ಅಂಕಣಗಳು

Subscribe


 

ನೂಪುರ ಭ್ರಮರಿಯೆಡೆಗೆ ಜನಪ್ರೀತಿ

Posted On: Thursday, August 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮಾಸ್ಟರ್ ವಿಠಲ್ ಮತ್ತು ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ

ಪ್ರೀತಿ-ಅಭಿಮಾನ-ಬಾಂಧವ್ಯಗಳಿಂದ ಪ್ರತೀ ತಿಂಗಳು ತಮ್ಮ ಉತ್ತಮೋತ್ತಮ ಕೃತಿಯು ನನ್ನ ಕೈಸೇರುತ್ತಲಿದೆ. ನೃತ್ಯಗಳ ಮುಖ್ಯತಃ ಶಾಸ್ತ್ರೀಯ ನೃತ್ಯಗಳ ಮೂಲವನ್ನು, ಅದರ ಮಹಾತ್ಮ್ಯೆಯನ್ನು ತಿಳಿಸುತ್ತ ನೃತ್ಯವೆಂದರೆ ಯಾವ ಆಸಕ್ತಿಯೂ ಇಲ್ಲದವನಿಗೂ ಕೂಡಾ ಗೆಜ್ಜೆ ಕಟ್ಟಿ ಕುಣಿಸಿ ನಲಿಸಿ ಉತ್ತೇಜಿಸುತ್ತಿದ್ದೀರಿ. ಪ್ರೇಕ್ಷಕರ ಹೊಗಳು ಹೂಗಳನ್ನೇ ಮಾಲೆ ಹಾಕಿ ಗೌರವಿಸುತ್ತಾ ತಮ್ಮ ಸಾಹಿತ್ಯರತ್ನದಿಂದ ಧನ್ಯರನ್ನಾಗಿ ಮಾಡುತ್ತಿರುವಿರಿ. ನೃತ್ಯದ ಪಾಲಿಗೆ ವಿಜಯ ಸಂವತ್ಸರದ ವಿಜಯೋತ್ಸವವೇ ತಮ್ಮ ವಿಶಿಷ್ಟ ಕಾರ್ಯಕ್ರಮಗಳಿಂದಾಗುತ್ತಿದೆ. ಕೃತಜ್ಞತೆಗಳು.

–    ಮಾಸ್ಟರ್ ವಿಠಲ್, ಹಿರಿಯ ನೃತ್ಯಗುರು, ಮಂಗಳೂರು

 

