ಅಂಕಣಗಳು

Subscribe


 

ನೀನಾಸಂ ತಿರುಗಾಟದ ‘ಸೀತಾ ಸ್ವಯಂವರಂ’ : ಪುರಾಣ ಕಥೆಗೆ ಆಧುನಿಕ ಭಾಷ್ಯ

Posted On: Wednesday, January 29th, 2014
1 Star2 Stars3 Stars4 Stars5 Stars (1 votes, average: 1.00 out of 5)
Loading...

Author: -ಮನೋರಮಾ ಬಿ.ಎನ್

ನೀನಾಸಂ ತಿರುಗಾಟದ ನಾಟಕಗಳು ರಂಗಪ್ರೇಮಿಗಳಿಗೆ ಪ್ರತಿವರುಷದ ಕುತೂಹಲದ ವಸ್ತು ಮತ್ತು ಅಧ್ಯಯನದ ವಿಷಯವೂ ಹೌದು. ನೀನಾಸಂ ವರುಷದ ತಿರುಗಾಟದ ನಾಟಕಗಳನ್ನು ಪುತ್ತೂರಿನಲ್ಲಿ ಜನವರಿ 13 ಮತ್ತು 14ರಂದು ‘ಕಾಡು’ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿತ್ತು.

deevatige -seeta swayamvara drama review 1 (1)

ತಿರುಗಾಟದ ಎರಡನೇ ದಿನದಂದು ಎಂ.ಎಲ್. ಶ್ರೀಕಂಠೇಶ ಗೌಡರ ‘ಸೀತಾ ಸ್ವಯಂವರಂ’ ಕೃತಿಯನ್ನು ಮಂಜುನಾಥ ಬಡಿಗೇರ ರಂಗಪಠ್ಯವನ್ನಾಗಿಸಿ, ನಿರ್ದೇಶಿಸಿದ್ದರು. ಆಧುನಿಕ ಕನ್ನಡ ಸಾಹಿತ್ಯದ ಆರಂಭ ಕಾಲದಲ್ಲಿ ಸೃಜನಶೀಲ ಬರಹ ಮತ್ತು ರೂಪಾಂತರ-ಅನುವಾದಗಳ ಮುಖಾಂತರ ಮಹತ್ತ್ವದ ಕೆಲಸ ಮಾಡಿದ ಲೇಖಕ ಎಂ.ಎಲ್. ಶ್ರೀಕಂಠೇಶ ಗೌಡರು. 19ನೆಯ ಶತಮಾನದ ಆರಂಭದಲ್ಲಿ ಅವರಿಂದ ರಚಿತವಾದ ಈ ಕೃತಿ, ರಾಮಾಯಣದ ಬಾಲಕಾಂಡದಲ್ಲಿ ಬರುವ ಸೀತಾಸ್ವಯಂವರದ ವಿಶಿಷ್ಟ ರೂಪಾಂತರ. ರಾಮಾಯಣದ ಈ ವಿಶಿಷ್ಟ ಆಧುನಿಕ ಅವತರಣಿಕೆಯನ್ನು ಅದಕ್ಕೆ ಸರಿಹೊಂದುವ ದೇಶೀ ರಂಗಭಾಷೆಯಲ್ಲಿ ಪ್ರಹಸನ ಮತ್ತು ನಾಟಕೀಯ ಗುಣಗಳಿಂದ ಕಟ್ಟಿ ಸಮಕಾಲೀನಗೊಳಿಸಲು ಪ್ರಸ್ತುತ ಪ್ರಯೋಗ ಹವಣಿಸಿದೆ. ಆ ಮೂಲಕ ಪುರಾಣಪಠ್ಯಗಳಿಗೆ ಹೊಸ ಅರ್ಥ ನೀಡಿ ವ್ಯಾಖ್ಯಾನಿಸಿರುವುದು ವಿಶೇಷವಾಗಿ ಸೆಳೆಯಿತು.

ಹಾಗೆ ನೋಡಿದರೆ ರಾಮಾಯಣದಂತಹ ಪೌರಾಣಿಕ ವಸ್ತುವನ್ನು ಕಾವ್ಯಾತ್ಮಕವಾಗಿ ಮರುಸೃಷ್ಟಿ ಮಾಡಿಕೊಂಡು ಹೊಸ ಕೊಂಡಿಗಳನ್ನು ಕಲ್ಪಿಸುತ್ತಾ ಹೋಗುವುದು ಸುಲಭದ ಕೆಲಸವೇನಲ್ಲ. ಮೂಲ ವಾಲ್ಮೀಕಿ ರಾಮಾಯಣದ ಚೌಕಟ್ಟಿನಿಂದಾಚೆಗೆ ಅದೆಷ್ಟೋ ಕವಿಗಳು, ಮತಾನುಯಾಯಿಗಳು ತಮ್ಮದೇ ಆದ ಕಲ್ಪನೆಯ ರಾಮಾಯಣ ಕಾವ್ಯವನ್ನು ಬರೆದಿದ್ದಾರಾದರೂ ಅದರ ರಂಗಾಭಿವ್ಯಕ್ತಿಯ ಸಾಧ್ಯತೆಗಳು ವಾಲ್ಮೀಕಿ ರಾಮಾಯಣಕ್ಕೆ ಹೋಲಿಸಿದರೆ ಗಣನೀಯವಾಗಿ ಕುಸಿದಿವೆ. ಕಾರಣ; ಮೂಲ ರಾಮಾಯಣದ ವಸ್ತುವಿನಿಂದ ಬದಿಗೆ ಹೊರಳಿಕೊಂಡು ಪ್ರತ್ಯೇಕಗೊಂಡ ರಾಮಾಯಣಕ್ಕೆ ಪೌರಾಣಿಕ ಶಿಸ್ತು-ಕಟ್ಟುಪಾಡನ್ನು ಲಕ್ಷಿಸಹೊರಟಾಗ ಜನರ ಭಾವ-ಶ್ರದ್ಧೆಗಳ ಪೋಷಣೆ, ಇಂಬು ಸಹಜವಾಗಿ ದೊರಕಿಲ್ಲ.

deevatige -seeta swayamvara drama review 1 (2)  deevatige -seeta swayamvara drama review 1 (3)

