ಅಂಕಣಗಳು

Subscribe


 

ಭಾರತೀಯ ಸಾಹಿತ್ಯದ ಅದ್ವಿತೀಯ ಪ್ರೇಮಗೀತೆ- ಗೀತಗೋವಿಂದ (ಅಷ್ಟಪದಿ)

Posted On: Thursday, November 6th, 2008
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್


– ಮನೂ ‘ಬನ’

ಪರಮಾತ್ಮನೆಡೆಗೆ ಮಧುರ ಭಕ್ತಿ ಮತ್ತು ಶೃಂಗಾರಗಳ ನಿವೇದನೆ ಜೊತೆಗೆ ಮಾನವ ಸ್ವಭಾವಗಳ ನಿರೂಪಣೆಂiiನ್ನು ಹೊಂದಿರುವ ಅತ್ಯದ್ಭುತ, ಅಸಾಮಾನ್ಯ ಸಂಸ್ಕೃತ ಕಾವ್ಯ ರತ್ನವೆಂದರೆ ಗೀತಗೋವಿಂದ. ಇದನ್ನು ಪ್ರಥಮ ಗೀತನಾಟಕ ಅಥವಾ ಸಂಗೀತರೂಪಕವೆನ್ನಬಹುದು. ಅನೇಕ ಸಂಗೀತ, ನೃತ್ಯ, ನಾಟಕಗಳಿಗೂ ಮಾರ್ಗದರ್ಶಕ ಸರಸ ಕೃತಿಯಾಗಿರುವ ಇದು, ನಂದಿಕೇಶ್ವರನ ಹೇಳಿಕೆಯಂತೆ ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ – ಹೀಗೆ…, ಚತುರ್ವಿಧ ಅಭಿನಯಗಳಿಗೆ ಹೇಳಿ ಮಾಡಿಸಿದ ವಸ್ತು.

ಕಾವ್ಯಗಳೆಂದರೆ ಹಾಗೆ ! ವಾಚನದಲ್ಲಿ ಒಂದು ರೀತೀಯ ಅನುಭವವನ್ನಿತ್ತರೆ, ರಾಗ, ತಾಳ, ಭಾವ, ಲಯಗಳೊಂದಿಗೆ ನರ್ತಿಸಿದಾಗ ಮನಸ್ಸಿಗೆ ವಿಶಿಷ್ಟ ಅನುಭೂತಿಯನ್ನು ನೀಡುತ್ತದೆ. ಪಾರಮಾರ್ಥಿಕ ಗುಣಗಳಿಂದ ಕೂಡಿರುವ ಇವು, ಒಂದೆಡೆ ಸಂಕೀರ್ತನೆಯಾಗಿಯೂ, ಮತ್ತೊಂದೆಡೆ ಕಲಾವಿದರಿಗೆ ಗುಣಾತಿಶಯಗಳಿಂದ ಕೂಡಿದ ಭಾವಪೂರಿತ ರಸಾನುಭೂತಿಯಾಗಿಯೂ ಕೂಡಿರುತ್ತದೆ. ಅಂತವುಗಳ ಪೈಕಿ ಗೀತಗೋವಿಂದಕ್ಕೆ ಅದ್ವಿತೀಯ ಸ್ಥಾನ.

ಇದರ ಕರ್ತೃ ಜಯದೇವಕವಿ. ಒರಿಸ್ಸಾ ದೇಶದ ಪೂರಿ ಜಗನ್ನಾಥಕ್ಕೆ ಸಮೀಪವಾದ ಕಿಂದುಬಿಲ್ವ ಎಂಬ ಗ್ರಾಮದಲ್ಲಿ ಜನಿಸಿ ೧೨ನೇ ಶತಮಾನದಲ್ಲಿ ಅಂದಾಜು ೧೧೧೬-೧೨೦೦ ಇಸವಿಯ ವರೆಗೆ ಬಾಳಿ ಬದುಕಿದ. ಬಂಗಾಳದ ಕೆಂದುಲಿ ಎಂಬ ಗ್ರಾಮವೇ ಕಿಂದುಬಿಲ್ವವಾಗಿ ಇದ್ದಿರಬೇಕೆಂಬುದು ಕೆಲವರ ಅಭಿಪ್ರಾಯ. ಈತನು ತನ್ನ ಏಳನೇ ಅಷ್ಟಪದಿಯ ಸಾಹಿತ್ಯದಲ್ಲಿ ಕಿಂದುಬಿಲ್ವ ಸಮುದ್ರ ಸಂಭವಂ ಎಂಬುದಾಗಿ ಕ್ಷೇತ್ರಮುದ್ರೆ ಅಂದರೆ ತಾನಿದ್ದ, ಬಾಳಿದ ಸ್ಥಳದ ಸೂಚಕವನ್ನು ನೀಡಿದ್ದಾನೆ. ಬ್ರಾಹ್ಮಣಕುಲದ ಕೌಂಡಿನ್ಯ ಗೋತ್ರದ ಭೋಜದೇವ, ರಮಾದೇವಿ ಜಯದೇವನ ತಂದೆತಾಯಿಯರು.

ಈತ ಬಂಗಾಳದ ಸೋಮವಂಶದ ದೊರೆ ಲಕ್ಷ್ಮಣಸೇನನ ಆಸ್ಥಾನಕವಿ ಕೂಡಾ. ಉಮಾಪತಿಧರ, ಗೋವರ್ಧನ, ಶರಣದೇವ, ದುಹಿಸೇನ ಮೊದಲಾದ ಕವಿಗಳು ಈತನ ಸಮಕಾಲೀನರು. ಲಕ್ಷ್ಮಣಸೇನನು ಗೌಡ ಎಂಬಲ್ಲಿನ ಅರಮನೆಯ ಶಿಲಾಶಾನವೊಂದರಲ್ಲಿ ತನ್ನ ಅಸ್ಥಾನದ ಈ ಪಂಚರತ್ನ ಮಹಾಕವಿಗಳ ಹೆಸರುಗಳನ್ನು ಕೆತ್ತಿಸಿದ್ದಾನೆ. ಜಯದೇವನ ಇತರ ಕೃತಿಗಳು ಕಾರಕವಾದ, ರತಿ ಮಂಜರೀ, ತತ್ವಚಿಂತಾಮಣಿ.

