Publication wing

ಮನೋರಮಾ ಬಿ. ಎನ್ ಅವರ ನೃತ್ಯ ಮಾರ್ಗ ಮುಕುರ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆ ಮತ್ತು ನೃತ್ಯಬಂಧಗಳ ದಾಖಲೆಯುಳ್ಳ ಅಧ್ಯಯನ ಕೃತಿ. ಭರತನಾಟ್ಯದ ಮಾರ್ಗಪದ್ಧತಿಯ ಮಜಲುಗಳನ್ನು, ನೃತ್ಯಾಂಗಗಳನ್ನು ದಾಖಲಿಸುವ, ಸಮಗ್ರ ಸಂಕ್ಷಿಪ್ತ ವಿವರವನ್ನೀಯುವ ೧೬೦ ಪುಟಗಳ ಈ ಕೃತಿ, ಆಸಕ್ತ ಸಹೃದಯರ ಪಾಲಿಗೆ ಸಾಕಲ್ಯ ದೃಷ್ಟಿಯ ಅಧ್ಯಯನಸಾಮಗ್ರಿ. ಮಾರ್ಗ, ದೇಸೀ ನೃತ್ಯದ ಪರಿಕಲ್ಪನೆ, ಲೋಕಧರ್ಮಿ ನಾಟ್ಯಧರ್ಮಿ ಪ್ರಬೇಧಗಳು, ಆಯಾಯ ಕಾಲಘಟ್ಟದ ಲಾಕ್ಷಣಿಕರ ವ್ಯಾಖ್ಯಾನಗಳ ಮೂಲಕ ನಾಟ್ಯಪದ್ಧತಿಯ ಮಜಲುಗಳಲ್ಲಿ ವ್ಯತ್ಯಾಸ, ನಾಟ್ಯದ ಪರಿಕಲ್ಪನೆ ಕಾಲಾನಂತರದಲ್ಲಿ ನೃತ್ಯವಾದ ರೀತಿನೀತಿಯನ್ನೊಳಗೊಂಡಂತೆ ಭರತನಾಟ್ಯದ ಇತಿಹಾಸ, ಬದಲಾವಣೆ, ಬೆಳವಣಿಗೆ ಮತ್ತು ಕಛೇರಿಮಾರ್ಗವನ್ನು ಹೇಳುವ ಈ ಕೃತಿಯು ಆಲಯ ಮತ್ತು ರಾಜಾಶ್ರಯ ನೃತ್ಯಪದ್ಧತಿಯಲ್ಲಿ ಬೆಳೆದುಬಂದ ಭರತನಾಟ್ಯದ ವಿವಿಧ ಹಂತಗಳನ್ನೂ, ಭರತನಾಟ್ಯಕ್ಕೆ ಕರ್ನಾಟಕ ಸಂಗೀತದ ಕೊಡುಗೆಯನ್ನೂ ವಿವೇಚಿಸುತ್ತದೆ.

