಷಯವೂ. ಆದರೆ ಸಾಕಷ್ಟು ವೈವಿಧ್ಯವನ್ನು ಈ ಪರಂಪರೆಯಲ್ಲಿ ಕಾಣಬಹುದು. ಉದಾಹರಣೆಗೆ ತಟ್ಟುಮೆಟ್ಟಡವಿನಲ್ಲಿ ನಮ್ಮದು ತಟ್ಟಿದ ಮೇಲೆ ಮೆಟ್ಟುವಿಗೆ ಕಾಲಿನ ಹಿಂದೆ ಸ್ವಸ್ತಿಕ ಘಾತ ಇರುತ್ತದೆ.

ಅಡವಿನ ಅಭ್ಯಾಸದ ವಿಷಯದಲ್ಲಿ ಹೇಳುವುದಾದರೆ, ಮೊದಲೆಲ್ಲಾ ಭತ್ತದ ಮೇಲೆ ನಿಂತು ಅಭ್ಯಾಸ ಮಾಡಬೇಕಿತ್ತು. ಹೆಜ್ಜೆಗಳು ಹೇಗಿರುತ್ತಿದ್ದವೆಂದರೆ ಭತ್ತದ ಹೊಟ್ಟು ಹೋಗಿ ಅಕ್ಕಿಯಾಗಬೇಕು. ಅಷ್ಟೊಂದು ತೂಕದ ಹೆಜ್ಜೆಗಳು ಬೀಳಬೇಕು. ತಾಳದ ಬಿಕ್ಕಟ್ಟು ಸಿಗುವಂತೆ ಇರಬೇಕೇ ಹೊರತು ತೇಲಿ ಹೋಗಬಾರದು. ಈಗ ಅದರ ಸುಳಿವೇ ಇಲ್ಲ.

Photo by Vishnuprasad

 • ನಿಮ್ಮ ಕಲಿಕೆಯ ಕಾಲದ ನೃತ್ಯಾಭ್ಯಾಸಕ್ಕೂ, ಈಗಿನ ಕಾಲದ ನೃತ್ಯ ಕಲಿಕೆಗೂ ಯಾವ ರೀತಿಯ ವ್ಯತ್ಯಾಸವನ್ನು ಕಾಣುತ್ತಿದ್ದೀರಿ?

ಯಕ್ಷಗಾನದವರಿಗೇನೇ ಈಗೆಲ್ಲಾ ವೇದಿಕೆ ಬಂದಿದೆ. ಆಗೆಲ್ಲಾ ಸುಡುಗಾಡಲ್ಲಿ ಆಟ ಆಡುವುದು ಇತ್ತು. ಚಂಡೆ ಕೇಳುವ ದೂರಕ್ಕೂ ಭೂತ-ಪ್ರೇತ-ಪಿಶಾಚಗಳ ಕಾಟವಿಲ್ಲ ಅಂತ. ಈಗೆಲ್ಲಾ ಅದು ಕಣ್ಮರೆಯಾಗಿದೆ. ಇನ್ನು ನೃತ್ಯದ ಸ್ಥಿತಿ ಹೇಗಿದ್ದರೂ ಅದಕ್ಕಿಂತಲೂ ಉತ್ತಮ ಮಟ್ಟದ್ದಲ್ಲವೇ? ಆದರೆ ಕ್ರಮೇಣ ಶ್ರದ್ಧೆ ಸಾಧನೆ ಕಡಿಮೆಯಾಗಿವೆ. ಶ್ರದ್ಧೆ ಕಲಿಸುವವರಿಗೂ ಕಲಿಯುವವರಿಗೂ ಇಲ್ಲ. ಮೊದಲೆಲ್ಲಾ ಗೆಜ್ಜೆ ಕಟ್ಟಿದ ಮೇಲೆ ನಮಸ್ಕಾರ ಮಾಡುವುದಿಲ್ಲ. ಮೊದಲೇ ಮಾಡಬೇಕು. ನರ್ತಕಿ ಎಂದರೆ ಸಕಲದೇವತಾಸ್ವರೂಪಳು ಅಂತ. ಈಗೆಲ್ಲಾ ಅವಿಲ್ಲ. ಗೆಜ್ಜೆ ಕಟ್ಟಿದ ಮೇಲೆ ಗೆಜ್ಜೆಗೆ ಅವಮಾನ ಮಾಡುವ ಎಲ್ಲಾ ರೀತಿಯ ನಡವಳಿಕೆಗಳನ್ನೂ ಕಾಣಬಹುದು. ಇನ್ನು ನೃತ್ಯಶೈಲಿಗಳ ವಿಚಾರದಲ್ಲಂತೂ ಮೇಲಾಟಗಳು, ಸ್ಪರ್ಧೆಗಳು ತರ್ಕಕ್ಕೆ ಮಾತ್ರ ಸೀಮಿತವಾಗುತ್ತಿವೆ.