ಇವನ ಜನ್ಮ, ಮರಣ, ಜೀವನದ ಕುರಿತು ಜಿಜ್ಞಾಸೆಗಳಿವೆ. ಕೆಲವು ವಿದ್ವಾಂಸರ ಪ್ರಕಾರ ಕ್ರಿ.ಶ.೧೧೫೩ರ ದಶಂಬರ ತಿಂಗಳ ೨೬ನೇ ತಾರೀಕಿನಂದು ಶ್ರೀಮುಖ ಸಂವತ್ಸರ ಮಾರ್ಗಶಿರ ಕೃಷ್ಣ ಏಕಾದಶಿಯಂದು ಸ್ವರ್ಗಸ್ಥನಾದ. ಆದರೆ ಬಹುಪಾಲು ಜನ ಪುಷ್ಯಮಸದ ಸಪ್ತಮೀ ತಿಥಿಯಂದು ಜಯದೇವನ ಪುಣ್ಯದಿನವಾಚರಿಸುತ್ತಾರೆ. ಕೆಲವರು ಶ್ರೀಕೃಷ್ಣಕರ್ಣಾಮೃತದ ಕರ್ತೃ ಲೀಲಾಶುಕನೇ ಜಯದೇವನಾಗಿ ಜನ್ಮ ತಳೆದನೆನ್ನುತ್ತಾರೆ. ಇನ್ನೂ ಕೆಲವು ವಿಮರ್ಶಕರು ಶ್ರೀಕೄಷ್ಣಕರ್ಣಾಮೃತದ ಶ್ಲೋಕಗಳನ್ನು ಅಷ್ಟಪದಿಗಳಲ್ಲಿ ಬಳಸಲಾಗಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ. ಆದರೂ ಗೀತಗೋವಿಂದದ ಕುರಿತಾದ ವ್ಯಾಖ್ಯಾನಗಳಾದ ಶಂಕರಮಿಶ್ರನ ರಸಮಂಜರೀ, ರಾಣಾಕುಂಭನ ರಸಿಕಪ್ರಿಯಾ, ಮತ್ತು ಭಕ್ತಮಾಲಾ, ಲಕ್ಷ್ಮೀಧರನ ಶ್ರುತಿರಂಜನಿ, ಕೃಷ್ಣದತ್ತನ ಶಶಿಲೇಖಾ, ಜಗಧ್ವ್ವರನ ಸಾರದೀಪಿಕಾ, ದೀಪಿಕಾ ಎಂಬ ಗೋಪಾಲಪಂಡಿತನ ಟೀಕೆ ಮುಂತಾದ ಗ್ರಂಥಗಳಿಂದ ಜಯದೇವನ ಕುರಿತ ಈ ವಿಷಯಗಳಿಗೆ ಪುಷ್ಟಿ ದೊರಕಿದೆ.

ಈ ಕಾವ್ಯದ ಕುರಿತಾಗಿ ಭಗವತ್ ದರ್ಶನವನ್ನು ಸಾಕ್ಷೀಕರಿಸಿದ ಅನೇಕ ಪವಾಡಗಳು, ಉಪಕಥೆಗಳೂ ಇವೆ. ಕವಿಯು ಇಷ್ಟದೈವನಾದ ಕೃಷ್ಣನಿಗೆ ಅಷ್ಟಪದಿಗಳನ್ನು ಅರ್ಪಿಸಿದ್ದು, ಸರಳಮನಸ್ಕ ಮಾನವನ ಆತ್ಮ ಹೃದಯಗಳನ್ನು ಪರಮಾತ್ಮನತ್ತ ಕೊಂಡೊಯ್ಯುವ ಪ್ರೌಢ ಕಾವ್ಯ. ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕಲೆ, ನೃತ್ಯನಾಟಕ, ರೂಪಕಗಳೆಲ್ಲದರಲ್ಲೂ ಬಹುಮಟ್ಟಿಗೆ ಬಳಸುವ, ನಾಯಿಕಾ ನಾಯಕ ಭಾವಕ್ಕೆ ಹೇರಳ ಅವಕಾಶವಿರುವ ಶೃಂಗಾರಪೂರಿತ, ವೈಭವಯುತ, ಧ್ವನಿಪೂರ್ಣ, ಶ್ರುತಿಮನೋಹರ, ವಿದ್ವತ್‌ಪೂರ್ಣ, ಅಲಂಕಾರಿಕ ನಿವೇದನೆ. ಒಟ್ಟಿನಲ್ಲಿ ನಭೂತೋ ನ ಭವಿಷ್ಯತಿ ಎಂಬಂತದ್ದು.

