ಅಂಕಣಗಳು

Subscribe


 

ಅವ್ಯವಧಾನದಿಂದ ತಪ್ಪಿದ ನಾಟ್ಯಾಂಗಣದ ಸೌಂದರ್ಯಶಿಲ್ಪ

Posted On: Saturday, October 6th, 2012
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾಂಸರು, ಕವಿಗಳು, ಅವಧಾನ ಪೃಚ್ಛಕರು, ಬೆಂಗಳೂರು

ಸವಿಯುವ ಸಂಕಟವೇ ಅಂತಹದ್ದು. ಮಧುರಾದಿ ರಸಗಳು ಹದಗೊಂಡು ಸಮಪಾಕವಾಗಿ ಹೆರೆಗಟ್ಟುತ್ತದೆ, ಹೆರೆಗಟ್ಟುತ್ತಿವೆ ಎಂದು ಅಂದುಕೊಳ್ಳುತ್ತಿರುವಾಗ ಅಲ್ಲಲ್ಲಿ ಅಲ್ಲಲ್ಲಿ ಕಾವಿನ ಏರುಪೇರಿನಿಂದ ರುಚಿಯು ಮಾರ್ಗಾಂತರವಾದರೆ ಸ್ವಾದವು ಚೆದುರುತ್ತದೆ; ಚೆಲ್ಲುವರಿಯುತ್ತದೆ. ಹೂವೂ ಇದೆ, ಗಟ್ಟಿದಾರವೂ ಇದೆ, ನುರಿತ ಮಾಲೆಗಾರರೂ ಇದ್ದಾರೆ. ಆದರೆ ತುಸು ಜೊಂಪಿನಿಂದ ಹೆಣಿಗೆ ಜಾಳಾದರೆ ಮಾಲೆ ತಾನು ಪಡೆಯಬಹುದಾದ ಕಾಂತತ್ವವನ್ನು ಕಡಿಮೆಗೊಳಿಸಿಕೊಳ್ಳುತ್ತದೆ. ಇತ್ತೀಚೆಗೆ (೧೪ ಸೆಪ್ಟೆಂಬರ್ ೨೦೧೨) ಬೆಂಗಳೂರಿನ ಎಡಿ‌ಎ ರಂಗಮಂದಿರದಲ್ಲಿ ಭರತನೃತ್ಯಶಾಲೆಯವರ ನಾಟ್ಯಾರ್ಪಣವನ್ನು ಕಂಡಾಗ ಆದ ಅನುಭವ ಅಂತಹದೇ. ಎಲ್ಲ ಇದ್ದು ಮುದ್ದಂತೆನಿಸಿದೆ ಹೋಯಿತೇ ಎಂಬ ಕಿಂಚಿತ್‌ಕ್ಷೋಭೆ ಸಾನುಕಂಪವಾಗಿ ಸುಳಿದೋಡಿತು.

