ಅಂಕಣಗಳು

Subscribe


 

ಮಕ್ಕಳಿಗೂ ಮಾನ್ಯತೆ ಇರಲಿ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


-ನಿಡುವಜೆ ರಾಮ ಭಟ್, ಉಡುಪಿ

ಅನೇಕ ಸಂಘ-ಸಂಸ್ಥೆಗಳು ಇಂದು ರಿಯಾಲಿಟಿ ಷೋ ಹೆಸರಿನಲ್ಲಿ ಯಾವುದೋ ನೃತ್ಯ ಪ್ರದರ್ಶನಗಳಿಗೆ ಅವಕಾಶ ನೀಡುವುದನ್ನು ನೋಡುತ್ತೇವೆ. ಜೊತೆಗೆ ಇಂತಹ ಷೋಗಳತ್ತ ಯುವ ಜನತೆ ಆಕರ್ಷಿತರಾಗುವುದನ್ನೂ ಕಾಣುತ್ತೇವೆ. ಉತ್ತರಭಾರತದಲ್ಲಿ ಇಂತಹ ರಿಯಾಲಿಟಿ ಷೋದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಹೊರಟ ಶಿಂಜಿನಿಯ ನೃತ್ಯವನ್ನು ತೀರ್ಪುಗಾರರು ಕಳಪೆ ಪ್ರದರ್ಶನವೆಂದು ಟೀಕಿಸಿರುವುದು, ತೀರ್ಪುಗಾರರೇ ಅವಹೇಳನ ಮಾಡಿರುವುದರ ಪರಿಣಾಮವಾಗಿ ಆ ಬಾಲೆ ತೀವ್ರ ಖಿನ್ನತೆಗೊಳಗಾಗಿ ಆಸ್ಪತ್ರೆ ಸೇರಿ ಚೈತನ್ಯವನ್ನೇ ಕಳೆದುಕೊಂಡು ಸಾವು-ಬದುಕಿನ ನಡುವೆ ಸೆಣಸಬೇಕಾಗಿ ಬಂದುದು ಇತ್ತೀಚೆಗೆ ಸಾಂಸ್ಕೃತಿಕ ರಂಗವನ್ನೂ ಒಳಗೊಂಡಂತೆ ಮಾಧ್ಯಮಗಳ ಕಮರ್ಷಿಯಲ್ ಭಯೋತ್ಪಾದಕತೆಯ ದೊಡ್ಡ ಸುದ್ದಿ.

ಬೆಳೆಯುವ ಮಕ್ಕಳಿಗೆ ಪುಷ್ಟಿಕರವಾದ ಆಹಾರ, ಪ್ರೀತಿ, ಮಮತೆಗಳಂತೆ ಮಾನ್ಯತೆ-ಪ್ರೋತ್ಸಾಹಗಳೂ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಅತ್ಯಗತ್ಯ. ಮಗು ಬೆಳವಣಿಗೆಯ ಒಂದೊಂದು ಮೆಟ್ಟಲನ್ನು ಹತ್ತಿದಾಗ ಮತ್ತು ಹೊಸ ಕೌಶಲವನ್ನು ಕಲಿತಾಗ, ಅದು ಮೆಚ್ಚುಗೆಗಾಗಿ, ಮಾನ್ಯತೆಗಾಗಿ ತಂದೆ ತಾಯಿಗಳತ್ತ, ಉಪಾಧ್ಯಾಯರತ್ತ, ಹಿರಿಯರತ್ತ ನೋಡುತ್ತದೆ. ಅವರು ಅದರ ಸಾಧನೆಯನ್ನು ಗುರುತಿಸಿ, ಭೇಷ್ ಎಂದರೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿರೆ, ಅದು ಇಮ್ಮಡಿ ವೇಗದಿಂದ ಮತ್ತಷ್ಟು ಸಾಧಿಸಲು, ಕಲಿಯಲು ಮುಂದಾಗುತ್ತದೆ. ಶಾಲೆಯಲ್ಲಿ ಉಪಾಧ್ಯಾಯರ ಮೆಚ್ಚುಗೆ ಗಳಿಸಲು, ಪ್ರಿಯ ಶಿಷ್ಯನಾಗಲು ಮಕ್ಕಳ ನಡುವೆ ತೀವ್ರ ಸ್ಪರ್ಧೆ ಇರುತ್ತದೆ. ಆದರೆ ಇದಕ್ಕೆ ಶಿಂಜಿನಿ ಪ್ರಕರಣ ವ್ಯತಿರಿಕ್ತವಾಗಿದೆ. ಮಾತ್ರವಲ್ಲ, ತೀರ್ಪುಗಾರರ ಕಟು ನುಡಿ ಪ್ರಶ್ನಾರ್ಹವಾಗಿದೆ.

