ಅಂಕಣಗಳು

Subscribe


 

‘ಪದ್ಯಪಾನ’ದೊಳಗಿನ ‘ಮಹಾನಟ’

Posted On: Friday, February 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ’ಪದ್ಯಪಾನ’ ಮಿತ್ರಸಮೂಹ, ಬೆಂಗಳೂರು

 badami_cave_inside_2

ಮಹಾನಟನ ಅತ್ಯದ್ಭುತ ರೂಪದ ಛಾಯಾನೋಟ ನಿಮಗೆ ಈಗಾಗಲೇ ಮುಖಪುಟದಲ್ಲೇ ದಕ್ಕಿದೆ. ನಟರಾಜನ ಕಲ್ಪನೆಗಿಂತಲೂ ಮುಂಚಿನದ್ದಾದ ಮಹಾನಟನ ಕಲ್ಪನೆ ಕರ್ನಾಟಕದ ಶಿಲ್ಪಪ್ರತಿಭಾಪಾಕಶಾಲೆಯ ಪಾಯಸ. ಈ ಪಾಯಸದ ಹನಿಹನಿಯನ್ನು ಕಾವ್ಯಸಂದರ್ಭದ ಮೂಲಕ ಸವಿಯುವ ಭಾಗ್ಯ ನಮಗೀಗ. ನರ್ತನಗೈವ ಶಿವನ ಕಲ್ಪನೆಯನ್ನು ಜಗತ್ತಿಗೆ ಕೊಟ್ಟ ನಮ್ಮ ನಾಡಿನ ಕಲ್ಪನಾಸಾಮರ್ಥ್ಯವನ್ನು ಕೊಂಡಾಡಿದ್ದಾರೆ ನಮ್ಮ ಕಾಲದ ಹಲವು ಪ್ರವರ್ಧಮಾನ ಕವಿಪುಂಗವರು. ಆ ಮೂಲಕ ಅಭಿಜಾತ ಕಾವ್ಯವನ್ನೂ, ಹೊಸದೆನಿಸುವ ಮಹಾಶಂಭುನಟನ ಅಥವಾ ಶಂಭುಮಹಾನಟನ ಎಂಬ ಛಂದಸ್ಸಿನ ವ್ಯಾಪ್ತಿಯ ವೃತ್ತನಿರ್ಮಿತಿಯನ್ನೂ, ಜೊತೆಗೆ ನರ್ತನಕ್ಕೆ ಒದಗಬಲ್ಲ ಸಾಹಿತ್ಯವನ್ನೂ ಪೋಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂಬುದು ನಮ್ಮ ಕಾಲದ ಹೆಮ್ಮೆಗಳಲ್ಲೊಂದು. ಒಂದರ್ಥದಲ್ಲಿ ಬಾದಾಮಿಯ ಈ ಮಹಾನಟನ ಮೇಲೆ ಬರೆಯಲಾದ ಮೊತ್ತಮೊದಲ ಕಾವ್ಯಗುಚ್ಛ ಇದೇ ಎನ್ನುವುದಾದರೆ ಅದರೊಳಗೆ ಎರಡು ಮಾತಿರಲಿಕ್ಕಿಲ್ಲ.

ಪದ್ಯಪಾನದ ಬಳಗ ಕೈಗೊಂಡ ಬದಾಮಿ- ಐಹೊಳೆಯ ಪ್ರವಾಸದ ಸಾರ್ಥಕ್ಯವೆಂಬಂತ ಪ್ರಯತ್ನವಿದು. ಫಲವಾಗಿ ಮಹಾನಟನ ಅದ್ಭುತರೂಪಸಮುದ್ರದೊಳಗೆ ಪದ್ಯಪಾನವೂ ಮತ್ತೇರಿ ಮಿಂದೆದ್ದಿದೆ. ಅವರ ಪೈಕಿ ಬಹುಮಂದಿ ಅವಧಾನದ ಪೃಚ್ಛಕರು, ಯುವ ಕವಿಸಾಹಸಿಗಳು ಎಂಬುದು ಗಮನಿಸಲ್ಪಡುವ ವಿಚಾರ.

ಕವಿಮನಸ್ಸಿನ ಸೃಷ್ಟಿಶೀಲತೆಯು ಪ್ರಸ್ತುತ ದಿನಮಾನಗಳ ಅರಿವಿನೊಂದಿಗೆ ಸಾಗುವ ಹೆಜ್ಜೆಯನ್ನು ಅರ್ಥೈಸಿಕೊಳ್ಳಲು ಇದೊಂದು ಒಳ್ಳೆಯ ನಿದರ್ಶನ. ಈ ಹಿನ್ನೆಲೆಯಲ್ಲಿ ಹಲವು ಕವಿಮನಸ್ಸುಗಳ ಕಮನೀಯವಾದ ಕಾವ್ಯಗುಛ್ಛವನ್ನು ನಿಮ್ಮ ಕೈಗಿಡಲು ನೂಪುರ ಭ್ರಮರಿ ಬಳಗ ಸಂತಸಪಡುತ್ತದೆ. ಬನ್ನಿ, ಅವರೆಲ್ಲರಿಗೂ ಪತ್ರಿಕೆಯ ಪರವಾಗಿ ಮತ್ತು ಸಹೃದಯಮನಪುರಸ್ಸರವಾದ ಅಭಿವಂದನೆಗಳನ್ನು ಆಸ್ವಾದನೆಯ ರೂಪದಲ್ಲಿ ಸಲ್ಲಿಸೋಣ. – ಸಂಪಾದಕಿ.

