ಅಂಕಣಗಳು

Subscribe


 

ಮೇನಕೆಯ ಮಗಳು

Posted On: Thursday, April 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ದಿವಾಕರ ಹೆಗಡೆ, ಕವಿಗಳು, ಆಕಾಶವಾಣಿ ಉದ್ಯೋಗಿ, ಧಾರವಾಡ

ಕಳೆದೆರಡು ಸಂಚಿಕೆಯಲ್ಲಿ ಧಾರವಾಡದ ಆಕಾಶವಾಣಿ ಉದ್ಯೋಗಿ ದಿವಾಕರ ಹೆಗಡೆ ರಚಿತ

ಗಿರಿಜಾ ಕಲ್ಯಾಣ ರೂಪಕದ ಲಯ-ಗತಿಗಳ ಸೊಬಗನ್ನು ಕಂಡಿದ್ದೀರಿ.

ಈ ಸಂಚಿಕೆಯಲ್ಲಿ ಅವರಿಂದ ರಚಿತಗೊಂಡ ಮತ್ತೊಂದು ರೂಪಕ ನಿಮ್ಮ ಓದಿಗೆ, ನೃತ್ಯ ನೈಪುಣ್ಯಕ್ಕೆ. ಈ ಲಲಿತ ಲಹರಿಗೆ ಪೂರಕವಾಗಿಯೋ ಎಂಬಂತೆ ಇದೇ ವಸ್ತುವನ್ನಾಯ್ದ ವಸುಂಧರಾ ಅವರ ‘ಶಕುಂತ ಕೂಜನ’ದ ಮರುನೋಟವೂ ಜೊತೆಗಿದೆ.