ಬಹಳ ಸಂದರ್ಭಗಳಲ್ಲಿ ತೀರ್ಪುಗಾರರು ಹೇಳುವ ಮಾತು ಇದು.- ಇಂದಿನ ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳೂ ಚೆನ್ನಾಗಿಯೇ ಭಾಗವಹಿಸಿ ಪ್ರತಿಭೆ ತೋರಿದ್ದಾರೆ. ಯಾರಿಗೆ ಬಹುಮಾನ ಕೊಡುವುದು ಎಂಬ ಗೊಂದಲಕ್ಕೆ ನಾವು ಒಳಗಾಗುವಷ್ಟು ಚೆನ್ನಾಗಿಯೇ ಸಾಮರ್ಥ್ಯ ತೋರಿದ್ದೀರಿ. ಪ್ರಥಮ, ದ್ವಿತೀಯ, ತೃತೀಯ ಎಂಬ ೩ ಸೀಮಿತ ಬಹುಮಾನಗಳಿರುವುದರಿಂದ ಉಳಿದವರು ಬಹುಮಾನ ವಂಚಿತರಾಗುವುದು ಸಹಜವೇ. ಹಾಗೆಂದು ಇಲ್ಲಿ ನಿಮ್ಮ ಪರಿಶ್ರಮ ವ್ಯರ್ಥವೆಂದು ಅರ್ಥವಲ್ಲ, ಸ್ಪರ್ಧೆ ಇರುವುದು ನಮ್ಮ ಒಳಗಿನ ಪ್ರತಿಭೆ ಪ್ರಕಾಶಿಸುವುದಕ್ಕೆ. ಅದಕ್ಕೆ ಉತ್ತಮ ವೇದಿಕೆ ಸಿಕ್ಕಿದೆ. ಸೋಲು-ಗೆಲುವು ಸಾಮಾನ್ಯ. ಸ್ಪರ್ಧಿಗಳು ಯಾವ ರೀತಿ ತಪ್ಪಿದ್ದಾರೆ, ಅದನ್ನು ಮುಂದಕ್ಕೆ ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ಆಲೋಚಿಸಬೇಕು.- ಇಂತಹ ಪ್ರೋತ್ಸಾಹ್ಭರಿತ ಮಾತುಗಳಿದ್ದರೆ ವಿಫಲರಾದ ಯಾವುದೇ ಅಭ್ಯರ್ಥಿಗಳೂ ಮಾನಸಿಕವಾಗಿ ನೊಂದುಕೊಳ್ಳುವುದಿಲ್ಲ, ಕುಗ್ಗುವುದಿಲ್ಲ. ತಮ್ಮ ಪ್ರಯತ್ನದಲ್ಲಿ ಯಾವ ರೀತಿ ಸೋತಿದ್ದೇವೆ ಎಂಬುದನ್ನು ಅರ್ಥೈಸಿಕೊಳ್ಳಲು ಮುಂದಾಗುತ್ತಾರೆ. ಮುಂದಕ್ಕೆ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ. ಜೊತೆಗೆ, ತೀರ್ಪುಗಾರರ ಇಂತಹ ನುಡಿಗಳು ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ತೀರ್ಪುಗಾರರ ಘನತೆಯನ್ನೂ ಎತ್ತಿ ಹಿಡಿಯುತ್ತದೆ. ಆದರೆ, ಈಗಿನ ಮಾಧ್ಯಮದ ರಿಯಾಲಿಟಿ ಷೋಗಳಲ್ಲಿ ಇಂತಹ ಮಾತುಗಳಿಗೆ ಬೆಲೆಯೇ ಇಲ್ಲವೇನೋ! ಒಟ್ಟಿನಲ್ಲಿ ತವ್ಮೂಳಗಿನ ಮಾಧ್ಯಮ ಪೈಪೋಟಿಗಾಗಿ ಟಿ‌ಆರ್‌ಪಿ ರೇಟ್ ಹೆಚ್ಚಾಗಲು, ಎಂತಹ ಕೀಳು ಮಟ್ಟಕ್ಕೂ ಇಳಿದರೆ ಅದರ ಸಂತ್ರಸ್ತರು ಸ್ಫರ್ಧಿಗಳೇ ಹೌದು!

