ಅಂಕಣಗಳು

Subscribe


 

ಕೀಲಾರು ಪ್ರತಿಷ್ಠಾನ : ಯಕ್ಷಗಾನ-ಆಶ್ರಯದ ಆಡುಂಬೊಲ

Posted On: Tuesday, October 27th, 2015
1 Star2 Stars3 Stars4 Stars5 Stars (No Ratings Yet)
Loading...

Author: ವೇ|ಮೂ. ಬಿ.ಜಿ. ನಾರಾಯಣ ಭಟ್, ಮಡಿಕೇರಿ.

ಕರ್ನಾಟಕದಲ್ಲಿ ಅದೆಷ್ಟೋ ಪ್ರತಿಷ್ಠಾನಗಳಿವೆ. ಅವುಗಳ ಪೈಕಿ ಬಹಳಷ್ಟದರಲ್ಲಿ ನ್ಯೂನ್ಯತೆ, ಕೊರತೆ, ಸ್ವಾರ್ಥ, ರಾಜಕೀಯ, ಜಾತೀಯತೆ ತುಂಬಿದೆ. ಆದರೆ ಕೆಲವು ವರುಷಗಳ ಹಿಂದೆ ಕೊಡಗಿನ ಗಡಿಯಂಚಿನ ಸಂಪಾಜೆ ಕಲ್ಲುಗುಂಡಿಯ ಕೀಲಾರು ಪ್ರತಿಷ್ಠಾನವು ಮಾದರಿಯಾಗಿ, ಯಾವ ಕೊರತೆಯೂ ಇಲ್ಲದೆ ತನ್ನದೇ ಆದ ಸ್ವಂತಿಕೆ, ಶ್ರೀಮಂತಿಕೆಯನ್ನು ಉಳಿಸಿಕೊಂಡು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಪ್ರಾರಂಭದ ದಿಸೆಯಿಂದಲೇ ಜನಮನ್ನಣೆಗೆ ಪಾತ್ರವಾಗಿ ಹತ್ತು ಹಲವಾರು ಯೋಜನೆಯನ್ನು ರೂಪಿಸಿಕೊಂಡು ಆರ್ತರಕ್ಷಕ ನಿಧಿಯಾಗಿ ಸಂಸ್ಕೃತಿ ಹಾಗೂ ಸಾಂಸ್ಕೃತಿಕ, ವೈದಿಕ, ಸನಾತನ ಪರಂಪರೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ತನ್ನದಾಗಿರಿಸಿಕೊಂಡಿದೆ. ವಿದ್ಯಾವಂತ, ಬುದ್ಧಿವಂತ ಪ್ರತಿಭೆಗಳನ್ನು ಗುರುತಿಸಿ ಆಶ್ರಯತಾಣವಾಗಿ ಸಹಾಯಹಸ್ತವನ್ನು ಚಾಚಿ ಉದಾರತೆಯಲ್ಲಿ ಔದಾರ್ಯವನ್ನು ತೋರಿಸಿದೆ. ವಿದ್ವಜ್ಜನ ಪುರಸ್ಕಾರ, ಕಲಾವಿದರಿಗೆ ಪ್ರೋತ್ಸಾಹ, ವಿದ್ಯಾರ್ಥಿವೇತನ, ನಿರಾಶ್ರಿತರು, ಬಡಬಗ್ಗರು, ದೀನದಲಿತರ ಕೂಗಿಗೆ ಪ್ರತಿಧ್ವನಿಸಿ ಓಗೊಟ್ಟು ಆಶ್ರಿತ ರಕ್ಷಣೆಯ ಹೊಣೆ ಹೊತ್ತಿದೆ. ವಿದ್ವೋತ್ತಮರನ್ನು, ಕಲಾವಿದರನ್ನು, ವೈದಿಕರನ್ನು, ಪರಮಪೂಜ್ಯರನ್ನು ಒಂದೇ ವೇದಿಕೆಯಲ್ಲಿ ಉಪಸ್ಥಿತಗೊಳಿಸಿ ಅನುಭವ ಮಂಟಪವನ್ನೇ ನಿರ್ಮಾಣ ಮಾಡಿ ಜನತೆಗೆ ಚೈತನ್ಯದಾಯಕ ಸುಸಂಸ್ಕೃತಿಯ ಸಧಾರೆಯನ್ನೇ ಹರಿಸಿದೆ.