ಒಂದುವೇಳೆ ಪಾತ್ರ-ವಸ್ತು ನಿರೂಪಣೆಯಲ್ಲಿ ಹೊಸಕ್ರಾಂತಿಗಳನ್ನು ಮಾಡಿಕೊಂಡರೂ ಜನಶ್ರದ್ಧೆಯನ್ನು ಕೆರಳಿಸುವ ಸಂಗತಿಗಳಿಗೆ ಹೇತುವಾಗುವ ಅಪಾಯಗಳನ್ನು ತಂದೊಡ್ಡುತ್ತವೆ. ಲಾಕ್ಷಣಿಕನಾದ ಆನಂದವರ್ಧನನೇ ಹೇಳುವಂತೆ ರಾಮಾಯಣಾದಿ ಮಹಾಕಾವ್ಯಗಳಲ್ಲಿ ಇರುವುದು ಸಿದ್ಧರಸ. ಅದಕ್ಕೆ ಭಂಗವಾದರೆ ಮೌಲ್ಯ, ಆನಂದ, ನಂಬುಗೆಗೆ ತೊಡಕಾಗುತ್ತದೆ. ಹಾಗೆ ತಡೆಯನ್ನುಂಟು ಮಾಡುವುದರಿಂದ ಸಾಧನೆಗೊಳ್ಳುವ ವಿಷಯಗಳಿಗೆ ಯಾವ ಕಾಲಕ್ಕೂ ಬೆಲೆ ಬರುವುದಿಲ್ಲ. ಆದ್ದರಿಂದ ಈಗಾಗಲೇ ಪ್ರತಿಪಾದಿಸಲಾಗಿರುವ ರಸಮೌಲ್ಯಕ್ಕೆ ಅಡ್ಡಿಯಾಗದಂತೆ ವಿಷಯಗಳನ್ನು ಪುನರ್ ರಚಿಸಿಕೊಳ್ಳಬಹುದು.

ಈ ಮಾತಿಗೆ ಅನುರೂಪವಾಗಿ ಹಲಕೆಲವು ಪಾತ್ರ-ಸನ್ನಿವೇಶಗಳು ಮೂಲ ರಾಮಾಯಣದ ಸಂಗತಿಗಳಿಗಿಂತಲೂ ಸ್ವಾರಸ್ಯವಾಗಿ, ಅರ್ಥಗರ್ಭಿತವಾಗಿ ನಿರೂಪಿಸಲ್ಪಟ್ಟು ಮನ್ನಣೆ ಪಡೆದ ಉದಾಹರಣೆಗಳಿವೆ. ಉದಾಹರಣೆಗೆ ಲಕ್ಷ್ಮಣರೇಖೆಯಂತಹ ಪ್ರಕರಣ ಅಥವಾ ಅಹಿರಾವಣ, ಮೈರಾವಣ ವಧೆ ಇತ್ಯಾದಿ.

ಸರಳವೆನಿಸುವ ಕಥೆ ಮತ್ತು ನಿರ್ದಿಷ್ಟ ಆಯಾಮದ ಪಾತ್ರಗಳು ರಾಮಾಯಣದಲ್ಲಿ ಹೆಚ್ಚಿಗಿವೆ. ಆದರೆ ಚಿಂತನೆಯ ಆಯಾಮದಲ್ಲಿ ಮಹಾಭಾರತದಷ್ಟೂ ದ್ವಂದ್ವಗಳನ್ನು, ವೈರುಧ್ಯಗಳನ್ನು ರಾಮಾಯಣ ಹುಟ್ಟುಹಾಕಲಾರದ ಮಿತಿಯೂ ಇದೆ. ಫಲವಾಗಿ ಕಾವ್ಯಾತ್ಮಕವಾಗಿಯೂ ಹೆಚ್ಚಿನ ಪಲ್ಲಟಗಳ ನಿರೀಕ್ಷೆ ರಾಮಾಯಣದಂತಹ ವಸ್ತುವಿಗೆ ಒದಗುವುದಿಲ್ಲ. ಆದ್ದರಿಂದಲೇ ಮಹಾಭಾರತದ ಪಾತ್ರ-ಕಥೆಯನ್ನು ಗದ್ಯ-ಪದ್ಯ ಸಾಹಿತ್ಯ (ಉದಾ: ಪರ್ವ, ಯುಗಾಂತ) ಮತ್ತು ಕಲೆಯಲ್ಲಿ ಕಂಡುಕೊಂಡಷ್ಟು (ಏಕವ್ಯಕ್ತಿ ರೂಪಕಗಳು) ಆಳವಾಗಿ ರಾಮಾಯಣದ ಪಾತ್ರ-ವಸ್ತುಗಳು ಪಡೆದುಕೊಂಡಿಲ್ಲ. ಇದು ರಾಮಾಯಣವೆಂಬ ಕಾವ್ಯದ ಅನನ್ಯತೆಯೂ, ಕಥಾಪ್ರಕಲ್ಪದ ದಿಕ್ಕಿನ ಸರಳತೆಯೂ ಹೌದು ಎಂಬುದನ್ನು ಮರೆಯಲಿಕ್ಕಾಗದು.

ಹಾಗಾಗಿ ‘ಸೀತಾಸ್ವಯಂವರಂ’ ಎಂಬ ಈ ನಾಟಕವನ್ನು ಪೌರಾಣಿಕ ಶಿಸ್ತಿನಲ್ಲಿ ನೋಡಹೊರಟರೆ ವಸ್ತುವಿನ ವ್ಯತ್ಯಾಸಗೊಂಡ ನಿರೂಪಣೆ-ವಿನ್ಯಾಸದಿಂದಾಗಿ ಶ್ರದ್ಧಾಳುಗಳಿಗೆ ನಿರಾಸೆಯಾಗುವುದೇನೋ ಹೌದು. ಆದರೆ ಜನಮಾನಸದಲ್ಲಿ ಅದಾಗಲೇ ಚಾಲ್ತಿಯಲ್ಲಿರುವ ಕಥೆಯೊಂದನ್ನು ಬೇರೊಂದು ದಿಕ್ಕಿನಲ್ಲಿ ಸೃಷ್ಟಿಶೀಲವಾಗಿ, ಕಾವ್ಯಮೌಲ್ಯವಾಗಿ ಪರಿಗಣಿಸಿ ನೋಡುವುದಾದರೆ ಕೃತಿಯನ್ನು ನೋಡಬಹುದಾದ ಮತ್ತು ಇದ್ದಿರಬಹುದಾದ ಸಾಧ್ಯತೆಗಳ ಕಡೆಗೆ ಹೆಚ್ಚಿನ ಬೆಳಕನ್ನು ಇದು ಬೀರುತ್ತದೆ. ಹಾಗೆ ನೋಡಿದರೆ ಇಂತಹ ಪ್ರಯತ್ನಗಳಲ್ಲಿ ಕೆಣಕುವ, ತಿಣುಕುವ, ತಿವಿಯುವ ಅಪಾಯ, ಅಧ್ವಾನಗಳೇ ಹೆಚ್ಚು. ಆದರೆ ಇಲ್ಲಿ ಹಾಗಾಗದೆ; ಪಾತ್ರಗಳ, ಸನ್ನಿವೇಶಗಳ ಮೂಲ ಮೌಲ್ಯಗಳನ್ನು ಕೈಬಿಡದೆ ಸನ್ನಿವೇಶಗಳನ್ನು ನಾಟಕೀಯವಾಗಿ ಪುನರ್ ರಚಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಮಾಯಣದೆಡೆಗಿನ ಪಾತ್ರ ಮತ್ತು ಸನ್ನಿವೇಶಗಳೆಡೆಗೆ ಜನರು ಹೊಂದಿರುವ ಭಕ್ತಿ ಶ್ರದ್ಧೆಗೆ ಲೋಪವಾಗದಂತೆ ಹಳೆಯ ಕಥೆಗೆ ಹೊಸ ದಿಕ್ಕನ್ನು, ಕೊಂಡಿಯನ್ನು ಕೊಟ್ಟದ್ದು ನಿಜಕ್ಕೂ ‘ಹೊಸತು’/’ಆಧುನಿಕ’ ನೆಲೆಗೆ ಇತ್ತ ಗೌರವವೇ ಸರಿ.