ಆಗಿನ ಕಾಲದ ದೇವದಾಸಿಯರಲ್ಲಿ ಶ್ರದ್ಧೆ ಭಕ್ತಿ ಇತ್ತು. ದೇವದಾಸಿ ದೇವರಿಗೆ ಮಾತ್ರ ದಾಸಿ, ಉಳಿದವರಿಗಲ್ಲ. ಮೈನರೆಯುವ ಮೊದಲೇ ಹೆಣ್ಣ್ಣುಮಕ್ಕಳಿಗೆ ಗೆಜ್ಜೆ ಪೂಜೆ ಮಾಡಿಸಿ ಅವರನ್ನು ದೇವತಸೇವೆಗೆ ಮಾತ್ರ ಮೀಸಲಿರಿಸುವ ಪದ್ಧತಿ ಮೊದಲಿನದ್ದು. ಆದರೆ ಅದರ ಮಹತ್ವ ಗೊತ್ತಿಲ್ಲದವರೇ ಜಾಸ್ತಿ. ಅವರಿಗಿಂತ ಕೆಳಗಿನ ವರ್ಗದಲ್ಲಿ ನಾಯಿಕಸಾನಿಯವರು- ನಾಯಕರಿಗೆ ದಾಸಿ, ಸೂಳೆ ಎಂದರ್ಥ, ಅದಕ್ಕಿಂತ ಕೆಳಗಿನವರು ಸೂಳೆಯರು. ನೃತ್ಯ ಎನ್ನುವುದು ಉತ್ತಮ ವರ್ಗದ ಸ್ವತ್ತಾಗಿದ್ದ ಕಾಲವಿದ್ದ ಹಾಗೆಯೇ ಕೀಳಾಗಿ ನೋಡುವ ಕಾಲವೂ ಬಂದಿತ್ತು. ಗೆಜ್ಜೆಪೂಜೆ ಆಗಿದೆ ಎಂದರೆ ಯಾವ ಸೂಳೆಯ ವಂಶಕ್ಕೆ ಸೇರಿದವನು ಅಂತನೇ ಕಾಣ್ತಿದ್ರು. ನನಗೆ ಗೆಜ್ಜೆಪೂಜೆಯ ತರಹದ ವಿಧಿಗಳನ್ನು ನನ್ನ ಗುರುಗಳು ಮಾಡಿದ್ದ ಕಾರಣ ನನ್ನನ್ನು ಕೀಳಾಗಿ ಹೋಲಿಸಿ ಮಾತನಾಡಿದ್ದರು- ‘ಯಾವ ಸಾಹುಕಾರಿಗೆ ಈತ ಮೀಸಲಾಗಿ ಮಾಡಿಟ್ಟಿದ್ದಾನೆ’ ಅಂತ. ಅಂದಿನಿಂದ ಯಾರಿಗೂ ನಾನು ಗೆಜ್ಜೆಪೂಜೆಯ ತರಹದ ಯಾವುದೇ ಆಚರಣೆಗಳನ್ನು ಮಾಡಿಸುವುದಿಲ್ಲ.

