ಅಂಕಣಗಳು

Subscribe


 

ಅಲಪದ್ಮ ಹಸ್ತ

Posted On: Thursday, April 15th, 2010
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

Copyrights reserved. No use Without prior permission.

ಕ್ಷಣ: ಪದ್ಮಕೋಶಹಸ್ತವನ್ನು ಒಳಭಾಗಕ್ಕೆ ವಾಲಿಸಿ ಹಿಡಿದು ಬೆರಳುಗಳನ್ನು ದೂರದೂರವಾಗಿ ಹರಡಿದಂತೆ ಇರಿಸಬೇಕು.  ಕಿರುಬೆರಳಿನ ಕಡೆಯಿಂದ ಎಲ್ಲಾ ಬೆರಳುಗಳು ಒಂದಕ್ಕಿಂತ ಒಂದು ಹೆಚ್ಚು ಹೆಚ್ಚು ದೂರವಾಗಿರಬೇಕು. ನಾಟ್ಯಶಾಸ್ತ್ರದಲ್ಲಿ ಈ ಹಸ್ತಕ್ಕೆ ಅಲಪಲ್ಲವ ಎಂದು ಹೆಸರು. ಅಲಪಲ್ಲವ ಎಂದರೆ ಅಲಂಕೃತ ಚಿಗುರು ಎಂದರ್ಥ. ಹಸ್ತ ಮುಕ್ತಾವಳಿಯಲ್ಲಿ ಅಲಪದ್ಮಕ ಎಂಬ ಹೆಸರೂ ಇದೆ. ವಿಷ್ಣುಧರ್ಮೋತ್ತರಪುರಾಣದಲ್ಲಿ ಕೋಲಪದ್ಮಕ ಎಂಬ ಹೆಸರಿದೆ. ಪ್ರತಿಮಾಶಾಸ್ತ್ರದಲ್ಲಿ ವಿಸ್ಮಯಮುದ್ರೆಯಾಗಿಯೂ ಕಾಣಿಸಲ್ಪಟ್ಟಿದೆ. ಒಡಿಸ್ಸಿಯಲ್ಲಿ ಈ ಹಸ್ತವನ್ನು ಕ್ಷಿಪ್ತ ಎನ್ನುವರು.

ಕೃಷ್ಣನು ಬೆಣ್ಣೆ ಕದಿಯುವಾಗ ಉಂಟಾದ ಹಸ್ತ. ಗಂಧರ್ವ ವರ್ಣ, ಶ್ಯಾಮಲ ಬಣ್ಣ, ಋಷಿ : ವಸಂತ, ಅಧಿದೇವತೆ : ಸೂರ್ಯ. ಇದು ಪುರುಷಹಸ್ತ ಪ್ರಕಾರದಲ್ಲಿದೆ.

ವಿನಿಯೋಗ : ಅರಳಿದ ಹೂವು, ಬೇಲ ಮತ್ತು ಸೇಬಿನ ಹಣ್ಣು, ಗುಂಡಗಿರುವುದು, ಸ್ತನ, ವಿರಹ, ಕನ್ನಡಿ, ಪೂರ್ಣಚಂದ್ರ, ಸೌಂದರ್ಯಭಾವ, ತಲೆಯಗಂಟು (ಕೂದಲ ತುರುಬು) ಚಂದ್ರಶಾಲೆ, ಗ್ರಾಮ, ಉಗ್ರಕೋಪ, ಕೆರೆ, ಗಾಡಿ, ಚಕ್ರವಾಕ ಪಕ್ಷಿ, ಕಲಕಲವೆಂಬ ಶಬ್ದ, ಹೊಗಳುವಿಕೆ.

