ಅಂಕಣಗಳು

Subscribe


 

ವಿಶೇಷ ಸಂಪಾದಕೀಯ ( ಜನವರಿ-ಫೆಬ್ರವರಿ 2013)

Posted On: Friday, February 15th, 2013
1 Star2 Stars3 Stars4 Stars5 Stars (No Ratings Yet)
Loading...

Author: Editor/ಸಂಪಾದಕಿ

ಮತ್ತೊಂದು ಸಡಗರ ಅರಸಿ ಬಂದಿತು. ಕಳೆದ ವರುಷದ ಸಂಶೋಧನ ವಿಚಾರಸಂಕಿರಣವು ಸಮ್ಮೇಳನದ ರೂಪ ಪಡೆದು; ಅಯಾಚಿತವಾಗಿ ಅಖಿಲ ಭಾರತಮಟ್ಟಕ್ಕೇ ವಿಸ್ತರಿಸಿದ್ದು; ಭಾರತದಾಚೆಗೂ ಇರುವ ನೃತ್ಯ ಸಂಶೋಧಕರನ್ನು ಸೆಳೆದದ್ದು; ನೃತ್ಯಕ್ಷೇತ್ರಕ್ಕೆ ಅರ್ಪಣೆಯಾಗಲಿರುವ ಹೊಸ ಸಂಶೋಧನೆಗಳು ಪ್ರಬಂಧಗಳು ಮತ್ತು ಅದರೊಂದಿಗಿನ ಪ್ರಾತ್ಯಕ್ಷಿಕೆ, ಪ್ರದರ್ಶನ, ನೃತ್ಯಪ್ರದರ್ಶನದ ಸ್ಪರ್ಧೆಗಳಿಂದಾಚೆಗೂ ಚಿಂತಿಸಲು ಅನುಕೂಲಿಸಿ ನಿತ್ಯಸತ್ಯಗಳನ್ನು ಮತ್ತೊಮ್ಮೆ ಮನಗಾಣುವಂತೆ ಮಾಡಿದ ಭಾಷಣ-ರಸಪ್ರಶ್ನದ ಸ್ಫುರಣ-ಸರಣ, ಭಾರತದ ಮೊದಲ ನೃತ್ಯ ಸಂಶೋಧನ ನಿಯತಕಾಲಿಕೆಯೆಂಬ ಹೆಗ್ಗಳಿಕೆಯ ನೂಪುರಾಗಮದ ಅನಾವರಣ, ಕರ್ನಾಟಕದ ಹಲವು ಪ್ರಾಂತಗಳ ನೃತ್ಯಕಲಾವಿದರು/ಚಿಂತಕರ ಸಂಶೋಧನಾಭಿಪ್ರಾಯದ ಸಮೀಕ್ಷೆಯ ಲೋಕಾರ್ಪಣ,..ಹೀಗೆ ಒಂದಲ್ಲ; ಎರಡಲ್ಲ; ಹಲವು ನಿಟ್ಟಿನಲ್ಲಿ ಇದು ನೂಪುರ ಭ್ರಮರಿಗೂ, ಅದರೊಂದಿಗಿನ ಸಮಸ್ತ ಬಳಗಕ್ಕೂ ಮತ್ತು ಒಟ್ಟಾರೆ ನೃತ್ಯಚಿಂತನೆಯ ಹಾದಿಗೂ ಸೀಮೋಲ್ಲಂಘನದ ಸಂಭ್ರಮ. ಒಟ್ಟಿನಲ್ಲಿ ವರುಷದಿಂದ ವರುಷಕ್ಕೆ ಬೆಳವಣಿಗೆಯ ಓಘವನ್ನು ಪ್ರಗತಿಪಥದಲ್ಲಿ ಕಾಣುವಾಗ ನಮಗೊಂದು ಗಮ್ಯ ಕಾಯುತ್ತಲಿದೆ ಎಂಬ ಅನಿಸಿಕೆ ದೃಢವಾಗುತ್ತಲಿದೆ.

