ಅಂಕಣಗಳು

Subscribe


 

ಡೋಲಾಹಸ್ತ

Posted On: Friday, June 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

Copyrights reserved. No use Without prior permission.

ಲಕ್ಷಣ: ಪತಾಕ ಹಸ್ತವನ್ನು ಎರಡೂ ಪಕ್ಕಗಳಲ್ಲಿ ಬೆರಳನ್ನು ಸಡಿಲಿಸಿ ಜೋಡಿಸಿ ಹಿಡಿಯುವುದು. ಡೋಲ ಎಂದರೆ ಡೋಲು ಎಂದರ್ಥ. ನಾಟ್ಯಶಾಸ್ತ್ರದ ಪ್ರಕಾರ ಭುಜಗಳನ್ನು ಸಡಿಲ ಮಾಡಿ, ಪತಾಕವನ್ನು ಉದ್ದವಾಗಿ ಇಳಿಬಿಟ್ಟು ಯುಕ್ತಭಂಗಿಯಲ್ಲಿ ನಿಲ್ಲುವುದು, ಅಲ್ಲಾಡಿಸುವುದು, ನಡೆಯುವುದು ಇತ್ಯಾದಿ. ಅಧಿದೇವತೆ : ಸರಸ್ವತಿ. ಈ ಹಸ್ತದೊಂದಿಗಿನ ನಿಲುವು ಸಹಜಸ್ಥಾನಕದೊಂದಿಗೆ ವಿಶೇಷವಾದ ನಡೆಗಳನ್ನು ನೃತ್ಯಕ್ಕೆ ಕೊಡುತ್ತಲೇ ಬಂದಿದೆ.ಆದ್ದರಿಂದಲೇ ಅಭಿನಯದರ್ಪಣದ ಪ್ರಕಾರ ಡೋಲಾಹಸ್ತವು ನೃತ್ತಹಸ್ತವಾಗಿಯೂ ಪ್ರಚಲಿತದಲ್ಲಿದೆ. ಜೊತೆಗೆ ನಿತ್ಯಜೀವನದಲ್ಲಿ, ನಡೆಯುವಾಗ, ನಿಲ್ಲುವಾಗ ಡೋಲಾ ಹಸ್ತದ ನಿಲುವು ಸಹಜವೂ ಹೌದು. ದೇವ-ದೇವತೆಗಳಲ್ಲಿ ಈ ಮುದ್ರೆಯಿದ್ದು ಕಾಪಾಡುತ್ತೇನೆ ಎಂಬ ಅಭಯವನ್ನೂ ಸೂಚಿಸುತ್ತದೆ. ಆದ್ದರಿಂದ ಸ್ತ್ರೀಹಸ್ತ ಮತ್ತು ದೇವತೆಗಳ ಅಭಯಸೂಚನೆಗಳಂತಹ ಸಂದರ್ಭಗಳಲ್ಲಿ, ಸಹಜ ನಿಲುವಿನ ಸನ್ನಿವೇಶಗಳಲ್ಲಿಯೂ ಡೋಲಾಹಸ್ತದ ಬಳಕೆ ಹೇರಳವಾಗಿದೆ.

ಡೋಲಾಹಸ್ತವನ್ನು ಕಟ್ಯಾವಲಂಬಿತ ಮುದ್ರೆಯೆಂದೂ ಕರೆಯುತ್ತಾರೆ. ಪ್ರತಿಮಾಶಾಸ್ತ್ರದಲ್ಲಿ ಕಟಿಸಂಸ್ಥಿತ ಮುದ್ರೆಯೆಂದೂ ಕರೆಯುತ್ತಾರೆ. ಆದರೆ ಭಂಗಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದು, ಸುಖಭಂಗಿಸೂಚಿತ ಮುದ್ರೆಯಾಗಿದ್ದು ; ಕೈಯ್ಯನ್ನು ಇಳಿಬಿಟ್ಟು ನಡುವಿನ ಬಳಿ ಆನಿಸಿ ನಿಲ್ಲುವುದು ಇರುತ್ತದೆ. ಒಡಿಸ್ಸಿಯಲ್ಲಿ ಡೋಲಾ ಹಸ್ತಕ್ಕೆ ಲುಲಿತವೆಂಬ ಹೆಸರಿದ್ದು; ಒಡಿಸ್ಸಿಯ ಸ್ಥಾಯಿ ಭಂಗಿಯಲ್ಲಿ ಬಳಕೆಯಾಗುತ್ತದೆ. ಕಥಕ್ ನೃತ್ಯದ ಸಲಾಮೀ ಚಾರಿಯಲ್ಲಿ ಡೋಲಾಹಸ್ತದ ಉಪಯೋಗವಿದೆ.