ರಸನಿರೂಪಣೆಯೇ ಕಲೆಯ ಅತ್ಯುನ್ನತ ಸಾಧನೆ ಎನ್ನುವ ಸಾರಾಂಶವನ್ನು ಹೇಳುವ ಈ ಕೃತಿ, ಭರತನಾಟ್ಯದ ಸಮಕಾಲೀನ ಬದಲಾವಣೆ, ಬೆಳವಣಿಗೆ, ವ್ಯತ್ಯಾಸ, ಲೋಪದೋಷ, ಗುಣಾವಗುಣಗಳನ್ನೂ ಸಾಕ್ಷ್ಯಸಮೇತ ವಿಶ್ಲೇಷಿಸಿದೆ. ಪುಷ್ಪಾಂಜಲಿ, ಅಲಾರಿಪ್ಪು ಮುಂತಾದ ನರ್ತನಪ್ರಕಾರಗಳಿಂದ ಮೊದಲ್ಗೊಂಡು ತಮಿಳ್ನಾಡು ಮತ್ತು ಮೈಸೂರು ಪರಂಪರೆಗಳಲ್ಲಿ ಬೆಳೆದುಬಂದ ವಿವಿಧ ನೃತ್ಯಾಂಗಗಳನ್ನೂ ಸೂಕ್ತ ದಾಖಲೆ, ಹಿನ್ನಲೆಗಳೊಂದಿಗೆ ಮೆಟ್ಟಿಲಿನೋಪಾದಿಯಲ್ಲಿ ಚರ್ಚಿಸಿದೆ. ನೃತ್ಯಕ್ಷೇತ್ರದ ಹಿರಿಯರ ಸಂದರ್ಶನ, ಗ್ರಂಥ ಪರಾಮರ್ಶನ, ಅವಲೋಕನ, ಕ್ಷೇತ್ರಕಾರ್ಯಾಧಾರಿತ ಸಂಶೋಧನೆಯಿಂದ ನೃತ್ಯಮಾರ್ಗ ಮುಕುರದ ವಿಷಯ ವಿಶ್ಲೇಷಣೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಂದಿನ ಭರತನಾಟ್ಯಕ್ಷೇತ್ರದ ಅಗತ್ಯ, ಅನಿವಾರ್ಯತೆ, ಸಮಸ್ಯೆಗಳಿಗೆ ಕನ್ನಡಿ ಹಿಡಿದಿರುವ ಈ ಪುಸ್ತಕ ನೃತ್ಯಕ್ಷೇತ್ರದ ಒಂದು ಕೊಡುಗೆ ಮತ್ತು ನಿಜಕ್ಕೂ ಮಾರ್ಗ ಮುಕುರವೆಂಬ ಹೆಸರಿಗೆ ಅನ್ವರ್ಥ.- ಎಂದಿದ್ದಾರೆ ಪುಸ್ತಕಕ್ಕೆ ವಿಶ್ಲೇಷಣೆಯನ್ನಿತ್ತ ಅಷ್ಟಾವಧಾನಿಗಳು, ಚಿತ್ರಕಾವ್ಯ ಪರಿಣತರು, ಪೃಚ್ಛಕರೂ ಆದ ಡಾ. ಆರ್. ಶಂಕರ್.

ಭರತನಾಟ್ಯ-ಭರತನ ನಾಟ್ಯಶಾಸ್ತ್ರ ಪ್ರಸ್ತುತ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಿಕೊಂಡ ಪಾರಿಭಾಷಿಕ ಪದಗಳಾಗಿ ಮಾರ್ಪಟ್ಟಿವೆ. ಇಂದಿನ ಭರತನಾಟ್ಯ ಎಂಬ ನೃತ್ಯಪದ್ಧತಿಗೂ ಅಂದಿನಭರತನ ನಾಟ್ಯಶಾಸ್ತ್ರಗ್ರಂಥಕ್ಕೂ ಇರುವ ಸಂಬಂಧಗಳ ಬಗ್ಗೆ ಗಹನವಾದ ಚರ್ಚೆಗಳು ನಡೆಯುತ್ತಿದ್ದರೂ ತಾರ್ಕಿಕ, ತಲಸ್ಪರ್ಶಿಯಾದ ಅಧ್ಯಯನಗಳಾಗಿರುವುದು ಬೆರಳೆಣಿಕೆಯಷ್ಟು. ಈ ನಿಟ್ಟಿನಲ್ಲಿನೃತ್ಯ ಮಾರ್ಗ ಮುಕುರ ಭರತನಾಟ್ಯ ನೃತ್ಯಮಾರ್ಗಕ್ಕೆ ಹಿಡಿದ ಕೈಗನ್ನಡಿಯೇ ಆಗಿರುವುದು ಅಭಿನಂದನೀಯ.- ಎಂದಿದ್ದಾರೆ ಪುಸ್ತಕಕ್ಕೆ ನಲ್ನುಡಿಯನ್ನಿತ್ತ ಕಲಾ-ಇತಿಹಾಸ ಸಂಶೋಧಕಿ ಡಾ. ಕರುಣಾ ವಿಜಯೇಂದ್ರ.

