ಅಂಕಣಗಳು

Subscribe


 

ಕೃತಿ-ಕೀರ್ತನೆ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


-ವೈಷ್ಣವಿ ಎನ್.

ದೇವರನಾಮಗಳೆಂದರೆ ಯಾರಿಗೆ ತಾನೇ ತಿಳಿದಿಲ್ಲ? ದಾಸವರೇಣ್ಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳಿಗೆ ನೀಡಲ್ಪಟ್ಟ ಈ ಕೊಡುಗೆಗಳು ಸೂರ್ಯ ಚಂದ್ರರಿರುವರೆಗೂ ಅಜರಾಮರ. ಒಂದು ನಿಟ್ಟಿನಲ್ಲಿ ಹೇಳುವುದಾದರೆ ಕನ್ನಡ ಭಾಷೆಯಿಂದ ಸಂಗೀತಕ್ಕೆ ಸಂದ ಅಪೂರ್ವ ರಚನೆಗಳಿವು. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸುಲಭ ಭಾಷಾ ಪ್ರಯೋಗ ಇದರ ಹೆಚ್ಚುಗಾರಿಕೆ. ಇದರ ಸಂಗೀತ, ಮಾತು, ನಡೆ, ಭಾಷೆ, ಧಾತು, ಎಲ್ಲವೂ ಅತಿ ಸರಳ. ಭಕ್ತಿಪ್ರಧಾನ ದೇವತಾ ಸ್ತುತಿ, ಪುರಾಣ ಪ್ರಸಂಗ, ನೀತಿ, ತರ್ಕ, ಆಚಾರ ಸಂಹಿತೆ, ವೇದೋಪನಿಷತ್, ಇತಿಹಾಸ ಪ್ರಾರ್ಥನೆ, ವೈರಾಗ್ಯ, ವರ್ಣನೆ, ತತ್ವ, ಲೌಕಿಕ ಮಹತ್ವ, ಧಾರ್ಮಿಕ-ನೈತಿಕ-ಸಾಮಾಜಿಕ ನಡವಳಿಕೆಗಳು…ಹೀಗೆ ಹತ್ತು ಹಲವು ದಿಸೆಯಲ್ಲಿ ರಚನೆಗೊಂಡ ಭಗವಂತನೆಡೆಗಿನ ನಿಂದಾಸ್ತುತಿ, ನಿವೇದನೆಗಳು ಯಾವುದೇ ಸಂಗೀತ ನೃತ್ಯ ಕಾರ್ಯಕ್ರಮದಲ್ಲಿ ಕಡ್ಡಾಯವೆನಿಸುವಷ್ಟರ ಮಟ್ಟಿಗೆ, ಪ್ರಸಿದ್ಧ..

