ಅಂಕಣಗಳು

Subscribe


 

ಅಷ್ಟನಾಯಿಕಾ ಚಿತ್ತವೃತ್ತಿ – ಕಲಹಾಂತರಿತ ನಾಯಿಕೆ

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

(ಕಳೆದ ಸಂಚಿಕೆಯಿಂದ ಮುಂದುವರೆದುದು…)

ನಾಯಿಕೆಯು ಪ್ರಿಯಕರನೊಂದಿಗೆ ಕ್ರೋಧಿತಳಾಗಿ, ಜಗಳವಾಡಿದ ನಂತರ ಆತ ಅಲ್ಲಿರಲಾಗದೆ ಆತನ ಬೇಡಿಕೆಗಳು ತಿರಸ್ಕೃತವಾದಂತಾಗಿ ಖಿನ್ನನಾಗಿಯೋ, ಕುಪಿತನಾಗಿಯೋ ತೆರಳುವನು. ಹೀಗೆ ಆತನ ತೆರಳಿದ ಅಥವಾ ಈಕೆಯೇ ಅವನನ್ನು ಹೊರಗಟ್ಟಿದ ನಂತರ ಅವನೊಂದಿಗೆ ತನ್ನ ವರ್ತನೆಯನ್ನು ಗ್ರಹಿಸಿ ತನ್ನ ಕೃತ್ಯಕ್ಕಾಗಿ ಪೂರ್ಣ ಪಶ್ಚಾತ್ತಾಪದಿಂದ ಕೊರಗುವವಳು ಕಲಹಾಂತರಿತೆ. ಚಂದ್ರೋದಯದ ಕಾಲ ಕಲಹಾಂತರಿತೆಯದು. ಆಕೆಯ ವೇಷ ಭೂಷಣಗಳು ಅವ್ಯವಸ್ಥ. ತಳಮಳಿಸಿ ನೋಯ್ವ, ಬೇಯ್ವ ಕಲಹಾಂತರಿತೆ ತನ್ನ ಪ್ರಿಯನ ತಪ್ಪಿಗೆ ಇಲ್ಲವೇ ಪ್ರಮಾದಕ್ಕೆ ತಾನು ವಿಧಿಸಿದ ಶಿಕ್ಷೆ ದೊಡ್ಡದಾಯಿತೆಂದು ಹಲುಬುತ್ತಾಳೆ. ಈ ಪರಿತಾಪ ಸಖಿಯರ ಉಪದೇಶದಿಂದಲೂ ಉಂಟಾಗಬಹುದು. ಕಲಹದ ತೀವ್ರತೆಗಳಿಗನುಗುಣವಾಗಿ ವ್ಯಥೆ, ಕಣ್ಣೀರು, ನಿಟ್ಟುಸಿರು, ಗೊಂದಲ, ಹಿಂದಿನ ಸ್ಮರಣೆ, ಚಿಂತೆ, ಭ್ರಾಂತಿ, ಸಂತಾಪ, ಜ್ವರ, ನಿಶ್ಶಕ್ತಿ, ಪ್ರಲಾಪ, ಮೌನ, ನಿರುತ್ಸಾಹ ಇವಳ ಸಂಚಾರಿ ಭಾವಗಳಾಗುತ್ತವೆ. ಈ ಅವಸ್ಥೆಯ ಅಂತ್ಯಕ್ಕೆ ಈಕೆಯ ದೂತಿಯ ಮುಖಾಂತರವೋ ಅಥವಾ ಕಾರಣಾಂತರಗಳಿಂದ ನಾಯಕನ ಪುನರಾಗಮನದ ನಿರೀಕ್ಷೆಯೋ ಉಂಟಾಗಿ ಗಂಡ-ಹೆಂಡಿರ ಜಗಳ ಉಂಡು ಮಲಗುವ ವರೆಗೆ ಎಂಬ ಉಕ್ತಿಗೆ ಪೋಷಣೆ ದೊರಕುವುದಿದೆ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು. ಉತ್ತಮ ಕಲಹಾಂತರಿತೆಯ ಪರಿತಾಪವು ಅವಳ ಮೊದಲಿನ ಕೋಪಕ್ಕಿಂತ ಹೆಚ್ಚಿನದ್ದಾದರೆ, ಮಧ್ಯಮಳದ್ದು ಸಮಾನ, ಸಾಮಾನ್ಯೆಯ ಪರಿತಾಪ ಕಡಿಮೆ.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿದ್ದು; ಸುಮಾರು ೫೦,೨೨೦ರಷ್ಟು ನಾಯಿಕಾಬೇಧಗಳಿವೆ ಎಂದಿದ್ದಾರೆ ಪ್ರಾಜ್ಞರು!! ಒಟ್ಟಿನಲ್ಲಿ ನಾಯಿಕೆಯ ಸಂಸ್ಕಾರ-ವಯಸ್ಸು-ಸಾಮಾಜಿಕಸ್ಥಾನಮಾನ-ಸೌಶೀಲ್ಯದಿಂದ ಆಕೆಯ ವರ್ತನೆ ಮೃದುವೋ, ಕಟುವೋ, ಮಧ್ಯಮವೋ ಎಂಬುದು ನಿರ್ಧಾರವಾಗುತ್ತದೆ.