ನೃತ್ಯಗುರು ದಿವಂಗತ ಸುಂದರೀ ಸಂತಾನಂ ಅವರ ಆಪ್ತಸ್ಮೃತಿಯಲ್ಲಿ ಮೂಡಿಬಂದ ನೃತ್ಯಾರ್ಪಣ, ಅವರ ಶಿಷ್ಯೆಯರೇ ಸೇರಿ ಸಲ್ಲಿಸಿದ್ದು ; ಸುಂದರಿಯವರು ಅಕ್ಷರಶಃ ನೆತ್ತರು ಬಸಿದು ಶೋಧಿಸಿ ಸಾಧಿಸಿದ ದೇಸೀಕರಣಗಳ ಮೊದಲ ಪ್ರಸ್ತುತಿಯೂ ಸೇರಿದಂತೆ ಪೂರ್ವಾಂಗದಿಂದ ತಿಲ್ಲಾನದ ವರೆಗೆ ವಿವಿಧ ಭಾವಾಸ್ಪದವಾದ ನಾಟ್ಯಸಂಕಥನ ಜೋಡುಗೊಂಡಿತ್ತು. ಆರಂಭದಲ್ಲಿ ನಡೆಯಿಟ್ಟ ದೇಸೀಕರಣ, ನೃತ್ಯಜಗತ್ತಿನಲ್ಲಿ ಮೊಟ್ಟಮೊದಲಬಾರಿ ಮೈಯೊಡೆಯುತ್ತಿರುವುದರಿಂದ ಅದರ ಕುರಿತು, ಅದರ ಸಂರಚನೆಯ ಕುರಿತು, ಅದರ ವಿಭಿನ್ನತೆಯ ಕುರಿತು, ಅದರ ವಿನ್ಯಾಸದ ಕುರಿತು ಪ್ರೇಕ್ಷಕರು ಮೂಢಕರಣರೇ ಆಗಿದ್ದರು. ಮಾರ್ಗ ಹಾಗೂ ದೇಸೀಕರಣಗಳ ಮೂಲಭೂತ ವ್ಯತ್ಯಾಸ ವಿನಿಯೋಗದ ಬಗ್ಗೆ ವಿರಳವಾಗಿಯಾದರೂ ಮಾಹಿತಿ ನೀಡಬಹುದಿತ್ತು. ಒಂದು ನಾಟ್ಯಪ್ರಯೋಗ ಪಂಡಿತವರ್ಯರಿಗಷ್ಟೇ ಮೀಸಲಿಲ್ಲವಷ್ಟೇ ! ಅಂದು ಪ್ರಯೋಗಿಸಿರಬಹುದಾದ ದೇಸೀಕರಣಗಳಲ್ಲಿ ಕೆಲವೇ ಕೆಲವುಗಳ ಹೆಸರನ್ನಾದರೂ ಪ್ರಕಟಿಸಬಹುದಿತ್ತು. ಶಿಷ್ಟವೆನಿಸದ ಆಂಗಿಕ ಚಲನೆಗಳನ್ನು ಒಳಗೊಂಡ ಒಂದಷ್ಟು ಕುತೂಹಲ ಹುಟ್ಟಿಸುವ ಗತಿ-ಪ್ಲುತಿಗಳು ಇದ್ದುದು ಹೌದಾದರೂ, ದೇಸೀಕರಣದ ಅಧಿಕೃತತೆಯ ಕುರಿತು ಖಚಿತ ಮಾಹಿತಿಯನ್ನು ಪ್ರೇಕ್ಷಕರಿಗೆ ಒದಗಿಸಿದ್ದಿದ್ದರೆ, ಸಂಶೋಧನೆಯ ಮೌಲ್ಯದ ಮಹತ್ತು ಮನವರಿಕೆಯಾಗುತ್ತಿತ್ತು. ಇನ್ನೊಂದು ಗೊಂದಲದ ಸಂಗತಿಯೆಂದರೆ ನಾಲ್ಕು ಕಲಾವಿದೆಯರು ಗುಂಪುಗುಂಪಾಗಿ ಇದನ್ನು ಪ್ರಸ್ತುತಪಡಿಸಿದ್ದು. ಒಬ್ಬೊಬ್ಬರೇ ಹಂಚಿಕೊಂಡು ನರ್ತಿಸಿದ್ದರೆ, ನೋಡುಗನ ಕಣ್ಮನಗಳಲ್ಲಿ ಅಚ್ಚು ಇನ್ನಷ್ಟು ಗಟ್ಟಿಯಾಗಿ ಊರುತ್ತಿತ್ತು. ಸಮೂಹನೃತ್ಯ ಏನಿದ್ದರೂ ಸಾಗಹಾಕುವ ವ್ಯವಹಾರತಂತ್ರ ಅಷ್ಟೇ ! ನಾಲ್ಕೂ ಕಲಾವಿದೆಯರು ರಂಗದಲ್ಲಿ ನೃತ್ಯಶೀಲರಾಗಿರುವಾಗ ಯಾರ ಭಾವ-ಭಂಗಿ ಹೇಗೆ ಎಂಬುದನ್ನು ಅರಸುವುದರಲ್ಲೇ ಪ್ರೇಕ್ಷಕ ಅರೆಜಡ್ಡಾಗುತ್ತಾನೆ. ಪರಿಣಾಮವಾಗಿ ಯಾವ ಕಲಾವಿದೆಯ ಲಾಸ್ಯಾಕರ್ಷಣ ಕಣ್ಣಿಗೆ ಕೊಕ್ಕೆ ಹಾಕುತ್ತದೋ ಅಲ್ಲೇ ಪ್ರೇಕ್ಷಕ ನೆಲೆನಿಲ್ಲುತ್ತಾನೆ. ಕಲಾಕಾರರ ಪರಿಶ್ರಮ ಬಿಡಿಬಿಡಿಯಾಗಿ ದಾಖಲಾಗದೇ ಅವರು ಮಾಡಿದ ಕಠಿನಾಭ್ಯಾಸ ಜಲಲಿಪಿಯಾಗುತ್ತದೆ. ಈ ಸೋರಿಕೆಯನ್ನು ತಡೆಗಟ್ಟಿದ್ದರೆ ಪ್ರದರ್ಶನ ಪ್ರಮಾಣಭೂತವಾಗುತ್ತಿತ್ತು.

