ಅಂಕಣಗಳು

Subscribe


 

ನಾಟ್ಯ ತಪಸ್ವಿ “ ಕಿಟ್ಟೂ ಸರ್”

Posted On: Thursday, December 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ದೀಪಾ ಭಟ್, ನೃತ್ಯ ಕಲಾವಿದರು, ಬೆಂಗಳೂರು

 

ಕಿಟ್ಟೂ ಸರ್ ಎಂದೇ ತಮ್ಮ ಶಿಷ್ಯವೃಂದದಲ್ಲಿ ಪ್ರಸಿದ್ಧರಾಗಿರುವ ಎಮ್. ಆರ್. ಕೃಷ್ಣಮೂರ್ತಿಯವರು ೧೯-೧೨-೧೯೩೬ ರಂದು ಶ್ರೀ ರಾಜಾರಾವ್ ಹಾಗು ಶ್ರೀಮತಿ ಸೇತುಬಾಯಿಯವರ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ನಾಟ್ಯಕಲೆಯ ಬಗೆ ಅಪಾರ ಆಸಕ್ತಿ ಮೂಡಿದಾಗ, ಭರತನಾಟ್ಯಕ್ಷೇತ್ರದಲ್ಲಿ ಗಟ್ಟಿಯಾಗಿ ತಳವೂರಲು ದೊರಕ್ಕಿದ್ದು ಚೆನೈನ ಶ್ರೀಮತಿ ರುಕ್ಮಿಣಿ ಅರುಂಡೇಲ್ ಅವರ ಮಾರ್ಗದರ್ಶನ. ತಮ್ಮ ಹದಿನಾರು ವರ್ಷದಿಂದ ಗುರುಕುಲ ಪದ್ದತಿಯಲ್ಲಿ ಚೆನೈ ಕಲಾಕ್ಷೇತ್ರದಲ್ಲಿ ಶಿಸ್ತುಬದ್ಧವಾಗಿ ಭರತನಾಟ್ಯ ಅಭ್ಯಾಸ ಮಾಡಿ, ತಮ್ಮ ಮುಂದಿನ ನೃತ್ಯವೃತ್ತಿಗೆ ಭದ್ರ ಬುನಾದಿ ಹಾಕಿಕೊಂಡರು. ಕಲಾಕ್ಷೇತ್ರದಲ್ಲಿ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕಲಾಕ್ಷೇತ್ರದ ಜನಪ್ರಿಯ ನೃತ್ಯ ಸಂಯೋಜನೆಗಳಾದ ಸಂಪೂರ್ಣ ರಾಮಾಯಣ, ಆಂಡಾಳ್ ಚರಿತಂ, ದಮಯಂತಿ ಸ್ವಯಂವರಂ, ಪುರಂದರದಾಸ, ರುಕ್ಮಿಣೀ ಕಲ್ಯಾಣಂ, ಶಾಕುಂತಲಂ ಇನ್ನೂ ಮುಂತಾದ ನೃತ್ಯರೂಪಕಗಳಲ್ಲಿ ನರ್ತಿಸುವುದರ ಜತೆಗೆ ಜಪಾನ್, ಸಿಂಗಾಪುರ್, ರಷ್ಯಾ, ನೇಪಾಳ, ಆಸ್ಟ್ರೇಲಿಯ ಮುಂತಾದ ಹೊರರಾಷ್ಟ್ರಗಳಲ್ಲಿ ಭರತನಾಟ್ಯದಲ್ಲಿನ ಸೊಬಗಿನ ಸೊಂಪನ್ನು ಪಸರಿಸಿದರು. ಭರತನಾಟ್ಯಕ್ಕೆ ಪೂರಕವಾದ ಅಭಿನಯದ ಪ್ರೌಢತೆಯನ್ನು ಮೈಲಾಪುರ ಗೌರಿ ಅಮ್ಮಾಳ್ ಹಾಗು ಕಥಕಳಿ ನೃತ್ಯಶೈಲಿಯನ್ನು ಶ್ರೀ ಚಂದು ಪಣಿಕ್ಕರ್ ಬಳಿ ಅಭ್ಯಾಸ ಮಾಡಿದರು.