ಹಸ್ತಿನಾಪುರದಲಿ ದುಷ್ಯಂತನ ಸಿರಿ ಸಾಸಿರವಾಗಿತ್ತು

ಮಸ್ತಕದಲಿ ಹಿಂದಣ ಪ್ರೀತಿಯು ತಾ ಮೆರವೆಗೆ ಸಂದಿತ್ತು

ಪ್ರಸ್ತುತದಲಿ ಶಾಕುಂತಲೆ ಬಂದಳು ನಾಚುತ ನಲ್ಲನೆಡೆ

ವಿಸ್ತರಿಸಿದಳಾದ್ಯಂತದ ಪರಿಯನು ಹರುಷದಿ ಅರಸನೆಡೆ

ಇನಿಯ ನೋಡು ಬಂದೆ ನಾನು ಕಣ್ವ ಕುವರಿಯು

ಮನಸನೆಲ್ಲ ನಿನ್ನೊಳಿಟ್ಟು ಕಾದೆ ಕಾಡೊಳು

ಕನಸದೆಷ್ಟ ಕಟ್ಟಿ ಕೊಟ್ಟೆ ಪ್ರೇಮ ಪಥದೊಳು

ನೆನೆಸಿ ಜೀವದುಸಿರನಿಟ್ಟೆ ನಿನ್ನ ನೆನಪೊಳು

ಹುಲ್ಲೆಯನರಸುತ ಬಲ್ಲಿದ ಬಂದೆಯೊ

ಮೆಲ್ಲನಡಿಯೊಳೆಮ್ಮಾಕ್ರಮಕೆ

ಮಲ್ಲಿಗೆ ತಬ್ಬಿದ ಮಾಮರದೆಡೆಯೊಳು

ಸಲ್ಲದ ದುಂಬಿಯ ತಡೆವುದಕೆ

ಅಲ್ಲೆ ಅಲ್ಲೆ ನಾನೆಲ್ಲವ ಮರತೆನು

ಪಲ್ಲವಿಸಿದ ಪ್ರೇಮದ ಪರಿಯೆ

ನಿಲ್ಲು ನಿಲ್ಲು ನೀನೆನ್ನುತಲಾಶ್ರಮ

ದೆಲ್ಲೆಯ ಮೀರಿದ ಮೈಮರ

ನೀರನೆತ್ತಿರುವ ವೇಳೆ ಮುಳ್ಳು ನಾಟಿತು

ನೀರೆ ನಿನ್ನ ಕೈಯ ಸೇವೆ ನೋವ ನೀಗಿತು

ಮಾರ ಶರವು ಎರಗಿತೊಮ್ಮೆ ಸೇರಿ ನಲಿಯಿತು

ಶೂರ ನಿನ್ನ ತೋಳ ಹಾರ ಗಾಂಧರ್ವವಾಯಿತು

ಸಂಗಮದಲ ಸಾತತ್ಯವನುಳಿಸಲು

ಉಂಗುರುವಿತ್ತಾಲಂಗಿಸದೆ

ಶೃಂಗಾರದ ಸ್ವಾತಂತ್ರ್ಯದಿ ತನುಮನ

ರಂಗಿನಾಟಾದಲಿ ತೋಯಿಸಿದೆ

ಭೃಂಗ ಭಂಗಿಯಲಿ ಗುಂಗಹಿಡಿಸಿ ನವ

ರಂಗು ರಾಗದಲಿ ರಂಜಿಸಿದೆ

ತುಂಗ ವಿಕ್ರಮನೆ ಕೇಳೀ ಕ್ಷಣದಲಿ

ಉಂಗುರ ಕಾಣದು ಪದಕಿರಿಸೆ   ||

ಏಕೆ ಮಾತಡಲೊಲ್ಲೆ | ದುಷ್ಯಂತನೀ | ನ್ಯಾಕೀಗಲೆನ್ನನೊಲ್ಲೆ ||

ಏಕೋ ಭಾವದಿ ಬಂದು ನಿಂತೆ ನಿನ್ನಲ್ಲಿ |

ಲೋಕ ನಿಂದೆಗೆ ಎನ್ನ ನೂಕಿದೆ ಇಲ್ಲಿ ||

ಸಾಕಾಯಿತೀ ಬದುಕು ಬೇಕಿಲ್ಲ ಪ್ರಾಣ |

ಯಾಕಾದರೊಲಿದೆ ನೀ ಮರೆವಿನ ಜಾಣ ||

ಭೂಮಿ ಬಾಯ್ಬಿಡಲಿ ನಭಕುಸಿದು ಬೀಳಲಿ ಬೇಗ |

ಕಾಮನಳಿಯಲಿ ಬಸಿರ ಹುಟ್ಟಡಗಲೀ ||                                                                                   ತಾಮಸದ ಬಿರುಗಾಳಿ ಭೂಮವನು ಕಬಳಿಸಲಿ |