ವಾಲ್ಮೀಕಿ ರಾಮಾಯಣದ ಸೀತಾ ಸ್ವಯಂವರದುದ್ದಕ್ಕೂ ಬರುವ ಪ್ರಧಾನ ರಸಗಳು ವೀರ, ಶೃಂಗಾರ. ಆದರೆ ಇಲ್ಲಿನ ನಾಟಕದಲ್ಲಿ ನಕ್ಕು ಹಗುರಾಗುವ ಸನ್ನಿವೇಶಗಳೇ ಹೆಚ್ಚು ಒದಗುತ್ತಾ ಹೋಗಿದ್ದು; ಮೂಲಭೂತವಾಗಿ ‘ಮಾಯೆ’ ಅಥವಾ ವಿಸ್ಮೃತಿಯನ್ನು ಆಧರಿಸಿದ ಸನ್ನಿವೇಶಗಳು ಈ ನಾಟಕದ ಮುಖ್ಯ ಮೂರು ಅಂಗಗಳ ಹಿನ್ನೆಲೆಗೆ ಕೆಲಸ ಮಾಡಿದೆ. ಇದಕ್ಕೆ ರಾಮನೂ ಹೊರತಲ್ಲ; ಸೀತೆಯೂ ಹೊರತಲ್ಲ. ಹಾಗೆ ನೋಡಿದರೆ ವಾಲ್ಮೀಕಿ ರಾಮಾಯಣದ ಸೀತಾಸ್ವಯಂವರಂನಲ್ಲಿ ಕಾಣೆಯಾಗಿರುವ ರಾವಣನ ಪಾತ್ರ ಇಲ್ಲಿ ಆರಂಭದಿಂದ ಅಂತ್ಯದ ಪರ್ಯಂತ ಹಬ್ಬಿದೆ. ಹಾಗಾಗಿ ರಾವಣ ಮತ್ತು ಆತನ ಸಹಚರರ ಭೇಧ/ತಂತ್ರ ಮತ್ತು ಅದರೊಂದಿಗಿನ ಹಾಸ್ಯ ಮತ್ತು ವಿಡಂಬನೆ ಇಲ್ಲಿ ಮುಖ್ಯವೆನಿಸುವ ರಸವ್ಯುತ್ಪತ್ತಿಯ ಧಾತುಗಳು.

ಸೀತಾಸ್ವಯಂವರದ ಪ್ರಯುಕ್ತಿ ಪ್ರಾರಂಭವಾಗುವುದೇ ರಾವಣ ಮಂತ್ರಿಗಳಾದ ಶುಕ-ಸಾರಣರ ಸಮಾಲೋಚನೆಯಲ್ಲಿ. ಇದರಿಂದ ರಾವಣನ ದೃಷ್ಟಿಯಿಂದ ಸೀತಾ ಸ್ವಯಂವರವನ್ನು ಪ್ರೇಕ್ಷಕ ಮೊದಲಿನಿಂದಲೂ ಕಾಣುತ್ತಾ ಹೋಗಿ ಒಂದು ಮದುವೆಯ ಹಿನ್ನೆಲೆಯಲ್ಲಿ ಒದಗಬಹುದಾದ ರಾಜಕೀಯ ವಿಶ್ಲೇಷಣೆಗೆ ತೊಡಗುತ್ತಾನೆ. ಸಮಕಾಲೀನವಾಗಿ ಒಂದು ಮದುವೆಯ ತಯಾರಿ ಮತ್ತು ಅದರ ಹಿನ್ನೆಲೆಗಿರಬಹುದಾದ ರಾಜಕೀಯ, ಒಲವು v/s ಕಾಮನೆಯ ಆಗ್ರಹ, ಅದಕ್ಕೆ ಸಮದಂಡಿಯಾಗಿ ಬರುವ ಕುತಂತ್ರ-ಪ್ರತಿತಂತ್ರ, ಪರಿಹಾರೋಪಾಯಗಳನ್ನು ಕಾಣುವಲ್ಲಿ ಸೀತಾಸ್ವಯಂವರದ ಈ ಹೊಸಮಾದರಿ ಮುಕ್ತ ಅಭಿರುಚಿಯ ಪ್ರೇಕ್ಷಕವರ್ಗಕ್ಕೆ ಇಷ್ಟವಾಗುತ್ತದೆ. ಮತ್ತು ಆ ರೂಪದಿಂದ ಮೂಲ ರಾಮಾಯಣದಲ್ಲಿ ಕಳಚಿಕೊಂಡು ಹೋಗಿರಬಹುದಾದ ಕೊಂಡಿಗಳೆಡೆಗೆ, ಧಾರ್ಮಿಕ ಶ್ರದ್ಧೆಯಾಚೆಗೆ ಕಾವ್ಯಾತ್ಮಕವಾಗಿ ಕಾಣುವಾಗ ಇಣುಕುವ ಸಂದೇಹದ ಪರಿಹಾರಕ್ಕೆ ಹೊಸ ಸಾಧ್ಯತೆಗಳನ್ನೀಯುತ್ತದೆ.

