
ಮುದ್ರಾರ್ಣವ
ಆತ್ಮೀಯರೇ,
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. (ಈ ನಿಟ್ಟಿನಲ್ಲಿ ಪತ್ರಿಕೆಯೂ ‘ಹಸ್ತಮಯೂರಿ’ ಯ ಮೂಲಕ ಗಮನಾರ್ಹ ರೀತಿಯಿಂದ ಪ್ರಯತ್ನ ಮಾಡುತ್ತಿರುವುದು ನಿಮಗೆ ತಿಳಿದ ವಿಷಯವೇ !) ಆದ್ದರಿಂದ ಹಸ್ತ ಮುದ್ರೆಗಳ ಭಾವ, ಉಪಯೋಗ, ಸಂವಹನದ ಸಾಧ್ಯತೆಗಳನ್ನು ಗಮನದಲ್ಲಿರಿಸಿ ಅವುಗಳ ಬಗೆಗೆ
ಮನೋರಮಾ ಬಿ.ಎನ್ ಅವರು ವಿಸ್ತೃತ ಅಧ್ಯಯನ ಮಾಡಿದ ಫಲ ;
ಪುಸ್ತಕದಲ್ಲಿ ನಿರೂಪಿತವಾದ ಅಂಶಗಳೆಡೆಗೆ ಒಂದು ಕ್ಷ-ಕಿರಣ
- ಸಂಶೋಧನಾ ಅಧ್ಯಯನ ; ಸುಮಾರು ೪೦೦ ಪುಟಗಳ ಗ್ರಂಥ. ಬೆಲೆ : 250 /-ರೂ.
- ಪ್ರಕಾಶಕರು : ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ, ಉಜಿರೆ, ಬೆಳ್ತಂಗಡಿ, ದಕ್ಷಿಣ ಕನ್ನಡ.
- ಭರತನಾಟ್ಯದಲ್ಲಿ ಉಪಯೋಗಿಸಲಾಗುತ್ತಿರುವ ಹಸ್ತಗಳನ್ನು ಪ್ರಧಾನವಾಗಿರಿಸಿಕೊಂಡು ಇತರೆ ಮರೆಯಾಗಿರುವ ಹಸ್ತಗಳ ಕುರಿತ ಅವಲೋಕನ ಮತ್ತು ಅವುಗಳ ಸಂವಹನ ಪ್ರಕ್ರಿಯೆ ಎಷ್ಟರ ಪಟ್ಟಿಗೆ ಮಹತ್ವಪೂರ್ಣವಾಗಿದೆ ಎಂಬುದು ಸಂಶೋಧನೆಯ ಮೂಲ ಉದ್ದೇಶ. ಜೊತೆಗೆ ಇತರೆ ನೃತ್ಯಪದ್ಧತಿ (ಉದಾ: ಕಥಕ್ಕಳಿ, ಮಣಿಪುರಿ, ಒಡಿಸ್ಸಿ, ಕಥಕ್, ಯಕ್ಷಗಾನ)ಗಳಲ್ಲಿ ಬಳಕೆಯಾಗುತ್ತಿರುವ ಹಸ್ತಗಳು ಮತ್ತು ಅವುಗಳಲ್ಲಿ ಎಷ್ಟು ನಾವು ದಿನನಿತ್ಯದ ಜೀವನದಲ್ಲಿ ಬಳಸಿಕೊಳ್ಳುತ್ತೇವೆ ಎಂಬ ಅವಲೋಕನ. ಮತ್ತು ಅವುಗಳಲ್ಲಿನ ಸಮಾನ ಮತ್ತು ವ್ಯತ್ಯಾಸ ಅಂಶಗಳೆಡೆಗೆ ದೃಷ್ಟಿ.
