ಅಂಕಣಗಳು

Subscribe


 

ಬದಲಾಗಿದೆ ಮನಸ್ಸು

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ‘ಮನೂ’ ಬನ

ವ್ಯಾಪಾರೀಕರಣದಲ್ಲಿ ನಲುಗುತ್ತಿರುವ ನೃತ್ಯ ತರಬೇತಿ, ದುಬಾರಿ ಖರ್ಚು-ವೆಚ್ಚ, ನಾಯಿಕೊಡೆಗಳಂತೆ ತಲೆ ಇತ್ತುತ್ತಿರುವ ನೃತ್ಯ ಸಂಸ್ಥೆಗಳು, ಎಲ್ಲೆಂದರಲ್ಲಿ ಭರತನಾಟ್ಯ ಎಂದು ಹಣೆಪಟ್ಟಿ ಕಟ್ಟಿಕೊಂಡು ಪ್ರದರ್ಶಿಸುವ ನೃತ್ಯಗಳು… ಹೀಗೆ ಒಂದಲ್ಲ, ಎರಡಲ್ಲ… ಹಲವಾರು ಅಧ್ವಾನಗಳ ಹಿಂದೆ ಯಾರ ಕೈವಾಡವಿದೆ? ಸಂಸ್ಥೆಗಳದ್ದೇ? ಗುರುಗಳದ್ದೇ? ಅಥವಾ ಇಂದಿನ ಶಿಕ್ಷಣ ಪದ್ಧತಿಯದ್ದೇ?..ಉಹುಂ…ಇವ್ಯಾವೂ ಅಲ್ಲ… ಇದ್ದಾರೂ ಅವರ ಪಾಲು ಸ್ವಲ್ಪದರದ್ದೇ..! ಹಾಗಾದರೆ ಮತ್ಯಾರದ್ದು? ಸ್ವಲ್ಪ ಚಿಂತಿಸಿ…

ಹೌದು..ಅವೆಲ್ಲದರ ಮೂಲ ಪಾಲು ಪೋಷಕರದ್ದು ಮತ್ತು ವಿದ್ಯಾರ್ಥಿಗಳದ್ದು. ಹೀಗೆ ಹೇಳುತ್ತಿರುವುದಕ್ಕೆ ನೀವು ಹುಬ್ಬೇರಿಸಬಹುದು.! ಆದರೆ ಇಂದು ನೃತ್ಯವನ್ನು ಅವರು ತಿಳಿಯುತ್ತಿರುವ ರೀತಿ, ಅದನ್ನು ಆವಿರ್ಭಾವಿಸಿಕೊಂಡ ನೀತಿ, ಗುರುಗಳಿಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನೀಡುತ್ತಿರುವ ಅನಾರೋಗ್ಯಕರ ಕುಮ್ಮಕ್ಕು… ಇವೇ ಮುಂತಾದವುಗಳನ್ನು ಗಮನಿಸಿದರೂ ಸಾಕು, ಪ್ರಸ್ತುತ ಸ್ಥಿತಿಯಲ್ಲಿ ನೃತ್ಯಕ್ಷೇತ್ರ ಕಂಡುಕೊಂಡ ಎಲ್ಲಾ ಬೆಳವಣಿಗೆಗಳ (?) ಹಿಂದೆಯೂ ನಿಸ್ಸಂಶಯವಾಗಿ ವಿದ್ಯಾರ್ಥಿಗಳ ಮತ್ತು ಪೋಷಕರ ಹಸ್ತಕ್ಷೇಪವಿದೆ.

