ಅಂಕಣಗಳು

Subscribe


 

ನೃತ್ಯದತ್ತ ಛಾಯೆಚಿತ್ತ

Posted On: Wednesday, August 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ನಿವೇದಿತಾ ಶ್ರೀನಿವಾಸ್, ಸಂಶೋಧಕರು, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು

ಓರ್ವ ನೃತ್ಯಗಾರ್ತಿ ತನ್ನ ನೃತ್ಯ ಪ್ರದರ್ಶನದ ಒಂದು ಫೋಟೋವನ್ನು ಫೇಸ್ ಬುಕ್‌ನಲ್ಲಿ ಹಾಕಿದ್ದಳು. ಅದಕ್ಕೆ ಹತ್ತಾರು ಕಮೆಂಟ್ಗಳು ಬಂದಿದ್ದವು. ಎಲ್ಲರೂ ಅವಳ ಅಭಿವ್ಯಕ್ತಿ ಹೊಗಳುತ್ತಿದ್ದರೆ, ಒಬ್ಬ ಫೋಟೋಗ್ರಾಫರ್ ಮಾತ್ರ, ಇದರಲ್ಲೇನೂ ವಿಶೇಷತೆ ಇಲ್ಲ. ಅಲ್ಲಿ ಅಭಿನಯವೇ ಇಲ್ಲ ಎಂದಿದ್ದಾನೆ. ಉತ್ತರವಾಗಿ ಆಕೆ, ತಾನು ಅಭಿನಯ ಮಾಡಿದ್ದರೂ ಅದು ಫೋಟೋದಲ್ಲಿ ಕ್ಯಾಪ್ಚರ್ ಆಗಿಲ್ಲ ಎಂದಿದ್ದಾಳೆ. ಅದಕ್ಕವನು, ಕಲಾವಿದೆಯು ವ್ಯಕ್ತಪಡಿಸಿದ್ದರೆ ಅದು ಫೋಟೋದಲ್ಲಿ ಬರಲೇಬೇಕು; ಇಲ್ಲದಿದ್ದರೆ ಆಕೆಯಲ್ಲೇ ಕೊರತೆಯಿದೆ ಎಂದರ್ಥ ಎಂದಿದ್ದಾನೆ. ಈ ವಾದ-ಪ್ರತಿವಾದ ಹೀಗೇ ಮುಂದುವರೆದು ಕಡೆಗೆ ಇಬ್ಬರೂ ಒಮ್ಮತಕ್ಕೆ ಬರಲಾಗಿಲ್ಲ. ಇದರಿಂದ ಏಳುವ ಪ್ರಶ್ನೆಗಳು ಹಲವಾರು. ಕಲಾವಿದ ಪ್ರಕಟಿಸಿದ ಭಾವನೆ ಕ್ಯಾಮರಾ ಸೆರೆಹಿಡಿಯಬಲ್ಲುದೇ? ಅಷ್ಟೇ ಪರಿಣಾಮಕಾರಿಯಾಗಿ ಬಿಂಬಿಸಬಹುದೇ? ಫೋಟೋದಿಂದಲೂ ರಸಾನುಭವ ಪಡೆಯಬಹುದೇ? ಫೋಟೋ ತೆಗೆಯುತ್ತಿರುವಾಗ ಅವನಿಗೂ ರಸಾನುಭವ ಆಗುತ್ತದೆಯೇ? ನೋಡೋಣ.

