ಅಂಕಣಗಳು

Subscribe


 

ಅಭಿನಯ ಭಾರತೀ- ಧನ್ಯಾನ್ಯೆ

Posted On: Monday, July 20th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 64ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ :  ನಲ್ಲನ ಜೊತೆಗಿನ ರತಿಸಮಯ ತೃಪ್ತಿದಾಯಕವಾದ ಹಿನ್ನೆಲೆಯಲ್ಲಿ ಈ ಪರಕೀಯೆ  ತನ್ನ ಅನುಭವವನ್ನು ಕೊಂಡಾಡುತ್ತಿದ್ದಾಳೆ. ಕದ್ದು ಕೂಡಿದಾಕ್ಷಣ ಪ್ರೀತಿಗೆ ಕೊರತೆಯೇನಿದೆ, ಯಾರಿಗೂ ತಿಳಿಯದೆ ಈ ಮಟ್ಟಿಗೆ ಸುಖ ದಕ್ಕಿದೆ ಎಂದೆಲ್ಲಾ- ತನ್ನ ಕಾಮೋಪಭೋಗಕ್ಕೆ ಅನುಕೂಲವಾದ ಸಂಗತಿಗಳನ್ನು ಮತ್ತೆ ಮತ್ತೆ ನೆನೆಯುತ್ತಿದ್ದಾಳೆ. ಮನ್ಮಥನ ಕರುಣೆಯನ್ನು ಸ್ತುತಿಸಿ,  ಗುರುಜನವೋ ಅಥವಾ ಪತಿಯೋ-  ಯಾರೇ ಆಗಿದ್ದರೂ ಅವರನ್ನು ಗಣಿಸೆನೆಂದು,  ಬೆದರೆನೆಂದು ಸಂತೋಷವನ್ನು ಮತ್ತಷ್ಟು ಸುಖಿಸಿದ್ದಾಳೆ.  ಸಂಭೋಗ ಶೃಂಗಾರಜನ್ಯವಾದ, ಸ್ವಾಧೀನಪತಿಕೆಯ ಪರಕೀಯಭಾವದ ಅಭಿವ್ಯಕ್ತಿಯಿದು.

ಧನ್ಯಾನ್ಯೆ

ರಾಗ: ನಾಟಕುರಂಜಿ ; ತಾಳ : ಆದಿ/ತ್ರ್ಯಶ್ರತ್ರಿಪುಟ

ಇಂದಿನದೇ ಮಿಲನವೋ – ಮನೋಜ್ಞ !

ಇಂದಿನದೇ ಮಿಥುನವೋ || ಪ ||

ಅಂದಿಗಂದಿಗೆ ಸಂದು ಸುಂದರವೆನಿಸಿದ ಸ್ಪಂದವಿದೇಂ ಮಧುರವೋ    || ಅ.ಪ ||

 

ಕದ್ದು ಕೂಡಿದ ಕೂರ್ಮೆ ಕೊನೆಯಾದುದಿಲ್ಲ

ಮುದ್ದುಮಾತಿನ ಮೈತ್ರಿಗೆಣೆಯಾದುದಿಲ್ಲ |

ಸುದ್ದಿಯಾಗದೆ ಬೇಟ ಬಂಗಾರವಾಯ್ತೀ

ಹದ್ದಿರದಾನಂದವಿದು ನರ್ಮಬಂಧ || ೧||

 

ಅನ್ಯರಿಂದಿನಿಸಾನುಮೆಡರಾದುದಿಲ್ಲ

ವನ್ಯವಿರೋಧವದೇನೇನುಮಿಲ್ಲ |

ಕನ್ಯೆಯರೆಲ್ಲರೂ ಕರುಬುವಂತಾಯ್ತೀ

ಧನ್ಯಮುಹೂರ್ತ ಸಂದಿರಲಿಂತು ಮೂರ್ತ || ೨||

 

(ತ್ರ್ಯಶ್ರತ್ರಿಪುಟ) ತರುಣರೆನಿಬರೊ ತರದ ಸೊಗವನು

ಕರುಣಿಸಿದ ಸುಮಶರಸಮಾನನೆ!

ಗುರುಜನಕೆ ಮೇಣ್ ಕರವಿಡಿದವನಿ-

ಗೆರವಿರಲಿ ಮದ್ರೀತಿ; ಬೆದರೆನು ||೩ ||

Leave a Reply