ಅಂಕಣಗಳು

Subscribe


 

ಸಾಂಸ್ಕೃತಿಕ ಪತ್ರಿಕೋದ್ಯಮದ ಅಗತ್ಯದ ಹಿನ್ನೆಲೆ

Posted On: Monday, October 20th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಸಾಂಸ್ಕೃತಿಕ ರಂಗಕ್ಕೂ ಸಮೂಹ ಮಾಧ್ಯಮಕ್ಕೂ ಅವಿನಾಭಾವ ಸಂಬಂಧ ಇಂದು ನಿನ್ನೆಯದಲ್ಲ. ಸಂಸ್ಕೃತಿ ಮತ್ತದರ ಚಲನೆಯಲ್ಲಿನ ವೈಶಿಷ್ಟ್ಯಗಳು, ವ್ಯತ್ಯಾಸಗಳನ್ನು ಗಮನಿಸುತ್ತಾ, ದಾಖಲಿಸುತ್ತ ಬಂದಿರುವ ಸಮೂಹ ಮಾಧ್ಯಮಗಳು ಕಲೆಯ ಮುನ್ನಡೆಯಲ್ಲಿ ಕಾಣ್ಕೆ ಇತ್ತಿದ್ದು ಕಡಿಮೆಯೇನಲ್ಲ. ಇಂತಹ ದಾಖಲೆಗಳ ಒಳನೋಟ, ವಾರೆನೋಟ ಸಾಂಸ್ಕೃತಿಕ ರಂಗದ ಒಪ್ಪು ತಪ್ಪುಗಳನ್ನು ತಿದ್ದಿ-ತೀಡಿ, ಹೊಸತು ಅನ್ವೇಷಣೆಯ ಪ್ರವರ್ತಕರಾಗುವಲ್ಲಿ ಹಿಂದಿನ ಬೆನ್ನುಡಿಗಳಾಗಿ ಮುನ್ನಡೆಯಲು ಮಾಧ್ಯಮಗಳು ಸಹಕರಿಸದೇ ಇರುತ್ತಿದ್ದರೆ, ಇಂದು ಅದೆಷ್ಟೋ ರಂಗದ ಹಾದಿಯ ಮೈಲಿಗಲ್ಲುಗಳು ಕಣ್ಮರೆಯಾಗಿಬಿಡುತ್ತಿದ್ದವೇನೋ!

ಅಷ್ಟರಮಟ್ಟಿಗೆ ಸಮೂಹ ಮಾಧ್ಯಮ ಕಲೆಯ ಆವರಣ ಮತ್ತು ಹೂರಣವನ್ನು ಅರ್ಥೈಸಿಕೊಳ್ಳುವಲ್ಲಿ, ಹರಿವು ಹೆಚ್ಚಿಸುವಲ್ಲಿ, ಹಬ್ಬಿಸುವಲ್ಲಿ ಅರಿವಿನ ಕಿಚ್ಚು ಹಚ್ಚಿದೆ. ಕಲೆಯ ಅನಿವಾರ್ಯ ಅಂಗವೇನೋ ಎಂಬಂತೆ ಅದರ ದೇಹದ ಒಂದು ಭಾಗವಾಗಿ ಬಿಟ್ಟಿದೆ. ವಿಚಾರ-ವಿಮರ್ಶೆ-ವಿನಿಮಯದ ಮೂಲಕ ಮನರಂಜನೆಯನ್ನಷ್ಟೇ ಅಲ್ಲದೆ ಮಾಹಿತಿ, ಶಿಕ್ಷಣವನ್ನು ಪಸರಿಸುವಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳಷ್ಟು ದೊಡ್ಡದು.

ಆದರೆ ಇತ್ತೀಚೆಗಿನ ಮಾಧ್ಯಮಗಳಲ್ಲಿ ಕಂಡುಬರುವ ಕಲೆಯ ಕುರಿತಾದ ವಿಚಾರ ವಿಮರ್ಶೆಗಳು, ಕಾರ್ಯಕ್ರಮಗಳು ಕಲೆಯ ಬಗೆಗಿನ ವ್ಯಾಖ್ಯೆ-ನಂಬಿಕೆಗಳನ್ನೇ ಬದಲು ಮಾಡುವಂತಿದೆಯೆಂಬ ಮಾತಿದ್ದರೆ ಅದರಲ್ಲೂ ಸತ್ಯವಿದೆ. ಉತ್ತಮ ಗುಣಮಟ್ಟದ ಕಲೆಯ ಕುರಿತಾದ ಪ್ರಯತ್ನಗಳ ಅಭಾವವೋ, ವಿಮರ್ಶಕರ-ಬರಹಗಾರರ ಕೊರತೆಯೋ ಅಥವಾ ಬದಲಾದ ಪ್ರೇಕ್ಷಕರ ಮನಸ್ಥಿತಿ ಎಂಬ ತರ್ಕವೊಡ್ಡುವ ಕುಂಟು ನೆವವೋ, ಟಿ‌ಆರ್‌ಪಿ ಪಾಯಿಂಟ್‌ಗಳಿಗೆ ಪರಿತಪಿಸುವ ಪ್ರಯಾಸವೋ…ಒಟ್ಟಿನಲ್ಲಿ ಮಾಧ್ಯಮಗಳಲ್ಲಿ ಕಲೆಯ ಕುರಿತಾದ ಸಾಂಪ್ರದಾಯಿಕ ಮನೋಭಾವಗಳಿಗೇಕೋ ತಡೆ ಬಿದ್ದಿದೆ.

