ಅಂಕಣಗಳು

Subscribe


 

ಪರಂಪರೆ ಮತ್ತು ಕಲಾತ್ಮಕ ಮೌಲ್ಯಗಳ ಸಂಕಲನ : ಶ್ರೀರಾಮಸೇತು

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ‘ಮನೂ’ ಬನ

ಪೌರಾಣಿಕ ಪ್ರಸಂಗಗಳಿಗೆ ಜೀವ ಕೊಡುವುದರೊಂದಿಗೆ ಸಮಕಾಲೀನ ನಿಲುವುಗಳಿಗೆ ಒತ್ತುಕೊಡುತ್ತಾ ಪ್ರಯೋಗಗಳಿಗೆ ಹರಿಕಾರನಾಗುತ್ತಾ, ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಪರಂಪರೆಯನ್ನು ಏಕಕಾಲಕ್ಕೇ ನಮ್ಮೆದುರು ತಂದಿರಿಸುವ ನಮ್ಮ ನಾಡಿನದ್ದೇ ಆದ ಕಲೆ ಎಂಬುದಿದ್ದರೆ ಅದು ಯಕ್ಷಗಾನವೇ ಸೈ !

ಕಲಾಭಿವ್ಯಕ್ತಿಗಾಗಿ ಕೆಲವು ಯಕ್ಷಗಾನ ಕೂಟಗಳು, ಮೇಳಗಳು ಹಲವು ತೆರೆಮರೆಗೆ ಸರಿದ, ಅಷ್ಟಾಗಿ ರಂಗಕ್ಕೇರದ ಪ್ರಸಂಗಗಳಿಗೆ ಜೀವ ತುಂಬಿ ಕಲಾತ್ಮಕವಾಗಿ ಮಾತ್ರವಲ್ಲದೆ, ಯಕ್ಷಗಾನೀಯವಾಗಿಯೂ ತೆರೆದುಕೊಳ್ಳುವಂತೆ ಮಾಡಿದೆ. ಈ ಸಾಲಿಗೆ ಉದಾಹರಣೆಯಾಗಿ ಕಂಡಿದ್ದು ಶ್ರೀರಾಮಚಂದ್ರಾಪುರ ಮಠದ ಯಕ್ಷಗಾನ ಮೇಳದ ಈ ಬಾರಿಯ ತಿರುಗಾಟದ ಮುಖ್ಯ ಪ್ರಸಂಗ ಶ್ರೀರಾಮಸೇತು. ಕಳೆದ ಬಾರಿಯ ತಿರುಗಾಟದ ಮುಖ್ಯ ಪ್ರಸಂಗಗಳೆನಿಸಿದ ಪುಣ್ಯಕೋಟಿ, ಕನ್ಯಾಂತರಂಗದ ಸಾಲಿಗೆ ಸೇರುವ; ಸೃಜನಶೀಲ ಸ್ಪರ್ಶ, ನಿರೂಪಣೆಯಿಂದ ರಂಗಕ್ಕೆ ಹೊಸ ಮೆರುಗು, ಆಯಾಮ, ಜೀವಂತಿಕೆಯನ್ನು ತಂದಿಡುವ ಪ್ರಸಂಗವಿದು.