ಚಿಕ್ಕಂದಿನಲ್ಲಿಯೇ ಗೆಳೆಯ ಪರಾಶರನೊಂದಿಗೆ ಮಥುರೆ, ಬೃಂದಾವನಗಳಿಗೆ ಹೋಗಿ ಅಲ್ಲಿ ರಾಧಾಕೃಷ್ಣರ ಮೋಹಕ ವರ್ಣನೆಯನ್ನು ಕೇಳಿದ ಜಯದೇವನಿಗೆ ಕೃಷ್ಣಭಕ್ತಿ ಜಾಗೃತಗೊಂಡಿತು. ಅದೇ ನೆನವರಿಕೆಯಲ್ಲಿ ತನ್ನ ವ್ಯಾಸಂಗವನ್ನು ಬಿಟ್ಟು ಜಯದೇವ ಊರ ಹೊರಗಿನ ಪರ್ಣಶಾಲೆಯಲ್ಲಿ ನಿತ್ಯವೂ ಧ್ಯಾನಾಸಕ್ತನಾಗಿ ವಿರಾಗಿಯಾಗಿ ಇರತೊಡಗಿದ. ಕ್ರಮೇಣ ಸಂಸ್ಕೃತದಲ್ಲಿ ಅತಿಶಯ ಪಾಂಡಿತ್ಯ ಪಡೆದು ಕವಿಶ್ರೇಷ್ಟ ವಿದ್ವಾಂಸನೆನಿಸಿದ. ಈತನು ಗೋವರ್ಧನಾಚಾರ್ಯರ ಶಿಷ್ಯನೆಂಬುದು ಪ್ರತೀತಿ.

ಅದೇ ಗ್ರಾಮದ ದೇವಶರ್ಮ, ವಿಮಲಾಂಬ ದಂಪತಿಗಳಿಗೆ ಸಂತಾನವಿಲ್ಲದೆ, ಕೊನೆಗೆ ತಮ್ಮ ಮೊದಲ ಮಗುವನ್ನೇ ಪರಮಾತ್ಮನಿಗೆ ಕಾಣಿಕೆಯಾಗಿ ನೀಡುವ ಹರಕೆ ಹೊತ್ತಿರುತ್ತರೆ. ಇದರ ಫಲವಾಗಿ ಪದ್ಮಾವತಿಯೆಂಬ ಮಗಳು ಜನಿಸಿರುತ್ತಾಳೆ. ಅವಳು ಪ್ರಾಪ್ತ ವಯಸ್ಕಳಾದಾಗ ಹರಕೆಯಂತೆ ಜಗನ್ನಾಥ ದೇವಾಲಯಕ್ಕೆ ಆಕೆಯನ್ನು ಕರೆತಂದು ದೇವರ ಸನ್ನಿಧಿಯಲ್ಲಿ ಬಿಟ್ಟುಹೋಗುತ್ತಾರೆ. ಆದರೆ ಅಲ್ಲಿನ ಅರ್ಚಕರಿಗೆ ಕನಸಿನಲ್ಲಿ ಪರಮಾತ್ಮನು ಕಾಣಿಸಿಕೊಂಡು ತನ್ನ ಅಂಶದಿಂದ ಜನಿಸಿದ ಜಯದೇವನಿಗೆ ಕನ್ಯೆಯನ್ನು ಮದುವೆ ಮಾಡಿಕೊಡುವಂತೆ ತಿಳಿಸುತ್ತಾನೆ. ಆದರೆ ಜಯದೇವನು ನಂಬದೆ, ಪರಿಹಾಸ್ಯ ಮಾಡಿ, ಅಂಗೀಕಾರ ಮಾಡದೇ ವಿರಾಗಿಯಾಗಿ ಉಳಿಯುವ ನಿರ್ಧಾರ ಮಾಡುತ್ತಾನೆ. ಕೊನೆಗೆ ಜಯದೇವನನ್ನು ಪದ್ಮಾವತಿಯು ಪ್ರಾರ್ಥಿಸಿ, ಒಲಿಸಿಕೊಳ್ಳುತ್ತಾಳೆ. ಆಕೆಯ ಭಕ್ತಿಪರಾಯಣತೆಗೆ ಆಕರ್ಷಿತನಾಗಿ ಅವರೀರ್ವರ ವಿವಾಹ ಜರುಗುತ್ತದೆ.

ಪತಿಭಕ್ತಳೂ, ಭಗವದ್ಭಕ್ತಳೂ ಆದ ಜಯದೇವನ ಪತ್ನಿಯೇ ಗೀತಗೋವಿಂದಕ್ಕೆ ಪ್ರೇರಣೆ ನೀಡಿದವಳೆನ್ನಲಾಗಿದೆ. ಪತಿ ಕವಿಯಾದರೆ, ಪದ್ಮಾವತಿ ಸಂಗೀತ-ನೃತ್ಯ ಪ್ರವೀಣೆ! ಅಗಾಧ ಪ್ರೇಮವುಳ್ಳ ದಾಂಪತ್ಯ ಇವರದ್ದು. ಪತಿಯಲ್ಲಿ ಹುದುಗಿದ್ದ ಶಕ್ತಿಯನ್ನ್ನು ಅರಳಿಸಿ ಸ್ಫೂರ್ತಿ ನೀಡಿ, ಆತ ಅಷ್ಟಪದಿಗಳನ್ನು ಹಾಡಿದಾಗ ಪತ್ನಿ ಪದ್ಮಾವತಿಯು ಕವಿತೆಯ ಅರ್ಥಕ್ಕನುಸಾರವಾಗಿ ಗಾನ-ನರ್ತನದಲ್ಲಿ ಜೊತೆಯಾಗಿ ಸಂಕೀರ್ತಿಸುತ್ತಾ ಕೃಷ್ಣನ ಲೀಲಾವಿನೋದಗಳನ್ನು ನೆನೆಯುತ್ತಾ ಆನಂದಿಸುತ್ತಿದ್ದರೆನ್ನಲಾಗಿದೆ. ಅಲ್ಲದೆ ಜಯದೇವನು ಗೀತಗೋವಿಂದದ ಆದಿಯಲ್ಲಿ ಪದ್ಮಾವತಿ ಚರಣ ಚಾರಣ ಚಕ್ರವರ್ತಿ ಎಂದು ಹೇಳಿಕೊಂಡಿದ್ದಾನೆ. ಅಂದರೆ ಅಷ್ಟಪದಿಗಳನ್ನು ಹಾಡುವಾಗ ಆಕೆ ನರ್ತಿಸುವುದರ ಮೂಲಕ ಭಗವಂತನ ಸೇವೆ ಮಾಡುತ್ತಿರುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾನೆ. ಕೊನೆಗೆ ಕಥಕಂದಿ(ಜಯದೇವಪುರ) ಗ್ರಾಮದಲ್ಲಿ ಗೀತಗೋವಿಂದವನ್ನು ಬರೆದು ಪೂರ್ಣಗೊಳಿಸಿದನಂತೆ. ಇವನ ಅಷ್ಟಪದಿಗಳನ್ನು ಕೇಳಿ ಪರಮಸಂತುಷ್ಟನಾಗಿ ಈತನ ವೈಷ್ಣವ ಧರ್ಮವನ್ನೇ ಚೈತನ್ಯನು ಬಂಗಾಳಕ್ಕೆ ಒಯ್ದನಂತೆ!