ಇದೆಲ್ಲವೂ ಅಷ್ಟು ಸುಲಭಸಾಧ್ಯವಾದುದಲ್ಲ ಎಂಬುದನ್ನು ಪ್ರತಿ ವರುಷದ ವಿಶೇಷ ಸಂಚಿಕೆಯಲ್ಲಿ ಹೇಳುತ್ತಲೇ ಬಂದಿರುವುದನ್ನು ಮತ್ತೊಮ್ಮೆ ಪುನರುಕ್ತಿಸುವುದು ಇಲ್ಲಿ ಉಚಿತವಲ್ಲ. ಏಕೆಂದರೆ ಕನಸುಗಳು, ಯೋಜನೆಗಳು ಬೆಳೆದಷ್ಟು ಅದಕ್ಕೆ ಸಮಾನಾಂತರವಾಗಿ ಸವಾಲುಗಳು ಎದುರಾಗುತ್ತಲೇ ಹೋಗುತ್ತವೆ. ಅವಸರ, ಹುಂಬತನಗಳಿದ್ದರೆ ಸಾಗುವ ವೇಗಕ್ಕೆ ಸಲಿಲಸಂಚಾರ ದುರ್ಲಭವಾಗುತ್ತದೆ. ಜೊತೆಗೆ ಸಾಕಷ್ಟು ಅಡ್ಡಿ, ಆತಂಕ, ಕೊರತೆ, ಸಂದೇಹ, ತೊಂದರೆ, ದ್ರೋಹಚಿಂತನಗಳು ಪ್ರತಿವರುಷವೂ ನಾಮುಂದು ತಾಮುಂದು ಎಂದೇ ಧಾಂಗುಡಿಯಿಟ್ಟು ತೊಡರುಗಾಲು ಹಾಕುತ್ತವೆ. ವೈಯಕ್ತಿಕ ಅವಕಾಶಗಳನ್ನು ಆಳುತ್ತವೆ. ಕಾರ್ಯಗಳು ಇನ್ನೇನು ಕಾರ್ಯಗತವಾಗುವುದೇನೋ ಎಂಬ ಲಕ್ಷಣದ ಬೆನ್ನಿಗೇ ಭೂತಾಕಾರದ ಬಸವಳಿಯುವಿಕೆ ಬಲೆ ಬೀಸುತ್ತಿರುತ್ತದೆ. ನೃತ್ಯದ ಬೆಂಬಿಡದ ಅಪಸವ್ಯದ ಸಂಕಲೆಗಳ ಕರಿನೆರಳು ಮತ್ತಷ್ಟು ದಟ್ಟವಾಗಿ ಅಣಕಿಸುವಾಗೆಲ್ಲಾ ವ್ಯರ್ಥಪ್ರಯತ್ನವಾಗಬಹುದಾದ ವ್ಯಂಗ್ಯ ಕುಟುಕುತ್ತಿರುತ್ತದೆ. ಹಾರ್ದಿಕ ಶ್ರೀಮಂತಿಕೆಯೇನಿದ್ದರೂ ಆರ್ಥಿಕ ಬಡತನದ ಎದುರಿಗೆ ಮಂಡಿಯೂರಬೇಕಾದ ಕಾಲದಲ್ಲಿ ಬಳುವಳಿ ಬದಿಗಿರಲಿ; ಸಾರ್ಥಕ್ಯವಾಗಬಹುದಾದ ಭಾವನೆಗಳೇ ಹೆಪ್ಪುಗಟ್ಟ್ಟುವ ಸಮಯವದು. ಆದಾಗ್ಯೂ ಮುಂದಿಟ್ಟಿರುವ ನಡೆಯ ನಸುಕು ಹರಿದು ನೇಸರನನ್ನು ಕಾಣುವ ಧ್ಯೇಯದಲ್ಲಿ ಭಿನ್ನತೆಗಳಿಂದಾಚೆಗೂ ಸಮಷ್ಟಿಯ ಆತ್ಮತುಷ್ಟಿಯನ್ನರಸಿ ಪುಷ್ಟಗೊಳ್ಳುವುದು ನಮಗೆ ಅದೇಕೋ ದಿವ್ಯಸನ್ನಿಧಾನ. ಇಂತಹ ಬದುಕಿನ ಬದಲಾವಣೆ ಎಷ್ಟರಮಟ್ಟಿಗೆ ವಿಹಿತ ಎಂದು ನಮ್ಮನ್ನೇ ನಾವು ಕೇಳಿಕೊಂಡಾಗಲೂ ಬದಲಾವಣೆಯೆನ್ನುವುದನ್ನೇ ಕೊಡುಗೆಯಾಗಿ ಕಂಡುಕೊಂಬ ಹಟವೇ ಆಪ್ಯಾಯಮಾನ. ತಪ್ಪಿದ ಹೆಜ್ಜೆಗಳನ್ನು ಮತ್ತಷ್ಟು ಎಚ್ಚರಿಕೆಯ ಬಿಗುವಿನೊಂದಿಗೆ ಸರಿಪಡಿಸಿಕೊಳ್ಳಬೇಕಾದ ಜಾಣ್ಮೆಯ ನಡಿಗೆ ಮತ್ತಷ್ಟು ಅನೂಚಾನ. ಜೀವನಾನುಸಂಧಾನವೇ ಧ್ಯಾನವಾದ ಮನೋವಿಧಾನ. ಒಟ್ಟಿನಲ್ಲಿ ಬದಲಾವಣೆಯ ಬಾಳಿನೊಗ್ಗರಣೆ ಜೀವನಪಾಕವನ್ನೂ ಪಕ್ವವಾಗಿಸುವ ಸಿಹಿಹೂರಣವೇ ಆಗುತ್ತಿರುವುದು ದೈವಚಿತ್ತ ಕಾರ್ಯಕಾರಣ. ಹೀಗೆ, ಪ್ರತಿಯೊಂದರ ಆದಿಗೂ ನಮ್ಮ ಶ್ರಮ ವಿಶ್ರಮವಾಗದೆ ಆವರಣವನ್ನು ಹಿಗ್ಗಿಸುತ್ತಾ ಸವಾಲಿಗೆ ಸವಾಲೆಂಬಂತೆ ಮುನ್ನುಗ್ಗುತ್ತಿರುವುದು ನಮ್ಮ ಬದುಕಿನ ಚಿಂತನೆಗಳನ್ನು, ಕಸುವುಗಳನ್ನು ಗಟ್ಟಿಗೊಳಿಸುತ್ತಲಿದೆ ಎಂಬಲ್ಲಿಗೆ ನಮ್ಮೊಳಗಿನ ಚೈತನ್ಯಕ್ಕೆ ನಾವು ಅನಂತ ಆಭಾರಿಗಳೇ ಸರಿ.

