ಅಂಕಣಗಳು

Subscribe


 

ಅನವರತ ಸೌಗಂಧಿಕಾ ಪರಿಮಳದಿಂದ ಪರಿಮಳಿಸುತ್ತಿದೆ ನೂಪುರ

Posted On: Saturday, October 15th, 2011
1 Star2 Stars3 Stars4 Stars5 Stars (No Ratings Yet)
Loading...

Author: - ಕೀರಿಕ್ಕಾಡು ವನಮಾಲಾ ಕೇಶವ ಭಟ್, & ಮಾಸ್ಟರ್ ವಿಠಲ್

ನಿಮ್ಮ ಸಾಹಿತ್ಯಸುಧೆಗೆ ಯಾವ ಅಲಂಕಾರವನ್ನೊಪಿಸಲಿ ಎಂಬುದೇ ನನ್ನ ಪಾಲಿಗೆ ತಿಳಿಯದಾಗಿದೆ. ಆದರೂ ತಮಗೆ ಉತ್ತರಿಸುವುದು ನನ್ನ ಧರ್ಮವೆಂದು ಸಾಹಿತ್ಯಾಭಿಮಾನಿಯಾಗಿ, ಕಲಾಭಿಮಾನಿಯಾಗಿ ಕಿಂಚಿತ್ ಶುಭಾಷಯಗಳನ್ನು ಅರ್ಪಿಸುತ್ತಾ ಬರೆಯುತ್ತಿರುವೆನು. ಶತಾವಧಾನಿ ಡಾ.ಆರ್.ಗಣೇಶ್‌ರವರ ಅಮೂಲ್ಯ ಕೃತಿಗಳು ತಮ್ಮ ನೂಪುರ ಭ್ರಮರಿಗೆ ಚಿನ್ನದ ಒಪ್ಪನ್ನಿತ್ತು ಹೊಳಪಿಸುವಂತೆ ಓದುಗರಿಗೂ, ಕೊಂಡುಕೊಳ್ಳುವವರಿಗೂ ಕೈಚಾಚಿ ಕರೆ ಕರೆದು ಅನವರತ ಸೌಗಂಧಿಕಾ ಪರಿಮಳದಿಂದ ಪರಿಮಳಿಸುತ್ತಿದೆ.

೨ನೇ ಪುಟ ಮತ್ತು ೧೪ನೇ ಪುಟದಲ್ಲಿ ನನ್ನನ್ನು ನೆನಪಿಸಿಕೊಂಡಿರುವಿರಷ್ಟೇ. ಮುಖ್ಯತಃ ೨ನೇ ಪುಟವಂತೂ ಅಚ್ಚಳಿಯದೆ ಉಳಿಯುವಂತೆಯೂ, ಕಠಿಣ ಹೃದಯಿಯ ಕಠೋರತೆಯನ್ನು ನೆನಪಿಸುವಂತೆಯೂ ಪರಿಣಮಿಸಿದೆ. ತಮ್ಮ ಬಿಚ್ಚುಹೃದಯದ ವಿಶಾಲತೆಗೆ ನಾನು ಋಣಿಯಾಗಿರುವೆ.

ಮಾಸ್ಟರ್ ವಿಠಲ್, ಹಿರಿಯ ನೃತ್ಯ ಗುರುಗಳು, ಮಂಗಳೂರು.

 

ನೂಪುರ ಭ್ರಮರಿಯ ಸಂಚಿಕೆ ೩ರ ರಂಗಸ್ಥಳದ ವೈಭವದಲ್ಲಿ ರಾರಾಜಿಸಿದ- ರಾವಣ ಮೈರಾವಣರ ಸ್ನೇಹಾಚಾರ, ಶಿಷ್ಟಾಚಾರ ಪರಿಪಾಲನಾ ಸಂದರ್ಭ ಇಬ್ಬರೊಳಗೆ ಮೂರನೇಯವನಾದ ಊಳಿಗನ ಸಾಮಾನ್ಯ ಆಳೊಬ್ಬ ಪ್ರೇಕ್ಷಕರಲ್ಲಿ ನಗುಹಬ್ಬ ಒಡಮೂಡಿಸಲು ಕಾರಣವಾದ ಸಾಮಾನ್ಯ ಸಂದರ್ಭದ ವರ್ಣನೆಯೂ; ಅದರೊಂದಿಗೇ-ಅರ್ಜುನ ಐರಾವತ ತಂದದ್ದು ವಿಶೇಷವೇನೂ ಅಲ್ಲ– ಎಂಬ ತಿರುವಿನ ಶಿರೋನಾಮೆಯಿಂದಲೇ ಲೇಖನದೆಡೆಗೆ ಆಸಕ್ತಿ ಹರವಿದ ರಾಕೇಶ್ ಕುಮಾರ್ ಕಮ್ಮಜೆಯವರೂ ಓದುಗರ ಗಮನ ಸೆಳೆದು ನಗಿಸಿ ಮೆಚ್ಚುಗೆ ಪಡೆಯುತ್ತಾರೆ.