ಅಷ್ಟಪದಿ-ಎರಡೆರಡು ಸಾಲಿನ ಎಂಟು ಸಾಹಿತ್ಯವಿರುವ ಕಾವ್ಯ. ಗೀತಗೋವಿಂದ ಅಷ್ಟಪದಿಗಳೆಲ್ಲವನ್ನೂ ಹೊಂದಿರುವ ಸಮಗ್ರ ಕಾವ್ಯರೂಪ. ಸಂಗೀತ-ನೃತ್ಯಗಳಿಗಾಗಿ ಕಲಾವಿದರು ಗೀತಗೋವಿಂದದಿಂದ ಕೆಲವು ಭಾಗಗಳನ್ನಷ್ಟೇ ಆಯ್ದುಕೊಳ್ಳುತ್ತಾರೆ. ಜಯದೇವ ಎಂಬುದು ಅಷ್ಟಪದಿಗಳ ಅಂಕಿತ. ಇದರಲ್ಲಿ ಒಟ್ಟು ಎಂಟು ಪಾದಗಳುಳ್ಳ ೨೪ ಅಷ್ಟಪದಿಗಳು, ಮಧ್ಯೆ ಹಲವು ಸಂಯೋಜನಾ ಶ್ಲೋಕಗಳು ಇವೆ. ಅವುಗಳನ್ನು ೧೨ ಸರ್ಗಗಳಾಗಿ ವಿಂಗಡಿಸಿ ಒಂದೊಂದಕ್ಕೂ ಕೃಷ್ಣನ ಲೀಲಾವಿನೋದಗಳ ಹೆಸರನ್ನು ಮನೋಜ್ಞವಾಗಿ ನೀಡಲಾಗಿದೆ. ಹನ್ನೆರಡು ಸರ್ಗಗಳು ಭಾಗವತಪುರಾಣದ ೧೨ ಕಾಂಡಗಳನ್ನು, ಇಪ್ಪತ್ತನಾಲ್ಕು ಅಷ್ಟಪದಿಗಳು ಗಾಯತ್ರೀಮಂತ್ರದ ೨೪ ಅಕ್ಷರಗಳನ್ನು ನೆನಪಿಸುತ್ತವೆ. ಅವುಗಳು, ಅವು ಒಳಗೊಂಡಿರುವ ಅಷ್ಟಪದಿಗಳು ಹಾಗೂ ರಾಗಗಳು ಹೀಗಿವೆ:

