ಅಂಕಣಗಳು

Subscribe


 

ಆಕ್ಷೇಪಿಣಿ

Posted On: Friday, May 15th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 22ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ- ನಾಯಿಕೆಯನ್ನು ಪರಿತ್ಯಜಿಸಿದ  ನಾಯಕನ ಚಪಲತೆಗೆ ಸ್ತ್ರೀಯೋರ್ವಳು ಆತನ ಮೇಲೆ ಮಾಡಿದ ಶೃಂಗಾರ ವಶೀಕರಣವೇ ಕಾರಣವೆಂದು ಪರ್ಯಂತರ ಮಾರ್ಗದಿಂದ ಜರೆಯುತ್ತಾ ನಿಂದಿಸುವ ಈಕೆ ಖಂಡಿತೆ. ಮಡುಗಟ್ಟಿದ ದುಃಖ ಕಟ್ಟೆ ಒಡೆದು ಆಕ್ಷೇಪಗಳು ಬಗೆಬಗೆಯಾಗಿ ನಾಯಕನ ಬೆನ್ನ ಮೇಲೇರುವಂತೆ ರಚನೆಯಿದೆ. ತನ್ನ ಬದುಕಿನ ಸಂತಸವನೀಂಟಿದ ಪರಕೀಯೆಯನ್ನು ತರಾಟೆಗೆ ತೆಗೆದುಕೊಂಡು ಜಡಿಯುವಂತೆ ಕೋಪವೂ ಬೇಸರವೂ ಅಂತ್ಯಚರಣದಲ್ಲಿ ನಿಡುಸುಯ್ದಿದೆ. 

 

ಆಕ್ಷೇಪಿಣಿ

ರಾಗ: ಭೈರವಿ ; ತಾಳ : ತ್ರ್ಯಶ್ರಗತಿ ಆದಿ/ತ್ರ್ಯಶ್ರಗತಿ ತ್ರಿಪುಟ

ಆವ ಗಾಡಿಗಾರ್ತಿ ನಿನ್ನಂ ಮೋಡಿಮಾಡಿದಳ್ ?

ನೋವನೆನ್ನೊಳಿತ್ತು ನಿನ್ನಿಂ ದೂರ ಮಾಡಿದಳ್ ? || ||

 

ಎನ್ನೊಳಾವ ಕೊರೆಯ ಕಂಡು ದೂರವಾದೆಯೋ ?

ಮನ್ನೆಯೊಳಿನ್ನೇನ ಕಂಡು ಮಾರಿಕೊಂಡೆಯೋ? |

ಸೊನ್ನೆಗೆಯ್ದು ಸೊಗವನಿಲ್ಲಿ, ಜಾರಿಕೊಂಡೆಯಾ ?

ಹೊನ್ನನಿತ್ತು ಹೊಗರಿನಲ್ಲಿ ಸೇರಿಕೊಂಡೆಯಾ ? || ೧||

 

ಆಣೆಮಾಡಿ ನುಡಿದೆನಲ್ತೆ ನಾನು ನಲ್ಮೆಯಂ,

ಜಾಣೆ ಬೋಧಿಸಿರ್ದುದೆಲ್ಲಂ ಪೇಳ್ದೆಯಲ್ತೆ ನೀಂ |

ಪ್ರಾಣಕಾಂತೆಯೆಂದು ಬಂದು ಗೋಣ ಕುಯ್ವುದೇ ?

ನೇಣಿಗಿತ್ತು ನೇಹವನ್ನು ಸುಳ್ಳುಸುಯ್ವುದೇ ? ||೨ ||

 

(ತ್ರ್ಯಶ್ರಗತಿ ತ್ರಿಪುಟ)

ಪೇಳು! ಪೇಳಾ ಚಲ್ಲಗಾರ್ತಿಯ

ಪಾಳು ಪಾಳೆಯವೆಲ್ಲಿದೆ ?

ಮುಂದಲೆಯನಾಂ ವಿಡಿಯುತಿಲ್ಲೆಳೆ-

ತಂದು ಝೂಡಿಸಿ ನೋಡುವೆಂ || ೩||

 

Leave a Reply