ಅಷ್ಟಕ್ಕೂ, ದೇವರನಾಮಗಳೆಂದು ಹೆಸರು ಬಂದದ್ದು ಇತ್ತೀಚೆಗಿನ ದಶಕಗಳಲ್ಲಿ. ಅದಕ್ಕಿಂತಲೂ ಹಿಂದೆ ಕೀರ್ತನೆಗಳೆಂದು ಕರೆಸಿಕೊಂಡ ಸ್ತುತಿಗಳಿವು. ಸಂಕೀರ್ತನ ಪದದಿಂದ ಉಗಮವಾಗಿರುವ ಭಕ್ತಿರಸ ಪ್ರಧಾನವಾದ ರಚನೆಗಳನ್ನೇ ನಾವಿಂದು ದೇವರನಾಮಗಳೆಂಬ ಜನಪ್ರಿಯ ಹೆಸರಿನಿಂದ ಕರೆಯುತ್ತೇವೆ. ಊರಿಂದ ಊರಿಗೆ, ಬೀದಿಯಿಂದ ಬೀದಿಗೆ ಭಗವಂತನ ನಾಮಸ್ಮರಣೆ, ಜನರಿಗೆ ಹಿತೋಪದೇಶ ಮಾಡುತ್ತಾ ತಿರುಗುತ್ತಿದ್ದ ಹರಿದಾಸರು ಇವುಗಳನ್ನು ಸಂಕೀರ್ತನೆಗಳೆಂದು ಕರೆದದ್ದು ಔಚಿತ್ಯಪೂರ್ಣ. ಈ ರಚನೆಗಳು ೯ ನೇ ಶತಮಾನದಿಂದ ಅಂಕುರಿಸಿ, ವಚನಕಾಲವನ್ನೂ ಒಳಗೊಂಡಂತೆ ೧೮ನೇ ಶತಮಾನದುದ್ದಕ್ಕೂ ಬೆಳೆಯುತ್ತವೆ. ಈ ಅಂಶವು ತಾಳ್ಳಪಾಕಂ ಕವಿ, ನಾರಾಯಣತೀರ್ಥ, ಹರಿದಾಸ ಕವಿಗಳ ಗ್ರಂಥಗಳಿಂದ ವೇದ್ಯವಾಗಿದ್ದು, ಸಂಸ್ಕೃತ ಮತ್ತು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲೂ ರಚನೆಯಾಗಿವೆ. ಕವಿಕುಂಜರ ಭಾರತಿ, ತಾಂಡವರ್, ಗೋಪಾಲಕೃಷ್ಣ ಭಾರತಿ, ಮಾತೃಭೂತ, ಪಾಪನಾಶಂ ಶಿವನ್, ಘನಂಕೃಷ್ಣ ಅಯ್ಯರ್, ತಿರುವಳ್ಳವರ್, ಕೋಟೀಶ್ವರ ಅಯ್ಯರ್, ರಾiಲಿಂಗಸ್ವಾಮಿ, ಮಾರಿಮುತ್ತಯ್ಯ ಪಿಳ್ಳೈ ಮುಂತಾದವರು ತಮಿಳು ಕೀರ್ತನಾ ರಚನಾಕಾರರಾದರೆ, ತೆಲುಗಿನಲ್ಲಿ ಶೋಭನಗಿರಿ, ವೇಣಂಗಿ, ಸಾರಂಗಪಾಣಿ, ಸಭಾಪತಿ ಅಯ್ಯರ್, ಕೈಲಾಸಪತಿ, ಮಲ್ಲಿಕಾರ್ಜುನ ಮುಂತಾದವರು ಪ್ರಮುಖರು. ಆದರೆ ಮುಕ್ಕಾಲು ಭಾಗ ರಚನೆಗಳು ಕನ್ನಡದಲ್ಲೇ ಆಗಿದ್ದು, ನಮ್ಮ ಹೆಮ್ಮೆ.. ಶ್ರೀಪಾದರಾಯ, ಜಗನ್ನಾಥದಾಸ, ಪುರಂದರದಾಸ, ಕನಕದಾಸ, ವ್ಯಾಸರಾಯರು, ಭದ್ರಾಚಲ ರಾಮದಾಸರು, ವಾದಿರಾಜರು, ವಿಜಯವಿಠ್ಠಲದಾಸರು… ದಾಸವರೇಣ್ಯರ ಪಟ್ಟಿ ಮುಂದುವರೆಯುತ್ತದೆ. ಆದರೂ ದಾಸರು ಬರೆದ ಎಷ್ಟೋ ಲಕ್ಷ ಕೀರ್ತನೆಗಳ ಪೈಕಿ ಕೆಲವು ಸಾವಿರದಷ್ಟೇ ಲಭ್ಯವಾಗಿದೆ ..,ನಮ್ಮ ದೌರ್ಭಾಗ್ಯ.!

