ಅಂಕಣಗಳು

Subscribe


 

ಅನ್ಯಾಭರ್ತ್ಸನೆ

Posted On: Sunday, August 16th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 83ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ :  ತಮ್ಮ ಪತಿಯಂದಿರನ್ನು/ ಅಥವಾ ತನ್ನ ಪತಿಯನ್ನು ಬಲೆಗೆ ಹಾಕಿಕೊಂಡ ಕುಲಟೆ, ವಂಚಕಿ ಸಾಧಾರಣಾ ನಾಯಿಕೆಯನ್ನು ಸ್ವೀಯೆಯು (ಪತ್ನಿಯರು/ಪತ್ನಿಯು) ಒಟ್ಟಾಗಿ ಎದುರಿಸಿ ಆವರೆಗಿನ ತಮ್ಮ ಕೋಪವನ್ನು ಕಾರಿಕೊಂಡು ತರಾಟೆಗೆ ತೆಗೆದುಕೊಳ್ಳುವ ಸನ್ನಿವೇಶದಲ್ಲಿ ಈ ಪದ್ಯದ ವಸ್ತುವಿದೆ. ಹೀಗೆ ಅನ್ಯೆಯನ್ನು ಭರ್ತ್ಸನ ಮಾಡುವ ಈ ರಚನೆಯಲ್ಲಿ ನಾಯಿಕಾಭಾವದ ಲೋಕವಾಸ್ತವದ ಗುಣವೇ ವೈಭವೀಕರಿಸಿದೆ. ಸ್ವಭಾವೋಕ್ತಿಯನ್ನೇ ಪ್ರಧಾನವಾಗಿ ಆಶ್ರಯಿಸಿದ ಈ ಪದ್ಯವನ್ನು ಶತಾವಧಾನಿ ಗಣೇಶರಿಗೆ ಬೆಂಗಳೂರಿನ ಬಿಟಿಎಂ ಕಲ್ಚರಲ್ ಅಕಾಡೆಮಿಯಲ್ಲಿ ನೀಡಿದ ನೃತ್ಯಾಭಿನಂದನ ಸಮಾರಂಭದಲ್ಲಿ ಮೊತ್ತಮೊದಲು ನರ್ತಿಸಿದವರು ಡಾ.ಶೋಭಾ ಶಶಿಕುಮಾರ್ .

ಅನ್ಯಾಭರ್ತ್ಸನೆ

ರಾಗ: ಕಾಂಭೋದಿ ; ತಾಳ : ತ್ರ್ಯಶ್ರಗತಿ ತ್ರಿಪುಟ/ಖಂಡಛಾಪು

ಆಹ! ನೀನೇನಾಕೆಯೇ ? ಓಹೋ! ನೀನವಳಲ್ಲವೇ! || ಪ ||

ಕಂಡವರ ಸಂಸಾರದಲಿ ಕಿಚ್ಚಂ ಡಮಾಯಿಸಿ ತೊಂಡು ತಿರುಗುವ || ಅ.ಪ. ||

 

ಮಳ್ಳಿಯಂತೆ ಮಿಲಾಯಿಸುತ ಬಲು

ಸುಳ್ಳುಸುದ್ದಿಯನೆಲ್ಲೆಡೆ |

ಕಳ್ಳತನದಿಂ ಪೆರರ ಪತಿಗಳ

ಕೊಳ್ಳೆಹೊಡೆಯುತ ಬೀಗುವ ||೧ ||

 

ಗರತಿಯರ ಗೋಳಾಡಿಸುವ ಗುರಿ

ಮೆರೆದು ಮಾನವ ನೀಗುತ

ಪರಪುರುಷರಂ ಮರುಳು ಮಾಡುತ

ಸಿರಿಗೆ ಹಾಹಾತೊರೆಯುವ || ೨||

 

(ಖಂಡಛಾಪು) ಇಂದು ಸಿಕ್ಕಿದೆಯಲ್ತೆ ಎನ್ನ ಕೈಗೆಲೆ ಮೂಳಿ !

ಬಂದು ಕಾಪಿಡಲಿ ನಿನ್ನಯ ನಲ್ಲರು

ಸಂದಾಯಗೆಯ್ವೆ ಸಾಲವನು ಬಡ್ಡಿಯ ಸಹಿತ

ಹಿಂದೋಡಲೇಕೆ ನೀಂ ನಿಲ್ಲು! ನಿಲ್ಲೇ!! ||೩ ||

Leave a Reply