ಅಂಕಣಗಳು

Subscribe


 

ಕಟಕಾಮುಖ ಹಸ್ತ

Posted On: Monday, December 15th, 2008
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ತೋರು ಮತ್ತು ಮಧ್ಯಮ ಬೆರಳುಗಳ ತುದಿಗೆ ಹೆಬ್ಬೆರಳು ತುದಿಯನ್ನು ಸೇರಿಸಿ ಕಿರು ಮತ್ತು ಉಂಗುರ ಬೆರಳನ್ನು ಮೇಲಕ್ಕೆ ವಿರಳವಾಗಿ ನೀಡಿದರೆ ಕಟಕಾಮುಖ ಹಸ್ತ. ಆದರೆ ನಾಟ್ಯಶಾಸ್ತ್ರದ ಲಕ್ಷಣದಂತೆ ಉಂಗುರಬೆರಳು ಮತ್ತು ಕಿರು ಬೆರಳುಗಳನ್ನು ವಕ್ರವಾಗಿ ಎತ್ತಿ ಹಿಡಿದು ಉಳಿದ ತೋರು, ಮಧ್ಯ ಬೆರಳನ್ನು ಹೆಬ್ಬೆರಳಿಗೆ ಜೋಡಿಸಬೇಕು. ಲಾಸ್ಯರಂಜನದ ಪ್ರಕಾರ ಕಪಿತ್ಥಹಸ್ತದ ಕಿರುಬೆರಳು ಮತ್ತು ಉಂಗುರಬೆರಳನ್ನು ಅಂಗೈಯಿಂದ ಮೇಲಕ್ಕೆತ್ತಿ ವಿರಳ ಮಾಡಿ ಸ್ವಲ್ಪ ಬಗ್ಗಿಸಬೇಕು. ಇನ್ನೊಂದು ವಿಧಾನದಲ್ಲಿ ಕಿರು ಮತ್ತು ಉಂಗುರ ಬೆರಳನ್ನು ಅಂಗೈಯೊಳಗೆ ಸ್ವಲ್ಪ ಮಡಚಿ, ಹೆಬ್ಬೆರಳಿನ ತುದಿಗೆ ಮಧ್ಯ ಮತ್ತು ತೋರು ಬೆರಳುಗಳ ಮೊದಲ ಮೇಲಿನ ಗೆರೆ ತಾಕುವಂತೆ ಹಿಡಿಯಬೇಕು. ಹೀಗೆ ಆಯಾಯ ಶಾಸ್ತ್ರಗಳಿಗನುಗುಣವಾಗಿ ೪ ಲಕ್ಷಣಗಳಿವೆ. ನೃತ್ಯದ ಸಮಯದಲ್ಲಿ ಹೇರಳವಾಗಿ ಉಪಯೋಗಿಸಲ್ಪಡುವ ಹಸ್ತವಿದು.

ಯೋಗದಲ್ಲಿ ಬರುವ ಚಿಕಿತ್ಸದಾಯಕ ಮುದ್ರೆಗಳ ಪೈಕಿ ಅಂಗೈ ಮೇಲ್ಮುಖವಾಗಿರಿಸಿದ ಕಟಕಾಮುಖ ಹಸ್ತಕ್ಕೆ ವ್ಯಾನಮುದ್ರೆ ಅಥವಾ ಕುಬೇರಮುದ್ರೆ ಎಂದು ಹೆಸರು. ಮಾನಸಿಕ ನೆಮ್ಮದಿಗೆ, ಒತ್ತಡ ನಿವಾರಣೆಗೆ, ಆಂತರಿಕ ಶಾಂತಿಗೆ, ಆತ್ಮವಿಶ್ವಾಸಕ್ಕೆ, ಆಯಾಸ ನಿವಾರಣೆಗೆ, ಇಷ್ಟಾರ್ಥಸಾಧಕ, ರಕ್ತ ಪರಿಚಲನೆಯ ಸಮತೋಲನಕ್ಕೆ ಈ ಮುದ್ರೆ ಸಹಕಾರಿ.

