ಅಂಕಣಗಳು

Subscribe


 

ನಮ್ಮ ನೃತ್ಯ ಪರಂಪರೆಗಳ ಪುನರುಜ್ಜೀವನವು ಶಿಸ್ತು, ಒಗ್ಗಟ್ಟಿನಿಂದಷ್ಟೇ ಸಾಧ್ಯ : ಲಲಿತಾ ಶ್ರೀನಿವಾಸನ್

Posted On: Friday, December 16th, 2011
1 Star2 Stars3 Stars4 Stars5 Stars (No Ratings Yet)
Loading...

Author: 'ಮನೂ' ಬನ

ಮೈಸೂರು ಶೈಲಿಯ ಹಿರಿಯ ನೃತ್ಯ ಗುರು ಡಾ.ವೆಂಕಟಲಕ್ಷ್ಮಮ್ಮ ಅವರ ಪ್ರೀತಿಪಾತ್ರ ಶಿಷ್ಯೆ ಲಲಿತಾ ಶ್ರೀನಿವಾಸನ್ ಅವರದ್ದು ಕಲಾರಂಗಕ್ಕೆ ಸುಮಾರು ೪೦ ದಶಕಗಳಿಗೂ ಮೀರಿದ ನೃತ್ಯಸೇವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತಮ್ಮದೇ ನೂಪುರ ಕಲಾಸಂಸ್ಥೆಯನ್ನು ಸ್ಥಾಪಿಸಿ ಕಲಾಶ್ರಿತರಿಗೆ ಪ್ರೋತ್ಸಾಹವನ್ನೀಯುತ್ತಾ ಬಂದಿರುವ ಸುಸ್ಪಷ್ಟ ನೇರ ನುಡಿಯ ಸಜ್ಜನ ಕಲಾವಿದೆ. ಇವರು ಆರಂಭಿಸಿದ ನಿತ್ಯನೃತ್ಯ ಉತ್ಸವ ಕರ್ನಾಟಕದ ಕಲೋತ್ಸವಗಳ ಸಾಲಿನಲ್ಲಿ ಮೊದಲನೆಯ ಮೈಲಿಗಲ್ಲು. ೧೯೮೦ರ ದಶಕದಲ್ಲಿ ಸೂಳಾದಿ ಪ್ರಬಂಧಗಳ ಪುನರ್ ರಚನೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಪಡೆದ ಲಲಿತಾ ಶ್ರೀನಿವಾಸನ್ ನೃತ್ಯಸಂಶೋಧನೆಯ ಹಾದಿಯನ್ನು ಅರಸಿಕೊಂಡು ಬರುತ್ತಿರುವ ಸೃಷ್ಟಿಶೀಲರಿಗೆ ಸದಾ ಅನುಕೂಲಿಗಳಾಗಿ ನಿಲ್ಲುತ್ತಿರುವ ಮುಕ್ತ ಮನಸ್ಸಿನ ಗುರು. ಕಳೆದ ೨೦೦೮ರಿಂದ ಕರ್ನಾಟಕ ನೃತ್ಯಕಲಾ ಪರಿಷತ್ ಅಧ್ಯಕ್ಷೆಯಾಗಿ ತಮ್ಮ ಜವಾಬ್ದಾರಿಯ ಅವಧಿಯೊಳಗೆ ಗಮನಾರ್ಹವಾದ ನಡೆಗಳನ್ನು ನೆರವೇರಿಸಬೇಕೆಂದುಕೊಂಡಿರುವವರು. ಅವರನ್ನೊಮ್ಮೆ ಪತ್ರಿಕೆಯು ಮಾತನಾಡಿಸಿದಾಗ…

 


· ನಿಮ್ಮ ಕಲಾ ಸೇವೆಗೆ ಅನಂತ ನಮನ. ಕರ್ನಾಟಕ ನೃತ್ಯಕಲಾ ಪರಿಷತ್‌ನ ಧ್ಯೇಯೋದ್ದೇಶಗಳ ಸರಣಿ ಹೇಗೆ ಮುಂದುವರಿದೆ?