ಇನ್ನು ಡೋಲಾಹಸ್ತದ ಬಳಕೆಯನ್ನು ಆಳವಾಗಿ ವಿಶ್ಲೆಷಿಸಹೊರಟರೆ ನಾಟ್ಯಶಾಸ್ತ್ರದ ಡೋಲಾಪಾದವೆಂಬ ಕರಣ ಮತ್ತು ಚಾರಿಗಳು ಈ ಹಸ್ತದ ಹೆಸರನ್ನೇ ಅವಂಬಿಸಿ ಕರೆಯಲ್ಪಟ್ಟಿದೆ. ಉಳಿದಂತೆ ಲತಾ, ನಿತಂಬ, ವಲಿತ, ಗರುಡಪಕ್ಷ, ಕರಿಹಸ್ತ ಮುಂತಾದ ನೃತ್ತಹಸ್ತಗಳಲ್ಲಿ ; ವಿದ್ಯುದ್ಭ್ರಾಂತ, ಭುಜಂಗತ್ರಾಸಿತ, ದಂಡಪಾದದಂತಹ ಚಾರಿಗಳಲ್ಲಿ; ಸಮನಖ, ಊರ್ಧ್ವಜಾನು, ರೇಚಿತ ನಿಕುಟ್ಟಿತ, ಘೂರ್ಣಿತ, ಅರ್ಧರೇಚಿತ, ಭುಜಂಗತ್ರಸ್ತ ರೇಚಿತ, ಭುಜಂಗತ್ರಾಸಿತ, ವೃಶ್ಚಿಕ, ವೃಶ್ಚಿಕರೇಚಿತ, ಚಕ್ರಮಂಡಲ, ಆಕ್ಷಿಪ್ತ, ವಿಕ್ಷಿಪತ, ಆವರ್ತ, ವಿನಿವೃತ್ತ, ಪಾರ್ಶ್ವಕ್ರಾಂತ, ಅತಿಕ್ರಾಂತ, ವಿವರ್ತಿತಕ, ತಲಸಂಸ್ಫೋಟಿತ, ಅರ್ಧಸೂಚೀ, ಗೃಧ್ರಾವಲೀನಕ, ಸನ್ನತ, ದಂಡಪಾದ, ಹರಿಣಪ್ಲುತಕ, ಡೋಲಾಪಾದ, ಪ್ರೇಂಖೋಲಿತ, ಚತುರ, ಚಕ್ರಮಂಡಲ, ಸ್ಖಲಿತ, ಪ್ರಸರ್ಪಿತಕ, ಉಪಸೃತಕ, ತಲಸಂಘಟ್ಟಿತ, ಊರೂದ್ವೃತ್ತ, ಮದಸ್ಖಲಿತ, ವಿಷ್ಣುಕ್ರಾಂತ, ಲೋಲಿತ ಮುಂತಾದ ಹಲವಾರು ಕರಣವಿಶೇಷಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಅಭಿನಯದರ್ಪಣದ ಮಂಡಲಸ್ಥಾನಕ, ಭರತನಾಟ್ಯದ ತಟ್ಟುಮೆಟ್ಟಡವು, ನೃತ್ತವಿನ್ಯಾಸ, ಭರತಾರ್ಣವ ತಿಳಿಸುವಂತೆ ಆಯತ ಸ್ಥಾನಕಗಳಲ್ಲಿ ಬಲಗೈಯಲ್ಲಿ ಅರ್ಧಚಂದ್ರವನ್ನು ತೊಡೆಗಳ ಬಳಿ ಹಿಡಿದು ಮತ್ತು ಡೋಲಾಹಸ್ತವನ್ನು ಎಡಕೈಯಲ್ಲಿ ಇಳಿಬಿಡುವುದನ್ನು ಸೂಚಿಸಲಾಗಿದೆ.

ವಿನಿಯೋಗ : ನಾಟ್ಯದ ಆರಂಭದಲ್ಲಿ ಪಾರ್ಶ್ವದಲ್ಲಿ ಇಡುವುದು ಕ್ರಮ.

ಇತರೇ ವಿನಿಯೋಗ : ಮಾರ್ಗ ನೃತ್ಯ, ಸಂಭ್ರಮ, ವ್ಯಥೆ, ಮೂರ್ಛೆ, ವ್ಯಾಧಿ, ಉಲ್ಲಾಸಗಮನ, ಮದ, ಆವೇಗ, ಶಸ್ತ್ರದಿಂದಾದ ಗಾಯ, ಜಗಳ, ಕಷ್ಟ, ಮರ್ಯಾದೆ, ಮಾನವಂತ, ಪಾರ್ಶ್ವವಾಯು, ಕೆಟ್ಟದ್ದು, ಹಮ್ಮು, ಅಹಂಕಾರ, ರೋಗ, ರೋಗಗ್ರಸ್ಥ, ಅಕರ್ಷಣೆಯಿಂದಾದ ಪ್ರೇಮ, ವಿಲಾಸ, ನಿರುತ್ಸಾಹ, ಮಾದಕಸ್ಥಿತಿ, ಮೈಮರೆಯುವುದು, ಓಲಾಡು, ಕಾರ್ಮಿಕ, ನಿಶ್ಯಕ್ತಿ, ದೋಣಿ, ಡೋಲಯಾತ್ರಾ ಹಬ್ಬ, ಕೆಳಗೆ ಬೀಳು, ನೊಂದುಕೊಳ್ಳುವುದು, ಭಾದ್ರಪದ ಮಾಸ, ಜೋಲಾಡುವುದು, ಪ್ರಾರ್ಥನೆ, ಆಯುಧಗಳಿಂದ ಘಾಸಿ, ನಮಸ್ಕಾರ, ಹಿಂಬಾಲಿಸುವುದು, ಉಯ್ಯಾಲೆ, ಕುಡಿದು ತೂರಾಡುವುದು. ಬುದ್ಧಾವತಾರ ಹಸ್ತಕ್ಕೆ ಸಹಜರೀತಿಯಲ್ಲಿ ಡೋಲಾ ಹಸ್ತದ ಬಳಕೆಯನ್ನು ಭರತಾರ್ಣವ ಮತ್ತು ಭರತಸಾರವು ತಿಳಿಸುತ್ತದೆ.

Leave a Reply

*

code