ಅಂಕಣಗಳು

Subscribe


 

ನಾಟ್ಯಶಾಸ್ತ್ರಕಥನಮಾಲಿಕೆ- ಮೂವತ್ತಾರನೇ ಅಧ್ಯಾಯ- ಋಷಿಶಾಪ

Posted On: Thursday, June 15th, 2017
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್

ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

ಭರತಮುನಿ- ಸಮಗ್ರವಿಶ್ವಕಾವ್ಯಮೀಮಾಂಸೆಗೆ ಚೂಡಾಮಣಿಯಂತಿರುವ ನಾಟ್ಯಶಾಸ್ತ್ರದ ರಚನಕಾರ. ಅಲಂಕಾರಶಾಸ್ತ್ರದ ಐತಿಹಾಸಿಕ ವಿಕಾಸಕ್ಕೆ ತಾಯಿಬೇರಾದ ಪುಣ್ಯಪುರುಷ. ಸೌಂದಂiiಮೀಮಾಂಸೆಗಳಿಗೆ ಆರ್ಷಮೂಲದ ಜೀವಸ್ರೋತಸ್ಸು. ಭಾರತೀಯ ಸೌಂದರ್ಯಶಾಸ್ತ್ರಸೌಧದ ಸ್ವರ್ಣಶಿಖರದಂತಿರುವ ರಸತತ್ತ್ವವನ್ನು ಧಾರೆಯೆರೆದ ಕಾರಣಪುರುಷ. ನಾಟ್ಯಮಂಡಪದ ಆದ್ಯ ಪ್ರವರ್ತಕ. ಭಾರತದೇಶವಷ್ಟೇ ಅಲ್ಲ, ಅಖಂಡ ಭೂಮಂಡಲದ ಸಾಂಸ್ಕೃತಿಕ, ಸಾಹಿತ್ಯಜೀವಿಗಳ ಪಿತಾಮಹ. ಬೇರೆ ಬೇರೆ ಕಾಲ, ದೇಶಕ್ಕೆ ತಕ್ಕಂತೆ ಸಾರ್ವಕಾಲಿಕವಾಗಿ ಕಲೆಯ ವಿಶಿಷ್ಟ ಮಾದರಿಗಳನ್ನು, ಸಾಧ್ಯತೆಗಳನ್ನು ಕಟ್ಟಿಕೊಟ್ಟ ಭರತರ್ಷಿ ಯತಾರ್ಥದಲ್ಲಿಯೂ ಕಲಾಸರಸ್ವತಿಯ ರಾಯಭಾರಿ. ಆತನ ವ್ಯಕ್ತಿತ್ವ, ಸೂತ್ರ, ಕರ್ತೃತ್ವ ಎಲ್ಲವೂ ಬಗೆದದ್ದು ತಾರೆ ಉಳಿದದ್ದು ಆಕಾಶ ಎಂಬ ಮಾತಿಗೆ ಅನ್ವರ್ಥ.

