ಅಂಕಣಗಳು

Subscribe


 

ಶಾಸ್ತ್ರೀಯ ನೃತ್ಯಮಾದರಿಗೆ ಲೋಕಧರ್ಮೀ ಅಡ್ಡಿಯೇ?

Posted On: Friday, June 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಯಾವುದೇ ನೃತ್ಯಮಾರ್ಗವನ್ನು ಅವಲೋಕಿಸುವುದಿದ್ದರೂ ಪ್ರಧಾನವಾಗಿ ಲೋಕಧರ್ಮಿ ಮತ್ತು ನಾಟ್ಯಧರ್ಮಿಯನ್ನಾಧರಿಸಿ ವರ್ಗೀಕರಣಗಳು ನಡೆಯುವುದು ಸಹಜ. ಹಾಗೆ ನೋಡಿದರೆ ರಸಭಾವವ್ಯುತ್ಪನ್ನವಾದ ನರ್ತನಕಲೆಗೆ ಕೇವಲ ನಾಟ್ಯಧರ್ಮೀಯೊಂದರ ಅಳವಡಿಕೆಯು ಕೃತಕತೆಯನ್ನೂ, ಕೇವಲ ಲೋಕಧರ್ಮಿಯೊಂದರ ಬಳಕೆಯು ಹಸಿತನವನ್ನೂ ಕೊಡುತ್ತದೆ ಎಂಬುದು ಗಮನಿಸಬೇಕಾದ ವಿಚಾರ. ಆದರೆ ಇತ್ತೀಚಿನ ದಶಕಗಳಲ್ಲಿ ಸಂಪ್ರದಾಯ ಮತ್ತುಪರಂಪರೆಯ ಕವಲುಗಳನ್ನು ; ಧರ್ಮೀಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸಲು ಅಷ್ಟಾಗಿ ಹೋಗದಿರುವುದರಿಂದ ಇಂದಿನ ಶಾಸ್ತ್ರೀಯ ನೃತ್ಯಕ್ರಮಗಳ ಅದೆಷ್ಟೋ ಕಲಾವಿದರು ರಸಾಸ್ವಾದನೆಗೆ ಅನುಕೂಲಕರವಾದ ಅಂಶಗಳನ್ನು ಅಳವಡಿಸಿಕೊಳ್ಳುವುದೇ ಮರೆತಂತಾಗಿದೆ. ಅಷ್ಟೇ ಏಕೆ, ಲೋಕಧರ್ಮಿಯ ಅಂಶಗಳ ಕಿಂಚಿತ್ ಅಳವಡಿಕೆಯೂ ಅಪರಾಧ ಎಂಬಷ್ಟರ ಮಟ್ಟಿಗಿನ ಹಲವು ದಶಕಗಳಿಂದ ನಂಬಿಕೊಂಡೂ ಬರಲಾಗುತ್ತಿರುವ ಪೂರ್ವಾಗ್ರಹ ಕಲೆಯ ಸಾಧ್ಯತೆ, ರಸೋತ್ಪತ್ತಿಗಳನ್ನೇ ಮರೆಸುತ್ತಿದೆ.

ಈ ಎರಡೂ ಧರ್ಮಿಗಳ ಸಮೃದ್ಧ ಪಾಕ ಭರತನಿರ್ಣಿತವಾದ ಕ್ರಮದಲ್ಲಿ ನಡೆದರೆ ಮಾತ್ರ ಯಾವುದೇ ನರ್ತನವೂ ರಸಾಸ್ವಾದ್ಯವಾಗಬಲ್ಲುದು. ಆದರೆ ಧರ್ಮಿಗಳ ನಡುವಿನ ಕಪೋಲಕಲ್ಪಿತ ವಿಚಾರಗಳಿಗೆ ಸಾಕಷ್ಟು ವರುಷಗಳಿಂದ ನಂಬಿಕೊಂಡು ಬರುತ್ತಿರುವ ಅನಧ್ಯಯನ ನಡವಳಿಕೆಗಳು ಇಂಬನ್ನೀಯುತ್ತಿರುವುದು ನಮ್ಮ ನಡುವಿನ ದುರಂತ.

