ಅಂಕಣಗಳು

Subscribe


 

ಶಿಖರ ಹಸ್ತ

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಮುಷ್ಟಿಹಸ್ತದಲ್ಲಿನ ಹೆಬ್ಬೆರಳನ್ನು ಮೇಲ್ಮುಖವಾಗಿ ನೀಡಿದರೆ ಅಥವಾ ಹೆಬ್ಬೆರಳನ್ನು ನಿಡಿದಾಗಿರಿಸಿ ಉಳಿದ ಬೆರಳುಗಳನ್ನು ಮುಷ್ಠಿಯೊಳಗೆ ಸೇರಿಸುವುದು ಶಿಖರಹಸ್ತ, ಶಿಖರದ ಅರ್ಥ ಗೋಪುರ ಅಥವಾ ಮೇಲೆ. ಒಡಿಸ್ಸಿ ನೃತ್ಯಪ್ರಕಾರದಲ್ಲಿ ಶಿಖರಕ್ಕೆ ಆರಾತ್ರಿಕ ಎಂದು ಹೆಸರು. ಶಿವನು ಮೇರುಪರ್ವತವನ್ನು ಬಿಲ್ಲಿನಂತೆ ಪ್ರಯೋಗಿಸಿದಾಗ‌ಈ ಹಸ್ತ ಉಗಮವಾಯಿತೆನ್ನಲಾಗಿದೆ. ಇದರ ಬಣ್ಣ ಕಪ್ಪು, ಗಂಧರ್ವ ಜಾತಿ, ಜಿಹ್ನ(ಜಹ್ನು) ಋಷಿ, ರತಿ ವಲ್ಲಭ ಇದರ ದೇವತೆ.

ಯೋಗದಲ್ಲಿ ಬಳಸುವ ಶಾಸ್ತ್ರೀಯ ಮುದ್ರೆಗಳಾದ ನೃಸಿಂಹ ಮುದ್ರಾ(ಒಂದು ಕೈಯ್ಯ ಶಿಖರ), ದೀಪ ಮುದ್ರಾ(ಎರಡು ಕೈಯ್ಯ ಶಿಖರ) ಮೇರುದಂಡ ಮುದ್ರೆಗಳಲ್ಲಿ ಶಿಖರಕ್ಕೆ ಪ್ರಧಾನ ಸ್ಥಾನ. ಎರಡೂ ಕೈಯ್ಯಲ್ಲಿ ಶಿಖರಮುದ್ರೆಯನ್ನು ಅಭಿಮುಖವಾಗಿ ಹಿಡಿದು ಹೆಬ್ಬೆರಳುಗಳನ್ನು ಒಂದಕ್ಕೊಂದು ತಾಗಿಸುವುದು ಕಾಲಕರ್ಣಿಕಾ ಮುದ್ರಾ ಎನಿಸಿದರೆ, ಎದೆಯ ಮುಂದೆ ಎರಡೂ ಕೈಯ್ಯ ಉಳಿದೆಲ್ಲಾ ಬೆರಳುಗಳನ್ನು ಮಡಚಿ ಪರಸ್ಪರ ಹೆಬ್ಬೆರಳನ್ನು ಸೇರಿಸುವ ರುದ್ರ ಮುದ್ರಾ ಇನ್ನೊಂದು ಬಗೆ. ನೈವೇದ್ಯಕ್ಕಾಗಿ, ಶಿಲ್ಪಗಳಲ್ಲಿ, ಬಿಂಬಗಳಲ್ಲಿ ದೈವೀಸಾನ್ನಿಧ್ಯ ಸಂಸ್ಥಾಪನೆಗಾಗಿ, ಆ ದೇವದೇವಿಯರನ್ನು ಆವಾಹನೆ ಮಾಡುವಾಗ ಉಪಯೋಗಿಸುವ ಅವಕುಂಠಿತೋಭವ : ‘ಅವಕುಂಠನಮುದಾ’- ಎರಡು ಶಿಖರ ಹಸ್ತಗಳ ಪರಸ್ಪರ ಸಹಜತ್ವದಲ್ಲಿ ಒಳ ಪಾರ್ಶ್ವಗಳ ಕೂಡುವಿಕೆಯಿಂದುಂಟಾದ ಹಸ್ತ.