- ಅಭಿನಯದರ್ಪಣದ ಅಂಶಗಳನ್ನೇ ಪ್ರಧಾನವಾಗಿ ಬಳಸಿಕೊಂಡು ಅಧ್ಯಯನ ನಡೆದರೂ ಉಳಿದಂತೆ ನಾಟ್ಯಶಾಸ್ತ್ರ, ಹಸ್ತ ಮುಕ್ತಾವಳಿ, ಹಸ್ತ ಲಕ್ಷಣ ದೀಪಿಕಾ, ಭರತಸಾರ, ಭರತಕಲ್ಪಲತಾ ಮಂಜರಿ, ಸಾರಸಂಗ್ರಹ, ಲಾಸ್ಯರಂಜನ, ಸಂಗೀತ ರತ್ನಾಕರ, ನರ್ತನನಿರ್ಣಯ, ಬಾಲರಾಮ ಭರತ, ಪುರಾಣಗಳು, ಸಂಹಿತೆಗಳು, ಪ್ರಣೀತಗಳು, – ಹೀಗೆ ಹಲವಾರು ಗ್ರಂಥಗಳಲ್ಲಿ ಪ್ರಸ್ತಾಪಿಸಿದ ಹಸ್ತಗಳು, ಅವುಗಳ ವಿನಿಯೋಗ, ಮಹತ್ವ, ಪ್ರಚಲಿತದಲ್ಲಿ ಉಪಯೋಗವಾಗುತ್ತಿರುವ ಹಸ್ತಗಳು, ಅವುಗಳ ಮೂಲ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಗ್ರಾಂಥಿಕ ಹಿನ್ನಲೆಗಳು.
- ಹಸ್ತ ಮುದ್ರೆಗಳು ಮುದ್ರಾವಿಜ್ಞಾನದಲ್ಲಿ, ಹಠಯೋಗ ಪ್ರದೀಪಿಕಾ ಮುಂತಾಗಿ ಯೋಗಶಾಸ್ತ್ರದಲ್ಲಿ, ಮುದ್ರಾ ಶಾಸ್ತ್ರ, ಧಾರ್ಮಿಕ ಪೂಜಾ ವಿಧಿ, ಪ್ರತಿಮಾಶಾಸ್ತ್ರ, ತಂತ್ರ-ಮಂತ್ರ-ಹಸ್ತಸಾಮುದ್ರಿಕಾಗಳಲ್ಲಿ ಹೇಗೆ ಬಳಕೆಯಾಗುತ್ತಿವೆ ಮತ್ತು ಅವುಗಳ ಉಪಯೋಗ. ಮುಖ್ಯವಾಗಿ ಮುದ್ರೆಗಳ ಬಳಕೆಯಿಂದಾಗುವ ಆರೋಗ್ಯಕರ ಆಯಾಮಗಳ ತುಲನೆ.
- ಅಧ್ಯಯನಕ್ಕೆ ಅವಶ್ಯವಿರುವ ಇತಿಹಾಸ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರಿಂದ ಆಳ ಸಂದರ್ಶನ, ಪ್ರದರ್ಶನಗಳ ಸಮೀಕ್ಷೆ, ಗ್ರಂಥ ಅಧ್ಯಯನ.
- ನೃತ್ಯಾಭ್ಯಾಸಿಗಳಿಗೆ, ನೃತ್ಯ-ಯೋಗ-ವೇದ-ಧಾರ್ಮಿಕ ವಿಧಿ-ಮುದ್ರಾಚಿಕಿತ್ಸೆಯ ಗುರು-ಕಲಾವಿದರಿಗೆ, ಸಂಶೋಧಕರಿಗೆ, ಸಾಮಾನ್ಯ ವೀಕ್ಷಕರಿಗೆ, ಸಂವಹನ ಪರಿಣತರಿಗೆ, ಶಿಕ್ಷಕರಿಗೆ ಅನುಕೂಲಕರವಾದ ಅಭ್ಯಾಸಾನುಕೂಲವಾದ ಮಾರ್ಗದರ್ಶನೀಯ ಸಚಿತ್ರ ವಿವರಣೆಯುಳ್ಳ ಗ್ರಂಥ