೧೯೭೯ರ ಜೂನ್ ೨೫ರಂದು ಕರ್ನಾಟಕ ನೃತ್ಯಕಲಾ ಪರಿಷತ್ ಅಂದಿನ ರಾಜ್ಯಪಾಲರಾದ ಗೋವಿಂದ ನಾರಾಯಣ್ ಅವರ ಉದ್ಘಾಟನೆಯ ಮೂಲಕವಾಗಿ ಅಸ್ತಿತ್ತ್ವಕ್ಕೆ ಬಂದಿತು. ಪ್ರಾರಂಭಿಕವಾಗಿ ಹಿರಿಯ ಗುರುಗಳಾದ ಯು.ಎಸ್.ಕೃಷ್ಣರಾವ್, ಕೇಶವಮೂರ್ತಿ, ಲೀಲಾ ರಾಮನಾಥನ್, ರಾಧಾಕೃಷ್ಣ, ಚಂದ್ರಶೇಖರ್ ಸಾಕಷ್ಟು ಶ್ರಮವಹಿಸಿದ್ದಾರೆ. ಶಾರದಾ ಉಮೇಶ ರುದ್ರ, ವಸಂತಲಕ್ಷ್ಮಿ, ಪದ್ಮಜಾ ಶ್ರೀನಿವಾಸ್, ಪದ್ಮಿನಿ ರಾವ್ ಅವರ ಕೊಡುಗೆಯೂ ಅನನ್ಯ. ಕರ್ನಾಟಕದ ನೃತ್ಯಕಲಾವಿದರ ಆಶೋತ್ತರ ಮತ್ತು ಅವಕಾಶಗಳ ಸಂಬಂಧ ಸಾಕಷ್ಟು ಧ್ಯೇಯೋದ್ದೇಶಗಳನ್ನು ಹೊತ್ತು ಮುನ್ನಡೆದುಕೊಂಡು ಬಂದಿದೆ. ಎಲ್ಲವೂ ಪೂರ್ಣವಾಗಿದೆಯೆಂದು ಹೇಳಲಾರೆ. ಆದರೆ ಸಮಯ, ಸಂದರ್ಭಮಿತಿಯೊಳಗೆ ನನ್ನನ್ನೂ ಒಳಗೊಂಡಂತೆ ಸಾಕಷ್ಟು ಕರ್ತವ್ಯಗಳನ್ನು ಮಾಡುತ್ತಲೇ ಬಂದಿದ್ದೇವೆ.

· ಆದರೆ ಪರಿಷತ್‌ನ ಕಾರ್ಯ, ಕರ್ತವ್ಯ, ನಿರ್ವಹಣೆಯ ಸಂಬಂಧ ಸಾಕಷ್ಟು ಆರೋಪಗಳ ಪಟ್ಟಿಯನ್ನೇ ಕಲಾವಿದರಾದಿಯಾಗಿ ಹಾಕುತ್ತಿದ್ದಾರಲ್ಲಾ. ಅದಕ್ಕೇನು ಹೇಳುತ್ತೀರಿ?

