ಅಂಕಣಗಳು

Subscribe


 

ನೃತ್ತ-ನೃತ್ಯ ಕಲಿಕೆಯಲ್ಲಿ ರಸದ ಪಾಠ

Posted On: Sunday, April 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ನಿವೇದಿತಾ ಶ್ರೀನಿವಾಸ್, ಸಂಶೋಧಕರು, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು


ನೂಪುರ ಭ್ರಮರಿ ನೃತ್ಯ ಸಂಶೋಧಕರ ಒಕ್ಕೂಟದ ಕ್ರಿಯಾಶೀಲ ಸದಸ್ಯೆ, ಬೆಂಗಳೂರಿನ ಸ್ತುತಿ ನಾಟ್ಯಶಾಲೆಯ ಗುರು, ಕಥಕ್-ಭರತನಾಟ್ಯ ಕಲಾವಿದೆ, ಸಂಶೋಧಕಿ ವಿದುಷಿ ನಿವೇದಿತಾ ಶ್ರೀನಿವಾಸ್ ಅವರು ಈ ಸಂಚಿಕೆಯಿಂದ ಓದುಗರಿಗಾಗಿ ನರ್ತನ ಸುರಭಿ ಅಂಕಣಕ್ಕೆ ಲೇಖನಿ ಹಿಡಿಯಲಿದ್ದಾರೆ. ನರ್ತನ ಕ್ಷೇತ್ರದ ಹತ್ತು ಹಲವು ಸಮಸ್ಯೆ, ಜಿಜ್ಞಾಸೆ, ವಿಚಾರಗಳನ್ನು ಇಲ್ಲಿ ಅವರು ಮಥಿಸಲಿದ್ದಾರೆ. ಅಂಕಣ ವಿಚಾರದ ಕುರಿತ ಓದುಗರ ನೋಟ, ಪ್ರತಿಕ್ರಿಯೆಗಳಿಗೆ ಸದಾ ಮುಕ್ತ ಸ್ವಾಗತವಿದೆ.

ನೃತ್ಯದ ಕುರಿತಾದ ಒಂದು ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅಲ್ಲಿ ನೃತ್ಯ ಸಂಶೋಧಕಿಯೊಬ್ಬರು ತಮ್ಮ ಪ್ರಬಂಧ ಮಂಡಿಸುತ್ತಾ, ಇಂದಿನ ಭರತನಾಟ್ಯದ ಅಭಿನಯ ಬಂಧಗಳಲ್ಲಿ ಅಡವುಗಳ ಬಳಕೆ ಪೂರಕವಾಗಿ ಆಗುತ್ತಿಲ್ಲ, ಅಲ್ಲದೆ ತರಗತಿಗಳಲ್ಲಿ ಕಲಿತದ್ದನ್ನೇ ವೇದಿಕೆಗೂ ತರುತ್ತಾ ನೃತ್ತದ ಔಚಿತ್ಯವನ್ನೇ ಮರೆತಿದ್ದಾರೆ ಎಂದರು. ನಂತರ, ಪ್ರಶ್ನೋತ್ತರ ಸಮಯದಲ್ಲಿ, ತರುಣ ನೃತ್ಯ ಗುರುವೊಬ್ಬರು, ಈ ವಿಚಾರಕ್ಕೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು. ಅವರು, ’ನೃತ್ತ ಭಾವ ವಿಹೀನ’.. ಹೀಗಿರುವಾಗ, ನರ್ತನ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವಾಗ, ಭಾವದ ಕಡೆ ಗಮನ ಕೊಡುವಂತೆ ಹೇಳಲಾಗುವುದಿಲ್ಲ, ಮೊದಲು ಅವರ ಅಂಗಶುದ್ಧಿಯಾಗಬೇಕು. ನಂತರ ಭಾವದೆಡೆಗೆ ಅವರನ್ನು ಎಳೆಯಬೇಕು ಎಂದರು. ಆಕೆ, ಪ್ರದರ್ಶನದ ಬಗ್ಗೆ ಹೇಳುತ್ತಿದ್ದರೆ, ಈ ಮಹನೀಯರು, ಕಲಿಕಾ ಕ್ರಮದ ಬಗ್ಗೆ ಮಾತಾಡುತ್ತಿದ್ದರು! ಎರಡೂ ಬೇರೆ ಬೇರೆ ಎಳೆಗಳು. ಇಲ್ಲಿ ಇದರ ಪರ – ವಿರೋಧಗಳನ್ನು ಚರ್ಚಿಸದೆ, ಕಲಿಕಾಕ್ರಮದ ಬಗ್ಗೆ ಮಹನೀಯರು ಹೇಳಿದ್ದನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ.

