ನಮ್ಮ ಬಗ್ಗೆ
ನೂಪುರ ಭ್ರಮರಿಯ ಸಂಪಾದಕೀಯ ಬಳಗ :
ನೂಪುರ ಭ್ರಮರಿಯ ಪ್ರಧಾನ ಸಂಪಾದಕಿ ಮನೋರಮಾ ಬಿ. ಎನ್.
ವೃತ್ತಿಯಿಂದ ಅಧ್ಯಾಪಿಕೆಯೂ, ಸಾಧನೆಯಿಂದ ಕಲಾವಿದೆಯೂ ಆದ ಕುಮಾರಿ ಮನೋರಮಾ. ಬಿ. ಎನ್. ಇವರು ನೂಪುರ ಭ್ರಮರಿಯ ಪ್ರಧಾನ ಸಂಪಾದಕಿಯಾಗಿ ಪತ್ರಿಕೆಯ ಹುಟ್ಟು ಹಾಗೂ ಬೆಳವಣಿಗೆಗೆ ಕಾರಣಕರ್ತರು. ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿ ಹಾಗೂ ಸುಮಾರು ೧೫ ವರ್ಷಗಳ ಭರತನಾಟ್ಯ ವಿದ್ಯಾರ್ಥಿನಿಯಾಗಿರುವ ಇವರು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆಯನ್ನು ಕಂಡುಕೊಂಡರು. ಇದುವೇ ಈ ಪತ್ರಿಕೆಯ ಜನನಕ್ಕೆ ಅವರಿಗೆ ಪ್ರೇರಣೆಯಾಯಿತು.
ಬಾಲ್ಯದಿಂದಲೂ ಲಲಿತಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬೆಳೆದ ಇವರು ಕಲೆಯ ಸಾಧನೆಯ ಮಹದಾಸೆಯನ್ನು ಹೊತ್ತು ಸ್ನಾತಕೋತ್ತರ ಪದವಿಯನ್ನು ಪಡೆದು, ಯು.ಜಿ.ಸಿ. ಪರೀಕ್ಷೆಯನ್ನು ಚೊಚ್ಚಲ ಪ್ರಯತ್ನದಿಂದಲೇ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ವಿದ್ಯಾ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ತಾನೇ ಯು ಎಸ್ ಎ ಯ ಚಿಕಾಗೋದಲ್ಲಿ ನಡೆದ ಅಕ್ಕ- ಕನ್ನಡ ಒಕ್ಕೂಟಗಳ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗಾಗಿ ನಡೆದ ಜಾಗತಿಕ ಲೇಖನ ಸ್ಪರ್ಧೆಯಲ್ಲಿ ಇವರ ‘ಪ್ರದರ್ಶಕ ಕಲೆಗಳಲ್ಲಿ ಕನ್ನಡಿಗರ ಫ್ಯೂಷನ್ ಪರಂಪರೆ’ ಎಂಬ ವಿದ್ವತ್ಪೂರ್ಣ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ಮನ್ನಣೆಯ ಪ್ರಥಮ ಪ್ರಶಸ್ತಿ ದೊರೆತಿದೆ.ಇವರ ಸಾಹಿತ್ಯ/ನೃತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿದ ಅಖಿಲ ಹವ್ಯಕ ಮಹಾಸಭೆಯು ೨೦೦೮-೦೯ ನೇ ಸಾಲಿನ ವಿದ್ವತ್ ಸಮ್ಮಾನನವನ್ನಿತ್ತು ಸನ್ಮಾನಿಸಿ ಗೌರವಿಸಿದೆ.
ತಂದೆ: ಬಿ. ಜಿ. ನಾರಾಯಣ ಭಟ್, ತಾಯಿ : ಸಾವಿತ್ರಿ ಬಿ. ಎನ್, ಸಹೋದರ: ಬಿ.ಎನ್. ರಾಜಗೋಪಾಲ್ ; ಮೂಲತಃ ದಕ್ಷಿಣ ಕನ್ನಡದ ಪಂಜ ಸೀಮೆಯವರಾದರೂ ಮಡಿಕೇರಿಯಲ್ಲಿ ನೆಲೆ ನಿಂತವರು, ಇವರ ಪೂರ್ವಿಕರು ಮಡಿಕೇರಿಯ ಲಿಂಗರಾಜನಿಗೆ ಆಸ್ಥಾನ ಪುರೋಹಿತರಾಗಿ ಸೇವೆ ಸಲ್ಲಿಸಿದವರು. ಮನೋರಮಾ ಅವರ ಪ್ರಾಥಮಿಕ, ಪ್ರೌಢ, ಪಿಯುಸಿ ವಿದ್ಯಾಭ್ಯಾಸ : ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಪ್ರಥಮದರ್ಜೆ ಕಾಲೇಜು, ಮಡಿಕೇರಿ.; ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಕೊಡಗಿಗೇ ಪ್ರಥಮ ಸ್ಥಾನ (೧೨೪/೧೨೫ ಅಂಕ) ಪಡೆದು ಪ್ರತಿಷ್ಠಿತ ಪ್ರಶಸ್ತಿಗಳನ್ನು, ಚಿನ್ನದ ಪದಕವನ್ನು ಪಡೆದವರು. ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪತ್ರಿಕೋದ್ಯಮ, ಮನಃಶಾಸ್ತ್ರ, ಇಂಗ್ಲೀಷ್ ಐಚ್ಛಿಕದಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದರು.
