ಅಂಕಣಗಳು

Subscribe


 

ಯಕ್ಷಗಾನಕ್ಕೆ ನಾಟ್ಯಶಾಸ್ತ್ರದ ಕಥಾಪ್ರಸಂಗಗಳು -ಒಂದು ಚಿಂತನೆ

Posted On: Thursday, December 27th, 2018
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ತುರ್ವಿಧ ಅಭಿನಯಗಳಲ್ಲೂ ನಾಟ್ಯಶಾಸ್ತ್ರಕ್ಕೆ ಋಣಿಯಾಗಿರುವ, ಶಾಸ್ತ್ರೋಚಿತವಾಗಿದ್ದೂ ಜನಪದಕ್ಕೆ ಹತ್ತಿರವಾಗಿರುವ, ಈ ಕಾಲಕ್ಕೂ ನಾಟ್ಯಶಾಸ್ತ್ರದ ಅಂಗಭಾಗಗಳಿಗೆ, ಚತುರ್ವಿಧ ವೃತ್ತಿಗಳ ಅಭಿವ್ಯಕ್ತಿಗೆ ಸಮರ್ಥ ರಂಗಪ್ರತಿನಿಧಿಯಾಗಿರುವ ಏಕೈಕ ಪ್ರದರ್ಶನಕಲೆ ಯಕ್ಷಗಾನ. ಇದನ್ನು ನಾಡಿನಲ್ಲಿ ಸರ್ವಮಾನ್ಯರಾದ ವಿದ್ವಾಂಸ ಕುಕ್ಕಿಲ ಕೃಷ್ಣಭಟ್ಟರು ಮತ್ತು ಶತಾವಧಾನಿ ಡಾ. ರಾ ಗಣೇಶರು ಸಾಧಾರವಾಗಿ ಸೋದಾಹರಣವಾಗಿ ತಮ್ಮ ಕೃತಿಗಳಲ್ಲಿ ನಿರೂಪಿಸಿರುವರಷ್ಟೇ. ಹೀಗಿದ್ದೂ ನಾಟ್ಯಶಾಸ್ತ್ರದಲ್ಲಿರುವ ಕತೆಗಳ ಕುರಿತ ಪ್ರಸಂಗ ಯಕ್ಷಗಾನದಲ್ಲಿದಲ್ಲಿ ಕಂಡುಬಂದಿಲ್ಲ.

ರಾತ್ರೆ ಇಡೀ ಬಯಲಾಟ ಆಡಿಸುವಷ್ಟು ರಂಜನೀಯವೂ, ತತ್ತ್ವಾರ್ಥ ಸಮಾಶ್ರಯವೂ ಆದ ಬೃಹತ್ ಕಥಾಕೋಶವೇ ನಾಟ್ಯಶಾಸ್ತ್ರದ್ದು. ಬರಿಯ ಮೊದಲ ಅಧ್ಯಾಯವೊಂದನ್ನೇ ಹಿಡಿದು ಹೊರಟರೂ ಪೂರ್ಣಾವಧಿಯ ಯಕ್ಷಗಾನ ಪ್ರಸಂಗವಾಗಿಸಬಹುದು. ಆದರೆ ಇದ್ಯಾವುದೂ ಅಸಂಖ್ಯಾತವಾಗಿರುವ (ಸುಮಾರು ೫೦೦೦ಕ್ಕೂ ಮಿಕ್ಕಿ) ಯಕ್ಷಗಾನಪ್ರಸಂಗಗಳೆಂಬ ವಿಶಿಷ್ಟ ಕಾವ್ಯಪ್ರಕಾರದಲ್ಲಿ ಈವರೆಗೆ ರಚಿತವಾಗಿಲ್ಲ. ನಾಟ್ಯಶಾಸ್ತ್ರೋತ್ಪತ್ತಿ, ನಾಟ್ಯಾವತರಣ, ತಾಂಡವವಿಧಿ ಅಧ್ಯಾಯಗಳಷ್ಟೇ ಅಲ್ಲದೆ ಮಧುಕೈಟಭ ಪಾತ್ರಗಳಿಗೆ ಹೊಸ ಆಯಾಮ ಕಲ್ಪಿಸುವಂತೆ ಚತುರ್ವೃತ್ತಿ ಜನನದ ಕುರಿತ ಕತೆಯೂ ಬಹಳ ಸ್ವಾರಸ್ಯವಾಗಿದ್ದು ದೇವಿಮಹಾತ್ಮೆಯ ಭಾಗಗಳಿಗೆ ಹೊಸ ಆಯಾಮವನ್ನೇ ನೀಡುವಂತಿದೆ.

