ಅಂಕಣಗಳು

Subscribe


 

ಅಂಜಲಿ ಹಸ್ತ

Posted On: Saturday, October 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಅಭಿನಯ ದರ್ಪಣ ಹೇಳುವ ೨೪ ಬಗೆಯ ಸಂಯುತ ಹಸ್ತ- ಎರಡೂ ಅಂಗೈಗಳಿಂದ ಕೈಗೊಳ್ಳುವ ಹಸ್ತಲಕ್ಷಣಗಳ ಪಾಠ ಪ್ರವೇಶಿಕೆ ಪ್ರಾರಂಭ. ಅದರೊಂದಿಗೆ ಹಸ್ತಗಳಿಗೆ ಹೊಂದಿಕೊಂಡಂತೆ ಇತರ ಶಾಸ್ತ್ರಗ್ರಂಥಗಳ ವಿಶ್ಲೇಷಣೆಯೂ ಎಂದಿನಂತೆ ಮುಂದುವೆರೆಯುತ್ತದೆ. ಎಲ್ಲಾ ಹಸ್ತ-ಮುದ್ರೆಗಳ ಕುರಿತ ವಿವರಣೆಗಳು ಮುದ್ರಾರ್ಣವಗ್ರಂಥದಲ್ಲಿ ಲಭ್ಯ.


ಲಕ್ಷಣ: ಎರಡು ಪತಾಕ ಹಸ್ತಗಳನ್ನು ಹೆಬ್ಬೆರಳಿನಿಂದ ಕಿರುಬೆರಳವರೆಗೆ ಎದುರು ಬದುರಿಗೆ ಬರುವಂತೆ ಕೂಡಿಸುವುದು. ಪ್ರತಿಮಾಶಾಸ್ತ್ರದಲ್ಲಿ ವಂದನೀ ಮುದ್ರೆ, ನಮಸ್ಕಾರ ಮುದ್ರೆ ಎಂದು ಕರೆಯಲಾಗಿದೆ. ಆಂಜನೇಯ, ವೈನತೇಯ, ನಂದಿ-ಭೃಂಗಿ ಮುಂತಾದ ಭಕ್ತವಿಗ್ರಹಗಳಲ್ಲಿ, ಪರಿವಾರದೇವತೆಗಳಲ್ಲಿ ಈ ಹಸ್ತವನ್ನು ಬಳಸಲಾಗಿದೆ. ಇದಕ್ಕೆ ಪ್ರಣಾಮಮುದ್ರೆಯೆಂಬ ಹೆಸರೂ ಇದೆ. ನಿತ್ಯ ಜೀವನದಲ್ಲಿ ಅಂಜಲಿ ಹಸ್ತದ ಬಳಕೆಯಿದೆ. ಈ ಹಸ್ತದ ಅಧಿದೇವತೆ : ಕ್ಷೇತ್ರಪಾಲ.

