ಅಂಕಣಗಳು

Subscribe


 

ನೀತಿನಿಷ್ಠುರೆ

Posted On: Sunday, May 24th, 2020
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 26ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ- ನಾಯಕನ ಠಕ್ಕುತನವನ್ನು ಎದುರೆದುರಿಗೇ ಸಂದರ್ಭಸಹಿತವಾಗಿ ಹೇಳಿ ಹಳಿಯುತ್ತಾ ಜರೆಯುವ ಈಕೆ ಖಂಡಿತೆ. ನೆವಗಳನ್ನು ಮುಂದುಮಾಡಿ ಸಂತೈಸಬರುತ್ತಿರುವ ನಾಯಕನೆಡೆಗೆ ಕ್ರುದ್ಧಳಾಗಿದ್ದಾಳೆ. ಮೇಲಾಗಿ ನಾಯಿಕೆಯನ್ನು ಅವರಿವರಲ್ಲಿ ದೂರಿದ ಕೋಪ. ಆತ  ಅತ್ಯುತ್ತಮ ನಟನೆಂಬ ಆಕೆಯ ಧ್ವನಿಯಲ್ಲಿ ಕುಹಕ ಎದ್ದು ತೋರುತ್ತಿದೆ. ಆತನ ಸೋಗಲಾಡಿತನವನ್ನು ಬಯಲುಮಾಡುವ ಸಾಕ್ಷಿಗಳಾಗಿ ಸ್ವತಃ ಪ್ರಕೃತಿಯ ವಿವಿಧ ಸ್ಥಳಗಳೇ ಇವೆಯೆಂದೂ, ಬೇರೆಯವರು ಆತನ ಮಾತಿಗೆ ಮನ್ನಣೆ ಕೊಟ್ಟಾರು, ಆದರೆ ತಾನಲ್ಲವೆಂದು ನಿಷ್ಠುರವಾಗಿ  ಖಂಡಿಸಿದ್ದಾಳೆ.

ನೀತಿನಿಷ್ಠುರೆ

ರಾಗ: ದೇವಗಾಂಧಾರ ; ತಾಳ : ಆದಿ

ಸಾಕು! ಸಾಕೋ! ನಿನ್ನ ಸೋಗಲಾಡಿತನ

ಬೇಕು ಬೇಕೆನ್ನುತ ಕರೆದವರಾರೋ ? || ||

 

ಬೆಕ್ಕು ಕಣ್ಮುಚ್ಚುತೆ ಪಾಲ್ಕುಡಿಯಲದಂ

ಫಕ್ಕನೆ ನೋಡದ ಪಡತಿಯರುಂಟೇ ? |

ಅಕ್ಕರೆ-ಕಕ್ಕುಲಾತಿಗಳಂ ನಟಿಸಲು

ತಕ್ಕ ನಟಂ ನೀನೋರ್ವನೇ ಅಲ್ಲವೋ ||೧ ||

 

ಅವಳಲ್ಲೆನ್ನನು ಮೊನ್ನೆ ದೂರಿದೆಯಂತೆ

ಇವಳಲ್ಲೆನ್ನನು ನಿನ್ನೆ ಹಳಿದೆಯಂತೆ |

ಅವರಿವರೇ ನಿನ್ನ ನೋಡಿಕೊಳ್ಳಲಿ ಹೋಗೋ

ನೆವಗಳ ನೂರನು ಹೇರುವುದೇಕೋ ? || ೨||

 

ನಿನ್ನಯ ಚರ್ಯೆಗಾ ಉದ್ಯಾನವೇ ಸಾಕ್ಷಿ

ನಿನ್ನ ವಂಚನೆಗಾ ಕೊಳವೇ ಸಾಕ್ಷಿ |

ನಿನ್ನ ಕಣ್ಕಟ್ಟಿನ ಠಕ್ಕಿನ ಮಾತಿಗೆ

ಮನ್ನಣೆ ಕೊಡಲು ನಾನನ್ನೆಯರಲ್ಲವೋ ||೩ ||

 

Leave a Reply