 

ಸಾಮಾನ್ಯವಾಗಿ ನರ್ತನ ಮಾಡುತ್ತಿರುವ ಶಿವನನ್ನು ನಟರಾಜ ಎಂದೇ ಸಂಬೋಧಿಸುವುದು ಪ್ರಚಲಿತ. ಆದ್ದರಿಂದಲೇ ಬಾದಾಮಿಯ ಶಿವನನ್ನು ನಟರಾಜ ಎಂದು ಉಲ್ಲೇಖಿಸಿ ಪದ್ಯರಚನೆಗೆ ಸ್ವಾಗತವಿತ್ತವರು ಬೆಂಗಳೂರಿನ ಕೆ.ಬಿ.ಎಸ್.ರಾಮಚಂದ್ರ.. ಅವರಿಗೆ ರಂಗನಾಥ ಪ್ರಸಾದ್ ಈ ಶಬ್ದತೊಂದರೆಯನ್ನು ಸರಿಮಾಡಿಕೊಳ್ಳಲು ಹೇಳಿರುವುದೂ ಪದ್ಯರೂಪದಲ್ಲೇ ಇದೆ.

ನಟರಾಜನಲ್ಲವೀ ಮನುರೂಪಿ ಶಿವ ತಾನು

ಸುಟಿಯಾದ ಮಾನಟನಿವನು|

ನಟರಾಜನೆಂಬಭಿಧಾನವರ್ವಾಚೀನ

ಭಟ ರಾಮಚಂದ್ರ ತಿದ್ದಯ್ಯೋ||

 

ಬೆಂಗಳೂರಿನ ರಂಗನಾಥ ಪ್ರಸಾದ್ ಅವರ ಪದ್ಯಕ್ಕೆ ಶತಾವಧಾನಿ ಡಾ. ಆರ್ ಗಣೇಶ್‌ರ ಪದ್ಯರೂಪದ ಪ್ರಶಂಸೆಯ ಪ್ರತ್ಯುತ್ತರ; ಜೊತೆಗೆ ಮಹಾನಟನ ಕುರಿತಾದ ಸುಮಧುರವೆನಿಸುವ ಒಂದು ವ್ಯಾಖ್ಯಾನ ಕೂಡಾ ಪದ್ಯದ ಗತ್ತಿನಲ್ಲೇ ಇರುವುದು ಇಲ್ಲಿನ ಸ್ವಾರಸ್ಯ.

ಅತಿಸುಂದರಂ ಪದ್ಯಮತಿಬಂಧುರಂ ಸದ್ಯ-

ಸ್ಸ್ತುತಿಪಾತ್ರಮಾಯ್ತಯ್ ಪ್ರಸಾದು!!

ಕ್ರತುರೂಪಿ ಶಿವನ ನರ್ತನರೂಪಿ ಭವನ ಅಂ-

ಕಿತಮೇ ಮಹಾನಟ, ಸ್ವಾದು!!!

 

ಅಷ್ಟೇ ಅಲ್ಲದೆ, ಶತಾವಧಾನಿ ಡಾ. ಆರ್. ಗಣೇಶರು ಮಹಾನಟನ ಮಾಹಾತ್ಮ್ಯವನ್ನೂ ಆತನ ಅಷ್ಟಾದಶಭುಜಗಳ ಹಾಸು-ಬೀಸನ್ನೂ ಗಮನದಲ್ಲಿರಿಸಿಕೊಂಡು ಶಂಭುನಟನವೃತ್ತಕ್ಕೆ ಮತ್ತೂ ಒಂದು ಗುರು ಹಾಗೂ ಮೂರು ಲಘುಗಳನ್ನು ಮೊದಲಿಗೇ ಸೇರಿಸಿ, ಒಟ್ಟು ಇದು ಮೂವತ್ತು ಅಕ್ಷರಗಳ ದಂಡಕಗತಿಯ ಒಂದು ಬಂಧವೆಂದು ಕರೆದು ಪದ್ಯರಚಿಸಿದ್ದಾರೆ.