ಭರತನಾಟ್ಯ
ಭರತನಾಟ್ಯದ ಪ್ರಾರಂಭಿಕ ಶಿಕ್ಷಣವನ್ನು ತಮ್ಮ ೨ನೇ ತರಗತಿಯಲ್ಲಿ ಮಡಿಕೇರಿಯ ನಾಟ್ಯನಿಕೇತನ ಸಂಸ್ಥೆಯ ಮಾಜಿ ಪ್ರಾಂಶುಪಾಲೆ, ಪ್ರಸ್ತುತಃ ಚಂದ್ರದೀಪ ನೃತ್ಯಸಂಸ್ಥೆಯ ಪ್ರಾಚಾರ್ಯೆ, ಪಂದನಲ್ಲೂರು ಶೈಲಿಯ ಶ್ರೀಮತಿ ವಿದುಷಿ ವೀಣಾ ಕಾರಂತ್ ಅವರಲ್ಲಿ ಕೈಗೊಂಡು ಪ್ರಾಥಮಿಕ ಮತ್ತು ಮಾಧ್ಯಮಿಕ ನೃತ್ಯ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಅಲ್ಪಕಾಲ ಭಾರತೀಯ ಸಂಗೀತ ನೃತ್ಯ ಕಲಾ ಪರಿಷತ್‌ನ ಗುರು ಅಂಬಳೆ ರಾಜೇಶ್ವರಿ, ಮಂಡ್ಯದ ಗುರುದೇವ ಲಲಿತ ಕಲಾ ಅಕಾಡೆಮಿಯ ಗುರು ಶ್ರೀಮತಿ ವಿದುಷಿ ಚೇತನಾ ರಾಧಾಕೃಷ್ಣ ಅವರಲ್ಲಿ ಶಿಷ್ಯವೃತ್ತಿ ಕೈಗೊಂಡು, ಮಡಿಕೇರಿಯ ನೃತ್ಯ ಮಂಟಪ ಟ್ರಸ್ಟ್‌ನ ಪ್ರಾಚಾರ್ಯೆ ಶ್ರೀಮತಿ ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ ಅವರಲ್ಲಿ ಕಲಾಕ್ಷೇತ್ರ ಶೈಲಿಯ ನೃತ್ಯಾಭ್ಯಾಸ ಮಾಡಿದ ಮನೋರಮಾ, ತದನಂತರ ಸ್ವಂತ ಶ್ರಮದಿಂದ ವಿದ್ವತ್ ಶ್ರೇಣಿಯನ್ನು ಪಡೆದವರು.
ಪ್ರಶಸ್ತಿ, ಪ್ರದರ್ಶನ, ಪರೀಕ್ಷೆಗಳಿಗೆಲ್ಲದಕ್ಕಿಂತಲೂ ನೃತ್ಯದ ಬಗೆಗಿನ ತುಡಿತ, ಅರಿಯುವಲ್ಲಿ ಜ್ಞಾನ ಮುಖ್ಯ ಎನ್ನುವುದು ಇವರ ಅಭಿಪ್ರಾಯ. ‘ಭರತನಾಟ್ಯ ಹಸ್ತಮುದ್ರಾ ವಿನ್ಯಾಸದ ಸಂವಹನ ಸಾಧ್ಯತೆಗಳು’ ಇವರು ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಮಂಡಿಸಿದ ೧೫೦ ಪುಟಗಳ ಸಮೀಕ್ಷೆ, ಸಂದರ್ಶನ, ವಿಮರ್ಶಾತ್ಮಕ ಅಧ್ಯಯನ ಮತ್ತು ವಿದ್ವತ್ ಪೂರ್ಣವಾದ ಪ್ರಬಂಧ.ಹಲವು ನೃತ್ಯಸಂಯೋಜನೆ ಮಾಡಿರುವ ಅನುಭವವಷ್ಟೇ ಅಲ್ಲದೆ, ಸಂಪನ್ಮೂಲ ವ್ಯಕ್ತಿಯಾಗಿಯೂ, ತೀರ್ಪುಗಾರಾಗಿಯೂ, ನೃತ್ಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನೃತ್ಯ ಸಮಾರಂಭಗಳಲ್ಲಿ ಇವರು ನಿರ್ವಹಿಸುವ ಅಚ್ಚುಕಟ್ಟಾದ, ಆಕರ್ಷಕ ನಿರೂಪಣೆ ಜನಮನದ ಮನ್ನಣೆ ಗಳಿಸಿದರೆ, ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿಯ ಜೊತೆಗೆ, ಜಿಲ್ಲಾ ಮತ್ತು ವಿಶ್ವವಿದ್ಯಾನಿಲಯದ ಭರತನಾಟ್ಯ ಸ್ಪರ್ಧೆಗಳಲ್ಲೆಲ್ಲಾ ಬಹುಮಾನಗಳನ್ನು ಬಾಚಿಕೊಂಡಿರುವ ಇವರನ್ನು ಹಲವು ಸನ್ಮಾನಗಳೂ ಅರಸಿ ಬಂದಿವೆ.
