ಅಂಕಣಗಳು

Subscribe


 

ಕನ್ನಡ ಸಾಮಾಜಿಕ ಕಾದಂಬರಿಗಳಲ್ಲಿ ನೃತ್ಯ- ಮ.ನ.ಮೂರ್ತಿ ಅವರ ’ಅತಿಕಾಮಿ’ ಕಾದಂಬರಿ

Posted On: Thursday, August 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

(ಕಳೆದ ಸಂಚಿಕೆಯಿಂದ ಮುಂದುವರಿದುದು…)

ಮ.ನ.ಮೂರ್ತಿ ಅವರ ಅತಿಕಾಮಿ ಕಾದಂಬರಿ

ಈ ಕಾದಂಬರಿಯು ಜನಪ್ರಿಯ ಕಥಾತಂತ್ರದ ಶೈಲಿಯನ್ನು ಆಧರಿಸಿದೆಯೆಂದೆನಿಸಿದರೂ ಅದು ನವೋದಯದ ಕಾಲಘಟ್ಟಕ್ಕೆ ಅತ್ಯಂತ ಸೂಕ್ತವಾಗಿ ಹೆಣೆಯಲ್ಪಟ್ಟಿದೆ ಎಂದು ತೋರುತ್ತದೆ. ಅಷ್ಟೇ ಅಲ್ಲದೆ ನವ್ಯ-ನವೋದಯದ ಸಾಮಾಜಿಕ ಕಳಕಳಿಯ ದೃಷ್ಟಿಕೋನವು ಶಿವರಾಮ ಕಾರಂತರ ಕಾದಂಬರಿ ಒಂಟಿದನಿಯಂತೆ ಬೌದ್ಧಿಕವಾದ ಮಾತುಗಳಲ್ಲಿ ವ್ಯಕ್ತವಾಗದೇ ಪಾತ್ರಗಳ ನಡೆವಳಿಕೆ ಮತ್ತು ಕಥಾಹಂದರದ ನಿರಂತರತೆಯಲ್ಲಿ ತೋರಿಬರುತ್ತದೆ. ಹಾಗಾಗಿ ಈ ಕಾದಂಬರಿಯು ಮೇಲ್ನೋಟಕ್ಕೆ ತನ್ನ ಕಥಾತಂತ್ರಗಳಿಂದ ಸಿನಿಮೀಯವಾಗಿ ಕಂಡರೂ ಪಾತ್ರಗಳನ್ನು ನಿರೂಪಿಸುವಲ್ಲಿನ ಜಾಣತನದಿಂದಾಗಿ ಕಲೆ ಮತ್ತು ಅದರ ಸುತ್ತಲಿನ ವಿವಿಧ ಪ್ರಭಾವಳಿ, ಜೀವನ, ಕಲಾವಿದರ ಬದುಕಿನ ರೀತಿ-ರಿವಾಜು, ಆಕರ್ಷಣೆ ಇತ್ಯಾದಿಯಾಗಿ ವಾಸ್ತವಕ್ಕೆ ಹತ್ತಿರವಿರುವ ಚಿತ್ರಣವನ್ನೀಯುತ್ತದೆ. ಇದಕ್ಕೆ ಕಥಾವಸ್ತುವು ನೃತ್ಯವನ್ನೇ ಆಧರಿಸಿರುವುದೂ ಒಂದು ಕಾರಣವಾಗಿದ್ದು ; ಪ್ರಧಾನ ಪಾತ್ರಗಳು ನೃತ್ಯ ಕಲಾವಿದೆ, ಗುರು, ಪೋಷಕರು, ಕಲಾಪೋಷಕರು, ಪ್ರೇಕ್ಷಕರು, ಕಾರ್ಯಕ್ರಮ ಆಯೋಜಕರ ಸುತ್ತಲೇ ತಿರುಗುತ್ತವೆ.