ಈ ಮಹಾ ಅವಮಾನ ಸಾವು ಸಮನಿಸಲಿ ||

____

ಭಾಮಿನಿ           –       ಬೆಳಕಿನಂದದಿ ಸುಳಿದು ಬಂದಾ |

ಥಳಕಿನಪ್ಸರೆ ಮೇನಕೆಯು ಹಳ |

ಹಳಿಪ ಶಾಕುಂತಲೆಯನೊಯ್ದಳು |

ಬಳಿಕ ತನ್ನೆಡೆಗೆ ||

ಮೇನಕೆ           :        ತರಳೆ ಕೇಳೀ ತೆರನ ನೀ ಮೈ |

ಮರೆವುದೇನಿದು ಜನಪರಿರವನು |

ಅರಿಯದೇ ಮನ ಸೋತುದೇನೀಗ ||

ಶಾಕುಂತಲೆ          :       ತಿಳಿಯೆನು ಲೋಕದ ಪಾಪ ಅಮ್ಮಾ ಅಮ್ಮಾ   |

ಸುಳಿಯರಿಯದೆ ಮಡುವಿಗಿಳಿದೆ ಅಮ್ಮಾ ಅಮ್ಮಾ ||

ಬಳಿಯೋ ಮುನಿವಧುಗಳು ನೋಡು ಅಮ್ಮಾ ಅಮ್ಮಾ |

ತಿಳಿಹೇಳಲೊಬ್ಬರಿಲ್ಲ ಕೇಳು ಅಮ್ಮಾ ಅಮ್ಮಾ ||

ಮೇನಕೆ            :         ಬಣ್ಣದ ಮಾತಿಗೆ ಸಣ್ಣವಳಾದೆಯೆ |

ಹೆಣ್ಣ ಮನದ ಹೊಸ ಕಾತರವೆ    |

ಕಣ್ಣಿನ ಭಾಷೆಯ ತಿಳಿಯದೆ ಒಲಿದರೆ |

ಬಣ್ಣಗೇಡು ಮೈ ಮನ ಬರಿದೆ ||

ಶಾಕುಂತಲೆ           :        ನಾನಾಗಿ ಬಯಸಿದಳಲ್ಲ | ದೊರೆ | ತಾನಾಗಿ ಬಂದಿದ್ದನ್ನಲ್ಲ ||

ಬಾನ ಬಣ್ಣವ ಕೈಯೊಳಿಟ್ಟ | ಮತ್ತೆ | ಕಾಣದ ಸುಖವ ತಾ ತೆರೆದಿಟ್ಟ ||

ಏನು ಚಂದದ ಕನಸಿಟ್ಟ | ಬಲು | ಜಾಣೆಯೆನ್ನುತಲೆನ್ನ ಮುದ್ದಿಟ್ಟ ||

ಜೇನು ಸುರಿಯುವ ಮಾತಿಟ್ಟ | ತಾ| ಸಾನುರಾಗದಿ ಮುದ್ರೆಯುಂಗುರುವಿಟ್ಟ ||

ಮೇನಕೆ               :          ಮಣ್ಣನಾಳುವಗೆ ಮನ ಒಪ್ಪಿಸಿದೆಯೆ |

ಕಣ್ವ ಪುತ್ರಿ ನೀನವಸರದೆ ||

ತಣ್ಣನೆ ಬಾಳಿಗೆ ಬೆಂಕಿಯ ನುಡಿಸಿದೆ |

ಮನ್ನಣೆ ಏನಿದೆ ಹೊಸ ಕುಡಿಗೆ  ||

ಶಾಂಕುತಲೆ             :           ಯಾಕೆನ್ನ ಬಿಟ್ಟು ಪೋದೆ | ಮೇನಕಾದೇವಿ | ಸಾಕಾಯಿತೇನೆ ಬಾಧೆ ||