ವಾಲ್ಮೀಕಿ ರಾಮಾಯಣದ ಕಥಾ ಹಂದರಕ್ಕಿಂತ ಸಾಕಷ್ಟು ತನ್ನ ನಡೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದರೂ ಶ್ರೀರಾಮಸೇತು ಪರಂಪರೆಯನ್ನು ಪ್ರತಿನಿಧಿಸುವಲ್ಲಿ ಸೋತಿಲ್ಲವೆನಿಸಿದ್ದು ಹೌದು. ಸಾಮಾನ್ಯವಾಗಿ ಯಾವುದೇ ಕಥೆಯನ್ನಾದರೂ ರಂಗಕ್ಕೆ ಅಳವಡಿಸುವಲ್ಲಿ ಪೌರಾಣಿಕ ಹಿನ್ನಲೆಗೇ ಪ್ರಾತಿನಿಧ್ಯ ಹೆಚ್ಚು. ಆದರೂ ಪೂರಕವಾಗಿ ನಾಟಕಧರ್ಮಕ್ಕೂ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಇದರಿಂದ ಕಲಾಪ್ರಕಾರವು ಪರಂಪರೆಯನ್ನು ಸಮರ್ಥ ಅಭಿವ್ಯಕ್ತಿಸುವುದರೊಂದಿಗೆ, ಸಕಾಲಿಕ ಎಂದೆನಿಸಿಕೊಳ್ಳುತ್ತದೆ. ಅಷ್ಟಕ್ಕೂ ಯಕ್ಷಗಾನ ಪ್ರಸಂಗಗಳಿಗೆ ತೊರವೆ ರಾಮಾಯನದ ಆಧಾರ, ಪ್ರಭಾವ ಸಾಕಷ್ಟಿದೆ ಎನ್ನುವುದು ಸರ್ವ ವಿದಿತ. ಜೊತೆಗೆ ಬದಲಾಗುತ್ತಿರುವ ಕಾಲಘಟ್ಟಕ್ಕೆ ಸ್ಪಂದಿಸಲು, ವಿಷಯಗಳ ನಿರೂಪಣೆಯಲ್ಲಿ ಸಾಂದರ್ಭಿಕವಾಗಿ ಸಣ್ಣಪುಟ್ಟ ವ್ಯತ್ಯಾಸಗಳು ವಿಹಿತ. ಹಾಗಾಗಿ ಕಥೆಯ ಆಶಯ ಕಲಾತ್ಮಕ ಮಾತ್ರವಲ್ಲ ಯಕ್ಷಗಾನೀಯವೂ ಕೂಡಾ!

ಪ್ರಸಂಗದ ಹೆಸರು ಪ್ರಸ್ತುತ ದಿನಗಳಲ್ಲಿ ಕಾವೇರುತ್ತಿರುವ ಶ್ರೀರಾಮಸೇತು ಪ್ರಕರಣಕ್ಕೆ ಪೂರಕವೋ ಎಂಬಂತೆ ಮೂಡಿಬಂದರೆ ಅದು ಪ್ರಸಂಗದ ತಪ್ಪಲ್ಲ. ಹೆಸರು ಕೇಳಿದ ಮಾತ್ರಕ್ಕೆ ಮೇಲ್ನೋಟಕ್ಕೆ ಎದ್ದಿರುವ ರಾಜಕೀಯ ವಿವಾದಗಳಿಗೆ ತಮ್ಮ ನಿಲುವನ್ನು ಪ್ರತಿಷ್ಟಾಪಿಸಲು ಯಕ್ಷಗಾನ ಪ್ರಕಾರಕ್ಕೆ ಅಂಟಿಕೊಂಡಿದ್ದಾರೆಯೋ ಎಂಬ ಅನುಮಾನ ವ್ಯಕ್ತವಾದರೂ, ಪ್ರಸಂಗವನ್ನು ವೀಕ್ಷಿಸಿದ ಮೇಲೆ ಈ ಗ್ರಹಿಕೆ ಸುಳ್ಳೆನಿಸುತ್ತದೆ.