ದಿನನಿತ್ಯ ಜೀವನದಲ್ಲೂ ಏಕೆ ಮುಂತಾಗಿ ಪ್ರಶ್ನೆ ಕೇಳಲು, ಗೊತ್ತಿಲ್ಲ ಎನ್ನಲು, ಗಡ್ಡದ ಮೇಲೆ ಕೈಯಿಟ್ಟು ಯೋಚನೆ ಮಾಡುವಾಗ, ವಿಜಯದ ಸಂಕೇತವಾಗಿ ಉಪಯೋಗಿಸಲ್ಪಡುತ್ತದೆ.

ವಿನಿಯೋಗ: ಮನ್ಮಥ, ಧನುಸ್ಸು, ಕಂಬ, ನಿಶ್ಚಯ ಮಾಡುವುದು, ಪಿತೃ ತರ್ಪಣ, ತುಟಿ, ಪಾತ್ರೆಗಳಿಗೆ ನೀರು ಹಾಕುವುದು, ಹಲ್ಲುಗಳು, ಪ್ರಶ್ನೆ ಕೇಳುವ ಭಾವ, ಶಿವಲಿಂಗ, ಇಲ್ಲವೆನ್ನುವಿಕೆ, ನೆನಪಿಸಿಕೊಳ್ಳುವುದು, ಅಭಿನಯಿಸುವುದು, ನಡುಕಟ್ಟನ್ನು ಕಟ್ಟುವುದು, ಆಲಿಂಗನ ಮಾಡುವುದು, ಶಕ್ತ್ಯಾಯುಧ ತೋಮರಾಯುಧಗಳ ಪ್ರಯೋಗ, ಘಂಟಾನಾದ, ಅರೆಯುವುದು.

ಇತರೆ ವಿನಿಯೋಗ: ಪಟ್ಟಾಭಿಷಿಕ್ತರಾಜ, ಕೂದಲ ಸಿಕ್ಕು ಬಿಡಿಸುವಿಕೆ, ಸ್ಥಿರವಾದ ಕೀರ್ತಿ, ಬೀಸಣಿಗೆ, ನಾಚಿಕೆ, ಸುವರ್ಣ ಕಲಶದ ನೀರನ್ನು ಕುಡಿಯುವುದು, ಲಗಾಮು, ಒಂದು ಬಗೆಯ ಹುಲ್ಲು ಕಡ್ಡಿ, ತುಟಿ-ಪಾದ ಇವುಗಳಿಗೆ ಬಣ್ಣ ಹಚ್ಚುವುದು, ಮೊನಚು ಲೋಹದ ತುಂಡು ಮತ್ತು ಅದನ್ನು ಎಸೆಯುವುದು, ಮುಂಗುರುಳು ಹಿಡಿಯುವುದು, ಕೊಡುವುದು, ಯಮ, ಕೆಲವು ವೇಳೆ ನಾಟ್ಯಾರಂಭಕ್ಕೂ, ಬೇಟೆಗಾರ, ಸ್ನೇಹಿತ, ಹಡಗು ಚಾವಡಿ, ಒತ್ತಾಯ, ಕೂದಲನ್ನು ಎತ್ತುವುದು, ಒನಕೆ, ಬರೆವ ಆಣಿ, ಕೊಕ್ಕು, ಅಂಕುಶ, ಮೈನೋವಿಗೆ ಗುದ್ದುವುದು, ಗಣೇಶನಿಗೆ ನಮಸ್ಕಾರ, ಮುಂತಾದುವುಗಳನ್ನು ತೋರಿಸಲು ಬಳಸುತ್ತಾರೆ.

ರಾಮ, ವರುಣ, ಕುಬೇರ, ಶನೈಶ್ಚರ, ಸಹದೇವರನ್ನು ಸೂಚಿಸುವಲ್ಲಿ; ಚತುರ್ವರ್ಣಗಳಲ್ಲಿ ಕ್ಷತ್ರಿಯ, ಶೂದ್ರ ವರ್ಣಗಳನ್ನು, ದಂಪತಿ, ತಂದೆ, ಪುತ್ರ, ಮಾವ, ಅಳಿಯ, ಗಂಡ, ಸೋದರ ಮುಂತಾದ ಪುರುಷಸಂಬಂಧಗಳನ್ನು ಸೂಚಿಸಲು, ಸಂಕರ ಹಸ್ತ ಪ್ರಕಾರದಲ್ಲಿ ಕೌಮಾರ್ಯ ವಯಸ್ಸನ್ನು ಹೇಳಲು ಬಳಸಲಾಗುತ್ತದೆ. ಬಲಗೈ ಶಿಖರವನ್ನು ಎಡಭುಜದಲ್ಲಿ ತೋರಿಸುವುದರಿಂದ ಲಕ್ಷ್ಮಣನೆಂದೂ, ಬಲಗೈ ಶಿಖರವನ್ನು ಬಲಭುಜದಲ್ಲಿ ತೋರಿಸುವುದರಿಂದ ಭರತನೆಂದೂ, ಬಲಗೈ ಶಿಖರವನ್ನು ಮುಖದ ಬಳಿ ಹಿಡಿಯುವುದರಿಂದ ಶತ್ರುಘ್ನನೆಂದೂ ಅರ್ಥೈಸಬಹುದು.

