ಅಂಕಣಗಳು

Subscribe


 

ನೂಪುರಭ್ರಮರಿಯೊಂದಿಗೆ ಕೀರ್ತಿಶೇಷ ಹಿರಿಯ ರಾಜಕಾರಣಿ ಅನಂತ ಕುಮಾರ್

Posted On: Thursday, November 15th, 2018
1 Star2 Stars3 Stars4 Stars5 Stars (No Ratings Yet)
Loading...

Author: - ಶ್ರೀ ಅನಂತಕುಮಾರ್, ಲೋಕಸಭಾ ಸದಸ್ಯರು, ಬೆಂಗಳೂರು (ನೃತ್ಯ ಸಂಶೋಧನ ಸಮ್ಮೇಳನದ ಸಮಾರೋಪ ಸಂಜೆಯ ಅಭ್ಯಾಗತರು)

ನೂಪುರ ಭ್ರಮರಿಯ ಸ್ಥಾಪಕ ನಿರ್ದೇಶಕರಾದ ವೇದಮೂರ್ತಿ ಬಿ.ಜಿ. ನಾರಾಯಣ ಭಟ್ ಅವರಿಂದ ಅನಂತ ಕುಮಾರ್ ಅವರಿಗೆ ಆತ್ಮೀಯ ಸ್ವಾಗತ

ನಂತ್‌ಜೀ…

ಭಾರತೀಯ ವಿದ್ಯಾಭವನ, ಬೆಂಗಳೂರಿನಲ್ಲಿ ನೂಪುರಭ್ರಮರಿಯಿಂದ ನಾವು ಆಯೋಜಿಸಿದ್ದ ಪ್ರಥಮ ನೃತ್ಯಸಂಶೋಧನ ಸಮ್ಮೇಳನಕ್ಕೆ ತಮ್ಮ ಪೂರ್ಣಸಹಕಾರವನ್ನಿತ್ತು ಅನುದಾನವನ್ನು ಕೊಡಿಸುವಲ್ಲಿ ಸಹಕಾರಿಯಾಗಿದ್ದೀರಿ. ನೀವು-ದಂಪತಿಗಳು ನಿಮ್ಮ ವಿವಾಹದಿನದ ವಾರ್ಷಿಕೋತ್ಸವದಂದೇ ನಮ್ಮ ಮೇಲೆ ಪ್ರೀತಿಯಿಟ್ಟು ಆಗಮಿಸಿ ನಮ್ಮ ಕರ್ತವ್ಯಗಳನ್ನು ಪ್ರೋತ್ಸಾಹಿಸಿದುದಷ್ಟೇ ಅಲ್ಲದೆ, ಬೆನ್ನುತಟ್ಟಿ ನೀವೀರ್ವರೂ ಬೆಂಬಲ ಸೂಚಿಸಿದ್ದಿರಿ. ನಿಮ್ಮಿಬ್ಬರ ಕೈಯಿಂದ ಸನ್ಮಾನಿತರಾಗುವ ಅವಕಾಶ ಅನೇಕರಿಗೆ.., ಅಂತೆಯೇ ನಿiಗೆ ಹಾರಾರ್ಪಣೆ ಮಾಡಿಸುವೂ ಸದವಕಾಶ ನಮಗೊದಗಿತ್ತು. ನಿಮ್ಮ ವಿವಾಹದಿನವನ್ನು ಸ್ಮರಿಸಿಕೊಳ್ಳುವಂತೆ ಪರಸ್ಪರ ಮಾಲಾರ್ಪಣೆಯನ್ನೂ ಮಾಡಿಸಿ ಸಂಭ್ರಮಿಸಿದ್ದೆವು. ನೀವು ನಮ್ಮೊಂದಿಗೆ ಪ್ರೀತಿ-ವಿಶ್ವಾಸದಿಂದ ಆಡಿದ ಕುಶಲೋಪರಿಯ ಮಾತುಗಳಿಂದ ಮೊದಲ್ಗೊಂಡು ನಾಡು-ಸರ್ಕಾರ-ನೃತ್ಯಕ್ಷೇತ್ರವನ್ನುದ್ದೇಶಿಸಿ ಆಡಿದ ದಿಗ್ಧರ್ಶಕವಾದ ಭಾಷಣಗಳ್ಯಾವುವೂ ಮನಸ್ಸಿನಿಂದ ಮರೆಯಾಗಿಲ್ಲ. ಜೊತೆಗೆ ನಿಮ್ಮ ಸೇವಾಕೈಂಕರ್ಯದ ‘ಅದಮ್ಯಚೇತನ’ವನ್ನು ಕಾಣುವ, ಆ ಪುಣ್ಯಸಂಚಯನದ ಅನ್ನವನ್ನುಂಬ ಭಾಗ್ಯವನ್ನು ನಮಗಿತ್ತಿದ್ದಿರಿ. ನಮ್ಮ ಕುಟುಂಬ, ಆಯೋಜನಾಬಳಗದಿಂದ ಮೊದಲ್ಗೊಂಡು ಅನೇಕರು ಕಾರ್ಯಕ್ರಮದಲ್ಲಿ ‘ಅದಮ್ಯಚೇತನ’ದಿಂದ ಉಣಬಡಿಸಿದ ಸೊಪ್ಪುಸಾರಿನ ರುಚಿ ಇಂದಿಗೂ ಮರೆತಿಲ್ಲ.