ಆದ್ದರಿಂದಲೇ ಭರತಮುನಿಯಿಂದ ಬರೆಯಲ್ಪಟ್ಟ ನಾಟ್ಯಶಾಸ್ತ್ರ ಭರತಸೂತ್ರವೆಂಬುದಾಗಿಯೂ ಪ್ರಚಲಿತ. ಕಲಾವಿಶ್ವಕೋಶ, ಸಂಸ್ಕೃತಿಸರ್ವಸ್ವಸಂಗ್ರಹವಾಗಿ, ಎಲ್ಲ ಕಾಲಕ್ಕೂ ಸಲ್ಲುವ ತತ್ವ-ಪ್ರಯೋಗನಿಧಿಯಾಗಿ, ಸಮಗ್ರ ದರ್ಶನಸಿದ್ಧಾಂತದ ಪ್ರತಿರೂಪವಾಗಿ ನಾಟ್ಯಶಾಸ್ತ್ರವು ಸರ್ವಕಾಲಕ್ಕೂ ಆದರಣೀಯ. ಭಾರತೀಯ ಸಂಸ್ಕೃತಿಯ ಸಮಗ್ರತೆಗೆ ಸಂಬಂಧಿಸಿದಂತೆ ನಾಟ್ಯಶಾಸ್ತ್ರದ ಮೌಲ್ಯ ಮಹೋನ್ನತವಾದದ್ದು. ನಾಟ್ಯದ ಉತ್ಪತ್ತಿ, ಪ್ರಯೋಗ, ಅಂಗಗಳು ಮೊದಲಾದವನ್ನು ಕುರಿತು ಹೇಳದೇ ಉಳಿದ ವಿಷಯವೆಂಬುದು ಯಾವುದೂ ಅದರಲ್ಲಿಲ್ಲ. ನಾಟ್ಯಪ್ರಪಂಚವಷ್ಟೇ ಅಲ್ಲ, ಕಾವ್ಯಮೀಮಾಂಸೆ, ಅಲಂಕಾರಶಾಸ್ತ್ರದ ಪ್ರಥಮ ಕುಸುಮಗಳು ಕುಡಿಯೊಡೆದದ್ದು ಭರತನ ಬೊಗಸೆಯಲ್ಲಿ. ಹಾಗಾಗಿ ಕಾವ್ಯಲಕ್ಷಣಕಾರರಿಗೆಲ್ಲಾ ಭರತನೇ ಪ್ರಥಮಗುರುವಾಗಿ ವಂದ್ಯನಾಗಿದ್ದಾನೆ.

ಪ್ರಸ್ತುತ ಈ ನಾಟ್ಯಶಾಸ್ತ್ರಕಥನಮಾಲಿಕೆಯು ೩೬ ಅಧ್ಯಾಯದ ಪರ್ಯಂತ ಹಬ್ಬಿರುವ ನಾಟ್ಯಶಾಸ್ತ್ರದೊಳಗೆ ಬರುವಂತಹ ಭಾರತೀಯ ಸಂಸ್ಕೃತಿಯ, ನಾಟ್ಯಕಲೆಯ ಕುರಿತಾದ ಆಕರ್ಷಕ ಕಥೆಗಳನ್ನು ಪ್ರತೀ ಸಂಚಿಕೆಗೆ ನಿಮ್ಮ ಮುಂದೆ ಅನಾವರಣಗೊಳಿಸುತ್ತಾ ಸಾಗಲಿದೆ. ಅದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ನಡೆದ ನಾಟ್ಯಚಿಂತನ ಕಾರ್ಯಾಗಾರದ ಸಮಯದಲ್ಲಿ ಬರೆಯಲಾದ ನಾಟ್ಯಶಾಸ್ತ್ರಕಥೆಗಳ ಕಾವ್ಯಮಾಲಿಕೆ ಮತ್ತು ಕಥೆಯ ಅಧ್ಯಾಯದ ಸಂಕ್ಷಿಪ್ತ ವಿವರವನ್ನು ಮಹಾಮುನಿ ಭರತ ಎಂಬ ಕೃತಿಯಿಂದ ಆಯ್ದು ಪ್ರಕಟಿಸಲಾಗುತ್ತದೆ. ಇದು ಆಸಕ್ತ ಕಲಾವಿದರಿಗೆ, ನೃತ್ಯಸಂಯೋಜನೆಯ ಪ್ರತಿಭೆಯನ್ನಿಟ್ಟುಕೊಂಡು ಸಾಹಿತ್ಯಕ್ಕಾಗಿ ಅರಸುತ್ತಿರುವ ಗುರು-ಶಿಕ್ಷಕರಿಗೆ, ವಿದ್ಯಾರ್ಥಿಮಿತ್ರರಿಗೆ, ಚಿಣ್ಣರ ಕುತೂಹಲದ ಕಥಾಪ್ರಪಂಚಕ್ಕೆ, ಕಲಾಪ್ರೇಮಿಗಳಾದ ಸಹೃದಯ ಓದುಗರಿಗೆ ಒಳ್ಳೆಯ ರಸಾಹಾರವನ್ನು ಕೊಡಲಿದೆ ಎಂಬುದು ನಮ್ಮ ಅಭೀಪ್ಸೆ. ನಮ್ಮ ಆಶಯಕ್ಕೆ ತಾವೂ ಇಂಬುಕೊಡುತ್ತೀರಲ್ವಾ? -ಸಂ.