ನಾಟ್ಯಶಾಸ್ತ್ರದ ಕುರಿತ ಪ್ರಥಮ ಕನ್ನಡ ನೃತ್ಯಕಾವ್ಯಾಭಿವ್ಯಕ್ತಿಯನ್ನು ಶತಾವಧಾನಿ ಡಾ. ರಾ ಗಣೇಶರು ರಚಿಸಿ ನನ್ನಂತಹ ಅನೇಕರಿಗೆ ಹೆದ್ದಾರಿಯಾಗಿದ್ದಾರೆ. ಭರತನೃತ್ಯ ಕಲಾವಿದೆ, ಡಾ ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆಯಾಗಿ ಕರ್ನಾಟಕದಲ್ಲೇ ನೆಲೆಸಿದ್ದ ಕೀರ್ತಿಶೇಷ ಸುಂದರೀಸಂತಾನಂ ಅವರನ್ನು ಹೊರತುಪಡಿಸಿದರೆ ಇದನ್ನು ಸಮರ್ಥವಾಗಿ ನಾಟ್ಯ-ನೃತ್ಯಮಾಧ್ಯಮದಲ್ಲಿ ದುಡಿಸಿಕೊಂಡವರೂ ಇಲ್ಲವೇನೋ!! ಡಾ.ರಾ. ಗಣೇಶರ ನಡೆಯನ್ನು ಅನುಸರಿಸಿ ಸರಳ ಕನ್ನಡದಲ್ಲಿ ನೃತ್ಯಕ್ಕೊಗ್ಗುವಂತೆ ನಾಟ್ಯಶಾಸ್ತ್ರದ ಕತೆಗಳನ್ನಾಧರಿಸಿದ ರಚನೆಗಳನ್ನು ನಾಟ್ಯಚಿಂತನ ಎಂಬ ಶೀರ್ಷಿಕೆಯಡಿಯಲ್ಲಿ ಬರೆಯುವ ಪ್ರೇರಣೆ ನನಗೊದಗಿತು. ಕವಿಗಳೂ, ವಿದ್ವಾಂಸರೂ, ಹಿರಿಯ ರಂಗಕರ್ಮಿಗಳೂ ಆಗಿರುವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ಸೂಚನೆಗಳನ್ನು ಪಾಲಿಸಿ ಹಿರಿಯ ಕಲಾವಿದರಿಗಷ್ಟೇ ಅಲ್ಲದೆ ಬಾಲ ಕಲಾವಿದರಿಗೂ ಅರ್ಥೈಸಿ ಅನುಸರಿಸುವಷ್ಟು ಸುಲಭವಾಗಿ ಬರೆಯಲಾಯಿತು. ಆದರೆ ಇವು ನೃತ್ಯದಲ್ಲಿ ಪ್ರಯೋಗಕ್ಕೆ ಒಳಪಟ್ಟದ್ದೇ ಬೆರಳೆಣಿಕೆಯಷ್ಟು. ಆಸಕ್ತರು ಅವೆಲ್ಲಾ ಕಥಾಕಾವ್ಯಗಳ ಸರಣಿಯನ್ನು ನೂಪುರಭ್ರಮರಿಯ ಲಲಿತಲಹರಿಯೆಂಬ ಅಂಕಣವಿಭಾಗದಲ್ಲಿ ಎರಡು ವರ್ಷಗಳ ಕಾಲ ಪ್ರಕಟವಾದದ್ದನ್ನು ಗಮನಿಸಬಹುದು.