ಇತರೇ ವಿನಿಯೋಗ : ಸುಳಿ, ‘ನನ್ನಲ್ಲಿ ಇಲ್ಲ’ ಎಂಬ ಮಾತು, ಮಾಧುರ್ಯ, ಚಿಗುರು, ‘ಏನು?’ ಎಂಬ ಪ್ರಶ್ನೆ, ಪಕ್ಷಿಯು ಹಾರುವುದು, ‘ನೀನು ಯಾರ ಕಡೆಯವನು’; ‘ಇಲ್ಲ’-ಎಂಬ ಮಾತುಗಳು, ತಡೆಯುವುದು, ತುಚ್ಛವಾಗಿ ಮಾತನಾಡುವುದು ಮತ್ತು ಸುಳ್ಳು ಮಾತು, ಭ್ರಾಂತವಾಗಿ ನರ್ತನ, ಪ್ರಾಂತನೃತ್ತವೆಂಬ ನೃತ್ಯಪ್ರಕಾರ, ವಿಕಾರ, ಸಮಯ, ರಾಜ, ತಾಜಾ ಬೆಣ್ಣೆ, ಕಾಯಿ, ಕಡುಬು, ಶಿಖೆ, ಪದ್ಮ, ಕಿರೀಟ, ಹೂಗುಚ್ಛ, ವೃತ್ತಾಕಾರ, ಹೊಗಳುವುದು, ಕೋಟೆ, ಸೌಧ ಅಥವಾ ಅರಮನೆ, ಕೂದಲನ್ನು ಹೆಣೆಯುವುದು, ಸಾಧು ಭಾವ, ತಾಳೆಮರದ ಹಣ್ಣು, ಎದೆಯೆಂಬ  ಕಮಲ, ಬದಲಾವಣೆ, ಬೇರ್ಪಡುವಿಕೆಯ ದುಃಖ, ತಲೆ, ಉದ್ವೇಷ್ಟಿತ ಚಲನೆ, ಸಂತೋಷ, ಸಿಹಿ, ಸವಿಯಾದ ಭಾವ, ಔದಾರ್ಯ, ಧರ್ಮ, ನಿರಾಶೆ, ‘ಅಪ್ಪಟ ಬೆಣ್ಣೆಯಿಂದ ಮಾಡಿದ ತುಪ್ಪವೇ’ ಎಂದು ಪರೀಕ್ಷೆ, ಮೋದಕ, ‘ಮಾತಿನಲ್ಲಿ ಅರ್ಥವಿಲ್ಲ’-ಪ್ರತಿಷೇಧ ಎಂದು ಹೇಳಲು, ಸ್ತ್ರೀಯರು ತಮ್ಮ ಆಶ್ಚರ್ಯ ಸೂಚನೆಗೆ, ಮುಖಚಲಿಯೆಂಬ ಪ್ರಾರಂಭಿಕ ನೃತ್ಯದಲ್ಲಿ ಇದರ ಬಳಕೆಯಾಗುತ್ತದೆ.

ಸತ್ಯಭಾಮೆ-ರಾಧಿಕೆ-ಗೃಥಾಚೀ-ಮೇನಕ-ತಿಲೋತ್ತಮೆ-ರಂಭಾ-ಊರ್ವಶಿ ಮುಂತಾದ ಸ್ತ್ರೀಯರ, ಇನ್ನುಳಿದ ಅಪ್ಸರೆಯರ-ಗಂಧರ್ವ ಕನ್ಯೆಯರ-ನಾಗಕನ್ಯೆಯರ-ಲಕ್ಷ್ಮಿ-ಪಾರ್ವತಿ-ಸರಸ್ವತೀದೇವಿಯರ ಸೂಚನೆಗೆ, ಯುವತಿ, ನಿಂಬೆ-ಕಿತ್ತಳೆ ಮುಂತಾದ ಹಣ್ಣುಗಳು, ಮಿಶ್ರ ಜಾತಿ ಮಾನವ, ಬಂಧ, ಧ್ರುವ, ನಿಯಮಿತ, ಇಷ್ಟ, ಕುಮುದ ಪುಷ್ಪ, ಅರಳುತ್ತಿರುವ ಹೂವುಗಳು, ನಾರಿಕೇಳ, ದುಂಡಗಿರುವುದು, ನಪುಂಸಕ, ಕೈಯ್ಯಲ್ಲಿ ಕಾಸಿಲ್ಲದವ, ಪ್ರತಿಶೇಧ, ಕಾರ್ಯಸಾಧನೆ, ಅರ್ಥವಿಲ್ಲದಿರುವಿಕೆ, ಧೈರ್ಯ, ಛತ್ರಿ, ಉತ್ಕಂಟಿತ ನಾಯಿಕಾ ಸಂದರ್ಭದಲ್ಲಿ ಬಳಕೆಯಾಗುತ್ತದೆ.

