ಅಂಕಣಗಳು

Subscribe


 

ಸಾಂಪ್ರತಿಕೆ

Posted On: Tuesday, July 28th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 71ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ರಾ.ಗಣೇಶರು ನೃತ್ಯ ಮತ್ತು ಏಕವ್ಯಕ್ತಿಯಕ್ಷಗಾನಕ್ಕೂ ಅಳವಡುವಂತೆ ರಚಿಸಿದ ಕನ್ನಡ ಅಷ್ಟನಾಯಿಕಾ ಪದಗಳನ್ನೂ ಮತ್ತು ಅದಕ್ಕೆ ಸಮಸ್ಪಂದಿಯಾದ ಅಷ್ಟನಾಯಕ ಪದಗಳನ್ನು ಈಗಾಗಲೇ ನೂಪುರಭ್ರಮರಿ ಹಿಂದಿನ ವರುಷಗಳಲ್ಲಿ ಪ್ರಕಟಿಸಿದ್ದು ಆರ್ಕೈವ್ ಗಳಲ್ಲಿ ಲಭ್ಯವಿದೆ. ಅವನ್ನು ನಮ್ಮ ಸಂಶೋಧನ ನಿಯತಕಾಲಿಕೆ www.noopuradancejournal.org ರಲ್ಲಿ ಚಂದಾದಾರರಾಗಿ ಪಡಕೊಳ್ಳಬಹುದು. ಇನ್ನು ತೆಲುಗು ಭಾಷೆಯಲ್ಲಿ ರಚಿಸಲಾದ ಅಷ್ಟನಾಯಿಕಾ-ನಾಯಕಾ ಪದಗಳನ್ನು ’ರಾಗವಲ್ಲೀರಸಾಲ’- ಕೃತಿ ಒಳಗೊಂಡಿದೆ. ಇದಷ್ಟೇ ಅಲ್ಲದೆ, ನಾಯಿಕಾಲೋಕದ ಅಸಾಧ್ಯ ಸಾಧ್ಯತೆಗಳನ್ನು ಬಗೆಹೊಗುವಲ್ಲಿ ’ಅಭಿನಯಭಾರತೀ’ ಸುಮಾರು ನೂರಕ್ಕೂ ಮಿಗಿಲಾದ ಪದಗಳನ್ನು ಒಳಗೊಂಡಿದೆ. ಗಣೇಶರ ಅಧ್ಯಯನ ಸಾಕಲ್ಯದೃಷ್ಟಿಯ ಬಲದಿಂದ ಈ ಎಲ್ಲಾ ಪದಗಳ ನಾಯಿಕೆಯರು ನವನವೀನವೋ ಎಂಬಂತೆ ನಾಯಿಕಾಪ್ರಪಂಚಕ್ಕೆ ವಿಶೇಷವಾಗಿ ಸೇರ್ಪಡೆಯಾದವರು. ಲೋಕದ ವಿವಿಧ ಭಾವ- ಮನಸ್ಥಿತಿಯ ಸ್ತ್ರೀ-ಪುರುಷರಿಗೆ ಇವರು ಸಂಕೇತರೂಪರು. ಹಾಗೆಂದೇ ಪರಂಪರೆಯ ಅಭಿನಯಚೋದಕವಾದ ವಸ್ತು ಸನ್ನಿವೇಶಗಳಷ್ಟೇ ಅಲ್ಲದೆ ಅಪಾರವಾದ ಸಮಕಾಲೀನ ಅಭಿನಯಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಿಕೊಳ್ಳುವಂತೆ ವಿಭಾವಾನುಭಾವ ಸಾಮಗ್ರಿಯನ್ನು ಒಳಗೊಂಡಿದೆ. ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ಇಂದಿನ ನಾಯಿಕೆ : ನಾಯಕನ ಉದ್ಧಟತನದಿಂದ ಕಸಿವಿಸಿ ಅನುಭವಿಸಿದ್ದರೂ ಆತನ ಮೇಲಿನ ಪ್ರೀತಿ ತೊರೆಯಲಿಚ್ಛಿಸದ ಸ್ವೀಯಾ ನಾಯಿಕೆ, ಅವನನ್ನು ಪರೋಕ್ಷವಾಗಿ ಖಂಡಿಸುತ್ತಲೇ ಸಖಿಯೊಂದಿಗೆ ತನ್ನ ಹತಾಶೆಯನ್ನು ಹೇಳಿಕೊಂಡಿದ್ದಾಳೆ.  ಅವನ ಇಚ್ಛೆ ಬಂದಾಗಲೇ ತನ್ನನ್ನು ಅವನಲ್ಲಿಗೆ ಬರಹೇಳಬೇಕೆಂದೂ, ಅಬಲೆಯ ಮೇಲೆ ಪೌರುಷ ತೋರಿಸುವುದೇ ಎಂದೂ ಬಗೆಬಗೆಯಾಗಿ ಆತನ ನಡತೆಯ ಬಗ್ಗೆ ಪ್ರಶ್ನಿಸಿದ್ದಾಳೆ. ಅಂತೆಯೇ ಅವನು ತನ್ನೊಂದಿಗೆ ಹೇಗೇ ನಡೆದುಕೊಂಡರೂ ತಾನು ಮಾತ್ರ ಕಿಡಿಯಾಡೆನೆಂದೂ, ಕೆಟ್ಟದ್ದನ್ನು ಕಾಣುವುದಿಲ್ಲವೆಂದೂ ಶಿವನಾಣೆ ಯಿಟ್ಟದ್ದನ್ನು ಮರೆತಿಹನೇ, ತನ್ನನ್ನು ಈ ಪರಿ ಗೋಳಾಡಿಸುವುದು ಸರಿಯೇನೇ ಎಂದು ತನ್ನ ಸೌಜನ್ಯವನ್ನು ಹೇಳಿಕೊಂಡಿದ್ದಾಳೆ. ಅವನು ಬೇರೋರ್ವಳ ಸಂಗ ಮಾಡಿದರೂ ನಾನು ಕರುಬಲಾರೆ; ತನ್ನನ್ನು ಬಿಡುವೆನೆಂದು ಹೊರಟರೂ ಅವನಿಗೆ ಆದೀತೇ ಎಂದು ಬೇಗುದಿಯನ್ನ ತೋರಿಸಿದ್ದಾಳೆ.