ಹೀಗೆ ಕಲಾಕ್ಷೇತ್ರದಲ್ಲಿ ನೃತ್ಯ ಕಲಿತು, ಅಲ್ಲೇ ಕಲಾವಿದರಾಗಿ ಬೆಳೆದು, ಸುಮಾರು ೪೫ ವರ್ಷಗಳ ಕಾಲ ಪ್ರೊಫೆಸರ್ ಆಗಿ ನೃತ್ಯೋಪಾಸನೆ ಮಾಡುತ್ತ, ತಮ್ಮ ತನು ಮನ ಧನಗಳೆಲ್ಲವನ್ನೂ ನೃತ್ಯಕಲೆಗಾಗಿ ಮುಡುಪಾಗಿಟ್ಟು ಕಲಾತಪಸ್ವಿಯಾಗಿ, ನೃತ್ಯ ಮಾರ್ಗದರ್ಶಕರಾಗಿ ಜನಪ್ರಿಯವೆನಿಸಿದರು. ಚೆನೈಯಿಂದ ಬೆಂಗಳೂರಿಗೆ ಹಿಂತಿರುಗಿ ಬಂದ ನಂತರ ೧೯೯೧ ರಲ್ಲಿ ಬಸವನಗುಡಿಯಲ್ಲಿ ಸುಂದರ ಕಲಾಶಾಲೆ ಕಲಾಕ್ಷಿತಿ ಆರಂಭಿಸಿದರು. ಈ ಸಂಸ್ಥೆಯ ಮೂಲಕ ಆಸಕ್ತರಿಗೆ ಶುದ್ದ ಶಾಸ್ತ್ರೀಯ ಭರತನಾಟ್ಯ ಅಭ್ಯಾಸ ಮುಂದುವರೆಸಿದರು. ಭರತನಾಟ್ಯ ಸಂಪ್ರದಾಯತೆಯ ಚೌಕಟ್ಟು ಮೀರಿ, ಕೀಳುಕಲೆಯಾಗಿ ಪ್ರದರ್ಶಿಸಲು ಅಥವಾ ಉತ್ಪೇಕ್ಷೆಯಾಗಿ ತೋರ್ಪಡಿಸಲು ಕಿಟ್ಟು ಸಾರ್ ಯಾವಾಗಲೂ ಸುತಾರಾಂ ಒಪ್ಪಲಾರರು. ಇಂದಿನ ಜಾಗತೀಕರಣ, ಪಾಶ್ಚಾತ್ಯ ಅನುಕರಣೀಯ ನೃತ್ಯ ಇವುಗಳೆಲ್ಲಕ್ಕೂ ಸವಾಲು ಎಂಬಂತೆ ಆತ್ಮಾನಂದದಲ್ಲಿ ಭಾರತೀಯ ಸಂಸ್ಕೃತಿ ತೋರುವ, ದೈವೀ ಪ್ರಜ್ಞೆ ಬಿಂಬಿಸುವ ಭರತನಾಟ್ಯಕ್ಕೆ ವಿಶಿಷ್ಠ ಛಾಪು ನೀಡಿ, ಎಲ್ಲಾ ವಯೋಮಾನದವರನ್ನು ಆಕರ್ಷಿಸುವ ಕಲೆಯಾಗಿ ಬೆಳೆಯಲು ಸದಾ ಕಂಕಣ ತೊಟ್ಟು ನಿಂತಿದ್ದಾರೆ ನಾಟ್ಯಾಚಾರ್ಯ ಎಮ್. ಆರ್. ಕೃಷ್ಣಮೂರ್ತಿಯವರು. ಕಿಟ್ಟೂ ಸಾರ್ ಸಂಯೋಜನೆಯಲ್ಲಿ ಪಂಚಕನ್ಯೆ, ಉಗಾದಿ ವೈಭವ, ಶ್ರೀ ಕೃಷ್ಣ ದೀಪಿಕಾ, ರಸೋಲ್ಲಾಸ, ಗೋಕುಲ ನಿರ್ಗಮನ, ರುಕ್ಮಿಣಿ ಕಲ್ಯಾಣ, ವಚನವಲ್ಲರಿ, ದೇವಿ ಸ್ತುತಿ ಮುಂತಾದ ನೃತ್ಯರೂಪಕಗಳು ಜನಮನ ರಂಜಿಸಿವೆ.