ಸಂಕರ ಹಸ್ತ ವಿಭಾಗದಲ್ಲಿ ಅಲಪದ್ಮಕ ಹಸ್ತವನ್ನು ಮೇಲ್ಭಾಗದಲ್ಲಿ ಹಿಡಿದರೆ ಕಿರೀಟವೆಂದೂ ಅಧೋಮುಖವಾಗಿ ಹಿಡಿದರೆ ತಲೆಯೆಂದೂ, ಭುಜ ಪ್ರದೇಶದಲ್ಲಿ, ಹಿಡಿದರೆ ಮಡಕೆಯೆಂದೂ, ಕಿವಿಯ ಪ್ರದೇಶದಲ್ಲಿ ಹಿಡಿದರೆ ತುರುಬನ್ನು ತೋರಿಸುವುದು ಎಂದೂ, ಅಭಿನಯದಲ್ಲಿ ಚಾಲಿಸಲ್ಪಟ್ಟರೆ ಯೌವನವೆಂದೂ ಅರ್ಥ.

ನಾನಾರ್ಥ ಹಸ್ತ ವಿಭಾಗದಲ್ಲಿ ಅಲಪದ್ಮ ಮತ್ತು ಸಿಂಹಮುಖ ಹಸ್ತಗಳನ್ನು ಕಿವಿಯ ಪ್ರದೇಶದಲ್ಲಿ ಚಾಲಿಸಿದರೆ ಶರದೃತುವೆಂದೂ ಅರ್ಥ. ಅಲಪದ್ಮವನ್ನು ಮುಖದ ಸಮೀಪ ಹಿಡಿದರೆ ಉತ್ಸಾಹ, ಶಕ್ತಿ ಎಂಬರ್ಥದಲ್ಲೂ, ಅದೇ ಹಸ್ತವನ್ನು ಊರ್ಧ್ವ ಭಾಗದಲ್ಲಿ ಚಾಲಿಸಿದರೆ ಪ್ರಭು ಶಕ್ತಿ’ಎಂದೂ ಅರ್ಥ.  ಬಿಡಿಬಿಡಿಯಾಗಿ ಹಿಡಿದು ಚಾಲಿಸಿದರೆ ಚೆನ್ನಾಗಿ ಭಾಗ್ಯ ಅನುಭವಿಸುವವನು ಎಂದೂ, ಕಿವಿಯ ಬಳಿ ಹಿಡಿದರೆ ಗ್ರಹಿಸುವುದು ಎಂದೂ, ಮುಂದೆ ಹಿಡಿದರೆ ಸುಂದರವಾದುದೆಂದು, ಬಲಕೈಯ್ಯ ಅಲಪದ್ಮವನ್ನು ಎಡಕೈಯ್ಯ ಮೇಲೆ ಹಿಡಿದರೆ ಅಚ್ಚರಿ ಅಥವಾ ವಿಚಿತ್ರ ಭಾವವನ್ನು, ಎದೆಯ ಬಳಿ ಅಲಪದ್ಮಗಳನ್ನು ಹಿಡಿದರೆ ಸ್ವರ್ಗೀಯ ವಸ್ತುವೆಂದೂ, ಡೋಲಾಹಸ್ತದಂತೆ ವಿರಲವಾಗಿ ಇಳಿಬಿಟ್ಟಾಗ ಅನಾರೋಗ್ಯ, ತೀವ್ರ ದುಃಖ, ಅಮಲು, ಪ್ರಜ್ಞೆಯಿಲ್ಲದಿರುವಿಕೆ, ರಂಗದಲ್ಲಿನ ಪಾತ್ರಗಳೆಂದೂ, ಪಕ್ಕಕ್ಕೆ ಅಲಪದ್ಮವನ್ನು ತೋರಿದರೆ ಪಕ್ಕದಲ್ಲಿರುವ ವಸ್ತುವೆಂದೂ, ಅಲ್ಲಾಡಿಸಿದರೆ ಉತ್ಸಾಹ, ಹುಡುಗಾಟವೆಂದೂ ಸಂವಹಿಸಬಹುದು.