ಹಾಗಾಗಿ ಈ ನಾಟಕದಲ್ಲಿ ಮೊದಲು ಮೆಚ್ಚುಗೆಗೆ ಪಾತ್ರವಾಗಬೇಕಾದದ್ದು ಮೂಲ ಸೀತಾ ಸ್ವಯಂವರದಲ್ಲಿ ನಡೆದಿರಬಹುದಾದ ಘಟನೆಗಳಿಗೆ ಹೊಸ ಕೊಂಡಿಯನ್ನು ಸಹಜವೆನ್ನಿಸುವಷ್ಟರ ಮಟ್ಟಿಗೆ ಕಲ್ಪಿಸುತ್ತಾ ಸಾಂದರ್ಭಿಕ ಸಾಕ್ಷ್ಯಗಳನ್ನು ಕಂಡುಕೊಳ್ಳುತ್ತಾ ಹೋಗಿರುವುದು. ಎರಡನೆಯದಾಗಿ ಮೊದಲಿನಿಂದಲೂ ನೀನಾಸಂ ಬಹುವಾಗಿ ಮೆಚ್ಚುವ ಯಕ್ಷಗಾನವನ್ನು ರಂಗಾಭಿವ್ಯಕ್ತಿಗೆ ಅನುರೂಪವಾಗಿ ಬಳಸಿಕೊಂಡಿರುವುದು ಶ್ಲಾಘನೀಯ. ಈ ಹಿನ್ನೆಲೆಯಲ್ಲಿ ಸ್ವತಃ ಯಕ್ಷಗಾನ ಕಲಿತ ನಿರ್ದೇಶಕ ಮಂಜು ಬಡಿಗೇರರ ಶ್ರಮ ಅಭಿನಂದನೀಯ.

ಈ ಕುರಿತಂತೆ ವಿಮರ್ಶಕ ಧನಂಜಯ ದಿಡಗ ಎಂಬವರು ಪ್ರತಿಕ್ರಿಯಿಸಿರುವ ಮಾತುಗಳು ಅರ್ಥಗರ್ಭಿತವಾಗಿವೆ. ‘ರಾಮನೆಂಬವ ಪದೇಪದೇ ಯಾಕೆ ಪ್ರಸ್ತುತಕ್ಕೆ ಎಡತಾಕುತ್ತಾನೆ? ಮತ್ತೆ ಮತ್ತೆ ಯಾಕೆ ನಮ್ಮನ್ನು ಕಾಡುತ್ತಾನೆ? ವಿಮರ್ಶೆಗೊಳಗಾಗುತ್ತಾನೆ? ಅದ್ಭುತವಾ ಗುತ್ತಾನೆ? ಅನನ್ಯವಾಗುತ್ತಾನೆ? ಯಾಕೆ ಈ ರಾಮನೆಂಬ ಪ್ರತೀಕಕ್ಕೆ ನಮ್ಮ ಚಿತ್ತವೃತ್ತಿ ಪದೇಪದೇ ಹರಿಯುತ್ತದೆ, ಆನಂದತುಂದಿಲ ವಾಗುತ್ತದೆ, ಆದ್ರ್ರಗೊಳ್ಳುತ್ತದೆ? ಈ ಮಹಾನ್ ಚೇತನದ ಅವಿಚ್ಛಿನ್ನತೆ, ಅಪೂರ್ವತೆ ಯಾವ ಮಟ್ಟಿನದು? ಇಂದು ಇಡೀ ಸಮಾಜ ಪ್ರತೀಕಗಳ ಮರೆಯಲ್ಲೇ, ತಮ್ಮ ಇಷ್ಟಾನಿಷ್ಟಗಳ, ನಂಬಿಕೆಗಳ ನೆಲೆ ಕಟ್ಟಿಕೊಂಡಿದ್ದಾರೆ, ಯಾವುವನ್ನು ನಾವು ಆದರ್ಶಗಳೆನ್ನುತ್ತೇವೋ? ಯಾರನ್ನ ಆದರ್ಶ ವ್ಯಕ್ತಿಗಳೆನ್ನುತ್ತೇವೋ? ಅವರನ್ನೇ ಪ್ರತಿಮೀಕರಿಸಿಕೊಂಡ, ಅವರ ಮರೆಯಲ್ಲೇ ನಿಂತು, ಅವರನ್ನು ಪಾಲಿಸುವ ಅದೆಷ್ಟು ಮಂದಿ ಆ ಆದರ್ಶ ವ್ಯಕ್ತಿಗಳನ್ನ ಪ್ರತೀಕಗಳನ್ನಾಗಿ ಮಾಡಿಕೊಂಡಿರುತ್ತಾರೆ? ಅವರನ್ನು ಮೂರ್ತೀಕರಿಸಿಕೊಂಡಿರುತ್ತಾರೆ? ಹೀಗೆ ಮೂರ್ತೀಕರಿಸುವ, ಇಷ್ಟದೈವವನ್ನಾಗಿ ಮಾಡಿಕೊಳ್ಳುವ, ಪ್ರತೀಕವನ್ನಾಗಿ ಮಾಡಿಕೊಳ್ಳುವ ಪರಿಭಾಷೆಯ ನಡುವೆ ಭಿನ್ನಾರ್ಥವಿಲ್ಲವೆಂದು ನನ್ನ ನಂಬಿಕೆ. ಕೆಲವೊಮ್ಮೆ ಜನರು ಕಟ್ಟಿಕೊಂಡಿರುವ ಪ್ರತೀಕದ ಮೂಲವಳಿದು ಅದು ಭಿನ್ನಗೊಂಡಿರುತ್ತದೆ, ವಿಚ್ಛಿದ್ರವಾಗಿರುತ್ತದೆ.

ಇಂದು ರಾಮ ಭಾರತದ ಆದರ್ಶ ಪುರುಷನ ಪ್ರತೀಕ. ಅವನು ಮರ್ಯಾದಾ ಪುರುಷೋತ್ತಮ. ಕೆಲವೊಮ್ಮೆ ವ್ಯಕ್ತಿಯಳಿದು ಅವರ ಪ್ರತೀಕವೇ ಉಳಿದುಬಿಡುತ್ತದೆ. ಹೀಗೆ ಪ್ರತೀಕಗೊಂಡ ಮಹಾನ್ ಪ್ರಭೃತಿಗಳನ್ನು ಪ್ರಯೋಗಮುಖಿಯಾಗಿ, ಪ್ರಸ್ತುತಮುಖಿಯಾಗಿ ನೋಡಿದರೆ; ಇಂದೂ ಶೋಧನೆಗೊಳಗಾಗುತ್ತಿರುವ ಈ ಮಹಾನ್ ವ್ಯಕ್ತಿಗಳು, ನಾಟಕದಲ್ಲೂ ತಮ್ಮ ಪ್ರತಿ ಪಾತ್ರಗಳಿಂದ ಮರುಶೋಧನೆಗೊಳ್ಳತ್ತವೆ. ಅಸತ್ಯ ಸತ್ಯವನ್ನು ಶೋಧನೆಗೆ ಒಳಪಡಿಸಿದಂತೆ, ಶುದ್ಧತೆ ಅಶುದ್ಧತೆಯನ್ನು ಎಡತಾಕಿದಂತೆ ರಾಮನು ರಾವಣನಿಂದ ಶೋಧನೆಗೊಳಗಾದರೆ…,