ಉದಾ : ನೃತ್ಯದ ಸಿದ್ಧಮಾರ್ಗ ಪರಿಪಾಲನೆ ನಾಟ್ಯಧರ್ಮಿ, ಲೋಕದ ನಡವಳಿಕೆಗಳಿಂದ ಕೂಡಿದುದು ಲೋಕಧರ್ಮಿ; ಹಾಗಾಗಿ ಜಾನಪದ ನೃತ್ಯಪ್ರಕಾರಗಳೆಲ್ಲಾ ಅನುಸರಿಸುವುದು ಲೋಕಧರ್ಮಿ; ಭರತನಾಟ್ಯದಂತವು ಮಾತ್ರ ಶಾಸ್ತ್ರೀಯ ಚೌಕಟ್ಟಿನಲ್ಲಿದ್ದು ಅವು ನಾಟ್ಯಧರ್ಮಿ; ಲೋಕಧರ್ಮಿಯೆಂಬುದೆಲ್ಲವೂ ದೇಸಿ, ನಾಟ್ಯಧರ್ಮಿಯೆಂಬುದೆಲ್ಲವೂ ಮಾರ್ಗಾಧಾರಿತ; ಹೆಚ್ಚು ಸುಧಾರಿತವೆನಿಸಿದ್ದು ನಾಟ್ಯಧರ್ಮೀ; ಲೋಕಧರ್ಮಿಯೆಂಬುದು ಒರಟಾದ, ಹದವಿಲ್ಲದ ಅಭಿವ್ಯಕ್ತಿ ; ಶಾಸ್ತ್ರೀಯ ನೃತ್ಯಗಳ ಹೆಚ್ಚುಗಾರಿಕೆಯಿರುವುದೇ ನಾಟ್ಯಧರ್ಮಿಯಲ್ಲಿ; ಲೋಕಧರ್ಮಿಯ ಅನುಸರಣೆ ಶಾಸ್ತ್ರೀಯ ನೃತ್ಯಗಳಿಗೆ ಸೂಕ್ತವಲ್ಲ ಎನ್ನುವ ರೂಢಿಗತ ವಾದಗಳಲ್ಲಿ ಎಳ್ಳಷ್ಟೂ ಹುರುಳಿಲ್ಲ. ಈ ನಿಟ್ಟಿನಲ್ಲಿ ಇಂದಿನ ಕಾಲಕ್ಕೆ ನಾವು ಕಾಣುವ ಭರತನಾಟ್ಯಾದಿ ಶಾಸ್ತ್ರೀಯ ನೃತ್ಯವನ್ನೂ ಒಳಗೊಂಡಂತೆ ಇತರೆ ನೃತ್ಯಮಾಧ್ಯಮದಲ್ಲಿ ಅನುಸರಿಸುವ ಧರ್ಮೀಗಳ ಅಂತರಾರ್ಥವನ್ನು ಅರಿಯಬೇಕಿದ್ದರೆ ಅವು ಬಂದ ನಡೆಯನ್ನು ವಿಶ್ಲೇಷಿಸಬೇಕು.

ವಾಚಿಕಾಭಿನಯದಲ್ಲಿ ಭಾಷಾಸಹಜವಾದ ಮಾತುಗಳೇ ಪ್ರಧಾನವಾಗಿ, ಲೋಕದಲ್ಲಿ ನಡೆಯುವುದನ್ನು ತದ್ವತ್ತಾಗಿ ವಿಕಾರಗೊಳಿಸದೆ ಅನೇಕ ನಟರು ಸಹಜವಾಗಿ ಅಭಿನಯಿಸಿ ಸಾತ್ತ್ವಿಕಭಾವಾಶ್ರಯವಾಗಿರುವುದು ; ನಿರ್ದಿಷ್ಟವಾದದ್ದೂ, ರಾಗಸಹಿತವಾದ ವಾಕ್ಯವನ್ನು ಹೊಂದಿರುವುದು ಲೋಕಧರ್ಮೀ (realistic theatre). ಇಲ್ಲಿ ಲೋಕಧರ್ಮಿ ಎನ್ನುವುದು ಲೋಕ ಎಂಬ ಶಬ್ದಕ್ಕೆ ನೀಡುವ ವ್ಯಾಖ್ಯಾನದಿಂದ ವಿಭಿನ್ನವಾದ ಪರಿಭಾಷೆಯದ್ದು.

