ಅಂಕಣಗಳು

Subscribe


 

‘ಅನನ್ಯ’ ನೃತ್ಯ ನೀರಾಜನದ ಕಾಣಿಕೆ

Posted On: Thursday, December 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನವೆಂಬರ್ ೨೬,೨೭ ಸ್ಥಳ: ಮಲ್ಲೇಶ್ವರಂ ಸೇವಾಸದನ


nritya neerajana CD cover

ಅನನ್ಯ ಕಲಾಸಂಸ್ಥೆ ಬೆಂಗಳೂರಿನ ಕಲಾವಿದರ ಪಾಲಿಗೆ ಅನೇಕ ಸಾಧ್ಯತೆಗಳತ್ತ ಕೈಚಾಚುತ್ತಿರುವ ಸಾಂಸ್ಕೃತಿಕವಾಗಿ ದಾಖಲಾರ್ಹವಾದ ಸಂಸ್ಥೆ. ಡಾ. ಆರ್.ವಿ.ರಾಘವೇಂದ್ರ ಅವರ ಸಮರ್ಥ ನಾಯಕತ್ವ ಮತ್ತು ಆಸಕ್ತಿಯ ಫಲವಾಗಿ ಸಂಗೀತ ಮತ್ತು ನೃತ್ಯಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಅಭಿವ್ಯಕ್ತಿ.

ಅನನ್ಯ ಸಂಸ್ಥೆಯ ವತಿಯಿಂದ ಕಳೆದೆರಡು ವರ್ಷಗಳ ಹಿಂದೆ ವಿದ್ವಾನ್ ಗುರುಮೂರ್ತಿ, ಶ್ರೀವತ್ಸ, ಮಾನಸಿ ಮುಂತಾದ ಕಲಾವಿದರ ಸಹಕಾರದಲ್ಲಿ ಕನ್ನಡ ನೆಲದ ಸೊಗಡಿನ ಕೃತಿಗಳನ್ನು ಭರತನಾಟ್ಯ ನೃತ್ಯಪ್ರದರ್ಶನಕ್ಕೆ ಅನುಕೂಲಕರವಾಗಿ ಎರಡು ಆಡಿಯೋ ಸಿಡಿಗಳನ್ನಾಗಿ ಮಾಡಿ ತಲಾ ೧೦೦ ರೂ ಗಳ ಕ್ರಯಕ್ಕೆ ಲೋಕಾರ್ಪಣಗೊಳಿಸಲಾಗಿತ್ತು. ಈ ಮೂಲಕವಾಗಿ ಕರ್ನಾಟಕದ ಅನೇಕ ಭರತನಾಟ್ಯ ಕಲಾವಿದರಿಗೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ನರ್ತಕರಿಗೆ ನೃತ್ಯಕ್ಕೆ ಅನುಕೂಲವಾದ ಮುಕ್ತ, ಸಹೃದಯಿ ವಾತಾವರಣವನ್ನು ಸೃಷ್ಟಿಸಿದ ಕೀರ್ತಿ ಅನನ್ಯದ್ದು. ಈ ಬಾರಿಯೂ ನೃತ್ಯ ನೀರಾಜನದ ಮೂಲಕ ಮೃದಂಗ ವಿದ್ವಾನ್ ಗುರುಮೂರ್ತಿ, ವಿದ್ವಾನ್ ಶ್ರೀವತ್ಸ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ, ವಿದ್ವಾನ್ ಪ್ರಸನ್ನಕುಮಾರ್ ಇವರುಗಳ ಶ್ರಮವನ್ನು ಸಾರ್ಥಕಪಡಿಸಿಕೊಂಡ ಆಡಿಯೋ ಸಿಡಿಗಳ ೩ ಮತ್ತು ೪ನೇ ಸರಣಿಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ.