ಆರೋಪ ಮಾಡುವುದು ಸುಲಭ. ಕೆಲಸ ಮಾಡುವುದು ಕಷ್ಟಸಾಧ್ಯ. ಅದರಲ್ಲೂ ಪರಿಷತ್‌ನಂತಹ ವ್ಯವಸ್ಥೆಯೊಳಗೆ ಎಲ್ಲರನ್ನೂ, ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಉದಾಹರಣೆಗೆ ಪರಿಷತ್‌ನಲ್ಲಿ ಕರ್ನಾಟಕದ ಎಲ್ಲೆಡೆಯಿಂದ ಸುಮಾರು ೪೦೦ರಷ್ಟು ಸದಸ್ಯರಿದ್ದಾರೆ. ಆದರೆ ಎಷ್ಟು ಮಂದಿ ಪರಿಷತ್‌ನ ಸಭೆ-ಸಮಾರಂಭಗಳಿಗೆ ಬರುತ್ತಾರೆ ಎಂಬುದೇ ನನ್ನ ಪ್ರಶ್ನೆ. ಬೆರಳೆಣಿಕೆಯಷ್ಟು ಮಂದಿಯ ಪಾಲ್ಗೊಳ್ಳುವಿಕೆ ಪರಿಷತ್‌ನಂತಹ ಸಮಗ್ರ ನಿಲುವಿನ ಸಂಸ್ಥೆಯನ್ನು ಎಷ್ಟರಮಟ್ಟಿಗೆ ಮುನ್ನಡೆಸೀತು? ನಿರ್ಧಾರ-ನಿಯಮಾವಳಿಗಳ ನಿರೂಪಣೆಯಲ್ಲಿ ಯಾರೂ ಭಾಗವಹಿಸದೆ, ತಮ್ಮ ಸಲಹೆ-ಸೂಚನೆ-ಸಹಕಾರ ನೀಡಿದರೆ ಕೇವಲ ಲೋಪಗಳ ಕುರಿತಂತೆ ಆರೋಪ ಮಾಡುವುದು ಎಷ್ಟು ಸರಿ? ಹಾಗೆನೋಡಿದರೆ ಕಾರ್ಯಕ್ರಮ ನಿರ್ವಹಣೆಯ ಸಂಬಂಧವಾಗಿ ಆಹ್ವಾನ ಪತ್ರಿಕೆ ಮುದ್ರಣದಿಂದ ಹಿಡಿದು ಪೂರ್ಣ ಕಾರ್ಯಗತವಾಗುವಲ್ಲಿಯವರೆಗೆ ಎಷ್ಟೋ ಸಲ ಖರ್ಚುಗಳನ್ನು ಸ್ವತಃ ನಿಭಾಯಿಸಿದ್ದಿದೆ. ಸರ್ಕಾರದ ಅನುದಾನ, ನೆರವಿಗೆ ಸಾಕಷ್ಟು ಕಷ್ಟಪಟ್ಟದ್ದೂ ಇದೆ. ಒಂದರ್ಥದಲ್ಲಿ ಪರಿಷತ್‌ನಂತಹ ವ್ಯವಸ್ಥೆಯನ್ನು ನಿಭಾಯಿಸುವುದು ನಿಜಕ್ಕೂ ಒಂದು ಹೋರಾಟವೇ ಸರಿ. ಕೊನೆಯಪಕ್ಷ ಸದಸ್ಯರ ಪೂರ್ಣ ಬೆಂಬಲ, ಸಹಕಾರಗಳು ಕಾಲನುಕೂಲಕ್ಕೆ ಲಭ್ಯವಾದರೆ ಮತ್ತಷ್ಟು ಚೆನ್ನಾಗಿ ಪರಿಷತ್ ಮತ್ತು ನೃತ್ಯಕ್ಷೇತ್ರವನ್ನು ಕಟ್ಟಬಹುದು.


· ಪರಿಷತ್‌ನ ತತ್‌ಕ್ಷಣದ ಗುರಿಗಳೇನು?

ಬಹಳ ವರ್ಷಗಳಿಂದಲೂ ಪರಿಷತ್ ತನ್ನದೇ ಒಂದು ಸ್ವಂತ ಕಟ್ಟಡ, ಕಛೇರಿ ಹೊಂದಬೇಕೆಂಬುದು ಕನಸು. ನನಸಾಗುವ ಹಂತಕ್ಕಾಗಿ ಕಾಯುತ್ತಲೇ ಇದ್ದೇವೆ. ಪ್ರಸ್ತುತ ಶಾರದ ಉಮೇಶ್ ರುದ್ರ ಅವರ ಶಾರದಾ ಮಹಿಳಾಸಮಾಜದಲ್ಲೇ ಪರಿಷತ್‌ನ ಸಭೆಗಳು ನಡೆಯುತ್ತಲಿದೆ. ಈಗಾಗಲೇ ಪರಿಷತ್ ವರ್ಷವರ್ಷವೂ ನಟರಾಜೋತ್ಸವ, ಭರತಮುನಿ ಉತ್ಸವ, ಅಂಕುರ ಉತ್ಸವ, ನೃತ್ಯದ ಕುರಿತಂತೆ ಉತ್ಸವಗಳು, ಪ್ರಾತ್ಯಕ್ಷಿಕೆ-ಕಾರ್ಯಾಗಾರ, ಕಮ್ಮಟ, ಉಪನ್ಯಾಸ ವಿಚಾರಸಂಕಿರಣಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರತೀವರ್ಷ ವಿಚಾರಸಂಕಿರಣಗಳನ್ನು ನಡೆಸಿಕೊಂಡು ಬರುತ್ತಲಿದ್ದು ಈಗಾಗಲೇ ಮೈಸೂರು, ತುಮಕೂರು, ಉಡುಪಿ, ಹುಬ್ಬಳ್ಳಿ, ಉತ್ತರ ಕನ್ನಡ, ಮೈಸೂರುಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದೇವೆ. ಪ್ರಾಯೊಗಿಕವಾಗಿಯೂ, ಸೈದ್ಧಾಂತಿಕವಾಗಿಯೂ ಕಲಾವಿದರಲ್ಲಿ ಶೈಕ್ಷಣಿಕ ದೃಷ್ಟಿಕೋನಗಳನ್ನು ಪ್ರಚುರಿಸುವುದು ಪರಿಷತ್‌ನ ಧ್ಯೇಯ. ಈ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯನ್ನೂ ಒಳಗೊಂಡಂತೆ ಇತರೆ ಇಲಾಖೆಗಳ ಸಹಕಾರ ನಿಜಕ್ಕೂ ಅನನ್ಯ.

