ಅಂಕಣಗಳು

Subscribe


 

ಮರೆಯಾದ ಪ್ರತಿಭೆ ಹೊಸಹಿತ್ಲು ಮಹಾಲಿಂಗ ಭಟ್

Posted On: Saturday, October 15th, 2011
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

ಕಳೆದ ಬಾರಿ ಶ್ರೀಧರ ಭಂಡಾರಿಗಳ ಬಗೆಗೆ ಹೇಳಿ ಮುಗಿಸುವ ಹೊತ್ತಿಗೆ ಅಭಿಮನ್ಯು ಎಂದಾಕ್ಷಣ ಮೀಯಪದವು ಹೊಸಹಿತ್ಲು ಮಹಾಲಿಂಗ ಭಟ್ಟರೂ ನೆನಪಾಗುತ್ತಾರೆ, ಅವರ ಬಗೆಗೆ ಇನ್ನೊಮ್ಮೆ ಹೇಳಿಯೇನು ಎಂದಿದ್ದೆ. ಆದರೆ ಇಷ್ಟು ಬೇಗ ಹಾಗೂ ಇಂಥಾದ್ದೊಂದು ಸಂದರ್ಭದಲ್ಲಿ ಹೇಳಬೇಕಾಗಿ ಬರುತ್ತದೆ ಅಂದುಕೊಂಡಿರಲಿಲ್ಲ. ಅವರನ್ನು ನಾನು ಅನೇಕ ಬಾರಿ ಭೇಟಿ ಮಾಡಿದ್ದೆ. ಯಕ್ಷಗಾನದ ಬಗೆಗೆ ಮಾತಾಡುವಾಗ ಅವರ ಕಂಗಳ ಹೊಳಪನ್ನು ಗಮನಿಸಿಯೂ ಇದ್ದೆ. ಹಾಗಾಗಿಯೇ ಕೆಲವೊಮ್ಮೆ ಅವರ ಉತ್ಸಾಹದ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕಾಗಿಯೇ ವಿನಾಕಾರಣ ಯಕ್ಷಗಾನದ ಸಂಗತಿಗಳನ್ನು ಎತ್ತುತ್ತಿದ್ದೆ. ಅವರೂ ಹಾಗೆಯೇ; ಸಿಕ್ಕಿದಾಗಲೆಲ್ಲಾ ಯಕ್ಷಗಾನದ ಒಳಗೊಮ್ಮೆ ಪ್ರವೇಶಿಸದೆ ಹಿಂದೆ ಸರಿಯುತ್ತಿರಲಿಲ್ಲ. ಅವರ ಬಗೆಗೆ ಸಾಕಷ್ಟು ಕೇಳಿ, ಬೇರೆಯವರೊಂದಿಗೂ ಚರ್ಚಿಸಿ ಅವರ ಬಗೆಗೆ ಒಮ್ಮೆ ಬರೆಯಲೇಬೇಕು ಅಂದುಕೊಂಡೇ ಕಳೆದ ಬಾರಿ ಪೀಠಿಕೆ ಹಾಕಿದ್ದು.

ಅಷ್ಟರಲ್ಲಿ…

ಮೊನ್ನೆ ಸೆಪ್ಟೆಂಬರ್ ೨೧ ರಂದು ಅವರು ಬದುಕಿನ ವೇಷವನ್ನು ಕಳಚಿ ಇಹಲೋಕ ತ್ಯಜಿಸಿದ್ದಾರೆ. ಒಂದು ಕಾಲದ ಅಬ್ಬರದ ರಾತ್ರಿಗಳಿಗೆ ಕಾರಣನಾಗಿದ್ದ ವಿಶಿಷ್ಟ ಕಲಾವಿದ ಅವರ ೭೬ರ ವಯಸ್ಸಿನಲ್ಲಿ ನಮ್ಮನ್ನೀಗ ಅಗಲಿದ್ದಾರೆ. ಅಭಿಮನ್ಯುವಿಗೆ ಅರವತ್ತು ಎಪ್ಪತ್ತರ ದಶಕದಲ್ಲೇ ಕೀರ್ತಿ ತಂದಿಟ್ಟ ಮಹಾಲಿಂಗ ಭಟ್ ಆ ದಿನಗಳಲ್ಲಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದರೆಂದು ಅವರನ್ನು ಬಲ್ಲ ಅನೇಕರು ಹೇಳುತ್ತಾರೆ. ಸಲೀಸಾಗಿ ಮುನ್ನೂರು ಮುನ್ನೂರೈವತ್ತು ಧೀಂಗಿಣ ಹಾಕುತ್ತಿದ್ದ ಪುಂಡುವೇಷದ ಗಟ್ಟಿಗ ಎಂದೂ ಬಲ್ಲವರು ಹೇಳುತ್ತಾರೆ.


