ಅಂಕಣಗಳು

Subscribe


 

ಅಭಿನಯಭಾರತೀ-ಅನಿಷ್ಟಮರ್ಷಿಣೀ

Posted On: Wednesday, June 24th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 46ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನೆಡೆಗೆ ಎಷ್ಟೊಂದು ಕಾಳಜಿಯೆಂದರೆ ತಮ್ಮ ಪ್ರೀತಿಗೆ ಒದಗಬಹುದಾದ ಎಲ್ಲ ಬಗೆಯ ಅನಿಷ್ಟವೂ ನಿವಾರಣೆಯಾಗಲೆಂದು ಹಾರೈಸಿದ್ದಾಳೆ; ಅದಕ್ಕನುಕೂಲಿಯಾಗಿ ಆತನನ್ನು ಕಾಯ್ದುಕೊಳ್ಳುತ್ತಾ ನಡೆದುಕೊಂಡಿದ್ದಾಳೆ. ಯಾವ ಸ್ತ್ರೀಯ ಕಣ್ಣು ತಾಗಿ ಅವನಿಂದ ದೂರಾಗಬಹುದಾದ ಸಂದರ್ಭ ಒದಗಬಹುದೋ ಎಂಬ ಆತಂಕ ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ನೀರಿನಲ್ಲಿ ಆತನ ಬಿಂಬ ಕಂಡರೂ ಗಂಗೆಯೇ ಕದ್ದುಕೊಂಡುಹೋಗುವಳೋ, ಆತನ ಮುಖದ ಬಿಂಬವೋ ಎಂಬಂತಿರುವ ಶಶಿಯನ್ನು ಕಂಡಾಗ ತಾರೆಯೇ ಕದ್ದೊಯ್ವಳೋ ಎಂಬ ಭ್ರಮೆ ತಾಗುವಷ್ಟು ಆತನನ್ನು ರಕ್ಷಿಸಿಕೊಂಬ ಇರಾದೆ ಅವಳದ್ದು. ಇನಿಯನನ್ನು ಬಲೆಗೆ ಹಾಕಿಕೊಂಡಾರೇನೋ ಎಂಬ ತಳಮಳದಲ್ಲೇ ಗೆಳತಿಯರನ್ನ ದೂರ ಮಾಡಿಕೊಂಡಿದ್ದಾಳೆ;  ತನ್ನ ತಂಗಿಯನ್ನಾದರೋ ದೂರವಿಡಲಾಗದೆ ಹಳಹಳಿಸುತ್ತಾ ದಿನ ನೂಕುವಂತಾಗಿದೆ ಈ ಸ್ವೀಯೆಗೆ. ಐಶ್ವರ್ಯವೊಂದು ಬಳಿಯಿದ್ದಾಗಲೇ ಅದು ಕಳೆದುಹೋಗುವ ಭಯ ಅಡರುವಂತೆ  ಭಾವೀಶಂಕಿತೆಯೆನಿಸಿದ್ದಾಳೆ. ಸಂಭೋಗ ಮತ್ತು ವಿಪ್ರಲಂಭ ಶೃಂಗಾರದ ನಡುವಿನ ನಾಯಿಕಾಸಂಧಿಗೆ ಒಳ್ಳೆಯ ನಿದರ್ಶನವೀಕೆ.

ಅನಿಷ್ಟಮರ್ಷಿಣೀ

ರಾಗ : ವಲಚಿ ; ತಾಳ : ಖಂಡಛಾಪು

ಆವ ನೀರೆಯ ಕಣ್ಣೂ ತಾಕದೆ ನಿಲ್ಲಲಿ |

ಈ ವಿಲಾಸದ ರಸ ಮಾಸದಿರಲಿ || ||

 

ಹಲಗಾಲ ಹಲಗಾಲ ಹಲವು ಸಾಸಿರ ಕಾಲ

ಚೆಲುವು ನಿನ್ನದು ನಿಲ್ಲಲೆನ್ನೆದೆಯಲಿ || ಅ.ಪ ||

 

ಓ ನಲ್ಲ ! ನೀನು ಹಾದಿಯೊಳಿತ್ತ ಬರುವಾಗ

ಈ ನನ್ನ ಚಿತ್ತವು, ಚಟಪಟಿಪುದು |

ಮಾನಿನಿಯರೆಲ್ಲರೂ ತಿನ್ನುವಂತೆಯೆ ನಿನ್ನ-

ನೇ ನೋಡಲೆನಗೋ ಭಯವಪ್ಪುದು || ೧||

 

ನೀರಿನಲ್ಲದೊ ನೀನು ಪಡಿಮೂಡೆ, ಗಂಗೆಯೇ

ಚೋರಿಸಿದಳೆಂದು ನಾಂ ತಳಮಳಿಸುವೆ |

ದೂರದಂಬರದಲ್ಲಿ ಶಶಿ ಮೂಡೆ ನಿನ್ನನಾ

ತಾರೆ ಕದ್ದೊಯ್ದಳೆಂದಳಲುತಿರುವೆ ||೨ ||

 

ನಿನ್ನನಾರೊಯ್ವರೋ ಎಂಬ ಸಂದೆಗದಿಂದೆ

ನನ್ನ ಗೆಳತಿಯರನ್ನೆ ನಾಂ ದೂಡಿದೆ |

ಇನ್ನೇನು ನಡೆವುದೋ ಎಂದೆನ್ನ ತಂಗಿಯ-

ನ್ನನ್ನಲಾಗದೆ ನಿಂದಿಸುತೆ ನೂಕಿದೆ ||೩ ||

 

Leave a Reply