ಅಂಕಣಗಳು

Subscribe


 

ನೃತ್ಯ : ಅಂದು, ಇಂದು, ಮುಂದು

Posted On: Thursday, June 17th, 2010
1 Star2 Stars3 Stars4 Stars5 Stars (No Ratings Yet)
Loading...

Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು

ನಮಗೆ ಆಗಾಗ ಎದುರಾಗುತ್ತಿರುವ ಪ್ರಶ್ನೆ ! -ಈ ನಮ್ಮ ಜಗತ್ತಿನಲ್ಲಿ ಎಂದರೆ ಸುಧಾರಣಾ ಪಕ್ಷದವರು ಮುಂದಿಟ್ಟ ಹೆಜ್ಜೆಯಲ್ಲಿ (ಅಂದರೆ ತೀವ್ರ ಸುಧಾರಣಾ ತತ್ತ್ವಗಳಿಗೆ ಅನುಸಾರ ಹೊಂದಿದ ಈ ಜಗತ್ತಿನಲ್ಲಿ) ಭರತನಾಟ್ಯವನ್ನೇ ಬದಿಗಿರಿಸಿ ನಮ್ಮ ಹೊಸ ಬುದ್ಧಿಶಕ್ತಿ ಸೃಜಿಸಿದ ಪ್ರತಿಭಾದೃಷ್ಟಿಯ ಬೆನ್ನತ್ತಿ ಹೋಗಲೋ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಮನಸ್ಸು ‘ಬೇಡ’ ಅನ್ನುತ್ತದೆ. ತಾನು ಕಲಿತಿರುವ ಹಲವು ವಿದ್ಯೆಗಳಲ್ಲಿ ಭರತನಾಟ್ಯವನ್ನು ಬಿಟ್ಟು ಬೇರೊಂದರ ಸುಸ್ವರೂಪ ನಮಗೆ ಕಾಣಿಸಲಿಲ್ಲ. ನಮ್ಮ ಕಣ್ಣಿಗೆ ನಿಜವಾದ ಒಂದು ಪ್ರತಿಮೆ ಭರತನಾಟ್ಯದಲ್ಲಿದೆ. ಇದನ್ನು ರಚಿಸುವಾಗ, ಪ್ರಯೋಗಿಸುವಾಗ ನಮ್ಮಲ್ಲಿ ಒದಗಿರುವ ಸಂತೋಷ ಬೇರೊಂದು ಕಡೆಯಲ್ಲಿ ದೊರಕದು. ನಾಟ್ಯದ ಬಲ, ಶಕ್ತಿ, ಸೌಂದರ್ಯದಲ್ಲಿ ಒಂದು ಶ್ರದ್ಧೆಯನ್ನು ಕಾಣುತ್ತೇವೆ. ಇದನ್ನು ಹೊಂದಿದ ಸಂಗೀತದ ಸಾಮರ್ಥ್ಯ, ಶಬ್ದದ ಒಂದು ಉದ್ವೇಗ, ‘ಪ್ರತಿಮೆ’ಯ ಕಲ್ಪನೆಯಲ್ಲಿ ಮುಳುಗೇಳುತ್ತಿದ್ದೇವೆ.