ನೃತ್ತ ಭಾವ ವಿಹೀನ’ ಎಂಬುದನ್ನು ಒಪ್ಪಲು ಕಷ್ಟವಾಗುತ್ತದೆ. ಯಾವುದೇ ಕುಣಿತವಿರಲಿ, ಅಲ್ಲಿ ತಾನಾಗಿಯೇ ಉಲ್ಲಾಸದ ವಾತಾವರಣ ನಿರ್ಮಾಣವಾಗಿಬಿಡುತ್ತದೆ. ನರ್ತಕರೂ ಆನಂದದಿಂದ ಕುಣಿಯುತ್ತಾರೆ. ಇನ್ನು ಚಿಕ್ಕ ಮಕ್ಕಳಿಗಂತೂ ಕುಣಿಯುವಾಗ ಎಲ್ಲಿಲ್ಲದ ಉತ್ಸಾಹ ! ಮುಖದ ತುಂಬಾ ನಗು ತುಂಬಿ ತುಳುಕುತ್ತಿರುತ್ತದೆ. ಸಂತೋಷ ಮಕ್ಕಳ ಸಹಜಗುಣವಾಗಿರುವಾಗ, ನಮ್ಮ ನೃತ್ಯ ಶಾಲೆಗಳಲ್ಲಿ, ಅದೇ ನಗುವನ್ನು ತಂದುಕೊಳ್ಳುವಂತೆ ಹೇಳಲು ಸಾಧ್ಯವಿಲ್ಲವೇ? ನಿಜ, ಕುಣಿತದಲ್ಲಿ ನಿಯಮಗಳಿಲ್ಲ; ಅಲ್ಲಿ, ಮನಸೋ ಇಚ್ಚೆ ನರ್ತಿಸಬಹುದು. ಇಲ್ಲಿ, ಒಂದು ನಿಯಮದಂತೆ ಕಲಿಯಬೇಕಾಗುತ್ತದೆ. ಕೆಲವೊಮ್ಮೆ ಶ್ರಮದಾಯಕವಾಗಿ ಮಕ್ಕಳಿಗೆ ಅಳುಬರುವುದೂ ಉಂಟು. ಇಂತಹ ಸಂದರ್ಭದಲ್ಲಿ, ಗುರು ಹೇಗೆ ಮಕ್ಕಳನ್ನು ಹುರಿದುಂಬಿಸಿ ಆನಂದದಿಂದ ನರ್ತಿಸಲು ಪ್ರೇರೇಪಿಸುತ್ತಾರೆ ಎಂಬುದೇ ನಿರ್ಣಾಯಕವಾಗುತ್ತದೆ. ಯಾವುದೇ ಹಸ್ತ, ಅದರ ಚಲನೆ, ಸ್ಥಾನಕ, ಪಾದಚಲನೆ ಇತ್ಯಾದಿಗಳ ಉದ್ದೇಶ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದರೆ, ಒಂದು ಹಂತದವರೆಗೆ ಪ್ರಯೋಜನವಾಗುತ್ತದೆ; ಮುಂದಿನ ಅಭ್ಯಾಸಕ್ಕೆ ತಯಾರು ಮಾಡಿದಂತಾಗುತ್ತದೆ.

