ಅಂಕಣಗಳು

Subscribe


 

ಅಭಿನಯಭಾರತೀ- ರತಿಸತ್ಕಾರೆ

Posted On: Friday, June 12th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 40ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ತನ್ನ ಇನಿಯನ ಸ್ವಾಗತ- ಸತ್ಕಾರವನ್ನು ನಾಯಿಕೆಯು ಬಾಹ್ಯ ವಸ್ತುಗಳಿಂದಲ್ಲದೆ ಹೇಗೆ ತನ್ನ ಅಂಗೋಪಾಂಗ ರತಿವಸ್ತುವಿನಿಂದ ಮಾಡಿದಳು ಎಂಬುದಾಗಿ ಸಂಭೋಗಶೃಂಗಾರದ ಸಂವಿಧಾನವನ್ನು ಕವಿನಿಬದ್ಧ ಪ್ರೌಢೋಕ್ತಿಯ ಹಾದಿಯಲ್ಲಿ ಹೇಳಿರುವ ಸೀಸಪದ್ಯವಿದು. ಈ ವಾಸಕಸಜ್ಜೆಗೆ ಪಾದ್ಯವನ್ನೀಯಲು ಕಣ್ಣುಗಳೇ ಕಲಶ, ಬಾಹುಗಳೇ ಸುಮಾಲೆ, ಕಾಂತಾವಲೋಕನಕ್ಕೆ ಆಸ್ಪದ ಮಾಡಿಕೊಟ್ಟಿರುವುದೇ ನೀರಾಜನ, ಮಂದಹಾಸವೇ ಹೂವುಗಳ ಮಳೆ, ಅಧರಪಾನವೇ ಮಧುಪರ್ಕ, ಹೀಗೆ ಆಕೆಯ ತನುಮನವೇ ನೈವೇದ್ಯನಿಧಿ. ಬೇಕೆಂದೇ ಮಾತಿಗೆ ಬಡತನವೆಂಬಂತೆ ನಡೆದುಕೊಳ್ಳುವ ಈಕೆ ಜಾಣೆ, ಪ್ರಗಲ್ಭೆ, ಅನುಕೂಲೆ.

ರತಿಸತ್ಕಾರೆ

ರಾಗ : ಕಲ್ಯಾಣಿ ; ವಿತಾಳ

ಸಸ್ವೇದಸುರುಚಿರಪಯೋಧರವನಿಳಿಸಿಹಳು

ಪಾದ್ಯವೀಯಲು ಕಲಶತತಿಯನಲ್ಲ

ಲಲಿತಬಾಹುಲತಾಸುಮಾಲೆಯನೆ ಸಾರ್ಚಿಹಳು

ಚೆಲುವಿನಿಂದೀವರಸ್ರಜೆಯನಲ್ಲ 

 

ಕಾಂತಾವಲೋಕದಾರಾತ್ರಿಕೆಯ ನೀಡಿಹಳು

ಚಾರುನೀರಾಜನದ ಛವಿಯನಲ್ಲ

ಮೃದುಮಂದಹಾಸಕುಸುಮಗಳ ಮಳೆಗರೆದಿಹಳು

ಕುಂದಮಂದಾರಜಾತಿಗಳನಲ್ಲ 

 

ಅಧರಪಾನದ ಸಾರಮಧುಪರ್ಕವಿತ್ತು ಬಳಿಕ

ತನುಮನೋನೈವೇದ್ಯನಿಧಿನರ್ಪಿಸುತಲಿಹಳು;

ನುಡಿಯ ಬಡತನವರಿತ ಕಡುಜಾಣೆ ನೇರ್ಪಿನಿಂದ

ನಲ್ಲನಿಗೆ ತಾನೆ ಸತ್ಕಾರವಿನ್ನೆಲ್ಲವಾಗಿ 

 

Leave a Reply