ಒಂದು ಕಾಲದಲ್ಲಿ ಹಳೆಯ ನೃತ್ಯಗುರುಗಳು ದೊಡ್ಡ ಮನಸ್ಸಿನಿಂದ ಹಾಗೂ ಪೂರ್ಣಾಧಿಕಾರದಿಂದ ಭರತನಾಟ್ಯದ ಮೇಲ್ದರ್ಜೆಗೆ ಒಂದು ಕೀಲಿಕೈ ಒದಗಿಸಿದ್ದಾರೆ. ಪೂರ್ಣಸುಧಾರಣೆಗಾಗಿ ತನ್ನ ಮನಸ್ಸಿನ ಒಳಗಿದ್ದ ಕಲೆಗೆ ತನ್ನತನವೆಂಬ ಒಂದು ಗುಟ್ಟನ್ನು ಹೇಳಿಕೊಟ್ಟವರಿದ್ದರು ; ತನ್ನಲ್ಲಿ ಇರಬೇಕಾದ ಧೈರ್ಯವನ್ನು ಹೆಚ್ಚಿಸಿದರು; ಅದಕ್ಕೆ ಸಲ್ಲಬೇಕಾದ ಸಾಮರ್ಥ್ಯವನ್ನೂ ಒದಗಿಸಿದರು. ಗುರುಗಳೆನಿಸಿದ್ದವರು ಆ ಕಲೆಯ ಜೀವಧಾತುವನ್ನು ಹಿಡಿದಿದ್ದು, ನಾಟ್ಯಕಲೆಯ ಸಂಗೀತ ಮತ್ತು ನೃತ್ಯದಲ್ಲಿ ಹುದುಗಿರುವಂತಹ ಆಧಾರಗಳನ್ನು ಕಟ್ಟುನಿಟ್ಟಾಗಿ ಹೇಳಿಕೊಡುತ್ತಿದ್ದರು; ಅದರ ತಳವೆಷ್ಟು ಆಳದಲ್ಲಿದೆ ಎಂಬುದನ್ನೂ ತಿಳಿಸಿದ್ದರು. ಅಂದು ಸಾದಿರ್ ಎಂದರೆ ಕಲಾರಂಗದ ಮೇಲೆ ಕಾಣಿಸುವ ಕಲೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಪೂರ್ಣ ನೃತ್ಯವಾಗಿತ್ತು. ಸುಮಾರು ಎಂಭತ್ತು ವರ್ಷಗಳ ಹಿಂದೆ ಸಂಗೀತ ಕಲಾವಿದರು ಕಂಡುಕೊಂಡಿದ್ದದು ಈ ಕಲೆಯ ಪಾರಮ್ಯವನ್ನು.

ಇವೆಲ್ಲವೂ ನಮ್ಮ ಕಲಾರಾಧನೆಯ ಹೆಜ್ಜೆ ಮತ್ತು ಬೆಳವಣಿಗೆಗೆ ಸಹಾಯಕ. ಇಂತಹ ಬೆಳವಣಿಗೆಯಿಲ್ಲದೆ ಹೋದರೆ ಕಲೆಯ ಬಗ್ಗೆ ಒಂದು ಕ್ಷುದ್ರ ಅಭಿಪ್ರಾಯ ಮೂಡುತ್ತದೆ. ನಮ್ಮ ಕಲೆಗಳು ಜೀವಂತವಾಗಿರುತ್ತದೆ. ಅದೂ ಅಲ್ಲದೆ ಅವುಗಳೆಲ್ಲ ಸಾಧಾರಣ ಜನತೆಯ ಆತ್ಮದಲ್ಲೇ ಇದೆ. ಅದನ್ನೇ ನಾವು ವಿಕಾಸವಾದವೆನ್ನುವುದು. ಭಾರತದಲ್ಲಿ ಎಲ್ಲರೂ ದೊಡ್ಡವರೇ ! ಇದು ನಮ್ಮ ನಿಜವಾದ ತತ್ತ್ವ ಜಿಜ್ಞಾಸೆ (ದರ್ಶನ) ಜೀವನ ಪದ್ಧತಿ ; ಸತ್ಯ ಹಾಗೂ ಸೌಂದರ್ಯಯುತವಾದುದು ; ನಾವೂ ಜೀವಿಸಬೇಕು, ಉಳಿದವರೂ ಹಾಗೆಯೇ ಜೀವಿಸಬೇಕು- ಎಂಬ ತತ್ತ್ವದಿಂದ, ಜನಗಳಿಗೂ ನಮ್ಮ ನಡುವೆ ಒಂದು ತರಹದ ಸಮಾಲೋಚನಾ ಪದ್ಧತಿಯ ಜೀವನ ಮುಖ್ಯ.