ಹೊಸಹಿತ್ಲು ಲಿಂಗಣ್ಣ ಎಂದೇ ಖ್ಯಾತರಾದ ಅವರು ಕೇವಲ ಕುತ್ತು ಹಾಕುವುದಕ್ಕಷ್ಟೇ ಮೀಸಲಾಗಿರಲಿಲ್ಲ. ಅವರ ಅರ್ಥಗಾರಿಕೆಯೂ ಸೊಗಸಾಗಿತ್ತು. ಗೆಜ್ಜೆ ಕಟ್ಟಿ ರಂಗ ಪ್ರವೇಶಿಸಿದರೆ ಕೇವಲ ರಂಗಸ್ಥಳವನ್ನು ಆವರಿಸಿಕೊಳ್ಳುವುದಲ್ಲದೆ ಮಾತುಗಾರಿಕೆಯಲ್ಲೂ ಕೇಳುಗರನ್ನು ವಿಸ್ಮಯಗೊಳಿಸುತ್ತಿದ್ದರು. ಹಾಗಾಗಿಯೇ ಅವರ ಪುಂಡು ವೇಷಗಳನ್ನು ಮಾದರಿಗಳಾಗಿ ಸ್ವೀಕರಿಸಬಹುದು ಎಂದು ಅನೇಕ ಹಿರಿಯರು ಹೇಳುವುದನ್ನು ಕೇಳುವಾಗ ಅಚ್ಚರಿಯೆನಿಸುತ್ತದೆ.

ತಂದೆ : ಹೊಸಹಿತ್ಲು ಗಣಪತಿ ಭಟ್,

ತಾಯಿ : ವೆಂಕಮ್ಮ.

ವೃತ್ತಿ ವಿಶೇಷ : ಬಾಲ್ಯದಿಂದಲೇ ಯಕ್ಷಗಾನದಲ್ಲಿ ಪ್ರೀತಿ, ಉಸಿರು. ಶ್ರೀಧರ್ಮಸ್ಥಳ ಮೇಳದಲ್ಲಿ ಹದಿನೈದು ವರುಷ, ಕಟೀಲು, ಸುರತ್ಕಲ್, ಕೂಡ್ಲು, ಬಪ್ಪನಾಡು, ಮೂಲ್ಕಿ, ಪುತ್ತೂರು ಮೇಳಗಳಲ್ಲಿ ತಲಾ ಎರಡು ವರುಷಗಳಂತೆ ವ್ಯವಸಾಯ.