ಶಾಸ್ತ್ರೀಯ ನೃತ್ಯವನ್ನು ಶ್ರೀಮಂತಿಕೆಯ ಆಸ್ತಿ ಎಂದು ಪರಿಗಣಿಸುವವರು ಕೆಲವರಾದರೆ, ಕೆಲವರಿಗೆ ಅದು ಪ್ರದರ್ಶನದ ಸರಕು, ಪ್ರತಿಷ್ಟೆಯ ಸಂಕೇತ. ಇನ್ನೂ ಕೆಲವರಿಗೆ ದೈಹಿಕ ವ್ಯಾಯಾಮಕ್ಕೆ, ಸಮಯ ಕಳೆಯಲಿಕ್ಕೆ ಇರುವ ಮಾರ್ಗ. ಇದರೊಂದಿಗೆ ಶಾಸ್ತ್ರೀಯ ನೃತ್ಯವನ್ನು ಬೇರಾವುದೋ ಆಧುನಿಕ ಶೈಲಿಯೊಂದಿಗೆ ಮಿಶ್ರ ಮಾಡಿ ತೋರಿಸುವ ಹಟವೂ ಜೊತೆಗೂಡಿ, ಒಟ್ಟಾರೆ ನೃತ್ಯಗಳ ಮೂಲಸ್ಥಾನ ಮರೆತುಹೋಗುವ ಮಟ್ಟಿಗೆ ಕಟ್ಟುನಿಟ್ಟಾಗಿ ಕಗ್ಗೊಲೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಂತಾಗಿದೆ. ಶಾಸ್ತ್ರೀಯ ನೃತ್ಯಗಳ ಕುರಿತು ಅದರಲ್ಲೂ ಭರತನಾಟ್ಯದ ಬಗ್ಗೆ ಹೇಳಲಾದ ಎಲ್ಲಾ ಪಾರಂಪರಿಕ ಮಾತುಗಳನ್ನು ಮೂಲೆಗುಂಪಾಗಿಸಿ ತಾವೇ ಹೇರಿಕೊಂಡ, ರೂಪಿಸಿಕೊಂಡ ನಿಯಮಗಳನ್ನು ಜಾರಿಗೆ ತರುವ ಮನೋಭಾವ ಹೆಚ್ಚಾಗುತ್ತಿದೆ.

ಕೆಲವು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಯುವುದು ಎಂದರೆ ವೇದಿಕೆಯಲ್ಲಿ ಕಾರ್ಯಕ್ರಮ ಕೊಡುವುದಕ್ಕಷ್ಟೇ ಸೀಮಿತ. ಪೋಷಕರೂ ಇದನ್ನು ಬೆಂಬಲಿಸುವುದೂ ಹೊರತಲ್ಲ. ನಾಟ್ಯದ ಮೂಲ ಪಾಠಗಳನ್ನು ಸರಿಯಾಗಿ ಕಲಿಯದೇ ನೃತ್ಯಬಂಧಗಳ ಕುರಿತೇ ಯೋಚಿಸುವ ಮಂದಿ, ಪ್ರಾರಂಭಿಕ ಹಂತದ ಮಟ್ಟುಗಳನ್ನು ಕಲಿಯುವಲ್ಲಿಗೇ ಶಾಸ್ತ್ರೀಯ ನೃತ್ಯಗಳ ಬಗೆಗೆ ನಿರಾಸಕ್ತಿ ಬೆಳೆಸಿಕೊಂಡು, ಬೋರ್ ಎನ್ನುತ್ತಾ ಫ಼ಿಲ್ಮೀ, ಪಾಪ್ ಸಂಗೀತ ನೃತ್ಯಗಳಿಗೆ ವಾಲುತ್ತಾರೆ. ಅವರ ಪಾಲಿಗೆ ನಾಟ್ಯವೆಂದರೆ ವರುಷದೊಳಗಾಗಿ ವೇದನೆಯಿಲ್ಲದೆ ಸಾಧಿಸುವ ಜನಪ್ರಿಯ ಕಲೆ. ಚೆನ್ನಾಗಿ ವೇಷಭೂಷಣ ತೊಟ್ಟು ರಂಗ ಪ್ರವೇಶ ಮಾಡಿ, ಹೇರಳ ಹಣ ಖರ್ಚು ಮಾಡಿದರಂತೂ ಅಲ್ಲಿಗೆ ಕಲಾವಿದೆ ಎಂದೆನಿಸಿಕೊಳ್ಳುವ ಹಠದ ಮುಂದೆ ಶಾಸ್ತ್ರೀಯ ನೃತ್ಯಗಳ ಮೂಲ ಅನುಭಾವಿಕ ಅನುಭವಗಳು ತೆರೆದುಕೊಳ್ಳುವುದೇ ಇಲ್ಲ.