ಶೋಧನೆ ಎನ್ನುವ ಪದ ಉತ್ಪ್ರೇಕ್ಷೆಯಾದರೂ, ನಿಜವಾಗಿ ಯಾರು ಸತ್ಯ, ಯಾರು ಸುಳ್ಳು ಎಂಬ ಪ್ರಶ್ನೆ ಕಾಡಿದರೂ, ಸಾಮಾನ್ಯೀಕರಣದಲ್ಲಿ ಎರಡೂ ನಾಟಕಗಳು ಸತ್ಯದ ಶೋಧನೆಯ, ನೀತಿ, ಆದರ್ಶದ ಶೋಧನೆಯ ಕಥಾನಕಗಳು, ನಾಯಕನನ್ನು ಪ್ರತಿನಾಯಕನೂ ಸೇರಿದಂತೆ, ಪರಿಸ್ಥಿತಿ ಶೋಧನೆಗೊಳಪಡಿಸುತ್ತಾ ಹೋಗುತ್ತವೆ. ಶೋಧಿಸಿದಂತೆ ನಾಯಕ ತಿಳಿನೀರೇ ಆಗುತ್ತಾನೆ. ಪ್ರತಿನಾಯಕ ರೂಢಿಯಂತೆ ಸೋಲುತ್ತಾನೆ, ಸಾಯುತ್ತಾನೆ. ನಾಯಕನ ವಿರುದ್ಧ ಪ್ರತಿನಾಯಕ ಹೀಗೆನ್ನುವುದು ಕ್ಲೀಷಾತ್ಮಕ ಪ್ರತಿಮೆ, ಇರಲಿ.

ಪ್ರಯೋಗದಲ್ಲಿ ನೀಚಪಾತ್ರಗಳೇ ಶಕ್ತಿಯುತವಾಗಿ ಕಾಣುವುದು ನಟರ ಸಮಸ್ಯೆಯೂ ಪ್ರಸ್ತುತದ ಸಮಸ್ಯೆಯೂ ಆಗುತ್ತದೆ. ರಾಮನ ಪಾತ್ರದ ಎಡಬಿಡಂಗಿ ವ್ಯಕಿತ್ವದಲ್ಲಿಯೂ ರಾಮತ್ವ ರಾವಣನೊಬ್ಬನಿಂದ ಶೋಧನೆಗೊಳ್ಳುತ್ತಿದೆ. ಅದನ್ನು ಪ್ರಸ್ತುತಕ್ಕೆ ಎಳೆದು ತಂದರೆ ಶ್ರೀಕಂಠೇಶಗೌಡರ ನಿರ್ಮಿತಿಯ ಅರ್ಥನಿಷ್ಪತ್ತಿ ಸರಿಯಾಗಿ ಆಗುತ್ತದೆ. ರಾಮನನ್ನು ಪ್ರತೀಕ ಮಾಡಿಕೊಂಡ, ರಾಮನೇ ಆದ ರಾಮನ ಹಿಂದೆ ಎಂಥಾ ರಾವಣರಿದ್ದಾರೆ? ಯಾವ ರೀತಿ ಆಟವಾಡುತ್ತಿದ್ದಾರೆ? ರಾಮತ್ವ ಯಾವ ರೀತಿ ಉಸಿರುಕಟ್ಟುತ್ತಿದೆ? ನಾವು ನಂಬಿ ತುಂಬಿಕೊಳ್ಳಬೇಕಾದ ರಾಮ ಯಾರು? ರಾವಣ ವೇಷಧಾರಿ ರಾಮನೋ, ಸೀತೆಯ ಫೋಟೊದ ರಾಮನೋ? ಅಥವಾ ನಮ್ಮ ಹಾಗಿರುವ ಮಾಮೂಲಿ ರಾಮನೋ? ನಿರ್ದೇಶಕರು ಈ ಸೂಕ್ಷ್ಮವನ್ನು ಬಹು ಎಚ್ಚರಿಕೆಯಿಂದ ನಿರ್ವಹಿಸಿದ್ದಾರೆ. ರಂಗದ ಮೇಲೆ ಇದು ಅನನ್ಯವಾಗಿ ಅರ್ಥಗಟ್ಟುತ್ತದೆ.’

ಕಥಾಭಾಗ : ಪೂರ್ವರಂಗದ ನಡಾವಳಿ, ಅಷ್ಟದಿಕ್ಪಾಲಕ ವಂದನೆ, ಸೂತ್ರಧಾರನ ಸಾರಥ್ಯದಲ್ಲಿ ಆರಂಭಗೊಳ್ಳುತ್ತದೆ ನಾಟಕ. ಸೀತೆಯನ್ನು ರಾವಣನಿಗೆ ತಂದುಕೊಳ್ಳುವ ಆಲೋಚನೆ ಮತ್ತು ಅದಾಗಲೇ ಯಜ್ಞಕ್ಕೆ ರಾಮ,ಲಕ್ಷ್ಮಣರನ್ನು ಆಹ್ವಾನಿಸುವ ನೆಪದಲ್ಲಿ ಸೀತೆ-ರಾಮರನ್ನು ಜೊತೆಮಾಡುವ ಜನಕ-ವಿಶ್ವಾಮಿತ್ರರ ಮಂತ್ರಾಲೋಚನೆಯ ದಿಕ್ಕನ್ನು ಸಮಾಲೋಚಿಸುವ ಶುಕ ಸಾರಣರಿಂದ ಮುಂದುವರಿಯುತ್ತದೆ ಕಥಾನಕ. ರಾವಣನಿಗೆ ಮಿತ್ರನಾಗಿರುವ ಜನಕ ಸೀತೆಯೊಂದಿಗೆ ರಾವಣನ ವಿವಾಹಕ್ಕೆ ಒಪ್ಪಿದರೂ ಸ್ವಯಂವರದ ದಿಕ್ಕು ವಧುವಿನ ಇಚ್ಛೆಯನ್ನನುಸರಿಸುವುದರಿಂದ ರಾಮನ ವೇಷದಲ್ಲಿ ರಾವಣನ ಆಗಮನ ಅನಿವಾರ್ಯವಾಗಿ ಸೀತೆಯಲ್ಲಿ ಮೋಹ ಹುಟ್ಟಿಸುವುದೇ ಯುಕ್ತವೆಂಬ ನಿಲುವಿಗೆ ಕಪಟಿಮಂತ್ರಿಗಳಿಬ್ಬರೂ ಬರುತ್ತಾರೆ; ಫಲವಾಗಿ ತಾಟಕಿಯನ್ನು ರಾಮವಧೆಗೆ ಕಳುಹಿಸಿಕೊಡುವುದು; ರಾಮನ ವೇಷದಲ್ಲೇ ರಾವಣನ ಚರ್ಯೆಗಳು ರಾಮನಂತೆಯೇ ನಡೆದುಕೊಳ್ಳುವುದಕ್ಕೆ ಶುರುವಿಡುತ್ತದೆ.