ಪಾರ್ತಿಸುಬ್ಬರ ಯಕ್ಷಗಾನೀಯ ನಿಲುವಿಗೆ ಬದ್ಧವಾಗಿ, ಪುತ್ತಿಗೆ ರಾಮಕೃಷ್ಣ ಜೋಯಿಸರ ಶ್ರೀರಾಮ ಪಟ್ಟಾಭಿಷೇಕವನ್ನು ಮುಖ್ಯ ಆಕರವಾಗಿಸಿಕೊಂಡಿದೆ ಶ್ರೀರಾಮಸೇತು. ಪ್ರಸಂಗ ಪ್ರಾಂಭಗೊಳ್ಳುವುದು ಸೇತುನಿರ್ಮಾಣದ ಕಥೆಯಿಂದ. ಅಲ್ಲಿಂದ ಮುಂದುವರೆಯುವ ಕಥಾಭಾಗ ವರುಣ ಪ್ರಾರ್ಥನೆ- ಮಕರ ನಿಗ್ರಹ- ಅಂಗದ ಸಾಹಸ-ಶನಿ ಗರ್ವಭಂಗ-ಅಳಿಲುಸೇವೆ-ರಾವಣನ ಆಸ್ಥಾನ-ಸೇತುವಿಗೆ ಶುಕ ಸಾರಣರ ಭೇಟಿ ಮತ್ತು ವರ್ಣನೆ-ಛತ್ರಭಂಗ-ಇಂದ್ರಜಿತುವಿನ ನಾಗಾಸ್ತ್ರ ಪ್ರಕರಣ-ರಾವಣವಧೆ-ಸೀತೆ ಅಗ್ನಿಪರೀಕ್ಷೆ-ರಾವಣ ಪ್ರೇತಮೋಕ್ಷ-ಸೇತುಖಂಡನ-ರಾಮೇಶ್ವರ ಕ್ಷೇತ್ರ ನಿರ್ಮಾಣದಲ್ಲಿ ವಿಸ್ತರಿಸಿಕೊಂಡು ಬಂದು ಮಂಗಳವಾಗುತ್ತದೆ. ಇವೆಲ್ಲದರ ನಡುವೆ ಶಿವ ಪಾರ್ವತಿಯರ ಸಂವಾದ, ಅಂಗದನಿಗೆ ಬುದ್ಧಿವಾದ, ಅಂತ್ಯದಲ್ಲಿ ಹನುಮಂತನು ಪ್ರೇತಮೋಕ್ಷಕ್ಕಾಗಿ ಕೈಲಾಸಕ್ಕೆ ಶಿವಲಿಂಗವನ್ನು ತರಲು ಹೋಗುವಲ್ಲಿಗೆ ಹರಿಹರರ ನಡುವಿನ ಐಕ್ಯತೆ, ಅವರ್ಣನೀಯ ಸಂಬಂಧವನ್ನು ಪ್ರಕಟಗೊಳಿಸುತ್ತದೆ. ಅಳಿಲೊಂದು ಸೇತುನಿರ್ಮಾಣದಲ್ಲಿ ಪಾಲ್ಗೊಳ್ಳುವ ಮತ್ತು ಹನುಮದೀಶ್ವರ ಲಿಂಗಸ್ಥಾಪನೆಯು ಭಕ್ತ ಮತ್ತು ಭಗವಂತನ ಅವಿನಾಭಾವ ಸಂಬಂಧವನ್ನು ಸ್ಪಷ್ಟವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತದೆ. ಜಾನಪದೀಯ ನೆಲೆಯ ಅಳಿಲು ಸೇವೆಯ ಪಾತ್ರಕ್ಕೆ ಪೌರಾಣಿಕ ಸ್ಪರ್ಶ ನೀಡಿ, ವಿನೂತನವೆನಿಸುವ ಪ್ರೇತಮೋಕ್ಷ ಕಥಾಹಂದರವನ್ನ್ನು ಸಮಯೋಚಿತವಾಗಿ ಅಳವಡಿಸಿಕೊಂಡು ಕಲಾತ್ಮಕ ಸ್ಪರ್ಶವನ್ನಿತ್ತಿರುವುದುಪ್ರಸಂಗದ ಹೈಲೈಟ್ !