ಅಂತೆಯೇ ನಾಟ್ಯಧರ್ಮಿಯೂ ಕೂಡಾ. ಇದು ಭರತಮಾರ್ಗದ ನಾಟ್ಯ ವ್ಯಾಖ್ಯಾನಕ್ಕೆ ಅಧಿಪತಿಯೂ ಅಲ್ಲ; ಅಂತೆಯೇ ಶಾಸ್ತ್ರೀಯತೆಯನ್ನು ರೂಪಿಸುವ ರೂವಾರಿಯೂ ಅಲ್ಲ. ಕೃತಕವಾಗಿ ಮಾಡಿಕೊಂಡ ಅತಿಕ್ರಿಯಾ, ಅತಿಭಾಷಿತ ಸಮೀಕರಣಗಳಿಂದ, ಜೀವನಸಹಜವಲ್ಲದ ಅವಸ್ಥೆಯನ್ನು, ಅರ್ಥವನ್ನು ಏಕಪಾತ್ರ-ಬಹು‌ಅಭಿವ್ಯಕ್ತಿಯಾಗಿ ಅಭಿನಯಿಸುವುದು ನಾಟ್ಯಧರ್ಮಿ (Idealistic theatre) ಎನ್ನುತ್ತದೆ ನಾಟ್ಯಶಾಸ್ತ್ರ. ಒಟ್ಟಿನಲ್ಲಿ ನಾಟ್ಯದ ಸ್ವರೂಪವನ್ನು ನಿರ್ಧರಿಸುವ ಗುಣವಾಚಕಗಳಂತೆ ಕಾಣುವ ಇವೆರಡನ್ನು ಲೋಕ ಮತ್ತು ನಾಟ್ಯದ ಮೂಲಾಂಶಗಳಿಗೆ ಸಮೀಕರಿಸಿ ಒಂದೇ ತಕ್ಕಡಿಯಲ್ಲಿ ಏಕಪ್ರಕಾರವಾಗಿ ತೂಗಿ ನೋಡುತ್ತಿರುವುದು ಸರ್ವಥಾ ಸಾಧುವಲ್ಲ.

ಭರತಮಾರ್ಗದಿಂದ (ಅಂದರೆ ಒಂದೇ ಆಗಿದ್ದಿರಬಹುದಾದ ನಾಟ್ಯಮಾರ್ಗ) ಕವಲೊಡೆದ ಎಲ್ಲಾ ದೇಸೀಪದ್ಧತಿಗಳು (ಪ್ರಾಂತೀಯ ನಡವಳಿಕೆಗಳು) ಭಾರತದ ಶಾಸ್ತ್ರೀಯ ನೃತ್ಯಗಳೆಂದು ಕರೆಸಿಕೊಂಡ ಎಲ್ಲಾ ನೃತ್ಯಗಳನ್ನು ರೂಪಿಸಿ, ಪೋಷಿಸಿ, ಪಾಲಿಸುವಲ್ಲಿ ಮತ್ತು ನಾಟ್ಯಧರ್ಮಿಯ ನೆಲೆಯನ್ನು ಕೊಡಿಸುವಲ್ಲಿ ಶ್ರಮಿಸಿದ್ದು ಸಾಕಷ್ಟು ಸ್ಥಿತ್ಯಂತರಗಳನ್ನು ಇಂದಿಗೂ ಕಾಣುತ್ತಲೇ ಬಂದಿವೆ. ಹಾಗೆನೋಡಿದರೆ ನಾಟ್ಯದ ಕೊಂಡಿಗಳು ಕಳಚಿಕೊಳ್ಳುತ್ತಾ ಬಂದು; ನೃತ್ಯಮಾದರಿಯನ್ನು ಬೆಳೆಸುವಲ್ಲಿ ಕುಸುರಿ ಕೆಲಸ ಮಾಡಿದ್ದು ನಾಟ್ಯಧರ್ಮಿಯೇ. ಈ ಕುರಿತಾಗಿ ವಿಷಯ ವ್ಯಾಪ್ತಿ, ಅಗಾಧತೆಯ ಹಿನ್ನೆಲೆಯನ್ನು ಗಮನಿಸಿ ಮತ್ತಷ್ಟು ಸಂವಾದವನ್ನು ಮುಂದಿನ ಸಂಚಿಕೆಯಲ್ಲಿ ಅರಳಿಸೋಣ.