ಭರತನಾಟ್ಯ ಕಲೀಲಿಕ್ಕೆ ಬಂದು ಕಲಿಯುವಾಗ ತೀರಾ ಅವಸರ ಮಾಡುತ್ತಾರೆ. ಅಡವುಗಳ ಪಾಠ ಒಂದೆರಡು ವರ್ಷ ಆಗದೇ ಹೇಗೆ ತಾನೇ ಮುಂದಿನ ಪಾಠಕ್ಕೆ ಹೋಗೋದು? ಆದರೆ ಅಷ್ಟರೊಳಗೆ ಗುರುಗಳಿಗೆ ಕಲಿಸೋಕೆ ಬರಲ್ಲ ಅಂತಾನೋ, ಜಾನಪದ ಹೇಳಿಕೊಡೋಲ್ಲ, ಸ್ಟೇಜಿಗೆ ಹತ್ತಿಸೊಲ್ಲ ಅಂತಾನೋ, ಎಕ್ಸಾಮ್‌ಗೆ ಕೂರಿಸೋಲ್ಲ, ಕಾಂಪಿಟೇಶನ್‌ಗೆ ಕಳಿಸೋಲ್ಲ ಎಂದೋ ಅರ್ಧಕ್ಕೆ ಆಸಕ್ತಿ ಕಳೆದುಕೊಂಡು ಭರತನಾಟ್ಯ ತಿಲಾಂಜಲಿ ಬಿಡ್ತಾರೆ. ಅರ್ಧ ಅರ್ಧ ಕಲಿಯುವವರನ್ನು ಪರೀಕ್ಷೆಗೋ, ಸ್ಪರ್ಧೆಗೋ, ರಂಗಕ್ಕೋ ಬಿಡುವುದು ಹೇಗೆ? ಕೆಲವು ಪೋಷಕರಂತೂ ಅಕ್ಕ ಪಕ್ಕದ ಮನೆಯವರು ತಮ್ಮ ಮಕ್ಕಳನ್ನು ಡ್ಯಾನ್ಸ್ ಕ್ಲಾಸಿಗೆ ಕಳಿಸ್ತಾರೆ ಅಂತ ಪ್ರತಿಷ್ಟೆಯ ಪ್ರಶ್ನೆಗಾಗಿ ಇವಳೂ ಡ್ಯಾನ್ಸ್ ಕ್ಲಾಸ್‌ಗೆ ಹೋಗ್ತಾಳೆ. ಎಕ್ಸಾಮ್ ಪಾಸ್ ಮಾಡಿದ್ದಾಳೆ ಎಂದು ಹೇಳಿಕೊಂಡು ಬರಲಿಕ್ಕೆ ಕಳಿಸುವವರೂ ಇದ್ದಾರೆ. ಒಮ್ಮೊಮ್ಮೆ ಫಿಲ್ಮ್ ಡ್ಯಾನ್ಸ್‌ಗೆ ಭರತನಾಟ್ಯ ಸ್ಟೆಫ್ ಹಾಕಿಕೊಡಿ ಕಾಂಪಿಟೇಶನ್‌ಗೆ ಬೇಕು ಅಂತ ಕೇಳುವವರೂ ಇದ್ದಾರೆ. ಯಾವುದೇ ವಿದ್ಯೆಯನ್ನು ದೀರ್ಘಕಾಲ ಕಲಿಯದೆ ಅದರ ಮೇಲೆ ಒಂದು ಮಟ್ಟಿನ ಹಿಡಿತ ಬರದೆ ಪ್ರದರ್ಶನ, ಪರೀಕ್ಷೆ ಎಲ್ಲಾ ಆಗ್ಬೇಕು ಅಂದ್ರೆ ಹೇಗೆ ಸಾಧ್ಯ? ಕೆಲವು ಪೋಷಕರು ಹೇಳುವುದಿದೆ; ಶನಿವಾರ ಭಾನುವಾರ ರಜಾದಿನ; ಮಕ್ಕಳದ್ದು ಗಲಾಟೆ, ತಂಟೆ ಜಾಸ್ತಿ. ಹಾಗಾಗಿ ಸ್ವಲ್ಪ ಫ್ರೀಯಾಗಿರೋಣ ಅಂತ ಡ್ಯಾನ್ಸ್ ಕ್ಲಾಸಿಗೆ ಹಾಕಿದೆ! ಇನ್ನು ಕೆಲವರದ್ದು ಲೆಕ್ಕಾಚಾರದ ವ್ಯಕ್ತಿತ್ವ. ನೃತ್ಯಗಳ ವಿಷಯ ಬಂದಾಗ ಸಾಮಾನ್ಯವಾಗಿ ಸ್ವಲ್ಪ ಖರ್ಚು ಆಗುತ್ತೆ ಅಂತ ಸ್ವಲ್ಪ ತಿಳಿದುಕೊಂಡಿರಬೇಕು. ಎಲ್ಲರನ್ನೂ ದುಡ್ಡು ತಿನ್ನೋಕೆ ಅಂತ ತಿಳಿದರೆ ಹ್ಯಾಗೆ? ಕೆಲವರಂತೂ ಮಾತು ಪ್ರಾರಂಭಿಸುವುದೇ ಯಾವ ವರ್ಷಕ್ಕೆ ರಂಗ ಪ್ರವೇಶ ಮಾಡಿಸ್ತೀರಿ ಎಂಬಲ್ಲಿಂದ! ಒಟ್ಟಿನಲ್ಲಿ ಕೆಲವು ವಿದ್ಯಾರ್ಥಿಗಳ ಪೋಷಕರ ವ್ಯಕ್ತಿತ್ವ ರೇಜಿಗೆ ಹುಟ್ಟಿಸುತ್ತಿದೆ. ಹೀಗಿದ್ದಾಗ ಗುರುಗಳೂ ಬದಲಾಗುವುದರಲ್ಲಿ ಹೆಚ್ಚೆನಿಸುವುದಿಲ್ಲ! ವಿದ್ಯೆ ವ್ಯಾಪಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಬೇಸರದಿಂದ ಹೇಳುತ್ತಾರೆ ಹೆಸರು ಹೇಳಲಿಚ್ಚಿಸದ ಓರ್ವ ಹಿರಿಯ ನೃತ್ಯ ಗುರು.

