ಗಣೇಶಾಭಿನಂದನ !!

Posted On: Wednesday, December 4th, 2013
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

ಕಳೆದ ವರ್ಷದ ನೆನಪಿನ ಬುತ್ತಿಯನ್ನು ಮತ್ತೊಮ್ಮೆ ಉಣ್ಣಬೇಕೆನಿಸುತ್ತಿದೆ.
poster_horiz_02ಅಕ್ಷರ ಲೋಕದ ಪ್ರಿಯ ಸೋದರ, ಬಹುಶ್ರುತ ವಿದ್ವಾಂಸ ಡಾ. ಆರ್. ಗಣೇಶರ ’ಶತಾವಧಾನ’ ಸತ್ರಕ್ಕಾಗಿ ಪುತ್ತೂರಿನಿಂದ ನಾನೂ, ವಿಷ್ಣು ಬೈಕಿನಲ್ಲೇ ಹೊರಟು ೩ ದಿನದ ಅಕ್ಷರ ಸರಸ್ವತಿಯ ಸರೋವರದಲ್ಲಿ ಮಿಂದೆದ್ದ ಪುನೀತ ಅನುಭವವನ್ನು ಮತ್ತೆ ಮತ್ತೆ ಅನುಭವಿಸುತ್ತ ಪುಳಕಗೊಳ್ಳುತ್ತಿದಾಗಲೇ ಗಣೇಶರ ೫೦ ವರ್ಷದ ಹುಟ್ಟುಹಬ್ಬ ಇದಿರು ನಿಂತು ಸ್ವಾಗತಿಸುತ್ತಿತ್ತು.
ಒಂದರ್ಥದಲ್ಲಿ ನಮ್ಮ ಎಲ್ಲಾ ಬಗೆಯ ಅಧ್ಯಯನದ ವಿಷಯಳಿಗೆ ಗಣೇಶರೇ ಪರಮಾಚಾರ್ಯರು.(ಹಾಗಂತ ನಾವು ಹೇಳಹೊರಟರೆ ಅವರು ಖಡಾಖಂಡಿತವಾಗಿ ನಿರಾಕರಿಸುವುದು ಹೊಸದೇನಲ್ಲ.) ಏನಾದರೂ ಸಂದೇಹ ಇಣುಕಿತೆಂದರೆ ಸಾಕು ಅವರ ಬಳಿಗೆ ನಮ್ಮ ಕಾಲು ಜೊತೆಗೆ ಮನಸ್ಸು ದೌಡಾಯಿಸುತ್ತವೆ. ’ಗಣೇಶರು ತೀರ್ಮಾನ ಕೊಟ್ಟಲ್ಲಿಗೆ ಮುಗಿಯಿತು. ಒಂದವೇಳೆ ಅವರ ಬಾಯಲ್ಲಿ ಬೈಸಿಕೊಳ್ಳುವುದಾದರೂ ಅದಕ್ಕೂ ಒಂದ ಅರ್ಥ ಇರುತ್ತದೆ’ ಎಂಬುದು ನಮ್ಮ ಅಲಿಖಿತ ಸಿದ್ಧಾಂತ. ಒಟ್ಟಿನಲ್ಲಿ ಅವರಿಂದ ಅಕ್ಷರ ಲೋಕ-ರಸಲೋಕಕ್ಕೆ ಒದಗುತ್ತಿರುವ ಕೊಡುಗೆ ಅದರ ಮೂಲಕವಾಗಿರುವ ಋಣವನ್ನು ತೀರಿಸಲು ಜನ್ಮವೊಂದು ಸಾಕಾಗದು ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ಹಾಗಂತ ಅವರನ್ನು ನಾವು ’ಗುರು’ಗಳೆಂದು ಸಂಬೋಧಿಸಹೊರಟರೆ ಸಾಕು ಗುರ್ ಗುರ್ರೆನುತ್ತಾ ’ನಾವೆಲ್ಲರೂ ಮಿತ್ರರು, ಅಣ್ಣ-ತಮ್ಮಂದಿರು’ ಎಂಬಲ್ಲಿಗೇ ನಿಲ್ಲಿಸಿಕೊಳ್ಳುತ್ತಾರೆ.ಆಶೀರ್ವಾದ ಪಡೆಯಬೇಕು ಎಂದು ನಮಸ್ಕಾರ ಮಾಡಹೊರಟರೆ ಮೊದಲೇ ಅರ್ಥ ಮಾಡಿಕೊಂಡವರಂತೆ ಮಾತಿನಲ್ಲೋ, ಕೃತಿಯಲ್ಲೋ ಅಲ್ಲಲ್ಲಿಗೇ ತಡೆದು ಆಶೀರ್ವಾದದ ಆಲೋಚನೆಗೆ ಬ್ರೇಕ್ ಹಾಕಿಬಿಡುತ್ತಾರೆ. ಏನೇ ಇರಲಿ, ಒಟ್ಟಿನಲ್ಲಿ ಗುರುವೆಂದು ಮಾತಿನಲ್ಲಿ ಇಣುಕಿದಾಗಲೆಲ್ಲಾ ಅದನ್ನು ಸವರಿಸಿ, ಅವರಂದಂತೆಯೇ ಎದುರಿಗೆ ತಲೆಯಾಡಿಸಿ ಅವರ ’ಗುರುತ್ವ’ಕ್ಕೆ ಮನಸ್ಸಿನಲ್ಲೇ ಕೈಮುಗಿಯುತ್ತೇವೆ. ಇದು ನನ್ನೊಬ್ಬಳ ಕತೆಯಲ್ಲವೆಂಬುದು ನಿಮಗೂ ಗೊತ್ತು!!:-)

ಹಾಂ..ನೆನಪು ಮಾಡಿಕೊಳ್ಳುವ ಹೊತ್ತಿಗೆ ಅವರ ಸಖ್ಯಸಂತೋಷದ ತುಣುಕುಗಳು ನುಸುಳಿಹೋಗುತ್ತವೆ. ಇರಲಿ.. ಅದೊಂದು ದಿನ, ಕಲಾಪ್ರಪಂಚಕ್ಕೆ ಹಲವು ಮಾದರಿಯಲ್ಲಿ ಅವಿಶ್ರಾಂತವಾಗಿ ದುಡಿಯುತ್ತಲೇ ಇರುವ ಗಣೇಶರಿಗೆ ಅವರ ಬಹುವಾಗಿ ಮೆಚ್ಚುವ ನರ್ತನಲೋಕವನ್ನುಅಂದು ಅವರ ಮನಸ್ಸಿಗೊಪ್ಪುವಂತೆ ನೀಡಬೇಕು, ಜೊತೆಗೆ ಆ ನರ್ತನಸ್ವಾದವನ್ನು ನಾವೂ ಸವಿದು ಅವರ ಹುಟ್ಟುಹಬ್ಬದ ನೆವದಲ್ಲಿ ದಿನವೊಂದನ್ನು ಸ್ಮರಣೀಯವಾಗಿಸಬೇಕು ಎಂದು ಗಣೇಶರ ಸಾಹಿತ್ಯಕ್ಕೆ ನಮ್ಮೊಲವಿನ ವಿದ್ವನ್ಮಿತ್ರೆ, ನೃತ್ಯಗುರು ಡಾ. ಶೋಭಾ ಅವರ ನೃತ್ಯಕಾರ್ಯಕ್ರಮಕ್ಕೆ ಅಡಿಯಿಟ್ಟಿದ್ದೆವು. ಕೀರ್ತಿಶೇಷ ಸುಂದರೀ ಸಂತಾನಂ ಕೂಡಾ ಹಿಂದೊಮ್ಮೆ ಗಣೇಶರ ಹುಟ್ಟುಹಬ್ಬಕ್ಕೆ ಮನೆಗೆ ಕರೆದು ಸದ್ದುಸುದ್ದಿಯಿಲ್ಲದೆ ಅನಿರೀಕ್ಷಿತವಾಗಿ ಸರಳಸುಂದರ ನೃತ್ಯಕಾರ್ಯಕ್ರಮ ಅರ್ಪಿಸಿದ್ದರಂತೆ! ಆದರೆ ಅಂತಹ ಸರ್ ಪ್ರೈಸ್ ನ್ನ ಮತ್ತೊಮ್ಮೆ,ಅದೂ ಗಣೇಶರ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ, ಶತಾವಧಾನ ಸಮಾಪ್ತಿಯಾದ ವಾರದೊಳಗೆ ಅಭಿಮಾನಿ ಸಹಸ್ರಿಗರು ನಾಮುಂದು ತಾಮುಂದು ಎಂದು ಮುಂದಿರುವಾಗ.. ನಮ್ಮ ಪುಟ್ಟ ಅಭಿನಂದನೆಯನ್ನು ಅನಿರೀಕ್ಷಿತವಾಗಿ ನೀಡುವುದೆಂದರೆ ದುಸ್ತರವೇ ತಾನೇ ! ಆದ ಕಾರಣವೇ ಸಮಾನಮನಸ್ಕ ಸನ್ಮಿತ್ರರೆಲ್ಲರೂ ’ಆ ದಿನಕ್ಕಾಗಿ” ಕಾದು ಕುಳಿತವರಂತೆ ೬ ತಿಂಗಳ ಮೊದಲೇ ಗಣೇಶರ ಸಮಯಾವಕಾಶವನ್ನು ಅರಿತು ಅಂದು ಸಂಜೆ ನಮ್ಮದೇ ಆದ ಪ್ರೀತಿಪೂರ್ವಕ ನೆಲೆಯಲ್ಲಿ ಅವರನ್ನು ಜತನದಿಂದ ಸ್ವಾಗತಿಸಲು ಗುಟ್ಟಾಗಿ ಅಣಿಯಾಗಿದ್ದೆವು. ಜೊತೆಗೆ ಅಭಿನಂದನೆಯು ಔಪಚಾರಿಕತೆಯ ಹಮ್ಮುಬಿಮ್ಮುಗಳಿಲ್ಲದೆ ಹರಿದು ಮುಕ್ತವಾಗಿ ಕುಟುಂಬ ಕಾರ್ಯಕ್ರಮದಂತೆ ಇದ್ದರೆ ಅದರ ಸೊಗಸು ಇನ್ನೂ ಚೆಂದ ಎಂಬುದು ನಮ್ಮ ಎಣಿಕೆ. ಆದರೂ ಗುಟ್ಟಾಗಿ ಮಾಡುವ ಕಾರ್ಯಕ್ರಮಕ್ಕೆ ಜನ ಜಾಸ್ತಿಯಂಬಂತೆ ನೃತ್ಯ ಕಾರ್ಯಕ್ರಮಕ್ಕಾಗುವಾಗ ನಮ್ಮ ಸಡಗರ ಕಂಡೇ ಜನಸಮೂಹ ಭರ್ಜರಿಯಾಗಿಯೇ ಜಮಾಯಿಸಿತ್ತು. ಸುಂದರೀ ಅವರಂತಲ್ಲದಿದ್ದರೂ ನಮ್ಮದೇ ಆದ ಸರ್ ಪ್ರೈಸ್ ಗಳು ಒಂದೊಂದಾಗಿ ಯೋಜನೆಯಲ್ಲಿದ್ದವು. ಇನ್ನೇನು ಅನುಷ್ಠಾನಕ್ಕೂ ಬರಬೇಕೂ….