ಪಲ್ಲವಿ, ಅನುಪಲ್ಲವಿಯೊಂದಿಗೆ ಚರಣಗಳನ್ನು, ಒಮ್ಮೊಮ್ಮೆ ಒಂಭತ್ತಕ್ಕೂ ಹೆಚ್ಚು ಚರಣಗಳಿರುವ ಇವು, ಅಂಕಿತನಾಮಗಳ ಮೂಲಕ ಮುಕ್ತಾಯವಾಗುತ್ತದೆ.. ಉದಾಹರಣೆಗೆ- ಪುರಂದರವಿಠ್ಠಲ, ಕಾಗಿನೆಲೆಯಾದಿ ಕೇಶವ. ಮಧ್ಯiಕಾಲ ಸಾಹಿತ್ಯಕ್ಕೆ ಪ್ರಾಮುಖ್ಯತೆ ಹೆಚ್ಚು. ಕೆಲವು ಕೀರ್ತನೆಗಳಲ್ಲಿ ಜತಿಗಳೂ ಇರುತ್ತವೆ. ಭಕ್ತಿಯ ವಿವಿಧ ಭಾವಗಳ ಅಭಿವ್ಯಕ್ತಿ ಇಲ್ಲಿ ಪೂರ್ಣ ಸಾಧ್ಯ. ಹೀಗೆ,.. ಅಭಿನಯಕ್ಕೆ ಹೇರಳವಾದ ಅವಕಾಶವಿರುವುದರಿಂದ ಕಲಾವಿದರು ಅವುಗಳಿಗೆ ಸಂಚಾರೀ ಭಾವ (ಯಾವುದೇ ಒಂದು ಕಥಾ ಅಭಿನಯವನ್ನು ಪಾತ್ರಗಳ ನಿರ್ದಿಷ್ಟ ಪ್ರತಿಬಿಂಬಿಸುವುವಿಕೆಯೊಂದಿಗೆ ಸವಿಸ್ತಾರವಾಗಿ ಮಾಡುವುದು) ಗಳನ್ನು ಅಳವಡಿಸಿಕೊಂಡು, ಪುರಾಣದ ಘmನೆಗಳನ್ನು ಕಣ್ಣ ಮುಂದೆ ಬಂದು ನಿಲ್ಲುವಂತೆ ನಟಿಸುವುದು ರೂಢಿಯಲ್ಲಿದೆ. ಎಲ್ಲಾ ದೇವರನಾಮಗಳಿಗೂ ಆಯಾಯ ರಚನಾಕಾರರು ಅವರ ಇಚ್ಛೆಯಂತೆ ರಾಗ, ತಾಳ ಸಂಯೋಜನೆ ಮಾಡಿರುವುದಿದೆ. ಆದರೆ ಸಂಗೀತ, ನೃತ್ಯ ಕಲಾವಿದರು ಇತರ ಸಂಗೀತ, ನೃತ್ಯದ ಶಾಸ್ತ್ರೀಯ ರಚನೆಗಳಂತೆಯೇ ಇಂತಹ ನಿರ್ಣಿತ ರಾಗ, ತಾಳಗಳಲ್ಲೇ ಹಾಡಬೇಕು, ನಟಿಸಬೇಕು ಎಂಬ ನಿಬಂಧನೆಗಳಿಲ್ಲ. ಬದಲಾಗಿ ಕಲಾವಿದರು ತಮಗೆ ಸೂಕ್ತವೆನಿಸಿದ ರಾಗಗಳನ್ನು ಬಳಸಿಕೊಳ್ಳಬಹುದು. ಇದು ದೇವರನಾಮ ಸಂಕೀರ್ತನೆಗಳ ವಿಶೇಷ ಮಾತ್ರವಲ್ಲ, ಕಲಾವಿದರಿಗೆ ದಾಸವರೇಣ್ಯರು ಇತ್ತ ಪ್ರೀತಿಪೂರ್ವಕ ಸ್ವಾತಂತ್ರ್ಯ! ಹಾಗಾಗಿ ಈ ದಾಸರಪದಗಳನ್ನು ಲಘುಸಂಗೀತದ ಪ್ರಧಾನ ಅಂಗವಾಗಿ ಪರಿಗಣಿಸಲಾಗುತ್ತಿದೆ., ಉತ್ತರಾದಿ ಸಂಗೀತದಲ್ಲಿ ಬಳಸಲಾಗುತ್ತಿದೆ, ಫ್ಯೂಷನ್‌ಗೆ ಅಳವಡಿಸಲಾಗುತ್ತಿದೆ. ಮಾತ್ರವಲ್ಲ; ಇವುಗಳ ಮುಂದುವರಿದ ಭಾಗಗಳೆನಿಸುವ ಮಟ್ಟಿಗೆ ಭಕ್ತಿಗೀತೆಗಳು ವ್ಯಾಪಕವಾಗಿ ಪ್ರಚಾರ ಪಡೆದಿವೆ.