ಶಾಸ್ತ್ರೀಯ ನೃತ್ಯಗ ಬಗೆಗಿನ ಅಸಡ್ಡೆಯ ನಡುವೆ, ಅರ್ಥಗೊತ್ತಿಲ್ಲದೆ ಅದರ ಪರಿಣಾಮ ದುರಂತಗಳನ್ನು ಅರಿಯದೆ, ಚೆನ್ನಾಗಿದೆ(?) ಅನ್ನುವ ಕಾರಣಕ್ಕೆ ಕುಣಿಯುವುದರಿಂದ ಸಾಂಸ್ಕೃತಿಕ ಮನರಂಜನೆಯ ವ್ಯಾಖ್ಯೆಯೇ ಬದಲಾಗುತ್ತಿದೆ. ನವೀನ ನೃತ್ಯಗಳು ಬೇಡ ಎನ್ನುವುದು ಈ ಲೇಖನದ ಆಶಯವಲ್ಲ; ಆದರೆ ಆ ನೃತ್ಯಗಳು ಆಶ್ಲೀಲ ಸಾಹಿತ್ಯವನ್ನು ಪ್ರಭಾವಿಸುತ್ತವೆ, ಶಾಸ್ತ್ರೀಯ ನೃತ್ಯಗಳ ಸೊಬಗು-ಸೌಂದರ್ಯವನ್ನೇ ಕಸಿದುಕೊಳ್ಳುತ್ತದೆ, ಮಕ್ಕಳ ಮತ್ತು ಸಂಸ್ಕೃತಿಯ ಮನಸ್ಸುಗಳನ್ನು ಕೆಡಿಸುತ್ತದೆ ಎನ್ನುವುದಾದರೆ ಅಂತಹ ನವೀನ ನೃತ್ಯಗಳಾಗಲೀ, ಅಥವಾ ಆ ನವೀನನೃತ್ಯಗಳಿಗೆ ಭರತನಾಟ್ಯದ ವೇಷ ಭೂಷಣಗಳನ್ನು ಹಾಕಿ ಕುಣಿಯುವಲ್ಲಿ ಏನಿದೆ ಪುರುಷಾರ್ಥ? ಒಂದು ವೇಳೆ ಅಂತಹ ಆನಂದ ಹೊಂದಿದರೂ ಆ ಆನಂದ ಕ್ಷಣಿಕವಾದುದು ಎನ್ನುವುದು ಎಲ್ಲರೂ ನೆನಪಿನಲ್ಲಿಡಬೇಕಾದ ಮಾತು.