ಒಟ್ಟಿನಲ್ಲಿ ರಾಜರ ಆಶ್ರಯದಲ್ಲಿಯೂ ಎಲ್ಲವೂ ಚೆನ್ನಾಗಿತ್ತೆಂದಲ್ಲ. ತಿಂದುಂಡು ಆರಾಮ ಜೀವನ ಕಳೆಯುತ್ತಿದ್ದ ಕಲಾವಿದರು ಇದ್ದರು. ರಾಜರು ಪತಂಗವನ್ನು ಹಾರಿಸುತ್ತಿದ್ದ ರೀತಿಯನ್ನು ‘ಪತಂಗ ನಾಚ್’- ಎಂಬ ಹೆಸರಿನಲ್ಲಿ ರಂಜನೆಗೆ ಬೇಕಾಗಿ ನೃತ್ಯದಲ್ಲಿಯೂ ಅಳವಡಿಸಿಕೊಂಡಿದ್ದರು. ಅದಕ್ಕೆ ಅದರದ್ದೇ ಆದ ನೃತ್ಯದ ಸಂಪ್ರದಾಯವಿರಲಿಲ್ಲ. ರಾಜರನ್ನು ಓಲೈಸಲು ಬಳಸಿಕೊಂಡಿದ್ದ ಅದನ್ನು ಸಂಪ್ರದಾಯ ಎಂದುಕೊಂಡು ಈಗಲೂ ಬಳಸಬೇಕೆಂದೇನಿಲ್ಲವಲ್ಲ !

 • Kodavoor Madhava Rao – infront of his small one room house- Photo by Vishnuprasad

  ಹಾಗಾದರೆ ಇಂದಿನ ಕಲೆ, ಕಲಾವಿದರ ನಡವಳಿಕೆಗಳು ನಿಮ್ಮನ್ನು ಬಾಧಿಸಿವೆ ಎಂದಾಯಿತು !

ಅಲ್ಲವೇ ಮತ್ತೆ? ಇಂದಿಗೆ ರಾಜರ ಬದಲಿಗೆ ಸರ್ಕಾರವಿದೆ. ಸರ್ಕಾರದ ವಕ್ತಾರನಾಗಿ ಅಕಾಡೆಮಿಯಿದೆ. ಆದರೆ ಅದರಲ್ಲಿರುವ ಆರ್ಥಿಕ ಸಂಪನ್ಮೂಲವನ್ನು ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚು. ಯಾವ್ಯಾವುದೋ ಹೆಸರಿನಲ್ಲಿ ದುಡ್ಡು ಪಡೆದು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. ಅವರನ್ನು ನಂಬಿ ಹೋದರೆ ನಾವು ಸಮಯ, ಹಣ ವ್ಯರ್ಥ ಮಾಡಿಕೊಂಡು ನೋವು ತಿನ್ನಬೇಕಾಗುತ್ತದೆ. ಹಾಗಾಗಿ ನಾನು ನನ್ನ ಬಳಿಯಿರುವ ವಿದ್ಯೆಯ ಸ್ವತ್ತನ್ನು ಅಷ್ಟಾಗಿ ಹಂಚಿಕೊಳ್ಳುತ್ತಿಲ್ಲ. ಬರುವವರು ಗುರುವಿನ ಬಳಿ ಬಂದು ಕಲಿಯದೆ ಕದ್ದುಕೊಂಡು ತಮ್ಮ ಹೆಸರು ಹಾಕಿಕೊಂಡು ಸ್ವಂತಲಾಭಕ್ಕೆ ಬಳಸಿಕೊಳ್ಳುವ ಹಲವು ಸಂದರ್ಭ ಕಂಡಿದ್ದೇನೆ. ಹಾಗಿದ್ದಾಗ ನಾನ್ಯಾಕೆ ಕೊಡಲಿ?