ನಮ್ಮ ಹಿಂದಿನವರು ತಮ್ಮ ಅನುಭವಗಳನ್ನು ಹಿಡಿದಿಟ್ಟುಕೊಳ್ಳಲು ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯದಂಥ ಮಾಧ್ಯಮಗಳನ್ನು ಬಳಸುತ್ತಿದ್ದರು. ಪ್ರದರ್ಶಕ ಕಲೆಗಳನ್ನೂ ಇವುಗಳಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನೂ ಕಾಣುತ್ತೇವೆ. ಇವು ಆಯಾಕಾಲದ ಸಮಾಜದ ಚಿತ್ರಣ ಕೊಡುವುದರೊಂದಿಗೆ, ಅಂದಿನ ಕಲೆಗಳ ಸ್ವರೂಪವನ್ನೂ ತಿಳಿಸುತ್ತವೆ. ಹೀಗೆ ಹಿಡಿದಿಡುವ ಮಾಧ್ಯಮ ಕಾಲಕ್ರಮೇಣ ಬದಲಾಗುತ್ತಾ ಬಂದಿದೆ. ಇತಿಹಾಸದ ಅನೇಕ ಘಟನಾವಳಿಗಳಿಂದ ದಾಖಲೀಕರಿಸುವ ವಿಧಾನವೂ ಹೊಸ ಅವಿಷ್ಕಾರಗಳಿಗೆ ಎಡೆ ಮಾಡಿಕೊಟ್ಟಿವೆ. ಅವುಗಳಲ್ಲಿ ಕ್ಯಾಮರಾದ ಉಗಮ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ.

ಹತ್ತೊಂಭತ್ತನೆಯ ಶತಮಾನದ ಮೊದಲ ದಶಕದಲ್ಲಿ ವಿಜ್ಞಾ ನಿಗಳು ತಮ್ಮ ಸಂಶೋಧನೆಗಾಗಿ ಕಂಡುಹಿಡಿದ ಈ ತಂತ್ರ; ಇಂದು ಜನ ಜೀವನದೊಳಗೆ ಹಾಸು ಹೊಕ್ಕಾಗಿದೆ. ಒಂದು ಲೇಖನದ ಮೂಲಕ ಹೇಳಬೇಕಾದ್ದನ್ನು, ಕೇವಲ ಒಂದು ಛಾಯಾಚಿತ್ರದ ಮೂಲಕ ಹೇಳಿಬಿಡಬಹುದು. ವಿಶಾಲ ವ್ಯಾಪ್ತಿಯನ್ನೊಳಗೊಂಡ ಫೋಟೋಗ್ರಫಿ ಕ್ಷೇತ್ರದಲ್ಲಿ ಆರ್ಟ್ ಫೋಟೋಗ್ರಫಿ ವಿಭಾಗ ಇಂದಿಗೆ ಒಂದು ಪ್ರತಿಷ್ಠಿತ ಉದ್ದಿಮೆಯಾಗಿ ಬೆಳೆದಿದೆ. ಅದರಲ್ಲೂ ಡ್ಯಾನ್ಸ್ ಫೋಟೋಗ್ರಫಿ ಹಲವು ಸವಾಲು ಗಳನ್ನೊಳಗೊಂಡ ಅತಿ ಬೇಡಿಕೆಯ ಕ್ಷೇತ್ರವಾಗಿದೆ. ನೃತ್ಯ ಛಾಯಾಗ್ರಾಹಕನ ಮೇಲೆ ಜವಾಬ್ದಾರಿ ಹೆಚ್ಚಾಗಿ ಇರುತ್ತದೆ. ನೃತ್ಯವೇ ಒಂದು ಕಲೆ; ಅದನ್ನು ಕಲಾತ್ಮಕವಾಗಿ ಹಿಡಿದಿಡುವುದು ಮತ್ತೊಂದು ಕಲೆ.