ಮೂವತ್ತಾರನೇ ಅಧ್ಯಾಯ

ಋಷಿಶಾಪ

ಕಳೆದ ಸಂಚಿಕೆಗಳಲ್ಲಿ ಪ್ರಥಮ ಅಧ್ಯಾಯ ನಾಟ್ಯೋತ್ಪತ್ತಿಯಿಂದ ಮೊದಲ್ಗೊಂಡು ವೃತ್ತಿ ವಿಕಲ್ಪದ ವರೆಗಿನ ಕಥೆಯನ್ನು ನಿರೂಪಿಸಲಾಗಿತ್ತು. ಪ್ರಸ್ತುತ ಸಂಚಿಕೆಯಲ್ಲಿ ನಾಟ್ಯವು ಭುವಿಗಿಳಿದು ಹರಡಲು ಪ್ರೇರಕವಾದ ಒಂದು ಋಷಿಶಾಪದ ಕಥಾನಿರೂಪಣೆ. ಇದು ನಾಟ್ಯಾವತರಣ ಎಂಬ ನಾಟ್ಯಶಾಸ್ತ್ರದ ಕೊನೆಯ ೩೬ನೇ ಅಧ್ಯಾಯದ ಮಧ್ಯಖಂಡದಲ್ಲಿದೆ.

ನಾಟ್ಯದ ಕುರಿತಾಗಿ ಭರತನ ಎಲ್ಲ ವರ್ಣನೆಯನ್ನು ಕೇಳಿದ ಆತ್ರೇಯಾದಿ ಋಷಿಗಳು ತಮ್ಮಲ್ಲಿ ಉಳಿದುಕೊಂಡಿರುವ ಹಲವು ಸಂದೇಹಗಳನ್ನು ಕೇಳಿ ಬಗೆಹರಿಸಿಕೊಳ್ಳುತ್ತಾ ನಾಟ್ಯವು ಭೂಲೋಕಕ್ಕೆ ಇಳಿದುಬಂದ ಬಗೆಯನ್ನು ಪ್ರಶ್ನಿಸುತ್ತಾರೆ. ಆಗ ಭರತನು ತನ್ನ ಪುತ್ರರು ಮುನಿಗಳನ್ನು ಗೇಲಿಮಾಡಿ ಅವರನ್ನು ಭೌತಿಕವಾಗಿಯೂ ಹಿಂಸಿಸಿದ್ದರ ಫಲವಾಗಿ ಪಡೆದ ಶಾಪವನ್ನು ತಿಳಿಸುತ್ತಾನೆ. ನಾಟ್ಯವು ನಾಶವಾಗಿ ಶೂದ್ರ(ಅಂತ್ಯಜ)ರಾಗುವ ಶಾಪವನ್ನು ಭರತಪುತ್ರರು ಪಡೆಯುವುದರ ಹಿಂದಿನ ಮರ್ಮ ಕಲೆ ಮತ್ತು ಕಲಾವಿದರು ತಾವು ಅನುಸರಿಸಬೇಕಾದ ಜೀವನಧರ್ಮವನ್ನು ಕಾಪಾಡದೆ ಉಲ್ಲಂಘಿಸಿದರೆ ಆಗುವ ಅಪಾಯವನ್ನೂ ಸೂಚಿಸಿದೆ. ನಂತರದಲ್ಲಿ ನಾಟ್ಯನಾಶದ ಶಾಪವನ್ನು ಹಿಂಪಡೆಯಲು ಕಳಕಳಿಯಿಂದ ಕೇಳಿಕೊಂಡರೂ ಮುನಿಗಳು ಎರಡನೇ ಶಾಪವು ಮಾತ್ರ ಖಂಡಿತಾ ಘಟಿಸುತ್ತದೆಯೆನ್ನುತ್ತಾರೆ. ಇದು ಕಾಲಕ್ರಮದಲ್ಲಿ ಭರತನ ಪುತ್ರರು ಭೂಮಿಯಲ್ಲಿ ನಾಟ್ಯವನ್ನು ಪ್ರಚುರಿಸಿದ ತರುವಾಯ ಭರತ(ನಟ)ವಂಶಕ್ಕೆ ಅಂಟಿದ ಕಳಂಕ, ಅಂತ್ಯಜರ ಸೊತ್ತಾಗಿ ಇದ್ದಿರಬಹುದಾದ ಕಾರಣವನ್ನು ನೀಡುತ್ತದೆ. ಶಾಪದಿಂದ ಕ್ರುದ್ಧರೂ, ದುಃಖಿತರೂ ಆದ ಭರತಪುತ್ರರು ಭರತನನ್ನು ನಿಂದಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮನಮಾಡಿದಾಗ ಭರತನು ಅವರನ್ನು ತಡೆದು ಸಮಾಧಾನಿಸಿ ಯುಕ್ತ ಉಪದೇಶವನ್ನು ನೀಡುತ್ತಾನೆ. ಆ ಕಥಾಭಾಗವು ವಿಷದವಾಗಿ ಕಾವ್ಯರೂಪದಲ್ಲಿದೆ.