ಆರಂಭದಿಂದಲೇ, ಮುಗುಳ್ನಗೆಯೊಂದಿಗೆ ನರ್ತಿಸುವಂತೆ ಹೇಳಿದರೆ ಉತ್ತಮ. ಆಗಾಗ ನಗಿಸುತ್ತಾ, ತಿಳಿವಾತಾವರಣದಲ್ಲಿ ಕಲಿಸಿದರೆ, ಮಕ್ಕಳು ತರಗತಿಗಳಿಗೆ ಖುಷಿಯಿಂದ ಬರುತ್ತಾರೆ. ಹಸ್ತ ಹೋದಲ್ಲಿ, ದೃಷ್ಟಿಯೂ ಹೋಗುವಂತೆ ಹೇಳುತ್ತೇವಷ್ಟೇ? ಜೊತೆಗೆ ಮುಖದಲ್ಲಿ ಮಂದಹಾಸವೊಂದು ಇರುವಂತೆಯೂ ಹೇಳಬಹುದಲ್ಲ? ಇಲ್ಲಿ ಭಾವ ವಿಹೀನ ಎಂಬುದಕ್ಕೆ ಅರ್ಥವೇ ಇಲ್ಲ. ನಗುವಿಗೆ ಎಂಥ ಅಯಸ್ಕಾಂತೀಯ ಗುಣ ಇದೆ! ಅದರಲ್ಲೂ ಮಕ್ಕಳು ನಗುತ್ತಾ ನರ್ತಿಸಿದರೆ, ನೋಡುವವರಿಗೆ ಏನು ಆನಂದವೋ!

ನೃತ್ತದಲ್ಲಿ ನಗು – ಇದು ಸುಲಭವಾಯಿತು. ಇನ್ನು ಅಭಿನಯದಲ್ಲಿ ತರಬೇತಿ ಕೊಡುವುದು ಹೇಗೆ? ಈಗಂತೂ ಐದು, ಆರನೇ ವಯಸ್ಸಿಗೇ ನೃತ್ಯಾಭ್ಯಾಸ ಆರಂಭಿಸುತ್ತಾರೆ. ಹತ್ತನೇ ವಯಸ್ಸಿಗೇ ಜೂನಿಯರ್ ಪರೀಕ್ಷೆ ತೆಗೆದುಕೊಳ್ಳಬಹುದಾದ್ದರಿಂದ, ಆ ವಯಸ್ಸಿಗೇ ಎರಡು ದೇವರನಾಮಗಳ ಪಾಠ ಆಗಿರಬೇಕಾಗಿರುತ್ತದೆ. ಅಂದರೆ, ಸುಮಾರು ಒಂಭತ್ತನೇ ವಯಸ್ಸಿಗೇ ಅಭಿನಯದ ತರಭೇತಿ ಶುರುವಾಗಬೇಕು. ಅಷ್ಟು ಚಿಕ್ಕ ವಯಸ್ಸಿಗೇ ಅಭಿನಯ ಹೇಗೆ ಹೇಳಿಕೊಡುವುದು? ಸಾಮಾನ್ಯವಾಗಿ ಭಕ್ತಿ ಪ್ರಧಾನವಾದ ಸಾಹಿತ್ಯವನ್ನೇ ಆರಿಸಿಕೊಳ್ಳುತ್ತಾರೆ, ಅಭಿನಯದ ಜಂಜಾಟವೇ ಬೇಡವೆಂದು. ಈ ನಿಟ್ಟಿನಲ್ಲಿ ಹೊಸ ಪ್ರಯೋಗಗಳು ನಡೆದರೆ ಚೆನ್ನ.