ನಾಕನಾರಿಯ ಮಗಳಾದರು ನಾನು |

ಮೂಕರೋದನಕೆ ಸಿಕ್ಕಿದೆನಿನ್ನೇನು |

ನೂಕಿ ನಡೆದವಳೀಗ ಸಾಕಬಂದೆಯೆ ನೀನು |

ಲೋಕಾಪವಾದವ ಮೀರಲಹುದೇನು ||

ಮೇನಕೆ               :           ಕೌಶಿಕನ ತಪವನಾ ಕೇಡಿಸಲೋಸುಗ ಬಂದೆ |

ದೋಷವೆನಗಿಲ್ಲ ದೇವೇಂದ್ರನಾಜೆ  |

ದಾಸಿಯಾದೆನ್ನ ಪರಿ ತಾಯ್ತನವ ತಿಳಿಯದದು |

ವಾಸ ನಾಕದೊಳೆಮಗೆ ಮಕ್ಕಳಿಲ್ಲ ||

ಶಾಕುಂತಲೆ             :          ಹುಟ್ಟಿದ ಕಂದನ ಮುಟ್ಟ್ಟದೆ ಪೋದಳೆ |

ಕಟ್ಟಿದ ಮನ ಮುರಿದಿಕ್ಕುತ ನಡೆದಳೆ |

ಸಿಟ್ಟಿನ ಮುನಿ ಮೈ ಮುಟ್ಟುತ ಪಡೆದಳೆ |

ತಟ್ಟಿದೆ ಸಂತಾನಕೆ ಶಾಪದ ಎಳೆ ||

ಮೇನಕಾ              :           ಹಡೆದೆನಾದರು ನಿನ್ನ ಪಾಲಿಸಲು ಹಾಲಿಲ್ಲ |

ಕನ್ಯತ್ವ ಬಂದಿತ್ತು ಮರುಕ್ಷಣದಲಿ ||

ಮುಡಿಯಲಾರದ ಹೂವ ಬಡಿವಾರದಲಿ ಪಡೆದು |

ಸುಡುವ ಕಣ್ಣೀರಿನಲಿ ಕೈ ತೊಳೆದೆನೆ  ||

ಶಾಕುಂತಲೆ             :           ಬಿಡು ನಿನ್ನಯ ಬಡಿವಾರವನೆಲ್ಲವ ಕಡೆಗಣಿಸಿದೆ ಎನ್ನ |

ಎಡೆ‌ಎನಗೆಲ್ಲಿದೆ ನಡುನೀರಲಿ ಕೈ ಬಿಟ್ಟನು ಮನದನ್ನ |

ಪಡಬಾರದ ಪಾಡಾಯಿತಿ ಎನ್ನದು ಒಡಲುರಿಯುವ ಹಾಡು |

ಹಡೆದವರೆಡವಿದ ಹುಡುಗಾಟಿಕೆಯಲಿ ಬಡವಾದೆನು ನೋಡು ||

ಮೇನಕೆ              :           ಮಗಳೆ ಕೇಳು ಬಂದೆ ನಾನು ತಪವ ಕೆಡಿಸಲು

ಜಗದ ಮೋಹದೆಸುಗೆಯಲ್ಲಿ ಜೀವ ಬೆಸೆಯಲು

ಮಿಗುವ ನಗುವ ಚೆಲುವಿನಲ್ಲಿ ಗುರಿಯ ಮರೆಸಲು

ಬಗೆಯನರಿತು ಸೊಗವ ಬೀರಿ ಹೆಗೆಯ ಹರಿಸಲು

ಮುಗುದೆ ನೀನು ತಿಳಿಯೆ ನಾಕದೊಡಲ ಭೀತಿಯ

ಬಿಗಿದ ತಪಕೆ ಮಘವ ತಾನೆ ಕುಸಿದ ರೀತಿಯ

ನಗೆಯ ನೊಗಕೆ ಹೆಗಲನಿತ್ತೆ ಅಪ್ಸರಾಂಗನೆ

ಹೊಗೆಯದಗ್ಗಿ ಸಗ್ಗ ಸುಖವು ಅರಿಯೆ ಕಂದನೆ

ಶಾಕುಂತಲೆ                 :       ಅಪ್ಪಿದಿನಿಯ ತಾನೊಪ್ಪಿಕೊಟ್ಟ ವರ ಒಪವಿಡದೆ ಕಳೆದೆ |

ಅಪ್ಪ ಕಣ್ವ ಕಣೀರಲಿ ಕಳುಹಿದ ಮತ್ತೆ ತಿರುಗಲಾರೆ ||

ತಪ್ಪಿದ ದಿನ ಕೈ ತಪ್ಪಿದ ಕ್ಷಣ ನಾನಿಪ್ಪುದೆಲ್ಲಿ ಈಗ |

ನೆಪ್ಪ ಹಿಡಿದು ತಾನಪ್ಪನಪ್ಪನೆ ಏನಿದಿಯೋ ಯೋಗ ||