ಮಹಾಲಿಂಗ ಭಟ್ಟರ ಅಭಿಮನ್ಯು ಮಾತ್ರ ಅಲ್ಲ, ಬಬ್ರುವಾಹನ, ಕೃಷ್ಣ, ಪರಶುರಾಮ, ಲಕ್ಷ್ಮಣ, ಮಕರಾಕ್ಷ ಮೊದಲಾದ ಪಾತ್ರಗಳೂ ಜನಮನ ಸೂರೆಗೊಂಡಿದ್ದವು. ಅದರಲ್ಲೂ ಕಂಸವಧೆ ಪ್ರಸಂಗದಲ್ಲಿ ಯಕ್ಷರಂಗದ ಸಾರ್ವಕಾಲಿಕ ಅಚ್ಚರಿ ಕುರಿಯ ವಿಠಲ ಶಾಸ್ತ್ರಿಗಳ ಕಂಸ. ಅವರೆದುರಿಗೆ ಹೊಸಹಿತ್ಲು ಮಹಾಲಿಂಗ ಭಟ್ಟರ ಕೃಷ್ಣ. ಕುರಿಯ ಶಾಸ್ತ್ರಿಗಳಿಗೇ ಎದುರಾಗಿ ರಂಗಕ್ಕೆ ಬಂದು, ಜನ ತನ್ನನ್ನೂ ಆಸಕ್ತಿಯಿಂದ ಗಮನಿಸುವಂತೆ ಪಾತ್ರವನ್ನು ಸಾಕ್ಷಾತ್ಕರಿಸುತ್ತಿದ್ದರು. ಶಾಸ್ತ್ರಿಗಳು ರಂಗದಲ್ಲಿರುವಾಗಲೂ ವಿಜೃಂಭಿಸುತ್ತಿದ್ದದ್ದು ಮಹಾಲಿಂಗ ಭಟ್ಟರ ಪ್ರತಿಭೆಗೆ ಸಾಕ್ಷಿ ಎನ್ನುತ್ತಾರೆ ಆ ರಾತ್ರಿಗಳನ್ನು ಕಂಡವರು. ಅಂತೆಯೇ ಶಾಸ್ತ್ರಿಗಳ ರಾಮನೊಂದಿಗೆ ಅನೇಕ ಬಾರಿ ಲಕ್ಷ್ಮಣನಾಗಿ ಕಾಣಿಸಿಕೊಂಡವರು ಹೊಸಹಿತ್ಲು ಭಟ್ಟರು. ಇವರು ಶಾಸ್ತ್ರಿಗಳ ಶಿಷ್ಯರೂ ಹೌದು.

ಹೊಸಹಿತ್ಲು ಮಹಾಲಿಂಗ ಭಟ್ಟರ ಬಗೆಗೆ ಪ್ರಸ್ತಾವಿಸುವಾಗ ಒಂದು ರೋಚಕ ಸನ್ನಿವೇಶವನ್ನು ಹೇಳಲೇಬೇಕು. ಒಮ್ಮೆ ಬಂಟ್ವಾಳ ತಾಲೂಕಿನ ಮಿತ್ತನಡ್ಕದಲ್ಲಿ ಜೋಡಾಟ. ಮೂರು ಮೇಳಗಳು ಏಕಕಾಲಕ್ಕೆ ಒಂದೇ ಕಡೆ ಮೂರು ರಂಗಸ್ಥಳಗಳನ್ನಿಟ್ಟುಕೊಂಡು ಒಂದೇ ಪ್ರಸಂಗವನ್ನು ಆಡಿದ ಕಥೆಯಿದು. ಈಗೀಗ ಇಂಥಾ ಪ್ರಯೋಗಗಳು ಕಮ್ಮಿಯಾದರೂ ಇಂಥಾ ಸ್ಪರ್ಧಾತ್ಮಕ ರೀತಿಯ ಯಕ್ಷಗಾನಗಳು ಹಿಂದೆ ಸಾಕಷ್ಟು ಜಾರಿಯಲ್ಲಿದ್ದವು ಬಿಡಿ. ಅಂದಿನ ಪ್ರಸಂಗ ಅಭಿಮನ್ಯು. ಧರ್ಮಸ್ಥಳ, ಕರ್ನಾಟಕ ಹಾಗೂ ಕೂಡ್ಲು ಮೇಳಗಳು ಕಣದಲ್ಲಿದ್ದವು. ಧರ್ಮಸ್ಥಳ ಮೇಳದ ಪರವಾಗಿ ಭಟ್ಟರ ಅಭಿಮನ್ಯು.