ಮಕ್ಕಳಿಗೆ, ನವರಸ ಹೇಗೆ ಹೇಳಿಕೊಡಬಹುದು…ನೋಡೋಣ. ಹುಟ್ಟಿದಂದಿನಿಂದಲೂ, ಮಗುವು ಎಲ್ಲಾ ರೀತಿಯ ಭಾವನೆಗಳನ್ನು ಅನುಭವಿಸುತ್ತಲೇ ಇರುತ್ತದೆ. ನಿಧಾನವಾಗಿ ಸುತ್ತಲ ಪ್ರಪಂಚದ ಅರಿವಾಗುತ್ತದೆ. ಹಾಗೇ ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯಿಸುವುದೂ ಕಲಿಯುತ್ತದೆ. ಸುತ್ತಲ ಜನರ ನಡುವಳಿಕೆಗಳನ್ನು ಗಮನಿಸಿ, ಅನುಕರಿಸುವುದೂ ಉಂಟು. ಹೀಗಿರುವಾಗ ಅವರ ಅನುಭವ, ತಿಳುವಳಿಕೆಗೆ ತಕ್ಕಂತೆ, ಒಂದೊಂದು ಭಾವದ ಪರಿಚಯ ಮಾಡಿಕೊಡುವುದು ಕಷ್ಟವೇ? ಒಂಭತ್ತನೇ ವಯಸ್ಸಿಗಂತೂ ಸಾಕಷ್ಟು ರಾಗ, ದ್ವೇಷಗಳ ಅನುಭವವಾಗಿರುತ್ತದೆ ! ಅವುಗಳನ್ನೇ ಆಧಾರವಾಗಿಟ್ಟುಕೊಂಡು ನಾನಾ ಭಾವನೆಗಳಿಂದ ಕೂಡಿದ ದೇವರನಾಮ ಹೇಳಿಕೊಡಬಹುದು. ಜೊತೆಗೆ, ದೇವರನಾಮದ ಸಾಹಿತ್ಯದ ಪೂರ್ಣ ಚಿತ್ರಣ ಕೊಟ್ಟರೆ ಇನ್ನೂ ಉಚಿತ.

ಇಷ್ಟಲ್ಲದೆ, ಅಂಗಾಭ್ಯಾಸ ಮಾಡಿಸುವಾಗ, ಸಂಯುತ ಅಸಂಯುತ ಹಸ್ತಗಳೊಂದಿಗೆ, ಶಿರೋಭೇದ, ದೃಷ್ಟಿಭೇದಗಳನ್ನೂ ಹೇಳಿಕೊಡುವುದಿಲ್ಲವೇ? ಅದೇ ರೀತಿ, ನವರಸಗಳನ್ನೂ ಸಣ್ಣ ಸಣ್ಣ ಉದಾಹರಣೆಗಳ ಮೂಲಕ ಹೇಳಿಕೊಡಬಹುದು. ರಸಗಳ ಮೂಲವಾದ ಸ್ಥಾಯೀ ಭಾವಗಳ ಪರಿಚಯ ಮಾಡಿಸುವುದು ಸುಲಭ. ಶೃಂಗಾರದ ರತಿ ಭಾವಕ್ಕೆ, ಅವರ ಬೆಸ್ಟ್ ಫ಼್ರೆಂಡ್’ ಅನ್ನು ನೆನಪಿಸಿದರೆ ಸಾಕು. ಆ ಖುಶಿ ತನ್ನಿಂದ ತಾನೇ ಬಂದು ಬಿಡುತ್ತದೆ. ಅದರ ವಿರುದ್ಧವಾದ ಕ್ರೋಧಕ್ಕೆ, ಅವರ ಎನೆಮಿ’ಯನ್ನು ನೆನೆಸಿಕೊಳ್ಳುವಂತೆ ಹೇಳಿ! ಅವರ ಮೇಲಿನ ಸಿಟ್ಟು, ಎಷ್ಟು ಸುಲಭವಾಗಿ ಮುಖದ ಮೇಲೆ ಬಂದು ಕೂರುತ್ತದೆ! ಆ ನಿಮಿಷದಲ್ಲಿ ಅವರ ಮುಖ, ಮನಸ್ಸಿನಲ್ಲಾಗುವ ಬದಲಾವಣೆಗಳನ್ನು ಗಮನಿಸುವಂತೆ ಹೇಳಿ. ಮುಂದುವರೆಸುತ್ತಾ, ಒಂದು ಜೋಕ್ ಹೇಳಿ ನಗಿಸಿ, ಅಥವಾ ಒಬ್ಬರು ಇನ್ನೊಬ್ಬರಿಗೆ ಕಚಗುಳಿ ಇಡುವಂತೆ ಹೇಳಿ. ಆಗ ನಗುವ ಪ್ರಮಾಣ ಗಮನಿಸುವಂತೆ ಹೇಳಬಹುದು. ಹಾಸ್ಯದ ಚಿತ್ರಣ ಸಿಕ್ಕಿತಲ್ಲ! ಪೆಟ್ಟಾದ ನಾಯಿ ಮರಿಯೊಂದನ್ನು ನೋಡಿದರೆ ’ಅಯ್ಯೋ ಪಾಪ!’ ಅಂತ ಅನ್ನಿಸಲ್ವಾ? ಅದೇ ಕರುಣೆ.