ಅದಾವ ಶಕುನವೋ ಏನೋ.. ಸುರಿಯಿತು ನೋಡಿ ಧೋ..ಎಂಬ ವರ್ಷಧಾರೆ. ಬೆಂಗಳೂರಿಗೆ ಬೆಂಗಳೂರೇ ಕರಗಿ ಹೋಗುವಂತೆ. ತಂಪಿನ ವಿಶಾಲಾಕಾಶದ ಕೆಳಗೆ ನಕ್ಷತ್ರ ನೋಡುತ್ತಾ ಹದವಾದ ತಂಗಾಳಿಯನ್ನು ಮೈಗೆ ಸೋಕಿಸುತ್ತಾ ಕಣ್ತುಂಬಾ ನೃತ್ಯವೈಭೋಗವನು ತುಂಬಿಕೊಳ್ಳಬೇಕೆಂಬ ನಮ್ಮ ಆಸೆಗೆ ವರುಣದೇವ ಜೊರ್ರೆಂದು ನೀರು ಸುರಿದಿದ್ದ !ಗೌರೀ ನಾಟ್ಯಶಾಲೆಯ ಟೆರೆಸಿನ ಅಂಗಳದ ಶಾಮಿಯಾನಗಳಿಂದ ತೊಟ್ಟಿಕ್ಕುತ್ತಿದ್ದ ನೀರನ್ನು ಕಾಣುವಾಗ ಎಲ್ಲಿಲ್ಲದ ವೇದನೆ! ಜೊತೆಗೆ ಮಳೆಯ ಹೊಡೆತಕ್ಕೆ ಬೆಂಗಳೂರಿನ ಬೀದಿನೀರು ಕಪ್ಪು ಸರೋವರಗಳನ್ನು ಸೃಷ್ಟಿ ಮಾಡುತ್ತಾ ಬಸ್ ನ ವೇಗದ ಚಾಲನೆಯ ಭರಾಟೆಗೆ ಬೈಕ್ ಏರಿದ್ದ ನಮ್ಮಿಬ್ಬರಿಗೂ ಕಪ್ಪು ನೀರಿನ ವಿಶೇಷ ಸ್ನಾನವೂ ಆಯಿತೆನ್ನಿ. ಒಟ್ಟಿನಲ್ಲಿ ಹವೆ ತಂಪಾಗಿತ್ತಾದರೂ ಮನಸ್ಸು ಕ್ರುದ್ಧವಾಗಿತ್ತು ! ಅಂತೂ ಇಂತೂ ಕಾರ್ಯಕ್ರಮದ ವಿಶಾಲಾವಕಾಶವನ್ನು ನಾಲ್ಕುಗೋಡೆಗಳ ಪುಟ್ಟ ರಂಗಮಂಟಪಕ್ಕೆ ವರ್ಗಾಯಿಸಿ ಗೆಲುವಿನ ನಿಟ್ಟುಸಿರುಬಿಟ್ಟೆವಾದರೂ ಮಳೆರಾಯನ ಪರಾಕ್ರಮದ ಎದುರಿಗೆ ಅದಾಗಲೇ ನಾವು ಸೋತುಸುಣ್ಣವಾಗಿದ್ದೆವು.
ಆದರೆ ನೃತ್ಯಸಮಾರಾಧನೆಯಲ್ಲಿ ಮಿಂದೆದ್ದ ಅನುಭವವೆಂದರೆ…ವ್ಹಾ.. ಎದುರಾದ ಅಡೆತಡೆಗಳನ್ನು ಮರೆತು ರಸಗಂಗೆ ಮನಸ್ಸಿನ ತುಂಬಾ ಧುಮ್ಮಿಕ್ಕಿ ಹರಿದಿದ್ದಳು. ಸಂಭ್ರಮದ ಸಂಜೆಯ ಅನಿರ್ವಚನೀಯ ಆನಂದದ ಎದುರಿಗೆ ನಿರೂಪಣೆ ಮಾಡಹೊರಟ ನನ್ನಿಂದ ಶಬ್ದಬ್ರಹ್ಮ ಹೊರಬೀಳದೆ ಕೊನೆಗೆ ಗಣೇಶರಿಗಾಗಿ ಮಾಡಲ್ಪಟ್ಟ ಕಾರ್ಯಕ್ರಮದಲ್ಲಿ ಅವರೇ ನೃತ್ಯಸಂದರ್ಭಗಳ ವಿವರಣೆಗಿಳಿಯಬೇಕಾಯಿತು. ಅಷ್ಟಕ್ಕೂ ಅವರೇ ಬರೆದ ಕಾವ್ಯಕೌಸ್ತುಭಕ್ಕೆ ನಾವು ಹೊಳಪು ಬರಿಸುವುದು ಸಾಧ್ಯವೇ? ಅವರಿಂದಾದರೇನೇ ಚೆನ್ನ. ಒಟ್ಟಿನಲ್ಲಿ ದೀರ್ಘ ೨ ಗಂಟೆಗಳಲ್ಲಿ ಗಂಗೆ ಭುವಿಗಿಳಿದಿದ್ದಳು, ಕೃಷ್ಣನ ಅವತಾರ ವಿಶ್ಲೇಷಣೆ ಆಗಿತ್ತು, ನರ್ಮಪ್ರಸಾದಕ ಹೆಂಡತಿಯ ಮನವೊಲಿಸಿದ್ದ; ಸಾಧಾರಣ ನಾಯಿಕೆಯ ಮನದಿಂಗಿತ ಅರ್ಥವಾಗಿತ್ತು, ಕಿಂಕಿಣಿಯ ರಿಂಗಣದ ಮೆಲು ದನಿಗೆ ಒತ್ತಾಯಿಸುವ ಅಭಿಸಾರಿಕೆಯಲ್ಲಿ ಗೆಜ್ಜೆಯ ನುಡಿಸಾಣಿಕೆಯ ನವಿರು ನವಿಲಾಗಿತ್ತು..ಹೀಗೆ ಸಿಕ್ಕ ಪುಟ್ಟ ಅವಕಾಶದಲ್ಲೇ ನೃತ್ಯಾಕಾಶದ ದರ್ಶನವನ್ನು ಮಿನುಗುವ ಬಾನಿನ ಕುಸುಮಗಳನ್ನು ಶೋಭಾ ಕಣ್ಣ ಮುಂದೆ ತಂದಿತ್ತದ್ದು ಈಗಲೂ ನೆನಪ ಸುರುಳಿಗಳಲ್ಲಿ ಪಲ್ಲವಿಸುತ್ತಲೇ ಇದೆ.
ಶತಾವಧಾನವನ್ನು ಯಶಸ್ವಿಯಾಗಿ ಪೂರೈಸಿದ ಹೊತ್ತಿನ ಜನ್ಮದಿನಕ್ಕೆ ನರ್ತನದ ಅಮೃತಸಿಂಚನ ಒಂದೆಡೆಯಾದರೆ..,ಐವತ್ತರ ಸಂಭ್ರಮದಲ್ಲಿದ್ದ ಗಣೇಶರು ನೂರ್ಕಾಲ ಬಾಳಲಿ ಎಂಬಂತೆ ಅವರಿಗಾಗಿ ತಂದಿದ್ದ ನೂರು ಬಗೆಯ ಸಿಹಿಯ ಮೊದಲ ಸವಿಯನ್ನು ಅವರ ಕೈಯಾರೆ ಬಾಯಿಗಿಟ್ಟದ್ದು ’ಸಿಹಿ’ಗೆ (ಸುಂದರೀ ಸಂತಾನಂ ಅವರ ಮೊಮ್ಮಗಳು). ಸಿಹಿಸಿಹಿ ಕ್ಷಣಗಳು… ಜೊತೆಗೆ ನೂರು ಮೊಗ್ಗುಗಳ ಮಲ್ಲಿಕಾಮಾಲೆಯನ್ನು ಅವರಿಗೆ ನೀಡಿದಾಗ ಎಲ್ಲರ ಕಣ್ಣುಗಳಲ್ಲೂ ಮಿಂಚು ಬೆಳಗಿತ್ತು. ಧನ್ಯತೆಯ, ಸಾರ್ಥಕತೆಯ ತುತ್ತು ಕೈಯೊಳಗಿತ್ತು. ರುಚಿಯ ಹದ ಬಾಯೊಳಗಿತ್ತು.