ನನ್ನ ಬಳಿ ಬಂದ ಒಬ್ಬ ನೃತ್ಯ ವಿಮರ್ಶಕರು ನನ್ನ ಜೀವನಗಾಥೆಯನ್ನು ಲೇಖನ ಮಾಡುತ್ತೇನೆ ಎಂದು ಹೇಳಿಕೊಂಡು ನನ್ನ ಬಳಿಯಿದ್ದ ಹಳೆಯ ದಾಖಲೆ, ಪೋಟೋಗಳನ್ನು ತೆಗೆದುಕೊಂಡು ಹೋದರು. ಕೇಳಿದರೆ ತನ್ನ ಬಳಿ ಭವಿಷ್ಯದ ದಾಖಲೀಕರಣಕ್ಕೆ ಭದ್ರವಾಗಿವೆ ಎಂಬ ಜವಾಬು ಕೊಡುತ್ತಾರೆ. ಕೊಟ್ಟದ್ದನ್ನು ಹಿಂತಿರುಗಿಸಬೇಕೆಂಬ ಕನಿಷ್ಟ ಜ್ಞಾನವೂ ಅವರಿಗಿಲ್ಲ. ಹೀಗಿರುವ ಹಲವು ಅನುಭವಗಳು ನನಗಾದ ಕಾರಣ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ.

