ಅಂಕಣಗಳು

Subscribe


 

ಕಾಲನಟ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– (ವೀ.ಸೀ ಅವರ ಕದಂಬ ಕವನ ಸಂಕಲನದಿಂದ ಆಯ್ದ ಕವನ)

ಮೈಗೆ ಬಣ್ಣ ಬಳಿದುಕೊಂಡು ಕಾಗದಗಳ ಕುಚ್ಚನುಟ್ಟು

ಕಾಲಗೆಜ್ಜೆ ಝಣರೆನುತಿರೆ ಕುಣಿಯುತಾನೆ-

ಹೊಸ್ತು ಕಾಲಪುರುಷನಿವನು ಕುಣಿಯುತಾನೆ ||ಪ||

ಒಲ್ಲೆವೆಂಬ ಜನದ ಮೂಗ ತನ್ನ ಸರಿಗೆ ತಿದ್ದಲೆಂದು

ಅವರನಟ್ಟಿ ಇವರ ಕಟ್ಟಿ ಕುಣಿಸುತಾನೆ-

ತಾಳಕಿಟ್ಟು ನೆಲವ ಮೆಟ್ಟಿ ಕುಣಿಯುತಾನೆ ದಿನಕೆ ನಾಲ್ಕು ಆತ ಕಟ್ಟಿ ಹಾಡಿ ಆಡಿ ಮಾತನಾಡಿ

ತಾನು ದಣಿದು ಜೊತೆಯವರನು ದಣಿಸುತಾನೆ-

ಹೊಸತು ಕಲೆಯ ಬೆಡಗನೆರಚಿ ಕುಣಿಯುತಾನೆ

ಕುಣಿವ ಕುರುಲ ಚಪ್ಪರದಲಿ ಬೆರಲ ತಿರುವು ಭಾವದಲ್ಲಿ

ನೇದ ಜಾಲವನ್ನು ನೋಡಿ ಹಿಗ್ಗುತಾನೆ-

ಯುಗಯುಗಗಳ ನಾಟ್ಯವನ್ನು ನಟಿಸುತಾನೆ

ಯಾಜ್ಞವಲ್ಕ್ಯ ಕೃಷ್ಣ ಬುದ್ಧ ಮಹಮ್ಮದ ಯೇಸುಕ್ರಿಸ್ತ

ಜರತುಷ್ಟ್ರ ವೈಜ್ಞಾನಿಕರ ಬೆರಸುತಾನೆ-

ಹೊಸ ಕಾಲದಿ ಗೆಳೆಯರೆಂದು ಸಾರುತಾನೆ

ಶ್ರಾವಣಕೆ ಕನಲಿ ನೀರು ಕಡಲ ಕಾಣದಾಳದಿಂದ

ಅಬ್ಬರಿಸುವ ರವವ ಕೇಳಿ ಮದಿಸಿದಾನೆ-

ಭೋರ್ಗರೆಯನು ನಮ್ಮ ಕಿವಿಗೆ ಹರಿಸುತಾನೆ

ಅನ್ನ ಬಿಟ್ಟು ನಿದ್ದೆ ಕೆಟ್ಟು ಹಗಲು ಇರುಳು ತವಕತೊಟ್ಟು

ಹಟವ ಹೊತ್ತು ಗಾಸಿಪಟ್ಟು ದುಡಿಯುತಾನೆ-

ಬಲುಮೆಯಿಂದ ಜನರನೊಲಿಸಿ ಕುಣಿಯುತಾನೆ

ಮಂಗಳೂರು ಬೆಂಗಳೂರು ಧಾರವಾರ ಕಾರವಾರ

ಕನ್ನಡಿಗರ ತಂಡಗಳನು ಕರಸುತಾನೆ-

ದಂಡ ತೆತ್ತು ನಾಳೆಯೊಳಗೆ ಬೀರುತಾನೆ

ಧಿಂಮಿ ಢೃಕಿಟ, ಧೀಂನ ಝಣುತ, ಧೀಂ ತಕಿಟತ, ಧೀಂ, ಧೀಂನ

ಧಿತ್ತಾರಿತ, ಝಂ ತಳಾಂಗು ಕುಣಿಯುತಾನೆ-

ಚೆಲುವು ನೋಟ ಕಣ್ಗೆ ಕಟ್ಟಿ ಮೆರಸುತಾನೆ

ಚಿಗರಿಯಂತೆ ಚಿಗಿಯುತಾನೆ

ಬುಗುರಿಯಂತೆ ತಿರುಗುತಾನೆ

ದಿಸೆಯ ಬಾಚಿ ಹಿಂಡುತಾನೆ

ಕ್ರಾಂತಿಗಿಟ್ಟು ತೊಳಸುತಾನೆ

ಹಳಸಮತೆಯ ಹೊರಳುವಂತೆ ಕುಣಿಯುತಾನೆ

ಹೊಸ ಸಮತೆಗಳರಳುವಂತೆ ಕುಣಿಯುತಾನೆ

ಹಿಂದಿನಿಂದ ಮೇಳದಲ್ಲಿ ತಂಗಿ ಕೊರಲನೆತ್ತಿ ಹಾಡೆ

ಮೊರೆವ ವಾದ್ಯವಾದನಕ್ಕೆ ಸೊಕ್ಕಿದಾನೆ-

-ತನ್ನ ಮರೆತು, ಓ ಅಗೋ, ಕುಣಿಯುತಾನೆ

Leave a Reply

*

code