ಕಾಣದ ಕೈಯಾಗಿ ಯಾರಿಂದ ಯಾವುದನ್ನೂ ಬಯಸದೆ ತನ್ನತನ ಮೆರೆಸದೆ ಹೆಸರು ಹೆಗ್ಗಳಿಕೆಯನ್ನು ಅಪೇಕ್ಷಿಸದೆ ಕಾನನದ ಮಲ್ಲಿಗೆಯಂತೆ, ಎಲೆಮರೆ ಕಾಯಂತೆ ತೆರೆಮರೆಯಲ್ಲಿ ಅಣೋರಣಿಯನ್, ಮಹತೋಮಹಿಯಾನ್ ಎಂಬ ಉಪನಿಷದ್ವಾಕ್ಯದಂತೆ ಸೂಕ್ಷ್ಮ ಕೆಲಸದಿಂದ ಮೊದಲ್ಗೊಂಡು ಮಹತ್ತಿನವರೆಗೆ ಮಾಡುವ ಉಪಕಾರ ಸಾಮಾನ್ಯವಾದುದಲ್ಲ. ಇದರಿಂದ ಅದೆಷ್ಟೋ ಜನತೆ ಧನ್ಯತೆಯನ್ನು ಕಂಡಿದ್ದಾರೆ. ದೀಪಾವಳಿಯ ಶುಭಸಂದರ್ಭದಲ್ಲಿ ತಮಸೋಮಾ ಜ್ಯೋತಿರ್ಗಮಯ ಎಂಬ ನುಡಿಯಂತೆಯೇ ನಡೆಯುವ ಯಕ್ಷರಾತ್ರಿಯ ವೈಭವವು ಮೇಲು-ಕೀಳೆಂಬ ತಾರತಮ್ಯವಿಲ್ಲದ, ಸಿರಿತನ- ಬಡತನಗಳನ್ನು ಒಗ್ಗೂಡಿಸಿ ತತ್ಪ್ರಬೇಧವಿಲ್ಲದೆ ತಾತ್ತ್ವಿಕರನ್ನೂ, ದಾರ್ಶನಿಕರನ್ನೂ ಕರೆತಂದು ಕಲಾವಿದರನ್ನೂ ಕಲಾಪ್ರೇಮಿಗಳನ್ನೂ ಸೆಳೆದು ; ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಅವರವರ ಅರ್ಹತೆಗೆ ತಕ್ಕಂತೆ ಪ್ರೋತ್ಸಾಹ ಪುರಸ್ಕಾರ ನೀಡಿ ; ಕಲಾವಿದರಿಗೆ, ರಸಿಕರಿಗೆ, ಆರಾಧಕರಿಗೆ, ಆಸ್ವಾದಕರಿಗೆ ಶುಚಿರುಚಿಯಾದ ಸ್ವಾದಿಷ್ಟ ಷಡ್ರಸೋಪೇತ ಮೃಷ್ಠಾನ್ನದೊಂದಿಗೆ ಭಾವರಸಧಾರೆ ಹರಿಸುವ ; ಜೊತೆಗೆ ಶ್ರೀಮಂತ ಧೀಮಂತ ಶ್ರೇಯೋವಂತರನ್ನು, ವರಿಷ್ಠ, ಗರಿಷ್ಠ, ಪರಮೇಷ್ಠಿಗಳನ್ನು ಒಡಗೂಡಿ ಅತಿಥಿ ಅಭ್ಯಾಗತರೊಂದಿಗೆ ಬಡವ-ಬಲ್ಲಿದ-ವ್ಯಾಪಾರೀ-ವ್ಯವಹಾರೀ-ವಿದ್ಯಾರ್ಥಿ-ಆರ್ತರಿಗೆ ಅವಕಾಶ, ಆದರ ಕಲ್ಪಿಸುವ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಯಕ್ಷೋತ್ಸವ ನಿಜಕ್ಕೂ ಪರಿಪೂರ್ಣ ಪಾವಿತ್ರ್ಯ ಸಮಾವೇಶ. ವೈವಿಧ್ಯಮಯವೂ ಸಂಸ್ಕೃತಿ- ಸಾಂಸ್ಕೃತಿಕ ಶಾಸ್ತ್ರೋಚಿತ ಸಾಂದರ್ಭಿಕ ಸಮಸ್ಪತೆಯ ಸಂಗಮ.