ಇತಿಹಾಸವನ್ನು ಅವಲೋಕಿಸಿದಾಗ ನಾಟ್ಯಧರ್ಮಿ ಹೆಚ್ಚು ಶಿಷ್ಟ, ಸಂಸ್ಕರಿತವೆಂದು ಕಂಡರೂ ಲೋಕಧರ್ಮಿಯ ಅಳವಡಿಕೆ ನಾಟ್ಯಧರ್ಮಿಗಿಂತಲೂ ಹೆಚ್ಚಿನ ಸಂವಹನವನ್ನು, ಜನಜೀವನ ಮಾದರಿಯನ್ನು ಪ್ರೇಕ್ಷಕರಿಗೆ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಆದರೆ ನರ್ತನವನ್ನು ರಸಯುಕ್ತ ವಾಗಿಸಿಕೊಳ್ಳುವುದಾದಲ್ಲಿ ಒಂದಷ್ಟು ಕ್ರಮಬದ್ಧತೆಗಾಗಿ, ಸೌಂದರ್ಯಕ್ಕಾಗಿ ಮತ್ತು ಲೋಕಸಹಜದಿಂದ ಸ್ವಲ್ಪ ಪಕ್ಕಕ್ಕೆ ಹೊರಳಿದ ರಮ್ಯಾತ್ಮಕವಾದ ಭಾವನಿರೂಪಣೆಗಾಗಿ ನಾಟ್ಯಧರ್ಮಿಯನ್ನು ಯೋಜಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ನರ್ತನವು ಒಂದೋ ಕ್ಷುದ್ರವೋ, ಒರಟೋ ಆಗಬಹುದು; ಅಂತೆಯೇ ಕೇವಲ ನಾಟ್ಯಧರ್ಮಿಯಾದರೆ ನಾಜೂಕೆನಿಸಿ ಅರ್ಥಸಂವಹನಕ್ಕೆ ಅವಕಾಶವಿಲ್ಲದ ರಸವಿಹೀನ ನಿರ್ಜೀವ ಬೊಂಬೆಯಾಗಬಹುದು. ಒಟ್ಟಿನಲ್ಲಿ ನಾಟ್ಯಧರ್ಮಿ ಮತ್ತು ಲೋಕಧರ್ಮಿಯ ಸಹಜವೆನಿಸುವ ಹೂರಣವನ್ನು ಪ್ರೇಕ್ಷಕನ ಬಾಯಿಗಿಡಲು ಔಚಿತ್ಯಪ್ರಜ್ಞೆಯೆಂಬ ಧಾತು ಕಲಾವಿದನಲ್ಲಿರಬೇಕು. ಈ ಹಿನ್ನೆಲೆಯಲ್ಲಿ ಭರತನು ನಾಟ್ಯಶಾಸ್ತ್ರದಲ್ಲಿತ್ತ ವೇದ, ಲೋಕ, ಆಧ್ಯಾತ್ಮವೆಂಬ ಮೂರು ಪ್ರಮಾಣವನ್ನು ಮುಖ್ಯವಾಗಿ ಗಮನಿಸಲೇಬೇಕು. ಪ್ರಮಾಣಗಳ ಅನುಸರಣೆಯಲ್ಲಿ ಭರತನು ನೀಡಿರುವ ವಿಷಯ ವಿಶ್ಲೇಷಣೆಗಳನ್ನು ಅರಿವಿಗೆ ತಂದುಕೊಂಡರೆ ನೃತ್ಯವೊಂದು ಕೇವಲ ಅನುಕರಣೆಯಾಗದೆ ಅನುಕೀರ್ತನವಾಗುತ್ತದೆ.