ಇದರ ನಡುವೆ ಭರತನಾಟ್ಯದ ಪುಷ್ಪಾಂಜಲಿ, ಸ್ವರಜತಿ, ವರ್ಣ ಇತ್ಯಾದಿ ನೃತ್ಯಬಂಧಗಳ ಕುರಿತಾದ ವರ್ಣನೆ, ಕಲಾವಿದೆಯ ನೃತ್ಯದ ಸೊಬಗು ಮತ್ತು ಆಕೆಯ ಬಾಗು ಬಳುಕುವಿಕೆಗಳ ವಿವರಣೆ, ಕಲಾವಿದೆಗೆ ಒದಗುವ ಉಚ್ಛ ಸಂಸ್ಕೃತಿಯ ಮನ್ನಣೆ, ನಟ್ಟುವಾಂಗಕಾರ ಮತ್ತು ನೃತ್ಯ ತಂಡದ ಜವಾಬ್ದಾರಿಕೆಯ ಕಷ್ಟ-ಇಷ್ಟಗಳು, ಕಲಾವಿದರು ತಮ್ಮ ಪ್ರಸಿದ್ಧಿಗಾಗಿ ಮಾಡುವ ಪ್ರಚಾರ ತಂತ್ರಗಳು, ಕಲೆ ಮತ್ತು ಕಾಮವನ್ನು ಒಟ್ಟಿಗೆ ಬೆರೆಸಿ ಮರುಳುಗೊಳಿಸುವ ತಂತ್ರಗಳು, ಕಲೆ v/s ಕೀರ್ತಿ, ಕಲೆ v/s ಐಶ್ವರ್ಯ, ಕಲೆ v/s ಅಧಿಕಾರ ಮುಂತಾಗಿ ಪರಸ್ಪರ ಸಾಹಚರ್ಯ ಸಂಬಂಧಗಳ ಅಪೇಕ್ಷಿತ/ಅನಪೇಕ್ಷಿತ ರೀತಿ-ಗತಿ, ಬದಲಾವಣೆಗಳ ವಿವೇಚನೆ, ಕಲೆ-ಕೀರ್ತಿ-ಐಶ್ವರ್ಯ-ಅಧಿಕಾರವನ್ನು ಪಡೆಯುವ ಕಾಮನೆಗಳುಳ್ಳ ಕಲಾವಿದರ ಮನದ ಹಲವು ಒಳತೋಟಿ, ಸಂದಿಗ್ಧಗಳಿಗೆ ಕಾದಂಬರಿ ಕನ್ನಡಿ ಹಿಡಿಯುತ್ತದೆ. ಹಾಗಾಗಿ ಕಾದಂಬರಿಯು ಕೇವಲ ಕಾಲ್ಪನಿಕವೆನಿಸುವ ಘಟನೆಗಳನ್ನಷ್ಟೇ ನಿರೂಪಿಸದೆ ನೃತ್ಯಜಗತ್ತಿನ ಕೆಲವು ಅನಿವಾರ್ಯ ದಾರಿಗಳ ವಿಶ್ಲೇಷಣೆ, ಕಲೆಯನ್ನೇ ವೃತ್ತಿ ಮಾಡಿಕೊಂಡಾಗ ಮಾಡಿಕೊಳ್ಳಬೇಕಾದ/ಮಾಡಬಾರದ ರಾಜಿಗಳು, ಕಲಾವಿದರಿಗಿರಬೇಕಾದ ವರ್ತನೆ, ಕಲೆಯನ್ನು ಹೊಂದಿಕೊಂಡ ಅನೇಕರ ಮನಸ್ಥಿತಿಯನ್ನು ಕಾದಂಬರಿಯು ಕಾಣಿಸಿಕೊಡುತ್ತದೆ.

ಭರತನಾಟ್ಯದ ಪಂದನಲ್ಲೂರು ಪರಂಪರೆಗಿಂತಲೂ ಪ್ರಾಚೀನವೆಂಬಂತೆ ಕರ್ನಾಟಕದ ನೃತ್ಯಪರಂಪರೆಯ ಕುರಿತ ಮೆಚ್ಚುಗೆಯ ಮಾತುಗಳನ್ನು ಮದ್ರಾಸ್‌ನಲ್ಲಿ ಕಲಾವಿದೆಯ ನೃತ್ಯಪ್ರವಾಸದ ವೇಳೆಯ ಪ್ರದರ್ಶನ ಸಮಯದಲ್ಲಿ ಪ್ರೇಕ್ಷಕನೊಬ್ಬನ ಮೂಲಕ ಹೇಳಿಸಲಾಗಿದೆ. ಇದು ಸನ್ನಿವೇಶಕ್ಕೆ ಪೂರಕವೆನಿಸಿದರೂ ವಾಕ್ಯಗಳನ್ನು ತುರುಕಲಾಗಿದೆ ಎನ್ನಿಸುವುದು ಸಹಜ. ಆದರೆ ಬಹಳ ವರ್ಷಗಳಿಂದ ಅದರಲ್ಲೂ ೭೦ರ ದಶಕದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿದ್ದ ನೃತ್ಯಪರಂಪರೆಗಳ ಅನಾರೋಗ್ಯಕರ ಪೈಪೋಟಿ ಮತ್ತು ಸ್ವಸಮರ್ಥನೆ, ಮೇಲು-ಕೀಳಿನ ಭಾವನೆಯ ಉತ್ತರವಾಗಿ ಕಾದಂಬರಿಕಾರರು ಉದ್ದೇಶಪೂರ್ವಕವಾಗಿಯೇ ಮೈಸೂರು- ಪಂದನಲ್ಲೂರು ಪರಂಪರೆಗಳ ಕುರಿತ ಚರ್ಚೆಯನ್ನು ಬಳಸಿದ್ದಾರೆ ಎನ್ನಿಸುತ್ತದೆ.