ಆಗೆಲ್ಲಾ ಕಾಣುತ್ತಿದ್ದದ್ದು ಒಂದೇ.. ಯಕ್ಷಗಾನವನ್ನುಳಿದು ನಾಟ್ಯಶಾಸ್ತ್ರದ ಕತೆಗಳು ಮತ್ತಾವ ಪ್ರದರ್ಶನಕಲಾಮಾಧ್ಯಮದಲ್ಲೂ ಆಕರ್ಷಕವಾಗಿ, ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳ್ಳಲಾರವು. ಕರ್ನಾಟಕ ಯಕ್ಷಗಾನದ ಸೋದರ ರಂಗಕಲೆಗಳಾದ ಭಾಗವತ ಮೇಳ, ತೆರಕ್ಕೂತ್ತು, ಕೂಚಿಪೂಡಿ ಯಕ್ಷಗಾನಗಳಲ್ಲೂ ನಾಟ್ಯಶಾಸ್ತ್ರ ಕತೆಗಳ ಸಮರ್ಥ ರಂಗರೂಪ ಈವರೆಗೆ ಕಂಡು ಕೇಳಿದ್ದಿಲ್ಲ. ಹೀಗಿರುವಾಗ ಯಕ್ಷಗಾನವೇ ಏಕೆ ಈ ಸಾಲಿನಲ್ಲಿ ಮೊದಲ ಪಂಕ್ತಿಯಲ್ಲಿ ವಿರಾಜಮಾನವಾಗಬಾರದು?

ಯಕ್ಷಗಾನದ ಆಂಗಿಕ ಮತ್ತು ಆಹಾರ್ಯಾಭಿನಯಕ್ಕೆ ಒಗ್ಗುವಂತೆ ದೇವ-ದಾನವ-ಮಾನವ-ರಾಕ್ಷಸ ಪಾತ್ರಗಳೂ ಮೇಳೈಸುವ, ಎಲ್ಲಾ ಸಾತ್ತ್ವಿಕ-ರಾಜಸಿಕ- ತಾಮಸಿಕಗುಣಗಳನ್ನೂ ಬಿಂಬಿಸುವ, ಸ್ತ್ರೀ-ಮುನಿ- ಹಾಸ್ಯಪಾತ್ರಗಳಿಗೂ ನಾಟ್ಯಶಾಸ್ತ್ರ ಕಥಾವಳಿಯಲ್ಲಿ ಅಗಾಧ ಅವಕಾಶವಿದೆ. ಅವೆಲ್ಲವೂ ಪೌರಾಣಿಕ ಕಥಾಗರ್ಭದ್ದೇ ಆಗಿರುವುದರಿಂದ ರಂಗಕ್ಕೆ ಅಳವಡಿಸಿಕೊಳ್ಳುವುದರಲ್ಲಿ ಯಾವ ಭಾರತೀಯ ಕಲಾಪರಿವೇಶಕ್ಕೂ ಕಿಂಚಿತ್ತೂ ಕಷ್ಟವಾಗುವುದಿಲ್ಲ. ಮೇಲಾಗಿ ಯಕ್ಷಗಾನಕಲಾಸಂವಿಧಾನದಲ್ಲಿಯೂ ಆಶುತ್ವ ಪರಿಪುಷ್ಠತೆ, ಪೌರಾಣಿಕವೈಭವಕ್ಕೆ ತಕ್ಕುದಾದ ಆಹಾರ್ಯವೈಭೋಗವೂ ಯತೇಚ್ಛವಾಗಿ ಇರುವುದರಿಂದ ನಾಟ್ಯಶಾಸ್ತ್ರದ ಕತೆಗಳನ್ನು ಮತ್ತಷ್ಟು ಚೆಲುವಾಗಿಸುವ, ನವರಸ ರಮಣೀಯವಾಗಿಸುವ ತಾಕತ್ತು ಯಕ್ಷಗಾನಕ್ಕೆ ಹೆಚ್ಚಾಗಿದೆ.