ನಾವೆಲ್ಲಾ ಕಲಿಯುವ ಹೊತ್ತಿಗೆ ಬರೀ ಅಡವಿಗೆ ಒಂದೂವರೆ ವರ್ಷ. ಈಗಿನಂತೆ ನೂರಾರು ಬಗೆಯ ಅಡವುಗಳಿರಲಿಲ್ಲ. ಆದರೆ ಆ ಒಂದೂವರೆ ವರ್ಷದಲ್ಲಿ ಜೂನಿಯರ್ ಪರೀಕ್ಷೆಗೆ ಕಟ್ಟುತ್ತಾರೆ. ಇನ್ನು ಈಗಿನ ನೃತ್ಯಸ್ಪರ್ಧೆಗಳೋ… ಭಗವಂತನಿಗೇ ಪ್ರೀತಿ. ವಯಸ್ಸಿಗೆ ಮೀರಿದ ವಿಚಾರಗಳನ್ನು ನರ್ತಿಸುವುದೇ ಇಂದಿನ ವಿದ್ವತ್ತು. ಒಮ್ಮೆ ಹೀಗೆ ಆಯಿತು. ಒಂದು ಸ್ಪರ್ಧೆಗೆ ತೀರ್ಪುಗಾರನನ್ನಾಗಿ ನನ್ನನ್ನು ಕರೆದಿದ್ದರು. ಅಲ್ಲಿಯೋ ಎಂಟು ವರ್ಷದ ಹುಡುಗಿ ವರ್ಣ ಮಾಡ್ತಾಳೆ!! ಕರೆದು ಕೇಳಿದರೆ ಅವಳಿಗೆ ರಾಗ ತಾಳ, ಅಭ್ಯಾಸ- ಯಾವುದು ಹೇಳಲೂ ತಿಳಿಯದು. ಅವಳ ಗುರುಗಳೆನಿಸಿಕೊಂಡವಾರೋ ದರ್ಪದಿಂದ ಅದೆಲ್ಲಾ ಯಾಕೆ ನಿಮ್ಗೆ? ಸುಮ್ನೆ ಮಾರ್ಕ್ ಹಾಕಲಿಕ್ಕೆ ನಿಮಗೆ ಕೊಟ್ಟದು ಅಂತಂದರು. ನಾನು ಸಮಾಧಾನದಿಂದ ಹೇಳಹೊರಟರೆ ಆಯೋಜಕರಲ್ಲಿ ಓಗಿ ವಕಾಲತ್ತು, ವಶೀಲಿ ಮಾಡಿದ್ರು. ಬೇಸರವಾಯಿತು. ತಡಮಾಡಲಿಲ್ಲ. ‘ಸುಮ್ನೆ ಬಾಯಿಮುಚ್ಚಿ ಮಾರ್ಕ್ ಹಾಕಲಿಕ್ಕೆ ಬೇರೆಯವರು ಇದ್ದಾರೆ’ ಎಂದು ಹೇಳಿ ಪೆನ್ನಿಟ್ಟೆ. ಎದ್ದು ಬಂದೆ. ಅದನ್ನು ಗಮನಿಸಿ ಆಯೋಜಕರು ಓಡಿಬಂದರು. ಕ್ಷಮೆ ಕೇಳಿ ವಾಪಾಸು ಬಂದು ‘ಮಾರ್ಕ್ ಹಾಕಿ’ ಅಂದರು. ಹೋದೆ; ಎಲ್ಲದಕ್ಕೂ ಸೊನ್ನೆ ಹಾಕಿದೆ. ಆ ನೃತ್ಯಶಿಕ್ಷಕನ ನಾಲ್ಕು ಹುಡುಗರೂ ವರ್ಣವೇ ನರ್ತಿಸಿದರು. ಕೊನೆಗೆ ಆ ಟೀಚರಿಗೆ ಹೇಳಿದೆ- ‘ಕಲೆಯನ್ನು ಕೊಲೆ ಮಾಡಬಾರದು.’ ಅದಕ್ಕೆ ಅವನಂದದ್ದು- ‘ಅವೆಲ್ಲಾ ಯಾರಿಗೆ ಬೇಕಾಗಿ?’. ಒಟ್ಟಿನಲ್ಲಿ ಈಗೆಲ್ಲಾ ಯಾರಿಂದ ಎಷ್ಟು ದುಡ್ಡು ಬಂದೀತು ಅನ್ನುವುದು ಮುಖ್ಯವಾಗುತ್ತಿದೆ. ಈಗ ಎಲ್ಲರೂ ವಿದುಷಿ, ವಿದ್ವಾನ್‌ಗಳೇ. ಆದರೆ ನಿಜವಾದ ವಿದ್ವಾಂಸರಿಲ್ಲ. ವಿದ್ವಾಂಸರೆದುರು ಪ್ರದರ್ಶಿಸಿ ಮನ್ನಣೆ ಪಡೆದರೆ ಮಾತ್ರ ಆಗೆಲ್ಲಾ ಗೆಜ್ಜೆಪೂಜೆ ಮಾಡ್ತಿದ್ರು. ನಾವೆಲ್ಲಾ ಸುಮ್ಮನೆ ಬಾಯಿ ಹಾಳು ಮಾಡಿಕೊಳ್ಳುವುದಾಗಿದೆ.

 • ಮೂಗೂರು ಪರಂಪರೆಯ ನಟುವಾಂಗಕ್ಕೂ, ಈಗಿನ ಶೈಲಿಗೂ ಯಾವ ವ್ಯತ್ಯಾಸಗಳನ್ನೆಲ್ಲಾ ಗುರುತಿಸುತ್ತೀರಿ?

ಮೊದಲೆಲ್ಲಾ ಅಮೃತಪ್ಪ, ಗುಂಡಪ್ಪ ಅಂತಾನೆ ಪುರುಷರ ಹೆಸರು ನಟುವಾಂಗದಲ್ಲಿ ಕೇಳಿ ಬರುತ್ತದೆ. ಜಟ್ಟಿ ತಾಯಮ್ಮನವರೇ ಮೊದಲು ನಟುವಾಂಗ ಹೆಂಗಸ್ರಲ್ಲಿ ಮಾಡಿದ್ದು ಅಂತ ಕಾಣುತ್ತೆ.