ಕತ್ತಲ ಕೋಣೆಯೊಳಗೆ ಹೋಗಲು ಏನೋ ಅಂಜಿಕೆ! ಹೌದಲ್ವೇ? ಅಮ್ಮ ಹೇಳಿದ ಗುಮ್ಮ ಅಲ್ಲಿ ಅವಿತು ಕುಳಿತಿದ್ದರೆ? ಏನೋ ಶಬ್ದ ಆದರೆ, ಗುಮ್ಮ ಬಂದೇ ಬಿಟ್ಟ ಅಂತ ಅಲ್ಲೇ ಥರಥರ ನಡುಗಲ್ವೇ? ಭಯದ ಅನುಭವ ಯಾರಿಗಿರಲ್ಲ? ಇನ್ನು, ಪರೀಕ್ಷೆಗೆ ಎಲ್ಲಾ ಓದಿದ್ದರೆ ಹೇಗೆ ಧೈರ್ಯದಿಂದ ಎದುರಿಸುತ್ತೇವೆ? ಅದೇ ವೀರ ರಸದ ಸ್ಥಾಯಿ. ಗೆಳತಿಯ ಹುಟ್ಟು ಹಬ್ಬಕ್ಕೆ ಅವರ ಮನೇಲಿ ಒಂದು ದೊಡ್ಡ ಕೇಕ್ ಮಾಡಿಸಿದ್ದರೆ, ಅದನ್ನ ನೋಡಿ ಹೇಗೆ ಆಶ್ಚರ್ಯ ಪಡುತ್ತೀರಿ? ಕಣ್ಣೆರಡೂ ಅರಳಿಸಿ, ’ಅಬ್ಬಾ’ ಅಂತ ಉದ್ಗಾರ ತೆಗೆಯುವುದಿಲ್ಲವೇ? ಅದೇ ಅದ್ಭುತ! ದಾರಿಯಲ್ಲಿ ಸಗಣಿ ತುಳಿದರೆ, ಅಸಹ್ಯ ಆಗತ್ತಲ್ಲ, ಅದೇ ಭೀಭತ್ಸ. ಮತ್ತೆ ಕಡೆಯದು, ನಾವು ಮಂದಿರದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಹೇಗೆ ಸಮಾಧಾನವಾಗಿ ಇರುತ್ತೇವೆ? ಅದೇ ಶಾಂತಿಯ ಸ್ವರೂಪ. ನವರಸಗಳ ಸ್ಥಾಯಿ ಭಾವಗಳ ಪರಿಚಯ ಮಾಡಿಕೊಟ್ಟಂತಾಯಿತಲ್ವೇ? ತರಗತಿಗಳಲ್ಲಿ ಇದನ್ನೇ ಅಭ್ಯಾಸ ಮಾಡಿಸುತ್ತಿದ್ದರೆ, ಮುಂದೆ, ಸಂದರ್ಭೋಚಿತವಾಗಿ ಪ್ರಯೋಗಿಸುವುದು ಹೇಳಿಕೊಡಬಹುದು.