ಭರತಶಾಸ್ತ್ರದ ಲೀನ ಕರಣ, ಒಡಿಸ್ಸಿಯಲ್ಲಿ ಬಳಸುವ ಪ್ರಣತ ಕರಣಗಳಲ್ಲಿ ಅಂಜಲಿಯ ಬಳಕೆಯಿದೆ. ಭರತನಾಟ್ಯದ ಅಲರಿಪ್ಪು- ಪ್ರಾರಂಭಿಕ ನೃತ್ತಬಂಧ ಅಂಜಲಿ ಹಸ್ತದಿಂದಲೇ ಪ್ರಾರಂಭವಾಗುತ್ತದೆ. ಪೂಜಾ ಮುದ್ರೆಗಳ ಪೈಕಿ ನಮಸ್ಕಾರ ಮುದ್ರೆ ಅಥವಾ ಆತ್ಮಾಂಜಲಿ ಮುದ್ರೆ ಅಂಜಲಿ ಹಸ್ತವೇ ಆಗಿದ್ದು, ನಮಸ್ಕರಿಸುವ ಗುಣ ಸಾರ್ವಕಾಲಿಕ ಮುದ್ರೆಯೆನಿಸಿ ಗುಣಾತ್ಮಕ ಶಕ್ತಿಗಳ ವೃದ್ಧಿ, ಪ್ರೀತಿ ಸಾಮರಸ್ಯ-ವಿಶ್ವಾಸ ಭಾವನೆಗಳು ಹೆಚ್ಚಾಗುವಲ್ಲಿ ಪ್ರಮುಖ ವಾಹಕವಾಗುತ್ತದೆ. ಗಾಯತ್ರೀ ಮಂತ್ರದದೇ ಅಕ್ಷರಕ್ಕೆ ಆಗಮೋಕ್ತ ಶಾಸ್ತ್ರ ಗ್ರಂಥಗಳು ವ್ಯಾಪಕಾಂಜಲಿ ಮುದ್ರೆಯನ್ನು ಸೂಚಿಸಿದ್ದು; ಅಂಗೈ ಮೇಲ್ಮುಖವಾಗಿ ಬರುವಂತೆ ಕೈಬೆರಳುಗಳನ್ನು ಜೋಡಿಸಿ ಅಂಜಲಿಹಸ್ತವನ್ನು ಅಗಲವಾಗಿ ಅಂಗೈ ಕಾಣುವಂತೆ ಹಿಡಿಯುವುದು ಕ್ರಮ.

ಶಾಸ್ತ್ರೀಯ ಮುದ್ರೆಗಳೆನಿಸಿದ ಶ್ರೀವತ್ಸ ಮುದ್ರಾ, (ಎದೆಯ ಪಕ್ಕಕ್ಕೆ ನಮಸ್ಕಾರ), ಪ್ರಣಾಮ ಮುದ್ರಾ (ನೆತ್ತಿಯಲ್ಲಿ ನಮಸ್ಕಾರ), ಕೌಸ್ತುಭ ಮುದ್ರಾ (ನಮಸ್ಕಾರ ಮುದ್ರೆಯಲ್ಲಿ ಎರಡೂ ಕೈಗಳ ಕಿರು ಮತ್ತು ಹೆಬ್ಬೆರಳುಗಳನ್ನು ಒಳಗೆ ಮಡಚುವುದು), ವರಾಹ ಮುದ್ರಾ (ನಮಸ್ಕಾರ ಮುದ್ರೆಯನ್ನು ಎದೆಯ ಮುಂದಕ್ಕೆ ಚಾಚುವುದು), ಕೃಷ್ಣ ಮುದ್ರಾ (ಎದೆಯ ಬಳಿ ನಮಸ್ಕಾರ)ಅಂಜಲಿ ಹಸ್ತದ ವಿಭಿನ್ನ ರೂಪಗಳೇ ಆಗಿವೆ. ಚಿಕಿತ್ಸಾ ಮುದ್ರೆಯ ಪೈಕಿಯೂ ಅಂಜಲಿಯನ್ನು ನಮಸ್ಕಾರ ಅಥವಾ ಆತ್ಮಾಂಜಲಿ ಮುದ್ರೆ ಎನ್ನಲಾಗಿದ್ದು ಪಂಚ ತತ್ವಗಳ ಸಮತೋಲನಕ್ಕೆ, ಅಂಗಾಂಗಗಳ ಬಲವೃದ್ಧಿಗೆ, ತಲೆನೋವು ನಿವಾರಣೆಗೆ, ಮನಸ್ಸಿನ ಶಾಂತಿ-ನಮ್ರತೆ-ಪ್ರೀತಿ-ಸಾಮರಸ್ಯ-ಪ್ರಶಾಂತಿ-ನಿರಾತಂಕ- ಸದ್ಭಾವನೆಗಳ ಜಾಗೃತಿಗೆ ಇದು ಸಹಕಾರಿ.