ಮನೋರಮಾ ಬಿ. ಎನ್ ಅವರ ನೃತ್ಯ ಸಂಬಂಧಿತ ಹಸ್ತಮುದ್ರೆಗಳ ಕುರಿತ ಸಂಶೋಧನಾ ಕೃತಿ ಮುದ್ರಾರ್ಣವದ ನಂತರ ರಚಿತಗೊಂಡ ಎರಡನೆಯ ಕೃತಿ ಇದಾಗಿದೆ. ಕೃತಿಯು ಮಡಿಕೇರಿಯ ಸಾನ್ನಿಧ್ಯ ಪ್ರಕಾಶನದಿಂದ ಪ್ರಕಟಿತವಾಗಿದ್ದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ನೂಪುರ ಭ್ರಮರಿಯ ೫ನೇ ವಾರ್ಷಿಕ ಸಂಭ್ರಮದಲ್ಲಿ ಅನಾವರಣಗೊಂಡಿದೆ. ಪುಸ್ತಕದ ಬೆಲೆ: ೧೨೫ರೂ

—————————————————

ಮುದ್ರಾರ್ಣವ

ಮುದ್ರಾರ್ಣವ

ಆತ್ಮೀಯರೇ,

ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. (ಈ ನಿಟ್ಟಿನಲ್ಲಿ ಪತ್ರಿಕೆಯೂ ‘ಹಸ್ತಮಯೂರಿ’ ಯ ಮೂಲಕ ಗಮನಾರ್ಹ ರೀತಿಯಿಂದ ಪ್ರಯತ್ನ ಮಾಡುತ್ತಿರುವುದು ನಿಮಗೆ ತಿಳಿದ ವಿಷಯವೇ !) ಆದ್ದರಿಂದ ಹಸ್ತ ಮುದ್ರೆಗಳ ಭಾವ, ಉಪಯೋಗ, ಸಂವಹನದ ಸಾಧ್ಯತೆಗಳನ್ನು ಗಮನದಲ್ಲಿರಿಸಿ ಅವುಗಳ ಬಗೆಗೆ
ಮನೋರಮಾ ಬಿ.ಎನ್ ಅವರು ವಿಸ್ತೃತ ಅಧ್ಯಯನ ಮಾಡಿದ ಫಲ ;
mudrarnava