ಹಾಗಾದರೆ ಸಂಗೀತದ ವಾಗ್ಗೇಯಕಾರರು ಎನಿಸಿಕೊಂಡವರ ರಚನೆಗಳಿಗೆ ಏನನ್ನುತ್ತೇವೆ? ಇದೇ ಅಲ್ಲವೇ ಸಂದೇಹ? ಅವುಗಳೇ ಕೃತಿಗಳು. ಕೃತಿಗಳು ಕೀರ್ತನೆಯ ಪ್ರಾರಂಭದ ನಂತರದ ಕಾಲದಲ್ಲಿ ಹುಟ್ಟಿಕೊಂಡವುಗಳು. ಇವೆರಡರ ಹೆಸರು ತೀರಾ ಸಾಮೀಪ್ಯದಲ್ಲಿದ್ದರೂ, ಸಾಕಷ್ಟು ವ್ಯತ್ಯಾಸಗಳಿವೆ. ದೇವರನಾಮಗಳು ಕಲಾವಿದರಿಗಿತ್ತ ಪ್ರೀತಿಪೂರ್ವಕ ಸ್ವಾತಂತ್ರ್ಯಗಳು ಇಲ್ಲಿಲ್ಲ. ರಾಗ, ಗತಿ, ತಾಳ, ಶೈಲಿ, ವಿಷಯ ಇವುಗಳಲ್ಲಿ ವಾಗ್ಗೇಯಕಾರನಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಹಾಗಂದ ಮಾತ್ರಕ್ಕೆ ಅಭಿವ್ಯಕ್ತಿಸುವ ಕಲಾವಿದನ ಮೇಲೆ ಕಟ್ಟುನಿಟ್ಟಿನ ಹೇರಿಕೆಯೂ ಇಲ್ಲ., ಬದಲಾಗಿ ಇಂತಹವೇ ರಾಗ, ತಾಳಗಳಿಂದ ಹೀಗೆ,ಹೀಗೆ ಹಾಡಿದರೇ ಚೆನ್ನ ಎಂಬುದು ವಾಗ್ಗೇಯಕಾರರ ನಂಬುಗೆ. ಶುದ್ಧ ಸಂಗೀತಕ್ಕೆ ಕೃತಿ ಒಂದು ಒಳ್ಳೆಯ ಉದಾಹರಣೆ.

ಸಂಗೀತ ರಚನೆಗಳಲ್ಲೇ ಅತ್ಯುತ್ತಮ ರಚನಾ ವಿಶೇಷವುಳ್ಳ ಕೃತಿಯ ಮುಖ್ಯಗುಣವೇ ಅದರ ಸಂಗೀತ. ಗಾಂಧರ್ವ ವೇದದಲ್ಲಿ ಕೃತಿಯ ೬ ಲಕ್ಷಣಗಳನ್ನು ಹೇಳಲಾಗಿದೆ. ಸುಸ್ವರ, ಸರಸ, ಸುರಾಗ, ಮಧುರಾಕ್ಷರ, ಅಲಂಕಾರ, ಪ್ರಮಾಣ..ಇವೇ ಆ ಆರು ಲಕ್ಷಣಗಳು. ಹಾಗಾಗಿ ಗಾನರಸದ ಅನುಭವವೇ ಗಾಢವಾಗಿರುತ್ತದೆ. ಮಾತಿಗಿಂತ ಧಾತು, ಅಕಾರ-ಉಕಾರ-ಏಕಾರ-ಈಕಾರ ಸಂಗತಿಗಳೇ ಕೃತಿಗಳ ಪ್ರಮುಖ ಸಂಗತಿ. ಪದಗಳು ಕಡಿಮೆ. ಸಾಹಿತ್ಯದ ಮಾಧುರ್ಯ, ಸಂಗೀತದ ಕವಿತ್ವ ಮುಖ್ಯ. ಆ ಮೂಲಕ ಶೋತೃವಿಗೆ ಕರ್ಣಾನಂದ ಉಂಟು ಮಾಡುವ ಇವುಗಳು, ರಾಗದ ಹೆಚ್ಚಿನ ಪರಿಚಯ, ಸೌಂದರ್ಯವನ್ನು ಹೊರಗೆಡಹುತ್ತದೆ.