ಯಕ್ಷಗಾನ
ಶ್ರೀರಾಮಚಂದ್ರಾಪುರ ಮಠ ಯಕ್ಷಗಾನ ಮೇಳದ ವ್ಯವಸ್ಥಾಪಕರೂ, ಯಕ್ಷಗಾನ, ತಾಳಮದ್ದಳೆ ಕಲಾವಿದ ಉಜಿರೆ ಅಶೋಕ ಭಟ್ ಅವರ ಗರಡಿಯಲ್ಲಿ ಉಜಿರೆಯ ‘ಯಕ್ಷಕೂಟ’ದಲ್ಲಿ ಮನೋರಮಾ ಪಳಗಿದರು. ತೆಂಕುತಿಟ್ಟು ಯಕ್ಷಗಾನದ ಕೌಶಲ್ಯಗಳನ್ನು ಕಲಿತು, ಹವ್ಯಾ ಕಲಾವಿದೆಯಾಗಿ ಸತತ ೩ ವರ್ಷಗಳ ಕಾಲ ಧರ್ಮಸ್ಥಳ ಲಕ್ಷದೀಪೋತ್ಸವ, ಮಹಾನಡಾವಳಿ, ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಅಖಿಲ ಕರ್ನಾಟಕ ಮಹಾ ಯಕ್ಷಗಾನ ಸಮ್ಮೇಳನ, ಬೆಂಗಳೂರು ದೂರದರ್ಶನ, ಉಜಿರೆ, ಬೆಳ್ತಂಗಡಿ, ಮಂಗಳೂರು, ಮಡಿಕೇರಿ ಮುಂತಾದವನ್ನೂ ಒಳಗೊಂಡಂತೆ ಪ್ರತಿಷ್ಟಿತ ಕಲಾವಿದರೊಂದಿಗೆ ಸುಮಾರು ೫೦ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಸಂಜಯ, ಸೀತೆ, ಮಯೂರದ್ವಜ, ಲಕ್ಷ್ಮಿ, ಮೋಹಿನಿ, ದೇವಿ ಮುಂತಾದ ಭಾವನಾತ್ಮಕ ಅಭಿನಯಪೂರ್ಣ ಪಾತ್ರಗಳು ಮತ್ತು ರಾಜ, ಹಾಸ್ಯ, ಪಕಡಿ ವೇಷಗಳು ಮನ್ನಣೆಗೆ ಪಾತ್ರವಾಗಿದೆ. ಯಕ್ಷಗಾನದ ಮಾಸಿಕ ಯಕ್ಷಪ್ರಭಾದ ದಶಮಾನೋತ್ಸವದ ಸಂದರ್ಭದಲ್ಲಿ ಸನ್ಮಾನಿತರಾದ ಮನೋರಮಾ, ಮಂಗಳೂರಿನ ಹೆಮ್ಮೆಯ ಯಕ್ಷೋತ್ಸವ ಸ್ಪರ್ಧೆಯಲ್ಲಿ ವಿಶೇಷ ಪ್ರಶಸ್ತಿಗೆ ಪಾತ್ರವಾಗಿ, ಸತತ ೩ ವರ್ಷಗಳ ಕಾಲ ಅಲ್ಲಿ ನೀಡಿದ ಪ್ರದರ್ಶನಗಳಲ್ಲಿ ಹಿರಿಯ ಕಲಾವಿದರಿಂದ ಮೆಚ್ಚುಗೆಯನ್ನೂ ಪಡೆದಿದ್ದಾರೆ.