(ಚತುರಶ್ರ‌ಏಕ)ಮುನಿಗಳು ಭರತನಲ್ಲಿ : ನಾಟ್ಯಸುಮವು ಬಾಂದೋಟದಿಂದ ಧರೆಗಿಳಿದ ಕವಲು ತೋರು

ಇಹತಾಪ ಕಳೆವ ಸುಖಲಾಸ ಕೊಡುವ ನಟಕುಲವೆ ಪುಣ್ಯಬಾಳು (ಸ್ವರಕಲ್ಪನೆ)

ಭರತ : ನಾಟ್ಯಮೊಗ್ಗು ಹೂವಾಗಿ ಅರಳಿ ಮಡಿಲಲ್ಲಿ ಗಂಧ ಪೂಸಿ

ಭರತವರ್ಷದಲಿ ಭರತರೆಂದೆ ಹೆಸರಾಗಿ ಚೆಲುವು ಸೂಸಿ

(ಮಿಶ್ರಗತಿ) ಕಲಿತು ಕೊಬ್ಬಿದ ನನ್ನ ಮಕ್ಕಳು ವಿನಯವನು ಕಂಡರಿಯರು

ಪ್ರಹಸನದಿ ದ್ವಿಜ ಋಷಿಮಹಿಮರನು ಆಡಿ ಅಳಲನು ತಂದರು

(ಪಾಟಾಕ್ಷರಕಲ್ಪನೆ ಅಥವಾ ಆಲಾಪನೆ ಅಥವಾ ವಾದ್ಯದಲ್ಲಿ ಗತಿನುಡಿಸಾಣಿಕೆ. ಮುನಿಗಳ ಆಶ್ರಮದಲ್ಲಿ ಭರತಪುತ್ರರ ಆಟಾಟೋಪಕ್ಕೆ ಅನುಕ್ರಮವಾಗಿ ಚಿತ್ರಿಸಬಹುದು)

ನೊಂದ ಋಷಿಗಳ ಆಲಾಪ ಮತ್ತು ಶಾಪ :- ನಾಟ್ಯಘಾತದಿ ಮಾನಘಾತಿಯೇ ? ಮದದ ನೃತ್ತಕೆ ಶಾಸ್ತ್ರ ಕಾಂತಿಯೇ?