ತೀರ್ಪುಗಾರರೂ ಎಡವಿ ಬೀಳುತ್ತಾರೆ ಎನ್ನುವುದು ಇದಕ್ಕೇ! ಸ್ಪರ್ಧಿಗಳ ಬಗ್ಗೆ ಗಮನವಿಡದೇ ತಮ್ಮೊಳಗೇ ಬೇರೆ ವಿಚಾರಗಳನ್ನು ಮಾತಾಡುವುದು, ಮುಖ ತಿರುವುವುದು, ಮೊಬೈಲ್ ಮೆಸೇಜ್-ಸಂಭಾಷಣೆ, ಅನಗತ್ಯ ಪ್ರಶೆಗಳನ್ನು ಎತ್ತುವುದು – ಇಂತಹ ಲೋಪಗಳು ಇದೀಗ ಸಂಗೀತ-ನೃತ್ಯ ಪರೀಕ್ಷೆಗಳನ್ನೂ ಸ್ಪರ್ಹೆಗಳಲ್ಲೂ ಸಾಮಾನ್ಯವೆನಿಸಿದೆ. ಸ್ಪರ್ಧೆಯ ಕೊನೆಯಲ್ಲಿ ಯಾರಿಗೂ ನೋವಾಗದಂತೆ, ಸ್ಪರ್ಧೆಯ ಮಹತ್ವ, ಬಹುಮಾನ ವಂಚಿತರು ಯಾವ ರೀತಿಯಲ್ಲಿ ತಪ್ಪಿದ್ದಾರೆ, ಮುಂದಕ್ಕೆ ಅವರು ಹೇಗೆ ಸರಿಪಡಿಸಿಕೊಳ್ಳಬಹುದು, ಹಾಗೂ ಮುಂಬರುವ ದಿನಗಳಲ್ಲಿ ಅವರಿಗೂ ಶುಭವಾಗಲಿ ಎಂದು ಹಾರೈಸುವುದು ತೆರೆಮರೆಗೆ ಸರಿದಿದೆ.

ನಮ್ಮೂರಿನಲ್ಲಿ ಶಾಲಾ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳ ಕಂಠಪಾಠ ಸ್ಪರ್ಧೆ ಏರ್ಪಟ್ಟಿತ್ತು. ಕೆಲ ಮಕ್ಕಳು ಇಂಪಾದ ಕಂಠದಿಂದ ಹಾಡಿದ್ದರು. ಆದರೆ ಅಷ್ಟೇನೂ ಇಂಪಾಗಿ ಹಾಡದ ಅಭ್ಯರ್ಥಿಗೆ ಪ್ರಥಮ ಬಹುಮಾನ ಬಂದಿತ್ತು. ಬಹಳ ಮಂದಿಗೆ ಇಲ್ಲಿ ತೀರ್ಪುಗಾರರ ತೀರ್ಮಾನದ ಬಗ್ಗೆ ಸಂಶಯವಾಗಿತ್ತು. ತೀರ್ಪುಗಾರರು ಇಲ್ಲಿ ತಮ್ಮ ಸ್ಪಷ್ಟೀಕರಣವನ್ನು ನೀಡುತ್ತಾ, ಭಗವದ್ಗೀತೆಯ ಶ್ಲೋಕದಲ್ಲಿ ಹೇಳುವಾಗ ಅಲ್ಪಪ್ರಾಣ ಮಹಾಪ್ರಾಣ, ದೀರ್ಘ-ಹ್ರಸ್ವ ಸ್ವರಗಳ ಸ್ಪಷ್ಟ ಉಚ್ಛಾರದ ಮಹತ್ವದ್ದಾಗಿದೆ. ಇಂಪಾಗಿ ಹಾಡಿದ ಅನೇಕ ಮಕ್ಕಳು ಅಲ್ಪಪ್ರಾಣ-ಮಹಾಪ್ರಾಣಗಳ ಉಚ್ಛಾರದಲ್ಲಿ ಹೇಗೆ ತಪ್ಪಿದ್ದಾರೆ, ಅಂತಹ ಶಬ್ದಗಳಿಂದಾಗಿ ಹೇಗೆ ಅರ್ಥ ಅನರ್ಥಗಳಾಗುತ್ತವೆ. ಹಾಗಾಗಿ ಪ್ರಥಮ ಬಹುಮಾನ ಪಡೆದ ಅಭ್ಯರ್ಥಿ ತನ್ನ ಉಚ್ಛಾರದ ಬಗ್ಗೆ ಸಾಕಷ್ಟು ಎಚ್ಚರ ವಹಿಸಿರುವುದನ್ನು ನಾವು ಗಮನಿಸಿ ಅಂಕಗಳನ್ನು ನೀಡಿದ್ದೇವೆ ಎಂದಿದ್ದರು. ಇಂತಹ ತಿಳಿಸಿ ಹೇಳುವ ಮನೋಭಾವನೆ ಎಷ್ಟು ಮಂದಿ ತೀರ್ಪುಗಾರರಿಗಿದೆ?