ಇತ್ತ ನೇಪಥ್ಯದಲ್ಲಿ ರಾಮಲಕ್ಷ್ಮಣರು ವಿಶ್ವಾಮಿತ್ರರೊಡನೆ ಮಿಥಿಲಾ ನಗರಕ್ಕೆ ಹೊರಟಿದ್ದರೆ, ಅಲ್ಲಿಗೆ ಸೀತೆಯೂ ಬಂದಿದ್ದಾಳೆ, ಆಕೆ ರಾಮನಿಗಾಗಿ ಕಾಯುತ್ತ ಅವನ ಚಿತ್ರ ಬರೆಯುತ್ತಿದ್ದಾಳೆ. ಅಂತೆಯೇ ಸೀತೆಯನ್ನು ರಾಮನ ವೇಷದಲ್ಲಿ ನಂಬಿಸಿ ಮದುವೆಗೆ ಒಪ್ಪಿಸಲು ರಾವಣ ಕೌಶಿಕನ ಅರಣ್ಯಕ್ಕೆ ಬರುತ್ತಾನೆ. ಮಿಥಿಲಾ ನಗರಕ್ಕೆ ಸಮೀಪದ ಒಂದೆಡೆ ಇವರೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಮುಖಾಮುಖಿಯಾಗುತ್ತಾರೆ. ಅಲ್ಲಿ ಶುಕ-ಸಾರಣ, ರಾವಣರು ಯಾರಿಗೂ ಕಾಣದಂತ ಕಣ್ಮರೆಯ ವಿದ್ಯೆಯನ್ನು ಆವಾಹಿಸಿಕೊಳ್ಳುವುದು; ಆದರೆ ಸೀತೆಯ ಸಖಿಯರು ಕಂಡರೂ ವಿಶ್ವಾಮಿತ್ರನು ಕೊಟ್ಟ ಕಂಕಣದ ಫಲವಾಗಿ ಸೀತೆಯ ದರ್ಶನ ಪ್ರಾಪ್ತಿಯಾಗದೆ ಕಂಕಣ ಅಪಹರಿಸಲು ಮಾಡುವ ಕಸರತ್ತುಗಳೂ ಮೊದಲ ಭಾಗದ ಪ್ರಧಾನ ವಸ್ತು.

ಒಟ್ಟಿನಲ್ಲಿ ಸೀತೆಯನ್ನು ಮಾಯೆಗೆ ಕೆಡಹುವ ಪ್ರಯತ್ನ ಸಾವಕಾಶವಾಗಿ ಜರುಗಿದರೆ; ಎರಡನೆಯ ಭಾಗದಲ್ಲಿ ರಾಮನನ್ನು ಮಾಯೆಗೆ ಒಳಪಡಿಸಿ ಮಾಯಾಸೀತೆಯೊಂದಿಗೆ ದಗ್ಧವಾಗಿಸಲು ಮಾರೀಚ ಮತ್ತು ಅವನ ಸ್ನೇಹಿತ ಕರಾಳ ಹೆಣೆಯುವ ತಂತ್ರ, ಮತ್ತದು ವಿಫಲವಾಗುವ ದಿಸೆಯಲ್ಲಿ ಕಣ್ಕಟ್ಟಿನ ನಡುವೆ ಹಲವು ರೀತಿಯ ಪ್ರಹಸನದ ತಿರುವುಗಳು ಜರುಗುತ್ತವೆ. ಮಧ್ಯಂತರದ ತರುವಾಯ ಆಶ್ರಮದಲ್ಲಿರುವ ಜನಕನನ್ನು ಮಾಯಾರಾಮ-ಲಕ್ಷಣ-ವಿಶ್ವಾಮಿತ್ರರಾಗಿ ಮರುಳುಗೊಳಿಸಿ ತಕ್ಕಮಟ್ಟಿಗೆ ಯಶಸ್ವಿಯಾದರೂ ರಾಮನ ಬರುವಿಕೆಯಿಂದ ಓಡಿಹೋಗಬೇಕಾದ ಸನ್ನಿವೇಶದಲ್ಲಿ ರಾವಣ; ಫಲವಾಗಿ ದ್ವಂದ್ವಕ್ಕೆ ಬೀಳುವ ಜನಕನ ಸಂಶಯಕ್ಕೆ ಪ್ರತ್ಯುಪಹಾರ್ಯವಾಗಿ ಸೀತೆಯೇ ತರುವ ಶಿವಧನಸ್ಸನ್ನು ರಾಮನು ಎತ್ತುವುದು; ಸೀತಾರಾಮ ಕಲ್ಯಾಣ; ದಶರಥನ ಆಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಪರಶುರಾಮನನ್ನು ಶಿವಭಕ್ತಿ ಮತ್ತು ಸ್ನೇಹದ ಸಂಕಲೆಗೆ ಸಿಲುಕಿಸಿ ರಾವಣನು ಮಾಡುವ ಕೊನೆಯ ಭೇಧ ಪ್ರಯತ್ನ; ವೈಷ್ಣವ ಧನಸ್ಸನ್ನೆತ್ತುವ ಸ್ಪರ್ಧೆ ಪ್ರಧಾನ ಸನ್ನಿವೇಶಗಳು.

ಕೊನೆಗೆ ಈ ‘ನಾಟಕದ ರಾಮಾಯಣ’ದ ಅಂತ್ಯದಲ್ಲಿ ಸೂತ್ರಧಾರನು ಹೇಳುವ ಕಥೆಯೂ ‘ಹೀಗೂ ಇದ್ದಿರಬಹುದೇ’ ಎಂಬ ಅಚ್ಚರಿ ಮತ್ತು ಉಡಾಫೆಯ ನಗು ತರಿಸುವುದರಿಂದ ನಾಟಕವು ಕಲಾವಿದನ ಕಲ್ಪನೆಯ ಕೈಗೂಸು ಅಷ್ಟೇ ಎಂಬ ಭಾವವನ್ನು ಮುದ್ರಿಸುವುದರಲ್ಲ್ಲಿ ಹಿಂದೆ ಬೀಳುವುದಿಲ್ಲ ಮತ್ತು ಪುರಾಣಶಿಸ್ತಿನ ಶ್ರದ್ಧಾಳುಗಳ ಪ್ರಸನ್ನತೆಯನ್ನೂ ಕಾಪಾಡುತ್ತದೆ.