ಪೋಷಕರ ಮೇಲೆ, ಅವರು ಬೆಳೆಸಿಕೊಂಡ ಸಂಸ್ಕೃತಿಯ ಮೇಲೆ ಮಕ್ಕಳು ಬೆಳೆಸಿಕೊಳ್ಳುವ ಆಚಾರ, ವ್ಯವಹಾರ, ಗುಣವೂ ಅಡಗಿರುತ್ತದೆ. ಒಂದು ವೇಳೆ ಪ್ರತಿಷ್ಟೆ, ಉದಾಸೀನ, ಕಾಟಾಚಾರದ ಪ್ರವೃತ್ತಿಯೇ ಬೆಳೆದರೆ ಅದು ನೃತ್ಯದ ಭವಿಷ್ಯಕ್ಕೆ ಮಾತ್ರವಲ್ಲ, ವ್ಯಕ್ತಿತ್ವಗಳ ಭವಿಷ್ಯಕ್ಕೂ ಮಾರಕವಾಗುತ್ತದೆ. ಸ್ಪರ್ಧೆಗೆ ಹೋಗುವುದು, ಕಾರ್ಯಕ್ರಮ ಕೊಡುವುದು, ಖರ್ಚು ಮಾಡಿ ಪ್ರತಿಷ್ಟೆ ಮೆರೆಸುವುದನ್ನೇ ಹಿಂದಿನ ಭರತನಾಟ್ಯ ಪ್ರವರ್ತಕರು ಮಾಡಿದಿದ್ದರೆ ನೃತ್ಯವೆಂಬುದು ಇಂದಿಗೂ ಅಸ್ಪೃಶ್ಯವಾಗಿಯೇ ಉಳಿಯುತ್ತಿತ್ತು. ಇದು ಹೀಗೆಯೇ ಮುಂದುವರಿದರೆ ಹಿಂದೊಮ್ಮೆ ಅಂಟಿದ್ದ ಕಳಂಕ ಮತ್ತೆ ವ್ಯಾಪಕವಾಗಿ ಹಬ್ಬೀತು! ಎಚ್ಚರವಿರಲಿ..!

Leave a Reply

*

code