ವಿನಿಯೋಗ : ದೇವತೆಗಳಿಗೆ ಹಸ್ತವನ್ನು ತಲೆಗಿಂತ ಮೇಲೆ ಹಿಡಿದು ನಮಸ್ಕರಿಸುವುದು, ಗುರುಗಳಿಗೆ ಹಸ್ತವನ್ನು ತಲೆಗೆ ಎದುರಾಗಿ ನಮಸ್ಕರಿಸುವುದು, ಬ್ರಾಹ್ಮಣರಿಗೆ ಹಸ್ತವನ್ನು ಎದೆಗೆ ಇದಿರಾಗಿ ನಮಸ್ಕರಿಸುವುದು, ಗೌರವಾರ್ಪಣೆ ಅಥವಾ ನಮಸ್ಕಾರ. ಇದು ನಾಟ್ಯಾರಂಭದ ವಿಧಿಗಳಲ್ಲೇ ಮುಖ್ಯವಾಗಿ ತೋರಿಬರುತ್ತದೆ.

ಇತರೇ ವಿನಿಯೋಗ : ವಿನಯ, ಶಂಕರನಿಗೆ ನಮಸ್ಕಾರ, ಯಾಚನೆ, ಭಯ, ಪ್ರದಕ್ಷಿಣೆ, ಗಾಳಿ, ಚಳಿಯ ಬಾಧೆ, ಕರ್ತವ್ಯವನ್ನು ಕುರಿತು ಚಿಂತಿಸುವುದು, ನಾನು ಮಾಡುತ್ತೇನೆ ಎನ್ನಲು, ಛತ್ರಿ, ಪೂರ್ಣ ಅರಳಿದ ಕಮಲ, ಚಿನ್ನದ ಗಡಿಗೆ, ಕೃಷ್ಣ, ಸ್ತ್ರೀಯರಿಗೆ ನಮಸ್ಕರಿಸುವುದು, ಸ್ನೇಹಿತರನ್ನು ಸ್ವಾಗತಿಸುವುದು, ಸರಸ್ವತಿ, ಲಕ್ಷ್ಮಿ, ಮಂಗಳಚಂಡಿ, ಗಂಗಾ, ಮಂಡಿಯನ್ನು ಬಗ್ಗಿಸುವುದು.

ಮಕರರಾಶಿಯನ್ನು ಸೂಚಿಸಲು ಅಂಜಲಿ ಹಸ್ತದಲ್ಲಿ ಕಿರು, ಮತ್ತು ಹೆಬ್ಬೆರಳನ್ನು ಹೆಣೆದು, ಮತ್ತು ಬಿಡಿಸಿ ಮಾಡಬೇಕು. ಭರತಾರ್ಣವ ಮತ್ತು ಭರತಸಾರ ಹೇಳುವಂತೆ ಅಂಜಲಿಹಸ್ತವನ್ನು ಬಾಯಿಯ ಬಳಿ ಹಿಡಿದು ನಂತರ ಪತಾಕವನ್ನು ಹಿಡಿದು ಅಲ್ಲಾಡಿಸಿ ಆವೇಶ ತೋರುವುದು ಪುರುಷಾಮೃಗದ ಸಂಕೇತ. ಎರಡೂ ಕೈಯ್ಯ ಅಂಜಲಿ ಹಸ್ತದ ಹೆಬ್ಬೆರಳನ್ನು ಬಗ್ಗಿಸಿ, ಮೇಲೆ-ಕೆಳಗೆ ಚಾಲಿಸುವುದು ಖಂಡ-ಅಂಜಲಿಹಸ್ತ. ವಿನಿಯೋಗ : ಒಂಟೆ. ಖಂಡಾಂಜಲಿಯ ತೋರುಬೆರಳನ್ನು ಬಗ್ಗಿಸುವುದು ಭಿನ್ನಾಂಜಲಿಹವೆನಿಸುತ್ತದೆ. ವಿನಿಯೋಗ : ಕತ್ತೆ.

Leave a Reply

*

code