ಕಿಟ್ಟುಸಾರ್ ಸದಾ ಹಸನ್ಮುಖಿ, ಸರಳ ವ್ಯಕ್ತಿ. ಪ್ರತಿ ದಿನ ಬೆಳಿಗ್ಗೆ ೬ ರಿಂದ ರಾತ್ರಿ ೮ ರವರೆಗೆ ನಿರಂತರ ಕಲಾರಾಧನೆ. ಕಲೆಗಾಗಿ ಚಿಂತನೆ. ಭಾರತ ಸರ್ಕಾರದಿಂದ ಶಿಷ್ಯವೇತನ, ಮದ್ರಾಸ್ ಸರ್ಕಾರದಿಂದ ವಾರ್ಷಿಕ ಅನುದಾನ, ಕರ್ನಾಟಕ ಸರ್ಕಾರದಿಂದ ಕಲಾಶ್ರೀ, ಗಾಯನ ಸಮಾಜ ಬೆಂಗಳೂರು ಇವರಿಂದ ವರ್ಷದ ಕಲಾವಿದ ೨೦೦೦, ಸಾಗರ ಕಲಾ ರಸಿಕ ಸಂಘದಿಂದ ನಾಟ್ಯ ತಪಸ್ವಿ, ದಾವಣಗೆರೆ ಜನತೆಯಿಂದ ಸಂಗೀತ ಸುಮಲತ ನಾಟ್ಯ ರಸ‌ಋಷಿ, ಬೆಂಗಳೂರು ಜನತೆಯಿಂದ ಪೂರ್ವಾಂಕರ್ ಪ್ರಶಸ್ತಿ– ಹೀಗೆ ಹಲವಾರು ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳಿಂದ ಶೋಭಿತರಾಗಿರುವ ಕಿಟ್ಟು ಸಾರ್ ಎಂದಿಗೂ ಪ್ರಶಸ್ತಿಯ ಬೆನ್ನಟ್ಟಿ ಹೋದವರೇ ಅಲ್ಲ. ತಮ್ಮ ಗುರುಗಳ ಸ್ಮರಣಾರ್ಥ ಪ್ರತೀ ವರ್ಷ ರುಕ್ಮಿಣಿ ಅರುಂಡೇಲ್ ನೃತ್ಯೋತ್ಸವವನ್ನು ವಿಜೃಂಭಣೆಯಿಂದ ಕಲಾಕ್ಷಿತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.

ಕಿಟ್ಟೂ ಸಾರ್ ಬಳಿ ನೃತ್ಯ ಶಿಕ್ಷಣ ಆರಂಭಿಸಲು ಶಿಷ್ಯರಿಗೆ ಕಡೇ ಪಕ್ಷ ೮ ವರ್ಷ ಪ್ರಾಯ ಆಗಿರಲೇಬೇಕೆಂಬುದು ನಿಯಮ. ನೃತ್ಯಾಭ್ಯಾಸದ ಕಠಿಣತೆ ನಿಭಾಯಿಸಲು ಕಾಲು ಹಾಗೂ ಕಾಲಿನ ಮೂಳೆ ಬಲಿಷ್ಠವಾಗಲು ಕನಿಷ್ಠ ೮ ವರ್ಷವಾಗಿರಬೇಕು ಎನ್ನುವುದು ಅವರ ವಿಚಾರಧಾರೆ. ಕಲಾಕ್ಷೇತ್ರದಲ್ಲಿ ತಾನು ಕಲಿತಂತೇ ಇಂದು ಕಲಾಕ್ಷಿತಿಯಲ್ಲಿ ಕಟ್ಟುನಿಟ್ಟಾಗಿ ನೃತ್ಯ ಶಿಕ್ಷಣ ನೀಡುವುದರಲ್ಲಿ ಕಿಟ್ಟೂಸಾರ್ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ವೇದಿಕೆಯಲ್ಲಿ ಕಲಾವಿದರು ಪ್ರದರ್ಶಿಸುವ ನೃತ್ಯಬಂಧ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಪಕ್ಷದಲ್ಲಿ ಕಲಾವಿದರಿಗೆ ಆ ನೃತ್ಯ ಮಾಡುವುದೇ ಬೇಡ ಎಂದು ಕಿಟ್ಟುಸಾರ್ ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ. ಗುರುಗಳು ಹೇಳಿದ ನೃತ್ಯಬಂಧವನ್ನೇ ಮಾಡಬೇಕಲ್ಲ! ಬೇರೆ ನೃತ್ಯಬಂಧಕ್ಕೆ ಅವಕಾಶ ಕೊಡುವುದಿಲ್ಲವಲ್ಲಾ ಎಂಬ ಬೇಸರ ಅನೇಕ ಬಾರಿ ಶಿಷ್ಯರಿಗೆ ಕಾಡುತ್ತಿದ್ದುದು ನಿಜ. ಹಾಗೆಯೇ ಉತ್ತಮ ರೀತಿಯ ಪ್ರದರ್ಶನಕ್ಕೆ ಶಹಭಾಷ್ ಕೊಡುವುದನ್ನೂ ಸಹಾ ಕಿಟ್ಟೂ ಸಾರ್ ಮರೆಯುವುದಿಲ್ಲ. ಗುರುಗಳ ಮನದಾಳದಿಂದ ಬಂದ ದೈವಿಕ ಮಾತು ಕಲಾವಿದರಿಗೆ ಅವಿಸ್ಮರಣೀಯ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.