ವಿಪರ್ಯಾಸವೆಂದರೆ, ಇತ್ತೀಚೆಗೆ ತೀರಾ ಕಮರ್ಷಿಯಲ್ ಆದ ಕೆಲವು ಚಾನಲ್‌ಗಳು ಹಿಂದೊಮ್ಮೆ ನಮ್ಮ ನಾಡಿನ ಕಲೆಯ ಕುರಿತಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿತ್ತು! ಆದರೆ ಬರಬರುತ್ತಾ ರಿಯಾಲಿಟಿ ಶೋ, ಧಾರಾವಾಹಿ, ಕ್ರೈಂಸ್ಟೋರಿ, ಸಿನೆಮಾ, ಪಾರ್ಟಿ ಸಂಸ್ಕೃತಿಗಳಷ್ಟೇ ಮನರಂಜನೆಯ ಸಾಧನಗಳು ಎಂಬ ಅಘೋಷಿತ ನಂಬಿಕೆಯಿಂದಾಗಿ ಸಂಗೀತ, ನೃತ್ಯದಂತಹ ಸದಭಿರುಚಿಯ ಪ್ರಯತ್ನಗಳಿಗೆ ತೆರೆ ಬಿತ್ತು. ಅಲ್ಲೊಂದು ಇಲ್ಲೊಂದು ಎಂಬಂತೆ ಕಲೆಯ ಕುರಿತ ಭಾವಗಳಿಗೆ, ಕಲಾವಿದರಿಗೆ ಸ್ಪಂದನೆ ಸಿಕ್ಕುವುದು ಬಿಟ್ಟರೆ ಉಳಿದೆಲ್ಲಾ ಸಂದರ್ಭಗಳಲ್ಲೂ ಶಾಸ್ತ್ರೀಯ-ಜನಪದ ನೃತ್ಯ ಸಂಗೀತಗಳು ಕೇವಲ ಹಬ್ಬದ, ವಾರ್ಷಿಕೋತ್ಸವ ಸಂದರ್ಭದ ಆಚರಣೆಗಳಿಗೆ ಸೀಮಿತ. ಅಷ್ಟೇ !

ಪತ್ರಿಕಾ ರಂಗದಲ್ಲೂ ಕೇವಲ ಕೆಲವೇ ಪತ್ರಿಕೆಗಳು ಕಲೆಯ ಕುರಿತಾಗಿನ ಸಾಧ್ಯತೆಗಳಿಗೆ ಕಿಟಕಿ ತೆರೆಯುತ್ತವೆಯೇ ಹೊರತು, ಅದರ ಪರಿಧಿಯನ್ನು ಹಿಗ್ಗಿಸುವಲ್ಲಿ ಹಿಂದೇಟು ಹಾಕುವುದೇ ಹೆಚ್ಚು. ಒಂದು ವೇಳೆ ಅಂತಹ ಬರಹಗಳು ಕಂಡು ಬಂದರೂ ವಿಮರ್ಶೆ-ವಿಚಾರದ ಬದಲು, ವಿನಾಕಾರಣ ಹೊಗಳಿಕೆಯ ಮಾತುಗಳಾಗಿ ; ಕಲೆಯೊಂದು ಬೇಡುವ ಒಳಗಿನ ಸತ್ವ, ದನಿಗೆ ತೆರೆದುಕೊಳ್ಳದಿರುವುದೂ ವಿಷಾದನೀಯ. ಕೇವಲ ಹಣದಿಂದಲೇ ಎಲ್ಲವನ್ನೂ ತೂಗಿ ನೋಡುವ ’ಸಂಸ್ಕೃತಿ’ ಸಾಂಸ್ಕೃತಿಕ ಸಂದರ್ಭಗಳನ್ನು ಕಟ್ಟಿಹಾಕುತ್ತಿರುವುದು ಮತ್ತು ಒಂದು ವೇಳೆ ಅಂತಹ ಕೆಲವೇ ಕೆಲವು ಪ್ರಯತ್ನಗಳಿದ್ದರೂ, ಅವು ಪ್ರೋತ್ಸಾಹವಿಲ್ಲದೇ ಸೊರಗುತ್ತಿರುವುದು ದುರದೃಷ್ಟ. ಆದ್ದರಿಂದಲೋ ಏನೋ, ಸಾಂಸ್ಕೃತಿಕ ಪತ್ರಿಕೋದ್ಯಮದ ಅಸ್ತಿತ್ವದ ಬಗ್ಗೆ ಸಂಶಯಗಳು ದಟ್ಟವಾಗಿ ಹಬ್ಬುತ್ತಿವೆ ; ಮಾತ್ರವಲ್ಲ, ಈ ವೈಶಿಷ್ಟ್ಯಮಯ ಪತ್ರಿಕೋದ್ಯಮ ದಿನೇದಿನೇ ಬಿಗಡಾಯಿಸಿಕೊಳ್ಳುತ್ತಿದೆ. ಪರಿಣಾಮ ಅದೆಷ್ಟೋ ಸಾಂಸ್ಕೃತಿಕ ಪತ್ರಿಕೆಗಳು ಹೇಳ ಹೆಸರಿಲ್ಲದಂತೆ ತೆರೆಗೆ ಸರಿದಿದೆ, ಅಂತೆಯೇ ರಾಜ್ಯ ಮಟ್ಟದ ಪತ್ರಿಕೆಗಳೂ ಕಲೆಯ ಕುರಿತ ಪುರವಣಿಗಳನ್ನು ಮರೆತಾಗಿದೆ.

