ಅಂಕಣಗಳು

Subscribe


 

ಒಳನೋಟ ಮೇ-ಜೂನ್ 2009

Posted On: Wednesday, June 3rd, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನೂಪುರ ಭ್ರಮರಿ ಬಳಗದ ಹಿತೈಷಿ ಶ್ರೀ ರಾಮಚಂದ್ರಾಪುರ ಮೇಳದ ಹಾಸ್ಯ ಪಾತ್ರ ಕಲಾವಿದ, ಸೀತಾರಾಮ್ ಕುಮಾರ್ ಕಟೀಲ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ಆಯಭಟ ಪ್ರಶಸ್ತಿ ದೊರಕಿದೆ. ಪತ್ರಿಕೆಯ ಬಳಗ ಮತ್ತು ಓದುಗರ ವತಿಯಿಂದ ಅವರಿಗೆ ಹಾರ್ದಿಕ ಅಭಿನಂದನೆಗಳು.
ಏಪ್ರಿಲ್ ೧೩-೧೬: ಮಂಗಳೂರಿನ ಪುರಭವನದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮತ್ತು ನಿಟ್ಟೆ ಎಜುಕೇಶನ್ ಇನ್ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ೪ ದಿನಗಳ ಕಾಲ ಸಂಸ್ಕೃತಿ ಸಿಂಚನ ಉತ್ಸವ ನಡೆಯಿತು. ಈ ಸಂದರ್ಭ ಹಲವು ಪ್ರತಿಷ್ಠಿತ ಕಲಾವಿದರಿಂದ ಸಂಗೀತ, ಜುಗಲ್‌ಬಂದಿ, ಭರತನಾಟ್ಯ, ತೈಯ್ಯಂ, ಕಥಕ್ಕಳಿ, ಏಕವ್ಯಕ್ತಿ ಯಕ್ಷಗಾನ, ಮುಂತಾದ ಕಾರ್ಯಕ್ರಮಗಳು ನಡೆದವು. ೨೦೦೯ರ ಸಂಸ್ಕೃತಿ ಸಿಂಚನ ಪ್ರಶಸ್ತಿ ಏಕವ್ಯಕ್ತಿ ಯಕ್ಷಗಾನ ಸಾಮ್ರಾಟ, ನೂಪುರ ಭ್ರಮರಿ ಬಳಗದ ಹಿತೈಷಿ ಮಂಟಪ ಪ್ರಭಾಕರ ಉಪಾಧ್ಯಾಯ ಅವರಿಗೆ ಸಂದಿತು. ಪತ್ರಿಕೆ ಪರವಾಗಿ ಶುಭಾಶಯಗಳು.
ಏಪ್ರಿಲ್ ೨೯ : ವಿಶ್ವ ನೃತ್ಯದಿನದ ಅಂಗವಾಗಿ ಬೆಂಗಳೂರಿನ ಭಾರತೀಯ ವಿದ್ಯಾಭವನ, ಚೌಡಯ್ಯ ಮೆಮೊರಿಯಲ್ ಹಾಲ್, ಸೇವಾ ಸದನ ಸಭಾಭವನಗಳಲ್ಲಿ ವಿವಿಧ ನೃತ್ಯ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಅಂತಾರಾಷ್ಟ್ರೀಯ ನೃತ್ಯ ದಿನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ವಿವಿಧ ದೇಶ-ವಿದೇಶಗಳ ಪ್ರಮುಖವೆನಿಸುವ‌ ನೃತ್ಯ ಪ್ರಕಾರಗಳ ಕುರಿತಾಗಿ ಅನೇಕ ಹಿರಿ-ಕಿರಿಯ ಕಲಾವಿದರಿಂದ ನೃತ್ಯ ಪ್ರದರ್ಶನ, ಬ್ಯಾಲೆ, ವಿಚಾರ ಸಂಕಿರಣ, ಕಾರ್ಯಾಗಾರಗಳು ನಿರಂತರ ೩ ದಿನಗಳ ಪರ್ಯಂತ ನಡೆದವು.