ನಮಗೆಲ್ಲಾ ನಟುವಾಂಗಕ್ಕೆ ಪಾಠಗಳಿಲ್ಲ. ನೋಡಿ ಕಲಿತು ಮಾಡಿ ತಿಳಿದುಕೋ- ಎನ್ನುವವರು. ಆದರೆ ಶಿಸ್ತು ಇತ್ತು. ಉದಾಹರಣೆಗೆ ತಾಳ ಹಾಕಬೇಕಾದರೆ ಕಿವಿಯ ಬಳಿ ಕೈಹೋಗಿ ಬರಬೇಕು. ಆಗಲೇ ತಾಳದ ನಡುವಿನ ಬಿಕ್ಕಟ್ಟು ಸುಸ್ಪಷ್ಟ. ತಾನವರ್ಣಕ್ಕೆಲ್ಲಾ ಅಕಾರಾದಿಗಳಿಗೆ ಅನುಕೂಲವಾಗಿ ಹೆಜ್ಜೆ ಮೃದಂಗ ಹಾಕಬೇಕಿತ್ತು. ಹೆಜ್ಜ್ಜೆಗಾರಿಕೆಗೆ ಅನುಗುಣವಾಗಿ ನುಡಿಸುವುದು ಇತ್ತು. ಆದರೆ ಈಗೆಲ್ಲಾ ಒಂದೇ ಆಗಿದೆ. ತಮಿಳ್ನಾಡಿನವರು ಈ ವಿಷಯದಲ್ಲಿ ಸಾಕಷ್ಟು ಅಭ್ಯಾಸ ಮಾಡ್ತಾರೆ. ಆದರೆ ನಮ್ಮಲ್ಲಿ ಸರ್ವಲಘು ಹಾಕಿ ಕೊನೆಗೆ ಒಂದು ಮುಕ್ತಾಯ ಕೊಡುತ್ತಾರೆ. ನಮ್ಮಲ್ಲಿ ಹಿಮ್ಮೇಳದವರನ್ನು ಸಾಕುವುದಷ್ಟಕ್ಕೆ ತಾಕತ್ತಿಲ್ಲ.

ಆಗೆಲ್ಲಾ ಯಾರೋ ಗುರುವಿನ ಯಾರೋ ಶಿಷ್ಯೆಯರಿಗೆ ನಟುವಾಂಗ ಮಾಡಿದಂತಲ್ಲ. ನಟುವಾಂಗ ಎನ್ನುವುದು ಗುರುವಿನ ಹಕ್ಕು. ಈಗಿನ ದಿನಗಳಲ್ಲಿ ಹಲ್ಲು ಬಾಯಿ ಕಚ್ಚಿ ಕುಟುವಾಂಗ ಮಾಡುತ್ತಾರೆಯೇ ವಿನಾ ನಟುವಾಂಗ ಮಾಡುವವರು ಕಡಿಮೆ. ಜೊತೆಗೆ ಸಾಹಿತ್ಯ ಭಾವಕ್ಕೆ ತಕ್ಕುದಾಗಿ ತಾಳ ಅಥವಾ ಮೃದಂಗದ ಸಹಕಾರ ಇಲ್ಲ.

Photo by Vishnuprasad

 • ನಿಮ್ಮ ಶಿಷ್ಯಪರಂಪರೆಯ ಭವಿಷ್ಯದ ಸಾಧ್ಯತೆಗಳು ಹೇಗಿವೆ?

ಈಗ ನಮ್ಮ ಪರಂಪರೆಯನ್ನು ಮುಂದುವರಿಸೋರು ಅಷ್ಟಾಗಿ ಇಲ್ಲ. ಇರಲಿ, ಕಾಲ ಅನಂತವಾಗಿದೆ. ಕಲೆಯಲ್ಲಿ ಸತ್ತ್ವ ಇದ್ದರೆ ಅದಾಗಿಯೇ ಎಳಕೊಂಡೂ ಬರುತ್ತದೆ. ಗುರು ಬೇಕೆಂದವರು ಹುಡುಕಿಕೊಂಡು ಹೋಗ್ತಾರೆ. ಅಷ್ಟಕ್ಕೂ ಎಲ್ರೂ ನೃತ್ಯಕಲಾವಿದರು ಆಗೋದಿಲ್ಲ. ಕಲೆ ಹುಟ್ಟಿನಿಂದ ಬರಬೇಕು.