ನೃತ್ಯ ಕಾರ್ಯಕ್ರಮದಲ್ಲಿ ಆಹಾರ್ಯಕ್ಕೆ ಅತಿ ಹೆಚ್ಚಿನ ಗಮನವಿಡುವಂತೆ ಕಿಟ್ಟೂಸಾರ್ ಯಾವಾಗಲೂ ಕಳಕಳಿಯಿಂದ ಹೇಳುತ್ತಾರೆ. ವೇಷಭೂಷಣ ಸಂಪ್ರದಾಯದ ಚೌಕಟ್ಟಿನಲ್ಲಿ, ಅತಿರೇಕಕ್ಕೆ ಹೋಗದಂತೆ ಇರಲು ಸ್ವತಃ ತಾವೇ ಒಮ್ಮೆ ಎಲ್ಲಾ ಶಿಷ್ಯರ ಆಹಾರ್ಯದತ್ತ ಗಮನವಿಟ್ಟು ನೋಡಿ ಸೂಕ್ತ ತಿದ್ದುಪಡಿಗಳನ್ನು ಮಾಡಿಸುತ್ತಾರೆ. ಒಮ್ಮೆ ಝಗಝಗ ಮಿರುಗುವ ರಾಗಟೆ ಧರಿಸಿದ್ದಕ್ಕೆ ಹಾಗೂ ಇನ್ನೊಮ್ಮೆ ರಾಗಟೆ ಸುತ್ತ ಬಳಸಿದ್ದ ಹೂವು ಜಾಸ್ತಿಯಾದ್ದಕ್ಕೆ ಕಿಟ್ಟೂಸಾರ್ ನನ್ನನ್ನು ಕರೆದು, ತಿದ್ದಿದ್ದು ಇನ್ನೂ ಆಗಾಗ್ಗೆ ನೆನಪಿಗೆ ಬರುತ್ತದೆ.

ಪ್ರತಿ ನಿತ್ಯದ ನೃತ್ಯ ತರಗತಿಗಳಿಗೆ ಶಿಷ್ಯರು ಶಿಸ್ತಿನಿಂದ ತರಗತಿಯ ಸಮವಸ್ತ್ರ (ಅಭ್ಯಾಸದ ಸೀರೆ ಅಥವಾ ಸಣ್ಣ ಮಕ್ಕಳಿಗೆ ಚೂಡಿದಾರ್) ಧರಿಸಿ, ಹಣೆಗೆ ಕುಂಕುಮ, ಕೈಯಲ್ಲಿ ಬಳೆ ಧರಿಸಿ ಬರದಿದ್ದರೆ ನೃತ್ಯಾಭ್ಯಾಸದಲ್ಲಿ ಭಾಗವಹಿಸಲು ಅವಕಾಶವನ್ನೇ ಕೊಡುವುದಿಲ್ಲ. ಹಾಗೆಯೇ ಕಲಾಕ್ಷಿತಿಯಲ್ಲಿ ನಡೆಯುವ ಶ್ರೀಮತಿ ರುಕ್ಮಿಣಿ ಅರುಂಡೇಲ್ ನೃತ್ಯೋತ್ಸವ, ಶಾಲೆಯ ವಾರ್ಷಿಕೋತ್ಸವ, ಕೃಷ್ಣ ಜನ್ಮಾಷ್ಟಮಿ, ನವರಾತ್ರಿಯಲ್ಲಿ ಶಾರದಾ ಪೂಜೆ, ರಂಗ ಪ್ರವೇಶಗಳು . . . ಇತ್ಯಾದಿ -ಎಲ್ಲಾ ಕಾರ್ಯಕ್ರಮಗಳಲ್ಲೂ ಕಿಟ್ಟೂಸಾರ್ ಆದೇಶದಂತೆ ಕಲಾಕ್ಷಿತಿಯ ಶಿಷ್ಯರು ಸಾಂಪ್ರದಾಯಿಕ ಉಡುಗೆ, ತೊಡುಗೆ, ಅಲಂಕಾರದಿಂದ ಹಾಜರಾಗಿ, ಸಮಾರಂಭಕ್ಕೆ ಒಂದು ವಿಶೇಷ ಮೆರುಗನ್ನು ನೀಡುತ್ತಾರೆ.