ಇಲ್ಲಿ ನೀಡಲಾಗಿರುವ ಶತಾವಧಾನಿ ಡಾ. ಗಣೇಶರ ಕಾವ್ಯ ಮತ್ತು ಮಂಟಪರ ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣದ ಸಮ್ಮಿಶ್ರಣ ಹೊಂದಿರುವ ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳು. ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಜನಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ಧಾರವಾಡ ಆಕಾಶವಾಣಿಯ ಉದ್ಯೋಗಿ, ಕವಿ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ. ಶರದ್ ಋತುವಿನಿಂದಾರಂಭಿಸಿ ಗ್ರೀಷ್ಮ ಋತುವಿನವರೆಗೆ ಭೂಮಿಯ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನೇ ನಾಯಿಕೆಯ ಅವಸ್ಥೆಗಳನ್ನಾಗಿಸಿ ಚಿತ್ರಿಸುವ ಕಾವ್ಯದಲ್ಲಿ ಮೇದಿನಿ ಅಷ್ಟನಾಯಿಕಾ ಭಾವದಲ್ಲಿ ಮೇಘನಿಗಾಗಿ ಕಾಯುತ್ತಾಳೆ. ಭಾವಕ್ಕೆ ಒತ್ತಾಸೆಯಾಗಿ ನಿಲ್ಲುವ ಲಯಲಾಲಿತ್ಯ ಕಾವ್ಯಕ್ಕೆ ಹದ ನೀಡುವ ಪದಮೈತ್ರಿ ಇದರ ವಿಶೇಷ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.

 

ಭಾಮಿನೀ

ಶತಾವಧಾನಿ ಡಾ. ಆರ್. ಗಣೇಶ್

ಭೈರವಿ ರಾಗ : ಕುಸುಮಷಟ್ಪದಿ

ಕನಲಿ ಕಾಂತನನಂತು ವಿನಮಿತನ ಚಲವಾಂತು

ಮುನಿನಿನಾರ್ತಿಯಲಿ ಮರಳಿಸುತೆ ಮರಳಿ |

ಅನುರಾಗ ವೈಫಲ್ಯದನಲದೊಳು ತೊಳಲಾಡಿ

ಮನವ ಮುರುಟಿಸಿಕೊಂಡ ಮಹಿಳೆ ಬಳಿಕ ||

ಮುಖಾರಿ ರಾಗ : ಚೌಪದಿ

ತನ್ನಧಟು ಬಿರುಸಾಯ್ತು ತೀವ್ರತೆಯು ಸಿಡಿಲಾಯ್ತು

ಭಿನ್ನವಾಯಿತು ನಲ್ಲನೊಲವು |

ಅನ್ನೆಯವಗೈದೆನಾನೆಂದು ಕಲಹಾಂತರಿತೆ

ಬನ್ನಬಡುತಿರ್ಪಳಿದೊ ಮಿಡುಕಿ ||

(ಬಂದು ಬೇಡಿದ ಇನಿಯನನ್ನು ಸಿಡಿಸು ಸರಿಸಿದುದು ಅತಿಯಾಯಿತೆಂದು ಕಲಹಾಂತರಿತೆಯೆನಿಸಿದ ನಾಯಿಕೆ ನವೆಯುತ್ತಾಳೆ.)

ಮೋಹನ ರಾಗ- ಅಷ್ಟತಾಳ

ನಾನೇಕೆ ಬಿರುಸಾದೆನೋ-ಚೆನ್ನಿಗನವ

ತಾನೇಕೆ ಮರೆಯಾದೆನೋ || ಪ||

ದುರುಸುಮಾತುಗಳಾಡಿ- ಮರುಕ ತೋರದೆ ದೂಡಿ |

ಕೆರಳಿಸಿದೆನೋ ಕಾಡಿ ದುಡುಕಕೆಡುಕದು ಮೂಡಿ || ಅ.ಪ||

ಹಾತೊರೆಯುತೆ ಕಾದು-ಕಾತರತೆಯ ಕೋದು

ಮಾತು ಮೀರದ ನಾನಿದೇಂ |

ಪ್ರೀತನು ಬರಲತಿಖಾತಿಯ ತೋರಿದೆ

ಸೋತಗೆಲ್ಲದೆ ಪೋದೆನೋ ! ||

ಅವನ ವಿಳಂಬವೋ- ಸವತಿಯ ಡಂಬವೋ ?

ಶಿವನ ವೈನೋದಿಕವೋ ?

ಯುವತೆಯ ಗಾಡಿಯೊ- ಗೆಳತಿಯ ಚಾಡಿಯೊ ?

ನೆವೆವ ವೈಧಾತೃಕವೋ ? ||

 

ಮೇಘಮೇದಿನಿ

ದಿವಾಕರ ಹೆಗಡೆ, ಧಾರವಾಡ

ಯಾತಕೆ ದೂರಿದೆ ಮೇಘಮೋಹನನ |

ಮಾತಿಗೆ ಸಿಗದಂತೆಯೆ ಪೋದ |

ಖಾತಿಯೆ ಎನ್ನೊಳು ಕರಗದೆ ಕುದಿದನೆ

ಶೀತಲ ಕರದಿಂದೊಮ್ಮೆಯು ಮುಟ್ಟದೆ |

ನೂತನವಾಯ್ತಿದು ಈತನ ಬಾಧೆಯು

ಕಾತರದಲಿ ತುಸು ಸಿಟ್ಟಾದರೆ ಈ |

ರೀತಿಯ ಮಾಡಿದೆ ಸೈರಿಸಲಾರೆನು

ನೀತಿಯೆ ಎನ್ನನು ಬಿಟ್ಟು ಪೋಗುವುದು ||

 

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

 