ನಟರಾಜ, ಯಮ ಹಸ್ತ, ಕುಬೇರಹಸ್ತ, ಸೂರ್ಯಹಸ್ತ, ಚಂದ್ರಹಸ್ತ, ಶನೈಶ್ಚರ ಹಸ್ತಗಳಲ್ಲಿ ಅಲಪದ್ಮದ ಬಳಕೆಯಿದೆ. ದಿನ (ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ) ವನ್ನು ಸೂಚಿಸಲು, ಸರಯೂನದಿ, ಪುರುಕುತ್ಸ ಚಕ್ರವರ್ತಿ ಎನ್ನಲು ಬಳಸುತ್ತಾರೆ.

ಬಲಗೈಯಲ್ಲಿ ಅಲಪದ್ಮವನ್ನು ಕಿವಿಯ ಬಳಿ ಹಿಡಿಯುವುದು ಶರತ್ ಕಾಲವನ್ನು ಸೂಚಿಸಿದರೆ, ಅಲಪದ್ಮ ಅಥವಾ ಹಂಸಪಕ್ಷ ಹಸ್ತಗಳನ್ನು ಮೆಲ್ಲಗೆ ಅಲ್ಲಾಡಿಸುವುದು ಯೌವನವನ್ನು ಸೂಚಿಸುತ್ತದೆ. ಅಲಪದ್ಮ ಅಥವಾ ಹಂಸಪಕ್ಷ ಹಸ್ತಗಳನ್ನು ಮೆಲ್ಲಗೆ ಅಲ್ಲಾಡಿಸುವುದು ಬ್ರಹ್ಮಚರ್ಯದ ಸೂಚಕ. ಅಲಪದ್ಮವನ್ನು ಸುತ್ತುತ್ತಾ ಮೇಲೆತ್ತುವುದು ಮಧುರ (ಸಿಹಿ) ಎಂಬುದಕ್ಕೆ ಅರ್ಥ. ಅಲಪದ್ಮ ಹಸ್ತಗಳನ್ನು ಸ್ವಸ್ತಿಕಾಕಾರವಾಗಿರಿಸುವುದು ಕಪಿತ್ಥ ವೃಕ್ಷವನ್ನು ಸೂಚಿಸುತ್ತದೆ.

ಶಕ್ತಿ ಸಂಚಯ ಸೂಚಕ ಹಸ್ತಗಳ ಪೈಕಿ ಉತ್ಸಾಹ ಶಕ್ತಿಯನ್ನು ಹೇಳಲು ಅಲಪದ್ಮವನ್ನು ಬಾಯಿಯ ಬಳಿ, ಪ್ರಭು ಶಕ್ತಿಯನ್ನು ತೋರಿಸಲು ಅಲಪದ್ಮವನ್ನು ಮೇಲೆ ಹಿಡಿದು ಅಲ್ಲಾಡಿಸುವುದು, ಸಮಪ್ರಮಾಣ ಶಕ್ತಿಯನ್ನು ಬಿಂಬಿಸಲು ಅಲಪದ್ಮವನ್ನು ಅತ್ತಿತ್ತ ಅಲ್ಲಾಡಿಸುವುದು ಮಾಡಲಾಗುತ್ತದೆ. ಅಲಪದ್ಮ ಹಸ್ತಗಳನ್ನು ಸ್ವಸ್ತಿಕವಾಗಿರಿಸುವುದು ದಶರಥ ರಾಜನ ಸಂಕೇತವಾದರೆ, ಅಲಪದ್ಮವನ್ನು ತಲೆಯ ಮೇಲೆತ್ತಿ ಹಿಡಿಯುವುದು ಸಗರ ಚಕ್ರವರ್ತಿಯ ಸೂಚಕ.