ಬೆಂಗಳೂರಿನ ಒಡಿಸ್ಸಿ ನೃತ್ಯ ಕಲಾವಿದೆ ವಾಣಿ ಮಾಧವ್ ಅವರ ಸಂಸ್ಥೆಯ ವತಿಯಿಂದ ಸಮಕಾಲೀನ ನೃತ್ಯ ಚಲನೆಗಳು, ಮತ್ತು ಕೊರಿಯೊಗ್ರಫಿ ತಂತ್ರಗಳ ಕುರಿತಾಗಿ ಅಂತಾರಾಷ್ಟ್ರೀಯ ಮನ್ನಣೆ ಪಡೆದ ನಿರ್ದೇಶಕರಾದ ರಾಮ್ಲಿ ಇಬ್ರಾಹಿಂ ಅವರಿಂದ ಕಾರ್ಯಾಗಾರ ಇತ್ತೀಚೆಗೆ ಜರುಗಿತು.
ಮೇ ೬: ಪುತ್ತೂರಿನ ಮೂಕಾಂಬಿಕಾ ನೃತ್ಯ ಕಲಾ ಶಾಲೆಯಲ್ಲಿ ಕಲಾವಿದೆ, ಸಂಪಾದಕಿ, ಪತ್ರಿಕೋದ್ಯಮ ಉಪನ್ಯಾಸಕಿ ಮನೋರಮಾ ಅವರಿಂದ ೩ ಗಂಟೆಗಳ ಕಾಲ ‘ಭಾರತೀಯ ಶಾಸ್ತ್ರೀಯ ನೃತ್ಯ ಕಲೆ- ಜೀವನಾನುಸಂಧಾನ’ ವಿಷಯದಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ
೧೦ ಮೇ : ವಿಶ್ವ ಮಾತೃ ದಿನದ ಅಂಗವಾಗಿ ಕೂಚಿಪುಡಿ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಮತ್ತು ಅವರ ಪುತ್ರಿ ಪ್ರತೀಕ್ಷಾ ಕಾಶಿ ಅವರಿಂದ ಭೋಪಲ್‌ನ ಸಂಗೀತ ಭವನದಲ್ಲಿ ನೃತ್ಯ ಕಾರ್ಯಕ್ರಮ
೧೦, ೧೭, ೨೪ ಮೇ : ಮೈಸೂರಿನ ಭೂಷಣ್ ಅಕಾಡೆಮಿಯ ಆಶ್ರಯದಲ್ಲಿ ಮೈಸೂರಿನಲ್ಲಿ ಭರತನಾಟ್ಯ ಮೇಕಪ್ ತಂತ್ರಗಳ ಕುರಿತು ಕಾರ್ಯಾಗಾರ. ೮-೧೪ ಮೇ ಕಳರಿಯಪಟ್ಟು ಕಾರ್ಯಾಗಾರ, ೧೪-೨೦ ಮೇ ಪದ್ಮಶ್ರೀ ದರ್ಶನಾ ಝವೇರಿ ಅವರಿಂದ ಮಣಿಪುರಿನೃತ್ಯದ ಬಗೆಗೆ ಕಾರ್ಯಾಗಾರ. ಇದೇ ಅಕಾಡೆಮಿಯ ಆಶ್ರಯದಲ್ಲಿ ಜೂನ್ ೫ನೇ ತಾರೀಕಿನಿಂದ ಒಂದು ವಾರದ ಪರ್ಯಂತ ಕಥಕ್ ನೃತ್ಯದ ಕುರಿತು ಪಂಡಿತ್ ಉಮಾ ಡೋಗ್ರಾ ಅವರಿಂದ ಕಾರ್ಯಾಗಾರ ಮತ್ತು ನೃತ್ಯ ಪ್ರದರ್ಶನ. ಆಸಕ್ತರಿಗೆ ವಸತಿ, ಆಹಾರದ ವ್ಯವಸ್ಥೆ ಇರುತ್ತದೆ.