ಸಾಮೋದರ ದಾಮೋದರ : ೧-೪ – ಮಾಯಮಾಳವಗೌಳ, ಗುರ್ಜರಿ, ಲಲಿತ, ರಾಮಕಮರಿ

ಅಕ್ಲೇಶ ಕೇಶವ : ೫-೬ – ಗುರ್ಜರಿ, ಮಾಳವಗೌಳ,

ಮುಗ್ಧ ಮಧುಸೂದನ : ೭ – ಗುರ್ಜರಿ

ಸ್ನಿಗ್ಧ ಮಧುಸೂಧನ : ೮-೯ – ಕರ್ಣಾಟ, ದೇಶಾಖ್ಯ

ಸಾಕಾಂಕ್ಷ ಪುಂಡರೀಕಾಕ್ಷ : ೧೦-೧೧- ದೇಶೀವರಾಡಿ, ಗುರ್ಜರಿ

ಧನ್ಯ ವೈಕುಂಠ ಕುಂಕುಮ : ೧೨ – ಗುಣಕರಿ

ನಾಗರ ನಾರಾಯಣ : ೧೩-೧೬- ಮಾಳವ, ವಸಂತ, ಗುರ್ಜರಿ, ದೇಶವರಾಡಿ

ವಿಲಕ್ಷ್ಯ ಲಕ್ಷ್ಮೀಪತಿ : ೧೭ – ಭೈರವಿ

ಮುಗ್ಧ ಮುಕುಂದ : ೧೮ – ಗುರ್ಜರಿ

ಚತುರ ಚತುರ್ಭುಜ : ೧೯ – ದೇಶವರಾಡಿ

ಸಾನಂದ ದಾಮೋದರ : ೨೦-೨೨- ವಸಂತ, ವರಾಡಿ

ಸುಪ್ರೀತ ಪೀತಾಂಬರ : ೨೩-೨೪- ವಿಭಾಸ ,ರಾಮಕರಿ

ಇದರ ೧೦ನೇ ಸರ್ಗದ ೧೯ನೇ ಅಷ್ಟಪದಿಯ ೭ನೇಯ ಚರಣವನ್ನು ಕುರಿತು ಬರೆಯುವಾಗ, ಕೃಷ್ಣ ಪರಮಾತ್ಮನು ತನ್ನ ತಲೆಯ ಮೇಲೆ ರಾಧೆಯ ಚರಣಕಮಲವನ್ನಿಟ್ಟು ತನ್ನ ಕಾಮಭಾಧೆಯನ್ನು ಹೋಗಲಾಡಿಸು ಎಂದು ರಾಧೆಯಲ್ಲಿ ಕೇಳುವ ಪ್ರಸಂಗವು ಕವಿಗೆ ಹೊಳೆಯುತ್ತದೆ. ಇದು ಮೂರ್ಖತನ, ಅಪಚಾರದ ಕೆಲಸವೆಂದು ತಿಳಿದ ಜಯದೇವ, ಇಂತಹ ವರ್ಣನೆಗಳೂ ಪರಮಾತ್ಮನ ಚಾರಿತ್ರ್ಯವನ್ನು ಅಪವಿತ್ರಗೊಳಿಸೀತು ಎಂದು ಭಾವಿಸಿ ಆ ಪಂಕ್ತಿಗಳನ್ನು ಅಳಿಸಿ ಅಲ್ಲಿಗೇ ಬಿಟ್ಟು ಪದ್ಮಾವತಿಯಲ್ಲಿ ನೀಡಿ ಶುಚಿಯಾಗಲು ಸ್ನಾನಕ್ಕೆ ಹೋದನಂತೆ. ಆಗ ಶ್ರೀಕೃಷ್ಣನು ಜಯದೇವನ ವೇಷ ತಾಳಿ ಬಂದು ಪದ್ಮಾವತಿಯಿಂದ ಕೇಳಿ ಪಡೆದು ಅಳಿಸಿದ ಸಾಲುಗಳನ್ನು ಪುನಃ ಬರೆದು ಹೋದನಂತೆ ! ಸ್ನಾನವನ್ನು ಮುಗಿಸಿ ಹಿಂತಿರುಗಿಬಂದ ಜಯದೇವ ತಾನು ಬರೆಯಬೇಕೆಂದು ಇಚ್ಚಿಸಿದ ವಾಕ್ಯಗಳನ್ನು ಬರೆದವರು ಯಾರು ಎಂಬುದಾಗಿ ಪದ್ಮಾವತಿಯಲ್ಲಿ ಪ್ರಶ್ನಿಸಿದ. ಆಶ್ಚರ್ಯಚಕಿತಳಾದ ಆಕೆ ಆಗ ಬಂದು ಬರೆದುಹೋದ ಜಯದೇವನ ಸಂಗತಿಯನ್ನು ತಿಳಿಸಲಾಗಿ ಪರಮಾತ್ಮನ ಲೀಲೆಯನ್ನು ನೆನೆದು ಪದ್ಮಾವತಿಯ ಪುಣ್ಯವನ್ನು ಕೊಂಡಾಡಿದನಂತೆ!

ಜೊತೆಗೆ ಲಕ್ಷ್ಮಣಸೇನನ ಅಸ್ಥಾನದಲ್ಲಿದ್ದಾಗ, ದೊರೆಯು ಬೇಟೆಗೆ ಕರೆದುಕೊಂಡು ಹೋದ ಸಮಯದಲ್ಲಿ ಅಸೂಯಾಪರಳಾದ ಆತನ ರಾಣಿಯು ಪದ್ಮಾವತಿಯಲ್ಲಿ ಜಯದೇವನು ಮರಣ ಹೊಂದಿದನೆಂದು ಸುಳ್ಳು ಹೇಳುತ್ತಾಳೆ. ಇದರಿಂದ ನೊಂದ ಪದ್ಮಾವತಿ ಕೆಳಕ್ಕೆ ಬಿದ್ದು ಸಾವಿಗೀಡಾಗುತ್ತಾಳೆ. ಹಿಂತಿರುಗಿ ಬಂದ ಜಯದೇವ ವಿಷಯ ತಿಳಿದು, ಈರ್ವರನ್ನೂ ಸಮಾಧಾನಿಸಿ ಆ ಅಷ್ಟಪದಿಯನ್ನು ಹಾಡಿ ಆಕೆಯನ್ನು ಜೀವಂತಳನ್ನಾಗಿಸಿದ ಎನ್ನಲಾಗಿದೆ. ಆದ್ದರಿಂದ ಸ್ವಯಂ ಪರಮಾತ್ಮನೇ ಬಂದು ಕೃತಿಯನ್ನು ಸ್ವೀಕರಿಸಿದ್ದರಿಂದ ಆ ಸಾಲುಗಳ ೧೯ನೇ ಅಷ್ಟಪದಿಯನ್ನು ದರ್ಶನ ಅಷ್ಟಪದಿಯೆಂದು, ಸಂಜೀವಿನಿ ಅಷ್ಟಪದಿಯೆಂದು ಹೇಳುತ್ತಾರೆ.

ಅಷ್ಟಪದಿ ದ್ವಿಧಾತು ಪ್ರಬಂಧ. ಅಂದರೆ ಉದ್ಗ್ರಾಹ(ಚರಣ) ಮತ್ತು ದ್ರುವ( ಪಲ್ಲವಿ) ಎಂಬ ಎರಡು ಭಾಗಗಳಿವೆ. ಈ ರೀತಿಯ ಪ್ರಬಂಧವನ್ನು ರಚಿಸಿರುವ್ವರಲ್ಲಿ ಜಯದೇವನು ಮೊದಲಿಗನು. ಸಾಕಷ್ಟು ಸಲ ಅಂತ್ಯಪ್ರಾಸವನ್ನು ಹೊಂದಿರುವ ಇವು ಅಲಂಕಾರ, ಯಮಕಗಳಿಂದ ಕೂಡಿವೆ. ಜಯದೇವನು ಗೀತಗೋವಿಂದವನ್ನು ಶೃಂಗಾರ ಮಹಾಕಾವ್ಯವೆಂದು ಕರೆದುಕೊಂಡಿದ್ದಾನೆ. ಕೆಲವೊಂದೆಡೆ ಗೇಯಗುಣಗಳುಳ್ಳ ಪ್ರಬಂಧವೆಂದು ಕರೆದಿದ್ದಾನೆ. ಆದರೆ ಮಹಾಕಾವ್ಯಗಳಿಗಿರಬೇಕಾದ ಲಕ್ಷಣಗಳಿಲ್ಲವೆನ್ನುವುದು ಕಾವ್ಯ ಮೀಮಾಂಸಿಗರ ತರ್ಕ. ಅವರ ಪ್ರಕಾರ ಇದು ಖಂಡಕಾವ್ಯ. ಅತ್ತಭಾವಗೀತೆಯೂ ಅ, ಇತ್ತ ನಾಟಕವೂ ಅಲ್ಲ ಎಂಬಂತಿರುವುದು ಇದರ ಸ್ವಾರಸ್ಯ. ಇದೊಂದು ಗೀತ ಪ್ರಧಾನವಾದ ಪ್ರಬಂಧರೂಪದ ಭಾವಾತಿರೇಕದ ವರ್ಣನಾತ್ಮಕ, ಕಲ್ಪನಾ ಕಥಾಮೃತ. ಒಟ್ಟಿನಲ್ಲಿ ಗೀತಗೋವಿಂದ ಪ್ರೇಮ-ಭಕ್ತಿಗೀತೆಗಳ ರತ್ನ. ಸುಂದರ ಪ್ರಣಯ ಪ್ರಪಂಚ, ಮಧುರಭಕ್ತಿಯ ಅಪೂರ್ವ ಸಂಯೋಗ ಚಿತ್ರಣ.