…ಹಾಗೆಯೇ ಕುಳಿತು ಕೆಲಕ್ಷಣಗಳ ಹಿಂದೆ ನಾನು ಮಾಡಿರುವುದನ್ನೆಲ್ಲಾ ಎಣಿಸಿದೆ. ಯಾವುದಕ್ಕೂ ಉತ್ತರ ಸಿಗಲಿಲ್ಲ. ಕೈಯನ್ನು ನೆಲದ ಮೇಲೆ ಆಡಿಸಿದೆ. ಮಣ್ಣಿನ ಮಡಕೆಯ ಚೂರುಗಳು ಕೈಗೆ ತಾಕಿದವು. ಅವುಗಳನ್ನು ಒಟ್ಟು ಮಾಡುತ್ತಲೇ ಇದ್ದೆ. ಮಣ್ಣಿನ ಮಡಕೆಯ ಚೂರುಗಳು ಮಣ್ಣಾಗಲು ಸಿದ್ಧವಾಗಿ ತಮ್ಮ ಕರ್ಮಗಳು ಮುಗಿಯಿತೆಂದು ತಮ್ಮ ಒಂದು ಜನ್ಮ ಮುಗಿಸಿದಂತೆ ಕಂಡಿತು. ಆದರೂ ಒಂದು ಚೂರಿನಲ್ಲಿ (ಓಡಿನಲ್ಲಿ) ನಾಲ್ಕಾರು ಹನಿಗಳು ಇದ್ದಿದ್ದವು. ಅದರಲ್ಲಿನ ನೀರಿನ ಹನಿಯನ್ನು ನಾಲಗೆಯ ಮೇಲೆ ಇಳಿಬಿಟ್ಟೆ. ಗಡಿಗೆಯ ನೀರಿನಿಂದ ಇಳಿಯದ ದಾಹವನ್ನು ಚೂರುಮಡಕೆಯ ನೀರು ತಣಿಸಿತ್ತು. ಅಲ್ಲಿ ಚೂರು ಮಡಕೆಯಿಂದ ನನ್ನ ಜ್ಞಾನ ತೆರೆದಿತ್ತು. ಒಡೆದ ಮಡಕೆಯ ಚೂರುಗಳು ಸಿಟ್ಟಾಗಲಿಲ್ಲ. ಬದಲಿಗೆ ಪುನಃ ಮಣ್ಣಿಗೆ ಒಂದಾಗಲು ಸಿದ್ಧವಾಗಿಯೇ ಇದ್ದವು. ನನ್ನ ಬದುಕು ಹಾಗೆಯೇ ಅಲ್ಲವೆ? ಮಡಕೆಯ ಚೂರಿನಲ್ಲಿರುವ ನೀರಿನಷ್ಟೇ ಲಭ್ಯವಲ್ಲವೇ ನಮ್ಮ ಬದುಕು. ಅದನ್ನೇ ಸ್ವೀಕರಿಸುವ ಮನೋಧರ್ಮ ಬೇಕು. ನಾನು ಯಾಕೆ ಯೋಚಿಸಲಿಲ್ಲ? ಸಿಕ್ಕಿರುವ ಬದುಕೇ ನನ್ನ ಪಾಲಿನ ಪ್ರಾಪ್ತಿ ಎಂದು ಭಾವಿಸುವ ಮನಸ್ಸು ನನ್ನ ಪಾಲಿಗೆ ಇದ್ದಿದ್ದರೆ ಹೃದಯವೈಶಾಲ್ಯ ಬಂದು ಈ ಅನರ್ಥ ಸಂಭವಿಸುತ್ತಿರಲಿಲ್ಲವಾಗಿತ್ತು.

ನಾನು ದುಡುಕಿದೆ ಎಂದು ನನಗೆ ಅರಿವಾಯ್ತು. ನನ್ನ ಉದ್ವೇಗವನ್ನು, ಕೋಪವನ್ನು, ದುಡುಕುತನವನ್ನು ತಿಳಿಮಾಡಿದ ಮಡಕೆಯ ಚಿಪ್ಪನ್ನು ಬಲವಾಗಿ ಹೃದಯಕ್ಕೆ ಒತ್ತಿಕೊಳ್ಳುತ್ತಾ ಅಳುತ್ತಾ ನಾನು ಬದುಕಿನ ಎಲ್ಲಾ ಘಟನೆಗಳನ್ನು ಮಣ್ಣಿನ ಮಡಕೆಯ ಓಡಿನಂತೆ ಭಾವಿಸಿ ಈ ಚಿಪ್ಪುಗಳೇ ಸೇರಿ ಮಡಕೆ ಆದಂತೆ ನನ್ನ ಬದುಕು ಎಂದು ಭಾವಿಸಿ ಕೊನೆಗೆ ಮಣ್ಣಿನಲ್ಲೇ ಒಂದಾದಂತೆ ಪ್ರಕೃತಿ ಪುರುಷನಲ್ಲೇ ಒಂದಾಗಿ ಸಮರಸದ ಬದುಕನ್ನು ನಡೆಸುವುದು ಸತೀಧರ್ಮ ಎಂದು ನಿರ್ಧರಿಸಿದೆ. ಹೋಳಾದ ಚೂರುಮಡಕೆಯಂತೆ ನನ್ನ ಬದುಕಾಗಬಾರದು ಎಂದು ನೊಂದು ಮೊಮ್ಮಲಮರುಗಿದೆ; ಕನವರಿಸಿದೆ; ದುಮ್ಮಾನಗಳನ್ನು ಇಳಿಸಿಕೊಂಡೆ. ಸ್ವಲ್ಪ ಸ್ವಲ್ಪ ಮನಸ್ಸು ಹಗುರವಾಗುತ್ತಿತ್ತು. ತಾನು ತಪ್ಪು ಮಾಡಲಿಲ್ಲ ಎಂಬ ನಂಬಿಕೆ ಇದ್ದರೂ ಈ ಅನಾಹುತಕ್ಕೆ ನನ್ನ ಅತಿಪ್ರೀತಿಯೇ ಕಾರಣ ಎಂಬ ತಿಳುವಳಿಕೆಯೇ ಮೂಡಿತ್ತು. ಪ್ರೀತಿಯನ್ನು ತೋರಲು ಈ ಮಾರ್ಗಕ್ಕಿಂತ ಪ್ರೀತಿಯಿಂದಲೇ ಪ್ರೀತಿಯನ್ನು ಗೆಲ್ಲಬಹುದೆಂಬ ಸತ್ಯವೂ, ಅರ್ಪಣೆಯ ಪ್ರೀತಿಯಿಂದ ಎಂತಹವನನ್ನು ಒಲಿಸಿಕೊಳ್ಳಬಹುದೆಂಬ ಆತ್ಮವಿಶ್ವಾಸವೂ ಮೂಡಿತ್ತು. ಇನ್ನು ಮುಂದಾದರೂ ಈ ತೆರನಾದ ಘಟನೆ ನಡೆಯಬಾರದೆಂದು ನನ್ನ ಮನಸ್ಸು ಸಂಕಲ್ಪಿಸಿತ್ತು. ಹೀಗೆ ನನ್ನ ಪ್ರೀತಿಯ ಭಾವನೆ ಹಲವು ಯೋಚನೆಗಳಿಗೆ ಸಿಲುಕಿ ತಿಕ್ಕಿ, ಶುಭ್ರವಾಗುತ್ತಿತ್ತು. ಹೀಗೆಯೇ ರಾತ್ರಿ ಕಳೆದುಹೋಯ್ತು.