ಮಹಾಭರತಲೀಲೆಗೆನುತುಂ ಭರತದೊಳ್ ಮಲೆವ ಸಾಗರದ ಪಾಂಗೆನೆ ರಸಾಗರನೆ ದಲ್

ವಿಹಾಸಮಿಹಿಕಾಮಹಿತಸತ್ತ್ವಗುಣಮಾತ್ರಮಿರೆ ತಾಮಸಕಲಾಪಮೆನುವಂಥ ಲಯಮಂ|

ವಿಹೀನಮಿರೆ ಕಾಲಮತಿದೀನಮಿರೆ ದೇಶಮುಪದೇಶಮೆನೆ ಮೋದಸುಧೆಯೊಂದೆ ನಲಿಯಲ್

ಮಹಾನಟನಿವಂ ಕರಣಮಾತ್ರಕರಣಂ ಸಗಿರಿಜಾಪ್ರಕರಣಂ ಕವಿಚಲುಕ್ಯವರಣಂ||

 

ಮಹನೀಯವಾದ ಭರತಮುನಿಪ್ರಣೀತ ನಾಟ್ಯಶಾಸ್ತ್ರದ ಲೀಲೆಯನ್ನು ತೋರ್ಪಡಿಸಬೇಕೆಂದು ಸಮುದ್ರದ ಭರತ ಹೇಗೆ ಉಕ್ಕೇರಿ ಬರುವುದೋ ಹಾಗೆ ರಸಾಲಯವಾಗಿರುವಂತಹ ಶಿವನ ನಗು ಬೆಳ್ಳಗಿರುತ್ತದೆ. (ಅವನ ಅಟ್ಟಹಾಸವೇ ರಾಶೀಕೃತವಾಗಿ ಹಿಮಾಲಯವಾಯಿತು ಎಂದು ಬಾಣಭಟ್ಟನೇ ಹೇಳುವುದಿದೆ. ಶಿವನ ಬೆಳ್ಳಗಿನ ಅಟ್ಟಹಾಸದಿಂದಲೇ ಪ್ರತಿದಿನವೂ ಹಿಮಾಲಯ ತನ್ನ ಗಾತ್ರ ಬೆಳೆಸಿಕೊಳ್ಳುತ್ತದೆ ಎಂದೂ ಕಾಳಿದಾಸ ಹೇಳಿದ್ದಾನೆ.) ಸತ್ತ್ವಗುಣದ ಲಕ್ಷಣವೇ ಬಿಳುಪು. ಅವನ ಹಿಮದಂತಹ ಬೆಳ್ಳಗಿನ ನಗೆಯಿಂದಲೇ ಹಿಮಾಲಯವನ್ನು ತುಂಬಿಕೊಡುವ ಶಿವನು ತಾಮಸವೆಂಬಂತ (ಕಪ್ಪು) ಲಯವನ್ನು ಹೇಗೆ ಮಾಡಬಲ್ಲ? ಇದು ಅಸಾಧ್ಯ. ಆದ್ದರಿಂದ ಅದು ಕೇವಲ ಲಯಲೀಲೆಯಲ್ಲ. ರಸಲೀಲೆ ! ಲಯವನ್ನು ಎಣಿಕೆ ಮಾಡುವ ಕಾಲವೂ ಆ ಸಂದರ್ಭಕ್ಕೆ ಇರುವುದಿಲ್ಲ. ದೇಶಕಾಲಗಳು ನಾಶವಾದರೇನೇ ಪ್ರಲಯ. ಮಹಾಕಾಲನಲ್ಲೇ ಕಾಲದ ಅಸ್ತಿತ್ತ್ವ. ಹಾಗಾಗಿ ಕಾಲ ದೀನವಾಯಿತು; ದೇಶವಿರುವಂತದ್ದು ಆತನ ನಾಟ್ಯದಲ್ಲಿ ತೋರಿಸುವ ಉಪದೇಶದಲ್ಲೊಂದೇ. ಆದ್ದರಿಂದ ಆನಂದ ಮಾತ್ರ ಇರುವಂತದ್ದು. ಆನಂದಸುಧೆ ನಲಿಯಬೇಕೆಂದರೆ ಕಾಲ-ದೇಶಗಳನ್ನು ಮರೆಯಬೇಕು. ಇಂತಹ ಮಹಾನಟನಿಗೆ ಕರಣಗಳೇ ಕರಣಗಳು(equipments). ಅವನು ಮಾಡುವಂತಹ ನಾಟ್ಯ ಸದಾ ಪಾರ್ವತಿಯನ್ನು ಸೇರಿಕೊಂಡಿರುವಂತದ್ದು. ಅದು ಕವಿಗಳ, ಚಲುಕ್ಯರಾಜರ ವರ್ಣನೆ, ಆಯ್ಕೆ ಎಂಬಲ್ಲಿ ಶಿವನ ನರ್ತನ ಮಹಾಕವಿಗಳ ಬೊಗಸೆಗೆ ಮಾತ್ರ ದೊರಕುವ ಅಂಶ ಎಂದು ಶ್ಲೇಷೆಯನ್ನೂ ಹೆಣೆಯಲಾಗಿದೆ.