ಕಾದಂಬರಿಯ ಶೀರ್ಷಿಕೆಗೆ ಅನ್ವರ್ಥವಾಗಿರುವ ಪಾತ್ರ ಪ್ರತಿಭಾವಂತ ಭರತನಾಟ್ಯ ಕಲಾವಿದೆ ಪ್ರಭಾವತಿ. ಅತಿಕಾಮಿ ಎನ್ನುವ ಶೀರ್ಷಿಕೆ ಕಾಮ ಎಂದರೆ ಆಸೆ ಎಂಬರ್ಥದಲ್ಲಿ ವ್ಯಾಪಕ ದೃಷ್ಟಿಯಿಂದ ಬಳಕೆಯಾಗಿರುವುದನ್ನು ಕಾದಂಬರಿಕಾರರು ಸಮರ್ಥಿಸಿಕೊಂಡಿದ್ದಾರೆ ಹೀಗಾಗಿ ಆಕೆಯದ್ದು ಕಲೆಯಿಂದ ದೊರೆಯುವ ಕೀರ್ತಿ, ಅದಕ್ಕೆ ಒದಗುವ ಐಶ್ವರ್ಯದ ಮನ್ನಣೆ, ಅದರಿಂದ ಅತಿಶಯವಾದ ಅಧಿಕಾರದ ಗತ್ತು-ಗೈರತ್ತು ಹೀಗೆ ಜೀವನದ ಬಹುತೇಕ ಐಹಿಕ ಸುಖಗಳ ಬಿಸಿಲುಗುದುರೆಯನ್ನೇರಿ ಹೊರಟ ಬದುಕು. ಆದ್ದರಿಂದಲೇ ಪ್ರಭಾವತಿ ಯಾರೊಬ್ಬರಿಗೂ ನಿಷ್ಠಳಲ್ಲ. ವ್ಯಕ್ತಿಗಳನ್ನು, ಸನ್ನಿವೇಶಗಳನ್ನು ತನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುವ ಚಾಣಾಕ್ಷೆ. ತನ್ನ ಸಾರ್ಥಕ್ಕಾಗಿ ಕಲೆಯನ್ನೇ ಮಾರಾಟಕ್ಕಿಡುವ ದುರ್ಬುದ್ಧಿ, ಅವಕಾಶವಾದಿತನ, ತನ್ನ ಹಿತಾಸಕ್ತಿಗಳನ್ನು ಪೂರೈಸುವಲ್ಲಿ ನೈತಿಕ ಅಧಃಪತನವನ್ನೂ ಹೇಸದ ಗುಣ ಆಕೆಯಲ್ಲಿ ರಕ್ತಗತವಾಗಿದೆ ಎಂಬಷ್ಟರ ಮಟ್ಟಿಗೆ ಆಕೆಯ ವರ್ತನೆ. ಕಲೆಯಲ್ಲಿ ಕೀರ್ತಿಯನ್ನು ಪಡೆಯಲು ತನ್ನ ಗುರು ವರದರಾಜನನ್ನು ಅವಲಂಬಿಸಿ ತಕ್ಕಮಟ್ಟಿಗೆ ತನ್ನ ಉದ್ದೇಶಿತಾರ್ಥ ಈಡೇರಿಸಿಕೊಳ್ಳುತ್ತಾಳೆ.