ಮೇನಕೆ                  :         ಕಂಗಳಲ್ಯಾತಕೆ ನೀರನು ತುಂಬುವೆ |

ಮಂಗಳಾಂಗಿ ನೀನು |

ಮುಂಗು ಮೊಳೆದು ತಾನಂಗವ ತುಂಬಿದೆ  |

ಹೊಂಗನಸಿನ ಬಾನು |

ತಿಂಗಳ ಲೆಕ್ಕದಿ ಸಂಗವ ನೆನಪಿಸು |

ಶೃಂಗಾರದ ನೋವ |

ರಂಗಿನರಸ ತಾ ತಂಗಿದನೊಡಲಲಿ |

ಭಂಗಿಸದಿರು ಭಾವ ||

ಶಾಕುಂತಲೆ                 :         ಎಲ್ಲಿ ನಡೆಯಲಿ ಎಲ್ಲಿ ತಂಗಲಿ

ಎಲ್ಲಿ ಆಶ್ರ್ರಯ ಪಡೆಯಲಿ

ಎಲ್ಲಿ ಎನಗಾದರದ ಮನೆಯಿದೆ

ಎಲ್ಲಿ ಯಾರನು ನಂಬಲಿ

ಬಲ್ಲೆ ನೀ ನಾ ನಿನ್ನ ಕಂದನು

ನಿಲ್ಲಿಸೆನ್ನನು ನಾಕದಿ

ಸಲ್ಲದಾತಂಕದಲಿ ತಲ್ಲಣ

ಇಲ್ಲಿ ಈ ಭೂಲೋಕದಿ

ಮೇನಕೆ                   :        ಸಾವಿನ ಮನೆಯದು ದೇವರ ಲೋಕವು |

ಕಾವಿಲ್ಲದ ಸುಖ ಬೇಕೇನೆ ||

ನೋವಿಲ್ಲದ ಎಡೆ ಬೇವಿಲ್ಲದ ಕಡೆ |

ಸಾವಿರ ಸುಖ ಸಾಧಿಸಿತೇನೆ ||

ಮಾವು ಚಿಗುರಿ ಕೋಗಿಲೆ ಬರದಲ್ಲ |

ಸಾವು ಮರಳಿ ಹೊಸ ಹುಟ್ಟಿಲ್ಲ ||

ಜೀವ ಜೀವಗಳು ಬೆಸೆದು ಬಾಳಿ ರಸ |

ಭಾವ ದೀಪ್ತಿ ಸಂಪದವಿಲ್ಲ ||

ಕಾವು ಕರಗಿ ಕೈವಲ್ಯಕೆ ಧಾವಿಪ |

ಜೀವನ್ಮುಕ್ತಿಯ ಪಥವಿಲ್ಲ ||

ಹೂವು ಹೀಚು ಕಾಯಾಗುವ ತಾವಿದು |

ಕಾವ ದೇವ ಕಾಪಿಡುವನಲ ||

ಶಾಂಕುತಲೆ                  :        ಅಮ್ಮ ನೀ ಪೋಗದಿರು | ಸುಮನಸತಾಣ

ಕೊಮ್ಮೆಲೆ ನಡೆಯದಿರು ||

ಉಮ್ಮಳಿಸುವ ಭಾವ ನೆಮ್ಮಿ ನಿಂತೆನು ನಿನ್ನ |

ಹೆಮ್ಮೆಯ ಫಲವ ನೀ ಸುಮ್ಮಾನದಿ ನೋಡು||

ಮೇನಕೆ                    :         ಮುನಿಗಳಾಶ್ರಮಕೆ ನಡೆವ ಕಂದಾ ಕಂದಾ |

ತನಿವಣ್ಗಳಿಂದ ಪೊರೆವೆ ನಿನ್ನ ಕಂದಾ ಕಂದಾ ||

ಸನಿಹದಿ ಮಾರೀಚ ಮುನಿ ತಾ ಕಂದಾ ಕಂದಾ |

ವನದಿ ಆಶ್ರಮವಾಸಿ ಕಂದಾ ಕಂದಾ ||

ದಿನ ದಿನದಿ ಬೆಳೆವ ಬಸಿರ ಕಂದಾ ಕಂದಾ |

ಕ್ಷಣ ಕ್ಷಣದಿ ನೋಡಿ ನಲಿವೆ ಕಂದಾ ಕಂದಾ ||

__________

ಭಾಮಿನಿ                      –         ಮಾತೆಯಂತ:ಕರಣ ಪ್ರೀತಿಯ

ನಾಂತು ಶಾಕುಂತಲೆಯು ಮನದೊಳ

ತೀತವನು ನೆನೆಯುತ್ತ ನಡೆದಳು

ತಾತನಾಶ್ರಮಕೆ ||

Leave a Reply

*

code