ನಾಚ್ ನಟುವರ್, ಮೋಹಿನಿ ಭಸ್ಮಾಸುರ, ಬೆಳದಿಂಗಳು, ಮೋಘಾಲಂಕರಣ (ಹಾಸ್ಯರಸದ ತೆಲುಗುಪದ್ಯ) ಪ್ರಸಂಗಗಳು ಕಥಾರೇಖಾತ್ಮಕವಾದವುಗಳಾಗಿ ಭರತನೃತ್ಯದ ಎಲ್ಲಾ ಮಗ್ಗುಲುಗಳನ್ನು ಒಳಗೊಂಡಿದ್ದು ; ಈ ಪ್ರಸ್ತುತಿಗಳಲ್ಲಿ ಪದ್ಮಾಯನದ ಛಾಪಿನ ಹೊಳಪು ಸ್ಪಷ್ಟವಾಗಿ ಕಾಣುತ್ತಿತ್ತು. ತತ್ರಾಪಿ ಚಾರಿ ರೇಚಿತಗಳ ಮೂಲಕ ಹಾಯಿಸುವ ನೃತ್ಯಗಮಕದ ಬಳುಕು ವಾಹ್ ವಾಹ್ ಉದ್ಗಾರದ ಉಜಿರಾಗಿತ್ತು. ಆದರೆ ಸಾತ್ತ್ವಿಕಕ್ಕೆ ವ್ಯವಧಾನದ ಸಾಥಿ ಆಗದೇ ಭಾವಸಂವಹನದಲ್ಲಿ ತಡೆಯೊಡ್ಡುಗಳಾಗಿ ರಸವಾಗುವ ಹದದ ಹಂತದಲ್ಲಿ ಹಾರುಹೊಡೆಯುತ್ತಿತ್ತು.

ಆ ವಿವರ ನಿನ್ನೊಳಗೂ ಎನ್ನುವ ಮೂಲಸೂತ್ರ ಅಭಿನಯಕ್ಕೂ ಅನ್ವೇಯ. ಸಂದರ್ಭ, ಪಾತ್ರ, ಭಾವಗಳ ಸಮೀಕರಣ ಅಂತರಂಗದಲ್ಲಾಗದೆ ಮುಖರಂಗದಲ್ಲಿ ಆವಿರ್ಭವಿಸುವುದಿಲ್ಲ. ಅಷ್ಟರಮಟ್ಟಿನ ಕಲಾಕಾಲವನ್ನು ಈ ಅಂತಃಪ್ರಕ್ರಿಯೆಗಾಗಿ ಮೀಸಲಿಟ್ಟುಕೊಳ್ಳದಿದ್ದರೆ ಭಾವವು ರಸವಾಗಿ ಪ್ರೇಕ್ಷಕನಲ್ಲಿ ಸಂವಹಿಸುವುದೂ ಇಲ್ಲ. ಇದೇ ವ್ಯವಧಾನ ತಾನೇ?