ಕಿಟ್ಟೂ ಸಾರ್ ಅವರ ಬೆಳಗಿನ ಸಮಯದ ತರಗತಿಗಳು ನೃತ್ಯಕಲಿಕೆಯಲ್ಲಿ ಅತ್ಯಂತ ಕಾಳಜಿಯಿರುವ ಮಧ್ಯವಯಸ್ಕರಿಗೆ, ಮದುವೆಯಾಗಿ, ಮಕ್ಕಳೂ ಇರುವ ಮಹಿಳೆಯರು, ವಿದೇಶದಿಂದ ಭಾರತಕ್ಕೆ ರಜೆಯಲ್ಲಿ ಬಂದಿರುವವರಿಗೆ ಮೀಸಲು. ಬೆಳಗಿನ ತರಗತಿಗಳಲ್ಲಿ ನೃತ್ಯಕ್ಕೆ ಪೂರಕವಾದ ಸಂಗೀತ(ಗಾಯಕ/ಗಾಯಕಿ), ಮೃದಂಗದಿಂದ ಹೊರಹೊಮ್ಮುವ ಲಯ ಹಾಗೂ ಸ್ವತಃ ಕಿಟ್ಟೂ ಸಾರ್ ಅವರೇ ತಟ್ಟು ಮಣೆ ಹಿಡಿದು ತಾಳ ಹಾಕುತ್ತಾ, ನೃತ್ಯಬಂಧಗಳನ್ನು ಹೇಳಿಕೊಡುವುದು ಬೇರೆಲ್ಲೂ ಕಾಣಸಿಗದ ಒಂದು ವಿಶೇಷವಾಗಿದೆ. ಈ ಇಳಿ ವಯಸ್ಸಿನಲ್ಲೂ ಸ್ವತಃ ನರ್ತಿಸಿ, ಅಭಿನಯದ ವಿವಿಧ ಮಜಲುಗಳನ್ನು ಶಿಷ್ಯರಿಗೆ ಮನದಟ್ಟು ಮಾಡಿಸುವುದು ಅವರ ಹಿರಿತನ.

ಸರಳ ವ್ಯಕ್ತಿತ್ವ, ಸಹಜ ಮುಖಭಾವ, ದೈವಿಕ ಕಳೆ, ಆಧ್ಯಾತ್ಮ ಚಿಂತಕ, ಭರತನಾಟ್ಯ ಕಲೆಗಾಗಿ ಅನವರತ ದುಡಿತ- ಕಲಾಕ್ಷಿತಿಯಂಥ ಪೂಜನೀಯ ದೇಗುಲದಲ್ಲಿ ಹೆಜ್ಜೆ-ಗೆಜ್ಜೆ-ನಾದದ ಮೂಲಕ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿರುವ ದಿವ್ಯಜ್ಯೋತಿಯ ಸನಿಹ ಇದ್ದವರಿಗೆ ಮಾತ್ರ ನಾಟ್ಯ ತಪಸ್ವಿ ಕಿಟ್ಟೂಸಾರ್ ಪ್ರಭಾವದ ಅನುಭವವಾಗುತ್ತದೆ. ಆ ಗುರು-ಶಿಷ್ಯರ ಅವಿನಾಭಾವ ಸಂಬಂಧವನ್ನು ಬಣ್ಣಿಸಲು ಪದಪುಂಜಗಳೇ ಸಾಲದು. ಅಂತಹ ಗುರುವಿನ ಶಿಷ್ಯೆ ಎಂದು ಹೇಳಿಕೊಳ್ಳಲು ಅತ್ಯಂತ ಹೆಮ್ಮೆಯಾಗುತ್ತಿದೆ.

(ಓದುಗರೇ, ನಿಮಗಿಷ್ಟವಾದ ಗುರುಗಳ, ಕಲಾವಿದರ ಬಗ್ಗೆ ನೀವೂ ಬರೆಯಬಹುದು. ಅವರ ಕುರಿತ ವಿಶೇಷತೆಗಳನ್ನು ನೆನಪು ಮಾಡಿಕೊಳ್ಳಬಹುದು. ಲೋಕಭ್ರಮರಿ ನಿಮ್ಮ ಅಕ್ಷರ ಪ್ರೀತಿಯನ್ನು ಸದಾ ಸ್ವಾಗತಿಸುತ್ತದೆ.)

Leave a Reply

*

code