ನನ್ನ ಕೋಪವೆಲ್ಲಾ ಕರಗಿ ಮನಸ್ಸಿನ ಉದ್ವೇಗವೆಲ್ಲಾ ನಿಂತು ಬಿರುಗಾಳಿಗೆ ತುತ್ತಾದ ಸರೋವರದ ಅಲೆಗಳೆಲ್ಲಾ ಸ್ತಬ್ಧವಾದಂತೆ ನನ್ನ ಮನಸ್ಸು ಹಳೆಯದನ್ನು ಮರೆಯಿತು. ಬಿರುಮಳೆಯಿಂದ ಕೆರೆಯ ಕೊಚ್ಚೆಯೆಲ್ಲಾ ತೊಯ್ದು ತಿಳಿಯಾದಂತೆ ನನ್ನ ಮನಸ್ಸು ತಿಳಿಯಾಗಿತ್ತು. ಹುಚ್ಚುಮಳೆ ನಿಂತಾಗ ಮಳೆಯ ಹನಿಗಳು ತೊಟ್ಟಿಕ್ಕುವಾಗ ಆದ ಅನುಭವದಂತೆ ಒಂದೊಂದು ಘಟನೆಯನ್ನೂ ಪುನಃ ಚಿಂತಿಸಿದೆ. ಸ್ವಲ್ಪವೂ ಮಾತಿಗೆ ಅವಕಾಶವಿಲ್ಲದೆ ಸತ್ಯಾಸತ್ಯತೆಗಳ ವಿಮರ್ಶೆ ಇಲ್ಲದೆ ನಾನು ತಿಳಿದಿರುವುದೇ ಪರಮ ಸತ್ಯವೆಂದು ಭಾವಿಸಿ ಆವೇಶದಿಂದ ತಿಳಿದು ಅವನನ್ನು ಒಮ್ಮೆಲೇ ಹೊರದಬ್ಬಿದ್ದೆ. ಆವೇಶದಿಂದ ದಬ್ಬಿದ ಕೈಗಳಿನ್ನು ಕೋಮಲತೆ ಬರದಿರುವಷ್ಟು ಗಡುಸಾಗಿವೆ. ಒತ್ತಾಯಪೂರ್ವಕವಾಗಿ ನನ್ನ ಕೈಗಳ ಬಿಗಿತನವನ್ನು ಸಡಿಲಿಸಿ ಕೈ ಕೈ ಒತ್ತಿಕೊಂಡು ನನ್ನ ಅಪರಾಧವಿಲ್ಲ. ಈ ಕೈಗಳೇ ಇವೆಲ್ಲವನ್ನೂ ಮಾಡಿಸಿದವು ಎಂಬಂತೆ ಓಡಿ ಕಿಟಕಿಯ ಕಂಬಿಹಿಡಿದು ಗೋಡೆಗೆ ಒರಗಿದೆ. ತುಂಬಾ ಹೊತ್ತು ನಿಂತೆ. ಎಲ್ಲಿಯಾದರೂ ಹೊರಗಿನಿಂದ ಅತ ನನ್ನ ಕೈಗಳ ಅದುರುವಿಕೆಯನ್ನು ಕಂಡು ಕ್ಷಮಿಸಿಯಾನು ಎಂಬ ಹುಸಿನಿರೀಕ್ಷೆ ನನಗೆ. ಆತನಲ್ಲಿ ಎಲ್ಲವನ್ನು ಹೇಳಿಕೊಳ್ಳಬೇಕು ಎಂಬ ಅನಿಸಿPಯಾದರೂ ಬಾಗಿಲನ್ನು ತೆರೆಯುವ ಧೈರ್ಯ ಶಕ್ತಿ ಇಲ್ಲದೆ ನಿಧಾನವಾಗಿ ಹಿಡಿದ ಕಂಬಿಯ ಮೇಲೆ ಭಾರಹಾಕಿ ಕಿಟಕಿಯಲ್ಲಿ ಇಣುಕಿದೆ.