ಸಾಮಾನ್ಯವಾಗಿ ರಾಮಾಯಣಾಧಾರಿತ ಯಕ್ಷಗಾನ ಪ್ರಸಂಗಗಳ ಪೈಕಿ ವಾಲಿ ಮೋಕ್ಷ, ರಾವಣ ಸಂಹಾರ, ಇಂದ್ರಜಿತು ವಧೆ, ಅಹಿರಾವಣ-ಮೈರಾವಣ ವಧೆ ಮುಂತಾದವುಗಳು ಮುಖ್ಯ ಪಟ್ಟಿಯಲ್ಲಿದ್ದು, ರಾಮಸೇತು ನಿರ್ಮಾಣ, ಅಗ್ನಿಪರೀಕ್ಷೆ, ಮಕರನಿಗ್ರಹ, ಅಳಿಲುಸೇವೆಯಂತಹ ಕಥಾಸಂಯೋಜನೆ ಅಷ್ಟಾಗಿ ರಂಗಕ್ಕೆ ಏರಿದ ಉದಾಹರಣೆಗಳಿಲ್ಲ. ಪ್ರಸಂಗದ ಶುಕ ಸಾರಣ ಮತ್ತು ಶಿವನ ಪಾತ್ರದ ಆಂಗಿಕಾಭಿನಯ(ನೃತ್ಯ, ಹಾವಭಾವ)ದಲ್ಲಿ ಬಡಗುತಿಟ್ಟಿನ ಸ್ಪರ್ಶವಿದೆಯೇನೋ ಎಂದು ನೋಡುಗರಿಗೆ ಅನಿಸುವುದು ಸಹಜ. ಆದರೂ ತೆಂಕುತಿಟ್ಟಿನಲ್ಲೂ ಅಂತಹ ನೃತ್ಯವಿಸ್ತಾರಗಳಿರುವುದು ವೇದ್ಯ. ನರ್ತನ ಪ್ರಕಾರಗಳಲ್ಲಿ ಶೃಂಗಾರ ಆದ್ಯತೆಯ ಮತ್ತು ಜನಾಕರ್ಷಣೀಯ ಭಾವ ಎನ್ನುವುದನ್ನು ಗಮನದಲ್ಲಿರಿಸಿ ನೋಡಿದರೆ, ಈ ನವರಸಭರಿತ ಪ್ರಸಂಗ ನಿರೂಪಣೆಯಲ್ಲಿ ಶೃಂಗಾರದ ಕೊರತೆ ಸಹಜವಾಗಿಯೇ ಎದ್ದು ಕಾಣುತ್ತದೆ. ಇನ್ನುಳಿದಂತೆ ಸಿದ್ಧಕಟ್ಟೆ ವಿಶ್ವನಾಥಶೆಟ್ಟಿಯವರ ಸೃಜನಶೀಲ ಪದ್ಯಗಳು, ಕಥಾಸಂಯೋಜನೆ, ಪ್ರಸಂಗದ ವಿಸ್ತರಣಾ ಪ್ರಕ್ರಿಯೆ, ಸಮಯ ಪಾಲನೆ, ವಾಚಿಕಾಭಿನಯ, ಆಹಾರ್ಯಾಭಿನಯ, ಮೇಳದ ವ್ಯವಸ್ಥಾಪಕರ, ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರ ಅಚ್ಚುಕಟ್ಟುತನ ಮತ್ತು ರಂಗನಿರ್ವಹಣೆ-ಎಲ್ಲವೂ ಪ್ರಬುದ್ಧವಾಗಿದ್ದು, ಪರಂಪರೆ ಮತ್ತು ಹೊಸತಿನ ಅಂದವನ್ನು ಪ್ರತಿನಿಧಿಸುತ್ತದೆ.

ಪ್ರಸ್ತುತ ದಿನಗಳಲ್ಲಿ ಯಕ್ಷಗಾನ ಕಲಾ ಉದ್ಯಮವು ಇಡೀ ರಾತ್ರಿಯ ಪ್ರಸಂಗಗಳಿಂದ ಕಳಚಿಕೊಳ್ಳುತ್ತಾ, ವರ್ತಮಾನಕ್ಕೆ ತಕ್ಕಂತೆ ಕಾಲಮಿತಿಯ ಬದ್ಧತೆಗೆ, ನಿರ್ದಿಷ್ಟ ಚೌಕಟ್ಟಿಗೆ ಒಳಪಡುತ್ತಿದೆ. ಇಂತಹ ಸ್ಥಿತ್ಯಂತರದಲ್ಲಿ ಪ್ರೇಕ್ಷಕ ಸಹೃದಯರ ರಸಿಕತನವನ್ನು ಹೆಚ್ಚು ಮಾಡುವಲ್ಲಿ ಶ್ರೀರಾಮಸೇತುವಿನಂತಹ ಪ್ರಸಂಗದ ನಿರ್ವಹಣೆ, ನಿರೂಪಣೆ ಹೊಸ ಸಾಧ್ಯತೆಗಳನ್ನು ಸಾಧಿಸುವುದು ಒಳ್ಳೆಯ ಸಂಗತಿ.

Leave a Reply

*

code