ಅಷ್ಟಕ್ಕೂ ಬದಲಾವಣೆಯ ಹರಿಕಾರರೆನಿಸಿಕೊಳ್ಳುವುದಕ್ಕಾಗಲೀ, ಶಕೆ ಬರೆಯುವುದಕ್ಕಾಗಲೀ ನಾವು ಹೊರಟವರಲ್ಲ ಎಂಬುದು ಯತಾರ್ಥವಾದರೂ; ಒಂದಾನೊಂದು ಕಾಲದಿಂದ ಕಾಡಿದ ಕಳವಳಗಳು, ತಳಮಳಗಳು ಮತ್ತೊಮ್ಮೆ ಮರುಕಳಿಸದೆ, ಮಸಳಿಸದಿರಲಿ ಎಂಬ ಆಶಯವಂತೂ ಅವ್ಯಾಹತವಾಗಿ ಹೆಜ್ಜೆಗಳನ್ನು ಬದಲಾವಣೆಯ ಬೆಳಕಿಗೆ ಪ್ರೇರೇಪಿಸುತ್ತಲಿದೆ. ಜೊತೆಗೆ ಮತ್ತೊಂದಷ್ಟು ಸಮಾನಹೃದಯೀ ಮಂದಿಯ ಮನಮಂದಿರಗಳ ಆಶೋತ್ತರಗಳನ್ನು ಆಧರಿಸಿ ನಿಲ್ಲುವ ಧನ್ಯತೆಯನ್ನು ಆವಾಹಿಸಿಕೊಳ್ಳುವುದಂತೂ ಇನ್ನೂ ಚೆಂದವೇ ಸೈ. ಆ ಮೂಲಕ ಬದುಕಿನ ಬರೆವಣಿಗೆಯಲ್ಲಿ ಬವಣೆಗಳನ್ನು ಬದಿಗೆ ಸರಿಸಿ ನಿಂದು ಬಲ್ಮೆ, ಬಿಸಿಚಿಲುಮೆ, ಭವನೊಲುಮೆಯನ್ನೇ ಅಕ್ಷರಮಾಲೆಗಳಾಗಿ ಕಟೆಯುವ ಚಟ ದಿಟವಾಗಿಯೂ ನಮ್ಮ ಹಟವೇ ಆಗುತ್ತಲಿದೆ. ತೇಯ್ದುಕೊಂಡರೂ ಪರಿಮಳವಾಗುವ ಸೊಗಸು ನಿಜಮಂತ್ರವಾಗಿದೆ.