 

ಇದಕ್ಕೆ ಬೆಂಗಳೂರಿನ ಚಂದ್ರಮೌಳಿಯವರು ಜಸನ ಭಾಜಸನ ಭಾಜಸ: ಜಗಣ,ಸಗಣ ಇತ್ಯಾದಿ..ಇದು ಜಗಣ, ಭಗಣ, ನಗಣಗಳು ಎರಡುಸಲ ಮತ್ತು ಸಗಣ ಮೂರುಸಲ ಬಂದಿರುವ ಚತುರ್ವಿಧಗಣಗಳ ದಶಗಣಯುಕ್ತ ತ್ರಿದಶಾಕ್ಷರ ವೃತ್ತ. ಇನ್ನು ದಂಡಕ ಸಾಮಾನ್ಯವಾಗಿ ತಗಣಗಳ ಅಸಂಖ್ಯಮಾಲೆಯಿಂದಲೇ ಪ್ರಸಿದ್ಧ. ಈ ವೃತ್ತವನ್ನು ಮಹಾಶಂಭುನಟನ ಅಥವಾ ಶಂಭುಮಹಾನಟನ ಎಂದು ಕರೆಯಬಹುದೇನೋ; ದಂಡಕವೆನ್ನಲಾರೆ ಎಂದು ಮಹಾನಟನ ಹೆಸರಿನಲ್ಲೇ ವೃತ್ತವೊಂದರ ನಿರ್ಮಿತಿಯನ್ನು ಮಾಡಿ ; ಅದೇ ವೃತ್ತದಲ್ಲಿ ಪ್ರತ್ಯುತ್ತರವನ್ನಿತ್ತಿದ್ದಾರೆ. ಮಹಾನಟನ ಲಯವೈಶಿಷ್ಟ್ಯದ ಆರ್ಭಟಗಳನ್ನು ವರ್ಣಿಸುತ್ತಾ; ರಾ.ಗಣೇಶರ ಪ್ರಯೋಗಗಳ ಬಗ್ಗೆ ಅಚ್ಚರಿಯ ಸಂತಸವನ್ನೂ ಸೂಚಿಸಿರುವ ಅವರಿಗೆ ಡಾ. ರಾ. ಗಣೇಶರಿಂದ (ರಾ.ಗ) ವೃತ್ತಗಳ ಸಾಲಿಗೆ ಒಳ್ಳೆಯ ನಾಮಕರಣ ಎಂದು ಪ್ರಶಂಸೆಯೂ ದಕ್ಕಿದೆ.

 

ಇದೇನುಲಯಮೇವಿಲಯಮೇ ನಿರತಸಾಗಿಹುದು ಮಾಯವಿದುಪಾಯವಿದು ಬೊಮ್ಮನದೆನಲ್

ಪುದಿರ್ದುಭವಭಾಂಡಗಳ ಸೃಷ್ಟಿಸಿಬಿಸುಟ್ಟನಟನಾರ್ಭಟವಿದೇನಿದು ಗಣೇಶಕವನಂ

ಅದೆಷ್ಟುನಿಡಿದೈತ್ರಿದಶದಕ್ಕರ ನವೀನವೆನಲೀ ಜಸನ ಭಾಜಸನ ಭಾಜಸಗಳಿಂ

ಮದೀಯಮತಿಗಂ ತಿಳಿಯದಂತಿದೆ ಪುರಾತನತೆಯೋ ಪೊಸತೊ’ರಾಗ’ರ ಪ್ರಯೋಗವೆನಲೇಂ

 

ಇದೇ ಬಗೆಯಲ್ಲಿ ಹಲವು ಪದ್ಯಪಾನಿಗಳು ತಮ್ಮ ಕವಿತ್ವವನ್ನು ಬೆಳೆಸುತ್ತಾ ಸಾಗಿದ್ದಾರೆ. ಅದರಲ್ಲಿ ರವೀಂದ್ರ ಹೊಳ್ಳ ಕೋಟೇಶ್ವರ ಅವರ ಪದ್ಯ ಹಾಸ್ಯರಸಾಸ್ಪದವಾಗಿದ್ದು; ಗಣೇಶ, ವಿಘ್ನನಿವಾರಕ, ಪದ್ಯಪಾನಕೇನಾನುಂ ಬಂದಿರ್ದಾದೊಡಂ, ಮನ್ನಿಸೆನ್ನಮ್ ಸ್ವಾಮಿ, ತಮಾಶೆಗಂ ಪೇಳ್ದೆನೈಸೆ ಎಂದು ಕುಟುಕು ಕ್ಷಮೆಯೂ ಇದೆ.

ಪಿತನೋ ನರ್ತನದಿಂ ಸು-

ಸ್ಥಿತಿಯೊಳ್ ಸಂರಕ್ಷಿಸಿರ್ಪನವನಾ ಕಾಯಂ!

ಸುತನೋ ಮೋದಕ ಮೋದಿದ

ಕತದಿಂ ಪೊಡೆಯ ಬೆಳೆಸಿರ್ಪುದೇನೀ ನ್ಯಾಯಂ

 

ಬೆಂಗಳೂರಿನ ಸೋಮಶೇಖರ್ ಅವರೂ ಕೂಡಾ ತಮ್ಮ ಪದ್ಯಗಳನ್ನು ಸೇರಿಸಿದ್ದು ಶಿವನ, ಶಿಲ್ಪಿಯ ಮಹಿಮೆಯನ್ನು ಹಾಡಿಹೊಗಳಿದ್ದಾರೆ.