ಅವಳಂತೆಯೇ ಗುರುವೂ ಆಕೆಯಲ್ಲಿ ಹತೋಟಿಯನ್ನು ಸ್ಥಾಪಿಸಿ ತನ್ನ ನೆಲೆಯನ್ನು ಸುಭದ್ರವಾಗಿಸಲು ಆತ ಹುನ್ನಾರ ನಡೆಸುತ್ತಾನೆ. ಆದರೆ ಯಾವಾಗ ನೃತ್ಯ ಪ್ರದರ್ಶನಗಳನ್ನು ಏರ್ಪಡಿಸುವ ಗುತ್ತಿಗೆ ಹಿಡಿಯುವ ಮುನಿಸ್ವಾಮಿಪಿಳ್ಳೆಯ ಪರಿಚಯವಾಗುತ್ತದೋ ಲೇನಾದೇನಾ ಚೆಟ್ಟಿಯಾರ್ ಎಂಬ ಆಗರ್ಭ ಶ್ರೀಮಂತನ ತೋಳತೆಕ್ಕೆಗೆ ಸೇರಿ ಅವನ ಐಶ್ವರ್ಯವನ್ನು ತನ್ನ ಉದ್ದೇಶ, ಕೀರ್ತಿಕಾಮನೆಗಳಿಗೆ ಬಳಸಿಕೊಂಡು ಗುರು ವರದರಾಜನಿಗಿದ್ದ ಯಜಮಾನ ಪಟ್ಟವನ್ನು ಆತನಿಗೆ ಕೊಡುತ್ತಾಳೆ. ಆತನಿಂದ ಪ್ರಾಯೋಜಿತವಾದ ತನ್ನ ನೃತ್ಯಪ್ರವಾಸದಲ್ಲಿ ದೆಹಲಿಯ ಅತ್ಯುಚ್ಛ ಮಟ್ಟವನ್ನು ಅಲಂಕರಿಸಿದ್ದ ಪ್ರಕಾಶ್ ಮೆಹ್ತಾ ಎಂಬ ಅಧಿಕಾರಿಯ ಭೇಟಿ ಆಕೆಯ ವಿದೇಶಪ್ರವಾಸದ ಯೋಜನೆಗೆ ಮತ್ತಷ್ಟು ಇಂಬನ್ನು ಕೊಡುತ್ತದೆ. ಪರಸ್ಪರ ಇಬ್ಬರೂ ಆಕರ್ಷಿತರಾಗಿ ಆಕೆಯ ವಿದೇಶಪ್ರವಾಸ ಯಶಸ್ವಿಯಾಗುತ್ತದೆ. ಹಿಂತಿರುಗುವ ವೇಳೆಗೆ ಆಪ್ತ ಸಹಾಯಕಿ ಮೀರಾಳ ಅನಿಸಿಕೆಯಂತೆಯೇ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ಚೆಟ್ಟಿಯಾರ್‌ನ ಸಂಬಂಧವನ್ನು ತ್ಯಜಿಸಿ ನೃತ್ಯ ತಂಡವನ್ನು ಅನಾಥವಾಗಿಸಿ ಪ್ರಕಾಶ ಮೆಹ್ತಾನನ್ನು ಸೇರಿ ವೈಭವೋಪೇತವಾಗಿ ಜೀವನ ಮಾಡುತ್ತಾಳೆ. ಕಲೆಯನ್ನು ಕೀರ್ತಿಗಾಗಿ ಬಳಸಿದ್ದ ಆಕೆ ಮೆಹ್ತಾನನ್ನು ಸೇರಿದ ನಂತರ ಅಧಿಕಾರದ ಪ್ರಲೋಭನೆಗೊಳಗಾಗಿ ಇನ್ನು ಮೇಲೆ ಗೆಜ್ಜೆಯನ್ನು ಕೈಯಲ್ಲಿ ಸಹ ಮುಟ್ಟುವುದಿಲ್ಲ  ಎಂಬ ವಾಗ್ದಾನಕ್ಕೂ ಹಿಂಜರಿಯುವುದಿಲ್ಲ. ವಿಪರ್ಯಾಸವೆಂದರೆ ಆಕೆಯ ತಾಯಿಯೂ ತನ್ನ ಮಗಳ ಪ್ರತೀ ಹೆಜ್ಜೆಗೂ ಪ್ರೋತ್ಸಾಹಿಸುತ್ತಾ ಅಕೆಗೆ ಯಾವ ತಿಳಿವಳಿಕೆಯನ್ನೂ ಹೇಳದೆ ಲಾಭವನ್ನೇ ಆಲೋಚಿಸುವುದು.

ಆದರೆ ಪ್ರಭಾವತಿಯು ತನ್ನ ಜನ್ಮದಿನದಂದು ಪ್ರತಿಷ್ಟಾಪಿಸಿದ್ದ ತನ್ನನ್ನೇ ಹೋಲುವ ರೂಪಶಿಲ್ಪವು ಭಗ್ನವಾದಾಗ ಮಾನಸಿಕ ರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಲ್ಲಿಗೆ ತನಗೆಂದೂ ದೊರೆಯದ ಶುದ್ಧ ಪ್ರೇಮವನ್ನು ಅರಸುತ್ತಾ ಚಂದ್ರಮೌಳಿಯನ್ನು ಪ್ರೀತಿಸತೊಡಗುತ್ತಾಳೆ. ಆತ ಪ್ರತಿಸ್ಪಂದಿಸದಿದ್ದಾಗ ಆತನನ್ನು ವಶಪಡಿಸಿಕೊಳ್ಳುವ ಹಂಬಲದಲ್ಲಿ ಯೋಗಿಯೊಬ್ಬರನ್ನು ಬಿನ್ನವಿಸಿಕೊಳ್ಳುವ ಆಕೆಯ ಪ್ರಯತ್ನ ಸಂಪೂರ್ಣ ಆಕೆಯ ಮನಪರಿವರ್ತನೆಯಾಗುವಲ್ಲಿಗೆ ತೊಡಗುತ್ತದೆ. ಪರಿಣಾಮವಾಗಿ, ಕಂಡ ಮರೀಚಿಕೆಗಳಿಂದ ಹೊರಗುಳಿದು ಸಾತ್ವಿಕಳಾಗಿ ಅನಾಥಾಶ್ರಮವನ್ನು ಕಟ್ಟಿ ಮಾದರಿಯಾಗಿ ಬಾಳುವಲ್ಲಿಗೆ ಆಕೆಯ ಜೀವನದ ಪರಮೋದ್ದೇಶ ಸಾಧಿತವಾಗುವುದು ಕಾದಂಬರಿಯ ಸಾರಾಂಶ.