ಖ್ಯಾತ ನೃತ್ಯ ಛಾಯಾಗ್ರಾಹಕ ಶ್ರೀವತ್ಸ ಶಾಂಡಿಲ್ಯ ಅವರ ಮುಂದೆ ಮೇಲಿನ ಪ್ರಶ್ನೆಗಳನ್ನು ಇಟ್ಟಾಗ, ಯಾವುದೇ ಕ್ಯಾಮರಾ ಹಿಡಿಯಲಿ, ಛಾಯಾಗ್ರಾಹಕನು ಪ್ರದರ್ಶನದ ಸಮಯದಲ್ಲಿ ನರ್ತಕರೊಂದಿಗೆ ತನ್ಮಯರಾಗುವುದು ಮುಖ್ಯ. ಜೊತೆಗೆ, ಟೈಮಿಂಗ್ಮತ್ತೊಂದು ಅನುಸರಿಸಲೇಬೇಕಾದ ಅಂಶ. ಅಭಿನಯದಲ್ಲಿ ಮುಳುಗಿದ ನರ್ತಕರ ಭಾವವು ರಸಕ್ಕೆ ಮುಟ್ಟಿದರೆ ಕ್ಯಾಮರಾ ಸಹ ಅದನ್ನೇ ಸೆರೆ ಹಿಡಿಯುತ್ತದೆ. ಅಲ್ಲದೆ ಛಾಯಾಗ್ರಾಹಕನೂ ರಸಾನುಭವ ಪಡೆಯುತ್ತಾನೆ ! ಹಾಗೆ ತೆಗೆದ ಚಿತ್ರ, ಸ್ವಾಭಾವಿಕವಾಗೇ ರಸಾನುಭವ ನೀಡುತ್ತದೆ ಎಂದರು. ಆದರೆ, ಇಲ್ಲಿ ಮತ್ತೊಂದು ವಿಶ್ಲೇಷಿಸಬೇಕಾದ ಅಂಶ ಇದೆ. ರಸದ ಹಾದಿಯಲ್ಲಿ ಯಾವುದೇ ಕಲೆಗೆ ಸಂಬಂಧಿಸಿದಂತೆ ಉಲ್ಲೇಖಿಸುವ ಕಲಾಕಾರ-ಕಲಾಕೃತಿ-ರಸಿಕ ಸರಪಳಿಯನ್ನು ಇಲ್ಲಿ, ಛಾಯಾಗ್ರಾಹಕ-ಛಾಯಾಚಿತ್ರ-ವೀಕ್ಷಕ ಎಂದು ಭಾವಿಸಬಹುದು. ಇತರ ಕಲೆಗಳಲ್ಲಿ ಕಲಾಕಾರನ ಪ್ರತಿಭೆ, ಸಾಧನೆಯೇ ಅಂತಿಮವಾದರೆ; ಇಲ್ಲಿ ಛಾಯಾಚಿತ್ರದೊಳಗಿನ ನರ್ತಕಿಯ ಅಭಿನಯ ಸಾಮರ್ಥ್ಯತೆಯನ್ನೂ ಸರಪಳಿಯೊಳಗೆ ಸೇರಿಸಬೇಕಾಗುತ್ತದೆ. ಅಲ್ಲಿ ಇಲ್ಲದಿದ್ದರೆ ಇಲ್ಲೂ ಇಲ್ಲ ಎಂಬಷ್ಟರ ಮಟ್ಟಿಗೆ ನರ್ತಕಿಯ ಪ್ರತಿಭೆ ಪ್ರಮುಖವಾಗುತ್ತದೆ.

ಹಾಗಾಗಿ, ಮೇಲಿನ ಸನ್ನಿವೇಶ ಪರಿಶೀಲಿಸಿದಾಗ, ಒಂದೋ ನರ್ತಕಿಯ ಅಭಿನಯ ಸಾಮರ್ಥ್ಯ ಹೆಚ್ಚಿಲ್ಲದಿರಬಹುದು, ಅಥವಾ ಛಾಯಾಗ್ರಾಹಕ ಟೈಮಿಂಗ್ ಪರಿಪಾಲಿಸದಿರಬಹುದು. ಎರಡೂ ಸಂದರ್ಭದಲ್ಲಿ ಈ ಇಬ್ಬರೂ ತಮ್ಮ ತಪ್ಪು ಒಪ್ಪಿಕೊಳ್ಳುವುದು ಕಷ್ಟವೇ! ಮಗದೊಂದು ದೃಷ್ಟಿಕೋನ ಹೀಗಿದೆ. ಕ್ಯಾಮರಾಗಾಗೇ ಪೋಸ್ ಕೊಟ್ಟಾಗ ಅಭಿನಯ ಖಂಡಿತ ರಸಕ್ಕೆ ಏರಲಾಗದು. ಈ ಅಂಶವನ್ನೂ ಶ್ರೀವತ್ಸ ಅವರು ದೃಢಪಡಿಸುತ್ತಾರೆ. ಯಾವುದೇ ಹಿನ್ನೆಲೆಯಿಲ್ಲದೆ ಒಂದು ಭಾವವನ್ನು ವ್ಯಕ್ತಪಡಿಸಿದಾಗ ಅದೇನು ರಸಕ್ಕೆ ಮುಟ್ಟುತ್ತದೆಯೇ ? ಚಲನೆಯಲ್ಲಿ ಇರುವಂಥದ್ದರಲ್ಲೇ ಜೀವ ಅಡಗಿರುತ್ತದೆ.

ಆದರೆ, ಚಿತ್ರಕಲೆಯಲ್ಲಾಗಲೀ, ಶಿಲ್ಪಕಲೆಯಲ್ಲಾಗಲೀ ಈ ಅಂಶ ವಿವರಿಸುವುದು ಹೇಗೆ? ಈ ಮಾಧ್ಯಮಗಳಲ್ಲೂ ರಸಾನುಭವ ಆಗುವುದು ಸಹಜ ತಾನೆ? ಅಲ್ಲೂ ಸಹ, ಕಲಾಕೃತಿಯಲ್ಲಿ ಒಂದು ಚಲನೆಯ ಚಿತ್ರಣವಿದ್ದರೆ, ಅದು ಜೀವಂತವೆನಿಸುತ್ತದೆ, ರಸದೆಡೆ ಒಯ್ಯುತ್ತದೆ. ಉದಾಹರಣೆಗೆ, ಬೆಂಗಳೂರಿನ ಮಲ್ಲೇಶ್ವರದಲ್ಲಿ ರಸ್ತೆ ಪಕ್ಕದ ಗೋಡೆಗಳ ಮೇಲೆ ಬಿಡಿಸಿರುವ ಅನೇಕ ಚಿತ್ರಗಳನ್ನು ಕಾಣಬಹುದು. ಅವುಗಳಲ್ಲಿ ಒಂದು ಹಾಡುತ್ತಿರುವವಳ ಮತ್ತೊಂದು ನರ್ತಿಸುತ್ತಿರುವವಳ ಚಿತ್ರಗಳಿವೆ. ಎರಡರಲ್ಲೂ ಏನೋ ಸೆಳೆತವಿದೆ. ಒಂದು ಇಂಪಾದ ಗಾನ ಹೊರಹೊಮ್ಮಿಸುತ್ತಿದ್ದರೆ, ಮತ್ತೊಂದರಲ್ಲಿ ಭಕ್ತಿ ಭಾವದ ಪರಾಕಾಷ್ಠೆ! ಒಟ್ಟಿನಲ್ಲಿ ಚಲನೆಯಲ್ಲಿರುವುದರ ಚಿತ್ರಣ.

ಈ ಸಂದರ್ಭದಲ್ಲಿ ಚಿಕ್ಕಂದಿನಲ್ಲಿ ಓದಿದ ಇಂಗ್ಲಿಷ್ ಪದ್ಯ ನೆನಪಾಗುತ್ತಿದೆ. ಅದು ಜಾನ್ ಕೀಟ್ಸ್‌ರವರ ಓಡ್ ಆನ್ ಎ ಗ್ರೆಶಿಯಸ್ ಅರ್ನ್. ಅದರಲ್ಲಿ ಬರುವ ಸಾಲುಗಳು ಒಂದು ಹೂಕುಂಡದ ಮೇಲಿನ ಚಿತ್ರಗಳನ್ನು ಕುರಿತಾಗಿವೆ. ಒಂದೆಡೆ ತನ್ನ ಪ್ರೇಯಸಿಯನ್ನು ಚುಂಬಿಸಲು ಪ್ರೇಮಿಯೊಬ್ಬನ ಅವಿರತ ಪ್ರಯತ್ನ, ಮತ್ತೊಂದೆಡೆ ಹುಡುಗನೊಬ್ಬನ ಕೊಳಲಿನಿಂದ ಹೊಮ್ಮುತ್ತಿರುವ ನಿರಂತರ ನಾದ. ಕೇಳಿಸುವ ನಾದ ಮಧುರವಾದರೆ, ಕೇಳದ್ದು ಅತಿ ಮಧುರ.. ಹೀಗೆ ಸಾಗುತ್ತದೆ ಕವಿಯ ಕಲ್ಪನೆ. ಈ ಕಲಾಕೃತಿಯಲ್ಲೂ, ಪದ್ಯದಲ್ಲೂ ಚಲನೆಯಲ್ಲಿರುವುದರ ಉಲ್ಲೇಖವೇ ಇದೆ.