ಮನೋಧರ್ಮ ಸಂಗೀತದ ಅಂಗವಾದ ಆಲಾಪನೆ, ನೆರವಲು, ರಾಗ-ತಾನ-ಪಲ್ಲವಿ, ಕಲ್ಪನಾಸ್ವರಗಳನ್ನು ಹಾಡಲು ಹೆಚ್ಚಿನ ಅವಕಾಶ ಇಲ್ಲಿದೆ. ಮುಖ್ಯವಾಗಿ ಸ್ವರ ಸಂಯೋಜನೆಗೆ ಹೆಚ್ಚಿನ ಪ್ರಾಶಸ್ತ್ಯವಿದ್ದು, ಸಂಗತಿಗಳ ಮೂಲಕ ರಾಗವನ್ನು ವಿಸ್ತರಿಸುವ ಅವಕಾಶವನ್ನೂ ಕೊಡುತ್ತದೆ. ಆ ಮೂಲಕ ಸಂಗೀತ, ನೃತ್ಯ ಕಲಾವಿದರ ಪರಿಪಕ್ವತೆ, ಪಾಂಡಿತ್ಯ, ಸಾಮರ್ಥ್ಯ, ಜಾಣ್ಮೆಯನ್ನು ಒರೆಗೆ ಹಚ್ಚುತ್ತದೆ. ಇವು ರಾಗದ ರತ್ನಗಳು. ರಾಗಭಾವದ ವಿವಿಧ ಮುಖಗಳ ನಿರೂಪಣೆ ಇಲ್ಲಿ ಸಾಧ್ಯ. ಹಾಗಾಗಿ ಬಹಳಷ್ಟು ಕೃತಿಗಳು ತಮ್ಮ ರಾಗಗಳ ಮೂಲಕ ಗುರುತಿಸಿಕೊಂಡಿವೆ, ಅಂತೆಯೇ ಹಲವು ಬಾರಿ ಕೃತಿಗಳಿಂದಲೇ ಕೆಲವು ರಾಗಗಳು ಪ್ರಸಿದ್ಧಿ ಪಡೆದಿವೆ. ಅಪೂರ್ವ ರಾಗಗಳೂ ಕೃತಿಗಳಿಂದ ತಿಳಿದು ಬರುತ್ತವೆ.

ಪುರಂದರದಾಸರ ಕಾಲದ ವರೆಗೂ ಕೃತಿ ಮತ್ತು ಕೀರ್ತನೆಗಳಿಗೆ ವ್ಯತ್ಯಾಸವಿರಲಿಲ್ಲ. ಪುರಂದರದಾಸರು ಕೀರ್ತನೆ ಎಂಬ ಶಬ್ದವನ್ನು ಪ್ರಪ್ರಥಮವಾಗಿ ಬಳಸಿ ವ್ಯತ್ಯಾಸವನ್ನು ತಿಳಿಸಿದವರು. ಮೊದಲು ಈ ಬಗೆಯ ಕೃತಿಗಳನ್ನು ಕರ್ನಾಟಕದಲ್ಲಿ ರಚನೆ ಮಾಡಿದವರು ನರಹರಿತೀರ್ಥರು. ಸಂಗೀತದ ತ್ರಿಮೂರ್ತಿಗಳೆನಿಸಿದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಶಾಸ್ತ್ರಿಗಳಿಂದ ಮುಖ್ಯ ಕೃತಿಕರ್ತೃಗಳು. ಇವರ ನಂತರದಲ್ಲಿ ಮೈಸೂರು ಸದಾಶಿವರಾಯರು, ಪಟ್ಣಂ ಸುಬ್ರಹ್ಮಣ್ಯ ಅಯ್ಯರ್, ಮುತ್ತಯ್ಯ ಭಾಗವತರ್, ಮೈಸೂರು ವಾಸುದೇವಾಚಾರ್, ವೀಣಾಕುಪ್ಪಯ್ಯರ್, ಸ್ವಾತೀ ತಿರುನಾಳ್, ವೀಣೆ ಶೇಷಣ್ಣ, ತಂಜಾವೂರು ಸಹೋದರರು, ಅನ್ನಮಾಚಾರ್ಯರು ಪ್ರಮುಖರು.