ಹೀಗೆ, ಪ್ರಭಾವತಿಯನ್ನೂ ಒಳಗೊಂಡಂತೆ ಅವಳನ್ನು ಸುತ್ತುವರೆದ ಪಾತ್ರಗಳಿಗೆ ಕಲೆಯ ಮೇಲಿನ ಪ್ರೀತಿಗಿಂತಲೂ ಐಹಿಕ ಸುಖಲಾಲಸೆಗಳಲ್ಲೇ ಪ್ರೀತಿ ಹೆಚ್ಚು. ತಂತ್ರಾಲೋಚನೆಯಲ್ಲೇ ಮಗ್ನವಾದ ಮುನಿಸ್ವಾಮಿಪಿಳ್ಳೆಗೆ ನೃತ್ಯತಂಡದ ಗುತ್ತಿಗೆ ತಪ್ಪಿ ಹೋಗಬಾರದೆಂದು ಪ್ರಭಾವತಿಗೆ ಲೇನಾದೇನಾ ಚೆಟ್ಟಿಯಾರರ ಸಂಪರ್ಕಕ್ಕೆ ತಂದು ಕೊನೆಗೆ ಆಕೆ ಮೆಹ್ತಾನೆಡೆಗೆ ಸಾಗುವಾಗ ಪರ್ಯಾಯವಾಗಿ ಮೀರಾಳನ್ನು ನೃತ್ಯಕ್ಕೆ ಸಿದ್ಧಪಡಿಸುವ ದುರಾಲೋಚನೆ, ತನ್ನ ಹಿತಾಸಕ್ತಿಗಾಗಿ ಪ್ರಭಾವತಿಯನ್ನು ಪ್ರಲೋಭಿಸಿದರೂ ನಂತರ ಆಕೆ ತನ್ನನ್ನು ಕೈಬಿಡುವ ಆಲೋಚನೆಯನ್ನು ಗ್ರಹಿಸಿದಾಗ ಇದ್ದಷ್ಟೂ ದಿನ ಲಾಭ ಮಾಡಿಕೊಳ್ಳುವ ಕುತಂತ್ರಗಳನ್ನು ರೂಪಿಸುತ್ತಾ ಎಡೆಯಿದ್ದಲ್ಲೆಲ್ಲಾ ತನ್ನ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸುವ ಗುರು ವರದರಾಜ, ಕಲಾಪೋಷಕರೆಂಬ ಸೋಗಿನಲ್ಲಿ ಪ್ರಭಾವತಿಯ ದೇಹಸೌಂದರ್ಯಕ್ಕೆ ಸೋಲುವ ಚೆಟ್ಟಿಯಾರ್, ಮೆಹ್ತಾ ಮುಂತಾದವರು, ತನ್ನ ಸೂಕ್ತ ಅವಕಾಶಕ್ಕಾಗಿ ಕಾಯುವ ಲಾಭಕಾರಿ ಪ್ರವೃತ್ತಿಯ ಮೀರಾ,..ಹೀಗೆ ಮುಖ್ಯಪಾತ್ರಗಳು ಕಲೆಯ ಕುರಿತಾದ ಆರಾಧನಾ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಬದಲು ಹಿಮ್ಮುಖ ಗತಿಯನ್ನು ಪಡೆಯುತ್ತವೆ. ಜೊತೆಗೆ ಸಾಕಷ್ಟು ಪಾತ್ರಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಕಲೆಯನ್ನು ದಾಳವನ್ನಾಗಿ, ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾ ದೇಹದ ಮೈಮಾಟಗಳನ್ನು ಕಲೆಯೊಂದಿಗೆ ಸಮೀಕರಿಸಿ ನೋಡುತ್ತಾರೆ. ಕಲೆಯನ್ನೂ. ಐಶ್ವಂii, ಕೀರ್ತಿ, ಆಸೆ-ಆಕಾಂಕ್ಷೆ, ಕಾಮ, ಸಾರ್ವಭೌಮತ್ವ, ಅಧಿಕಾರ, ಪ್ರಸಿದ್ಧಿಯ ಹಂಬಲದಲ್ಲಿ ತಮ್ಮತನವನ್ನು ಸ್ಥಾಪಿಸುವ, ಒಳ್ಳೆಯತನದ ತೊಗಲು ಧರಿಸುವವರಂತೆ ಕಾಣಿಸುತ್ತಾರೆ.