ಬ್ರಿಟಿಷರ ಕಾಲದಲ್ಲಿ ಜನರಿಗೆ ಅತಿಪ್ರಿಯವಾದ ನಾಟಕಾದಿಕ್ರಿಯೆಗಳಿಂದ ದೇವದಾಸಿಯರ ನಾಟ್ಯವನ್ನು ಕಡೆಗಣಿಸಿದ್ದರು. ಅದೇ ದೇವದಾಸಿ ಪದ್ಧತಿಯಲ್ಲಿ ಅತಿಮುಖ್ಯವಾದ ಅಭಿನಯಭಾಗವೂ ಸಂಪೂರ್ಣವಾಗಿತ್ತು. ಆ ಕಲೆ ಮುಂದುವರಿಯದಂತೆ ಅದರ ಒಳತಿರುಳಿನ ಬಗೆಯಲ್ಲಿ ಹಲವು ಮಾರ್ಪಾಟುಗಳನ್ನು ಕಂಡರು. ಅಂದಿಗೂ ಬಹಳ ಮಂದಿಗೆ ಅವು ಚರ್ಚಾಸ್ಪದ ವಿಷಯವಾಗಿತ್ತು. ‘ತಾವು ಕಂಡುದೇ ಸತ್ಯ’ ಎಂದು ಬೇಡವಾದ ಅರಿವು ಅವರಿಗಿತ್ತು. ಉನ್ನತ ಮಟ್ಟದಲ್ಲಿದ್ದವರಿಗೆ ಯಾವುದೂ ಚೆನ್ನಾಗಿಲ್ಲವೆಂಬ ಪ್ರಜ್ಞೆ ಇತ್ತು. ಅವರ ಗಂಟಲಧ್ವನಿಗೆ ಎಲ್ಲರೂ ಸೋಲಬೇಕೆಂದಿತ್ತು ಅವರ ಹಠ. ಅಲ್ಲಿಯೂ ತಮ್ಮಲ್ಲಿಯೇ ಹೆಚ್ಚು ಕಡಿಮೆ ಇದೆ ಎಂಬುದು ಅವರ ಮನಸ್ಸಿಗೆ ಹೋಗಿಲ್ಲ. ಯಾವ ಗುರುವೂ ಅವರ ನಿಲುವಿಗೆ ಸರಿಯಾದ ವ್ಯಾಯಾಮ ಕೊಡುತ್ತಿಲ್ಲವಾಗಿತ್ತು. ನಮ್ಮದು ಸರಿ ಉಳಿದದ್ದು ಅಲ್ಲ ಎಂಬ ಯೋಚನೆ ಅವರದು.

ನೃತ್ಯದಲ್ಲಿ ತಾನು ನೋಡಿದ್ದೇ ಸರಿ ಎಂಬ ಯೋಚನೆ ಬೇಡ. ಆ ಕ್ರಮ ಸರಿಯಿಲ್ಲ, ಈ ಕ್ರಮವೂ ಸರಿಯಿಲ್ಲ ಎಂಬ ಮಾತಿನ ಹರಿವು ನಿಶ್ಚಿತವಲ್ಲ. ಮನಸ್ಸಿನಲ್ಲಿ ಯಾವ ಭಾವ ಯೋಚಿಸುವುದೋ ಅದನ್ನೇ ನಮ್ಮದಾಗಿಸಬೇಕು. ಇನ್ನೊಂದನ್ನು ಕಂಡು ವೈಷಮ್ಯವನ್ನು ಮೀರಿಸಬೇಕು. ಹಿಂದಿನ ನೃತ್ಯ ಗುರುಗಳು ಅಂತಹ ಭಾವವನ್ನು ಹೊಂದಿಲ್ಲವಾದ್ದರಿಂದಲೇ ನಮಗೆ ಆ ಕಲೆ ದೊರಕಿದೆ ಅಷ್ಟೇ ! ಭರತನಾಟ್ಯ ಬದಲಾವಣೆಗಳನ್ನು ಕಂಡಿದೆ. ಬದಲಾವಣೆಯಿದ್ದರೂ ಅದರ ನಡುವೆ ವೈಯಕ್ತಿಕತೆ ಇದೆ ಎಂಬುದನ್ನು ಮರೆಯಬಾರದು.

