ಅಂಕಣಗಳು

Subscribe


 

ಗರುಡಹಸ್ತ

Posted On: Tuesday, August 26th, 2014
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಅಭಿನಯದರ್ಪಣ ಗ್ರಂಥದ ಪ್ರಕಾರ ಅರ್ಧಚಂದ್ರ ಹಸ್ತಗಳನ್ನು ಅಂಗೈಭಾಗವು ತನಗೆ ಅಭಿಮುಖವಾಗಿರುವಂತೆ ಅಡ್ಡಲಾಗಿ ಹಿಡಿದು ಸ್ವಸ್ತಿಕಾಕಾರಮಾಡಿ ಹೆಬ್ಬೆರಳನ್ನು ಕೊಂಡಿಯಂತೆ ಸೇರಿಸುವುದು. ಇದರ ವಿನಿಯೋಗ : ಗರುಡ. ನಿತ್ಯಜೀವನದಲ್ಲಿ ಈ ಹಸ್ತವನ್ನು ಹಕ್ಕಿ ಹಾರಾಡುವುದು ಎಂದು ಸೂಚಿಸಲು ಬಳಸುತ್ತಾರೆ.
ಕಥಕ್, ಕೂಚಿಪುಡಿ, ಯಕ್ಷಗಾನಾದಿಯಾಗಿ ಗರುಡ ಪಕ್ಷಿಯನ್ನು ಒಳಗೊಂಡಂತೆ ಪಕ್ಷಿಸಂಕುಲದ ಅಭಿನಯಕ್ಕೆ ಈ ಹಸ್ತವನ್ನು ಬಳಸುತ್ತಾರೆ. ಮಣಿಪುರಿ ನೃತ್ಯದಲ್ಲಿ ಗರುಡಹಸ್ತಕ್ಕೆ ಕೋಕಿಲವೆಂಬ ಹೆಸರನ್ನು ಸೂಚಿಸಿದ್ದಾರೆ. ಪೂಜಾಮುದ್ರೆಗಳಲ್ಲಿ ಬಳಸುವ ಗರುಡ ಮುದ್ರಾದ ಲಕ್ಷಣ ಕೊಂಚ ಭಿನ್ನವಾಗಿದ್ದು; ಎರಡೂ ಕೈಯ್ಯನ್ನು ಹಿಂಬಂದಿಯಿಂದ ಕತ್ತರಿಯಂತೆ ಮಾಡಿ ಅಂಗೈಯನ್ನು ಹೊರಮುಖವಾಗಿರಿಸಿ, ತೋರು ಮತ್ತು ಕಿರು ಬೆರಳನ್ನು ಆಯಾಯ ಬೆರಳಿಗೆ ಹೆಣೆದು, ಉಳಿದ ಬೆರಳುಗಳನ್ನು ಸ್ವಲ್ಪ ಬಗ್ಗಿಸಲಾಗುತ್ತದೆ. ಪತಾಕಹಸ್ತಗಳನ್ನು ಮೇಲ್ಮುಖವಾಗಿ ಒಂದರ ಪಕ್ಕದಲ್ಲೊಂದನ್ನು ಹಿಡಿಯುವುದನ್ನೂ ಗರುಡಹಸ್ತವೆಂದು ಭರತಕಲ್ಪಲತಾಮಂಜರಿಯೆಂಬ ಗ್ರಂಥದಲ್ಲಿ  ತಿಳಿಸಲಾಗಿದೆ.

ಈ ಗ್ರಂಥದ ಗರುಡಹಸ್ತದ ವಿನಿಯೋಗವು ಗರುಡಧ್ಯಾನ, ಬ್ರಹ್ಮಧ್ಯಾನ, ಆಕಾಶ, ದೊಡ್ಡವರ ಉಪಚಾರ, ಕಷ್ಟವನ್ನು ಅರಿಕೆ ಮಾಡಿಕೊಳ್ಳುವುದು, ‘ನನ್ನ ಕೈಯಲ್ಲೇನೂ ಇಲ್ಲ’ ಎಂಬರ್ಥ, ಮರೆತು ಹೋದ ವಸ್ತುವನ್ನು ಹುಡುಕುವುದು, ಭಯ, ಯಾಚನೆ, ವಸ್ತ್ರ ಮತ್ತು ಮಾಲೆಗಳನ್ನು ಸ್ವೀಕರಿಸುವುದು.