ಇಷ್ಟಲ್ಲದೆ, ಚಿತ್ರಗಳ ಪೈಕಿ ನವರಸಗಳಿಂದ ಕೂಡಿದವು, ಅಷ್ಟನಾಯಿಕೆಯರ ಅವಸ್ಥೆಗಳ ಕುರಿತಾದವು ಹಲವಾರು ಸಿಗುತ್ತವೆ. ಒಂದೇ ಚಿತ್ರದಲ್ಲಿ ಆ ಸನ್ನಿವೇಶ ಅರ್ಥವಾಗಿಬಿಡುತ್ತದೆ. ಸ್ಥಾಯಿ, ವಿಭಾವ, ಅನುಭಾವಗಳ ಔಚಿತ್ಯಪೂರ್ಣ ಚಿತ್ರಣ ಮನಸೂರೆಗೊಳ್ಳುತ್ತದೆ. ಇಲ್ಲೂ ಸಹ ಚಲನೆಗಳ ಎಳೆಗಳು ಸಿಗುತ್ತವೆ. ಶಿಲ್ಪಗಳೂ ಇದಕ್ಕೆ ಹೊರತಲ್ಲ. ಅನುಭವಿ ಶಿಲ್ಪಶಾಸ್ತ್ರತಜ್ಞರು ಒಂದು ಶಿಲ್ಪ ನೋಡಿದಾಕ್ಷಣ, ಅದು ಚಲನೆಯಲ್ಲಿನದೋ ಅಥವಾ ಸ್ಥಿರ ಭಂಗಿಯೋ ಹೇಳಬಲ್ಲರು. ಸೂಕ್ಷ್ಮಾತಿಸೂಕ್ಷ್ಮವಾದ ಚಲನೆಯಲ್ಲಿನ ವೇಗವನ್ನು ಸಹ ಗಮನಿಸಬಲ್ಲರು!

ಇದಕ್ಕೆ ತದ್ವಿರುದ್ಧವಾದದ್ದು ಮೋಹಕ ನರ್ತನಭಂಗಿಗಳಲ್ಲಿರುವ ಶಿಲ್ಪಗಳು. ಇವು ಕೇವಲ ಅಲಂಕಾರಿಕವಾಗಿರುತ್ತವೇ ಹೊರತು ಯಾವುದೇ ಭಾವದ ದ್ಯೋತಕವಾಗಿರುವುದಿಲ್ಲ. ಇವನ್ನು ಕ್ಯಾಮರಾಗಾಗಿ ಪೋಸ್ ಕೊಟ್ಟ ರೂಪದರ್ಶಿಗಳಿಗೆ ಹೋಲಿಸಬಹುದು. ಹಾಗಾಗಿ, ಅಂತಿಮವಾಗಿ ರಸಾಸ್ವದನೆಗೆ ಚಲನೆಯು ಮಹತ್ವದ ಕಚ್ಚಾವಸ್ತು ಎಂಬ ತೀರ್ಮಾನಕ್ಕೆ ಬರಬಹುದು.

ಅಂತ್ಯವಾಕ್ಯಸ್ಥಾವರಕ್ಕಳಿವುಂಟು ಜಂಗಮಕ್ಕಿಲ್ಲ ಎಂಬ ವಚನಕಾರರ ನುಡಿಯನ್ನು ಕಲೆಗೂ ಅನ್ವಯಿಸಬಹುದಲ್ಲವೆ?

 

 

 

—-


Leave a Reply

*

code