ಇಂದು ಒಬ್ಬನ ಜೀವಿತಾವಧಿಯು ಎಷ್ಟು ಸೂಕ್ಷ್ಮವೆಂದರೆ ಇಡಿಯ ವಿಶ್ವವೇ ನಮ್ಮಿದಿರು ತೆರೆದು ನಿಂತಿದೆ. ಅಂತೆಯೇ ಜೀವನದಲ್ಲಿ ಟೆಲಿಕಮ್ಯುನಿಕೇಶನ್ ಹಾಗೂ ಮಾರ್ಕೆಟ್ಟಿನ ಲಾಭನಷ್ಟಗಳೆಲ್ಲ ಸೇರಿದ ಶಾಪಕೂಪದಲ್ಲಿ ಭಾರತೀಯ ನೃತ್ಯವೂ ದಾರಿ ಕಾಣದೆ ಒಂದೆಡೆ ನಿಂತಿದೆ. ಉತ್ತಮ ಕಲಾವಿದನಲ್ಲಿ ಇರಬೇಕಾದ ಶಕ್ತಿಯೆಲ್ಲವೂ ನಾಶವಾಗಿ ಕಲೆಯಲ್ಲಿ ಬಿರುಕು ಕಂಡುಬರುತ್ತಿದೆ. ಆದರೂ ಒಂದೆರಡು ಕಡೆಗಳಲ್ಲಿ ಬೆಳಕಿಗೆ ಬರಲು ಪ್ರಯತ್ನಿಸಿದ್ದಾರೆ ಕೆಲವರು ನರ್ತಕರು. ನಾವೂ ಈ ಸಮಸ್ಯೆಯನ್ನು ಕಣ್ಮುಚ್ಚಿಕೊಂಡು ಅರ್ಥ ಮಾಡಿಕೊಳ್ಳುವುದರಲ್ಲಿ ಅರ್ಥವೂ ಅನರ್ಥವೂ ಬೆಂಬಿಡದೆ ಬಂದಿದೆ.

ಜೀವನದಲ್ಲಿ ಒಂದು ವಿಧದ ಲಾಭವನ್ನು ಪಡೆವ ರೀತಿಯನ್ನು ಕಾಣಿಸುವಾಗ ಕೆಲವು ನೃತ್ಯಶಿಕ್ಷಕರು ಪ್ರತ್ಯಕ್ಷರಾಗಿದ್ದಾರೆ. ನೃತ್ಯಗುರುಗಳು ಲಾಭದ ದೃಷ್ಟಿಯಲ್ಲಿ ತಮ್ಮ ಕಲೆಯನ್ನು ಮಾರಾಟಕ್ಕೆ ಇಟ್ಟಂತೆ ಕಾಣುವ ಸಂದರ್ಭವಿದೆ. ಭರತನಾಟ್ಯವನ್ನು ಅದಲು ಬದಲು ಮಾಡಿರುವುದು ಒಂದು ‘ಅಪರೂಪ’ವೇ ಹೌದು ! ಇವರ ಬಳಿಯಲ್ಲಿ ಕಲಿಯಲು ಬಂದ ಬಾಲಕರು ಬೇರೆ ಏನನ್ನು ಕಲಿಯಬೇಕು? ಈ ಗುರುಗಳು ವ್ಯಾಪಾರಸ್ಥರೆನ್ನಬೇಕೆ? ಅವರಿಗೆ ಬೇಕಷ್ಟು ನಿಧಿ ಸುರಿದರೆ ನಮ್ಮ ಮಕ್ಕಳು ಏನನ್ನು ಕಲಿಯಬಹುದು? ನಮ್ಮಿದಿರು ನಡೆವ ಈ ಜೀವನ ಕ್ರಮವನ್ನು ನಾವೆಂತು ಮಾರ್ಪಡಿಸುವೆವು? ಈಗಿನ ಭರತನಾಟ್ಯದ ಬಗೆಯನ್ನು ಅದರ ಮೂಲವನ್ನೇ ತಿರುಚಿ ವ್ಯತ್ಯಾಸ ಮಾಡಿದ್ದಾರೆ. ಹಾಗಾದರೆ ಈಗ ಇದನ್ನು ಭರತನಾಟ್ಯವೆಂದು ಕರೆಯಬಹುದೇ?

********

Leave a Reply

*

code