ಈ ಗರುಡಹಸ್ತಕ್ಕೆ ಪರ್ಯಾಯವಾಗಿ ತಾಕ್ಷ್ರ್ಯೆ ಎಂಬ ಹಸ್ತವನ್ನೂ ಮಣಿಪುರಿ, ಯಕ್ಷಗಾನ ಇತ್ಯಾದಿ ಕಲಾಪ್ರಕಾರಗಳಲ್ಲಿ (ಎರಡು ಕೈಯ ಮಣಿಕಟ್ಟನ್ನು ಸೇರಿಸಿ ಹೊರಮುಖವಾಗಿ ಅಂಗೈಯನ್ನು ಹಿಡಿಯುವುದು ಅಥವಾ ಹಂಸಪಕ್ಷಗಳನ್ನು ಮಣಿಕಟ್ಟಿನ ಬಳಿ ಅಡ್ಡಲಾಗಿ ಬಂಧಿಸುವುದು.) ಬಳಸುವುದಿದೆ.

ಇದು ಗರುಡ, ಹದ್ದು, ಪ್ರೇಮ, ಒಲವಿನ ಸೂಚನೆಗೆ ಬಳಕೆಯಾಗುತ್ತದೆ. ಈ ತಾಕ್ಷ್ರ್ಯೆಯು ಪೂಜಾಮುದ್ರೆಯಾಗಿಯೂ ಬಳಕೆಯಾಗುವುದರಿಂದ; ಇದನ್ನು ಮುದ್ರೆಯೆಂದೇ ಸಂಬೋಧಿಸಲಾಗಿದೆ. ಒಂದು ಕೈಯ್ಯ ತೋರು ಬೆರಳಿಗೆ ಇನ್ನೊಂದು ಕೈಯ್ಯ ತೋರು ಬೆರಳನ್ನೂ, ಕಿರು ಬೆರಳಿಗೆ ಇನ್ನೊಂದು ಕೈಯ್ಯ ಕಿರುಬೆರಳನ್ನು ಗಂಟು ಹಾಕಿದಂತೆ ಬೆಸೆದು ಉಳಿದ ಬೆರಳುಗಳನ್ನು ಸ್ವಲ್ಪ ಬಾಗಿಸುವುದು ಪೂಜಾಮುದ್ರೆಗಳಲ್ಲಿರುವ ತಾಕ್ಷ್ರ್ಯೆ ಮುದ್ರೆಯ ಕ್ರಮ. ಸನಾತನಧರ್ಮದ ಆಗಮೋಕ್ತ ಕಲಶಪೂಜಾ ವಿಧಾನದಲ್ಲಿ ಇರುವ ಪಂಚಮುದ್ರೆಗಳ ಪೈಕಿ ಮೊದಲನೆಯ ‘ನಿರ್ವೀಷೀಕರಣಾರ್ಥಂ’ಗೆ ತಾಕ್ಷ್ರ್ಯ ಮುದ್ರೆಯ ಬಳಕೆಯನ್ನು ಸೂಚಿಸಲಾಗಿದೆ.

ಭರತನ ನಾಟ್ಯಶಾಸ್ತ್ರದಲ್ಲಿ ಗರುಡಪಕ್ಷವೆಂಬ ಹೆಸರುಳ್ಳ ನೃತ್ತಹಸ್ತವನ್ನು ಸೂಚಿಸಲಾಗಿದ್ದು; ಅಲ್ಲಿ ಈ ಹಸ್ತಕ್ಕೆ ಆಂಗಿಕ ಚಲನೆಗಳ ಕ್ರಮವನ್ನು ಸೂಚಿಸಲಾಗಿದ್ದು ಗರುಡವನ್ನೂ ಒಳಗೊಂಡಂತೆ ಪಕ್ಷಿ ಸಂಕುಲದ ಕುರಿತ ಅಭಿನಯ ಸನ್ನಿವೇಶಗಳಲ್ಲಿ ಇದರ ಬಳಕೆಯಿದೆ. ಇದು ಲೋಕದ ಎಲ್ಲ ಬಗೆಯ ನೃತ್ಯ-ನಾಟ್ಯಾದಿ ಸಂದರ್ಭಗಳಲ್ಲಿ ಸಾರ್ವಕಾಲಿಕವಾಗಿ ಕಂಡುಬಂದಿದೆ. ವಿಶೇಷವಾಗಿ ಈ ಹಸ್ತದ ಬಳಕೆ ಗರುಡಪ್ಲುತಕ, ವೈಶಾಖರೇಚಿತದಂತಹ ಕರಣಾದಿಗಳಲ್ಲಿ ಇದೆ.

(ಸಂಪಾದಕಿ ಮನೋರಮಾ ಬಿ.ಎನ್ ಅವರ ಹಸ್ತಮುದ್ರೆಗಳ ಕುರಿತ ಸಂಶೋಧನ ಗ್ರಂಥ ‘ಮುದ್ರಾರ್ಣವ’ದಿಂದಾಯ್ದ ಸರಣಿ ಅಧ್ಯಯನಲೇಖನ)

Leave a Reply

*

code