ಸಾಮಾನ್ಯವಾಗಿ ನಾಟ್ಯಶಾಸ್ತ್ರವೆಂಬುದು ಶಾಸ್ತ್ರದ ಚರ್ಚೆಗಳಿಗಷ್ಟೇ ಸೀಮಿತವಾಗಿ ಇಂದಿನ ಪ್ರಯೋಗಶೀಲ ಕಲಾವಿದರಿಂದ ದೂರವುಳಿದು ವಿದ್ವಾಂಸ ವಲಯದಲ್ಲಷ್ಟೇ ಸಂವಾದಗಳನ್ನು ಬೆಳೆಸುತ್ತಿದೆ. ಫಲವಾಗಿ ಭಾವ, ರಸ, ಔಚಿತ್ಯದಂತಹ ವಿಚಾರಗಳೂ ಬಾಯ್ಮಾತಿನ ವ್ಯಾಖ್ಯಾನಗಳಲ್ಲಿ ಮುಗಿದುಬಿಡುತ್ತವೆ. ಪಾಲನೆಯಾಗುವುದು ವಿರಳ. ಇವನ್ನು ಕಲಾವಿದರಿಗೆ ಅನುಸರಣೀಯವಾದ ಪ್ರಯೋಗಪರಿಭಾಷೆಯಲ್ಲಿ ಕೊಡುವಂತೆ ಬಗೆಹೊಕ್ಕದ್ದೇ ಇಲ್ಲವೇನೋ! ಹೀಗಿರುವಾಗ ಯಕ್ಷಗಾನ ರಂಗಮಾಧ್ಯಮದಲ್ಲಿ ನಾಟ್ಯಶಾಸ್ತ್ರ ಕಥಾಗರ್ಭವನ್ನು ತಂದರೆ, ಭಾಷಣ ಉಪನ್ಯಾಸದಲ್ಲಷ್ಟೇ ಉಳಿಯುತ್ತಿರುವ ನಮ್ಮ ಕಲಾಸಂಸ್ಕೃತಿಯ ಉಗಮದ ಅರಿವು ಮತ್ತು ಕಲಾತತ್ತ್ವಗಳು (ಕಲೆ ಮತ್ತು ಜೀವನಕ್ಕೆ ಸಂಬಂಧಿಸಿದಂತೆ) ಏಕಕಾಲಕ್ಕೆ ಕಲಾವಿದರನ್ನೂ ಮತ್ತು ಜನರನ್ನೂ ಮುಟ್ಟಬಹುದು.

ಶಾಸ್ತ್ರ ಮತ್ತು ಪ್ರಯೋಗವನ್ನು ಸಮನ್ವಯಿಸುವ ಹಾದಿಯನ್ನು ನಾವೇ ಕಂಡುಕೊಳ್ಳಬೇಕು. ಇದರಿಂದ ಮೋದವೂ, ಬೋಧವೂ ಏಕಕಾಲಕ್ಕೆ ಸಿದ್ಧಿಸುತ್ತದೆ. ಜೊತೆಗೆ ಯಕ್ಷಗಾನದ ವಾಚಿಕಾಭಿನಯಕ್ಕಿರುವ ಅಪಾರ ಸಾಧ್ಯತೆಗಳಿಂದ ಕಲೆಯ ಕುರಿತ ಈ ಚಿಂತನ ಮಂಥನ ಹೆಚ್ಚು ಆಪ್ತವಾಗುತ್ತವೆ. ಆದರಣೀಯವಾಗುತ್ತದೆ. ಯಕ್ಷಗಾನ ತಾಳಮದ್ದಳೆಗಳಿಗಂತೂ ಅರ್ಥಾನುಸಂಧಾನಕ್ಕೆ ಷಡ್ರಸೋಪೇತ ಹೂರಣವೇ ದೊರೆತು ಕಲೆಯ ಚರ್ಚೆಗಳು ಮುಖ್ಯವಾಹಿನಿಗೆ ಬಂದು ಫಲಪ್ರದವಾಗುತ್ತವೆ.

ಯಾವುದ್ಯಾವುದೋ ಕಾಲ್ಪನಿಕ ಅಥವಾ ಜನಮನವನ್ನು ಆರ್ದ್ರವಾಗಿ ತಟ್ಟದ ಹೊಸತೆನಿಸುವ ಪ್ರಸಂಗಗಳಲ್ಲಿ ವ್ಯರ್ಥಾಲಾಪ ಮಾಡುವ ಇತ್ತೀಚಿನ ಕಲಾಭೂಮಿಕೆಯನ್ನು ಕಂಡಾಗ ಹೀಗೆ ಒಂದು ಚಿಂತನೆ ಮೂಡಿತು. ಇಂತಹ ಒಂದು ಕಥಾಪ್ರಸಕ್ತಿಯ ಚಿಂತನೆಯನ್ನು ಪ್ರಸಂಗವಾಗಿಸುವಲ್ಲಿ ಯಕ್ಷಗಾನ ಕವಿಗಳು ಅಂತೆಯೇ ಕಲಾವಿದರು ಪ್ರಯತ್ನ ಪಡಬಹುದಲ್ಲವೇ? ಅದನ್ನು ಸಾರ್ಥಕವಾಗಿ ಕಾಣಬೇಕೆಂಬ ಹಂಬಲದ ಕಣ್ಣುಗಳು ನಮ್ಮದು.

 

 

ಪ್ರೀತಿಯಿಂದ

ಸಂಪಾದಕರು

Leave a Reply

*

code