ಹಾಗೆಂದು ಸಂಘಟನೆ-ವಿಘಟನೆಗಳ ಕವಲುಹಾದಿಯ ನಡುವೆಯೂ ಕೈಬೀಸಿ ಕರೆಯುತ್ತಾ; ಕೈ ಜೋಡಿಸಿದವರನ್ನು ಜೊತೆಗೊಯ್ಯುವ ಪಥಪ್ರಥಮರಾಗುವಾಗಲೇ ಬೆಣ್ಣೆ ಮೆತ್ತಿ ಎಣ್ಣೆ ತಿಕ್ಕಿಹೋಗುವವರನ್ನು ಗಮನಿಸದೇ ಇದ್ದರೆ ಆದೀತೆ? ಸಂಘಟಿಸುವಿಕೆಯ ಬಲ ವಿಚ್ಛಿದ್ರವಾಗಿಸುವ ಆತಂಕದ ಅರಿಗಳೆದುರಾದರೆ ಅಟ್ಟಿ ಕಟ್ಟುವ ಚತುರತೆಯನ್ನು ಜಾಣಿಸದಿದ್ದರೆ ಜೊಳ್ಳು ಉದುರೀತೇ? ಮೋದದ ಮಾದರಿಯನ್ನರಿಯದೆ ಬೋಧೆಯಿಲ್ಲದಂತೆ ಮಾಡಿದ ಬಾಲಾಪರಾಧಗಳೂ ಸಹ ಪ್ರಮಾದಗಳೆನಿಸದೆ ಬಂದೀಖಾನೆಯೊಳಗೆ ಹೊಗುತ್ತದೆ ಎಂಬುದಂತೂ ಬಲ್ಲವರಿಗೆ ವೇದ್ಯ. ಆದರೆ ಮುಂಗೈಬಲವನ್ನಷ್ಟೇ ಕೊಟ್ಟು ದೇಶಾವರಿ ನಗೆ ಬೀರುವವರಿದ್ದರೆ ನಾವೆಂದಿಗೂ ಅವರನ್ನು ಬಳಸಿನಿಲ್ಲಲಾರೆವು. ಪ್ರಾಮಾಣಿಕತೆಯ ಪ್ರಮಾಣವಿಲ್ಲದಿರೆ ಪರಿತಾಪಗಳಿಗೆ ಬೆಲೆಯೇ ಇಲ್ಲ ಎಂದು ನಂಬುವವರು ನಾವು. ಕೇಳ್ಮೆಯ ಸಹನೆಯಿಲ್ಲದೆ ಕಣ್ಕಟ್ಟು ಮಾಡುವವರಿಗೆ ನಮ್ಮ ಕಿವಿಯೂ ಕಾಯ್ದೆರೆಯುವುದಿಲ್ಲ. ಪ್ರಯೋಜನೈಕದೃಷ್ಟಿಯನ್ನೇ ನೆಚ್ಚಿದವರಿಗೆ ಮುಲಾಜಿನ ಸಲಾಮುಗಳಿಲ್ಲ. ಔದಾರ್ಯವಿಲ್ಲದಿರೆ ಆದರವೇ ಇಲ್ಲ. ಅವರವರ ಭಾವಕ್ಕೆ, ಅವರವರ ಭಕುತಿಗೆ ದೇವರೊಲಿಯುವನು ಎಂಬುದು ಎಷ್ಟು ನಿಜವೋ ಅವರವರ ತೋಷಕ್ಕೆ, ಅವರವರ ಕೋಶ ಹಿಗ್ಗುತ್ತದೆ; ಹಿಸುಕಲ್ಪಡುತ್ತದೆ ಎಂಬುದೂ ಅಷ್ಟೇ ನಿಜ. ತಾಳ್ಮೆ ಎಂದಿಗೂ ದೌರ್ಬಲ್ಯವಲ್ಲ ಎಂಬುದು ಅರಿವಾದರೆ ಲೋಕಕ್ಷೇಮ. ಮಿಂಚಿದ ಕಾಲ ಚಿಂತಿಸಿದರೆ ದಕ್ಕೀತೇ ಎಂಬ ಪೂರ್ವಸೂರಿಗಳ ನಾಣ್ಣುಡಿ ಆಲೋಚನಾತಂತ್ರವಾದರೆ ಅಂಕೆ-ಶಂಕೆಗಳೆಲ್ಲವೂ ಶಮ.