ಆತನ ಸುಳಿವೇ ಇಲ್ಲ. ಆತನ ನೆರಳೂ ಇಲ್ಲ. ಹೊರಗಡೆಯೆಲ್ಲಾ ನೀರವತೆ. ನಾನೇ ಸೃಷ್ಠಿಸಿದ ಸೆರೆಮನೆಯಲ್ಲಿ ನಾನೇ ಕೈದಿಯಾಗಿದ್ದೆ. ಹೊರಗಡೆ ಆತನಿಲ್ಲದಿರುವುದೂ ಸರಿ ಎನಿಸಿತು. ಮರ್ಯಾದೆ ಇದ್ದವರು ಯಾರೇ ಆದರೂ ಊರಿನಲ್ಲೇ ಇರಲಾರರು; ಹಾಗಿತ್ತು ನನ್ನ ಭದ್ರಕಾಳಿದರ್ಶನ. ಈ ದಿನ ನಾನೇಕೆ ಈ ರೀತಿ ಬಿರುಸಾಗಿ ವರ್ತಿಸಿದೆನೋ ತಿಳಿಯದು. ನನ್ನೀ ವರ್ತನೆಯಿಂದ ಆತ ಇನ್ನು ಯಾವತ್ತೂ ನನ್ನಲ್ಲಿಗೆ ಬರಲಾರ. ನಾನಿಂದು ಅಷ್ಟು ಕೆಟ್ಟ ರೀತಿಯಿಂದ ಕೆಟ್ಟ ಮಾತುಗಳನ್ನಾಡಿದ್ದೆ. ಸ್ವಲ್ಪವೂ ಕನಿಕರವಿಲ್ಲದೆ ಕೊರೆವ ಚಳಿಯಲ್ಲಿ ಹೊರದಬ್ಬಿದ್ದೆ. ಇಂತಹ ರಾತ್ರಿ-ಅವೇಳೆ-ಅನನುಕೂಲಕರ ಸಂದರ್ಭದಲ್ಲಿ ಒಂದು ಪ್ರಾಣಿಯೂ ಸಹ ಮಾನವೀಯತೆಯನ್ನು ತೋರಿಸೀತು. ಆದರೆ ನಾನು ತಪ್ಪು ಮಾಡಿದವಳೇ ಆಗಿದ್ದರೂ ನನ್ನ ವರ್ತನೆಗೆ ವಿರೋಧಿಸದೆ ತೆರಳುವರೆ? ಆದರೆ ನನ್ನವನು ಏನನ್ನೂ ಹೇಳದೆ ನನ್ನ ಶಿಕ್ಷೆಯನ್ನು ಶಿರಸಾವಹಿಸಿದುದನ್ನು ಎಣಿಸಿದಾಗ ಅವನ ಹೃದಯ ವೈಶಾಲ್ಯ-ತಾಳ್ಮೆ-ಸಮಾಧಾನಚಿತ್ತ ಇವನ್ನೆಲ್ಲಾ ಗಮನಿಸಿದಾಗ ನಾನೆಷ್ಟು ಕುಬ್ಜಳಾದೆ. ಒಮ್ಮೆ ಅವನದ್ದು ಅಪರಾಧವೇ ಆಗಿದ್ದರೂ ನನ್ನ ಶಿಕ್ಷೆ- ವಿರೋಧ ತುಂಬಾ ತೀಕ್ಷ್ಣವಾಯ್ತು ಎಂದುಕೊಂಡೆ. ನನ್ನ ಅತ್ಯಂತ ಕೆಟ್ಟದಾದ ವರ್ತನೆಯಿಂದ ಆತನಲ್ಲಿ ಬದಲಾವಣೆ ಇಲ್ಲ. ಆತನ ಸೌಜನ್ಯವನ್ನೇ ನಾನು ದೌರ್ಬಲ್ಯವೆಂದು ಬಗೆದೆ. ಆತನ ಕಣ್ಣಿನ ಕಾಂತಿಯನ್ನು ನಿರ್ಲಜ್ಜೆಯ ಪರಮಾವಧಿ ಎಂದು ತಿಳಿದೆ. ನನ್ನೊಡನೆ ಮಾತನಾಡಲು ಬಯಸಿದ ಆತುರವನ್ನು ನನ್ನನ್ನು ಸಮಜಾಯಿಸಲು ಮಾಡುವ ನಾಟಕ ಎಂದೆಣಿಸಿದೆ. ನನ್ನನ್ನು ಮೈಯ್ಮುಟ್ಟಿ ಸತ್ಯ ಹೇಳುವೆನು ಎಂದು ಮುಂದೊತ್ತಿ ಬರುವ ಆತನ ಸಹಜತನವನ್ನು ವಿಟನೆಂದು ತಿಳಿದು ಹೇಸಿಗೆ ಪಟ್ಟೆ. ಒಂದೇ, ಎರಡೇ? ಆತನ ಎಲ್ಲಾ ವರ್ತನೆ ನನ್ನ ಪಾಲಿಗೆ ವಿರುದ್ಧವಾಗಿ ಕಂಡಿತು. ಯಾಕೆ ಹೀಗೆ? ಉತ್ತರ ಸಿಗಲೇ ಇಲ್ಲ.