ಈ ಅವಲೋಕನದ ಸಾರಾಂಶ ಭರತಮಾರ್ಗದ ಮಟ್ಟ ಜಾಸ್ತಿ, ದೇಸೀ ಕಡಿಮೆ ಎಂಬ ಭಿನ್ನಮತಕ್ಕಲ್ಲ ಅಥವಾ ಲೋಕಧರ್ಮಿ ಶ್ರೇಷ್ಠ, ನಾಟ್ಯಧರ್ಮಿ ಕನಿಷ್ಠವೆನ್ನಲೂ ಅಲ್ಲ್ಲ. ಹಾಗೆನೋಡಿದರೆ ಇವೆರಡರ ಸಾರಸ್ಯ ಇರುವುದೇ ರಸದೃಷ್ಟಿಯಿಂದ ನೋಡಿದಾಗ. ಆಗಷ್ಟೇ ಇವೆರಡೂ ಕ್ಷೇತ್ರಗಳ ಸಾಧ್ಯತೆ ವಿಶಾಲ ಇಲ್ಲವೇ ಗೌಣವೆಂಬುದು ನಿರ್ಧಾರವಾಗುವುದು. ಹಾಗಾಗಿ ಲೋಕಧರ್ಮಿಯನ್ನೂ ಸಮಯೋಚಿತವಾಗಿ ಬಳಸಿಕೊಂಡು, ನಾಟ್ಯಧರ್ಮಿಯೊಳಗೆ ಹೊಸೆದು ಸುಂದರ ಹಾರಗಳಾಗಿಸಬೇಕು.

ಆದರೆ ಇದಾವುದರ ಪರಿಚಯವೂ ಇಲ್ಲವೆಂಬಂತೆ ತಮ್ಮದು ಪೂರ್ಣ ನಾಟ್ಯಧರ್ಮಿಯೆಂದು, ಮಾರ್ಗಾಧಾರಿತವೆಂದು ಸ್ವಘೋಷ ಮಾಡುವ ಶಾಸ್ತ್ರೀಯನೃತ್ಯದ ಮುದ್ರೆಯೊತ್ತಿಸಿಕೊಂಡ ಕಲಾವಿದರು ಈ ಸಂಪ್ರದಾಯ, ಪರಂಪರೆಗಳ ನಡುವಿನ ಸೂಕ್ಷ್ಮ ಎಳೆಯನ್ನು ಮರೆತು ಕುರುಡರಂತೆ ವರ್ತಿಸುವುದನ್ನು ಕಂಡಾಗ ನಿಜಕ್ಕೂ ವಿಷಾದವೆನಿಸುತ್ತದೆ. ಈ ನಿಟ್ಟಿನಲ್ಲಿ ಶಾಸ್ತ್ರೀಯನೃತ್ಯಗಳ ಕಲಾವಿದರು ನಮ್ಮದು ಶಾಸ್ತ್ರೀಯ, ಲೋಕಧರ್ಮಿಯ ಬಳಕೆ ಅಶಾಸ್ತ್ರೀಯ, ನಾಟ್ಯಧರ್ಮಿಯನ್ನು ಹೊರತುಪಡಿಸಿ ನರ್ತಿಸಿದರೆ ಕಲಾಪಚಾರ ಎಂದೆಲ್ಲಾ ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ಆದಷ್ಟೂ ನಮ್ರವಾಗಿದ್ದರೆ ಕಲಾಸೌಂದರ್ಯ ಇಮ್ಮಡಿಯಾಗುತ್ತದೆ; ಭಿನ್ನತೆಯ ಬಿಕ್ಕಟ್ಟು ಅಡಗಿ ರಸವೈವಿಧ್ಯದ ಚಿತ್ತಾರವರಳುತ್ತದೆ.

ಪ್ರೀತಿಯಿಂದ

ಸಂಪಾದಕರು

Leave a Reply

*

code