ಅದಾಗಿ ನೀವು ದಂಪತಿಗಳು ಜೊತೆಯಾಗಿ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ಪ್ರತಿವರುಷ ಹೊಸವರುಷಕ್ಕೆ ಪೂರ್ವಭಾವಿಯಾಗಿ ಆಯೋಜಿಸುವ ಬೃಹತ್ ಉತ್ಸವದಲ್ಲಿ ಒಮ್ಮೆ ಅವಕಾಶವನ್ನಿತ್ತು ನಮ್ಮ ತಂಡದ ವಿದ್ವಾಂಸರಿಗೆ, ನರ್ತಕರಿಗೆ ನೃತ್ಯಕಾರ್ಯಕ್ರಮ ಕೊಡಿಸಿ ಆನಂದಿಸಿದ್ದಿರಿ. ನಮ್ಮ ಬಳಗದ ನೂಪುರಭ್ರಮರಿ ನೃತ್ಯಪತ್ರಿಕೆಯನ್ನು ಓದಿ ಮೆಚ್ಚಿಕೊಂಡಿದ್ದಿರಿ. ‘ಕಸದಿಂದ ರಸ’ ಮಾಡುವ ಜೈವಿಕ ಮರುಪೂರಣದ ಕೌಶಲ್ಯ ಮತ್ತು ಅದಕ್ಕೆ ನೀವಿಬ್ಬರೂ ದುಡಿಯುತ್ತಿದ್ದ ರೀತಿ, ಆ ಕುರಿತ ಕಾರ್ಯಕ್ರಮಗಳಲ್ಲಿ ಭೇಟಿ ನಮ್ಮನ್ನೂ ಪ್ರೇರಿಸಿದೆ.

ಹಲವು ಸಲ ನಿಮ್ಮ ಆಹ್ವಾನ, ಪ್ರೀತಿ, ತೆಗೆದಿಡುತ್ತಿದ್ದ ಉಡುಗೊರೆ, ನಮ್ಮ ಮೇಲಿನ ಭರವಸೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತಿತ್ತು. ನಮ್ಮಂತಹ ಕಲಾವಿದರನ್ನೂ ಪ್ರೀತಿಯಿಂದ ಗಮನಿಸುವ ನಿಮ್ಮ ಹೃದಯವೈಶಾಲ್ಯಕ್ಕೆ ನಾವು ಮನದಲ್ಲೇ ಸಂಭ್ರಮಿಸಿ ಕೃತಕೃತ್ಯರಾಗುತ್ತಿದ್ದೆವು. ದಂಪತಿಗಳ ಅನನ್ಯ ವ್ಯಕ್ತಿತ್ವ, ಅಪೂರ್ವವಾದ ಸಾಹಚರ್ಯ, ಸಾಂಗತ್ಯದ ದಾಂಪತ್ಯ ನಮ್ಮ ಮನಸ್ಸು-ಕಣ್ಣಾಲಿಗಳನ್ನು ಪ್ರಕಾಶವಾಗಿಸಿತ್ತು.