ಜಯದೇವ, ಪುರಂದರದಾಸರು, ನಾರಾಯಣತೀರ್ಥರು ಪಲ್ಲವಿ, ಅನುಪಲ್ಲವಿ, ಚರಣಗಳಿರುವ ರಚನೆಗಳನ್ನು ಮಾಡಿದ್ದರು. ಆದರೆ ಕಾಲಾಂತರದಲ್ಲಿ ಕೃತಿಯ ಸಂಪೂರ್ಣ ಸ್ವರೂಪವನ್ನು ವಿಕಾಸಗೊಳಿಸಿ ಸಂಗತಿಗಳನ್ನು ಅಳವಡಿಸಿ, ನಿರ್ದಿಷ್ಟ ಸ್ವರೂಪವನ್ನು ಕೊಟ್ಟವರು ತ್ಯಾಗರಾಜರು. ಆದರೆ ತ್ಯಾಗರಾಜರಿಗಿಂತ ಹಿಂದಿನ ತಲೆಮಾರಿನ ಶ್ರೀಶೇಷಯ್ಯಂಗಾರ್, ಶ್ರೀನಿವಾಸ, ಘನಂಶೀನಯ್ಯ ಕೃತಿಯ ಪ್ರವರ್ತಕರು ಎನ್ನುತ್ತಾರೆ ಸುಬ್ಬರಾಮ ದೀಕ್ಷಿತರು.. ಇವರೊಂದಿಗೆ ಪಲ್ಲವಿ ಗೋಪಾಲಯ್ಯರ್, ತ್ಯಾಗರಾಜರ ತಾತ ಗಿರಿರಾಜ ಕವಿಗಳೂ ಕೃತಿ ಇತಿಹಾಸದ ಪ್ರಾಚೀನರು.

ಕೃತಿಗಳಲ್ಲಿ ಅನೇಕ ಬಗೆಗಳಿವೆ. ನವಗ್ರಹ ಕೃತಿ, ಪಂಚರತ್ನ ಕೃತಿ, ನವರಾತ್ರಿ ಕೃತಿ, ನವಾವರಣ ಕೃತಿ, ನವರತ್ನ ಮಾಲಿಕಾ ಕೃತಿ, ಉತ್ಸವ ಸಂಪ್ರದಾಯ ಕೃತಿ..ಹೀಗೆ., ವಾಗ್ಗೇಯಕಾರರು ತಮ್ಮ ಇಷ್ಟದೇವರ ಅಂಕಿತದಲ್ಲಿ ಇಂತಹ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಕೃತಿಗಳಲ್ಲಿ ಚರಣಗಳು ಅನುಪಲ್ಲವಿಯಂತೆಯೇ ಇರುತ್ತದೆ. ಆದರೆ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಇಂತಹ ಧಾತು ಪುನರಾವರ್ತನೆಯಾಗುವುದಿಲ್ಲ. ಇವರ ಹಲವು ಕೃತಿಗಳಲ್ಲಿ ಪಲ್ಲವಿ, ಅನುಪಲ್ಲವಿ ಮಾತ್ರ ಇರುತ್ತದೆ. ಇಂತಹ ಕೃತಿಗಳ ಅನುಪಲ್ಲವಿಗೆ ಸಮಷ್ಠಿ ಚರಣವೆಂದು ಹೆಸರು. ಇಂತಹ ಪಲ್ಲವಿ ಮತ್ತು ಸಮಷ್ಠಿ ಚರಣಗಳು ಪ್ರಾಸಬದ್ಧವಾಗಿದ್ದು, ಕೃತಿಯ ಸೌಂದರ್ಯ ಹೆಚ್ಚಿಸಲು ಸಮಕಾಲ, ಮಧ್ಯಮಕಾಲದ, ವಿಲೋಮ ಅಥವಾ ಅನುಲೋಮ ಚಿಟ್ಟೆಸ್ವರಗಳನ್ನು ಸೇರಿಸಿರುತ್ತಾರೆ. ಕೆಲವಲ್ಲಿ ಮಧ್ಯಮ ಕಾಲ ಸಾಹಿತ್ಯ, ಸೊಲ್ಕಟ್ಟುಸ್ವರ, ಸ್ವರ ಸಾಹಿತ್ಯವೂ ಇರುತ್ತದೆ. ಕೆಲವು ಘಟನೆಗಳನ್ನು ಹೊಂದಿದ ಕೃತಿಗಳಿವೆ. ಇವೆಲ್ಲವೂ ಕೃತಿಯನ್ನು ಮಾಧುರ್ಯ ಮತ್ತು ಗಾಂಭೀರ್ಯಪೂರ್ಣವನ್ನಾಗಿಸುತ್ತದೆ.