ಅಷ್ಟೇ ಅಲ್ಲದೆ ಯಕ್ಷ ದಿಗ್ಗಜರಿಂದ ಇವರ ಪತ್ರಿಕೆಯ ಪ್ರಯತ್ನಗಳಿಗೆ ಹಾರ್ದಿಕ ಮನ್ನಣೆ ದೊರೆತಿದೆ. ಯಕ್ಷಗಾನ ಅಕಾಡೆಮಿ ಹಮ್ಮಿಕೊಂಡ ಸುಳ್ಯದಲ್ಲಿ ಜರುಗಿದ ಯಕ್ಷಗಾನ ವಿದ್ವಾಂಸರನ್ನೊಳಗೊಂಡ ರಾಜ್ಯ ಮಟ್ಟದ ಯಕ್ಷಗಾನ ಶಿಕ್ಷಣ ಕಾರ್ಯಾಗಾರ, ಮತ್ತು ಪರೀಕ್ಷಾ ಪದ್ಧತಿ ಕರಡು ಪ್ರತಿಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮನ್ನಣೆಗೆ ಪಾತ್ರರಾದವರಲ್ಲಿ ಕೆಲವೇ ಕೆಲವು ಮಹಿಳೆಯರಲ್ಲಿ ಮನೋರಮಾ ಅವರು ಒಬ್ಬರು.
ಏಕಪಾತ್ರಾಭಿನಯ-ಏಕವ್ಯಕ್ತಿ ಪ್ರದರ್ಶನ
‘ಚಂದ್ರಹಾಸ- ದುಷ್ಟಬುದ್ಧಿ’- ಜನಮನ್ನಣೆ ಮತ್ತು ಹಲವು ಜಿಲ್ಲಾ, ವಿಶ್ವವಿದ್ಯಾನಿಲಯ, ರಾಜ್ಯ ಮಟ್ಟದ ಪ್ರಶಸ್ತಿಗಳನು ತಂದಿತ್ತ ಇವರ ಏಕಪಾತ್ರಾಭಿನಯ. ಸುಮಾರು ೫೦ ಕ್ಕೂ ಹೆಚ್ಚು ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮೂಕಾಭಿನಯ, ಕಿರುನಾಟಕಗಳನ್ನು ನಿರ್ದೇಶಿಸಿದ ಅನುಭವ, ರಾಷ್ಟ್ರೀಯ ಪ್ರಶಸ್ತಿಗಳೂ ಜೊತೆಗಿದೆ.
ಸಂಗೀತ, ಸುಗಮ ಸಂಗೀತ
ಕರ್ನಾಟಕ ಸಂಗೀತ ಶಾಖೆಯ ದಿವಂಗತ ಸುಧಾ ಶ್ರೀಧರ್, ವಿದುಷಿ ಶಾಂತಾಬಾಯಿ ಅವರಲ್ಲಿ ಅಭ್ಯಸಿಸಿ, ವಿದುಷಿ ಶ್ರೀಮತಿ ಸೌಮ್ಯಾ ರವಿಶಂಕರ್ ಇವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ, ಸಂಗೀತ ಪ್ರಾಥಮಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರು. ಜಿಲ್ಲಾ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ೭೫ಕ್ಕಿಂತಲೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರು, ದೂರದರ್ಶನದಲ್ಲಿ, ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳಲ್ಲಿ ಸ್ವರ ಸಂಯೋಜಿಸಿ ಸುಗಮಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.