ನನ್ನ ನೃತ್ಯಕಲಿಕೆಯ ಶ್ರಮ ನೋಡಿದ್ದ ಅಂದಿನ ಹಿರಿಯರೊಬ್ಬರು ದುಡ್ಡಿಗೇ ಪ್ರಾಶಸ್ತ್ಯ. ವಿದ್ಯಾರ್ಥಿಗಳಲ್ಲ ಎಂದು ಬುದ್ಧಿವಾದ ಹೇಳಿದರು. ಅವರು ಹೇಳಿದ್ದು ಸತ್ಯ ಅಂತ ಈವತ್ತಿಗೆ ಕಾಣ್ತಿದೆ. ಈಗಿನ ನೃತ್ಯ ವಿದ್ಯಾರ್ಥಿಗಳಿಗೆ ತಾಳುವಿಕೆಯಿಲ್ಲ. ಎಲ್ಲಾ ಅವಸರದಲ್ಲಿ ಆಗಬೇಕು. ಆದಷ್ಟು ಬೇಗ ರಂಗಕ್ಕೆ ಹತ್ತಬೇಕೆಂಬ ಧಾವಂತ. ಹಾಗಾಗಿ ನಮ್ಮಂಥವರಿಗೆ ಹೆಚ್ಚು ಶಿಷ್ಯರು ಬರುವುದಿಲ್ಲ.

ಇನ್ನು ವಯಸ್ಸಿನ ಕಾರಣದಿಂದ ಹಸ್ತ-ಮುದ್ರೆಗಳ ಹೆಸರೂ ಜ್ಞಾಪಕಕ್ಕೆ ಬರ್ತಿಲ್ಲ. ವಯಸ್ಸಾಯಿತಲ್ಲಾ, ಪಾರಮಾರ್ಥಿಕದ ಕಡೆಗೆ ತಿರುಗ್ತಾ ಇದ್ದೇನೆ. ಶಂಕರಾಚಾರ್ಯರು ಭಜಗೋವಿಂದಂ ರಚನೆ ಬರೆಯಲು ಪ್ರೇರೇಪಣೆ ಆದ ಸಂಗತಿ ನಿಮಗೆ ಗೊತ್ತಿರಬಹುದು. ಇವತ್ತು ನಾಳೆ ಸಾಯುವವನಿಗೆ ವ್ಯಾಕರಣದ ಸೂತ್ರ ಅಭ್ಯಾಸ ಯಾಕೆ? ಮನುಷ್ಯ ಚಿಕ್ಕಪ್ರಾಯದಲ್ಲಿ ಕ್ರೀಡಾಸಕ್ತ, ಯೌವನದಲ್ಲಿ ವಿಷಯಾಸಕ್ತ, ವೃದ್ಧಾಪ್ಯದಲ್ಲಿ ‘ಹಿಂದೆ ಹೀಗಿತ್ತು’ ಅಂತ ಹೇಳಿ ನೆನಪು ಮಾಡಿಕೊಂಡು ಅಧ್ಯಾತ್ಮದ ಕಡೆಗಾದರೂ ಹೊರಳಬೇಕು. ಅದೇ ಜೀವನಧರ್ಮ.

ಮರೆಯಾದ ಮೂಗೂರು ಪರಂಪರೆಯ ಕೊನೆಯ ಕೊಂಡಿ ಕೊಡವೂರು ಮಾಧವ ರಾಯರಿಗೆ ನೂಪುರ ಭ್ರಮರಿಯಿಂದ ಆತ್ಯಂತಿಕ ಪ್ರೀತಿಯಿಂದ ನುಡಿನಮನ ಅಂಜಲಿ

Photo by Vishnuprasad

 

Leave a Reply