ಈ ಗೀತಗೋವಿಂದವನ್ನೇ ಅನುಕರಿಸಿ ಕೆಲವು ಕಾವ್ಯ, ಅಷ್ಟಪದಿಗಳು ಸಿದ್ಧವಾದದ್ದಿದೆ. ಉದಾ- ಹರಿಶಂಕರನ ಗೀತರಾಘವ, ರಾಮಭಟ್ಟನ ಗೀತಗಿರೀಶ, ವಂಶಮಣಿಯ ಗೀತದಿಗಂಬರ, ಪುರುಷೋತ್ತಮಮಿಶ್ರನ ಅಭಿನವ ಗೀತಗೋವಿಂದ, ಚತುರ್ಭುಜನ ಗೀತಗೋಪಾಲ, ಸದಾಶಿವ ದೀಕ್ಷಿತನ ಗೀತಸುಂದರ, ಅನಂತನಾರಾಯಣನ ಗೀತಶಂಕರ, ತಿರುಮಲನ ಗೀತಗೌರೀ, ಚಿಕ್ಕದೇವರಾಜ ಒಡೆಯರ್ ಅವರ ಗೀತಗೋಪಾಲ, ಕಳಲೆ ನಂಜರಾಜಾನ ಗೀತಗಂಗಾಧರ, ವೆಂಕಟಮುಖಿಯ ತ್ಯಾಗರಾಜಾಷ್ಟಪದಿ, ಉಪನಿಷದ್ ಬ್ರಹ್ಮೇಂದ್ರರ ರಾಮಾಷ್ಟಪದಿ, ಕಂಚಿ ಮಠದ ಚಂದ್ರಶೇಖರೇಂದ್ರ ಸರಸ್ವತಿಗಳ ಶಿವಗೀತಮಾಲಿಕೆ, ಧುಂಡಿರಾಜ ಕವಿಯ ಷಾಹಾವಿಲಾಸಗೀತ..ಹೀಗೆ.

ಆದರೆ, ಗೀತಗೋವಿಂದವು ಜಯದೇವ ಕವಿಯ ಅಂತರಾತ್ಮದ ಗೀತೆಯಾಗಿರುವುದರಿಂದಲೋ ಏನೋ, ಪರಮಾತ್ಮನ ಕುರಿತಾಗಿ ಪ್ರಣಯಲೀಲೆ, ಮಿಲನದ ನಿರೂಪಣೆಯಿರುವ ಮತ್ಯಾವ ಕಾವ್ಯವೂ ಇಷ್ಟೊಂದು ಸ್ವಾರಸ್ಯವಾಗಿಲ್ಲ. ಇದರಲ್ಲಿರುವ ಸಂಗೀತದ ಗುಣ, ಪರಮಾತ್ಮನ ಧ್ಯಾನ, ಶೃಂಗಾರ ಸಾರ ಈ ಮೂರು ಗುಣಗಳು ಮತ್ತೆಲ್ಲಾ ಕಾವ್ಯಗಳಿಗಿಂತ ಜನಪ್ರಿಯವಾಗಿಸುವಲ್ಲಿ, ಹೆಗ್ಗಳಿಕೆ ಪಡೆಯುವಲ್ಲಿ ಕಾರಣವೆನಿಸಿವೆ. ಜೊತೆಗೆ ಸಂಬಂಧಿಸಿದ ಒಂದಷ್ಟು ಪವಾಡಸದೃಶ ಕಥೆಗಳೂ ಮಹಿಮೆಯನ್ನು ಹೆಚ್ಚು ಮಾಡಿವೆ.

ಪರಮಾತ್ಮನಲ್ಲಿ ಭಕ್ತನು ಇಟ್ಟಿರುವ ಪ್ರೀತಿ-ನಂಬಿಕೆ-ಭಕ್ತಿ, ಮಧುಮಾಸ, ಯಮುನಾತೀರ, ಬೃಂದಾವನ, ಶೃಂಗಾರ ರಸ, ರಸಿಕತೆ ಇಲ್ಲಿನ ಕಥಾವಸ್ತು. ಆದರೂ ಇದರಲ್ಲಿ ಕಥೆ, ಕಥನಗಳೇನೂ ಇಲ್ಲ. ವಿಶಿಷ್ಟ ಪ್ರಸಂಗ ವರ್ಣನೆಯಿಲ್ಲ. ಬ್ರಹ್ಮವೈವರ್ತ ಪುರಾಣದಲ್ಲಿ ಬರುವ ಒಂದು ಪ್ರಸಂಗವನ್ನು ಆಧರಿಸಿ ಇಡೀ ಕಾವ್ಯ ರಚಿತವಾಗಿರಬಹುದೆಂದು ಊಹೆ. ಇಲ್ಲಿ ರಾಧೆ, ಕೃಷ್ಣ, ಸಖಿಯ ಪಾತ್ರಗಳಿದ್ದು ಲಾಲಿತ್ಯ, ಸರಳತೆಯುಳ್ಳ ಮಾನವ ಸಹಜ ಭಾವನಿರೂಪಣೆಯಿದೆ.