ಭಸ್ಮಾಸುರ ಮೋಹಿನಿ ನೂರಾರು ಸಂಚಾರಿಗಳಿಗೆ ತೆರೆಬಾಗಿಲಾಗುವ ಸುಂದರ ರೂಪಕ. ಒಂದೊಂದು ಪಾತ್ರವೂ ಕಲಾವಿದನಿಗೆ ಸೂಳ್‌ಕಣಿಗಳನ್ನು ಎಸೆಯುವಂತಹದು. ತೀರಾ ಅವಸರದಲ್ಲಿ ಹೀಗೆ ಬಂದು ಹಾಗೆ ಹೋದಂತಾಗಿ ಅಭಿನಯಪಟುತ್ವ-ಸ್ಫುಟತ್ವವಿರುವ ಅತ್ಯುತ್ತಮ ಕಲಾವಿದೆಯರಿದ್ದೂ ಪರಿಣಾಮರಮಣೀಯವಾಗುವ ಅವಕಾಶವನ್ನು ಗೇಣಳತೆಯಲ್ಲಿ ತಪ್ಪಿಸಿಕೊಂಡಂತೆನಿಸಿತು. ಮುಗ್ಧಾನಾಯಿಕೆಯ ಬೆಳದಿಂಗಳು ಕೊಂಚ ಮೋಡದ ತೆಳುಪರದೆಯಲ್ಲಿ ಮುಸುಕಿಟ್ಟಂತಾದುದು ಅಭಿನಯಕ್ಕೆ ಬೇಕಾದ ಅನುಭವದ್ರವ್ಯ ಬಗೆಯ ಬೋಗುಣಿಯಿಂದ ಕೆನೆಗಟ್ಟಿ ಉಕ್ಕದಿರುವುದರಿಂದಲೇ ಇದ್ದೀತು. ಹಾಸಸ್ಫುರಕವಾದ ವಿಫಲಾಂಕರಣ ಪ್ರಕರಣದ ನಾಯಿಕೆಯ ಅಂಗಾಂಗಶೃಂಗಾರದ ಸನ್ನಾಹ, ಹೇರಳ ವಿನೋದವಸ್ತುನಿರ್ಭರವಾಗಿದ್ದರೂ ಹೊರಸೂಸಿದ್ದು ಕೆಲವೇ ಘಟ್ಟಗಳು.

ಅಂದು ಎಲ್ಲ ಕಲಾವಿದೆಯರ ಪ್ರಸ್ತುತಿ-ಪರಿಶ್ರಮವನ್ನು ಮಬ್ಬಾಗಿಸುವಲ್ಲಿ ಬೆಳಕಿನ ಗೊಂದಲದ ನಿರ್ವಹಣೆಯದೇ ಸಿಂಹಪಾಲು. ಯಾವ ತರ್ಕ-ತೋರ್ಗಣೆಯೂ ಇಲ್ಲದೆ ಎಲ್ಲೆಲ್ಲೋ ಚೆಲ್ಲುವ ಬೆಳಕು. ಇದ್ದಕ್ಕಿದ್ದಂತೆ ಪ್ರಖರತೆ ಕಳೆದು ಗಾಳಿಸೊಡರಾಗುವ ದೀಪ ರಂಗದ ಕಲಾವಿದರನ್ನು ಅಟ್ಟಾಡಿಸಿತು.