ಪ್ರತಿಭಾವಂತರು ಭಕ್ತಿಪರವಶ, ತನ್ಮಯರಾಗಿ ಹಾಡಿದರಷ್ಟೇ ಇಂತಹ ಸಂಕೀರ್ತನಗಳಿಗೆ, ಕೃತಿಗಳಿಗೆ ಇದಕ್ಕೆ ಮತ್ತಷ್ಟು ಸೌಂದರ್ಯ, ಅರ್ಥ ನೀಡಬಲ್ಲರು. ಆದರೆ ಇಂದು ಹಲವು ಕಾರ್ಯಕ್ರಮ, ಸ್ಪರ್ಧೆಗಳಲ್ಲೂ ಕೃತಿ, ಕೀರ್ತನೆ, ಭಕ್ತಿಗೀತೆಗಳ ವ್ಯತ್ಯಾಸ ತಿಳಿಯದೆ ಇರುವ ಸಾಹಿತ್ಯವನ್ನೂ ಕೆಡಿಸಿ, ತಮ್ಮ ಸ್ವಂತ ಸಾಹಿತ್ಯವನ್ನೂ ಸೇರಿಸಿ, ಅಲ್ಪಪ್ರಾಣ, ಮಹಾಪ್ರಾಣದ ಪ್ರಾಣ ತೆಗೆದು, ಭಾಷೆ-ಪದಗಳ ಅರ್ಥ ತಿಳಿಯಲೇ ಹೋಗದೆ, ಅರಚುವುದನ್ನು, ಆಡುವುದನ್ನು ಕೇಳಿದಾಗ, ವೀಕ್ಷಿಸಿದಾಗ ಇದು ಆಧುನಿಕ ಮನೋಭಾವದ ಶಾಪವೋ, ಅಥವಾ ವರವೋ ಅರ್ಥವಾಗದಂತಹ ಸ್ಥಿತಿ. ಮೂಲ ಸೌಂದರ್ಯವನ್ನೇ ಕೆಡಿಸುವ ಮಟ್ಟಿಗೆ ಸಿನಿಮಾವನ್ನೂ ಒಳಗೊಂಡಂತೆ ವಿಭಿನ್ನ ನೆಲೆಯಲ್ಲಿ ಕೀರ್ತನೆ, ಕೃತಿಗಳನ್ನು ಬಳಸುವ ವೈಖರಿಯು ಪರಂಪರೆಯನ್ನು ಪ್ರತಿನಿಧಿಸುವುದಿಲ್ಲವೆಂಬುದು ನಿಜ, ಆದರೂ ಕಲಾವಿದರು ತಮ್ಮ ಅನುಭವ, ಜ್ಞಾನವನ್ನು ಎಷ್ಟರ ಮಟ್ಟಿಗೆ ವಿಸ್ತರಿಸುತ್ತಾರೆ ಎಂಬುದರ ಸೂಚಕವಂತೂ ಹೌದು!

Leave a Reply

*

code