ಕಾವ್ಯದ ನಾಯಕ ಕೃಷ್ಣ. ಅವನ ಸ್ವಭಾವ ಧೀರ ಲಲಿತ. ಕಾವ್ಯದ ಕ್ರಿಯೆ ಕೃಷ್ಣನ ಶುದ್ಧ ಶೃಂಗಾರ-ಪ್ರಣಯ. ಆದರೂ ಅಷ್ಟವಿಧ ನಾಯಿಕೆಯರ, ಚತುರ್ವಿಧ ನಾಯಕರ ಲಕ್ಷಣಗಳು ಹೇರಳವಾಗಿ ಕಂಡುಬರುತ್ತವೆ. ಕೆಲವು ಪದಗಳಲ್ಲಿ ಅಶ್ಲೀಲವೆನಿಸುವ ಭಾವಗಳು ಎದುರಾದರೂ, ಕಾಮಪ್ರಚೋದನೆ ಈ ಕಾವ್ಯದ ಉದ್ದೇಶ ಅಲ್ಲ. ಇಲ್ಲಿನದು ಇಂದ್ರಿಯಗ್ರಾಹ್ಯ, ಕ್ಷುದ್ರ, ಸ್ವಾರ್ಥಪರ, ಸುಖಾಪೇಕ್ಷಿ ಲೈಂಗಿಕವಿಜ್ಞಾನದ ಕೀಳು ಪ್ರೇಮವಲ್ಲ. ಸುಖದಾಂಪತ್ಯಸಾಧನೆಯ ಬಿಟ್ಟಿ ಸಲಹೆಗಳಿಲ್ಲಿಲ್ಲ. ಕೃಷ್ಣನಿಗಾಗಿ ರಾಧೆ ಕಾಯುವುದು, ಆಪ್ತಸಖಿಯು ಕೃಷ್ಣನು ಗೋಪಿಕೆಯರೊಂದಿಗೆ ವಿಹರಿಸುತ್ತಿರುವ ಬಗ್ಗೆ ಹೇಳುವುದು, ರಾಧೆಯ ಪರಿತಾಪ, ರಾಧೆಯ ಸಂತೈಕೆಗೆ ಕೃಷ್ಣನು ಸಖಿಯಲ್ಲಿ ಬೇಡುವುದು, ಆಕೆಯ ವಿವಿಧ ಅವಸ್ಥೆಗಳ ವಿವರಣೆ, ಕೃಷ್ಣನ ಮೇಲೆ ರಾಧೆಯ ಆಕ್ರೋಶ, ಪರಸ್ಪರ ಕ್ಷಮಾಪಣೆ, ವಿಲಾಪ, ರಾಧಾಕೃಷ್ಣರ ಸಂಗಮ ಈ ರೀತಿಯಾಗಿ ಹೃದಯಂಗಮ, ಮನಃಸ್ಪರ್ಶಿ, ರೋಮಾಂಚನಕಾರಿ ಸನ್ನಿವೇಶ. ಪರಸ್ಪರ ಅನುರೂಪವಾದ ಮಹಿಮಾಮಯ ವ್ಯಕ್ತಿಗಳ ಅವಿನಾಭಾವ ಸಂಯೋಗ, ಪ್ರೇಮಾರಾಧನೆ. ಸಂಪೂರ್ಣ ಲಯ ಹೊಂದುವ ಅಲೌಕಿಕ, ಅತಿಮಾನುಷ, ಅನಿರ್ದಿಷ್ಟ ಸೂಕ್ಷ್ಮ ಪ್ರೇಮದ ಚಿತ್ರಣ.

ಜಯದೇವ ಕವಿಯೇ ಈ ಗೀತೆಗಳಿಗೆ ಆ ಕಾಲದ ರಾಗತಾಳಗಳನ್ನು ಪ್ರಯೋಗಿಸಿದ್ದರೂ, ಅವ್ಯಾವುವೂ ಚಾಲ್ತಿಯಲ್ಲಿಲ್ಲ. ನಂತರ ಗೀತಗೋವಿಂದಕ್ಕೆ ರಾಗತಾಳಗಳ ಗಾನಕ್ರಮ ವ್ಯವಸ್ಥೆ ಮಾಡಿದವನು ಮೇವಾಡದ ರಾಜ ರಾಣಾಕುಂಭ. ಜಯದೇವನಿಗೂ ಇವನಿಗೂ ೨೦೦ ವರ್ಷಗಳ ಅಂತರ. ಇವನ ಪದ್ಧತಿ ಹಿಂದೂಸ್ಥಾನಿ ಸಂಗೀತಕ್ಕೆ ಒಪ್ಪುವ ಕ್ರಮವಾದರೆ, ತಿರುಮಲರಾಜಪಟ್ಟಣದ ರಾಮುಡು ಭಾಗವತರು ಕರ್ನಾಟಕ ಸಂಗೀತಕ್ಕೊಪ್ಪೂವ ಸ್ವರೂಪ ಅಳವಡಿಸಿದರು. ಈಗ, ಉತ್ತರ ಭಾರತದಲ್ಲಿ ದೇಶೀಯ ರಾಗದಲ್ಲಿ ಹಾಡುವ ವಾಡಿಕೆಯಿದ್ದರೆ, ಕೆಲವು ಕಲಾವಿದರು ರೂಢಿಯಲ್ಲಿರುವ ಮತ್ತು ತಮ್ಮ ಕಲ್ಪನಾಶಕ್ತಿಗನುಗುಣವಾಗಿ ಹಾಡಿ ಅಭಿನಯಿಸುತ್ತಾರೆ.