ಹಾಗಾಗಿ ಪಾತ್ರಗಳಲ್ಲಿ ಯಾವ ಬಗೆಯ ಅಂತರಂಗಾವಲೋಕನ, ಆತ್ಮ ವಿಶ್ಲೇಷಣೆಗಳೇನಿದ್ದರೂ ಕಾದಂಬರಿಯ ಕೊನೆಯ ೪ನೇ ಅಧ್ಯಾಯದ ಹೊತ್ತಿಗೆ ಮಾತ್ರ ಕಂಡುಬಂದಿದ್ದು ; ಚಂದ್ರಮೌಳಿ, ಯೋಗೀಶ್ವರರ ಪಾತ್ರವಷ್ಟೇ ಇಲ್ಲಿ ನೈತಿಕವಾಗಿ ಮಾದರಿಯಾಗಿ ತೋರಿಬಂದಿದೆ. ಸಾತ್ವಿಕವಾದ ಕಲಾದೃಷ್ಟಿಯುಳ್ಳವರ ಪಾತ್ರಗಳು ವಿರಳವಾಗಿರುವುದರಿಂದ ಕಲೆಯನ್ನು ನೋಡಬೇಕಾದ ಇತ್ಯಾತ್ಮಕ ದೃಷ್ಟಿಯು ಸ್ಪಷ್ಟವಾಗಿ ಮೊದಲೋದಿಗೇ ಓದುಗರಿಗೆ ದೊರಕುತ್ತದೆ. ಆದರೆ ಇಲ್ಲಿನ ಯಾವ ಪಾತ್ರಗಳೂ ಓದುಗರಿಗೆ ಸ್ವಸಮರ್ಥನೆ ನೀಡುವಷ್ಟರ ಮಟ್ಟಿಗೆ ಪ್ರಭಾವಿತವಾಗಿಲ್ಲದಿರುವುದರಿಂದ ಇಲ್ಲಿನ ನೃತ್ಯ ಕಲಾವಿದರು ನೈತಿಕತೆಯನ್ನೇ ಕಳೆದುಕೊಳ್ಳುವ ಕಲಾಜಗತ್ತಿನ ವ್ಯಕ್ತಿಗಳ ಪ್ರತಿರೂಪವಾಗಿ ತೋರುತ್ತಾರೆ.

ಕಾದಂಬರಿಯ ವಸ್ತು ಕಲಾವಿದರ ಅತೀ ಆಸೆ, ಲೋಲುಪತೆಗಳನ್ನೇ ಪ್ರಧಾನ ವಸ್ತುವಾಗಿರಿಸಿಕೊಂಡಿದೆ. ಆದ್ದರಿಂದ ನೃತ್ಯಕಲೆಯ ಕುರಿತ ಪತ್ರಿಕಾ ವಿಮರ್ಶೆಯ ದಾರಿ, ಕಲಾವಿದರ ನಡುವಿನ ಮತ್ಸರ, ಕಲಾಜೀವನದ ಆದರ್ಶ ವ್ಯಕ್ತಿತ್ವಗಳ ಪರಿಚಯ, ಶಾಸ್ತ್ರೀಯತೆ v/s ಪ್ರಯೋಗಗಳ ತಿಕ್ಕಾಟ, ನೃತ್ಯಕಲೆಯ ಸಂವಾದಿ ಕಲೆಗಳ ಪರಿಚಯ ಇಲ್ಲಿ ಅಷ್ಟು ಗಮನಾರ್ಹವಾಗಿಲ್ಲ. ಆದರೂ ಕಲಾಪ್ರಪೂರ್ಣತೆಗೆ ಪ್ರತಿಕೂಲವೆನಿಸುವ ಪಾತ್ರಗಳು- ಕೆಲವೊಮ್ಮೆ ಕಲೆಯ ಕುರಿತಾದ ನಡೆವಳಿಕೆಗಳನ್ನು, ಅನಿವಾರ್ಯ ಪರಿಸ್ಥಿತಿಗಳನ್ನು, ನೃತ್ಯಕಲೆಯನ್ನು ಕಾಣುವ ಪ್ರೇಕ್ಷಕನ ವಿಭಿನ್ನ ಮನಸ್ಥಿತಿಗಳನ್ನು ನಿರೂಪಿಸಿದೆ. ಉದಾಹರಣೆಗೆ ವರದರಾಜ ಮತ್ತು ಪ್ರಭಾವತಿಯ ನಡುವಿನ ಸಂಭಾಷಣೆಯೊಂದರಲ್ಲಿ ಕಲೆಯನ್ನು ಪರಿಭಾವಿಸಬೇಕಾದ ಲೌಕಿಕ, ಅಲೌಕಿಕ ಮಟ್ಟದ ಬಗ್ಗೆ ಆತ್ಮ ವಿಶ್ಲೇಷಣೆಯನ್ನು ಮಾಡಿಸಲಾಗಿದೆ :