ಹೊಸದಾಗಿ ತರಬೇತಿಗೊಂಡ ಆನೆ ಎಂಬುದನ್ನು ಸಂವಹಿಸಲು ಎಡಗೈ ಅಲಪದ್ಮವನ್ನೂ ಮುಂದಕ್ಕೆ ಮೇಲ್ಮುಖವಾಗಿ, ಬಲಗೈಯ್ಯಲ್ಲಿ ತ್ರಿಪತಾಕವನ್ನು ಕಿವಿಯ ಬಳಿ ಕೆಳಮುಖವಾಗಿ ಹಿಡಿಯಬಹುದಾಗಿದೆ. ಹೆಬ್ಬುಲಿಯನ್ನು ಸೂಚಿಸಲು ಅಲಪದ್ಮವನ್ನು ಅಲ್ಲಾಡಿಸಬೇಕು.

ಯಕ್ಷಗಾನದಲ್ಲಿ ಅಲಪದ್ಮವು ಆನೆ, ಸ್ತನ, ಕಮಲದ ಸೂಚನೆಯಾಗಿದೆ.

ನಿತ್ಯ ಜೀವನದಲ್ಲಿ ಈ ಹಸ್ತವನ್ನು ಚೆಂಡಾಟ ಆಡಲು, ಹೂವು ಎನ್ನಲು, ‘ಸರಿಯಾದ ಜನ, ಸರಿಯಾಗಿದೆ’ಎಂಬ ವ್ಯಂಗ್ಯ, ವೈಯ್ಯಾರ ನಿರ್ಲಕ್ಷ್ಯ ತೋರಿಸಲು, ‘ತಾ,’ಬಾ”ಎನ್ನಲು ಬಳಸುತ್ತಾರೆ.

ಅಲಪದ್ಮದಿಂದ ಕಿರುಬೆರಳನ್ನು ಅಂಗೈಯೊಳಗೆ ಮಡಚುವುದು ಲೀನಾಲಪದ್ಮ ಹಸ್ತವೆನಿಸಿಕೊಳ್ಳುತ್ತದೆ. ವಿನಿಯೋಗ : ಕ್ರೌಂಚಪಕ್ಷಿ.

ಅಲಪಲ್ಲವ ಹಸ್ತಗಳನ್ನು ಅಭಿಮುಖವಾಗಿ ತಂದು ಮಣಿಬಂಧದ ಬಳಿ ಕೂಡಿಸಿ ಹೆಬ್ಬೆರಳು ಮತ್ತು ಕಿರುಬೆರಳುಗಳ ಪಾರ್ಶ್ವಗಳನ್ನು ಸೇರಿಸುವುದು ಸಂಯುಕ್ತಪಲ್ಲವ ಹಸ್ತವೆನಿಸುತ್ತದೆ. ಇದನ್ನು ಪದ್ಮ ಹಸ್ತವೆನ್ನುವ ರೂಢಿಯೂ ಇದೆ. ಬಾಲರಾಮಭರತದಲ್ಲಿ ಉಲ್ಲೇಖಿತ.

ವಿನಿಯೋಗ : ಸಹಸ್ರದಳ ಪದ್ಮ, ಮೇಲೆಸೆದ ವಸ್ತುವನ್ನು ಹಿಡಿದುಕೊಳ್ಳುವುದು, ಚೆಂಡಾಟ, ಎಸೆಯುವುದು, ತೆಂಗಿನಕಾಯಿ, ಅನ್ನದ ಪಿಂಡ, ಕಲಶ.

ಯಕ್ಷಗಾನದಲ್ಲೂ ಪೂರ್ಣವಾಗಿ ಅರಳಿದ ಹೂವು, ತಾವರೆ, ಚೆಂಡಾಟ, ವಸ್ತುವನ್ನು ಹಿಡಿದುಕೊಳ್ಳುವುದು, ಎಸೆಯುವುದು, ಕಲಶ ಎಂದು ತಿಳಿಸಲು ಉಪಯೋಗಿಸುತ್ತಾರೆ. ನಿತ್ಯಜೀವನದಲ್ಲಿ ಹೂವು, ಚೆಂಡು, ಮೇಲಿಂದ ಬೀಳುವ ವಸ್ತುವನ್ನು ಹಿಡಿಯುವುದು ಎಂದು ಹೇಳಲು ಬಳಸುತ್ತಾರೆ.