ಆದರೆ ಬೆಂಗಳೂರಿನಿಂದ ದಕ್ಷಿಣಕನ್ನಡಕ್ಕೆ ಉದ್ಯೋಗನಿಮಿತ್ತ ತೆರಳಬೇಕಾಗಿ ಬಂದಾಗ ಸಂಪರ್ಕ ದುರ್ಲಭವಾಯಿತು. ಆದಾಗ್ಯೂ ನೀವು ಕೊಡಮಾಡಿದ ಬಾಂಧವ್ಯವನ್ನು ನಾವ್ಯಾರೂ ಮರೆಯಲಿಲ್ಲ. ಬೆಂಗಳೂರಿಗೆ ಈ ಸಲ ನವೆಂಬರ್ ಮೊದಲವಾರದಲ್ಲಿ ವರ್ಗಾವಣೆಯಾಗಿ ಬಂದಿದ್ದೇ ತಡ ನಿಮ್ಮೆಲ್ಲರನ್ನೂ ಭೇಟಿ ಮಾಡಿ ಸ್ನೇಹಸೇತುವನ್ನು ಮತ್ತಷ್ಟು ಗಟ್ಟಿಯಾಗಿ ಕಾಪಿಟ್ಟುಕೊಳ್ಳುವ ನಿಶ್ಚಯ ಮಾಡುತ್ತಿದ್ದಾಗಲೇ ನಾವು ಊಹಿಸದ ಈ ಅಕಾಲಿಕ, ಆಕಸ್ಮಿಕ ಸುದ್ದಿ ಕಿವಿದೆರೆಗೆ ಬಡಿಯಿತು. ಅನಂತ್‌ಜೀ..ನಿಮ್ಮ ಅನಾರೋಗ್ಯದ ಕುರಿತಾಗಿ ಕೆಲವರು ಈ ಮೊದಲೇ ಸೋಶಿಯಲ್ ಮೀಡಿಯಾಗಳಲ್ಲಿ ಅಲ್ಲಲ್ಲಿ ಹೇಳಿದ್ದರಾದರೂ ಗುಣಮುಖರಾಗುವ ಭರವಸೆ ನಮಗೆ ಇದ್ದಿತ್ತು. ಆ ಕುರಿತಾಗಿ ನಾವು ಪ್ರಾರ್ಥನೆಯನ್ನೂ ಮಾಡಿದ್ದೆವು. ಆದರೆ ಈಗ ನಿಮ್ಮ ಅಗಲುವಿಕೆ ಇಷ್ಟು ಬೇಗ ಆಗಬಹುದೆಂದು ನಮ್ಮ ಮನಸ್ಸು ಕ್ಷಣಮಾತ್ರಕ್ಕೂ ಎಣಿಸಿರಲಿಲ್ಲ. ನಮ್ಮ ಕಣ್ಣುಗಳನ್ನು, ಕಿವಿಗಳನ್ನು ನಾವೇ ನಂಬದಂತೆ ಮಾಡಿದ ಈ ‘ಅನಂತ-ಯುಗಾಂತ್ಯ’ವನ್ನು ನಿಮ್ಮ ಮನೆಗೇ ಬಂದು ನೋಡಿ ದುಃಖತಪ್ತರಾಗಿ ಹಿಂದಿರುಗಿದೆವು. ಇನ್ನೂ ಹಲವು ಸಾಧನೆಗಳನ್ನು ಮಾಡುವವರಿದ್ದ ಹಿರಿಯ, ಸರಳ ಮುತ್ಸದ್ದಿಯನ್ನು ಕಳೆದುಕೊಂಡ ನಾವೂ, ನಮ್ಮ ನಾಡು ಶೂನ್ಯವಾಯಿತು ಎಂದೇ ಅನಿಸಿ ಹಳಹಳಿಸುವಂತಾಯಿತು. ಆದರೇನು ಮಾಡೋಣ, ಕಾಲನ ಕರೆಗೆ ಯಾರೇ ಆದರೂ ಓಗೊಡಲೇಬೇಕು ಎಂಬ ವಾಸ್ತವ ಕಂಬನಿಯ ಜೊತೆಗೆ ನಿಟ್ಟುಸಿರಿನ ಚರಮಗೀತೆಯನ್ನು ಹಾಡಿದೆ. ಹಾಗೆಂದೇ ನೀವಾಡಿದ ಮಾತುಗಳನ್ನು ಮತ್ತೊಮ್ಮೆ ಕಣ್ತುಂಬಿ ನೆನೆಯುತ್ತಾ, ಈ ನುಡಿನಮನ-ಅಂಜಲಿ ಸಲ್ಲಿಸುತ್ತಿದ್ದೇವೆ.