ಸಾಹಿತ್ಯ ಸಂಬಂಧಿ ಚಟುವಟಿಕೆಗಳು
ಬಾಲ್ಯದಿಂದಲೇ ಭಾಷಣ, ಚರ್ಚೆ, ಪ್ರಬಂಧ, ಆಶುಭಾಷಣ, ಕಥೆ-ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಹಳಷ್ಟು ಬಹುಮಾನಗಳನ್ನು ಬಾಚಿಕೊಂಡಿರುವ ಇವರು, ಕಾರ್ಯಕ್ರಮ ನಿರೂಪಣೆಯಲ್ಲೂ ಸಿದ್ಧಹಸ್ತರು. ರಾಜ್ಯ ಸಹಕಾರ ಮಹಾಮಂಡಳ, ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಹೊಂಬೆಳಕು ಸಂಸ್ಥೆ, ಎನ್‌ಎಂಕೆಆರ್‌ವಿ ಕಾಲೇಜು ಮುಂತಾಗಿ ಪ್ರಸಿದ್ಧ ರಾಜ್ಯ ಮಟ್ಟದ ಸಾಹಿತ್ಯ ಸಂಬಂಧಿ ಚಟುವಟಿಕೆಗಳಲ್ಲಿ ಪ್ರಶಸ್ತಿ ಪಡೆದಿರುವ ಮನೋರಮಾ, ೨೦೦೨ರಲ್ಲಿ ಕೊಡಗಿನ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಕುರಿತಾಗಿ ಇತಿಹಾಸ ಪುಸ್ತಕ ರಚಿಸಿ, ವಿದ್ವಜ್ಜನರ ಸಮ್ಮುಖದಲ್ಲಿ ಅನಾವರಣಗೊಳಿಸಿದ್ದಾರೆ. ಇದೀಗ ಈ ಪುಸ್ತಕದ ಪರಿಷ್ಕೃತ ಎರಡನೇ ಆವೃತ್ತಿ ಇತ್ತೀಚೆಗೆ ಫೆಬ್ರವರಿ ೧೦ರಂದು ನಡೆದ ನೂಪುರ ಭ್ರಮರಿ ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ ಮತ್ತು ಭರತನಾಟ್ಯ ಹಸ್ತಮುದ್ರೆಗಳ ಕುರಿತಾದ ಅಧ್ಯಯನ ಕೃತಿಯೊಂದು ಪ್ರಕಾಶನಗೊಂಡಿದೆ.
ಹವ್ಯಾಸಿ ಪತ್ರಕರ್ತೆಯಾಗಿ ಇವರ ಸುಮಾರು ೧೫೦ಕ್ಕಿಂತಲೂ ಹೆಚ್ಚು ಲೇಖನ, ಬರಹ, ನುಡಿಚಿತ್ರಗಳು ರಾಜ್ಯ ಮಟ್ಟದ ದೈನಿಕ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಪ್ರಶಂಸೆಗೆ ಪಾತ್ರವಾಗಿವೆ. ರಾಷ್ಟ್ರ, ರಾಜ್ಯಮಟ್ಟದ ಹಲವು ವಿಚಾರ ಸಂಕಿರಣ, ಕಾರ್ಯಗಾರ-ಶಿಬಿರಗಳಲ್ಲಿ ಭಾಗವಹಿಸಿರುವ ಇವರು, ಹಲವು ವಾರ್ಷಿಕ ಸಂಚಿಕೆಗಳ ಸಂಪಾದಕತ್ವದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅತಿಥಿ ಅಂಕಣಗಾರ್ತಿಯಾಗಿ, ಪತ್ರಿಕೆಗಳಿಗೆ ಆಹ್ವಾನಿತ ಬರಹಗಾರರಾಗಿ ಹಲಕೆಲವು ಕಲಾಸಂಘಟನೆಗಳ ಸಕ್ರಿಯ ಸದಸ್ಯರಾಗಿ ಪರಿಚಿತರು ಕೂಡಾ!
‘ಮುದ್ರಾರ್ಣವ’
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. (ಈ ನಿಟ್ಟಿನಲ್ಲಿ ಪತ್ರಿಕೆಯೂ ‘ಹಸ್ತಮಯೂರಿ’ ಯ ಮೂಲಕ ಗಮನಾರ್ಹ ರೀತಿಯಿಂದ ಪ್ರಯತ್ನ ಮಾಡುತ್ತಿರುವುದು ನಿಮಗೆ ತಿಳಿದ ವಿಷಯವೇ ) ಆದ್ದರಿಂದ ಹಸ್ತ ಮುದ್ರೆಗಳ ಭಾವ, ಉಪಯೋಗ, ಸಂವಹನದ ಸಾಧ್ಯತೆಗಳನ್ನು ಗಮನದಲ್ಲಿರಿಸಿ ಅವುಗಳ ಬಗೆಗೆ ವಿಸ್ತೃತ ಅಧ್ಯಯನ ಮಾಡಿದ ಫಲವೇ ;
‘ಮುದ್ರಾರ್ಣವ’
ಸುಮಾರು ೩೦೦ ಪುಟಗಳ ಗ್ರಂಥ. ಮನೋರಮಾ ಬಿ.ಎನ್ ಅವರ ಸಂಶೋಧನಾ ಅಧ್ಯಯನದ ಫಲ.
ನವೆಂಬರ್ 22, 2009 ರಂದು ಧರ್ಮಸ್ಥಳದ ಬಳಿ ಇರುವ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಪ್ರಕಾಶನದೊಂದಿಗೆ ಯಕ್ಷಸಪ್ತಾಹದ ಜೊತೆಗೆ ಭವ್ಯವೇದಿಕೆಯಲ್ಲಿ ಲೋಕಾರ್ಪಣ.