· ಕರ್ನಾಟಕದ ನೃತ್ಯಶೈಲಿಗಳ ಕುರಿತಂತೆ ಜನರಿಗೆ ಅಷ್ಟಾಗಿ ಏಕೆ ಅರಿವಿಲ್ಲ? ಇತರ ರಾಜ್ಯಗಳಲ್ಲಿ ರೂಪುಗೊಂಡ ಕಲೆಯ ಕುರಿತಾದ ಬೆಳವಣಿಗೆಗಳು ಯಾಕೆ ಇಲ್ಲಿ ಸಂಘಟನೆಯಾಗುತ್ತಿಲ್ಲ?

ಕರ್ನಾಟಕದವರು ಮೊದಲಿನಿಂದಲೂ ಬೇಧಭಾವವಿಲ್ಲದೆ ಎಲ್ಲರನ್ನೂ, ಎಲ್ಲದನ್ನೂ ಸಮನಾದ ರೀತಿಯಲ್ಲಿ ಕಂಡವರು. ವ್ಯತ್ಯಾಸ, ಬೇಧಗಳಿಲ್ಲದ ಈ ಮುಕ್ತ, ವಿಶಾಲ ಮನಸ್ಥಿತಿ ಒಂದರ್ಥದಲ್ಲಿ ಹಿನ್ನಡೆಯನ್ನೇ ಅನುಭವಿಸುವಂತಾಗಿ ನಮ್ಮದು, ನಮ್ಮ ನೃತ್ಯ ಶೈಲಿ ಎಂಬ ದೃಷ್ಟಿಕೋನ ಒಗ್ಗಟ್ಟು, ಜಾಗೃತಿಯಾಗಲೇ ಇಲ್ಲ. ಪರಿಣಾಮವಾಗಿ ಉಳಿದವರ ಪ್ರಭಾವ ನಮ್ಮಲ್ಲಿ ಹೆಚ್ಚುತ್ತಾ, ನಮ್ಮದು ಮರೆಯಾಗುತ್ತಾ ಹೋಯಿತು. ನಮ್ಮ ದೌರ್ಭಾಗ್ಯ !!! ತಮಿಳ್ನಾಡಿನಲ್ಲಿ ರುಕ್ಮಿಣೀದೇವಿ ಅರುಂಡೇಲ್, ಡಾ. ಇ. ಕೃಷ್ಣ ಅಯ್ಯರ್, ಕೇರಳದಲ್ಲಿ ವಲ್ಲತ್ತೋಳ್, ಉತ್ತರದಲ್ಲಿ ರವೀಂದ್ರನಾಥ್ ಠಾಗೋರ್‌ರಂತವರು ನಮ್ಮಲ್ಲಿಯೂ ಬಂದಿದ್ದರೆ ನಮಗೂ ಶಾಸ್ತ್ರೀಯ ಮಾನದಂಡಗಳು ಕಲೆಯ ಪ್ರಕಾರದಲ್ಲಿ ಲಭ್ಯವಾಗಿರುತ್ತಿತ್ತು ಮತ್ತು ನಾವು ಅವರಿಗಿಂತಲೂ ಹೆಚ್ಚೇ ಬೆಳೆಯುತ್ತಿದ್ದೆವು. ಒಂದುವೇಳೆ ನಮ್ಮ ನೃತ್ಯಪರಂಪರೆಯನ್ನು ಕಟ್ಟುನಿಟ್ಟಾಗಿ ಉಳಿಸುವಲ್ಲಿ ಶಿಸ್ತು, ಸಮನ್ವಯತೆ, ವಿನಿಮಯ ಬೆಳೆದಿದ್ದರೆ ಒಳ್ಳೆಯದಿತ್ತೇನೋ ಎಂದು ಯಾವಾಗಲೂ ನನ್ನನ್ನು ಕಾಡುತ್ತದೆ.

Leave a Reply

*

code