ಮತ್ತೆ ಅದೇ ದಿನ ಇಂದೂ, ಎಂದೆಂದೂ ಬರಬಾರದೇ ಎಂದೆನಿಸಿದೆ. ಸಣ್ಣ ಸಂಜೆಯಾದರೂ ಸರಿ, ಬದುಕಿನುದ್ದಕ್ಕೂ ಬಾಳುವ ಸೌಗಂಧ ಸೂಸುವ ಸಮಾರಂಭ ಇರಬಾರದೇ ಎನ್ನಿಸಿದೆ. ಮತ್ತೆ ಮತ್ತೆ ರಸ-ರಾಗದ ಮಿಂಚುಬಳ್ಳಿಗಳು ನಮ್ಮನ್ನು ತಾಕುತ್ತಾ, ಜೀಕುತ್ತಾ ಇರಬೇಕೆನ್ನಿಸಿದೆ. ಏಕೆಂದರೆ ಇಂದು ಗಣೇಶರ ಜನ್ಮದಿನ. ಜನ್ಮ ದಿನದ ಆಚರಣೆ ಅವರಿಗೆ ದೊಡ್ಡ ವಿಷಯವಲ್ಲ ಎಂಬುದು ಅವರ ಮನದಾಳ ಅರಿತವರೆಲ್ಲರಿಗೂ ಗೊತ್ತಿರುವುದೇ! ಆದರೆ ಇಂತಹ ದಿನದ ನೆವದಲ್ಲಿ ಸಂಭ್ರಮಿಸಲು ಕಾತರಿಸಿ ಕುತ್ತಿಗೆಯುದ್ದ ಮಾಡುವ ನಮಗೆ ನಿಜಕ್ಕೂ ದೊಡ್ಡ ಹಬ್ಬವೇ ಸರಿ.
ಬೇಕಾದರೆ ಮತ್ತೊಮ್ಮೆ ಮಳೆಯಲ್ಲಿ ತೋಯಲು ಸಿದ್ಧರಿದ್ದೇವೆ. ಆದರೆ ಕಲಾವರ್ಷ ಮತ್ತೊಮ್ಮೆ ಮನದಂಗಣದಲ್ಲಿ ಪನ್ನೀರನ್ನೆರೆದು ಸುಂದರ ಮಲ್ಲಿಗೆಯ ಮೊಗ್ಗುಗಳನ್ನು ಬೆಳೆಸಲಿ. ಇಂದಲ್ಲದಿದ್ದರೆ ಏನು? ನಾಡಿದ್ದು ಡಿಸೆಂಬರ್ ೨೧ ಕ್ಕೆ ಮತ್ತೊಮ್ಮೆ ಇದೇ ಮುಹೂರ್ತ ಪಲ್ಲವಿಸಲಿದೆ. ಗಣೇಶರ ಸಾಹಿತ್ಯಕ್ಕೆ ಭರತನೃತ್ಯಶಾಲೆಯ ಅಂಗಣದ ಕುವರಿಯರು ಬಿಟಿಎಂ ಕಲ್ಚರಲ್ ಅಕಾಡೆಮಿಯ ಆಯೋಜಕತ್ವದ ಅಂಗಳದಲ್ಲಿ ನೃತ್ಯವಾಡಲಿದ್ದಾರೆ. ಕಳೆದ ವರುಷ ಗಣೇಶರ ಜನ್ಮದಿನದ ಸಂಭ್ರಮವಷ್ಟೇ ಇತ್ತು. ಆದರೆ ಇದೀಗ ೮೦ನೇ ವಯಸ್ಸಿನ ವರ್ಷದ ಸಂಭ್ರಮದಲ್ಲಿರುವ ( ಮೇ ೫ ಜನ್ಮದಿನ) ಕಲಾಪೋಷಕರಾದ ಹಿರಿಯ ಅಜ್ಜ ಅನಂತರಾಂ ಅವರ ಅಪೇಕ್ಷೆಯಂತೆ ಗಣೇಶರ ಕಾವ್ಯಮಣಿ ಅವರ ಜನ್ಮದಿನದ ತಿಂಗಳ ಬೆಳಕಲ್ಲೇ ಮತ್ತೊಮ್ಮೆ ಡಾ. ಶೋಭಾ, ದೀಕ್ಷಾ, ನಮಿತ ಅವರ ಕಿರುಗೆಜ್ಜೆಗಳಲ್ಲಿ ಘಲಿರು ಘಲಿರೆನ್ನಲಿದೆ.
ಮತ್ತೊಮ್ಮೆ ರಸದೂಟ ಸಿದ್ಧವಾಗಿದೆ. ನೆನಪಿನ ಬುತ್ತಿಗೆ ಮತ್ತಷ್ಟು ತುಂಬಿಕೊಳ್ಳುವ ಕಾಂಕ್ಷೆಯಲ್ಲಿದ್ದೇವೆ..:-)

Leave a Reply

*

code