ಕೃತಿಯ ವಿಷಯದೆಡೆಗೆ ಕ್ಷಕಿರಣ
- ಭರತನಾಟ್ಯದಲ್ಲಿ ಉಪಯೋಗಿಸಲಾಗುತ್ತಿರುವ ಹಸ್ತಗಳನ್ನು ಪ್ರಧಾನವಾಗಿರಿಸಿಕೊಂಡು ಇತರೆ ಮರೆಯಾಗಿರುವ ಹಸ್ತಗಳ ಕುರಿತ ಅವಲೋಕನ ಮತ್ತು ಅವುಗಳ ಸಂವಹನ ಪ್ರಕ್ರಿಯೆ ಎಷ್ಟರ ಪಟ್ಟಿಗೆ ಮಹತ್ವಪೂರ್ಣವಾಗಿದೆ ಎಂಬುದು ಸಂಸೋಧನೆಯ ಮೂಲ ಉದ್ದೇಶ. ಜೊತೆಗೆ ಇತರೆ ನೃತ್ಯಪದ್ಧತಿ (ಉದಾ: ಕಥಕ್ಕಳಿ, ಮಣಿಪುರಿ, ಓಡಿಸ್ಸಿ, ಯಕ್ಷಗಾನ)ಗಳಲ್ಲಿ ಬಳಕೆಯಾಗುತ್ತಿರುವ ಹಸ್ತಗಳು ಮತ್ತು ಅವುಗಳಲ್ಲಿ ಎಷ್ಟು ನಾವು ದಿನನಿತ್ಯದ ಜೀವನದಲ್ಲಿ ಬಳಸಿಕೊಳ್ಳುತ್ತೇವೆ ಎಂಬ ಅವಲೋಕನ. ಮತ್ತು ಅವುಗಳಲ್ಲಿನ ಸಮಾನ ಮತ್ತು ವ್ಯತ್ಯಾಸ ಅಂಶಗಳೆಡೆಗೆ ದೃಷ್ಟಿ.
- ಅಭಿನಯದರ್ಪಣದ ಅಂಶಗಳನ್ನೇ ಪ್ರಧಾನವಾಗಿ ಬಳಸಿಕೊಂಡು ಅಧ್ಯಯನ ನಡೆದರೂ ಉಳಿದಂತೆ ನಾಟ್ಯಶಾಸ್ತ್ರ, ಹಸ್ತ ಮುಕ್ತಾವಳಿ, ಹಸ್ತ ಲಕ್ಷಣ ದೀಪಿಕಾ, ಭರತಸಾರ, ಭರತಕಲ್ಪಲತಾ ಮಂಜರಿ, ಸಾರಸಂಗ್ರಹ, ಲಾಸ್ಯರಂಜನ, ಸಂಗೀತ ರತ್ನಾಕರ, ನರ್ತನನಿರ್ಣಯ, ಬಾಲರಾಮ ಭರತ, ಪುರಾಣಗಳು, ಸಂಹಿತೆಗಳು, ಪ್ರಣೀತಗಳು, – ಹೀಗೆ ಹಲವಾರು ಗ್ರಂಥಗಳಲ್ಲಿ ಪ್ರಸ್ತಾಪಿಸಿದ ಹಸ್ತಗಳು, ಅವುಗಳ ವಿನಿಯೋಗ, ಮಹತ್ವ, ಪ್ರಚಲಿತದಲ್ಲಿ ಉಪಯೋಗವಾಗುತ್ತಿರುವ ಹಸ್ತಗಳು, ಅವುಗಳ ಮೂಲ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಗ್ರಾಂಥಿಕ ಹಿನ್ನಲೆಗಳು.
- ಹಸ್ತ ಮುದ್ರೆಗಳು ಮುದ್ರಾವಿಜ್ಞಾನದಲ್ಲಿ, ಹಠಯೋಗ ಪ್ರದೀಪಿಕಾ ಮುಂತಾಗಿ ಯೋಗಶಾಸ್ತ್ರದಲ್ಲಿ, ಮುದ್ರಾ ಶಾಸ್ತ್ರ, ಧಾರ್ಮಿಕ ಪೂಜಾ ವಿಧಿ, ಪ್ರತಿಮಾಶಾಸ್ತ್ರ, ತಂತ್ರ-ಮಂತ್ರಗಳಲ್ಲಿ ಹೇಗೆ ಬಳಕೆಯಾಗುತ್ತಿವೆ ಮತ್ತು ಅವುಗಳ ಉಪಯೋಗ. ಮುಖ್ಯವಾಗಿ ಮುದ್ರೆಗಳ ಬಳಕೆಯಿಂದಾಗುವ ಆರೋಗ್ಯಕರ ಆಯಾಮಗಳ ತುಲನೆ.