ಆದರ್ಶದ ಬಡಾಯಿ ಎಷ್ಟೇ ಕೊಚ್ಚಿದರೂ ಕೆಲವೊಂದು ರಾಜಿಗಳು ನೃತ್ಯದಂಥ ಅವರ್ಣನೀಯ ಕ್ಷೇತ್ರಕ್ಕೆ ಅನಿವಾರ್ಯವೇ ಹೌದು. ಒಂದೊಮ್ಮೆ ಪರಂಪರೆಯನ್ನು ದಾಟಿಸುವುದಷ್ಟೇ ಕೆಲಸವಾಗಿದ್ದಿದ್ದರೆ ಇಂತಹ ರಾಜಿಗಳ ಪ್ರಮೇಯ ಒದಗುತ್ತಿರಲಿಲ್ಲವೇನೋ ! ಆದರೆ ದಾಟಿಸುವುದಕ್ಕಿಂತಲೂ ದಟ್ಟವಾಗಿಸುವುದನ್ನು ನಂಬಿದವರು ನಾವು. ಹಾಗಾಗಿ ಆ ಸಂಕೀರ್ಣ ಹಂತಕ್ಕೆ ಬೇಕಾದ ಸಕಲ ಕರಣಾದಿಗಳನ್ನೂ ಕಾರಣನಿಮಿತ್ತವಾಗಿ ಸಂದರ್ಭೋಚಿತ ಔಚಿತ್ಯಸಮೇತ ಪ್ರಜ್ಞಾಪೂರ್ಣವಾಗಿ ಅಚ್ಚುಕಟ್ಟಾಗಿ ಹೆಗಲೇರಿಸಿ ಅಂತರಂಗಕ್ಕಿಳಿಸಬೇಕಾಗುತ್ತದೆ; ಚಿಕ್ಕ-ಪುಟ್ಟ ತ್ಯಾಗ ಅನುಸರಣೀಯವಾಗುತ್ತದೆ. ಆದರೆ ಅದಕ್ಕೆಲ್ಲಾ ಹೆಚ್ಚುಗಾರಿಕೆಯನ್ನು ತೋರಿಸದಿರುವುದೇ ದೊಡ್ಡತನದ ಲಕ್ಷಣ.

ಅನುಭವ ವರಿಷ್ಠತೆಯ ನಿಕಷವೆಂದರೆ ಅಂತರಂಗದೊಳಗಿನ ಅಧ್ಯಾತ್ಮದ ಹದ, ಕಾಲ-ದೇಶ ಸಮನ್ವಯ ಪ್ರಜ್ಞೆಯೇ ಹೊರತು ವಯಸ್ಸಿನ ಹಿರಿಮೆಯಲ್ಲ. ಇದೇ ನಮ್ಮ ನಡುವಿನ ಸ್ನೇಹ-ಸಾಧನೆಗಳ ಮೂಲಧಾತು. ಇದನ್ನು ಅರ್ಥವಿಸಿದ ನಿಸ್ಪೃಹತೆಗೆ ಅನಂತ ಅಭಿವಂದನೆಗಳು ಸಲ್ಲುತ್ತವೆ.

ಉಕ್ತಿಯೊಂದು ಮತ್ತೆ ಮತ್ತೆ ಅನುರಣಿಸುತ್ತದೆ. ನಮ್ಮ ಮಿತಿಗಳನ್ನು ಮೀರಿದಾಗಲೇ ನಮ್ಮ ಮಿತಿಗಳು ಅರ್ಥವಾಗುತ್ತವೆ . ಜೊತೆಗೆ ಮಿತಿ ಮೀರಿ ನಡೆದರೆ ಮತಿಹೀನವೂ ಆಗುತ್ತದೆ. ಆದ್ದರಿಂದಲೇ ಮಿತಿಯ ಮತಿಯನ್ನು ಅರಿತು ನಡೆಯುವಲ್ಲಿ ನಮ್ಮೊಂದಿಗೆ ಜೊತೆಯಾಗುವ ಸಕಲ ಸಮಸ್ತ ಮಹನೀಯರಿಗೂ ಮನಃಪೂರ್ವಕವಾದ ಆಮಂತ್ರಣವಿದೆ.

ಬಗೆದದ್ದು ತಾರೆ; ಉಳಿದದ್ದು ಆಕಾಶ. ಚಂದಿರನ ತಂಪುತಿಂಗಳು ಮತ್ತಷ್ಟು ಪೂರ್ಣಿಮೆಯನ್ನು ಪಸರಿಸಲಿ; ಬೆಳಕಿನ ಸೇವೆ ಬೆಳಗಿ ಬರಲಿ.

ಪ್ರೀತಿಯಿಂದ

ಸಂಪಾದಕಿ

 

 

 

Leave a Reply

*

code