ನನ್ನದಂತೂ ನೂರಕ್ಕೆ ನೂರರಷ್ಟು ಪ್ರೀತಿ ಎನ್ನಬಹುದು. ಆತನಿಗಾಗಿ ನಾನೆಷ್ಟು ಕಾದಿದ್ದೆ. ಆತನ ಸಾಮೀಪ್ಯಕ್ಕಾಗಿ ನಾನೆಷ್ಟು ಸಂಭ್ರಮಿಸಿದ್ದೆ ! ಇವತ್ತಿಗೂ ಆತನ ಮಾತನ್ನು ಮೀರದವಳಾಗಿದ್ದೆ. ಹೀಗಿದ್ದು ಆತ ಯಾಕೆ ಹೀಗೆ ವರ್ತಿಸಿದ್ದ? ಅವನ ವಿಳಂಬಕ್ಕೆ ಕಾರಣವಾದರೂ ಏನಿದ್ದಿರಬಹುದು? ನನ್ನಲ್ಲೂ ಸಹ ಯಾವತ್ತೂ ಹೀಗೆ ಮಾತು ತಪ್ಪಿದವನಲ್ಲ. ಹಾಗಿದ್ದರೆ ಗಾಡಿಯಲ್ಲಿದ್ದ ಆ ಹೆಣ್ಣಿನ ಮೋಡಿ ಮಾಟವೇನಾದರೂ ಇದ್ದಿರಬಹುದೇ? ಅಥವಾ ಅವಳ ಸಹವಾಸದ ಫಲವೇ? ಶಿವನಿಗೆ ಗಂಗೆ-ಗೌರಿಯರು ಇರುವಂತೆ ನನ್ನವನಿಗೆ ಆಕೆಯೂ ಅನಿವಾರ್ಯವಾಗಿತ್ತೆ? ಆಕೆಯೂ ಒಳ್ಳೆಯವಳೇ ಇದ್ದಿರಬಹುದೇ? ಪರಿಶುದ್ಧೆಯಾಗಿರಬಹುದೇ? ಅಥವಾ ಇನ್ಯಾವ ಸಹಾಯದ ಸಂದರ್ಭಕ್ಕೆ ನನ್ನವನನ್ನು ಬಳಸಿಕೊಂಡಳೇ? ನನ್ನವನ ಹೃದಯವೈಶಾಲ್ಯ ಆಕೆಗೂ ಮನವರಿಕೆ ಆಗಿರಬಹುದೇ?..ಹೀಗೆ ನೂರಾರು ಪ್ರಶ್ನೆಗಳನ್ನು ನಾನು ನನಗೇ ಹಾಕಿಕೊಂಡೆ. ಒಟ್ಟಿನಲ್ಲಿ ಇದೆಲ್ಲಾ ದೇವರಾಟ ಶಿವನಲೀಲೆ ಎಂದು ಸುಮ್ಮನಾಗಲೇ? ಆ ಶಕ್ತಿ ನನ್ನಲಿಲ್ಲವಾಗಿತ್ತು. ಈಗಲೂ ಸಹ….. ಅಥವಾ ಹೀಗಿರಬಹುದೇ?… ನನ್ನವನಿಗೆ ನನ್ನ ಮೆಲಿನ ಪ್ರೀತಿಯ ಸತ್ಯವನ್ನರಿತ ನಾನು ಸ್ವಾರ್ಥದೃಷ್ಟಿಯಿಂದ, ಹಕ್ಕಿನಿಂದ ನನ್ನೊಬ್ಬಳಲ್ಲೇ ಆತ ಪ್ರೀತಿ ಇಡಬೆಕೆಂಬ ರಂಪಾಟವಾಯ್ತೇ? ನನ್ನ ಯೌವನದ ಕೊಬ್ಬೇ ಹೀಗೆ ನನ್ನಲ್ಲಿ ಮಾಡಿಸಿತೇ? ಅಂತೂ ಇಂದಿನ ಘಟನೆ ಯಾವತ್ತೂ ನನ್ನನ್ನು ತಿನ್ನುತ್ತಲೇ ಇರುತ್ತದೆ. ಪ್ರಪಂಚದ ಒಂದು ಸತ್ಯವನ್ನು ತಿಳಿಯದೇ ಹೋದೆ. ಈಗ ತಿಳಿದೂ ಪ್ರಯೋಜನ ಇಲ್ಲದೇ ಹೋಯ್ತು.