ಸಾಂಪ್ರತಿಕೆ

ರಾಗ: ರೀತಿಗೌಳ ;     ತಾಳ: ಆದಿ

ಅವನಿಚ್ಛೆ ಬಂದಾಗಲೆನ್ನತ್ತ ಬರಹೇಳೇ |

ಸವೆದೀತು ಸೊಂಪೆಂದು ಮತ್ತೊಮ್ಮೆ ಕೇಳೇ || ಪ ||

 

ಅಬಲಾಮಣಿಯ ಮೇಲೆ ಪೌರುಷವೇನೇ?

ಸೊಬಗೇನೆ ಆ ಮೀಸೆಗೀ ಸಿವುಡು-ಸೇಡು? ||ಅ.ಪ||   

 

ನುಡಿಯಲ್ಲಿ, ನಡೆಯಲ್ಲಿ, ಕೊಡುವಲ್ಲಿ ಬಿಡುವಲ್ಲಿ

ಬಡಿವಾರವನ್ನವನೇಂ ಗೆಯ್ದರೂ |

ಕಿಡಿಯಾಡೆ, ಕೆಡುನೋಡೆ, ಬಡಿದಾಡೆನೆಂದೆಂದೋ 

ಮೃಡನಾಣೆಯಿಟ್ಟುದು ಮರೆತಿರ್ಪನೇ ? ||೧ ||

 

ಛೀಯೆಂದರೂ ಸರಿ; ಹಾ! ಎಂದರೂ ಸರಿ

ಸೈಯೆಂದು ನಾನಿದ್ದ ಪರಿ ಮರೆತುದೇ? |

ಸ್ವೀಯಾಶಿರೋಮಣಿಯ ಬಾಯಾರಿಸುವುದೇನೇ?

ಮಾಯಾವಿತನವನ್ನು ಮೆರೆವುದೇನೇ?    || ೨||

 

ಅವನಾವ ಹೂವನೂ ಮೂಸಿ ಮೈಮರೆತರೂ

ಶಿವನಾಣೆ! ನಾ ಕರುಬೆನೆಂದೊಪ್ಪಿಸೇ |

ಸವಿದಂಬುಲದ ಹಾಗೆ ಚಟವಾಗಿಯೇ ಎನ್ನ

ನವೆಯಿಪ್ಪನಾದರೂ ಬಿಡಲಪ್ಪುದೇ? ||೩ ||

 

Leave a Reply

*

code