ಅಂಕಣಗಳು

Subscribe


 

ಸಹಸ್ರತಂತ್ರೀ ನಿಃಸ್ವನದಂತೆ

Posted On: Saturday, October 17th, 2009
1 Star2 Stars3 Stars4 Stars5 Stars (No Ratings Yet)
Loading...

Author: ದ.ರಾ. ಬೇಂದ್ರೆ

ಏನೋ ತಿಳಿಯದು ! ಆಗಸವೇ ತೂತಾಗಿರಬಹುದೇ ಎಂಬಂತೆ ಎಲ್ಲೆಲ್ಲಿಯೂ ಮಳೆಯ ಅಖಂಡನಾದ ಮೊರೆದಿದೆ. ಕೊಚ್ಚಿಹೋದ ಕಾಲ-ಕಾರಣಗಳಿಗೆ ಸಾಕ್ಷಿಯಾಗಿ ಅದರ ಹನಿಗಳು ಇನ್ನೂ ಜೀವಂತವಿವೆ. ವರ್ಷ ಋತುವಿನ ಹರ್ಷ ಧಾರೆಯ ಬೆನ್ನಿಗೇ ಶರದ್ ಸಂಭ್ರಮಕ್ಕೆ ಅಚ್ಚರಿಯೆಂಬಂತೆ ದೃಷ್ಟಿಬೊಟ್ಟನ್ನಿಟ್ಟಿದೆ. ಈ ಸಂಕ್ರಾಂತಿಕಾಲಕ್ಕೆ ದೃಷ್ಟಿಯನ್ನಿಡೋಣ ; ಒಮ್ಮೆ  ಭವಿಷ್ಯದ ಭರವಸೆ ಮತ್ತು ಆತಂಕಗಳ; ದ.ರಾ.ಬೇಂದ್ರೆಯವರ ‘ಅರಳು ಮರಳು’ ಕವನಸಂಕಲನದಿಂದಾಯ್ದ ‘ಸಹಸ್ರತಂತ್ರೀ ನಿಃಸ್ವನದಂತೆ’ ಓದಿನೊಂದಿಗೆ…!

ಸಹಸ್ರತಂತ್ರೀ ನಿಃಸ್ವನದಂತೆ
ಮಾತರಿಶ್ವನಾ ಘನಮನದಂತೆ
ಗುಡುಗಾಡುತ್ತಿದೆ ಗಗನದ ತುಂಬ
ಪ್ರಣವ ಪ್ರವೀಣನ ನಾದಸ್ತಂಭ.

ಏಕದಿಂದಲೇ ಉದಿಸಿದೆ ಸರ್ವ
ಐಕ್ಯ ಶರಿಸಿಯೇ ಆಳುವನೋರ್ವ
ಆ ಓರ್ವನೊಳೇ ಸರ್ವವು ಸೇರಿ
ಜಯವನು ಸಾರಲಿ ಧರ್ಮದ ಭೇರಿ

ದದದಾ ದದದೋಂ ದಮದಯ ದತ್ತೋಂ
ದಿಕ್ತಟ ತಟವಟ ಧಿಗಿದಂ ಧಿಕ್ತೋಂ
ನಿರ್ದ್ವಂದ್ವದೊಳೆದ್ದಿತು ಓಂ ನಾದ
ತಾಂಡವೇಶ್ವರನ ಅಖಂಡವಾದ

ಸತಿಮುಖಸುಸ್ಮಿತ ಜನಿತ ಸುವೇದ
ಶರಣಾನ ಚಿದ್ಗತಿ ಶರಣ್ಯವೇಧ
ಮಧುರಾ ಭಕ್ತಿಯ ಮಧರಾ ಗೀತ
ವೇಣುಧ್ವನಿಯಲಿ ಆತ್ಮಪ್ರೀತ

ಮಾನವ-ದಾನವ-ದೇವ ದೇವತಾ
ಯುಗಯುಗ ಗರ್ಭಿತ ಜೀವ ಜೀವಿತಾ
ಮೂರ್ತಿತವಾಗಲಿ ಪ್ರಾರ್ಥನೆಗಾಗಿ
ಉದ್ಭವ ಭವಿಷ್ಯ ಸಾರ್ಥಕವಾಗಿ

ಸಹಸ್ರಾರವಿಂದೋತ್ಥಿತಬಾಲೆ
ಬ್ರಹ್ಮಹೃದಯರತಿ ಸುಷುಪ್ತ ಜ್ವಾಲೆ
ಏನಿದೆ ? ಏನಿದೆ? ಏನಾಮೇಲೆ?
ಕೃಪಾಪುಷ್ಪಗಳ ಅನಂತಮಾಲೆ

ಧರ್ಮಮೇಘವೇ ವರ್ಷಿಸುವಂತೆ
ಸತ್ಯದ ಸತ್ವವ ಸ್ಪರ್ಶಿಸುವಂತೆ
ಧರಣಿಯ ಕೆಚ್ಚೆಲು ಹರ್ಷಿಸುವಂತೆ
ಬರಲಿದೆ ಮಳೆ ಉದ್ಘರ್ಷಿಸುವಂತೆ-

-ಸಹಸ್ರತಂತ್ರೀ ನಿಃಸ್ವನದಂತೆ

Leave a Reply

*

code