ಹೌದು, ತಪ್ಪಿದೆ ನಾನು. ಅದೇ…ಅದೇ…ನಾನು ಮೊದಲು ಸೋಲಬೇಕಿತ್ತು; ಸೋತು ಗೆಲ್ಲಬಹುದಿತ್ತು; ನನ್ನ ಸೋಲು ಈಗ ಗೆಲುವಾಗುತ್ತಿತ್ತು; ಆದರೆ ನನ್ನ ಗೆಲುವು ಸೋಲಾಯ್ತು. ಹೆಣ್ಣಾದ ನಾನು ಈ ದಾಂಪತ್ಯದ ಪರಮತತ್ತ್ವ ತಿಳಿಯದಿದ್ದರೂ ನನ್ನ ಬಾಲಿಶತೆಯನ್ನು ಅರಿತು ಅದನ್ನು ನಿಲ್ಲಿಸಲೇಬೇಕಾದ ಸತ್ಯದ ಕಹಿ ಅನುಭವ ನನ್ನ ಪಾಲಾಯ್ತು. ಮದುವೆಯ ಸಂದರ್ಭದಲ್ಲಿ ತವರು ಮನೆಯಿಂದ ಹೊರಟಾಗ ಹಿಡಿಯಕ್ಕಿ ಸೆರಗಲ್ಲಿ ಗಂಟಿಕ್ಕುವಾಗ ಅಮ್ಮನ ಹಿತನುಡಿಗಳು ನನ್ನ ಪಾಲಿಗೆ ಅರ್ಥವಾಗಿಲ್ಲವಾಗಿತ್ತು. ಅವೆಲ್ಲವೂ ನನ್ನ ಪಾಲಿಗೆ ಮಾತೃಹೃದಯದ ತುಡಿತವೆಂದಷ್ಟೇ ತಿಳಿದಿದ್ದೆ. ಪರಿಪಕ್ವವಾದ ಸಂಸಾರದ ನೊಗವನ್ನು ಇಳುಹುವಾಗ ಪಕ್ವಭರಿತವಾದ, ಆಳವಾದ ಅನುಭವದ ನುಡಿ ಎಂದು ಭಾವಿಸಲಾರದೇ ಹೋದೆ. ತನ್ನ ಮಗಳು ತನ್ನ ಆಳದ ಅನುಭವದ ಸಾರವನ್ನು ತಿಳಿಯಲಿ ಎಂಬ ಮಡುಗಟ್ಟಿದ ದುಃಖವನ್ನು ಮರೆತು ಅಪ್ಪಿದ ಆ ಕ್ಷಣ ಈಗೆಲ್ಲಾ ಅರ್ಥವಾಗುತ್ತಲಿದೆ…ಹೆಣ್ಣಿನ ಬದುಕು ಅದೆಷ್ಟು ಸೂಕ್ಷ್ಮವೆಂದು. ಈ ಸೂಕ್ಷ್ಮತೆಗೆ ಗಂಡೇ ನೆರಳಾಗಿರಬೇಕೆಂಬ ಸತ್ಯ. ನೆರಳೇ ಬೇಡವೆಂದು ದೂರಸರಿದರೆ ಬಿಸಿಲಿಗೆ ಮೆಯ್ಯೊಡ್ಡಿದ, ಕಿತ್ತೆಸೆದ ಮೃದು ಹೂವಿನಂತೆ. ಇಲ್ಲಿ ಬೇಕಾಗಿರುವುದು ಹೆಣ್ಣಿನ ಮೂಲಸ್ವರೂಪ ತ್ಯಾಗ-ತಾಳ್ಮೆ-ಔದಾರ್ಯ; ಇವುಗಳಿಲ್ಲದ ಹೆಣ್ಣು ಹೆಣ್ಣಲ್ಲ; ಹೆಣ್ಣಿಲ್ಲದೆ ಗಂಡಿಲ್ಲ. ಪ್ರಪಂಚದಲ್ಲಿ ನನ್ನಮ್ಮನ ತ್ಯಾಗ-ನನ್ನನ್ನು ಜಾಗೃತಗೊಳಿಸಿತು. ನನ್ನವನಲ್ಲೀಗ ದಾಂಪತ್ಯದ ಪ್ರೀತಿಯಲ್ಲಿ ಯಾವುದೋ ತ್ಯಾಗಕ್ಕೆ ನನ್ನ ಮನಸ್ಸು ಸಿದ್ಧವಾಯ್ತು.

ನನ್ನ ಮನಸ್ಸಿನ ಭಾವಾಂತರಂಗದ ಅಲೆಗಳು ಸ್ತಬ್ಧವಾಗುತಿದ್ದವು. ನನ್ನ ಮನಸ್ಸಿನಲ್ಲಿ ಯಾವತ್ತೂ ಯೋಚಿಸದ ವ್ಯಕ್ತಿಗಳೆಲ್ಲಾ ಸುಳಿದಾಡಿದರು. ನಾನು ಯಾವತ್ತೂ ಅವರೆತ್ತರಕ್ಕೆ ಏರಲಾರೆ. ಏರುವ ಮನೋಧರ್ಮವೂ ನನ್ನದಲ್ಲ. ವ್ಯಕ್ತಿತ್ವವೂ ನನ್ನದಲ್ಲ. ಆದರೂ ಅವರ ನೆನಪು ನನ್ನನ್ನು ಸಮಾಧಾನಗೊಳಿಸುತ್ತಿತ್ತು. ಇದೇ ಅಲ್ಲವೇ ಭಾರತೀಯ ಸಂಸ್ಕೃತಿಯ ಗಟ್ಟಿತನ; ಇದೇ ಅಲ್ಲವೇ ನಮ್ಮ ಮನೋಧರ್ಮ. ಅವರ ನೆನಪು ಹೀಗೆ ಹಗುರ ಮಾಡಿದೆ ಎಂದರೆ ಇನ್ನು ಅವರು ತುಳಿದ ದಾರಿಯಲ್ಲಿ ಬದುಕಿದರೆ? ನೋಡೋಣ. ಅವರೇ ಪ್ರಾತಃ ಸ್ಮರಣೀಯರು ಅಹಲ್ಯಾ-ಸೀತಾ-ದ್ರೌಪದಿ-ತಾರಾ-ಮಂಡೋದರೀ. ನನ್ನ ಮನೋವೇಗವನ್ನು ಇಳಿಸಿಕೊಂಡೆ. ನನ್ನ ಭಾವವನ್ನು ಬದಲಿಸಿಕೊಂಡೆ. ನನ್ನ ದೈಹಿಕಚಲನೆಗೆ ಒಂದು ಶ್ರುತಿ ಸಿಕ್ಕಿತ್ತು. ಶಾಂತತೆ ನನ್ನನ್ನು ಅಪ್ಪಿತ್ತು. ಸಮಚಿತ್ತದಲ್ಲಿ ಎಲ್ಲವನ್ನೂ ನೋಡುವ ಶಕ್ತಿ ಬಂದಿತ್ತು. ಕೆದರಿದ ಕೇಶರಾಶಿಯನ್ನು ಲಯಬದ್ಧವಾಗಿ ಮೇಲೇರಿಸಿ ಮುಡಿಕಟ್ಟಿದೆ. ಬೆವರಿನಿಂದ ತೊಯ್ದ ಬಟ್ಟೆಯನ್ನು ಬದಲಿಸಲು ಸ್ನಾನಕ್ಕೆ ತೆರಳಿ ಸ್ನಾನ ಮಾಡಿ ದೇಹವನ್ನು ಹಗುರಮಾಡಿಕೊಂಡೆ. ದೇವರ ಬಳಿಬಂದು ಸತ್ಯ ನಿವೇದನೆ ಮಾಡಿಕೊಂಡೆ. ಹಿಂದಿನ ಯಾವ ಘಟನೆಯಿಂದಲೂ, ಮುಂದೆಯೂ ಯಾವುದೇ ಸಂದರ್ಭ ನನ್ನ ಪಾಲಿಗೆ ಬಂದರೂ ನನ್ನವನಲ್ಲಿಯ ಪ್ರೀತಿ ಕಡಿಮೆ ಆಗಲಾರದು; ಆಗಬಾರದು ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ನನ್ನವನ ಮೇಲಿನ ಎಲ್ಲಾ ಕೋಪವನ್ನು ಬಿಟ್ಟು ಹೆಣ್ಣಿನ ಸಹಜಸ್ವಭಾವದ ಉದಾತ್ತತೆಯನ್ನು ಮನದಲ್ಲಿ ಮೂಡಿಸಿ ಸ್ಥಿರಪಡಿಸಿಕೊಂಡೆ. ಹೆಣ್ಣಿನ ಸಹಜದೌರ್ಬಲ್ಯಗಳನ್ನು ಮೀರಿ ಬದುಕಬೇಕೆಂದು ಹಟತೊಟ್ಟೆ. ಎಲ್ಲ ನಿನ್ನ ಆಟ ಎಂದು ದೇವರ ಮುಂದೆ ದೀಪ ಹಚ್ಚಿದೆ.

