ಅಂಕಣಗಳು

Subscribe


 

ಪಶ್ಚಾತ್ತಪ್ತೆ 

Posted On: Wednesday, May 27th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 28ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನಲ್ಲಿ ವಿನಾ ಕಲಹವಾಡಿ ತನ್ನ ತಪ್ಪನ್ನು ತಿಳಿದ ಬಳಿಕದ ಸ್ಥಿತಿಯುಳ್ಳ ಈಕೆ ಕಲಹಾಂತರಿತೆ. ಸೌಮ್ಯಸ್ವಭಾವದ ನಾಯಕನಲ್ಲಿ ಕಟುವಾಗಿ ವರ್ತಿಸಿ ದುಡುಕಿನಿಂದ ನಡೆದುಕೊಂಡ ನಾಯಿಕೆಗೆ ಈಗ ಕ್ಷಮೆ ಕೇಳುವ ಬಗೆ ತಿಳಿಯದಂತಾಗಿದೆ. ಚಾಡಿಮಾತಿಗೆ ಕಿವಿಯಾನಿಸಿ ನಾಯಕನಲ್ಲಿ ತೀಕ್ಷ್ಣಳಾಗಿದ್ದ ತನ್ನ ವರ್ತನೆಗೆ ತಾನೇ ಲಜ್ಜಿತಳಾಗಿ ಪಶ್ಚಾತ್ತಾಪ ಪಡುತ್ತಿದ್ದಾಳೆ. ಜೊತೆಗೆ ಸವತಿಯರಿಂದಲೋ, ಶತ್ರುಗಳಿಂದಲೋ ತಾನು ಅವಿಧೇಯತೆಯನ್ನ ತೋರುವಂತಾದ್ದಕ್ಕೆ ಕಾರಣ-ಕಾರ್ಯವೆರಡನ್ನೂ ಚಿಂತಿಸಿ ವ್ಯಾಕುಲಳಾಗಿದ್ದಾಳೆ.

 

ಪಶ್ಚಾತ್ತಪ್ತೆ 

ರಾಗ: ಮುಖಾರಿ ; ತಾಳ : ಆದಿ

ಅವನಿಗೆ ಮೊಗವೆಂತು ತೋರಿಸಲಿ ?

ಅವನೊಳು ಕ್ಷಮೆಯೆಂತು ಯಾಚಿಸಲಿ ? || ||

 

ದಾಕ್ಷಿಣ್ಯದ ಬಲು ಸೌಮ್ಯಸ್ವಭಾವದ

ಅಕ್ಷೀಣಾನುರಕ್ತಿಯ ತೋರುವ |

ಲಕ್ಷಣಯುತನ ವಿನೀತವಿಧಾನವ

ಲಕ್ಷಿಸದೆಯೇ ಪ್ರತಿಕೂಲಿಸಿದೆ ||೧ ||

 

ಋಜುಚರ್ಯೆಯ ನಲ್ಲನ ಮನದಾಳದ

ವೃಜಿನವಿಹೀನತೆಯನು ಮರೆತು |

ಗುಜುಗುಜುಚಾಡಿಗೆ ಕಿವಿಸೋಲ್ತಯ್ಯೋ

ಕುಜನೋಚಿತವನು ನಾ ಗೆಯ್ದೆ || ೨||

 

ಸವತಿಯರಾಟವೊ; ರಿಪುಗಳ ಕೂಟವೊ

ಅವನೊಳು ಕೇಡನು ಕೂಡಿಸಿತು |

ಅವಿಧೇಯತೆಯನ್ನಗಡನು ಮೂಡಿಸಿ

ಜವದಿಂದೆನ್ನನು ಕಾಡಿಸಿತು ||೩ ||

 

Leave a Reply