ಜೂನ್ ೧ ಮತ್ತು ಜುಲೈ ೧ : ಸಾಯಿ ಆರ್ಟ್ಸ್ ಇಂಟರ್ನ್ಯಾಶನಲ್ ಸಂಸ್ಥೆಯ ಆಶ್ರಯದಲ್ಲಿ ಭರತನಾಟ್ಯ, ಕಥಕ್, ಮೋಹಿನಿಯಾಟ್ಟಂನ ಸಾಯಿ ನೃತ್ಯೋತ್ಸವ, ಮಲ್ಲೇಶ‌‌್ವರಂನ ಸೇವಾ ಸದನ ಸಭಾಭವನದಲ್ಲಿ.
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ೬೫ನೇ ವಾರ್ಷಿಕೋತ್ಸವ ಮತ್ತು ಸಂಗದ ಸಂಸ್ಥಾಪಕ ಪ್ರಾಚಾರ್ಯ ದಿ.ಕಿರಿಕ್ಕಾಡು ಅವರ ಸಂಸ್ಮರಣೆಯೊಂದಿಗೆ ವರ್ಷಂಪ್ರತಿ ಸಾಹಿತ್ಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಯಕ್ಷೋತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಪ್ಪು ಮೂರರ ಏರು ಶ್ರುತಿಯಲ್ಲಿ ನಿರರ್ಗಳವಾಗಿ ಪರಂಪರೆಯ ಹಾಡುಗಾರಿಕೆಯಲ್ಲಿ ಪ್ರೇಕ್ಷಕರನ್ನು ಹೊಸತಾಗಿ ಹಳೆಯ ಯಕ್ಷಲೋಕಕ್ಕೆ ಕೊಂಡೊಯ್ಯುವ ಸಾಮರ್ಥ ಅವರದ್ದು. ಇಂದಿನ ಹೆಚ್ಚಿನ ಹೆಸರಾಂತ ಭಾಗವತರು ಒಳ್ಳೆಯ ಹಾಡುಗಾರರಾಗಿ ಪ್ರಸಿದ್ಧರಾದರೆ ಬಲಿಪರು ಭಾಗವತರಾಗಿಯೇ ತಮ್ಮ ನೆಲೆ ಗಟ್ಟಿ ಮಾಡಿಕೊಂಡವರು. ತಮ್ಮ ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿ ಯಕ್ಷಸರಸ್ವತಿಯ ಆರಾಧನೆಗೆ ತೊಡಗುವ ಬಲಿಪರ ಕಲಾಶ್ರದ್ಧೆ ಅನನ್ಯವಾದುದು.
ಈ ಸಮಾರಂಭದಲ್ಲಿ ಪಂಚವಟಿ ಪ್ರಸಂಗದ ತಾಳಮದ್ದಳೆ, ದಕ್ಷ ಯಜ್ಞ, ವೀರ ಅಭಿಮನ್ಯು, ಸುದರ್ಶನ ವಿಜಯ ಯಕ್ಷಗಾನ ಬಯಲಾಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲೂ ವಿಶೇಷವಾಗಿ ಸುದರ್ಶನ ವಿಜಯ ಪ್ರಸ್ತುತಪಡಿಸಿದ ಮಕ್ಕಳ ತಂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭಾಗವತಿಕೆಯಲ್ಲಿ ಕಂಚಿನ ಕಂಠದ ಭವ್ಯಶ್ರೀ ಅವರ ಹಾಡುಗಾರಿಕೆ ಕಾರ್ಯಕ್ರಮದ ಒಟ್ಟು ಶ್ರೇಷ್ಟತೆಗೆ ನಾಂದಿಯಾಯಿತು. ಪ್ರಾರಂಭದಲ್ಲಿ ಕೆಲವು ಪದ್ಯಗಳನ್ನು ಹಾಡಿ ಬಯಲಾಟಕ್ಕೆ ಚಾಲನೆ ನೀಡಿದವಳು ಎಳೆಯ ಪ್ರತಿಭೆ ಜ್ಯೋತಿ ಮುದಿಯಾರು.

Leave a Reply

*

code