 

ಕಲೆಯಾದವಳು ಬಡತನದಲ್ಲೇ ಬಾಳಬೇಕೆಂಬುದು ನಿಮ್ಮ ಅಭಿಪ್ರಾಯವೇ? 

ಅಲ್ಲ. ಐಶ್ವರ್ಯದ ಅಮಲಿನಲ್ಲಿ ಕಲೆಯನ್ನು ಕಡೆಗಣಿಸುವಂತಾಗುತ್ತದೆ. ಕಲೆಯ ಕೊಲೆಯಾಗುತ್ತದೆ. ಅದು ಕಲೆಗೆ ಅಪಚಾರ

ಕಲಾವಿದೆಯು ಹೊಟ್ಟೆಗಿಲ್ಲದೆ ಸತ್ತರೆ? ಎಷ್ಟು ಜನ ಉತ್ತಮ ಕಲಾವಿದರು ಉತ್ತಮ ಸ್ಥಿತಿಯಲ್ಲಿದ್ದಾರೆ ಹೇಳಿ ಗುರುಗಳೇ? ಬೇರೆಯವರ ಮಾತೇಕೆ; ನಾಟ್ಯಾಚಾರ್ಯರಾದ ನೀವು ಸುಖವಾಗಿದ್ದೀರಾ? 

ನನ್ನ ಮಾತು ಬೇಡ. ಹಣ ಗಳಿಸುವ ಇಚ್ಛೆ ಇರುವವನಾಗಿದ್ದರೆ ಇಂದು ಹಣದ ರಾಶಿಯ ಮೆಲೆ ಕೂಡಬಹುದಾಗಿತ್ತು.

ಪ್ರಪಂಚದಲ್ಲಿ ಐಶ್ವರ್ಯ ಹೆಚ್ಚೋ? ಕಲೆ ಹೆಚ್ಚೋ?

ಐಶ್ವರ್ಯವನ್ನು ಯಾರು ಬೇಕಾದರೂ ಸಂಪಾದಿಸಬಹುದು. ಆದರೆ ಕಲೆಯನ್ನು ಸಾಧಿಸುವುದು ಕಷ್ಟ

ಅದು ನನ್ನ ಪ್ರಶ್ನೆಗೆ ಉತ್ತರವಲ್ಲ. ಯಾವುದನ್ನು ಸುಲಭವಾಗಿ ಸಾಧಿಸಬಹುದೆಂದಲ್ಲ ನಾನು ಕೇಳಿದ್ದು. ಇವೆರಡರಲ್ಲಿ ಯಾವುದು ಹೆಚ್ಚು ಎಂದು

ಕಲೆಯೇ ಹೆಚ್ಚು. ಅದರಲ್ಲಿ ಸಂದೇಹವೇಕೆ?   

ಆದರೆ ಕಲೆಯು ಐಶ್ವರ್ಯಕ್ಕೆ ಅಧೀನವೆಂದರೆ ನೀವು ಒಪ್ಪುವಿರಾ? 

ಹೇಗೆ?

ಶ್ರೀಮಂತನೊಬ್ಬ ನನ್ನ ನರ್ತನಕ್ಕೆ ಹತ್ತು ಸಾವಿರ ರೂಪಾಯಿ ಕೊಡುತ್ತೇನೆಂದರೆ ನೀವು ನನ್ನನ್ನು ಅವರ ಮನೆಗೆ ಕರೆದೊಯ್ದು ನೃತ್ಯ ಮಾಡಿಸುತ್ತೀರಾ ಇಲ್ಲವೇ?

ಎಂದ ಮಾತ್ರಕ್ಕೇ ಆ ಶ್ರೀಮಂತನಿಗೆ ನೃತ್ಯ ಬಂದ ಹಾಗಾಯ್ತೇ? 

ಏಕೆ ಬರಬೇಕು? ನೃತ್ಯದಿಂದ ದೊರಕಬಹುದಾದ ಆನಂದವನ್ನು ಅವನು ಹಣ ಕೊಟ್ಟು ಪಡೆಯಬಹುದಾಗಿರುವಾಗ ಅವನು ಕಷ್ಟಪಟ್ಟು ನೃತ್ಯವನ್ನೇಕೆ ಕಲಿಯಬೇಕು?