ಮೆರಗಂ ಸೂಸುತ ದೇಶಕಾಲಗಳನುಂ ಪಾರ್ವಾ ಕಲೋತ್ತುಂಗವಂ

ಕರಣಂಗಳ್ ಭರತಾಖ್ಯಮಿರ್ದಪಗಳಂ ತೋರಲ್ಕಿದಂ ತಾಂ ಸಮೀ-

ಕರಣಂ ಗೈಯುತ ಭಂಗಿಗಳ್ ರಚಿಸಿದಾ ಒಂದೇ ಶಿಲಾಮೂರ್ತಿಯೊಳ್

ಹರನಾ ಲೀಲೆಯ ರೌದ್ರಶಾಂತತೆಯನಂ ಮೇಣಂಗಳಂ ಕೆತ್ತುವೊಲ್

 

ಸೋಮಶೇಖರ್ ಅವರ ಮತ್ತೊಂದು ಪದ್ಯದ ಕಲ್ಪನೆಯಂತೂ ಸ್ವಾರಸ್ಯಪೂರ್ಣವಾಗಿದ್ದು; ಮುನಿಸಿಕೊಂಡ ಪಾರ್ವತಿಯನ್ನು ರಮಿಸಲು ಶಿವನು ಕರಣಗಳನ್ನು ತೋರಿ ನರ್ತಿಸಲು; ತನಗೂ ನಾಟ್ಯ ಗೊತ್ತಿದೆ ಎಂದು ತೋರುವುದಕ್ಕೆ ಮುಗ್ಧನಾಗಿ ಗಣಪನೂ ಹೆಜ್ಜೆಯಿಟ್ಟ ಎಂದಿದ್ದಾರೆ.

ಮುನಿದಾ ಪಾರ್ವತಿಯಂ ತಾಂ

ಪಿನಾಕಿ ರಮಿಸಲ್ಕೆ ಕರಣಗಳನಂ ತೋರಲ್

ತನಗುಂ ಬರ್ಪುದು ನಾಟ್ಯವ-

ದೆನುತಲಿ ಹೆಜ್ಜೆಯನು ಗಣಪನಿಟ್ಟಂ ಮುಗ್ಧಂ

 

ಇದನ್ನು ಕೇಳಿದ (ಸ್ವತಃ ಅಷ್ಟಾವಧಾನಿಗಳಾದ) ಶಂಕರ್ ಸಂಸ್ಕೃತಪದ್ಯವೊಂದರ ಮೂಲಕ ಕೊಂಡಾಡಿದ್ದಾರೆ.

 

ಲಾಲಿತಗಂಗಾಪ್ರಸರಾ ಜಯತಿ ಪದನ್ಯಾಸಚತುರತಾ ಶಂಭೋ|

ಕವಿತಿಲಕ ಸೋಮಶೇಖರ ತವಾಪಿ ಲಾಲಿತಸರಸ್ವತೀಪ್ರಸರಾ||

 O Somashekhara, adornment of poets, Shiva’s dance is matched by your poesy.( पदन्यासचतुरता could mean either dance or poesy) The former allows Ganga to flow unbridled and the latter does the same to Sarasvathi !

 

ಜೊತೆಗೆ ತಮ್ಮ ಒಂದು ಸಂಸ್ಕೃತ ಪದ್ಯವನ್ನೂ ಶಂಕರ್ ಇಲ್ಲಿ ಹಂಚಿಕೊಂಡಿದ್ದಾರೆ.

 ಶ್ರಾನ್ತಾಸ್ಮಿ ನೈನಮನುವರ್ತಿತುಮಸ್ಮಿ ಪಟ್ವೀ

ತದ್ಗಚ್ಛ ತಾತಮಿಭವಕ್ತ್ರ ವದೋಪರನ್ತುಮ್

ಗೌರ್ಯಾ ವಚಸ್ತದಧಿಗಮ್ಯ ಸುತಾನ್ಮಹೇಶೋ

ನಾಟ್ಯಾರ್ಧಸಂಹೃತನಿಜಭ್ರಮಿರಸ್ತು ಭೂತ್ಯೇ

“I am tired and cannot keep pace with him. So, go Ganesha and tell your father to slow down” – Let Shiva who, hearing these words of Gowri from the mouth of his son, put a full stop to his fast-paced revolutions in the middle of his dance, bring us prosperity.

 

ಇದನ್ನು ಗಮನಿಸಿದ ಶತಾವಧಾನಿ ರಾ. ಗಣೇಶರು ಮತ್ತೊಂದು ಪದ್ಯದ ಮೂಲಕ ಶಂಕರರ ಪ್ರತಿಭೆಯನ್ನು ನರ್ತನಹಾದಿಯ ಅನ್ವರ್ಥರೂಪದಲ್ಲಿ ಕೊಂಡಾಡಿದ್ದಾರೆ.