ದೈವದೇವರು ಭಂಡಾರ ದವಸಧಾನ್ಯ ಕಣಜ ಭಂಡಾರ ನಿಧಿ ನಿಕ್ಷೇಪ ಪತ್ತಾಯ ಸುಂಕದ ವಿನಿಮಯ ಬಾಗಿಲಿನ ಇವೇ ಮೊದಲಾದ ಆರು ಕೀಲಿಗಳ ಕೇಂದ್ರವೇ ಕೀಲಾರು. ಸಂಪತ್ತಿನ ಸಂಪಾಜೆ, ಕಲೆಯ ಗುಂಡಿ ಕಲ್ಲುಗುಂಡಿಯ ಐತಿಹಾಸಿಕ ಕೀಲಿ ಹೊಂದಿದ ಕೀಲಾರು ಮತ್ತು ಇಂತಹ ಪ್ರತಿಷ್ಟಿತ ಪ್ರತಿಷ್ಠಾನ ಬೇರೊಂದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಹಿಂದೊಂದು ಕಾಲಕ್ಕೆ ಕೀಲಾರು ಗೋಪಾಲಕೃಷ್ಣರ ತಂದೆ ರಾಮಚಂದ್ರಯ್ಯ ಅದೆಷ್ಟೋ ವ್ಯಾಜ್ಯಗಳನ್ನು ಬಗೆಹರಿಸುವುದರಲ್ಲಿ ನಿಪುಣರಾಗಿದ್ದು; ಆನೆ ಹೊಡೆದ ವೀರನೆಂದೇ ಪ್ರಖ್ಯಾತಿ ಗಳಿಸಿದ್ದರು. ಕೀಲಾರು ಮನೆತನದ ಮೂಲವು ಕೊಡಗಿನ ಬೆಟ್ಟತ್ತನಾಡು ಆಗಿದ್ದರೂ ಬ್ರಿಟೀಷ್ ಸರ್ಕಾರದ ವೇಳೆ ಸಂಪಾಜೆಗೆ ಬಂದು ನೆಲೆಸಿದ್ದ ಕುಟುಂಬಕ್ಕೆ ಬ್ರಿಟೀಷ್ ಅಧಿಕಾರಿಗಳೇ ಹಲವು ಜವಾಬ್ದಾರಿಗಳನ್ನು, ಉಸ್ತುವಾರಿ ನೋಡಿಕೊಳ್ಳುವ ಹಕ್ಕನ್ನು ನೀಡಿದ್ದರಂತೆ. ನ್ಯಾಯಸ್ಥಾನ, ಹಲವು ಕಚೇರಿ, ದವಸಭಂಡಾರ, ಗ್ರಾಮ, ದೇವಸ್ಥಾನ, ಸಂಪಾಜೆ ಸರಹದ್ದು.. ಹೀಗೆ ಆರು ಬಗೆಯ ಅಧಿಕಾರಗಳ ಕೀಲಿ ಅಂದರೆ ಬೀಗದ ಕೈಗಳ ಉಸ್ತುವಾರಿ ನೋಡಿಕೊಳ್ಳುವ ಒಡೆಯರ ಮನೆಯೇ ಕ್ರಮೇಣ ಕೀಲಿ+ಆರು = ಕೀಲಾರು ಎಂದು ಪ್ರಸಿದ್ಧವಾಯಿತು.

ಅದಮ್ಯವೂ ಅಗಮ್ಯವೂ ಆದ ಆಧ್ಯಾತ್ಮಿಕ ಅಲೌಕಿಕ ದೈವೀಶಕ್ತಿಯ ಪ್ರೇರಣೆಯಿಂದ ಇಂತಹ ಘನಕಾರ್ಯ ಮಾಡುವುದು ಮತ್ತು ಮಾಡಿಸುವುದಕ್ಕೆ ಜನ್ಮಾಂತರದ ಪೂರ್ವ ಪುಣ್ಯ ವಿಶೇಷತೆ ಬೇಕೇ ಬೇಕು. ಅದು ಕೀಲಾರಿಗೆ ದೈವದತ್ತವಾದ ವರಪ್ರಸಾದ. ಇಂತಹ ದೈವೀ ಸಾನಿಧ್ಯದ ಪರಂಪರೆಯಲ್ಲಿ ಇನ್ನೆಷ್ಟೋ ಘನಕಾರ್ಯ ರೂಪುಗೊಳ್ಳಬೇಕಿದೆ. ಅದಕ್ಕೆ ಸದಾ ದೈವಾನುಗ್ರಹ ಪೊರೆಯಲಿ. ದೇಶಸೇವೆಯೇ ಈಶಸೇವೆ ಜನಸೇವೆಯೇ ಜನಾರ್ಧನ ಸೇವೆ ಎಂಬ ಗೋಪಾಲಕೃಷ್ಣಯ್ಯನವರ ಧ್ಯನಿ ಮತ್ತಷ್ಟು ಸಾರ್ಥಕ ಮಜಲುಗಳನ್ನು ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಉಪಕೃತಿಯನ್ನು ಸ್ಮರಿಸುತ್ತಾ ಚಿರ‌ಋಣಿಯಾಗಿರುವ; ಈಶನ ಪ್ರೇರಣೆಯಂತೆ ಆಶೀರ್ವಾದದೊಂದಿಗೆ

 

Leave a Reply

*

code