ನೃತ್ಯ ಕಲೆಯನ್ನು ನೀನು ಅಷ್ಟು ಕೀಳಾಗಿ ಭಾವಿಸಬಾರದು ಪ್ರಭಾ 

ನಮ್ಮ ಕಲೆಯನ್ನು ಕೊಳ್ಳುವ ಶಕ್ತಿ ಐಶ್ವರ್ಯಕ್ಕೆ ಇರುವುದಾದರೆ ಅದು ಕಲೆಗಿಂತ ಹಿರಿಯಸ್ಥಾನವನ್ನೇ ಪಡೆಯಿತು. ಕಲೆಯು ಮೇಲೆನ್ನುವವರು ಅದರಿಂದ ಸಂಪಾದನೆ ಮಾಡಲು ಪ್ರಯತ್ನಿಸಬಾರದು; ಶ್ರೀಮಂತಿಕೆಗೆ ಶರಣಾಗಬಾರದು. ಶ್ರೀಮಂತನಾಗಲೀ, ಚಕ್ರವರ್ತಿಯೇ ಆಗಲಿ, ಕಲಾವಿದನಿರುವ ಸ್ಥಳಕ್ಕೆ ಬಂದು ಅವನಿಗೆ ಮನೋಧರ್ಮ ಬಂದಾಗ ಪ್ರದರ್ಶಿಸುವ ಅವನ ಕಲಾ ವೈಭವವನ್ನು ಕಂಡು ಮೆಚ್ಚಬೇಕು. ಹೀಗೆ ಎಷ್ಟು ಜನ ಕಲಾವಿದರು ಮಾಡುತ್ತಾರೆ, ಮಾಡಲು ಸಾಧ್ಯ? (ಅತಿಕಾಮಿ, ೧೯೭೬, ಪು:೮೧-೮೨)

 

ಆದರೆ ಕಾದಂಬರಿಯು ೧೩ನೇ ಅಧ್ಯಾಯದಿಂದ ಕೆಲವು ನಾಟಕೀಯ ತಿರುವುಗಳನ್ನು ಪಡೆದುಕೊಂಡು ಕಲಾವಿದೆಯ ಕುರಿತಾದ ಅನುಕಂಪ ಸಂವೇದನೆಗಳನ್ನು ಕೊಡುತ್ತದೆ. ಆದರೆ ಮುಕ್ತಾಯದ ವೇಳೆಗೆ ಕಲೆಯ ಪರಮೋದ್ದೇಶ ಅಧ್ಯಾತ್ಮ ಮತ್ತು ಕಲಾವಿದರು ಹೊಂದಬೇಕಾದ ಮನಸ್ಸು, ಶಾಂತಿ- ಸದ್ವಿಚಾರ, ರೂಢಿಸಿಕೊಳ್ಳಬೇಕಾದ ಗುಣಾವಲೋಕನದ ಮೂಲಭೂತ ಸತ್ಯಗಳನ್ನು ನೇರವಾಗಿ ಬಿಚ್ಚಿಡುತ್ತದೆ. ಹಾಗಾಗಿ ಓದುಗರಲ್ಲಿ ಚಿಂತನೆಗೆ ಪೂರಕವಾದ ಆಂತರಂಗಿಕ ಅನುಸಂಧಾನಕ್ಕೋ ಅಥವಾ ವಿಶ್ಲೇಷಣೆಗೋ, ಪರಾಮರ್ಶನಕ್ಕೋ ಹೆಚ್ಚಿನ ಅವಕಾಶ ಕೊಡದೆ ಒಳಿತು-ಕೆಡುಕುಗಳ ದರ್ಶನವನ್ನು ನೇರವಾಗಿ ಆಗಿಂದಾಗ್ಗೆ ಮಾಡಿಸುತ್ತದೆ. ಆದ್ದರಿಂದ ಇಲ್ಲಿ ಸಿನಿಮೀಯವೆನಿಸುವ ನಾಯಕಿ ಪ್ರಧಾನವಾದ ಕಥೆಯು ಜರುಗುತ್ತಾ ಅದರ ಸುತ್ತ ಪೋಷಕ ಪಾತ್ರಗಳು ತಿರುಗುತ್ತಾ ಕಲಾವಿದೆಯೊಬ್ಬಳ ಜೀವನಕ್ಕೆ ಬೇಕಾದ/ಬೇಡದ ಬಾಹ್ಯ, ಅಂತರಂಗ ಜೀವನ ದರ್ಶನ ಇಲ್ಲಿ ಸಾಧ್ಯವಾಗುತ್ತದೆ.

 

Leave a Reply

*

code