ಅಷ್ಟಪದಿಯು ನೃತ್ಯನಾಟಕಕ್ಕೆ ಹೆಚ್ಚಾಗಿ ಒಪ್ಪುವಂತಹ ಕಾವ್ಯ. ಆದರೂ ಇದರಲ್ಲಿನ ಉತ್ಕೃಷ್ಟ ಮಟ್ಟದ ಛಂದೋರಚನೆಯು ಸಂಗೀತ ಮತ್ತು ನೃತ್ಯದ ಎಲ್ಲಾ ಪ್ರಕಾರಗಳಿಗೆ ಅಡಕಗೊಳ್ಳುವಂತಿದ್ದು, ಎಲ್ಲಾ ರೀತಿಯ ನೃತ್ಯಗಳಲ್ಲೂ ಇದನ್ನು ಆಕರ್ಷಕವಾಗಿ ಸಂಯೋಜಿಸಬಹುದು. ಒಡಿಸ್ಸಿ ನೃತ್ಯ ಪ್ರಕಾರದಲ್ಲಿ ಅಷ್ಟಪದಿಯೇ ಪ್ರಮುಖ ನೃತ್ಯ. ಇಂದಿಗೂ ಪೂರಿ ಜಗನ್ನಾಥ ದೇವಾಲಯದಲ್ಲಿ ಪ್ರತೀದಿನ ಸಂಜೆ ಗೀತಗೋವಿಂದವನ್ನು ಶಾಸ್ತ್ರವತ್ತಾಗಿ ಹಾಡಿ ಮಂಗಳಾರತಿಯೆತ್ತುವ, ಎರಡು ಅಷ್ಟಪದಿಗಳನ್ನಾದರೂ ಹಾಡಿ ಅಭಿನಯಿಸುವ ಪದ್ಧತಿಯಿದೆ. ವೈಷ್ಣವ ಕ್ಷೇತ್ರಗಳಲ್ಲಿ ಮಾರ್ಗಶೀರ್ಷ ಮಾಸದಲ್ಲಿ ನಡೆಯುವ ರಾಧಾಮಾಧವ ವಿವಾಹ ಉತ್ಸವಗಳಲ್ಲಿ ಅಷ್ಟಪದಿಗಳಗೆ ಮುಖ್ಯ ಸ್ಥಾನವಿದೆ. ಕಥಕ್ಕಳಿ, ಕೃಷ್ಣನಾಟಕ, ಸೋಪಾನ ಸಂಗೀತಗಳಿಗೆ ಇದರ ಪ್ರಭಾವ ಬಹಳಷ್ಟಿದೆ. ಮೈಸೂರು ಶೈಲಿಯ ಭರತನಾಟ್ಯಗಳಲ್ಲಿ ಅಷ್ಟಪದಿಗಳ ಅಭಿನಯಕ್ಕೆ ಮೇರು ಪಂಕ್ತಿ.

ಸಂಸ್ಕೃತವನ್ನು ಅರಿಯದವರಿಗೂ ಆದರಣಿಯವಾಗಬಲ್ಲ ಮಾತುಗಳ ಜೋಡಣೆಯ ಮಾಧುರ್ಯ ಇಲ್ಲಿನದು. ಭಾಷೆ ಬರದವನೂ ಭಾವಪರವಶನಾಗಬಲ್ಲ ಎನ್ನುತ್ತಾರೆ ತ. ಸು. ಶಾಮರಾಯರು. ಚಂದ್ರದತ್ತ ಎಂಬವರು ಭಕ್ತಿಮಾಲಾ ಎಂಬ ಸಂಸ್ಕೃತ ಗ್ರಂಥದಲ್ಲಿ ಜಯದೇವನ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಕನ್ನಡದಲ್ಲಿ ಪ್ರೊ| ಎಸ್.ಕೆ.ರಾಮಚಂದ್ರರಾವ್ ಅವರ ಪುಟ್ಟ ಪುಸ್ತಕಗಳನ್ನೂ ಒಳಗೊಂಡಂತೆ ಹಲವು ನೃತ್ಯ-ಸಂಗೀತ ಸಾಹಿತ್ಯ ಸಂಬಂಧಿ ಪುಸ್ತಕಗಳು ನಮ್ಮೆದುರಿಗಿವೆ. ಜೊತೆಗೆ ಸಾಕಷ್ಟು ಅವತರಣಿಕೆಗಳು, ಅನುವಾದಗಳು ಎಲ್ಲ ಭಾಷೆಗಳಲ್ಲೂ ಬಂದಿವೆ. ಬಹುಷಃ ಇದನ್ನು ಓದದೇ, ಅಭಿನಯಿಸದೇ ಇರುವ ಯಾವ ಶಾಸ್ತ್ರೀಯ ಕಲಾವಿದನೂ ಇರಲು ಸಾಧ್ಯವಿಲ್ಲವೇನೋ ! ಆದರೆ ಅಭಿನಯ ಕರಗತ ಮಾಡಿಕೊಳ್ಳಲು ಹಲವಾರು ವರ್ಷಗಳ ಸಾಧನೆ ಅತ್ಯಗತ್ಯ. ಹಾಗಾಗಿ ಕಲೆಯಲ್ಲಿ ಪರಿಪಕ್ವತೆಯನ್ನು ಪಡೆದ ಶುದ್ಧ ಮನಸ್ಸಿನ ಕಲಾವಿದರು ಮಾತ್ರ ಅಷ್ಟಪದಿಗಳಿಗೆ ಜೀವ ತುಂಬಬಲ್ಲರು.

Leave a Reply

*

code