(ಜನನ : ಜುಲೈ 2, 1959 ; ನಿಧನ ನವೆಂಬರ್ 12, 2018)

ಭಾರತೀಯ ವಿದ್ಯಾಭವನದಲ್ಲಿ ನೂಪುರಭ್ರಮರಿಯಿಂದ ಜರುಗಿದ ನಾಡಿನ ಮೊತ್ತಮೊದಲ ನೃತ್ಯಸಂಶೋಧನ ಸಮ್ಮೇಳನದ ಸಮಾರೋಪ ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ

(೧೫ ಫೆಬ್ರವರಿ ೨೦೧೩- ಮಹಾಶಿವರಾತ್ರಿಯ ಪುಣ್ಯದಿನ)

ನಾಡಿನ ಶಿಲ್ಪತಾಣಗಳು, ನದಿದಂಡೆ, ದಿಬ್ಬ-ತಪ್ಪಲುಗಳು ಭಾರತೀಯ ನಾಟ್ಯಶಾಸ್ತ್ರ ಪ್ರದರ್ಶನದ ವೇದಿಕೆಗಳಾಗಲಿ’

ಹಿರಿಯ ಮುತ್ಸದ್ದಿ, ರಾಜಕಾರಣಿ ಅನಂತ್ ಕುಮಾರ್ ಕರೆ

ಕಲಿತು ಮಾಡುವಂತಹ ನೃತ್ಯಪ್ರಕಾರಗಳು, ಕಲಿಯದೇ ಅಮಲಿನಲ್ಲಿ ಓಡಾಡುವಂತಹ ನೃತ್ಯಪ್ರಕಾರಗಳ ಮಧ್ಯೆ ನಮ್ಮ ಕಲೆ ಸೇರಿಕೊಂಡಿದೆ. ಸಾಮೂಹಿಕ ಕವಾಯತು (ಆಕ್ರೋಬ್ಯಾಟಿಕ್ಸ್)ವಿನ ನೃತ್ಯಗಳ ಸಂಖ್ಯೆ ಹಿರಿದಾಗಿದೆ. ನಾವೊಮ್ಮೆ ಮಲೇಶ್ಯಾಕ್ಕೆ ಹೊಗಿದ್ದಾಗ ‘ಐಸ್ ಡ್ಯಾನ್ಸ್’ ಎಂದು ಗಂಟೆಗಟ್ಟಲೆ ನೃತ್ಯ ಮಾಡಿದ ರೀತಿ ನೋಡಿಯೇ ನಮಗೆ ಬೆವರುಬಂದಿತ್ತು. ಇಂತಹ ಕೇವಲ ಮನರಂಜನೆ, ಅತಿ ಮನರಂಜನೆ, ರತಿ ಮನರಂಜನೆಗೆ ಮೀಸಲಾದ ಪಾಶ್ಚಾತ್ಯ ನೃತ್ಯಗಳ ಅಮಲು ಹೆಚ್ಚಿದೆ.

ಕೆಲವು ವರುಷಗಳ ಹಿಂದೆ ಭಾರತದ ಅದ್ಭುತ ಶಿಲ್ಪಕಲೆಗಳಲ್ಲಿ ಒಂದಾದ ತಾಜ್‌ಮಹಲ್ ಎದುರು ಸಾವಿರಾರು ಜನರ ಮಂದಿಯ ಮುಂದೆ ಪಾಶ್ಚಿಮಾತ್ಯ ಸಂಗೀತದ ಪ್ರದರ್ಶನ ನೋಡಿದೆವು. ಹೀಗಿರುವಾಗ ನಮ್ಮ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೆಬೀಡು, ವಿಜಯನಗರದ ದಿಬ್ಬ, ಮೈಸೂರಿನ ಚಾಮುಂಡೇಶ್ವರಿಯ ತಪ್ಪಲು, ತಲಕಾಡು, ಮುಂತಾದ ಶಿಲ್ಪತಾಣಗಳು, ನದಿಗಳ ದಂಡೆ ಭಾರತೀಯ ನಾಟ್ಯಶಾಸ್ತ್ರ ಪ್ರದರ್ಶನದ ವೇದಿಕೆಗಳಾಗಿ ಯಾಕಾಗಬಾರದು? ಈ ಕುರಿತು ಸರ್ಕಾರ ವಿಶೇಷವಾದ ಪ್ರಯತ್ನ ಮಾಡಬೇಕೆಂಬುದೇ ವಿನಂತಿ.