ಕುಮಾರ ಸುಬ್ರಹ್ಮಣ್ಯನು ಈಶ್ವರನಿಂದ ಧನುರ್ವಿದ್ಯೆ ಕಲಿಯುವಾಗ ಈ ಹಸ್ತ ಉಗಮವಾಯಿತೆನ್ನಲಾಗಿದೆ. ಇದರದ್ದು ಸ್ವರ್ಣ ಬಣ್ಣ, ದೇವ ಜಾತಿ, ಭಾರ್ಗವ ಋಷಿ, ರಘುರಾಮ ದೇವತೆ. ಕಥಕ್ಕಳಿ ಮತ್ತು ಮಣಿಪುರಿ ನೃತ್ಯ ಪ್ರಕಾರಗಳಲ್ಲಿ ಇದನ್ನು ಹಂಸಾಸ್ಯವೆಂದು ಕರೆಯುವುದು ರೂಢಿ. ಏಕೆಂದರೆ ಮಧ್ಯ ಬೆರಳನ್ನು ನಿಡಿದಾಗಿ ಹಿಡಿದರೆ ಏರ್ಪಡುವುದೇ ಹಂಸಾಸ್ಯ ಹಸ್ತ. ಸಾಮಾನ್ಯ ಜೀವನದಲ್ಲಿ ದೇವರಿಗೆ ಅರ್ಚನೆ ಮಾಡಲು, ಮೂಗು ಮುಚ್ಚಿಕೊಳ್ಳುವುದು, ಕತ್ತಿಗೆ ಕಿವಿಗೆ ಆಭರಣ ಹಾಕಿಕೊಳ್ಳುವುದು ಮುಂತಾಗಿ ತೋರಿಸಲು ಈ ಹಸ್ತವನ್ನು ಬಳಸುತ್ತಾರೆ.

ನೃತ್ಯದಲ್ಲಿನ ವಿನಿಯೋಗಗಳು: ಹೂಬಿಡಿಸುವುದು, ಮುತ್ತಿನ ಅಥವಾ ಹೂವಿನ ಹಾರ ಹಾಕಿ ಕೊಳ್ಳುವುದು, ಬಾಣಗಳ ನಿಧಾನ ಪ್ರಯೋಗ, ವೀಳ್ಯೆದೆಲೆಯನ್ನೀಯುವುದು, ಕಸ್ತೂರಿ ಮೊದಲಾದ ವಸ್ತುಗಳು, ಕೂಡಿಸುವುದು, ವಾಸನೆ ನೋಡುವುದು, ಮಾತು, ದೃಷ್ಠಿಭಾವ ತೋರಿಸುವುದು.

ಇತರೆ ವಿನಿಯೋಗ: ಹೋತ್ರ, ಹವ್ಯ, ಕೊಡೆ, ಲಗಾಮು ಹಿಡಿಯುವುದು, ಧನುಸ್ಸಿನ ಹೆದೆ ಎಳೆಯುವುದು, ವೀಣಾವಾದನದಲ್ಲಿ ತಂತಿ ಮೀಟುವುದು, ಚಾಟಿಯಿಂದ ಹೊಡೆಯುವುದು, ಹೂಕೊಯ್ಯುವುದು, ಬಾಚಣಿಗೆ, ಕನ್ನಡಿ ಮೊದಲಾದವನ್ನು ಹಿಡಿಯುವುದು, ರಂಗವಲ್ಲಿ ಹಾಕುವುದು, ಉದ್ದವಾದ ಕೋಲನ್ನು ಹಿಡಿಯುವುದು, ಮನ್ಮಥನ ಬಾಣದ ಆಕರ್ಷಣೆ, ಬಾರುಕೋಲನ್ನು ಉಪಯೋಗಿಸುವುದು, ಬಟ್ಟೆಯಿಂದ ಮುಖ ಮರೆಮಾಡಿ ವಿವಾಹದಲ್ಲಿ ಇಲ್ಲವೇ ಬೇರೆ ಸಂದರ್ಭದಲ್ಲಿ ಸ್ತ್ರೀಯನ್ನು ನೋಡಲು, ದೃಢತರ ವಾಹನವನ್ನು ಎತ್ತುವುದು, ಪಾದಾಚಾರಿ ನರ್ತನ, ನಾಟ್ಯದ ಕೊನೆ, ದೇವತೆಗಳ ಅಭಿಷೇಕ, ಮರ್ಯಾದೆ, ಮುಖಕ್ಕೆ ಅಲಂಕಾರದ ಹುಡಿಹಾಕುವುದು, ಬಲಿ, ಕೊಡೆ ಬೀಸಣಿಕೆ, ಕನ್ನಡಿ ಹಿಡಿಯುವುದು, ಚಿತ್ರ ಬರೆಯುವುದು, ದೊಡ್ಡ ಚಿತ್ರ ಹಿಡಿಯುವುದು, ಮಂಥನ, ಬಟ್ಟೆಯ ಅಂಚು ಹಿಡಿ, ಅಂಕಂಶ, ಸ್ತ್ರೀ, ಪಾಶಾಂಕುಶ, ಕಾಲುಬಳೆಯನ್ನು ತೋರಿಸಲು ಬಳಸಲಾಗುತ್ತದೆ.