ದೀಪನ್ಯಾಯದೊಂದಿಗೆ ಸಮದಂಡಿಯಾಗಿ ಹಾಲಿಗೆ ಹೆಪ್ಪಿಟ್ಟದ್ದು ಹಿಮ್ಮೇಳದ ಕೈವಾರಿಕೆ. ಅದೇನು ಸೋದ್ದೇಶವೋ, ಅನುದ್ದೇಶವೋ, ನಿರುದ್ದೇಶವೋ ಬಹುತೇಕ ರಂಗಪಾಠ್ಯವಾದ ಸಾಹಿತ್ಯದ ಯಾವ ಶಬ್ದವೂ ಪ್ರೇಕ್ಷಕರಿಗೆ ಸ್ಫುಟವಾಗಿ ಕೇಳಿದ್ದಿಲ್ಲ. ಹೆಚ್ಚಿನ ಹಾಡುವಿಕೆ(ಮಂದ್ರದಲ್ಲಾಗಲೀ ತಾರದಲ್ಲಾಗಲೀ) ಹುಸಿಶರೀರದಲ್ಲೇ ತೆವಳುತ್ತಿತ್ತು. ಕನ್ನಡ ಸಬ್ದದ ಉಚ್ಚಾರದ ಬಗ್ಗೆ ನಿಗಾ ಇರದುದರಿಂದ ಹಾಡುಗಾರನ ಬಯಕೆ ಎಲ್ಲಾ ಭಯಕೆ ಆಗುತ್ತಿದ್ದುದೂ ವಿಡಂಬನೆ. ಇನ್ನು ಭಾವಸಾಂದ್ರತೆಯನ್ನು ಗಾನದಲ್ಲಿ ನಿರೀಕ್ಷಿಸುವುದೆಲ್ಲಿ ? ಒಂದುಕ್ಷಣವೂ ವಿರಾಮವಿಲ್ಲದ ಗಾಯನದಿಂದ ವಾದ್ಯಗಳ ನುಡಿಸಾಣಿಕೆಗೆ ಸಂದೇ ಇಲ್ಲದೆ ಎಫೆಕ್ಟ್ ಬರಬೇಕಾದಲ್ಲೆಲ್ಲಾ ಖಾಲಿತನ ಕಂಡುಬಂದದ್ದು ಪ್ರದರ್ಶನದ ಅವ್ಯವಧಾನತೆಗೊಂದು ಕಾರಣವೂ ಹೌದು.

ಕಲಾವಿದರ ಅಂತರಂಗದಿಂದ ನಾಟ್ಯರಂಗಕ್ಕೆ ಜಿಗಿದು ಸಹೃದಯನ ರಸಾಂಗಣವನ್ನು ಹೊಗುವ ಭಾವದ್ರವ್ಯವನ್ನು ಕಡೆದಲ್ಲದೇ ಫಲದ ನವನೀತ ಸುಲಭಲಭ್ಯವಾಗದು. ಭರತನೃತ್ಯಶಾಲೆಯ ಕಲಾವಿದೆಯರಲ್ಲಿ (ಹರಿಣಿ, ನಮಿತ, ನಯನ, ದೀಕ್ಷಾ) ನೃತ್ತ, ನೃತ್ಯ, ನಾಟ್ಯ, ಅಭಿನಯಾದಿಗಳ ಗಟ್ಟಿ ಪಂಚಾಂಗವಿದೆ, ಕಠಿನ ಅಭ್ಯಾಸವಿದೆ, ನಿತಾಂತಶ್ರದ್ಧೆಯಿದೆ; ಹತ್ತರಲ್ಲಿ ಇನ್ನೊಂದಾಗದ ಪ್ರತ್ಯೇಕ ನಾಟ್ಯಮಾನ್ಯತೆ ಇದೆ. ಖಂಡಿತವಾಗಿಯೂ ಸಹೃದಯಲೋಕ ಇವರಿಂದ ಉತ್ತುಂಗಪ್ರದರ್ಶನವನ್ನು ನಿರೀಕ್ಷಿಸುವ ಊರ್ಜೆ ಇದೆ. ಅದು ಪೂರ್ಣರೂಪದಿಂದ ಪ್ರಕಾಶಿಸಲಿ ಎಂಬುದೇ ಹಾರೈಕೆ

Leave a Reply

*

code