ಸ್ಪರ್ಧೆಗಳ ಸಂದರ್ಭದ ಹೆತ್ತವರ ನಡೆ-ನುಡಿಗಳೂ ಕೂಡಾ ಪ್ರಶ್ನಾರ್ಹವೇ! ಸ್ಪರ್ಧೆಯಲ್ಲಿ ಬಹುಮಾನ ಗಳಿಕೆಯ ಹಾಗೂ ತಮ್ಮ ಪ್ರತಿಷ್ಠೆಯ ದೃಷ್ಟಿಯನ್ನಿಟ್ಟುಕೊಂಡು ಮಕ್ಕಳ ಶ್ರಮದ ಮೇಲೆ ವಿಪರೀತ ಒತ್ತಡ ಹೇರುವುದು, ಇತರ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಹೋಲಿಸಿಕೊಂಡು ಮಕ್ಕಳನ್ನು ಹೀಯಾಳಿಸುವುದು, ಸ್ಪರ್ಧೆಯ ಬಹುಮಾನದ ದೊಡ್ಡ ಮೊತ್ತದ ಆಸೆಯಿಂದ ಮಕ್ಕಳಿಗೇ ಆಮಿಷವನ್ನೊಡ್ಡುವುದು ಮುಂತಾದವುಗಳಿಂದ ಮಕ್ಕಳು ತೀವ್ರ ಮಾನಸಿಕ ಒತ್ತಡದಿಂದಾಗಿ ಆತಂಕ ಮನೋಬೇನೆ(ಖಿನ್ನತೆ)ಗೆ ಒಳಗಾಗುತ್ತಿದ್ದಾರೆ. ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಇಂತಹ ಅಪಾಯಗಳ ಸಾಧ್ಯತೆಯ ಬಗ್ಗೆ ಹೆತ್ತವರು ಯೋಚಿಸಿ, ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಆರೋಗ್ಯಕರ ಸ್ಪರ್ಧೆಗೆ ಮುಂದಾಗುವಂತೆ ತಿಳುವಳಿಕೆಯನ್ನು ನೀಡಬೇಕಾದದ್ದು ಜವಾಬ್ದಾರಿ. ಆದರೆ ಮುಂಚಿತವಾಗಿ ಸಾಕಷ್ಟು ತಯಾರಿ ನಡೆಸಿದ ಮೇಲೂ ಸ್ಪರ್ಧೆಯ ದಿನವೂ ಕೂಡಾ ಮತ್ತಷ್ಟು ಒತ್ತಡ ಹಾಕುವುದು ಈಗಿನ ಹೆತ್ತವರ ಪರಿಪಾಠವೆನಿಸಿದೆ. ಸ್ವಲ್ಪವೇ ಅಂತರದಲ್ಲಿ ಕಡಿಮೆ ಅಂಕ ಗಳಿಸಿ ವಿಫಲರಾದಾಗ, ಮಕ್ಕಳನ್ನು ಯಾವುದೇ ರೀತಿಯಲ್ಲಿ ಹಂಗಿಸದೇ, ದೂಷಿಸದೇ ಒಳ್ಳೆಯ ರೀತಿ ಸ್ಪರ್ಧೆ ನೀಡಿದ್ದಿ, ಆದಾಗ್ಯೂ ಬಹುಮಾನ ಬಂದಿಲ್ಲವೆಂದು ಬೇಸರಿಸಬೇಡ, ಮುಂದಿನ ಬಾರಿ ಉತ್ತಮ ಅವಕಾಶ ಖಂಡಿತ ದೊರಕುತ್ತದೆ ಎಂಬ ಸಾಂತ್ವನದ ನುಡಿಯನ್ನು ಹೇಳುವುದರ ಬದಲು ಮೂದಲಿಸುವ ಅಭ್ಯಾಸ, ಮಕ್ಕಳಲ್ಲಿ ಕೀಳರಿಮೆ ಮೂಡುವಂತೆ ಮಾಡುತ್ತದೆ ಮಾತ್ರವಲ್ಲದೆ ತನ್ನ ಅವರ ಮುಂದಿನ ಪ್ರಯತ್ನಕ್ಕೂ ಅಡ್ಡಗಾಲು ಹಾಕುತ್ತದೆ.

ಶಿಂಜಿನಿಯ ಘಟನೆಯ ತಪ್ಪು-ಒಪ್ಪುಗಳ ಬಗ್ಗೆ ಇಲ್ಲಿ ಹೆಚ್ಚು ಪ್ರಸ್ತಾಪಿಸಿಲ್ಲ. ಆದರೆ ದೊಡ್ಡ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸುವಲ್ಲಿ ಹಾಗೂ ಅಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಾಗ ತೀರ್ಪುಗಾರರ, ಗುರುಗಳ ಹಾಗೂ ಹೆತ್ತವರ ಜವಾಬ್ದಾರಿ ಏನು ಎಂಬುದನ್ನು ಅವಲೋಕಿಸುವುದು ಅತ್ಯವಶ್ಯಕ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ. ಪ್ರತಿಭೆಗೆ ಮಾನ್ಯತೆ ಇರಲಿ, ಹೂ ಅರಳುವ ಮುನ್ನವೇ ಬಾಡದಿರಲಿ.

Leave a Reply

*

code