ಅಂಕಣಗಳು

Subscribe


 

ಅಚ್ಚುಕಟ್ಟಿನ ಲಯ, ರಸಾನುಭೂತಿಯ ಸೂಚನೆ : ಶ್ರೀಮತಿ ಅರ್ಚನಾ ಮತ್ತು ಚೇತನಾ

Posted On: Monday, August 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಅನ್ನ ಬೆಂದ ಸೂಚನೆ ಒಂದು ಅಕ್ಕಿ ಕಾಳಿನಲ್ಲೇ ಗೊತ್ತಾದ ಬಗೆಯ ಪಕ್ವತೆ ಅಲ್ಲಿತ್ತು. ನೃತ್ಯ ಸೌಂದರ್ಯಕ್ಕೆ ಬೇಕಾದುದು ರಸಾನುಭೂತಿಯ ಚೈತನ್ಯ ಎಂಬುದನ್ನು ಸ್ಪಷ್ಟಪಡಿಸಿದವರು ಕರ್ನಾಟಕ ನೃತ್ಯಕಲಾ ಪರಿಷತ್‌ನ ಅಂಕುರ ನೃತ್ಯೋತ್ಸವದ ಸಮಾರೋಪದಲ್ಲಿ (ಜುಲೈ ೧೭) ನರ್ತಿಸಿದ ಅವಳಿ ಸಹೋದರಿಯರಾದ ಶ್ರೀಮತಿ ಅರ್ಚನ ಮತ್ತು ಚೇತನಾ. ಸುಸ್ಪಷ್ಟ ಹೆಜ್ಜೆಗಾರಿಕೆಯಲ್ಲಿ ತೋರಿಬಂದ ಲಯನೈಪುಣ್ಯ, ಯುಗಳ ಅಥವಾ ದ್ವಂದ್ವ್ವ ನರ್ತನಕ್ಕೆ ಬೇಕಾದ ಸಾಮ್ಯ, ಹಾರ್ದಿಕ ಅನುಸರಣಾರ್ಹ ಮನೋಧರ್ಮ, ಪರಸ್ಪರ ಸಾಂಗತ್ಯ, ಸಹಜ ಹೊಂದಾಣಿಕೆ, ಮೇಲಾಗಿ ಅಭಿನಯಾದಿ ಕೌಶಲಗಳಲ್ಲಿ ಭಾವ ಸ್ಫುಟತೆ ಮತ್ತು ನರ್ತನವನ್ನು ಅನುಭವಿಸುವ ರಸದೃಷ್ಟಿ ಇವರ ಹೈಲೈಟ್.

ದ್ವಾರಕೀ ಕೃಷ್ಣಸ್ವಾಮಿ ಅವರ ಕಮಾಚ್ ರಾಗದ ಕನ್ನಡ ವರ್ಣ ಭುವನಸುಂದರನಕ್ಕೆ ಹೆಣೆದ ಔಚಿತ್ಯಪೂರ್ಣ ನೃತ್ತ, ಮಧ್ಯಮಕಾಲ ಚರಣದ ನಂತರಕ್ಕೆ ಅನುಗುಣವಾಗಿ ತೆರೆದುಕೊಂಡ ವೇಗ ಹಾಗೂ ಆರ್ದ್ರ ಅಭಿನಯ ; ರೇವತಿ ರಾಗದ ಕೀರ್ತನೆ ಮಹಾದೇವ ಶಿವಶಂಭೋಗೆ ನಟೇಶ ಕೌತ್ವಂನ ಸಾಹಿತ್ಯ, ಪಾಟಾಕ್ಷರ ಸಂಯೋಜನೆಗೆ ಸಂದ ಗಾಂಭೀರ್ಯ, ಭಕ್ತಿ, ರೌದ್ರಾದಿ ನವರಸಗಳು ಪ್ರೇಕ್ಷಕರನ್ನು ಹಿಡಿದಿರಿಸಿದಂತದ್ದು. ಈ ನಿಟ್ಟಿನಲ್ಲಿ ಇವರೀರ್ವರ ನೃತ್ಯಗುರು ಭಾನುಮತಿಯವರ ಶ್ರಮ ಮೆಚ್ಚುವಂತಹುದು ಹಾಗೂ ನೃತ್ಯಕಛೇರಿ ಗಾಯನಕ್ಕೆ ಗಾಯಕರ ಕೊರತೆ ಎದುರಿಸುತ್ತಿರುವ ಇಂದಿನ ಕಾಲಕ್ಕೆ ಸ್ವತಃ ನೃತ್ಯ ಕಲಾವಿದೆಯಾಗಿರುವ ಶ್ರುತಿ ರಾಜಲಕ್ಷ್ಮಿ, ಕಾರ್ಯಕ್ರಮ ಮತ್ತು ಕ್ಷೇತ್ರಕ್ಕೆ ಹೊಸ ಮಿಂಚನ್ನಿತ್ತಿದ್ದು ಸ್ವಾಗತಾರ್ಹ. ಉತ್ತಮ ಪ್ರಯತ್ನಕ್ಕೆ ಉಜ್ವಲ ಭವಿಷ್ಯವಿದೆ

Leave a Reply

*

code