ಅಲಪದ್ಮ ಹಸ್ತವನ್ನು ಎದೆಯ ಮೇಲಿಟ್ಟು ಇನ್ನೊಂದು ಅಲಪದ್ಮವನ್ನು ಪಕ್ಕದಲ್ಲಿ ಚಾಚಿ ಕೆಳಬದಿಗೆ ಸುತ್ತುವುದು ಅರ್ಧಮಂಡಲಿಕಾ ಹಸ್ತವೆನಿಸಿಕೊಳ್ಳುತ್ತದೆ.

ಅಲಪದ್ಮ ಹಸ್ತಗಳನ್ನು ಎದೆಯ ಬಳಿ ಮೇಲ್ಮುಖವಾಗಿ ತಿರುಗಿಸುವುದು ಉದ್ವೇಷ್ಟಿತಲಪದ್ಮ ಹಸ್ತ. ಶಕ್ತಿ ಇದರ ಅಧಿದೇವತೆ. ಬಾಲರಾಮಭರತದಲ್ಲಿ ಉಲ್ಲೇಖಿತ. ವಿನಿಯೋಗ : ಪತಿ, ವಿನಯಶೀಲ ಮಾತುಗಳು, ಸ್ತನ, ಪೂರ್ಣ ಅರಳಿದ ತಾವರೆ, ‘ಆಸಕ್ತಿದಾಯಕ’ ಎನ್ನಲು, ಶೌರ್ಯ ಮತ್ತು ಆಕಾಂಕ್ಷೆಗಳನ್ನು ಪ್ರಕಟಪಡಿಸುವುದು.

ಕೈಗಳ ಅಲಪಲ್ಲವದ ತುದಿಗಳನ್ನು ಎದೆಯಿಂದ ತಿರುಗಿಸಿ, ಹೆಗಲ ಮೇಲೆತ್ತಿ ಚಾಚುವುದು ಉಲ್ಬಣ ಹಸ್ತ. ನೃತ್ತ ಹಸ್ತದ ಒಂದು ವಿಧ. ವಿಘ್ನೇಶ್ವರ ಈ ಹಸ್ತದ ಅಧಿದೇವತೆ. ವಿನಿಯೋಗ : ಹೂಗೊಂಚಲು, ವಿಶಾಲವಾದ ಕಣ್ಣುಗಳು, ಲತೆಗಳು ಅಲ್ಲಾಡುವುದು.

ಅಲಪಲ್ಲವ ಹಸ್ತಗಳನ್ನು ತಲೆಯ ಮೇಲೆ ವಿರುದ್ಧಾಭಿಮುಖವಾಗಿ ಇಟ್ಟುಕೊಳ್ಳುವುದನ್ನು ಲಲಿತ ಹಸ್ತವೆನ್ನುತ್ತಾರೆ. ಇದು ನೃತ್ತ ಹಸ್ತದ ಒಂದು ವಿಧ. ಇನ್ನೊಂದು ಮೂಲದ ಪ್ರಕಾರ ಮುಷ್ಟಿಯಲ್ಲಿ ಸೂಚಿಯ ಬೆರಳನ್ನು ಹಿಡಿದು ಕೈಗಳನ್ನು ಓರೆಯಾಗಿ ತಲೆಯ ಮೇಲೆತ್ತುವುದು. ವಿನಿಯೋಗ : ಪರ್ವತ, ಸಾಲ ವೃಕ್ಷ, ಶಿಖರ, ಕೋಟೆ, ಮಂಥನ, ನಾಚಿಕೆ, ಆಲಸ್ಯ.

ಪದ್ಮಕೋಶ ಅಥವಾ ಅಲಪಲ್ಲವ ಹಸ್ತಗಳನ್ನು ವ್ಯಾವೃತ್ತ ಮತ್ತು ಪರಿವರ್ತಿತವಾಗಿ ತಿರುಗಿಸಿ ಸುತ್ತು ಹಾಕಿಸಿದರೆ ಅದು ನೃತ್ತ ಹಸ್ತಗಳಲ್ಲೊಂದಾದ ನಳಿನೀ ಪದ್ಮಕೋಶ ಹಸ್ತವಾಗುತ್ತದೆ. ವಿನಿಯೋಗ : ನಾಗಬಂಧ, ಮೊಗ್ಗು, ಸಮನಾಗಿ, ಹಂಚುವುದು, ಹೂಗೊಂಚಲು, ಹತ್ತು ಎನ್ನುವುದಕ್ಕೆ ಗಂಡಭೇರುಂಡ ಪಕ್ಷಿ, ದಂಟನ್ನು ಹೊಂದಿದ ತಾವರೆಗಳು, ಗುಪ್ತ ಅರ್ಥವುಳ್ಳ ಪದಗಳು, ಮೂಕಪ್ರದರ್ಶನ. ಉಳಿದಂತೆ ನೃತ್ತಹಸ್ತಗಳಾದ ಅರಾಲ ಕಟಕಾಮುಖ, ಅರ್ಧರೇಚಿತದಲ್ಲೂ ಅಲಪದ್ಮದ ಬಳಕೆಯಿದೆ.