ಶಿಖರಹಸ್ತಗಳನ್ನು ಎರಡು ಕೈಗಳಿಂದಲೂ ಹಿಡಿದು ಯಜ್ಞೋಪವೀತದ ಆಕೃತಿಯನ್ನು ಸೂಚಿಸುವುದು ಬ್ರಾಹ್ಮಣ ಮತ್ತು ಗುರು ಬೃಹಸ್ಪತಿಯನ್ನು ತಿಳಿಸುತ್ತದೆ. ಶಿಖರಹಸ್ತವನ್ನು ಅಲ್ಲಾಡಿಸುವುದು ಉತ್ತರ ನಕ್ಷತ್ರದ ಸೂಚನೆಯಾದರೆ, ಶಿಖರಹಸ್ತಗಳನ್ನು ಜೊತೆಯಾಗಿ ಹಿಡಿದು, ಅದರ ಮುಖಗಳನ್ನು ಅಭಿಮುಖವಾಗಿ ಸ್ಪರ್ಶಿಸುವುದು ವೃಷಭ ರಾಶಿಯ ಸೂಚಕ. ಶಿಖರಹಸ್ತಗಳನ್ನು ಅಭಿಮುಖವಾಗಿರಿದರೆ ಆಡುಪ್ರಾಣಿಯೆಂದು ಹೇಳಬಹುದು.

ನಾನಾರ್ಥ ಹಸ್ತಗಳ ವಿಭಾಗದಲ್ಲಿ, ಶಿಖರಹಸ್ತವನ್ನು ದಕ್ಷಿಣಭಾಗದಲ್ಲಿ ಕದಲಿಸದೆ ಹಿಡಿದರೆ ಸಂನ್ಯಾಸಾಶ್ರಮವೆಂದೂ, ಪುರೋಭಾಗದಲ್ಲಿ ಕದಲಿಸದೆ ಹಿಡಿದರೆ ಸ್ಥಿರವೆಂದೂ, ಅಡ್ಡಲಾಗಿ ನಿಶ್ಚಲವಾಗಿ ಹಿಡಿದರೆ ಹಿಡಿದುಕೋ ಎಂಬ ಅರ್ಥವನ್ನು ಕೊಡಬಹುದು. ಶಿಖರಹಸ್ತವನ್ನು ಪುರೋಭಾಗದಲ್ಲಿ ನಿಲ್ಲಿಸಿದರೆ ಆಸನ, ಕುಳಿತುಕೊಳ್ಳಲು ಎಂಬ ಅರ್ಥ ಬರುತ್ತದೆ. ಯಕ್ಷಗಾನದಲ್ಲೂ ರಾಜ, ಹಲ್ಲುಜ್ಜುವಿಕೆ, ಬಿಲ್ಲು, ಗಂಟೆ, ವೀರ, ಪ್ರಶ್ನೆ ಮುಂತಾದ ಸಂದರ್ಭದಲ್ಲಿ ಶಿಖರ ಹಸ್ತವನ್ನು ಬಳಸಲಾಗುತ್ತದೆ.

ಎರಡು ಶಿಖರ ಹಸ್ತಗಳನ್ನು ಕೂಡಿಸಿ ಹಿಡಿಯುವುದು, ಅಥವಾ ಮೇಲ್ಮುಮುಖವಾಗಿ ಸಂಧಿಸುವುದರಿಂದ ಅದು ದ್ವಿಶಿಖರ ಹಸ್ತವೆನಿಸಿಕೊಳ್ಳುತ್ತದೆ. ಮತ್ತೊಬ್ಬರನ್ನು ಶಪಿಸುವುದು, ಚಿಟಿಕೆ ಮುರಿಯುವುದು, ಸ್ತ್ರೀಯರ ಜಗಳ, ಇಲ್ಲ ಎನ್ನುವುದನ್ನು ತೋರಿಸುವಾಗ ಇದರ ಬಳಕೆಯಾಗುತ್ತದೆ.

Leave a Reply

*

code