ಪುಸ್ತಕದಲ್ಲಿ ನಿರೂಪಿತವಾದ ಅಂಶಗಳೆಡೆಗೆ ಒಂದು ಕ್ಷ-ಕಿರಣ

  • ಸಂಶೋಧನಾ ಅಧ್ಯಯನ ; ಸುಮಾರು ೪೦೦ ಪುಟಗಳ ಗ್ರಂಥ. ಬೆಲೆ : 250 /-ರೂ.
  • ಪ್ರಕಾಶಕರು : ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ, ಉಜಿರೆ, ಬೆಳ್ತಂಗಡಿ, ದಕ್ಷಿಣ ಕನ್ನಡ.
  • ಭರತನಾಟ್ಯದಲ್ಲಿ ಉಪಯೋಗಿಸಲಾಗುತ್ತಿರುವ ಹಸ್ತಗಳನ್ನು ಪ್ರಧಾನವಾಗಿರಿಸಿಕೊಂಡು ಇತರೆ ಮರೆಯಾಗಿರುವ ಹಸ್ತಗಳ ಕುರಿತ ಅವಲೋಕನ ಮತ್ತು ಅವುಗಳ ಸಂವಹನ ಪ್ರಕ್ರಿಯೆ ಎಷ್ಟರ ಪಟ್ಟಿಗೆ ಮಹತ್ವಪೂರ್ಣವಾಗಿದೆ ಎಂಬುದು ಸಂಶೋಧನೆಯ ಮೂಲ ಉದ್ದೇಶ. ಜೊತೆಗೆ ಇತರೆ ನೃತ್ಯಪದ್ಧತಿ (ಉದಾ: ಕಥಕ್ಕಳಿ, ಮಣಿಪುರಿ, ಒಡಿಸ್ಸಿ, ಕಥಕ್, ಯಕ್ಷಗಾನ)ಗಳಲ್ಲಿ ಬಳಕೆಯಾಗುತ್ತಿರುವ ಹಸ್ತಗಳು ಮತ್ತು ಅವುಗಳಲ್ಲಿ ಎಷ್ಟು ನಾವು ದಿನನಿತ್ಯದ  ಜೀವನದಲ್ಲಿ ಬಳಸಿಕೊಳ್ಳುತ್ತೇವೆ ಎಂಬ ಅವಲೋಕನ. ಮತ್ತು ಅವುಗಳಲ್ಲಿನ ಸಮಾನ ಮತ್ತು ವ್ಯತ್ಯಾಸ ಅಂಶಗಳೆಡೆಗೆ ದೃಷ್ಟಿ.
  • ಅಭಿನಯದರ್ಪಣದ ಅಂಶಗಳನ್ನೇ ಪ್ರಧಾನವಾಗಿ ಬಳಸಿಕೊಂಡು ಅಧ್ಯಯನ ನಡೆದರೂ ಉಳಿದಂತೆ ನಾಟ್ಯಶಾಸ್ತ್ರ, ಹಸ್ತ ಮುಕ್ತಾವಳಿ, ಹಸ್ತ ಲಕ್ಷಣ ದೀಪಿಕಾ, ಭರತಸಾರ, ಭರತಕಲ್ಪಲತಾ ಮಂಜರಿ, ಸಾರಸಂಗ್ರಹ, ಲಾಸ್ಯರಂಜನ, ಸಂಗೀತ ರತ್ನಾಕರ, ನರ್ತನನಿರ್ಣಯ, ಬಾಲರಾಮ ಭರತ, ಪುರಾಣಗಳು, ಸಂಹಿತೆಗಳು, ಪ್ರಣೀತಗಳು, – ಹೀಗೆ ಹಲವಾರು ಗ್ರಂಥಗಳಲ್ಲಿ ಪ್ರಸ್ತಾಪಿಸಿದ ಹಸ್ತಗಳು, ಅವುಗಳ ವಿನಿಯೋಗ, ಮಹತ್ವ, ಪ್ರಚಲಿತದಲ್ಲಿ ಉಪಯೋಗವಾಗುತ್ತಿರುವ ಹಸ್ತಗಳು, ಅವುಗಳ ಮೂಲ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಗ್ರಾಂಥಿಕ ಹಿನ್ನಲೆಗಳು.
  • ಹಸ್ತ ಮುದ್ರೆಗಳು ಮುದ್ರಾವಿಜ್ಞಾನದಲ್ಲಿ, ಹಠಯೋಗ ಪ್ರದೀಪಿಕಾ ಮುಂತಾಗಿ ಯೋಗಶಾಸ್ತ್ರದಲ್ಲಿ, ಮುದ್ರಾ ಶಾಸ್ತ್ರ, ಧಾರ್ಮಿಕ ಪೂಜಾ ವಿಧಿ, ಪ್ರತಿಮಾಶಾಸ್ತ್ರ, ತಂತ್ರ-ಮಂತ್ರ-ಹಸ್ತಸಾಮುದ್ರಿಕಾಗಳಲ್ಲಿ ಹೇಗೆ ಬಳಕೆಯಾಗುತ್ತಿವೆ ಮತ್ತು ಅವುಗಳ ಉಪಯೋಗ. ಮುಖ್ಯವಾಗಿ ಮುದ್ರೆಗಳ ಬಳಕೆಯಿಂದಾಗುವ ಆರೋಗ್ಯಕರ ಆಯಾಮಗಳ ತುಲನೆ.
  • ಅಧ್ಯಯನಕ್ಕೆ ಅವಶ್ಯವಿರುವ ಇತಿಹಾಸ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರಿಂದ ಆಳ ಸಂದರ್ಶನ, ಪ್ರದರ್ಶನಗಳ ಸಮೀಕ್ಷೆ, ಗ್ರಂಥ ಅಧ್ಯಯನ.
  • ನೃತ್ಯಾಭ್ಯಾಸಿಗಳಿಗೆ, ನೃತ್ಯ-ಯೋಗ-ವೇದ-ಧಾರ್ಮಿಕ ವಿಧಿ-ಮುದ್ರಾಚಿಕಿತ್ಸೆಯ ಗುರು-ಕಲಾವಿದರಿಗೆ, ಸಂಶೋಧಕರಿಗೆ, ಸಾಮಾನ್ಯ ವೀಕ್ಷಕರಿಗೆ, ಸಂವಹನ ಪರಿಣತರಿಗೆ, ಶಿಕ್ಷಕರಿಗೆ ಅನುಕೂಲಕರವಾದ ಅಭ್ಯಾಸಾನುಕೂಲವಾದ ಮಾರ್ಗದರ್ಶನೀಯ ಸಚಿತ್ರ ವಿವರಣೆಯುಳ್ಳ ಗ್ರಂಥ.