 ಸದೃಶಂ ಕಿಲ ಶಂಕರಸ್ಯ ವಾಣೀ

ಪ್ರಸರಂತೀ ಶ್ರುತಿಹಾರಿಣೀ ಚಕಾಸ್ತಿ

ಪರಮತ್ರ ವಿಚಿತ್ರಮೇವಮಾಸ್ತೇ

ನಟನತ್ರೋಟನಕೋ ನು ಶಂಕರೋsಸೌ

ಶಂಕರನ ವಾಣೀ ಶ್ರುತಿಹಾರಿಣಿಯಾಗಿ ಒಳ್ಳೆಯ ಪದಗಳಿಂದ ಇಂಪಾಗಿ ಚೆನ್ನಾಗಿದೆ. ಆದರೆ ಇಲ್ಲೊಂದು ವಿಚಿತ್ರವಿದೆ. ಶಿವನ ನೃತ್ಯವನ್ನು ಶಿವನ ಹೆಸರಿನ ಶಂಕರನೇ ನಿಲ್ಲಿಸಿಬಿಡುತ್ತಿರುವನಲ್ಲಾ !

     

ಇದಕ್ಕೆ ಶಂಕರ್ ಅವರ ಪ್ರತಿಪದ್ಯ ಸುಮನೋಹರವಾಗಿದೆ.

 ತಾದೃಶೀ ಕಿಲ ಗಿರೀನ್ದ್ರಸುತಾಯಾಂ

ಪ್ರೀತಿರಿನ್ದುಶಕಲಾಭರಣಸ್ಯ |

ತತ್ಕೃತೇ ಸ ನಿಜತಾಣ್ಡವಲೀಲಾಂ

ತ್ರೋಟಯನ್ನಪಿ ನ ಯಾತಿ ವಿಷಾದಮ್||

ಪಾರ್ವತಿಯ ಮೇಲಿನ ಪ್ರೀತಿ ಶಿವನಿಗಿರುವಂಥದ್ದು ಹೇಗಿದೆಯೆಂದರೆ ಶ್ರಮವೆಂದು ಚಂದ್ರನನ್ನೇ ತಲೆಯ ಮೇಲಿಟ್ಟುಕೊಂಡವನು. ಹೀಗಿರುವಾಗ ಪಾರ್ವತಿಗಾಗಿ ತಾಂಡವವನ್ನೂ ನಿಲ್ಲಿಸಬಲ್ಲ. ಹಾಗಾಗಿ ಅದರಲ್ಲೇನು ಶಿವನಿಗೆ ವಿಷಾದವಿಲ್ಲ !

 

ಮಹಾನಟನ ಶಿಲ್ಪದಿಂದ ೮೧ ಮುದ್ರೆಗಳನ್ನು ಕಲಿಯಬಹುದು ಎಂಬುದು ಗಾಯತ್ರಿ ಇಂದಾವರರ ಅಭಿಮತ. ಗಾಯತ್ರಿಯವರ ಪದ್ಯ ಮಹಾನಟನ ಹಸ್ತಾಭಿನಯ ಪ್ರಾವೀಣ್ಯತೆಯನ್ನು ನಿರೂಪಿಸಿದೆ.

 ಗುರುವೀತ ಹಸ್ತಾಭಿನಯಕದೇಕಾಂತದಲಿ

ಹಿರಿಮೆಯ ಮಹಾನಟನು ಬಾದಾಮಿಯಲ್

ಕರಣಗಳ ಲಾಸ್ಯವನು ತೋರಿಪನು ನಟರಾಜ

ನೆರೆದಿರುವ ಸಖಿಯರೊಡೆ ಮೆರೆದಿಹ ಚಿದಂಬರದವನ್

 

ಯು‌ಎಸ್‌ಎನಲ್ಲಿ ನೆಲೆಸಿರುವ ಜಿ. ವೆಂಕಟೇಶ್‌ಮೂರ್ತಿ (ಜೀವೆಂ) ಅವರ ಪದ್ಯಪ್ರಶ್ನೆಯಂತೂ ಬಹಳಷ್ಟು ಸೊಗಸಾಗಿದ್ದು; ಎರಡು ಕಾಲುಗಳಲ್ಲಿ ತಾಂಡವವಾಡುವ ನಿನಗೆ ಕೈಗಳೇಕೆ ಹಲವು ಎಂಬಲ್ಲಿ ಮುಗ್ಧಮನೋಹರತೆ ಬಲುಚೆನ್ನಾಗಿದೆ.

ವಾತಾಪಿಯ ಮಾನಟನೇ

ಮಾತೀ ಕಂದನದುಪೇಕ್ಷೆ ಮಾಡದೆ ಪೇಳೈ;

ನೀ ತಾಂಡವವೆರಡೇಕಾ

ಲೊಳ್ ತೋರುವೆ ನಿನಗೆಯಷ್ಟು ಕೈಗಳದೇಕೈ?