ಅಂತೆಯೇ ಕಳೆದ ಸಂಚಿಕೆಯಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರ ಜೀವನ ವೃತ್ತಾಂತದ ಸುತ್ತಮುತ್ತ ಗಿರಿಗಿಟಿಯಂತೆ ಗಿರ್ರನೆ ತಿರುಗಿಸಿ ಮತ್ತೇರುವಂತೆ ಮಾಡುವ ಧ್ವನಿ ನೀಡಿದ–‘ಅರುವತ್ತಾರರಲ್ಲೂ ಅಬ್ಬರಿಸುತ್ತಿರುವ ಅಭಿಮನ್ಯು ಎಂಬ ರಂಗಸ್ಥಳದ ಅಂಕಣ ಚೆನ್ನಾಗಿತ್ತು. ಅಭಿಮನ್ಯುವಿನ ಝೇಂಕಾರದ ಆಕಾರ ಬಣ್ಣಿಸಿದ ಭ್ರಮರಿಯ ರಾಕೇಶ್ ಕುಮಾರ್ ಕಮ್ಮಜೆ ಅವರ ವಿನೂತನ ಶೈಲಿ ಅಭಿನಂದನೀಯ.

ಹಲವು ಕಲೆಗಳಿಂದ ತುಂಬಿರುವ ಕಲಾಪ್ರಕಾರದೊಳಗೆ ಯಕ್ಷಗಾನ ಕಲೆಯ ವೈಶಿಷ್ಟ್ಯವೇ ಜನಾಕರ್ಷಣೆಗೆ ಕಾರಣ. ನಿಜವೇಷದಲ್ಲಿ ಪಾತ್ರ ಭರಿಸುವ ತಾಳಮದ್ದಳೆ ಕೂಟಗಳು, ಕುಣಿದು ಕುಪ್ಪಳಿಸಿ ಆರ್ಭಟಿಸಿ ಜನಪ್ರಶಂಸೆ ಪಡೆಯುವ ಯಕ್ಷಗಾನ ಬಯಲಾಟ ತಿಟ್ಟುಗಳ ಗುಟ್ಟೇ ಆಶು ಮಾತುಗಾರಿಕೆ. ಒಂದೇ ಕಥಾಭಾಗವನ್ನು ಪ್ರದರ್ಶಿಸಿ ಆಖಾಡವನ್ನು ಆವರಿಸುವ ಈ ಕಲೆ ಧೀಮಂತವೆಂಬ ಹೆಗ್ಗಳಿಕೆ ಹೆಚ್ಚಾಗಲು ಕಾರಣರು ಅಂತಹ ಮೇರು ಆಶು ಕಲಾವಿದರು. ಈ ಮೇರು ಕಲಾವಿದರೆಲ್ಲಾ ಒಂದೆಡೆ ಸೇರಿಕೊಂಡರೆ ನಿರ್ದಿಷ್ಟ ಪಾತ್ರವೆಂಬ ನಿಘಂಟಿಲ್ಲವಾದರೂ ಪಾತ್ರ ಯಾವುದೇ ಆಗಿರಲಿ ಅದನ್ನು ಪೂರೈಸಲು ಸಮರ್ಥರು. ಹಗಲನ್ನು ಇರುಳೆಂದೂ, ಕದ್ದೊಯ್ದ ಸೀತಾಮಾತೆ ಅವಳಾಗಿಯೇ ಬಂದುದೆಂದೂ ತಮ್ಮ ವಾಕ್ ಸಾಮರ್ಥ್ಯದಿಂದ ಆ ಘಳಿಗೆಗೆ ನಮ್ಮನ್ನು ನಂಬಿಸಿ ಬಿಡಬಲ್ಲರು. ಮಾತ್ರವಲ್ಲ ಹಿಂದಿನ ದಿನ ತಾವೇ ತೀರ್ಮಾನಿಸಿದ ತೀರ್ಪನ್ನು ಪಾತ್ರ ಬದಲಿಸಿದಾಗ ಅಲ್ಲಗಳೆಯಬಲ್ಲರು. ಈ ಹೆಗ್ಗಳಿಕೆ ಪಾತ್ರಧಾರಿಗಳಿಗೆ ಮಾತ್ರ ಸೀಮಿತವಾಗಿರದೆ ಹಿಮ್ಮೇಳ ಕಲಾವಿದರಿಗೂ ಅನ್ವಯವೇ ಹೌದು. ಕೇವಲ ಚೆಂಡೆ ಧ್ವನಿಯ ಏರಿಳಿತ, ಮದ್ದಳೆಯ ಧೀಂಕಿಟಕಿಟದ ಚಮತ್ಕಾರ, ಇಂಪಿನ ಭಾಗವತಿಕೆಯ ಆಶುಪಾದ್ಯಗಳ ಹಾಡುಗಾರಿಕೆಯ ಸವಿಯೂಟಕ್ಕಾಗಿಯೇ ಎಷ್ಟೋ ದೂರದಿಂದ ಆಗಮಿಸುವ ಪ್ರೇಕ್ಷಕರೇ ಇದಕ್ಕೆ ಸಾಕ್ಷಿ. ಆಟದೊಳಗೆ ಆಟ, ಕಥಾ ನೋಟವನ್ನು ಕೊಡುವ ಕಲಾವಿದರು ಯಾರೆಂಬ ಶೋಧನಾ ಪ್ರವೃತ್ತಿ ಇನ್ನಷ್ಟು ಬೆಳಗಿ ಬರಲಿ.

ಕೀರಿಕ್ಕಾಡು ವನಮಾಲಾ ಕೇಶವ ಭಟ್, ಬನಾರಿ, ಕಾಸರಗೋಡು.

Leave a Reply

*

code