ಸಂಪುಟ ಏಳರ ಸಂಚಿಕೆ ಮೂರರಲ್ಲಿ ಮೂಡಿಬಂದ ವಿಮರ್ಶಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ರಂಗಭ್ರಮರಿಯ ಬರಹ ತಾನಾಗಿಯೇ ತನ್ನೆಡೆಗೆ ಗಮನ ಸೆಳೆದು ಕೌತುಕದ ಕಂಚುಕ ತೊಡಿಸಿಕೊಂಡಿತು. ರಂಗಭೂಮಿಯ ಬದಲಾದ ಕಾಲಘಟ್ಟದಲ್ಲಿ ಹಾಸ್ಯರಸ ಎಂಬ ಶಿರೋನಾಮೆಯಡಿಯಲ್ಲಿ ಮುಂದಡಿಯಿರಿಸಿಕೊಂಡು ನಿರರ್ಗಳವಾಗಿ ನಿಧಾನದಿಂದುಸುರಿದ ಲೇಖನದ ಒಟ್ಟು ಸಾರಾಂಶ ಹಾಸ್ಯಪರಿಧಿಯೊಳಗಿನಿಂದ ತಾನಾಗಿಯೇ ಲಂಘಿಸಿ ಚೀತನೆಯ ಸಂತೆಯೊಳಗಡೆ ಸೇರಿಕೊಂಡಂತೆನಿಸಿಕೊಂಡಿತೇನೋ ಎಂದೊಮ್ಮೆ ಎಣಿಸಿಕೊಂಡದ್ದೇನೋ ನಿಜ. ಆದರೆ ಇದಕ್ಕೇನು ಕಾರಣವೆಂದು ಯೋಚಿಸಿದಾಗ ತಾಳ್ಮೆಯೊಳಗಿಳಿಸು ಲೇಖನದಾರಂಭದಿಂದಲೇ ಓದಿಕೊಳ್ಳುವುದು ಸೂಕ್ತ ಪರಿಹಾರವಾಗಿತ್ತು. ಚಿಕ್ಕದಾದ ಚೊಕ್ಕ ಬರಹ. ರಂಗಭೂಮಿಯ ಒಳಾಂಗಣಗಳೊಂದನ್ನೂ ಪ್ರತ್ಯೇಕಿಸದೆ ನೃತ್ಯ-ನಾಟಕ-ಯಕ್ಷಗಾನ-ಏಕಪಾತ್ರ-ಆಟ-ದೊಡ್ಡಾಟಗಳೆಂಬ ವಿಂಗಡಣೆಗೆ ಎಡೆಗೊಡದೆ ಕ್ಷಕಿರಣದಂಟೆ ಸಮಷ್ಟಿಯ ಪರಿಗ್ರಹಣ ಮನೋಭಾವನೆಯನ್ನುಂಟುಮಾಡುವ ವಾಸ್ತವಿಕ ಸತ್ಯತೆಗಳ ಸ್ಥೂಲರೂಪವನ್ನು ಕಣ್ಣಮುಂದಿರಿಸುತ್ತದೆ. ಅಷ್ಟು ಮಾತ್ರವಲ್ಲದೆ ಈ ಕುರಿತು ಇನ್ನಷ್ಟು ಮಥಿಸಿಕೊಳ್ಳಬೇಕೆಂಬ ಸೂಕ್ಷ್ಮ ವಿಚಾರವನ್ನು ಸಾಂಕೇತಿಕವಾಗಿ ತಿಳಿಯಪಡಿಸಿದ್ದಾರೆ. ಈ ಕುರಿತಾಗಿ ಮತ್ತಷ್ಟು ಈ ಪತ್ರಿಕೆಯ ವೇದಿಕೆಯಲ್ಲಿ ಆಳವಾಗಿ ಚರ್ಚಿಸುವಂತಾಗಲಿ.

ಎಂಥಾ ಸೊಬಗಿನ ಖನಿಯೆ ಈ ನೂಪುರ ಭ್ರಮರಿ

ಎಂಥ ಸೊಬಗಿನ ನಿಧಿಯೆ ||

ಅಂತಿಂಥ ಸೊಗಸಲ್ಲ್ಲ, ಇದರಂಥದ್ದಿನ್ನಿಲ್ಲ

ತಣಿಸುವುದು ಮನೆಮನೆ ಜನಮನಗಳನ್ನೆಲ್ಲ

ಹೊಸದೊಂದು ಸಿದ್ಧಾಂತ ಬಸಿದುಕೊಂಡಿಹ ಈ ರಸಗುಲ್ಲ

ನಳಪಾಕ ಸುರಿಸಿಕೊಂಡೀಗಲೇ ಹಸಿವು ನೀಗಯ್ಯಾ

ಕೊಡಗಿನ ಬೆಡಗಿಗೆ ಹೆಸರಾದ ಮಡಿಕೇರಿ ತಡಿಯಲ್ಲಿ

ನೆಲೆಸಿಹ ಸುಂದರ ಸಾನ್ನಿಧ್ಯದಡಿಯಲ್ಲಿ

ಹರುಷ ಆನಂದದಲಿ ಸಂಧಿಸಿಹುದು ಭ್ರಮರಿಯ ಜನನ

ವರುಷ ಏಳರ ಹಿಂದೆ ಘಟಿಸಿದಂದಿನ

ಸನ್ಮಿತ್ರರನ್ನೆಲ್ಲಾ ಕಲೆಹಾಕಿ ಕೂಡಿ ಹಾಡಿದರು

ಒಟ್ಟಾಗಿ ನಿಂತರು ಕಲೆಗಳ ಆರಾಧಕರು

ಬಲ್ಲವರ ಭರವಸೆ ಸಹಕಾರ, ಸರಕಾರದನುದಾನ

ಸುರಿದು ಹರಿದು ಬರಲಿದಕೆಂದೆಂದು ತಾಯಕೃಪೆಯ ಸನ್ನಿಧಾನ

–    ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು.

Leave a Reply

*

code