ಇದರೊಡನೆ, ಸಂಯೋಜನೆಯ ಹಂತದಲ್ಲಿ, ಮಕ್ಕಳಿಗೂ ತಮ್ಮ ಕಲ್ಪನಾ ಶಕ್ತಿ ಪ್ರಯೋಗಿಸಲು ಅವಕಾಶ ನೀಡಬಹುದು. ಇಲ್ಲಿ ಎಷ್ಟೋ ಬಾರಿ ಗುರುವಿಗೆ ಹೊಳೆಯದಿದ್ದು ಮಕ್ಕಳಿಂದ ಬಂದಿರುವ ಸಾಧ್ಯತೆಗಳಿವೆ. ಕಾರಣ ಗೊತ್ತೇ? ಗುರುವು ಒಂದೇ ದಿಕ್ಕಿನಲ್ಲಿ ಯೋಚಿಸುತ್ತಿದ್ದರೆ, ಮಕ್ಕಳು ಅವರ ಲೋಕಾನುಭವಕ್ಕೆ ನಿಲುಕಿದ್ದನ್ನು ಹೊರಹಾಕುವ ಪ್ರಯತ್ನ ಮಾಡುತ್ತಿರುತ್ತಾರೆ. ಅವರ ಕಲ್ಪನೆ ಸಹಜವಾಗಿ ಕೂಡ ಇರುತ್ತದೆ. ಕೇವಲ ನೃತ್ಯದ ಗುಂಗಿನಲ್ಲಿರುವ ಮತ್ತು ಒಂದು ಚೌಕಟ್ಟಿನ ಒಳಗೇ ನೋಡುತ್ತಿರುವ ಗುರುವಿಗೆ ಇದು ಅರಿವಿಗೆ ಬರದೇ ಇರಬಹುದು. ಇಲ್ಲಿ ಮಕ್ಕಳ ಅನಿಸಿಕೆ/ಅಭಿಪ್ರಾಯ ಏಕೆ ತೆಗೆದುಕೊಳ್ಳಬೇಕು? ನಾನು ಗುರು, ನಾನು ಹೇಳಿದ್ದಷ್ಟನ್ನೇ ಅವರು ಕೇಳತಕ್ಕದ್ದು, ಮಾಡತಕ್ಕದ್ದು ಎಂದು ಕೂತರೆ, ಸ್ವತಃ ಗುರುವೇ ಅಭಿವೃದ್ಧಿ ಹೊಂದಲಾರ. ’ಕೆಲವಂ ಬಲ್ಲಿದರಿಂದರಿತು…’ ಎಷ್ಟು ನಿಜವಲ್ಲವೇ? ಸರ್ವ ಕಾಲಕ್ಕೂ ಸಮಂಜಸವೆನಿಸುವ ಸುಭಾಷಿತಗಳಲ್ಲೂ ಹೀಗೆ ಹೇಳಲಾಗಿದೆ – ’ಬಾಲಾದಪಿ ಗೃಹೀತವ್ಯಂ ಯುಕ್ತಮುಕ್ತಂ ಮುನೀಷಿಭಿಃ..’- ಮಕ್ಕಳು ಹೇಳಿದ್ದರೂ ಯುಕ್ತವಾಗಿದ್ದರೆ ಅದನ್ನು ಪರಿಗಣಿಸಬೇಕು ಹೇಗೆ ಮುನಿಗಳ ವಾಕ್ಯಕ್ಕೆ ಪ್ರಾಮುಖ್ಯತೆ ಕೊಡುತ್ತೇವೋ ಹಾಗೆ.

ಹಾಗೆ ನೋಡಿದರೆ, ಮಕ್ಕಳೇ ಎಷ್ಟೋ ಚೆನ್ನಾಗಿ ಯಾವ ಹಿಂಜರಿಕೆಯೂ ಇಲ್ಲದೆ, ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತಾರೆ. ಆ ಮುಗ್ಧತೆಯೇ ನೋಡಲು ಚೆಂದ. ಮಕ್ಕಳೊಡಗೂಡಿ ನಾವೂ ಮಕ್ಕಳಾಗೋಣ.. ಅವರ ಪ್ರಪಂಚ ಅತೀ ಸುಂದರವಾದದ್ದು. ಕೆಲ ಹೊತ್ತಾದರೂ ಆ ಲೋಕದಲ್ಲಿ ವಿಹರಿಸಲು ಅವಕಾಶ ಸಿಕ್ಕರೆ, ಅದಕ್ಕಿಂತ ಇನ್ನೇನು ಬೇಕಲ್ವೇ?

ಅಂತ್ಯವಾಕ್ಯ – ನೃತ್ಯ ಒಂದು ಪ್ರದರ್ಶನ ಕಲೆ ಆದ್ದರಿಂದ, ಕಲಿಕೆಯ ಫಲ ಪ್ರದರ್ಶನದಲ್ಲಿ ಕಾಣಬೇಕು. ಆದರೆ ಕಲಿಕಾಪಾಠಗಳೇ ಪ್ರದರ್ಶಿತವಾಗಬಾರದು ಎಂಬುದು ರಸಿಕರ ಅಭಿಪ್ರಾಯ.

 

—-

Leave a Reply

*

code