ನಾಟ್ಯಶಾಸ್ತ್ರದಲ್ಲಿ ಹೇಳಲಾದ ನೃತ್ತ ಹಸ್ತಗಳ ಪೈಕಿ ಮೊದಲನೇಯ ಹಸ್ತ ಚತುರಶ್ರ. ಎದೆಯಿಂದ ಎಂಟು ಅಂಗುಲಗಳ ದೂರದಲ್ಲಿ ಇದಿರಾಗಿ ಕಟಕಾಮುಖದ ಹಸ್ತಗಳನ್ನು ಭುಜಗಳ ಎತ್ತರಕ್ಕೆ ಬರುವಂತೆ ಹಿಡಿದಿರುವುದು. ಭುಜ ಮತ್ತು ಮೊಣಕೈಗಳನ್ನು ಒಂದೇ ಸಮದಲ್ಲಿಡಬೇಕು ಎಂಬುದು ಇದರ ಲಕ್ಷಣ. ಪಟ್ಟಾಭಿಷೇಕ, ಕುದುರೆಯ ಸವಾರ, ಕಡೆಯುವುದು, ಹಿಡಿಯುವುದು, ಹಾಲು ಕರೆಯುವುದು, ಮುತ್ತನ್ನು ಧರಿಸುವುದು, ಹಗ್ಗ ಎಳೆಯುವುದು, ಹೂವು ಹಿಡಿಯುವುದು ಮುಂತಾಗಿ ಇದರ ವಿನಿಯೀಗಗಳಿವೆ. ಅದೇರೀತಿ ಮುಷ್ಠಿಕ ಸ್ವಸ್ತಿಕ ಎಂಬ ನೃತ್ತ ಹಸ್ತದ ಲಕ್ಷಣ ಕಟಕಾಮುಖ ಹಸ್ತಗಳನ್ನು ಮುಂಗೈಯಲ್ಲಿ ಬಗ್ಗಿಸಿ ಎದುರಿಗೆ ಕಳಿಸುವುದು. ಇದರ ವಿನಿಯೋಗ ಚೆಂಡಿನ ಆಟ, ಮಲ್ಲಯುದ್ಧ, ಅತಿಯಾದ ನಾಚಿಕೆ.

ಕಾಲಗಳ ಸೂಚನೆಯಲ್ಲಿ ಹಸ್ತಗಳಲ್ಲಿ ಒಂದಾದ ಸೂರ್ಯಾಸ್ತಮಾನವನ್ನು ಎರಡು ಕೈಗಳಲ್ಲಿ ಕಟಕಾಮುಖ ಹಸ್ತವನ್ನಿಟ್ಟು ಸಮಪಾದದಲ್ಲಿ( ಕಾಲುಗಳನ್ನು ಜೋಡಿಸಿ) ನಿಂತು, ಓರೆಕೆಳನೋಟವನ್ನು ಮಾಡುವುದರಿಂದ ಸೂಚಿಸಬಹುದು. ಎಡಗೈಯಲ್ಲಿ ಶಿಖರ ಹಸ್ತವನ್ನು, ಬಲಗೈಲಿ ಕಟಕಾಮುಖವನ್ನು (ಲಾಸ್ಯರಂಜನದ ಲಕ್ಷಣದಂತೆ) ಹಿಡಿದು ಧನುಸ್ಸಿನಂತೆ ಆಕರ್ಣಪರ್ಯಂತ ಎಳೆಯುವುದು ಶ್ರೀರಾಮಾವತಾರ ಹಸ್ತವನ್ನು ಸೂಚಿಸುತ್ತದೆ. ಶ್ರೀಕೃಷ್ಣಾವತಾರ ಹಸ್ತದಲ್ಲಿ ಕೆಲವೊಂದು ಬಾರಿ ಕಟಕಾಮುಖ ಹಸ್ತಗಳನ್ನು ಎರಡು ಭುಜಗಳ ಬಳಿ ಅನ್ಯೋನ್ಯಭಿಮುಖವಾಗಿ ಹಿಡಿಯುವ ಪದ್ಧತಿ ಭರತನೃತ್ಯ ಮತ್ತು ಒಡಿಸ್ಸಿಯಲ್ಲಿದೆ. ಹೆಂಡತಿಯ ಸಹೋದರ ಅಥವಾ ಭಾವಮೈದುನನೆನ್ನುವ ಶ್ಯಾಲಕಹಸ್ತಕ್ಕೂ ಕಟಕಾಮುಖದ ಬಳಕೆಯಿದೆ.

Leave a Reply

*

code