ಆದರೆ ಪ್ರಶ್ನೆಯಿರುವುದು ರಾವಣನಿಗೆ ರಾಮನ ವೇಷ ಹಾಕಿಸುವುದು ಯಾಕೆ? ಅದೂ ಇಂದು ಪುರಾಣದ ಪರಂಪರೆ ಹೇಳುವಂತೆ ಧನುರ್ಧಾರಿ, ಕೈಯಲ್ಲಿ ಬಿಲ್ಲು, ಭುಜದಲ್ಲಿ ಬತ್ತಳಿಕೆ, ತಲೆಗೆ ಕಿರೀಟ ಇರುವ ನೀಲ ಮೈಬಣ್ಣದ ರಾಮ. ಆದರೆ ನಾಟಕದ ನಿಜದ ರಾಮ ಹಾಗಿಲ್ಲ. ಅವನು ನಮ್ಮೆಲ್ಲರಂತೆ ಮಾಮೂಲಿ. ಇದಕ್ಕೂ ಮೊದಲು ಸೀತೆ ಬಿಡಿಸುವ ಕನಸಿನಲ್ಲಿ ಕಂಡ ರಾಮನ ಚಿತ್ರ ಸಂದರ್ಭೋಚಿತವೋ, ಉದ್ದೇಶಪೂರ್ಣವೋ ಗೊತ್ತಿಲ್ಲ. ಆದರೆ ನಿರ್ದೇಶಕರು ಸೀತೆಯ ಕೈಯಲಿ ಹಿಡಿಸಿರುವುದು ಇಂದು ಸಂಘಟನೆಗಳು ಕಟ್ಟಿಕೊಂಡ ಯುದ್ಧಾರೂಢ ರಾಮ. ಆದರೆ ರಾಮನಂತೆ ಕಾಣುವ ರಾಮನ ಹಿಂದೆÀರಾಮನ ವೇಷ ಹಾಕಿಕೊಂಡು ರಾವಣನಿದ್ದಾನೆ ಎನ್ನುವುದು ಬಹುಮುಖ್ಯ ಅಂಶ.

ಮಾಯಾರಾವಣನ ಪಾತ್ರಧಾರಿಯ ಒಟ್ಟು ಅಭಿವ್ಯಕ್ತಿಗೆ ಅಭಿನಂದನೆ ಹೇಳಲೇಬೇಕು. ನಾಟಕ ಮುಗಿದ ಬಳಿಕವೂ ಸ್ಮೃತಿಯಲ್ಲಿ ಕಾಡುವ ಪಾತ್ರಗಳಲ್ಲಿ ಮಾಯಾರಾವಣನದು ಮೊದಲಪಂಕ್ತಿ. ಸೀತೆಗೆ ಇಷ್ಟವಾಗುವಂತೆ ರಾಮನಾಗಿ ಬದಲಾಗಬೇಕಾದ ಅನಿವಾರ್ಯತೆಗೆ ಒಳಪಟ್ಟ ಆತನ ಆಂಗಿಕ, ತಂತ್ರಗಾರಿಕೆ, ಶೃಂಗಾರಸಹಿತವಾದ ಅಭಿನಯ, ವಯ್ಯಾರದಿಂದಾಗಿ ಪೌರಾಣಿಕ ರಾವಣನಿಂದ ಭಿನ್ನವಾದ ಕಾಮುಕ, ಕಪಟ, ಹೇಡಿಯ ಚಿತ್ರಣವನ್ನು ಕೊಡುತ್ತಾ ಹೋಗುತ್ತದೆ. ಒಟ್ಟಿನಲ್ಲಿ ರಾಮನ ವೇಷಧಾರಿ ಇತ್ತ ರಾಮನೂ ಆಗದ ಅತ್ತ ರಾವಣನೂ ಆಗದ ಎಡಬಿಡಂಗಿತನವನ್ನು ಚೆನ್ನಾಗಿ ಅಭಿವ್ಯಕ್ತಗೊಳಿಸಿದ್ದಾರೆ ಶೋಧನ್.

ಜೊತೆಗೆ ಎಲ್ಲಾ ಪಾತ್ರಗಳಲ್ಲೂ ಸಮಕಾಲೀನವಾದ ಆಹಾರ್ಯಾಭಿವ್ಯಕಿಯೇ ಪ್ರಧಾನವಾಗಿರುವಾಗ ವಿಶಿಷ್ಟ ಪೌರಾಣಿಕ ಸ್ಪರ್ಶ ಕೊಡುವ ಪಾತ್ರ ಮಾಯಾರಾವಣನದ್ದೇ ಆಗಿರುವುದು ಇಲ್ಲಿನ ಪ್ಲಸ್ ಪಾಯಿಂಟ್.

ಮಾಯಾರಾವಣನ ಮಂತ್ರಿಗಳಾದ ಶುಕ ಸಾರಣರ ಪಾತ್ರಗಳೂ ಸವಾಲಿಗೆ ಬಿದ್ದವರಂತೆ ಸೊಗಸಾಗಿ ಅಭಿನಯಿಸಿದ್ದಾರೆ. ಕೇವಲ ಒಂದು ಹೊದಿಕೆ-ಎರಡು ಚಕ್ರ ಮತ್ತು ಬೆಳಕು ನೆರಳುಗಳ ಹೊಂದಾಣಿಕೆಯಲ್ಲಿ ಪುಷ್ಪಕವಿಮಾನದ ಕಲ್ಪನೆ ಮತ್ತು ನಿರೂಪಣೆಗೆ ಚಪ್ಪಾಳೆ ಸಲ್ಲಲೇಬೇಕು. ಒಂದಷ್ಟು ನಿಮಿಷದಲ್ಲಿ ಬಂದುಹೋಗುವ ಪರಶುರಾಮನ ಪಾತ್ರವು ತನ್ನ ಅನುರೂಪವಾದ ದೇಹಸೌಷ್ಠವ ಮತ್ತು ಅಭಿನಯದಿಂದ ನೆರೆದವರ ಭಾವವನ್ನು ಸೂರೆ ಮಾಡುತ್ತದೆ. ಮಾಯಾಬ್ರಾಹ್ಮಣನದ್ದು ಆಂಗಿಕ ವೈಶಿಷ್ಟ್ಯ ಮತ್ತು ಪಾತ್ರನಿರೂಪಣೆಯಲ್ಲಿ ನಾಟಕದಲ್ಲಿರುವ ಒಂದೇ ಒಂದು ‘ಮಾಡ್ರ್ರನ್’ ಪಾತ್ರ ಮತ್ತು ಹೊಸಕಾಲದ ಆಹಾರ್ಯ ನಗೆಗಡಲನ್ನೇ ಉಕ್ಕಿಸುವಂತದ್ದು. ಎಂ.ಅರುಣಕುಮಾರರ ಸಂಗೀತ ಸಂಯೋಜನೆ ಪೂರಕವಾಗಿದೆ. ಒಟ್ಟಿನಲ್ಲಿ ನಾಟಕದ ತಂತ್ರಗಾರಿಕೆ ಅದ್ಭುತವಾಗಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ.