ಮನೆಯೆಲ್ಲಾ ಬೆಳಕು ಮೂಡಿತ್ತು. ನನ್ನ ಕರ್ತವ್ಯಪಾಲನೆಯೇ ನನಗಿರುವ ಮಾರ್ಗ. ಅದರಿಂದ ಸಿಗುವ ಫಲವೇ ನನ್ನ ಪಾಲಿನ ಗರಿಷ್ಠ ಪ್ರಾಪ್ತಿ. ಅದಕ್ಕಿಂತ ಹೆಚ್ಚಿನದನ್ನು ಬಯಸುವುದೇ ನಮ್ಮ ತಪ್ಪು ದಾರಿ ಎಂದು ಅರಿವು. ಈ ಕಹಿ ಘಟನೆಯಿಂದ ಜ್ಞಾನೋದಯವಾಗಿತ್ತು. ನನ್ನ ಕೆಲಸಕ್ಕಾಗಿ ನನ್ನ ಕರ್ತವ್ಯಕ್ಕಾಗಿ ಎದ್ದು ನಿಂತೆ. ನನ್ನ ಹೃದಯದೇವರನ್ನು ನೆನಪಿಸಿಕೊಂಡೆ. ಹಜ್ಜೆಹಜ್ಜೆಗೂ ಆತನ ನೆನಪು ನನ್ನನ್ನು ಎಚ್ಚರಿಸುತ್ತಿತ್ತು. ಮೊದಲು ಉತ್ತೇಜಿಸಿತ್ತು ಅಥವಾ ವಿರೋಧಿಸಿತ್ತು. ಆದರೆ ಪಕ್ವವಾದ ಈಗಿನ ಮನಸ್ಸು ಜಾಗೃತಗೊಳಿಸಿತ್ತು. ಭಾರವಾದ ಮನಸ್ಸಿನಿಂದ ಒಮ್ಮೆ ನಕ್ಕೆ. ಹೃದಯದ ಭಾವನೆಗಳೆಲ್ಲಾ ಅನುಭವಕ್ಕೆ ಎದುರಾದಾಗ ಅದರ ಶಕ್ತಿ ಅದೆಷ್ಟು ಉಳಿಸಿಕೊಳ್ಳುತ್ತದೆ ಎಂಬ ಫಲಿತಾಂಶವೇ ಜೀವನದ ಗಟ್ಟಿತನ ಎಂದು ಹೆಜ್ಜೆ ಇಡುತ್ತಾ ಬಾಗಿಲ ಬಳಿ ಬಂದು ನಿಂತೆ.

ಇಂದಿನ ದಿನ ನನ್ನ ಪಾಲಿಗೆ ಶುಭವಾಗಲಿ ಎಂದು ನಾನು ನನ್ನೊಳಗೆ ಹೇಳಿಕೊಳ್ಳುತ್ತಾ ಬಾಗಿಲನ್ನು ತೆರೆದೆ. ಹೊರಗಿನ ಪ್ರಶಾಂತತೆ ನನ್ನನ್ನು ಪುಳಕಗೊಳಿಸಿತು. ಬಲಗಾಲನ್ನು ಹೊರಗೆ ಇಡುವಷ್ಟರಲ್ಲಿ… !!

(ಸಶೇಷ..)

Leave a Reply

*

code