ಹರಕೆ ಸಾಯಲಿ ಹರನೆ ಬಂದರೂ ಹರಿಯೆ ನಿಂದರೂ ನಾಟ್ಯವಳಿಯಲಿ

ನೀಚರಾಗಿ… ನಿರ್ವ್ರತರ ನರಕದಿ ನಲುಗಿ ನೊಣೆಯಿರಿ ಹೊಟ್ಟೆ ಹೊರೆಯಿರಿ

ಮಲೆತು ಮೆರೆದರೆ ಅಲೆತು ಕೊಳೆಯಿರಿ.. ಊಟ‌ಅರಿವೆಗೆ ಕಲೆಯ ಮಾರಿರಿ…

(ಚತುರಶ್ರ) ಬೇಸರಗೊಂಡ ದೇವತೆಗಳು ಮತ್ತು ಭರತಪುತ್ರರು : ತರವಲ್ಲ ಈ ಶಾಪ ನಾಟ್ಯದಗ್ಗಳಿಕೆಗೆ

ತಮವಳಿದು ಬೆಳಕಿಂಡಿ ಕೊಡಬಾರದೆ?

ದೇವದೊಲುಮೆಯ ವರಕೆ ಕೋಪತಾಪವು ಸರಿಯೇ?

ದಯೆಯಿಂದ ಮನ ಮಾಡಿ ಸಮರಸದ ರುಚಿ ತೋರಿ

ಋಷಿಗಳು : ಅಸ್ತು. ನಾಟ್ಯವು ನಾಶವಾಗದು, ಉಳಿಕೆ ವಚನವು ಕಾಂಬುದು (ನಿರೂಪಣೆ)

(ಚತುರಶ್ರ‌ಏಕ-ದ್ರುತದಲ್ಲಿ) ಮಕ್ಕಳು ಭರತನೆಡೆಗೆ ಬಂದು : ನೀನೆ ಕಲಿಸಿದ ನಾಟ್ಯವಿಂದಿಗೆ ನೀಚಜನ್ಮದ ನಾಂದಿಯಾದರೆ

ಬದುಕು ಬೇಕೇ, ಕಲೆಯು ಸಾಕು, ಅಸುವ ಕಳೆವೆವು, ದೇಹ ತೊರೆವೆವು

(ಮಿಶ್ರ) ಭರತ ಸಮಾಧಾನಿಸುತ್ತಾ :- ವೇದಸಾರದಿ ಮಿಂದ ಗಂಗೆಗೆ ಕರ್ಮ-ಮಲಿನತೆ ತಂದಿರಾ?

ನಾಟ್ಯವೇದವ ಅರಿತು ಬೆಳೆಸದೆ ಮದದ ಮಂಜನು ಹೊದೆದಿರಾ?

ದ್ವಿಜರ ನಿಂದಿಸಿ ಶಾಪ ಪಡೆದರೆ ಕುಲುಮೆಯೊಳಗಿನ ಅನುಭವ

ಬೆಂದು ಬಸಿದರೆ ಸತ್ತ್ವ ನಿರ್ಮಲ ಸ್ವರ್ಣಕಾಂತಿಯು ಉಜ್ವಲ

ಕಲೆಯ ವಿಕ್ರಯ ನಾಶನಿಶ್ಚಯ ಜಾರತನದಲಿ ನಡೆಗೆ ಅಪಜಯ

ಕರ್ಮ ಕಳೆಯಲು ಧರ್ಮದಲಿ ನಡೆ ಅರ್ಥ ಕಾಮವ ದೂರದಲಿ ಒಗೆ

ಮೋದ- ಹ್ಲಾದಕೆ ಬೋಧನಾದದ ವೀಣೆ ಮಿಡಿದರೆ ಶ್ರುತಿಯ ಸರಿಗಮ

ನಾಟ್ಯ ಹಿರಿಮೆಯ ಪಂಥ ಪಸರಿಸೆ ಭವದ ಬಂಧನ ಸುಖದ ಸಂಗಮ

(ಮುಂದಿನ ಮಾಲಿಕೆಯಲ್ಲಿ…ನಿರೀಕ್ಷಿಸಿ ಋಷಿಶಾಪ ಮತ್ತು ಭೂಮಿಯಲ್ಲಿ ನಾಟ್ಯದ ಅವತರಣ)

Leave a Reply

*

code