- ಅಧ್ಯಯನಕ್ಕೆ ಅವಶ್ಯವಿರುವ ಇತಿಹಾಸ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರಿಂದ ಆಳ ಸಂದರ್ಶನ, ಪ್ರದರ್ಶನಗಳ ಸಮೀಕ್ಷೆ, ಗ್ರಂಥ ಅಧ್ಯಯನ.
ವಿಷ್ಣುಪ್ರಸಾದ್ ನಿಡ್ಡಾಜೆ :
ಪ್ರಸ್ತುತ ಫೆಡರಲ್ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕರಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತರು, ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ ಗ್ರಾಮದ ನಿಡ್ಡಾಜೆ
ಮನೆತನದವರು. ಪುತ್ತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಉನ್ನತ ದರ್ಜೆಯಲ್ಲಿ ಪೂರ್ಣಗೊಳಿಸಿದರು. ಕೆಲವು ಕಾಲ ಮೂಡಬಿದ್ರಿಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ, ಕೆಲವು ಕಾಲ ಕಂಪೆನಿಯೊಂದರಲ್ಲಿ ಗುಣಮಟ್ಟ ನಿಯಂತ್ರಣ ರಾಸಾಯನಿಕ ತಜ್ಞರಾಗಿಯೂ ಸೇವೆ ಸಲ್ಲಿಸಿದ ವಿಷ್ಣುಪ್ರಸಾದ್ ; ಉತ್ತಮ ಚಿಂತಕರೂ, ಕಲಾಸಕ್ತರೂ ಹೌದು. ನೂಪುರ ಭ್ರಮರಿ ಬಳಗದ ಕ್ರಿಯಾಶೀಲ ಸದಸ್ಯರಾಗಿರುವ ಇವರು, ಪತ್ರಿಕೆಯ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಮಹೇಶ್ ಎಲ್ಯಡ್ಕ :
ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಮೂಲತಃ ಪುತ್ತೂರು ತಾಲೂಕಿನ ಮಾಡಾವು ಸನಿಹದ ಎಲ್ಯಡ್ಕ ಮನೆತನದವರು.
ಕೆಯ್ಯೂರಿನಲ್ಲಿ ಪ್ರಾಥಮಿಕ,ಪ್ರೌಢ ವಿದ್ಯಾಭ್ಯಾಸ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಪದವಿ ವ್ಯಾಸಂಗ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಾನಿಕ್ಸ್ ಸ್ನಾತಕೋತ್ತರ ಪದವಿಯನ್ನು ಉನ್ನತದರ್ಜೆಯಲ್ಲಿ ಪಡೆದ ಇವರು, ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿಯುಳ್ಳವರು. ಸಾಹಿತ್ಯ, ಧಾರ್ಮಿಕ ವಿಷಯಗಳಲ್ಲಿ ಉತ್ತಮ ಚಿಂತನೆಗಳುಳ್ಳ ಮಹೇಶ್, ತಮ್ಮ ಗೆಳೆಯರ ಬಳಗದೊಂದಿಗೆ ರೂಪಿಸಿರುವ ಧ್ಯೇಯ ಟೆಕ್ನಾಲಜಿ -ಮಾಹಿತಿ, ವೆಬ್ಸೈಟ್ ನಿರ್ಮಾಣ-ನಿರ್ವಹಣೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಮನ್ನಣೆ, ಯಶಸ್ಸು ಪಡೆಯುತ್ತಿದೆ. ಇವರು ಭ್ರಮರಿಯ ಬಳಗದವರಾಗಿ ವೆಬ್‌ಸೈಟ್‌ನ ಜವಾಬ್ದಾರಿ ಹೊತ್ತಿದ್ದಾರೆ.
ರಾಜಗೋಪಾಲ ಬಿ. ಎನ್
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೈಕ್ರೋಬಯಾಲಜಿ ಎಂಎಸ್ಸಿ ಓದುತ್ತಿರುವ ಇವರು ನೂಪುರ ಭ್ರಮರಿಯ ಕಚೇರಿ ನಿರ್ವಹಣೆಯ ಜವಾಬ್ದಾರಿ ಹೊತ್ತವರು. 
ವಿಮರ್ಶಕಶೀಲ ವ್ಯಕ್ತಿತ್ವದ ರಾಜ್, ಸರಳ ನಡೆನುಡಿಯ ಹವ್ಯಾಸಿ ಬರಹಗಾರರು.