ನೀರಾಂಜನಿ, ಗೋರಕ್ ಕಲ್ಯಾಣ್, ವಿಟಪಿ, ಸೂರ್ಯ, ಲತಾಂಗಿ ಮುಂತಾದ ಅಪರೂಪದ ರಾಗಗಳಿಗೆ ಹೊಸೆದ ಶ್ರೀವತ್ಸ, ಶರ್ಮ, ಪ್ರಸನ್ನ ಅವರ ಕನ್ನಡ ಭಾಷೆಯಲ್ಲರಳಿದ ಸುಮನೋಹರ ರಚನೆಗಳು, ಗುರುಮೂರ್ತಿಯವರ ಸಂಯೋಜನೆಯ ಪಾಟಾಕ್ಷರ-ಸ್ವರಗುಚ್ಛಗಳು ಶ್ರವಣಮನೋಹರವಾಗಿ ತೆರೆದುಕೊಂಡಿವೆ. ನೃತ್ಯಬಂಧಗಳೂ ಕೂಡಾ ಎಂದಿನ ಏಕತಾನತೆಯನ್ನು ಮುರಿದು ಅಪೂರ್ವವೆನಿಸುವ ತ್ರಿಶ್ರ ಗತಿ ಏಕತಾಳದ ಗಣೇಶ ಸ್ತುತಿ, ನರಸಿಂಹ ಕೌತ್ವಂ, ಖಂಡಜಾತಿ ತ್ರಿಪುಟ ತಾಳದ ತಿಲ್ಲಾನ ಇತ್ಯಾದಿಯಾಗಿ ಹೊಸದೆನಿಸುವ ಪ್ರಸ್ತುತಿಯನ್ನು ಪಡೆದಿವೆ. ಈ ಬಾರಿ ಅನಾವರಣಗೊಂಡ ಪ್ರತೀ ಸಿ.ಡಿಯ ಬೆಲೆ ೫೦೦ರೂ.ಗಳಾಗಿದ್ದು ಪುಷ್ಪಾಂಜಲಿಯಿಂದ ತಿಲ್ಲಾನದವರೆಗಿನ ಭರತನಾಟ್ಯ ಮಾರ್ಗಪದ್ಧತಿಯ ಎಲ್ಲಾ ಹಂತಗಳು ಚೆಂದನೆಯ ನೃತ್ಯಕಾರ್ಯಕ್ರಮ ಸ್ವರೂಪಕ್ಕೆ ಸಂಪೂರ್ಣ ಇಂಬನ್ನಿತ್ತಿವೆ. ಅದರಲ್ಲೂ ಪುರುಷ ನರ್ತಕರಿಗೇ ಮೀಸಲಾದ ಸಂಪೂರ್ಣ ನೃತ್ಯಮಾರ್ಗವು ನರ್ತಕರು ಅನುಭವಿಸುತ್ತಿರುವ ನಾಯಕ ಭಾವದ ಸಾಹಿತ್ಯ ಕೊರತೆಯನ್ನು ತುಂಬಿಕೊಡುವಲ್ಲಿ ಅಮೋಘ ಯತ್ನ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಇಂತಹ ಕಲಾವಿದಸ್ನೇಹಿ ಪ್ರಯೋಜನಕಾರಿ ಪ್ರಯೋಗದ ರೂವಾರಿ ಅನನ್ಯದ ಶ್ರಮ ನಿಜಕ್ಕೂ ಅನುಪಮ ಮತ್ತು ಅಭಿನಂದನೀಯ. ಈ ಶ್ರಮವನ್ನು ಅದರ ಚೌಕಟ್ಟಿನೊಳಗೆ ಭವ್ಯವಾಗಿಸುವ ಪ್ರತಿಭಾಶಾಲಿ ಸಂಯೋಜನೆಗಳು ಮತ್ತು ಆಧಾರಸಹಿತ ನಿರೂಪಣೆ ಕಲಾವಿದರ ಕರ್ತವ್ಯ.

ಎರಡು ದಿನಗಳ ಕಾಲ ನಡೆದ ನೃತ್ಯನೀರಾಜನದಲ್ಲಿ ಅನೇಕ ಯುವ ಕಲಾವಿದರ ನೃತ್ಯಕಾರ್ಯಕ್ರಮಗಳೊಂದಿಗೆ ಭರತನಾಟ್ಯ ಶೈಲಿಗಳ ಕುರಿತ ಸಿನಿಮಾ ಪ್ರದರ್ಶಿತವಾಯಿತು. ಮೊದಲದಿನ ಜರುಗಿದ ಡಾ. ಟಿ.ಎಸ್.ಸತ್ಯವತಿ, ಗುರು ಲಲಿತಾ ಶ್ರೀನಿವಾಸನ್, ಡಾ. ಕರುಣಾ ವಿಜಯೇಂದ್ರ, ವಿದ್ವಾನ್ ಪ್ರವೀಣ್ ಕುಮಾರ್ ಅವರ ನಡುವಿನ ನೃತ್ಯಕಲೆಯಲ್ಲಿ ಶಾಸ್ತ್ರ-ಪ್ರಯೋಗದ ಸಂಬಂಧ ಮತ್ತು ಹೊಂದಾಣಿಕೆ’ಯ ಕುರಿತ ಅರ್ಧ ಗಂಟೆಗಳ ಕಾಲದ ವಿಚಾರಮಂಡನೆ ಮತ್ತು ಸಂವಾದ ಬೋಧಪ್ರದವಾಗಿತ್ತು.

Leave a Reply

*

code