 

ಈ ಪದ್ಯದಲ್ಲೇ ಒಂದಷ್ಟು ಬದಲಾವಣೆಗಳೊಂದಿಗೆ ಹಳಗನ್ನಡದ ಬಿಗಿಯನ್ನಿತ್ತ ರಂಗನಾಥ ಪ್ರಸಾದ್ ಶಿವನಿಗೆ ಪ್ರಶ್ನೆಯನ್ನೆಳೆಸುವ ಪರಿಪಾಠವನ್ನು ಮುಂದುವರೆಸಿದ್ದಾರೆ.

ವಾತಾಪಿಯ ಮಾನಟ ಕೇಳ್

ಮಾತಿದು ತರಳನದೆನುತ್ತುಪೇಕ್ಷಿಸದೆಲೆ ನೀಂ|

ಆ ತಾಂಡವಕೀರ್ಕಾಲ್ಗಳ

ಘಾತವು ಸಾಕೆಂದೊಡೇಕೆ ಬಹುಬಾಹುಗಳೈ||

 

ಇವರೀರ್ವರ (ಜೀವೆಂ, ಪ್ರಸಾದ್) ನಡುವಿನ ಪದ್ಯಚರ್ಚೆಯನ್ನು ಹುರಿದುಂಬಿಸಿದ ರವೀಂದ್ರ ಹೊಳ್ಳರಂತೂ ಕವಿಗಳ ಮತ್ತು ಶಿಲ್ಪದ ಕಲಾಕಾರನ ಚತುರತೆಯನ್ನು ಒಟ್ಟಿಗೇ ಬಣ್ಣಿಸಿ ಪದ್ಯಪ್ರಶ್ನೆಗಳಿಗೆ ಉತ್ತರವನ್ನೂ ದಯಪಾಲಿಸಿದ್ದಾರೆ. ಇದೇನಿದ್ದರೂ ಕಲಾಕಾರನ ಚಾತುರಿ. ಒಂದೇ canvasನಲ್ಲಿ, ಹಲವು ಹಸ್ತವಿನಿಯೋಗಗಳನ್ನು ಸೆರೆ ಹಿಡಿದಿರುವುದು ಒಂದು ಅದ್ಭುತ ತಂತ್ರವೆನಿಸುತ್ತದೆ. ಶಿಲ್ಪವೆಂಬ ಈ ಕಲಾಮಾಧ್ಯಮದಲ್ಲಿ ನಿಶ್ಚಲತೆಯು ಒಂದು ಮಿತಿಯಾಗಿದ್ದರೂ, ಕಲಾಕಾರ ಆ ಮಿತಿಯಲ್ಲೇ ಒಂದು motion film ಅನ್ನು ಸೆರೆಹಿಡಿದಿದ್ದಾನೋ (y overlapping images) ಎನಿಸುತ್ತಿದೆ ಎಂಬ ಅಭಿಮತ ಅವರದ್ದು.

 ಕಲೆಯಾರಾಧಕನ ಬಯಕೆ

ಗೊಲಿದುಂ ಕನಸೊಳವತೋರ್ದ ಹಸ್ತಸಹಸ್ರಂ

ಚಲದಿಂ ಪಿಡಿದುಂ ಮನದೊಳ್

ಗೆಲದಿಂ ಕೊರೆದಿರ್ದುದೇ ಸಕಾರಣಮಕ್ಕುಂ

 

ಈ ಉತ್ತರವನ್ನು ಶ್ಲಾಘಿಸುವಂತೆ ಜೀವೆಂ ಅವರ ಮತ್ತೊಂದು ಪದ್ಯವು ಮತ್ತಷ್ಟು ವಿಸ್ತರಣೆ ಪಡೆದಿದ್ದು; ನಿನ್ನಂತೆ ಹದಿನೆಂಟು ಭುಜವಿರದ ನನ್ನಲ್ಲಿ ಮುಗಿದ ಕೈಯ್ಯೇ ಗತಿ ಎಂದು ಬಿನ್ನವಿಸಿದ್ದಾರೆ. ಈ ಪದ್ಯದ ಅರ್ಥಸ್ವಾರಸ್ಯ ಮನನೀಯವಾಗಿದೆ ಎಂಬ ಪ್ರಶಂಸೆ ಡಾ. ರಾ. ಗಣೇಶರದ್ದು.

ಸುಯೋಧನನುಮಾಪತಿಯೆ ಆಯುಧಗಳಂ ಕೊಡಲಿ ಕೈಯಲಗು ನೀಂ ಪಿಡಿದಿರಲ್

ಲಯಾಧ್ವರಮನಾದರಿಸಿ ತಾಂಡವದ ಲೀಲೆಯನು ತೋಷದಲಿ ತೋರುವೆ; ಹರಾ

ಪ್ರಯೋಗದೊಳು ಹಾವದಲಿ ಕೈಗಳನು ಬೀಸುವೊಡೆ ನನ್ನ ಕಡೆ ನೋಟವಿರಿಸಯ್

ದಯಾಳು; ಪದಿನೆಂಟು ಭುಜವಿಲ್ಲವೆನಗೀ ಮುಗಿದ ಕೈಯೆ ಗತಿ ನೀಗದಿರಿದಂ

 