ಸುನಿಲ್ ಕುಲಕರ್ಣಿ
ಮೂಲತಃ ಬೆಳಗಾವಿಯವರಾದ ಇವರು, ಮಂಗಳೂರಿನಲ್ಲಿ ನೆಲೆ ನಿಂತವರು. ಅಕ್ಷರೋದ್ಯಮ ಪ್ರೀ-ಪ್ರೆಸ್ ನ ಜವಾಬ್ದಾರಿ ಹೊತ್ತ ಇವರು ಅಸೀಮಾ, ಚಿತ್ತಾರ ಮುಂತಾಗಿ ಹಲವು ಪತ್ರಿಕೆಗಳ ವಿನ್ಯಾಸಕಾರರು ಹೌದು.
ಉತ್ತಮ ಸಂಘಟಕ, ಪುಟ ವಿನ್ಯಾಸಕ, ಸಮನ್ವಯಕಾರ, ಸರಳ ವ್ಯಕ್ತಿತ್ವದ ಚಿಂತಕ. ಇವರು ನೂಪುರದ ಮುದ್ರಣದ ಹೊಣೆ ಹೊತ್ತಿದ್ದಾರೆ.
ಸಿ. ಎಸ್. ರಾಮಚಂದ್ರ ಹೆಗಡೆ :

ಶಿವಮೊಗ್ಗ ಜಿಲ್ಲೆಯ ಚಂದಳ್ಳಿ ಗ್ರಾಮದವರಾದ ರಾಮಚಂದ್ರ ಹೆಗಡೆ ಬಾಲ್ಯದಿಂದಲೂ ಶ್ರಮಜೀವಿ, ಸಂಘಟನಾಶೀಲ, ಸಾಹಿತ್ಯಾಸಕ್ತ; ರಾಷ್ಟ್ರ ಜಾಗೃತಿಯ ಕುರಿತಾಗಿ ಪ್ರೌಢ ಚಿಂತನೆಗಳನ್ನು ಹೊಂದಿರುವ ಇವರು, ಮಲ್ನಾಡಿ ಹಳ್ಳಿಯಲ್ಲಿ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಕೈಗೊಂಡು, ಮೈಸೂರಿನಲ್ಲಿ ಎಂಜಿನಿಯರಿಂಗ್ ಪದವಿ ಉನ್ನತ ದರ್ಜೆಯಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯಮದಲ್ಲಿ ವೃತ್ತಿ. ಹಳ್ಳಿಗಾಡಿನ ಬರಹಗಾರರ ಪ್ರತಿಭೆಯನ್ನು ಪೋಷಿಸಲು, ಪ್ರೋತ್ಸಾಹ ನೀಡಲು ಮತ್ತು ಸಾಹಿತ್ಯ, ರಾಷ್ಟ್ರ ಜಾಗೃತಿಯನ್ನು ಸಮರ್ಥವಾಗಿ ಅಭಿವ್ಯಕ್ತಿಸಲು ಹಲವಾರು ಶ್ರಮದ ನಡುವೆ ಪ್ರಾರಂಭಿಸಿದ ‘ಚೈತ್ರರಶ್ಮಿ’ಎಂಬ ಸದಭಿರುಚಿ ಮಾಸಿಕ ಇವರ ಪ್ರವೃತ್ತಿ.ಇತ್ತೀಚೆಗೆ ತಾನೇ ಚೈತ್ರರಶ್ಮಿ ಹಲವು ಬರಹಗಾರರಿಗೆ ಉತ್ತಮ ವೇದಿಕೆಯನ್ನು, ಸದಭಿರುಚಿಯ ಓದುಗ ಮತ್ತು ಬರಹಗಾರರ ಬಳಗವನ್ನು ಸೃಷ್ಟಿಸಿರುವುದಲ್ಲದೆ, ಯಶಸ್ವೀ ೪ ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.
ಅಷ್ಟೇ ಅಲ್ಲ, ನೀವೆಲ್ಲರೂ ನಮ್ಮವರೇ! ನಮ್ಮ ಜೊತೆಗಿದ್ದೀರಿ. ಪ್ರತಿ ತಿಂಗಳು ಪತ್ರಿಕೆಯ ಬಳಗಕ್ಕೆ ಸೇರ್ಪಡೆಯಾಗುತ್ತಿರುವ ಆಸಕ್ತ ಮಿತ್ರರ ಬಳಗವನ್ನು ಮುಂದಿನ ಪುಟಗಳಲ್ಲಿ ನೋಡಿರಿ.




October 19th, 2009 at 11:58 am
ತುಂಬ ಚಂದದ ಜಾಲ ನಿಮ್ಮದು.
October 23rd, 2009 at 5:29 pm
ಧನ್ಯವಾದ. ನಿಮ್ಮ ಪ್ರೋತ್ಸಾಹ ಇರಲಿ ಅನವರತ.