ಸಲಹೆಗಳು : ರಾಮ ಮತ್ತು ಸೀತೆಯ ಪಾತ್ರಗಳು ಮತ್ತಷ್ಟು ಪರಿಣಾಮಕಾರಿಯಾಗಿ, ಆಕರ್ಷಕವಾಗಿ ಮೂಡಿಬಂದರೆ ಪೌರಾಣಿಕ ಭವ್ಯತೆಗೆ ಒಂದಷ್ಟು ಹೆಚ್ಚಿನ ಒತ್ತಾಸೆಯನ್ನು ಕೊಡಬಹುದು. ಮಾಯಾರಾಮನ ಮುಂದೆ ನಿಜರಾಮನ ಪಾತ್ರ ಪೇಲವವೆನಿಸುತ್ತದೆ. ಕಲಾವಿದರ ಶ್ರಮ ಅಭಿನಂದನೀಯವಾದರೂ ನಾಟಕದುದ್ದಕ್ಕೂ ಸೀತೆ ಮತ್ತು ರಾಮನ ಪಾತ್ರಗಳನ್ನು ಒಪ್ಪಿಕೊಳ್ಳಲು ತುಸು ಕಷ್ಟವೆನಿಸುತ್ತದೆ. ವಿರಹ,ಶೃಂಗಾರಾದಿ ಸಂದರ್ಭಗಳ ಅಭಿವ್ಯಕ್ತಿಯಲ್ಲಿ ಮಾಗಿದ ಅಭಿನಯ ನಿರೀಕ್ಷಿತ. ಆದಾಗ್ಯೂ ಮಾಯಾಸೀತೆಯ ವಾಚಿಕಸರಣಿಗಳು ನೆರೆದವರನ್ನು ನಗೆಗಡಲಲ್ಲಿ ಉಕ್ಕಿಸುವುದರಲ್ಲಿ ಹಿಂದೆ ಬೀಳುವುದಿಲ್ಲ.

ಉಳಿದ ಪಾತ್ರಗಳ ನಡುವೆ ತಾಟಕಿಯ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲದೆ ಆ ಪಾತ್ರ ಸೊರಗಿ ಹೋಗುವಂತೆ ಕಾಣುತ್ತದೆಯಾದ್ದರಿಂದ ಮತ್ತೊಂದಷ್ಟು ಮರುಸ್ಪರ್ಶ ಬೇಕಾಗುತ್ತದೆ. ಹಾಗೆಂದು ಕ್ಷಣವೊಂದಕ್ಕೆ ಬಂದುಹೋಗುವ ಅಹಲ್ಯೆಯ ಪಾತ್ರ ಪ್ರೇಕ್ಷಕರ ಮೊಗದಲ್ಲಿ ಮಿಂಚನ್ನು ಹೊಳೆಯಿಸುವುದು ಒಳ್ಳೆಯ ಯೋಚನೆ ಮತ್ತು ನಾಟಕದ ಮುಂದುವರಿಕೆಯಲ್ಲಿ ಆ ಹೊತ್ತಿಗೆ ಅಗತ್ಯವೆನಿಸುವ ಮತ್ತು ಮೂಲರಾಮಾಯಣಕ್ಕೆ ಅನುರೂಪಿಯಾಗುವ ದೃಷ್ಟಿಯಿಂದ ಉತ್ತಮ ಕೊಂಡಿ.

ಶುಕ, ಸಾರಣರ ಪಾತ್ರಗಳಲ್ಲಿ ಕಲಾವಿದರ ಮುಖಾಭಿನಯ, ಸಮಯೋಚಿತ ಆಂಗಿಕ ಆಕರ್ಷಣೀಯವಾದರೂ ವಾಚಿಕಾಭಿನಯದಲ್ಲಿ ಇನ್ನೊಂದಷ್ಟು ಸಹಜತೆಯ ಪಳಗುವಿಕೆ ಸೌಂದರ್ಯವನ್ನು ಇಮ್ಮಡಿಗೊಳಿಸಬಲ್ಲದು. ಉಳಿದಂತೆ ಸೀತೆಯರ ಸಖಿಯರು, ಜನಕ, ವಿಶ್ವಾಮಿತ್ರ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಮಾರೀಚ ಮತ್ತು ಆತನ ಹೊಸ ಮಿತ್ರ ಕರಾಳ, ಇವರಿಬ್ಬರಿಂದಾಗಿ ವಿಶ್ವಾಮಿತ್ರನ ಶಿಷ್ಯರೂ ರಾಮನ ಸ್ನೇಹಿತರೂ ಆದ ಪಿಂಗಳ, ಭರದ್ವಾಜರ ಪಾತ್ರಗಳು ಅನುಭವಿಸುವ ಪಡಿಪಾಟಲು ಒಳ್ಳೆಯ ಪೋಷಣೆಯನ್ನಿತ್ತಿದೆ. ಮುಖವಾಡಗಳ ಬಳಕೆ ಸಮಯೋಚಿತವಾದರೂ ಅಭಿನಯದ ಅವಕಾಶವನ್ನು ಅವು ಕದಿಯುವಾಗ ಕೊಂಚ ಇರಿಸುಮುರಿಸಾಗುವುದು ಸಹಜ.

ರಾಮಾಯಣದಂತಹ ಕಥಾನಕದಲ್ಲಿ ಆಹಾರ್ಯ ವೈಭವ ಮತ್ತು ರಂಗಸಜ್ಜಿಕೆಯನ್ನು ಪೌರಾಣಿಕತೆಯ ನೆಲೆಯಿಂದ ಪ್ರತ್ಯೇಕಿಸಿ ನೋಡುವುದು ಪ್ರೇಕ್ಷಕರ ಆಸ್ವಾದನೆಯ ನೆಲೆಯಿಂದ ಅಷ್ಟೊಂದು ಸುಲಭವಲ್ಲ. ಆದರೆ ಸೀತಾಸ್ವಯಂವರದಂತಹ ರಾಮಾಯಣದ ಭವ್ಯವೆನಿಸುವ ಕಥಾಭಾಗವನ್ನು ಕೂಡಾ ಸರಳವಾಗಿ, ಮಾರ್ಮಿಕವಾಗಿ ಹೊಸ ಕೊಂಡಿಗಳ ಸಹಿತ ಸಮಕಾಲೀನಗೊಳಿಸಲು ಸಾಧ್ಯವಿದೆ ಎಂಬುದಕ್ಕೆ ಒಳ್ಳೆಯ ದೃಷ್ಟಾಂತ ನೀನಾಸಂ ಕಲಾವಿದರ ಈ ‘ಸೀತಾ ಸ್ವಯಂವರಂ.’

Leave a Reply

*

code