ಬೆಂಗಳೂರಿನವರಾದ ವಿ. ಆರ್. ಭಟ್ ಅವರ ಪದ್ಯಪ್ರಯತ್ನ ಜನಪದ (ಅಂಶ ಛಂದಸ್ಸು) ಶೈಲಿಯಲ್ಲಿದ್ದು ಸೊಗಸಾಗಿ ಮೂಡಿಬಂದಿದೆ. ಆದರೂ ನಟರಾಜನೆಂದೇ ಇಲ್ಲಿ ಪ್ರಸ್ತಾಪಿಸಲಾಗಿರುವುದನ್ನು ಗಮನಿಸಿದರೆ ಶಬ್ದಪ್ರಚಲಿತತೆಯನ್ನು ಅರ್ಥಮಾಡಿಕೊಳ್ಳಬಹುದು.

ನಟನೆಗೆ ಗುರುವಂತೆ ಸಟಸಟನೇ ಕುಣಿವ್ಯಂತೆ

ಕಟಿಬದ್ಧನಾಗಿ ಆ ಕಲೆಯೊಳಗೆ |

ಪಟವ ವಿಗ್ರಹವ ಸಿಂಗರಿಸಿ ನಮಿಸುವರಯ್ಯ

ನಟರಾಜ ಕರುಣಿಸೋ ಕೌಶಲವ ||

 

ಶ್ರೀನಿವಾಸ್ ಪಿ. ಎಸ್. ಅವರ ರಚನೆಯೂ ಶಿವನ ನರ್ತನವನ್ನು ವರ್ಣಿಸಿದ್ದು; ರವೀಂದ್ರ ಕೆ. ಅವರ ಸ್ಪರ್ಶದಲ್ಲಿ ಛಂದಸ್ಸಿನ ತೊಂದರೆಗಳನ್ನು ನಿವಾರಿಸಿಕೊಂಡಿದೆ.

ಕಾಲೆತ್ತಿ ಕೈ ಚಾಚಿ ತಲೆಗೂದಲನು ಹರಡಿ

ಮಲೆಮೇಲೆ ರೋಷದಲಿ ಕುಣಿಯುತಿರಲೀಶ್ವರಂ

ಗಣ-ನಂದಿ ನೂರಿರಲಿ ಗಣಪನೂ ಜೊತೆಗಿರಲಿ

ಹಣೆಬಿರಿದರೆಲ್ಲವೂ ಚಣದಲೇ ನಶ್ವರ

 

ಕಾರ್ತಿಕ್ ಕಾಮಣ್ಣ ಅವರ ಪದ್ಯಕ್ಕೆ ಸೊಗಸಾದ ಪದ್ಯ ಎಂಬ ಪ್ರಶಂಸೆ ಸ್ವತಃ ಆರ್. ಗಣೇಶರಿಂದಲೇ ಯುಕ್ತವಾಗಿದೆ. ಅಡವು ಶಬ್ದದ ಬಳಕೆಯ ಹಿನ್ನೆಲೆಯಲ್ಲಿ ನೋಡಿದರೆ ಪ್ರಸ್ತುತ ಭರತನಾಟ್ಯದ ಚಲನೆಗಳ ಪ್ರೇರಣೆ ಕವಿಗಿರುವಂತಿದೆ.

 ಬಡಿದಿರಲ್ ಮದ್ದಲೆಯ

ನುಡಿಸುತಲಿ ಡಮರುಗವ

ಎಡಪಾದ ಪಿಡಿದೆತ್ತಿ ಹರ ಕುಣಿಯಲು

ಅಡವುಗಳ ಮೆಚ್ಚುತಲಿ

ಪಡುತಿಹಳ್ ಶಿವೆ ಸೊಗವ

ನಡೆಯಲಿಹ ನೈಪುಣ್ಯವಾನಂದಿಸಿ!

 

 

ಇಂಥ ಪದ್ಯ ಪ್ರಶ್ನೆ- ಪದ್ಯ ಪ್ರತ್ಯುತ್ತರಗಳ ನಡುವಿನ ಸ್ವಾರಸ್ಯಮಯ ಲೋಕ ಅದೆಷ್ಟು ಸೊಗಸಲ್ಲವೇ !!!

ಪದ್ಯದ ಮತ್ತಿನಲ್ಲಿ ಮದ್ಯಕಿಂತಲೂ ಹೆಚ್ಚಿನ ಮತ್ತಿದೆ ಎಂಬುದರಲ್ಲಿ ಅತಿಶಯವೇ ಇಲ್ಲ ಬಿಡಿ.. ಹಾಗಾದರೆ ನೀವೂ ಪದ್ಯಪಾನಿಗಳಾಗುತ್ತೀರೇನು?

ಹಾಗಾದರೆ ಮಾಹಿತಿಗೆ ಪದ್ಯಪಾನ ವೆಬ್‌ಸೈಟನ್ನು ಗಮನಿಸಿರಿ. www.padyapaana.com 

Leave a Reply

*

code