ಪ್ರಸಂಗದ ಆರಂಭಕ್ಕೆ ಮೊದಲು ಇದಾ ಇಂದು ನೀನು ಬಿಡ್ಲಾಗ(ಇವತ್ತು ನೀನು ಬಿಡಬಾರದು) ಎಂದು ಕುರಿಯ ಶಾಸ್ತ್ರಿಗಳು ಹೇಳಿದ್ದರೆಂದು ಕೆಲವರು ಹೇಳುತ್ತಾರೆ. ಅದೇನೇ ಇರಲಿ. ಮೂರೂ ರಂಗಸ್ಥಳಗಳಲ್ಲಿ ಮೂರು ಅಭಿಮನ್ಯುಗಳ ಪ್ರವೇಶವಾಯಿತು. ಆ ದಿನದ ರಥದ ಮೇಲಿನ ಭಟ್ಟರ ಕುಣಿತ ಇಂದಿಗೂ ದಾಖಲೆಯಾಗಿಯೇ ಉಳಿದಿದೆ. ಚಕ್ರವ್ಯೂಹವನ್ನು ಬೇಧಿಸುವ ಹೊತ್ತು ಮೂರೂ ರಂಗಸ್ಥಳಗಳಲ್ಲಿ ಅಭಿಮನ್ಯುಗಳು ರಥವೇರಿ ಕುಣಿಯಲಾರಂಭಿಸಿದರು. ಒಂದು ಮೇಳದ ಅಭಿಮನ್ಯು ಸುಮಾರು ಕಾಲು ಗಂಟೆ ರಥದ ಮೇಲೆ ಅಬ್ಬರಿಸಿ ಕೆಳಗಿಳಿದ. ಇನ್ನೊಂದು ಅಭಿಮನ್ಯು ಸುಮಾರು ಇಪ್ಪತ್ತು ನಿಮಿಷ ಕುಣಿದಾಗ ಸುಸ್ತಾಯಿತು. ಆದರೆ ಭಟ್ಟರ ಅಭಿಮನ್ಯು ಕೆಳಗಿಳಿಯಲೇ ಇಲ್ಲ. ಕೊನೆಗೆ ಅರ್ಧ ಗಂಟೆ ಕಳೆದ ಮೇಲೆ ಹಿಂದೆ ಕೂತಿದ್ದ ಅಗರಿ ಭಾಗವತರುಸಾಕು ಸಾಕು ಇಳಿದುಬಿಡು ಎಂದು ವಿನಂತಿಸಿದ ಮೇಲೆಯೇ ಭಟ್ಟರು ನೆಗೆದದ್ದು! ಉಳಿದೆರಡು ಅಭಿಮನ್ಯುಗಳು ಯುದ್ಧದ ಮೊದಲೇ ಸೋತಾಯಿತು ಎಂದು ಹಿರಿಯ ಯಕ್ಷ ಕಲಾಭಿಮಾನಿಗಳು ಇಂದಿಗೂ ನಸುನಗುತ್ತಾರೆ.

ಅಂದಹಾಗೆ ಅವರ ವೈಭವಕ್ಕೆ ಸಾಕ್ಷಿಯಾಗಿದ್ದ ರಂಗಸ್ಥಳವೇ ಅವರ ಪ್ರಸಿದ್ಧಿಯನ್ನು ನೋಡಿ ಅಸೂಯೆಪಟ್ಟಿತೋ ಏನೋ. ಒಂದು ಬಾರಿ ಕುಣಿಯುತ್ತಿದ್ದಾಗ ರಂಗಸ್ಥಳವೇ ತೂತಾಗಿ ಭಟ್ಟರ ಕಾಲು ಸಿಕ್ಕಿಹಾಕಿಕೊಂಡು ಮುಂದೆ ಕುಣಿಯದಂತಾಯಿತು! ಆದರೂ ಮೇಳದಾಚೆಗೆ ಹವ್ಯಾಸಿಯಾಗಿ ಆಗೊಮ್ಮೆ ಈಗೊಮ್ಮೆ ಕುಣಿಯುತ್ತಿದ್ದರು. ಕೌರವನಾಗಿಯೂ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರು. ಈ ನಡುವೆ ತಾಳಮದ್ದಳೆಗಳಲ್ಲಿ ಅರ್ಥಧಾರಿಗಳಾಗಿಯೂ ಅವರು ಕಾಲಕಾಲಕ್ಕೆ ಭಾಗವಹಿಸುತ್ತಿದ್ದರು.

ಅದೇನೇ ಇದ್ದರೂ ಪುಂಡುವೇಷಕ್ಕೊಂದು ಘನತೆ ತಂದಿತ್ತ ಭಟ್ಟರು ಸಾರ್ವಕಾಲಿಕ ಶ್ರೇಷ್ಠ ಅಭಿಮನ್ಯುವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಕೆಲವರು ಹೇಳುವುದುಂಟು. ಇಂತಹ ಕಲಾವಿದನನ್ನು ನಾವೀಗ ಕಳೆದುಕೊಂಡದ್ದು ನಿಜಕ್ಕೂ ಬೇಸರದ ಸಂಗತಿ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸೋಣ.


Leave a Reply

*

code