ದ.ರಾ.ಬೇಂದ್ರೆಯವರ ಪದ್ಯವೊಂದು ನೆನಪಾಗುತ್ತದೆ. ‘ಕುಣಿಯೋಣು ಬಾರ ಕುಣಿಯೋಣು; ಹೆಜ್ಯಾಕ, ಗೆಜ್ಯಾಕ, ತಾಳ್ಯಾಕ, ತಂತ್ಯಾಕ, ರಾಗದ ಚಿಂತ್ಯಾಕ’- ಜಾನಪದ ಸೊಗಡಿನ ಮೂಲಕ ಸಹಜವಾಗಿ ನಾಟ್ಯವನ್ನು ಆರಾಧಿಸುವ, ಕಲೆ ಸಂಸ್ಕೃತಿಯನ್ನು ಹೊಂದಿರುವವರು ನಾವು. ಆದ್ದರಿಂದ ನಾಡಿನ, ಮತ್ತು ಜಗತ್ತಿನ ನೃತ್ಯಶಾಸ್ತ್ರಕ್ಕೆ ಮಾರ್ಗದರ್ಶಕವಾಗುವಂತಹ ಸಂಶೋಧನೆಗಳನ್ನು, ಕಾರ್ಯಕ್ರಮಗಳನ್ನು ಮಾಡಬೇಕು. ಅದರಲ್ಲೂ ನೃತ್ಯ ಮತ್ತು ಸಂಶೋಧನೆಯ ಮೂಲಕ ನೂಪುರ ಭ್ರಮರಿ ಮತ್ತು ಅದರ ಸಂಪಾದಕರು, ಸಂಘಟಕರು ಗುಣಮಟ್ಟದ ಕೆಲಸಗಳನ್ನು ಮಾಡುತ್ತಾ ಇದ್ದಾರೆ. ಈ ಸಂಸ್ಥೆಯ ಮುಖಾಂತರ ಮಾಡುವ ಕೆಲಸಕ್ಕೆ ಸಂಪೂರ್ಣ ಬೆಂಬಲ ನನ್ನ ಕಡೆಯಿಂದ ಯಾವತ್ತಿಗೂ ಇದೆಯೆಂಬ ಭರವಸೆಯನ್ನೀಯುತ್ತಿದ್ದೇನೆ. ನಾಟ್ಯವನ್ನು ಅಧ್ಯಾತ್ಮಿಕತೆಯತ್ತ, ದೈವತ್ವದತ್ತ ತೆಗೆದುಕೊಂಡು ಹೋಗುವ ಭಾರತೀಯ ನೃತ್ಯಕ್ಕೆ ಕುರಿತಂತೆ ನೂಪುರ ಭ್ರಮರಿಯ ವಿನೂತನ ಕಾರ್ಯಕ್ರಮಗಳು ಬೇರೆ ಬೇರೆ ವಿಶ್ವವಿದ್ಯಾನಿಲಯ, ರಂಗಮಂಟಪಗಳಲ್ಲಿ ಯುವಪೀಳಿಗೆಯನ್ನು ಆಕರ್ಷಿತರನ್ನಾಗಿಸುವಲ್ಲಿ ಬೆಳಗಬೇಕು. ಈ ನೆಲೆಯಲ್ಲಿ ನೂಪುರ ಭ್ರಮರಿಗೆ ಸಮಾಜ ಮತ್ತು ಸರ್ಕಾರ ಪ್ರೋತ್ಸಾಹ ಕೊಡಬೇಕು.

ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ವಿಮರ್ಶಾಪ್ರಶಸ್ತಿ ಪ್ರದಾನ

Leave a Reply

*

code