ಈ ಕಾಲಘಟ್ಟದಲ್ಲಿ ಇಂದಿಗೂ ಕನ್ನಡ ದೂರದರ್ಶನ ’ಚಂದನ’ದ ಕಲೆಯ ಕುರಿತಾದ ಪ್ರೀತಿ ಸ್ಮರಣೀಯವೆನಿಸಿಕೊಳ್ಳುವುದು ಇದಕ್ಕೇ ! ನೃತ್ಯ-ಸಂಗೀತದ ಆಡಿಷನ್‌ಗಳು, ಕಾರ್ಯಕ್ರಮ ಸ್ವಲ್ಪ ಮಟ್ಟಿಗಾದರೂ ಪರಂಪರೆಯನ್ನು ನೋಡಿಕೊಳ್ಳುವಲ್ಲಿ, ಸೃಷ್ಟಿಶೀಲತೆಯನ್ನು ಮನಗಾಣಿಸುವಲ್ಲಿ ತನ್ನಿಂದಾದ ಕಾಣಿಕೆ ಕೊಡುತ್ತಿದೆ. ಬಹುಷಃ ಚಂದನ ಪ್ರಸಾರ ಭಾರತಿಯ ಮೇಲ್ವಿಚಾರಣೆಯಲ್ಲಿ ಉಳಿದದ್ದಕ್ಕೋ, ನಿರ್ದಿಷ್ಟ ನೀತಿ ನಿಯಮಗಳ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಕಾರಣಕ್ಕೋ ಈ ಪ್ರೀತಿ ಉಳಿದದ್ದಿರಬೇಕು! ಇಲ್ಲವಾದಲ್ಲಿ, ಉಳಿದವುಗಳಂತೆ ನೃತ್ಯ-ಸಂಗೀತಗಳು ಕೇವಲ ವಾರ್ತೆ ಓದುವವರ ತುಟಿಯ ಮೇಲಣ ಮಾತಾಗುತ್ತಿತ್ತು. ಆದರೂ ಇಂತಹ ಕಾರ್ಯಕ್ರಮಗಳು ಸಂಜೆಯ ಹೊತ್ತಿಗೆ ಆಯಾಸ ಮರೆಸಿ ಆಹ್ಲಾದ ಕೊಡುವದರ ಬದಲಿಗೆ ಗೂಬೆ ಕೂಗುವ ಮಧ್ಯರಾತ್ರಿಯೋ, ಮಟಮಟ ಮಧ್ಯಾಹ್ನವೋ ಪ್ರಸಾರವಾಗಿ ಮಹತ್ವ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ, ಕಲಾವಿದರ ‘ಗ್ರೇಡ್’ಗಳನ್ನು ತುಂಬಿಸಿಕೊಳ್ಳುವ ಪ್ರತಿಷ್ಟೆಯ ದಾಹಕ್ಕೆ, ರಾಜಕೀಯಕ್ಕೆ ನೀರೆರೆಯು ತ್ತಿದೆಯೇನೋ ಎಂಬ ಸಂಶಯ ಬರದೇ ಉಳಿಯುವುದಿಲ್ಲ!

ಮಾಧ್ಯಮಗಳು ಕಲೆಯೆಂಬ ಜೀವನ ಅನುಭೂತಿಯ ವಾಹಕಗಳು. ಬದುಕು ಅರ್ಥಪೂರ್ಣವಾಗುವಲ್ಲಿ ಮಾಧ್ಯಮಗಳು ಇನ್ನೊಂದಷ್ಟು ಪ್ರೀತಿಯಿಟ್ಟಲ್ಲಿ ಕಲೆ ಕಡೆಗಣಿಸಲ್ಪಡುವುದಿಲ್ಲ. ಜೀವನ ಕೊಳೆಯಾಗುವುದಿಲ್ಲ.

– ಪ್ರೀತಿಯಿಂದ

ಸಂಪಾದಕಿ

Leave a Reply

*

code