ಅಲಪದ್ಮ ಹಸ್ತವನ್ನು ನಾಟ್ಟಡವು, ಎಗರುಮೆಟ್ಟಡವು (ಹಾರಡವು, ಕುದಿತ್ತ ಮೆಟ್ಟು) ತೀರ್ಮಾನ ಅಡವು, ಮಂಡಿ ಅಡವು ರಂಗಾಕ್ರಮಣ ಅಡವು, ಕಟ್ಟಡವು, ಎಗರು ಕಟ್ಟಡವು, ಭ್ರಮರಿ ಅಡವು, ಪ್ಲವನ ಅಥವಾ ಉತ್ಪ್ಲವನ ಅಡವು, ಮೈ ಅಡವು, ವಿಕರ್ಷಿತ(ವಿಸ್ತಾರ) ಅಡವು, ಕೋರ್ವೆ (ತತ್ತೈತಾಂ) ಅಡವು, ಕೋರ್ವೆ (ತೈತೈ ದಿದಿತೈ ತಾಂ) ಅಡವು, ತಾಂಡವ ಅಡವು (ಸರುಕ್ಕು ಅಡವು)ಗಳಲ್ಲಿ ವ್ಯಾಪಕವಾಗಿ ಉಪಯೋಗಿಸುತ್ತಾರೆ. ನೃತ್ತ ಸಂದರ್ಭದಲ್ಲಿ ಈ ಹಸ್ತದ ಬಳಕೆ ಅಧಿಕ.

ಅಂತೆಯೇ ಕರಣಗಳಾದ ಅರ್ಧನಿಕುಟ್ಟಕ, ತಲಪುಷ್ಪಪುಟ, ಅರ್ಧರೇಚಿತ, ಉನ್ಮತ್ತಕ, ಸ್ವಸ್ತಿಕ, ಪೃಷ್ಠಸ್ವಸ್ತಿಕ, ಆಕ್ಷಿಪ್ತರೇಚಿತ, ಭುಜಂಗತ್ರಾಸಿತ, ಊರ್ಧ್ವಜಾನು, ಅರ್ಧಮತ್ತಲ್ಲೀ, ಘೂರ್ಣಿತ, ಭ್ರಮರಕ, ವೃಶ್ಚಿಕಕುಟ್ಟಿತ, ಕಟಿಭ್ರಾಂತ, ಛಿನ್ನ, ಲಲಾಟತಿಲಕ, ಕ್ರಾಂತಕ, ಕುಂಚಿತ, ತಲವಿಲಾಸಿತ, ವಿಕ್ಷಿಪ್ತ, ವಿವೃತ್ತ, ವಿದ್ಯುದ್ಭ್ರಾಂತ, ಸೂಚೀ, ಅರ್ಧಸೂಚೀ, ಮಯೂರಲಲಿತ, ಸಂಭ್ರಾಂತ, ವಿಷ್ಕಂಭ, ವೃಷಭಕ್ರೀಡಿತಗಳಲ್ಲಿ ಅಲಪದ್ಮದ ಬಳಕೆಯಿದೆ. ಕಥಕಳಿಯಲ್ಲಿ ಮುಷ್ಟಿ ಮತ್ತು ಅಲಪಲ್ಲವದ ಸಂಯೋಗವು ವಿದ್ಯಾರ್ಥಿ ಎಂಬುದನ್ನು ತಿಳಿಸುತ್ತದೆ.

Leave a Reply

*

code